ನಗುವಿಗೆ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್!
ಮೋದಿಯವರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಲೇಖನಗಳನ್ನು ಕನ್ನಡಪ್ರಭ ಪತ್ರಿಕೆ ಪ್ರಕಟಿಸುತ್ತಿದೆ ಎಂಬ ಕೆಲವರ ವಾದ ಒಪ್ಪಲರ್ಹವಾದುದಲ್ಲ. ಏಕೆಂದರೆ ಮೋದಿಯವರ ಬಗೆಗೆ ಕೇವಲ ಹೊಗಳಿಕೆಗಷ್ಟೆ ಸೀಮಿತವಾಗಿರುವ ಜೊಳ್ಳು ಲೇಖನಗಳು ಕ.ಪ್ರ.ದಲ್ಲಿ ಎಂದೂ ಪ್ರಕಟಗೊಂಡಿಲ್ಲ. ಮೋದಿಯವರನ್ನು ಕೋಮುವಾದಿ, ಮುಸ್ಲಿಮ್ ವಿರೋಧಿ ಎಂಬಂತೆ ಬಿಂಬಿಸುವ ವ್ಯವಸ್ಥಿತ ಕ್ಷುಲ್ಲಕ ವಿತಂಡವಾದ ಯಾವುದೇ ನಿರ್ದಿಷ್ಟ ಹಾಗೂ ಸಕಾಲಿಕ ಪೂರಕ ಅಂಶಗಳ ಹೊರತಾಗಿಯೂ ಅಸ್ತಿತ್ವದಲ್ಲಿರಬಹುದು ಎಂದಾದ ಮೇಲೆ ಅವರ ಸಾಧನೆಗಳು, ವ್ಯಕ್ತಿತ್ವ, ಆಡಳಿತ ರೂಪುರೇಷೆಗಳು, ಅವರನ್ನು ಹೆಣಿಯಲು ಪ್ರಯತ್ನಿಸುವವರ ಸಂಚನ್ನು ಬಯಲುಗೊಳಿಸುವ ಪ್ರತಾಪ್ಸಿಂಹರಂತಹ ಬರಹಗಾರರ ನೈಜ ಅಂಕಿ ಅಂಶ, ವಿಚಾರಗಳಿಂದ ತುಂಬಿರುವ ಲೇಖನಗಳು ಅಗತ್ಯವಲ್ಲವೇ? ಅಂತಹ ಲೇಖನಗಳು ಸತ್ಯಾಂಶವನ್ನು ಜನರ ಮುಂದಿಡುತ್ತಿದೆಯೇ ಹೊರತು ಮೋದಿ ಪರ ಜನರ ಅಭಿಪ್ರಾಯಗಳನ್ನು ಪ್ರಚೋದಿಸುತ್ತಿಲ್ಲ. ವಾಸ್ತವತೆ ಬಿಚ್ಚಿಡುವುದು ಮಾಧ್ಯಮದ ನೈಜ ಜವಾಬ್ದಾರಿ.
-ಸಂದೇಶ್. ಎಚ್. ನಾಯ್ಕ್ ಹಕ್ಲಾಡಿ, 'ಸುರಕ್ಷ' ಹಕ್ಲಾಡಿ ಗ್ರಾಮ, ಕುಂದಾಪುರ ತಾ., ಉಡುಪಿ ಜಿಲ್ಲೆ- 576235, ಮೊ. 9743 489579
"ವನಮಾಲೆಯನು ಮಾಲು ಸಮೇತ ಗಕ್ಕನೆ ಹಿಡಿದಳು ರಾಧ..." ಅನ್ನೋ ರೀತಿಯಲ್ಲಿ ಡಾ. ಯು.ಆರ್. ಅನಂತಮೂರ್ತಿಯವರ ಅಸಂಬದ್ಧ ಆಲಾಪಗಳನ್ನು ಅಕ್ಷರಗಳಲ್ಲಿ ಸೆರೆ ಹಿಡಿದು ಪತ್ರಿಕಾ ವರದಿಗಾರರು ಪ್ರಕಟಿಸುತ್ತಾರೆ. ಜನರು ಬಿದ್ದು ಬಿದ್ದು ನಗುತ್ತಾರೆ. ನಗುವುದಕ್ಕೆ ಅವಕಾಶ ಮಾಡಿಕೊಟ್ಟ ಡಾ. ಅನಂತಮೂರ್ತಿಯವರಿಗೂ ಪತ್ರಿಕೆಯವರಿಗೂ ಅನಂತ ವಂದನೆಗಳು.
-ಎಂ.ಜಿ.ಶಿವರಾಂ, ಬೆಂಗಳೂರು
ಪ್ರೀತಿಯ ಪ್ರಣತಿಯವರಿಗೆ, ನೀವು ಬರೆದ (22.09.2013)ರ ಲೇಖನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯ ನಿಜವಾಯಿತು. ನಿಮ್ಮ ಲೇಖನ ನಾನು ಓದುವ ಹೊತ್ತಿಗೆ ಒಂದು ಮಹಿಳೆಯನ್ನು ವೈದ್ಯರ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದೆ. ಕಾರಣ ಈ ಮೊದಲೇ ಅವಳು ಎರಡು ಹೆಣ್ಣು ಮಕ್ಕಳ ತಾಯಿಯಾಗಿ ಗಂಡ ಮತ್ತು ಅತ್ತೆಯಿಂದ ತಿರಸ್ಕೃತಳಾಗಿದ್ದಳು. ಈ ಮೂರನೇ ಗರ್ಭ ಅವಳ ಭವಿಷ್ಯವನ್ನು ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ನೀವು ಬರೆದ ಲೇಖನದ ಎರಡನೆಯ ಭಾಗ ಇದಾಗುತ್ತದೆ...?
-ರತ್ನ, ಬೆಂಗಳೂರು
ಇವತ್ತಿನ ಸಂಚಿಕೆಯಲ್ಲಿ ಪ್ರಕಟವಾದ 'ಮುಜಾಫರ್ ನಗರದಲ್ಲಿ ನಡೆದದ್ದೇನು?' ಎಂಬ ಪ್ರತಾಪಸಿಂಹ ಅವರ ಲೇಖನ ಅತ್ಯಂತ ಉತ್ಕೃಷ್ಟ ಲೇಖನ. ಲೇಖಕರಿಗೂ ತಮಗೂ ಅನಂತ ಧನ್ಯವಾದಗಳು. ಅನಂತಮೂರ್ತಿ ಅಧಿಕಪ್ರಸಂಗದ ಬಗ್ಗೆ ಬರೆದಿರುವ ಲೇಖನವೂ ಚೆನ್ನಾಗಿದೆ.
-ಓದುಗ
ಕೇಳ್ರಪ್ಪೋ ಕೇಳಿ ಅಂಕಣದ ಪ್ರಶ್ನೆಗಳನ್ನು ಅಧಿಕಗೊಳಿಸಿ ಹತ್ತು ಪ್ರಶ್ನೆಗಳಿಗೆ ವಿಸ್ತರಿಸಬಹುದಲ್ಲವೇ?
-ವಿ. ಹೇಮಂತಕುಮಾರ್, ನಂ.5, 7ನೇ ಕ್ರಾಸ್, ವೆಂಕಟೇಶ್ವರ ಲೇಔಟ್, ಜೆ.ಪಿ.ನಗರ ಬೆಂಗಳೂರು, ಮೊ. 9035 992900
ಈಗಷ್ಟೇ ಬೈಟುಕಾಫಿಯ ಹುಟ್ಟಿದ ದಿನ ಆಚರಿಸಿಕೊಂಡು ಸಂಭ್ರಮಿಸುತ್ತಿರುವ ಕನ್ನಡಪ್ರಭವು, ಸದಾ ಹೊಸತನಗಳ ಹರಿಕಾರ, ಪ್ರಯೋಗಶೀಲತೆಯನ್ನೇ ಮೈಗೂಡಿಸಿಕೊಂಡು ಅಸಂಖ್ಯಾತ ಓದುಗ ಅಭಿಮಾನಿಗಳನ್ನು ತನ್ನ ತೆಕ್ಕೆಗೆ ಸಳೆದುಕೊಂಡಿದೆ. "ಸಪ್ಟೆಂಬರ್ 27-2012" ಕನ್ನಡಪ್ರಭ ಪತ್ರಿಕೆ ನಮ್ಮ ಮನೆಗೆ ಬಂದು, ನನ್ನ ಕೈ ಸೇರಿದಾಗ ತುಂಬಾ ಸಂತಸವಾಯಿತು. ಆಗ ತಾನೇ ಹುಟ್ಟಿದ ಹಸುಗೂಸಿನಂತೆ ವರ್ಣರಂಜಿತವಾಗಿ ಕಾಣಿಸಿತು. "ಕೇಸರಿ, ಬಿಳಿ ಹಸಿರು" ಬಣ್ಣಗಳೊಂದಿಗೆ, ಕನ್ನಡ, ಕರ್ನಾಟಕ, ಕನ್ನಡಪ್ರಭವೆಂದು ಬಿಂಬಿಸುವ "ಕ" ಅಕ್ಷರವನ್ನು ಮಧ್ಯೆ ಸೇರಿಸಿ ಅನಾವರಣಗೊಂಡ "ಲಾಂಛನ"ಕ್ಕೀಗ ಸರಿಯಾಗಿ ಒಂದು ವರ್ಷ. ಈ ಸುಸಂದರ್ಭದಲ್ಲಿ ಇಡೀ ಕನ್ನಡಪ್ರಭ ಪತ್ರಿಕಾ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು. ಪತ್ರಿಕೆ ಹೀಗೆಯೇ ಹೊಸ ಹೊಸ ಪ್ರಯೋಗದೊಂದಿಗೆ ನಮ್ಮ ಕೈ ಸೇರಲೆಂಬ ಆಶಯ ನನ್ನದು.
-ಶ್ರೀಮತಿ ಶಶಿಕಲಾ ಪ್ರಸಾದ್, ಬಿಇಎಂಎಲ್ ನಗರ, ಮೈಸೂರು.
ಪ್ರಶಾಂತ್ನಾತುರವರ 'ಕಾಶ್ಮೀರದ ಕತೆ' ಲೇಖನವು ಚೆನ್ನಾಗಿತ್ತು. ಆದರೆ ನೈಜ ಕಾಶ್ಮೀರದ ಕತೆ ಕೇಳಿ ಮನಸ್ಸಿಗೆ ನೋವಾಯಿತು. ಕಾಶ್ಮೀರದ ಬಗೆಗಿನ ನಮ್ಮ ಕಲ್ಪನೆಯೇ ಬೇರೆ. ಕಾಶ್ಮೀರ ಗಡಿಭಾಗದಲ್ಲಿರುವುದರಿಂದ ಭಾರತಕ್ಕೆ ನುಸುಳುವ ಉಗ್ರರು ತಮ್ಮ ಅಟ್ಟಹಾಸವನ್ನು ತೋರುತ್ತಿದ್ದಾರೆಂದು ಭಾವಿಸಿದ್ದೆವು. ಆದರೆ ಅಲ್ಲಿನ ಜನರೇ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡು ಭಾರತವನ್ನೇ ಪ್ರತ್ಯೇಕತೆಯಲ್ಲಿಟ್ಟು ನೋಡುವುದು ಖೇದಕರ. ಇನ್ನಾದರೂ ಅಲ್ಲಿನ ಜನರ ಮನಸ್ಥಿತಿ ಬದಲಾಗಿ ಭಾರತದ ಭೂತಾಯಿಯ ಮಡಿಲಲ್ಲಿರುವ ಕಾಶ್ಮೀರದ ಜನರು ಭಾರತದ ಮಕ್ಕಳಾಗಿಯೇ ಉಳಿಯಲೆಂದು ದೇವರನ್ನು ಪ್ರಾರ್ಥಿಸೋಣ.
- ಶರತ್ ಎಂ.ಆರ್., ಮಳವಳ್ಳಿ