ಖಾಸಗಿ ದರ್ಬಾರಿಗೆ ಸೊರಗಿದ ಸಾರ್ವಜನಿಕ ಸಾರಿಗೆ
ಕಾನೂನು ರಚಿಸಿದ ಮಾತ್ರಕ್ಕೆ ಸರಕಾರದ ಜವಾಬ್ದಾರಿ ಮುಗಿದು ಹೋಗುವುದಿಲ್ಲ. ಅದು ಪಾಲನೆಯಾಗುತ್ತಿದೆಯೇ ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಜವಾಬ್ದಾರಿಯುತರಾಗಿ ಪರಿಶೀಲಿಸದಿದ್ದರೆ ಕಾನೂನನ್ನು ಗಾಳಿಗೆ ತೂರಿ ಸರ್ಕಾರಕ್ಕೆ ಸೇರಬಹುದಾದ ಕೋಟ್ಯಂತರ ರುಪಾಯಿ ಆದಾಯ ಹೇಗೆ ಖಾಸಗಿಯವರ ಕೈಸೇರಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಕರ್ನಾಟಕ ಸರ್ಕಾರ 2003ನೇ ಇಸವಿಯಲ್ಲಿ ರಾಜ್ಯದ ರಾಷ್ಟ್ರೀಕೃತ ರಸ್ತೆಗಳಲ್ಲಿ ಖಾಸಗೀ ಬಸ್ ಮಾಲೀಕರು ಒಪ್ಪಂದದ ನಿಲುಗಡೆ(ಕಾಂಟ್ರಾಕ್ಟ್ ಕ್ಯಾರೇಜ್) ಬಸ್‌ಗಳ ಓಡಾಟಕ್ಕೆ 36 ಷರತ್ತುಗಳನ್ನು ವಿಧಿಸಿ ಅನುಮತಿಯನ್ನು ನೀಡಿತು. ಸುತ್ತೋಲೆಯ ಪ್ರಕಾರ ಮೋಟಾರು ವಾಹನ ಕಾಯ್ದೆಯ ಅನುಸಾರ ವಿಧಿಸಿದ ನಿಯಮಗಳಲ್ಲದೆ ನಿರ್ದಿಷ್ಟಪಡಿಸಿದ ಈ ಕೆಳಗಿನ ನಿಯಮಗಳನ್ನು ಸೂಚಿಸಿದೆ.
* ಒಪ್ಪಂದದ ನಿಲುಗಡೆ ಅನುಮತಿ ಪಡೆದ ಬಸ್‌ಗಳು ಒಪ್ಪಂದದ ನಿಯಮದಂತೆ ತಾನು ಹೊರಡುವ ಸ್ಥಳ ಮತ್ತು ತಲುಪುವ ಸ್ಥಳಗಳ ನಡುವೆ ಮಾತ್ರ ಸಂಚರಿಸಬೇಕು.
* ತಾನು ತಲುಪುವ ಸ್ಥಳದ ನಡುವೆ ರಸ್ತೆಯಲ್ಲಿ ವಾಹನವನ್ನು ನಿಲುಗಡೆ ಮಾಡುವುದಾಗಲೀ, ದಾರಿ ಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಾಗಲಿ ಮಾಡಕೂಡದು.
* ಕಾಂಟ್ರಾಕ್ಟ್ ಕ್ಯಾರೇಜ್‌ನ ಅನುಮತಿ ಪಡೆದ ಪ್ರವರ್ತಕರು ತಮ್ಮ ಬಸ್ಸುಗಳನ್ನು ಸ್ಟೇಜ್ ಕ್ಯಾರೇಜ್‌ನ ರೀತಿಯಲ್ಲಿ ನಿರ್ವಹಿಸಬಾರದು.
* ಕಾಂಟ್ರಾಕ್ಟ್ ಕ್ಯಾರೇಜ್‌ನ ನಿಲುಗಡೆಗಾಗಿ ಹಾಗೂ ಪ್ರಯಾಣದ ನಿರ್ವಹಣೆಗಾಗಿ ಬಸ್ಸುನಿಲ್ದಾಣಗಳನ್ನು ಬಳಸಕೂಡದು.
* ಪ್ರಯಾಣಿಕರಿಗೆ ವೈಯಕ್ತಿಕವಾಗಿ ಯಾವುದೇ ಟಿಕೆಟ್ ನೀಡುವಂತಿಲ್ಲ. ಯಾಕೆಂದರೆ ಒಂದು ನಿರ್ದಿಷ್ಟ ಸಂಖ್ಯೆಯ ಪ್ರಯಾಣಿಕರು ಒಟ್ಟಾಗಿ ತಮ್ಮ ಪ್ರಯಾಣದ ಅನುಕೂಲಕ್ಕಾಗಿ ಬಾಡಿಗೆ ನಿಗದಿಮಾಡಿ ಸಂಚರಿಸುವ ವ್ಯವಸ್ಥೆ ಇದು.
ಆದರೆ ರಸ್ತೆಗಿಳಿಯಲು ತಮಗೆ ಸಿಕ್ಕಿದ ಈ ಅನುಮತಿಯನ್ನು ಖಾಸಗಿ ಪ್ರವರ್ತಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಚ್ಛಂದವಾಗಿ ಬಳಸತೊಡಗಿದ್ದಾರೆ. ರಾಷ್ಟ್ರೀಕೃತ ರಸ್ತೆಗಳಲ್ಲಿ ರಾಜ್ಯ ರಸ್ತೆಸಾರಿಗೆ ಬಸ್‌ಗಳು ಓಡಾಡುವ ಸಮಯದಲ್ಲೇ ಆ ಬಸ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಸಮಾನಾಂತರವಾಗಿ ಕಾರ್ಯಾಚರಿಸಿ ರಾಜ್ಯ ರಸ್ತೆಸಾರಿಗೆ ಸಂಸ್ಥೆಗೆ ಸಿಗಬಹುದಾಗಿದ್ದ ಕೋಟ್ಯಂತರ ರುಪಾಯಿ ಆದಾಯಕ್ಕೆ ಕನ್ನ ಹಾಕುತ್ತಿರುವುದು ನಿತ್ಯ ಸತ್ಯವಾಗಿದೆ. ಖಾಸಗಿ ಪ್ರವರ್ತಕರ ಈ ಪ್ರವೃತ್ತಿಯ ವಿರುದ್ಧ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2005 ರಲ್ಲಿ ಆದೇಶ ಹೊರಡಿಸಿ ಹೀಗೆ ಸ್ಟೇಜ್ ಕ್ಯಾರೇಜ್ ಅನುಮತಿಯನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತು. ಆದರೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದೆ ಖಾಸಗಿಯವರ ಅನಧಿಕೃತ ಕಾರ್ಯಾಚರಣೆಗೆ ಪರೋಕ್ಷ ಕಾರಣಕರ್ತರಾಗಿದ್ದಾರೆ. ಒಂದು ವೇಳೆ ಇಂತಹ ಬಸ್‌ಗಳಲ್ಲಿ ಪ್ರಯಾಣದ ವೇಳೆ ಅಪಘಾತಕ್ಕೊಳಗಾದರೆ ಪ್ರಯಾಣಿಕರಿಗೆ ಬಸ್ ಮಾಲೀಕರು ಯಾವುದೇ ರೀತಿಯ ಪರಿಹಾರವನ್ನು ಕೊಡುವುದಿಲ್ಲ. ಸರ್ಕಾರಿ ಬಸ್‌ನಲ್ಲಿ ಪ್ರಯಾಣದ ವೇಳೆ ಅಪಘಾತವಾದರೆ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ರಸ್ತೆಸಾರಿಗೆ ಸಂಸ್ಥೆಯೇ ಭರಿಸುತ್ತದೆ. ಪ್ರಯಾಣಿಕ ಮೃತಪಟ್ಟರೆ ಆ ಪ್ರಯಾಣಿಕನ ಕುಟುಂಬಕ್ಕೆ 2.5 ಲಕ್ಷ ರುಪಾಯಿ ಜೀವ ವಿಮೆಯನ್ನು ಪಾವತಿಸುತ್ತದೆ. ನ್ಯಾಯಾಲಯವೂ ಕೂಡ ಹೆಚ್ಚುವರಿ ಪರಿಹಾರವನ್ನು ಕುಟುಂಬಕ್ಕೆ ತೆಗೆಸಿಕೊಡುತ್ತದೆ.
ಇಂತಹ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಓಡಾಡುತ್ತಿರುವ ಗುಲ್ಬರ್ಗ-ಬೀದರ್, ರಾಯಚೂರು-ಸಿಂಧನೂರು, ರಾಯಚೂರು-ಮಂತ್ರಾಲಯ, ವಿಜಾಪುರ- ಹುಬ್ಬಳ್ಳಿ ಮಾರ್ಗಗಳಲ್ಲಿ ಸರಕಾರಿ ಬಸ್‌ಗಳ ವೇಳಾಪಟ್ಟಿಯಲ್ಲೆ ಸಂಚರಿಸುತ್ತಾ, ಸರ್ಕಾರಿ ಬಸ್‌ಗಳಿಗೆ ಪ್ರಯಾಣಿಕರೇ ಇಲ್ಲದೆ ನಷ್ಟವಾಗುತ್ತಿದ್ದಾಗ ಎಚ್ಚೆತ್ತುಕೊಂಡ ಸರ್ಕಾರ ಅನಧಿಕೃತ ಬಸ್ ಸಂಚಾರಕ್ಕೆ ಬ್ರೇಕ್ ಹಾಕಿತು. ಪರಿಣಾಮವಾಗಿ ಒಂದೇ ವಾರದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಗೆ ಒಂದು ಕೋಟಿ ರುಪಾಯಿ ಹೆಚ್ಚುವರಿ ಆದಾಯ ಬಂದಿರುವ ವರದಿಯಾಗಿದೆ. ಆದರೆ ಕರಾವಳಿ ಕರ್ನಾಟಕದಲ್ಲಿ ಮಾತ್ರ ಇನ್ನೂ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಮಂಗಳೂರಿನಿಂದ ಉಡುಪಿ, ಕಾಸರಗೋಡು, ಪುತ್ತೂರು, ವಿಟ್ಲ, ಧರ್ಮಸ್ಥಳದಂತಹ ಪ್ರಮುಖ ಊರುಗಳಿಗೆ ಸರ್ಕಾರಿ ಬಸ್‌ಗಳು ಓಡಾಡುತ್ತಿದ್ದರೂ ಮಂಗಳೂರಿನ ಕೇಂದ್ರಭಾಗವಾದ ಸ್ಟೇಟ್‌ಬ್ಯಾಕ್‌ನಿಂದ ಹೊರಡದೆ ಖಾಸಗಿ ಲಾಬಿಯ ಪರಿಣಾಮದಿಂದ ನಗರದ ಹೊರವಲಯದ ಬಿಜೈ ಬಸ್ ನಿಲ್ದಾಣದಿಂದ ಹೊರಡುತ್ತವೆ. ಸ್ಥಳದ ಅಭಾವವನ್ನು ಹೇಳುವ ಆಡಳಿತ ವ್ಯವಸ್ಥೆಗೆ ಪ್ರತೀ ವರ್ಷ ಹೆಚ್ಚುವರಿಯಾಗಿ ಹತ್ತಾರು ಖಾಸಗಿ ಬಸ್‌ಗಳು ಸ್ಟೇಟ್‌ಬ್ಯಾಂಕ್ ಪ್ರವೇಶಿಸುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲ.
ರಾಜಕೀಯ ಪಕ್ಷಗಳು ನಡೆಸುವ ರಾಜಕೀಯ ಸಮಾವೇಶಗಳಿಗೆ, ಜಾತ್ರೆ ರಥೋತ್ಸವಗಳಿಗೆ ವರ್ಷದಲ್ಲೊಂದೆರಡು ಸಾರಿ ಈ ಖಾಸಗಿ ಬಸ್ ಮಾಲೀಕರು ತಮ್ಮ ಬಸ್‌ಗಳನ್ನು ಉಚಿತವಾಗಿ ಪೂರೈಸಿ ಋಣತೀರಿಸುತ್ತಾರೆ. ಇವರ ಋಣದಲ್ಲಿರುವ ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವುದರಿಂದ ಇವರ ಅಕ್ರಮಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಖಾಸಗಿ ದಂಧೆಗೆ ಪೂರಕವಾಗಿ ಸ್ಪಂದಿಸುತ್ತಾ ಹೋಗುತ್ತಾರೆ. ಈ ಹಗಲು ದರೋಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಕತ್ತು ಹಿಸುಕುತ್ತಿದೆ. ಈ ಸಂಬಂಧ ಸಚಿವರು, ಅಧಿಕಾರಿಗಳೆಲ್ಲ ಎಂದಿಗೆ ಎಚ್ಚೆತ್ತುಕೊಂಡಾರು?
- ರೋಹಿಣಾಕ್ಷ ಶಿರ್ಲಾಲು
ಪ್ರಾಧ್ಯಾಪಕರು