ರಹಸ್ಯ ಕಾರ್ಯಾಚರಣೆಗಳನ್ನು ಬಹಿರಂಗ ಮಾಡಬೇಕೆ?
ಗಂಭೀರ ರಕ್ಷಣಾ ಅಪಾಯಗಳನ್ನು ಎದುರಿಸುತ್ತಿರುವ ದೇಶವೊಂದರಲ್ಲಿ....
ಗಂಭೀರ ರಕ್ಷಣಾ ಅಪಾಯಗಳನ್ನು ಎದುರಿಸುತ್ತಿರುವ ದೇಶವೊಂದರಲ್ಲಿ ಗುಪ್ತಚರ ದಳದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಶಕ್ತಿ ನೀಡಬೇಕಾದದ್ದು ಅತ್ಯವಶ್ಯಕ. ಗುಪ್ತಚರ ಸಂಸ್ಥೆಗಳು ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲೇಬೇಕು. ಅದರೊಟ್ಟಿಗೆ ಆ ಕಾರ್ಯಾಚರಣೆಗಳನ್ನು ಗುಪ್ತವಾಗಿ ಇಡಬೇಕಾದದ್ದು ಆ ದೇಶದ ಕರ್ತವ್ಯ.
ಕೆಲವು ತಿಂಗಳುಗಳ ಹಿಂದೆ ನಾನೊಂದು ಲೇಖನವನ್ನು ಬರೆದಿದ್ದೆ. "ಗುಪ್ತಚರ ದಳದ ಮೇಲಿನ ಹೊದಿಕೆಯನ್ನು ಸಿಬಿಐ ಸರಿಸಬೇಕೆ?" ಎಂಬ ವಿಷಯದ ಕುರಿತಾಗಿತ್ತು ಆ ಲೇಖನ. ಆ ಸಮಯದಿಂದ ಇಂದಿನವರೆಗೆ ಅನೇಕ ಘಟನೆಗಳು ನಡೆದುಹೋಗಿವೆ. ಈ ಹೊತ್ತಿನಲ್ಲೇ ಭಾರತೀಯ ಸೇನೆಯ ಕುರಿತಾದ ವಿಷಯವೊಂದು ಹೊರಬಿದ್ದಿದೆ. ಇದನ್ನೆಲ್ಲ ನೋಡಿದಮೇಲೆ ನನ್ನಲ್ಲೊಂದು ಪ್ರಶ್ನೆ ಮೂಡುತ್ತಿದೆ -"ಸೇನೆಯ ರಹಸ್ಯ ಕಾರ್ಯಾಚರಣೆಗಳನ್ನು ಸರ್ಕಾರ ಹೊರಗೆಡವಬೇಕೆ? ಅದು ಸಾರ್ವಜನಿಕ ಚರ್ಚೆಯ ವಿಷಯವಾಗಬೇಕೇ?" ಎಂಬುದು.
ಹಾಗೆ ನೋಡಿದರೆ ಭಾರತದ ರಕ್ಷಣಾ ವ್ಯವಸ್ಥೆಯೀಗ ಬಹಳ ದುರ್ಬಲವಾಗಿದೆ. ಸುಲಭವಾಗಿ ನಮ್ಮ ದೇಶ ದಾಳಿಗೀಡಾಗಬಹುದಾದ ಪರಿಸ್ಥಿತಿಯಲ್ಲಿದೆ. ಆಗುತ್ತಿದೆ ಕೂಡ. ಕಳೆದ ಎರಡು ದಶಕಗಳಿಂದ ನಾವು ಗಡಿ ಭಯೋತ್ಪಾದನೆಯಿಂದಾಗಿ ಅಗಾಧ ಸಮಸ್ಯೆಯನ್ನು ಎದುರಿಸಿದ್ದೇವೆ. ಕೇವಲ ಗಡಿ ರೇಖೆಯಲ್ಲಿನ ಭಯೋತ್ಪಾದನೆಯಷ್ಟೇ ಅಲ್ಲ, ಆಂತರಿಕ ಭಯೋತ್ಪಾದನೆಯೂ ಹೆಚ್ಚುತ್ತಿದೆ. ಬಾಹ್ಯ ಶಕ್ತಿಗಳಿಗಿಂತ, ಆಂತರಿಕ ದುಷ್ಟ ಶಕ್ತಿಗಳಿಂದಾಗಿಯೇ ಇಂದು ದೇಶದಲ್ಲಿ ಅತಿ ಹೆಚ್ಚು ಜೀವಹಾನಿಯಾಗುತ್ತಿರುವುದು. ಮಧ್ಯ ಭಾರತದ ಬಹುತೇಕ ಭಾಗಗಳಿಂದು ಮಾವೋವಾದಿಗಳ ಮುಷ್ಠಿಯಲ್ಲಿ ಒದ್ದಾಡುತ್ತಿವೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಕೆಲವು ವರ್ಷಗಳ ಹಿಂದೆ, "ದೇಶ ಎದುರಿಸುತ್ತಿರುವ ಅತಿಕಠಿಣ ಸವಾಲಿದು(ನಕ್ಸಲಿಸಂ)' ಎಂದಿದ್ದರು. ಈಶಾನ್ಯ ಭಾರತದಲ್ಲಿಂದು ಈ ಸಮಸ್ಯೆ ಹೆಚ್ಚುತ್ತಲೇ ಇದೆ.
ಅಧಿಕಾರಕ್ಕೆ ಬಂದ ಪಕ್ಷಗಳೆಲ್ಲವೂ ಮಾತುಕತೆಯ ಮೂಲಕ ಇಲ್ಲವೇ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಿ ಈ ಭಯೋತ್ಪಾದನೆಯನ್ನು ತಡೆಯಲು ಪ್ರಯತ್ನಿಸುತ್ತಲೇ ಬಂದಿವೆ. ಸೇನಾ ಪೊಲೀಸರು ದೇಶದ್ರೋಹಿ ಚಟುವಟಿಕೆಯನ್ನು ತಡೆಯಲು ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಆದರೆ ಈ ಸಮಸ್ಯೆ ಬೇರು ಸಮೇತ ನಿರ್ಮೂಲನೆಯಾಗಬೇಕೆಂದರೆ ನಮ್ಮ ಗುಪ್ತಚರ ಸಂಸ್ಥೆಗಳನ್ನು ಬಲಪಡಿಸಬೇಕು, ಹಾಗಾದಾಗ ಮಾತ್ರ ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯ. ಇನ್ನು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಮ್ಮ ಗುಪ್ತಚರ ಸಂಸ್ಥೆಗಳು ಸಾಕಷ್ಟು ಬಾರಿ ಸಫಲವಾಗಿವೆ ಎಂದೇ ಹೇಳಬೇಕು. ಗಡಿರೇಖೆಯಲ್ಲಿನ ಭಯೋತ್ಪಾದನೆ ಮತ್ತು ದೇಶದೊಳಗೆ ಹುಟ್ಟಿಕೊಂಡಿರುವ ಅನೇಕ ಭಯೋತ್ಪಾದಕ ಶಕ್ತಿಗಳನ್ನು ಅವು ಚಾಣಾಕ್ಷತನದಿಂದ ಮಟ್ಟ ಹಾಕಿವೆ.
ಹಾಗಾಗೆ ಗುಪ್ತಚರ ಏಜನ್ಸಿಗಳ ಕೆಲಸವೇನು ಎನ್ನುವುದರತ್ತ ನಾವು ಗಮನಹರಿಸಬೇಕಾಗುತ್ತದೆ. ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅವುಗಳಿಗೆ ಅನುಕೂಲಕರವಾದ ವಾತಾವರಣ ಬೇಕು. ತಮ್ಮದೇ ರಹಸ್ಯ ತತಂತ್ರಗಳನ್ನು ಸಿದ್ಧಪಡಿಸಿಕೊಳ್ಳಲು ಅವುಗಳಿಗೆ ಸ್ವಾತಂತ್ರ್ಯ ಬೇಕು. ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಆ ವ್ಯವಸ್ಥೆಯ ಒಳಗೆ ಅವು ನುಸುಳುತ್ತವೆ, ಭಯೋತ್ಪಾದಕರ ಸಂವಹನವನ್ನು ತಡೆಹಿಡಿಯಲು ರಹಸ್ಯ ತಂತ್ರಜ್ಞಾನಗಳನ್ನು ಅನುಸರಿಸುತ್ತವೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ವ್ಯಾಪ್ತಿಯಲ್ಲಿ ಅವು ಕಾರ್ಯ ನಿರ್ವಹಿಸುತ್ತವೆ. ದೇಶ ಮತ್ತು ವಿದೇಶಗಳ ಸರ್ಕಾರಗಳೊಂದಿಗೆ ಸಂಪರ್ಕ ಸಾಧಿಸಿ, ಮಾಹಿತಿ ನೀಡುವ, ಮಾಹಿತಿ ಪಡೆಯುವ ಕೆಲಸ ಮಾಡುತ್ತವೆ.
ಗಂಭೀರ ರಕ್ಷಣಾ ಅಪಾಯಗಳನ್ನು ಎದುರಿಸುತ್ತಿರುವ ದೇಶವೊಂದರಲ್ಲಿ ಗುಪ್ತಚರ ದಳದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಶಕ್ತಿ ನೀಡಬೇಕಾದದ್ದು ಅತ್ಯವಶ್ಯಕ. ಗುಪ್ತಚರ ಸಂಸ್ಥೆಗಳು ರಹಸ್ಯ ಕಾರ್ಯಚರಣೆಗಳನ್ನು ನಡೆಸಲೇಬೇಕು. ಅದರೊಟ್ಟಿಗೆ ಆ ಕಾರ್ಯಾಚರಣೆಗಳನ್ನು ಗುಪ್ತವಾಗಿ ಇಡಬೇಕಾದದ್ದು ಆಯಾ ದೇಶದ ಕರ್ತವ್ಯ. ಅವು ನಡೆಯುತ್ತಿದ್ದರೂ ಆ ಕಾರ್ಯಾಚರಣೆಯ ಬಗ್ಗೆ ನಾವು ಒಪ್ಪಿಕೊಳ್ಳಬಾರದು, ಮಾತನಾಡಬಾರದು. ಸಾರ್ವಜನಿಕರು ಇಂಥ ಕಾರ್ಯಾಚರಣೆಗಳಿಗಾಗಿ ಆಗ್ರಹಿಸುತ್ತಾರೆ. ದೇಶದ ಒಳಿತಿಗೆ ಇದೆಲ್ಲ ಅತ್ಯವಶ್ಯಕ. ಆದರೆ ನಮ್ಮ ಕೇಂದ್ರ ಸರ್ಕಾರ ಮಾಡುತ್ತಿರುವುದೇನು? ಯುಪಿಎ ಸರ್ಕಾರ ಸ್ವಹಿತಾಸಕ್ತಿಗಾಗಿ ಇಂಥ ಎರಡು ಕಾರ್ಯಾಚರಣೆಗಳ ಬಗೆಗಿನ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಇದರಿಂದಾಗಿ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ಯಾವ ರೀತಿಯ ಹೊಡೆತ ಬೀಳಬಹುದೆಂಬ ಕಿಂಚಿತ್ ಯೋಚನೆಯಾದರೂ ಅದಕ್ಕಿದೆಯೇ?
ಶ್ರೀಶ್ರೀಶ್ರೀ
ಇಶ್ರತ್ ಜಹಾನ್ ಪ್ರಕರಣವನ್ನೇ ನೋಡಿ. ಈ ಪ್ರಕರಣದ ಆಳಕ್ಕೆ ನಾನು ಇಳಿಯುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಆ ಕುರಿತು ಸಾಕಷ್ಟು ಚರ್ಚೆಗಳಾಗಿ. ಆ ಎನ್ಕೌಂಟರ್ ಕೇಂದ್ರದ ಭಯೋತ್ಪಾದನ ನಿಗ್ರಹ ದಳದ ಕಾರ್ಯಾಚರಣೆಯ ಭಾಗವಾಗಿತ್ತು ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿರುವಂಥದ್ದೇ. ಆದರೆ ಯುಪಿಎ ಸರ್ಕಾರ ಇಶ್ರತ್ ಜಹಾನ್ ಎನ್ಕೌಂಟರ್ ವಿಷಯವಾಗಿ ಗುಜರಾತ್ ಹೈಕೋರ್ಟ್ಗೆ ಸಲ್ಲಿಸಲಾದ ಗೃಹಸಚಿವಾಲಯದ ಅಫಿಡವಿಟ್ನಲ್ಲಿ ಕೈಯಾಡಿಸಿ ತನ್ನ ಏಜೆನ್ಸಿಗಳು ನಡೆಸಿದ ಕೆಲಸವನ್ನು ಅಲ್ಲಗಳೆದಿದ್ದು ಎಷ್ಟು ಸರಿ? ಇದರಿಂದಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಎಷ್ಟು ಧಕ್ಕೆಯಾಗಿದೆ ಎಂಬುದನ್ನು ಅದು ಅರಿತುಕೊಳ್ಳಬೇಕಿದೆ. ಇನ್ನು ತನ್ನ ನಿಷ್ಠಾವಂತ ಸೇವಕನಾದ ಸಿಬಿಐಯನ್ನು ಅದು ಗುಜರಾತ್ನ ಪೊಲೀಸ್ ಅಧಿಕಾರಿಗಳನ್ನು ಮತ್ತು ಬಿಜೆಪಿ ಸರ್ಕಾರದ ಕೆಲವು ನಾಯಕರ ಮೇಲೆ ದಾಳಿಮಾಡಲು ಬಳಸಿಕೊಂಡಿತು. ಯುಪಿಎ ಸರ್ಕಾರ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ತನ್ನ ಪಾತ್ರವನ್ನು ಅದೆಷ್ಟೇ ಅಲ್ಲಗಳೆಯಲಿ- ಸತ್ಯವೇನೆಂದರೆ, ಅದು ಕೇಂದ್ರ ಸರ್ಕಾರದ ಕಾರ್ಯಾಚರಣೆಯಾಗಿತ್ತೇ ಹೊರತು, ಗುಜರಾತ್ ಸರ್ಕಾರದ್ದಲ್ಲ. ಆದರೆ ಗುಜರಾತ್ ಬಿಜೆಪಿ ಸರ್ಕಾರದ ಮೇಲೆ ಕೆಸರೆರಚುವ ಭರದಲ್ಲಿ ಯುಪಿಎ ಸರ್ಕಾರ ಸಾಧಿಸಿದ್ದೇನು? ನಮ್ಮ ಗುಪ್ತಚರ ದಳದ ರಹಸ್ಯ ಕಾರ್ಯಾಚರಣೆಯನ್ನು ಅದು ಬಹಿರಂಗಗೊಳಿಸಿ, ಅದನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ್ದು.
ಇನ್ನು ಜಮ್ಮು ಕಾಶ್ಮೀರದಲ್ಲಿ ನಮ್ಮ ಸೇನೆ ನಡೆಸಿದೆಯೆಂಬ ಪೇಆಫ್ನ(ಹಣ ಪಾವತಿಯ) ಸುದ್ದಿ ಈಗ ಸದ್ದು ಮಾಡುತ್ತಿದೆ. ಈ ಸತ್ಯ ಅಥವಾ ಆರೋಪದ ಬಗ್ಗೆ ನನಗಷ್ಟು ಅರಿವಿಲ್ಲ. ಯುಪಿಎ ಸರ್ಕಾರದಿಂದ ಸೋರಿಕೆಯಾಗಿರುವ ಈ ವರದಿ ದಿನಪತ್ರಿಕೆಯೊಂದರಲ್ಲಿ ಬಹಿರಂಗವಾಯಿತು. ಜಮ್ಮ ಮತ್ತು ಕಾಶ್ಮೀರದ ರಾಜಕಾರಣಿಯೊಬ್ಬ ರಾಜ್ಯ ಸರ್ಕಾರವನ್ನು ಉರುಳಿಸಲು ಹಣ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಆದರೆ ಸೇನೆಯ ಮಾಜಿ ಮುಖ್ಯಸ್ಥರು ಹೇಳುತ್ತಿರುವುದೇನೆಂದರೆ, ಭಯೋತ್ಪಾದನೆಯಿಂದ ದುರ್ಬಲವಾಗಿರುವ ರಾಜ್ಯದ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸೇನೆ ಆಗಾಗ ಈ ರೀತಿಯ ನೆರವು ನೀಡುತ್ತಿರುತ್ತದೆ ಎಂದು. ಹಾಗೆ ಮಾಡಿದಾಗ ಸಮುದಾಯ ಕೇಂದ್ರಿತ ಯೋಜನೆಗಳ ಮೂಲಕ ಅಲ್ಲಿನ ನಾಗರಿಕರಿಗೆ ಸಹಾಯಕವಾಗುವಂಥ ಕೆಲಸಗಳಾಗುತ್ತವೆ ಎನ್ನುತ್ತಾರವರು. ಆದರೆ ನಮಗ್ಯಾರಿಗೂ ಆ ಚಟುವಟಿಕೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇನ್ನು ಅದನ್ನು ತಿಳಿದುಕೊಳ್ಳುವ ಅಧಿಕಾರವೂ ನಮಗಿಲ್ಲ. ಅಲ್ಲದೆ ಇಂಥ ಚಟುವಟಿಕೆಗಳಿಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯವಾಗುವುದೂ ಇಲ್ಲ. ಗುಪ್ತಚರ ದಳ, ರಾ, ಅಥವಾ ಮಿಲಿಟರಿ ಸಂಸ್ಥೆಗಳು ರಹಸ್ಯ ನಿಧಿಗಳನ್ನು ಸರಿಯಾಗಿ ಬಳಸಿವೆಯೇ ಎನ್ನುವುದು, ಪತ್ತೆಹಚ್ಚುವುದು ಸಿಬಿಐನ ತನಿಖಾ ವ್ಯಾಪ್ತಿಯಲ್ಲಿ ಬರುವಂಥ ವಿಷಯವಲ್ಲ. ಈ ಚಟುವಟಿಕೆಗಳು ಸಂಸತ್ತಿಗೆ ಅಥವಾ ನ್ಯಾಯಾಂಗಕ್ಕೆ ಉತ್ತರದಾಯಿಯಾಗಿರುವಂಥವಲ್ಲ. ಇವೆಲ್ಲ ರಹಸ್ಯ ಕಾರ್ಯಾಚರಣೆಗಳ ಅಂಗವಾಗಿದ್ದು, ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು, ಗುಪ್ತಚರ ದಳ ಮತ್ತು 'ರಾ'ದ ಮುಖ್ಯಸ್ಥರಷ್ಟೆ ಈ ಮಾಹಿತಿ ಪಡೆಯಲು ಅರ್ಹರಾಗಿರುತ್ತಾರೆ. ಅವೆಲ್ಲ ಅವರೊಂದಿಗೇ ಸಾಯಬೇಕು. ಆದರೆ ಅವೆಂದಿಗೂ ಅವರ ನೆನಪುಗಳ ಭಾಗವಾಗಬಾರದು! ಸೇನೆಯ ಮಾಜಿ ಮುಖ್ಯಸ್ಥರೊಂದಿಗೆ ಮೊದಲಿನಿಂದಲೂ ಜಟಾಪಟಿ ನಡೆಸುತ್ತಿದ್ದ ಯುಪಿಎ ಸರ್ಕಾರ, ಉದ್ದೇಶಪೂರ್ವಕವಾಗಿ, ಗೌಪ್ಯವಾಗೇ ಇರಬೇಕಾಗಿದ್ದ ಮಾಹಿತಿಯನ್ನು ಹೊರಹಾಕಿದೆ. ಆದರೆ ಹಾಗೆ ಮಾಡುವುದು ಸರಿಯೇ? ಇನ್ನು ಒತ್ತಡ ಬಂದಾಕ್ಷಣ 'ಹೌದು ಪಾವತಿ ಮಾಡಿದ್ದೇವೆ' ಎಂದು ಸೇನಾ ಮುಖ್ಯಸ್ಥರು ಒಪ್ಪಿಕೊಳ್ಳಬೇಕಿತ್ತೇ? ಯುಪಿಎ ಸರ್ಕಾರ ಶಾಸನಕಲೆಯ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸಾಗುತ್ತಿದೆ. ತಾನು ಭದ್ರವಾಗಿರುವುದು ಮುಖ್ಯ, ತನ್ನ ಮತಗಳ ಜೋಳಿಗೆ ತುಂಬಲ ದೇಶಕ್ಕೆ ತೊಂದರೆಯಾದರೂ ಪರವಾಗಿಲ್ಲ ಎನ್ನುವ ಹುಂಬತನಕ್ಕೆ ಅದು ಬಿದ್ದಿದೆ.
- ಅರುಣ್ ಜೇಟ್ಲಿ
anisikeprabha@gmail.com