ಒಂದು ಆತಂಕದ ಶಬ್ದಕೋಶ ಜಗತ್ತಿನ ತಿಳಿವಳಿಕಸ್ಥರ ತಲೆಯಲ್ಲಿ ಹತಾಶವಾಗಿ ರೂಪುಗೊಳ್ಳುತ್ತಿದೆ. ಆಗಾಗ ಪುಟಗಳು ಹೊಯ್ದಾಡುತ್ತವೆ ಬಾಂಬು, ಬಂದೂಕುಗಳ ಶಬ್ದದೊಂದಿಗೆ. ನಿಯಮಿತ ಅಂತರಗಳಲ್ಲಿ ಎಂಬಂತೆ ಮುಂಬೈನ ಬೀದಿಗಳಲ್ಲಿ, ತುಂಬಿದ ಟ್ರೇನ್‌ಗಳಲ್ಲಿ, ಕೀನ್ಯಾದ ಮಾಲ್‌ನಲ್ಲಿ ರಕ್ತದ ಮಡುವೊಂದು ನಿರ್ಮಾಣವಾಗಿಬಿಡುತ್ತದೆ. ಅಂತಕನ ದೂತರಿಗೆ ಕಿಂಚಿತ್ತೂ ಭಯವಿಲ್ಲ! ತಾವು ಹೆಣವಾಗುವುದಕ್ಕೆ ಮುಂಚೆ ತಮ್ಮಿಂದ ನಿರ್ಮಿಸಲು ಸಾಧ್ಯವಾಗಬಹುದಾದ ಹೆಣದ ರಾಶಿಯೇ ಅವರ ಉನ್ಮಾದ. ನೈನ್ ಇಲೆವನ್, ಒಸಾಮಾ, ಕಸಬ್, ಅಲ್‌ಖೈದಾ, ಅಲ್ ಶಬಾದ್, ತಾಲಿಬಾನ್.... ಹೀಗೆ ಜನಸಾಮಾನ್ಯನ ಚಿತ್ತಭಿತ್ತಿಯೊಳಗೆ ಠಿಕಾಣಿ ಹೂಡಿಬಿಟ್ಟಿರುವ ಶಬ್ದಗಳೆಲ್ಲ ಗುಮ್ಮನಂತೆ ಹೆದರಿಸುತ್ತಲಿವೆ ಒಳಗೊಳಗೆ, 'ಬರಲಿದೆ ನಿಂದೂ ಪಾಳಿ ಕಾಯುತ್ತಿರು'!
ಎಲ್ಲರ ಅರಿವಿಗೂ ದಾಖಲಾಗುತ್ತಿರುವ ಈ ಇಸ್ಲಾಮಿಕ್ ಭಯೋತ್ಪಾದನೆಯನ್ನು ಉಗ್ರವಾಗಿಯೇ ಹಿಮ್ಮೆಟ್ಟಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನಲ್ಲಿ ಇಸ್ಲಾಂ ಮಾತ್ರವೇ ಇರಬೇಕೆಂದು ಬಂದೂಕು ಹಿಡಿದವರು, ಪ್ರವಾದಿಯವರ ತಾಯಿಯ ಹೆಸರು ಗೊತ್ತಿದ್ದವರಷ್ಟೇ ಬದುಕುವುದಕ್ಕೆ ಅರ್ಹರು ಎಂದು ತೀರ್ಮಾನಿಸುತ್ತಿರುವವರ ಸಂಹಾರ ಆಗಲೇಬೇಕು.
ಹೀಗೆ ಹೇಳುತ್ತಲೇ.... ಅಲ್ಲಾಹುವಿನ ಹೆಸರಲ್ಲಿ ನಮ್ಮ ಮೇಲೆರಗುತ್ತಿರುವ ಹಿಟ್‌ಮೆನ್‌ರನ್ನು ಮಾತ್ರ ಮನುಕುಲದ ವೈರಿಗಳೆಂದುಕೊಳ್ಳುತ್ತ, ಅದೃಶ್ಯವಾಗಿ ಜಗತ್ತಿನ ಜೀವಪಸೆಯನ್ನೇ ಹೀರುತ್ತಿರುವ ಇಕನಾಮಿಕ್ ಹಿಟ್‌ಮೆನ್ ಸಂಕುಲವನ್ನು ಅರಿವಿಗೇ ತಂದುಕೊಳ್ಳದೆ ಹೋದರೆ ಎಷ್ಟು ತಲೆಮಾರುಗಳು ದಾಟಿದರೂ ಈ ಕ್ರೌರ್ಯದ ಅಧ್ಯಾಯ ಮುಗಿಯಲೊಲ್ಲದು ಎಂಬುದನ್ನು ಸ್ಪಷ್ಟವಾಗಿ ಮನಗಾಣಬೇಕಾಗುತ್ತದೆ. ಕಾಫಿರರನ್ನೆಲ್ಲ ಕೊನೆಗೊಳಿಸಿ ವಿಶ್ವದಲ್ಲಿ ಅಲ್ಲಾಹುವಿನ ನಂಬಿಕೆಯನ್ನು ಮಾತ್ರ ನೆಲೆಗೊಳಿಸಿದಾಗಲಷ್ಟೇ ಜಗತ್ತು ಸರಿಯಾಗುತ್ತದೆ ಎನ್ನುತ್ತಾರೆ ಇಸ್ಲಾಮಿಕ್ ಹಿಟ್‌ಮೆನ್. ಭೂಮಿಯ ಪ್ರತಿ ಅಂಗುಲವೂ ಅವರಿಗೆ ಆಕ್ರಮಣಾತ್ಮಕ ವಿಸ್ತರಣೆಗಿರುವ ಅವಕಾಶವಾಗಿ ಪ್ರಚೋದಿಸುತ್ತದೆ. ಇತ್ತ, ನಮ್ಮ ಸಾಮ್ರಾಜ್ಯವನ್ನು ಒಳಗೆ ಬಿಟ್ಟುಕೊಳ್ಳಿ, ನಾವು ಕಾಲಿಟ್ಟ ಜಾಗವೆಲ್ಲ ಶ್ರೀಮಂತಿಕೆಯಿಂದ ತೇಗುತ್ತದೆ ಎನ್ನುತ್ತಾರೆ ಇಕನಾಮಿಕ್ ಹಿಟ್‌ಮೆನ್. ಇಬ್ಬರದ್ದೂ ತೀರದ ದಾಹ. ಒಬ್ಬರಿಗೆ ಭಯವೇ ಬಂಡವಾಳ, ಇನ್ನೊಬ್ಬರಿಗೆ ಭ್ರಮೆಯೇ ಹೂಡಿಕೆ. ನಾವು ಎಂಥ ಜಗತ್ತಿನಲ್ಲಿದ್ದೇವೆ ಹಾಗೂ ಈ ಎರಡು ಸಾಮ್ರಾಜ್ಯಗಳು ನಮ್ಮನ್ನು ಎಷ್ಟು ಭಯಾನಕವಾಗಿ ಆಕ್ರಮಿಸಿಕೊಳ್ಳುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇತಿಹಾಸದ ಪ್ರಪಾತಗಳಲ್ಲಿ ಜೀಕಬೇಕಾಗುತ್ತದೆ. ಮೊನ್ನೆಯಷ್ಟೇ ಉಗ್ರರ ದಾಳಿಗೆ ತುತ್ತಾದ ಕೀನ್ಯಾದ ವರ್ತಮಾನದಿಂದಲೇ ಪ್ರಯಾಣ ಆರಂಭಿಸೋಣ.
ಕಸಬ್ ಮತ್ತವನ ಸಹಚರರು ಮುಂಬೈಗೆ ನುಗ್ಗಿದ ರೀತಿಯಲ್ಲೇ ಮೊನ್ನೆ ಕೀನ್ಯಾದ ಮಾಲ್‌ನೊಳಗೆ ನುಗ್ಗಿದ ಅಲ್ ಶಬಾದ್ ಎಂಬ ಉಗ್ರಗಾಮಿ ಸಂಘಟನೆಯ ಸೈತಾನರು ಸಿಕ್ಕ ಸಿಕ್ಕವರನ್ನೆಲ್ಲಾ ಸಾಯಿಸಿದರು. ಇದು ಅಲ್‌ಖೈದಾದ ಜತೆ ನಂಟಿರುವ ಉಗ್ರಗಾಮಿ ಸಂಘಟನೆ ಎನ್ನಲಾಗಿದೆ. ಒಸಾಮಾ ಬಿನ್ ಲಾಡೆನ್ ಹುಟ್ಟುಹಾಕಿದ ಅಲ್‌ಖೈದಾ ಎಂಬ ಜಾಗತಿಕ ಭಯೋತ್ಪಾದನೆಯ ಪ್ರವರ್ತಕನ ಪರಿಚಯ ಹೊಸದಾಗಿಯೇನೂ ಮಾಡಬೇಕಿಲ್ಲ. ತನ್ನ ನೆಲದ ಮೇಲಿನ ವಿಶ್ವ ವಾಣಿಜ್ಯ ಕೇಂದ್ರಗಳನ್ನು ನೆಲಸಮಗೊಳಿಸಿದ ಅಲ್‌ಖೈದಾದ ಉಗ್ರದಾಳಿಯ ಹತ್ತು ವರ್ಷಗಳ ನಂತರ ಒಸಾಮಾನನ್ನು ಹೊಡೆದುಹಾಕಿತು ಅಮೆರಿಕ. ಅಷ್ಟಕ್ಕೇ ಅಲ್‌ಖೈದಾದ ಆರ್ಭಟ ನಿಲ್ಲದು ಎಂಬುದಕ್ಕೆ ಕೀನ್ಯಾ ಮಾಲ್ ದಾಳಿ ಚಿಕ್ಕ ಉದಾಹರಣೆ ಅಷ್ಟೆ. ಈ ಅಲ್‌ಖೈದಾ ಎಂಬ ವಿಷದ ಹೆಮ್ಮರದ ಅಗಾಧ ವ್ಯಾಪ್ತಿ, ಅದರ ಟೊಂಗೆಗಳು ಹೇಗೆ ಜಗತ್ತಿಗೆಲ್ಲ ಚಾಚಿಕೊಂಡಿವೆ ಎಂಬ ಸತ್ಯ ಅಮೆರಿಕಕ್ಕೆ ನಿಚ್ಚಳವಾಗಿರುವಷ್ಟು ಮತ್ಯಾರಿಗೂ ಇಲ್ಲ. ಏಕೆಂದರೆ ಅಲ್‌ಖೈದಾದ ಬೀಜಕ್ಕೆ ನೀರು ಗೊಬ್ಬರ ಹಾಕಿದ್ದೇ ಅಮೆರಿಕ. ಇದು ಅಮೆರಿಕವು ತನ್ನ ಜಾಗತಿಕ ಅರ್ಥಸಾಮ್ರಾಜ್ಯವನ್ನು ಉಬ್ಬಿಸಿಕೊಳ್ಳುವ ಹಂತದಲ್ಲಿ ಲೋಕದ ಮೇಲೆ ಹೇರಿದ ಮಹಾ ಅನರ್ಥದ ಒಂದು ಅಧ್ಯಾಯ ಮಾತ್ರ.
60-70ರ ದಶಕಗಳಲ್ಲಿ ಈ ಅನರ್ಥ ಸಾಮ್ರಾಜ್ಯದ ಭಾಗವಾಗಿ ಕಾರ್ಯನಿರ್ವಹಿಸಿದ್ದ ಜಾನ್ ಪರ್ಕಿನ್ಸ್, ಪ್ರಾಯಶ್ಚಿತ್ತ ರೂಪದಲ್ಲೆಂಬಂತೆ ಬರೆದ ಪುಸ್ತಕ, 'ದ ಕನ್‌ಫೆಷನ್ ಆಫ್ ಆ್ಯನ್ ಇಕನಾಮಿಕ್ ಹಿಟ್‌ಮ್ಯಾನ್'ನ ಬೆಚ್ಚಿಬೀಳಿಸುವ ಅಧ್ಯಾಯ- 'ಪಿಂಪಿಂಗ್, ಆ್ಯಂಡ್ ಫೈನಾನ್ಸಿಂಗ್ ಒಸಾಮಾ ಬಿನ್ ಲಾಡೆನ್'.
ಸೌದಿ ಅರೇಬಿಯಾಕ್ಕೆ ತನ್ನ ಇಕನಾಮಿಕ್ ಹಿಟ್‌ಮೆನ್ ಎಂಬ ಸಂಧಾನಕಾರರನ್ನು ಬಿಟ್ಟ ಅಮೆರಿಕ ತನ್ನ ಕಾರ್ಯವನ್ನು ಸಾಧಿಸಿಕೊಂಡಿತು. ಪೆಟ್ರೊಡಾಲರ್‌ಗಳನ್ನು ಅಮೆರಿಕದ ಭದ್ರತಾ ಬಾಂಡ್‌ಗಳಲ್ಲಿ ವ್ಯಯಿಸಿ, ಅದರಿಂದ ಬರುವ ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ವ್ಯಯಿಸುವುದಕ್ಕೆ ಸೌದಿ ಸಮ್ಮತಿಸಿತು. ಒಪ್ಪಂದದಂತೆ ಮೂಲಸೌಕರ್ಯಾಭಿವೃದ್ಧಿಯ ಹೊಣೆಯನ್ನು ಬೆಕೆಲ್‌ನಂಥ ದೈತ್ಯ ಅಮೆರಿಕನ್ ಕಂಪನಿಗಳು ಹೊತ್ತವು. ಅಮೆರಿಕಕ್ಕೆ ವಿನಾಯ್ತಿ ದರದಲ್ಲಿ ತೈಲವೂ ದೊರೆಯಿತು. ಸೌದಿಗೆ ಜಮೆಯಾದ ಡಾಲರ್‌ಗಳನ್ನು ಅಮೆರಿಕನ್ ಕಂಪನಿಗಳೇ ಬಾಚಿಕೊಂಡು ಬಂದಿದ್ದೂ ಆಯಿತು. ಈ ಎಲ್ಲ ಚಟುವಟಿಕೆಯ ಪರಿಣಾಮವಾಗಿ ಸೌದಿಯ ಚಹರೆ ಬದಲಾಗಿದ್ದೂ ನಿಜ. ಕಸದ ರಾಶಿ, ಅಸ್ತವ್ಯಸ್ತ ಟೆಂಟ್‌ಗಳ ಜಾಗದಲ್ಲಿ ನುಣುಪು ಹೆದ್ದಾರಿ, ಭವ್ಯ ಕಟ್ಟಡಗಳು ತಲೆ ಎತ್ತಿದವು. ತನಗೆ ಯುದ್ಧೋನ್ಮಾದ ಉಕ್ಕಿದಾಗಲೆಲ್ಲ ಅದರ ಸಮರ್ಥನೆಗೆ 'ಪ್ರಜಾಪ್ರಭುತ್ವ ಸ್ಥಾಪನೆ'ಯ ಕತೆ ಹೇಳುವ ಅಮೆರಿಕ, ಸೌದಿ ಅರೇಬಿಯಾದಲ್ಲಿ ತನಗೆ ದೊರೆತ ಅಮೋಘ ಸಹಕಾರಕ್ಕೆ ಪ್ರತಿಯಾಗಿ ಅಲ್ಲಿನ ರಾಜಮನೆತನ ಯಾವತ್ತೂ ಅಧಿಕಾರದಲ್ಲಿ ಮುಂದುವರಿಯುವಂತೆ ನೋಡಿಕೊಂಡಿತು. ಅದು ಇವತ್ತಿಗೂ ಸ್ಪಷ್ಟ.
ಆದರೆ.... ಸೌದಿ ನೆಲದಲ್ಲಿ ತನ್ನ ಅರ್ಥಸಾಮ್ರಾಜ್ಯವನ್ನು ಸ್ಥಾಪಿಸಿದ ಅಮೆರಿಕವು ಅದೇ ಹಿತಾನುಭವದಲ್ಲಿ ಸೌದಿಯು ಇಸ್ಲಾಂ ತೀವ್ರವಾದದ ಸಾಮ್ರಾಜ್ಯ ಕಟ್ಟುತ್ತಿರುವುದರ ಬಗ್ಗೆ ಕುರುಡಾಯಿತು. 1980ರಲ್ಲಿ ಸೋವಿಯತ್ ಯೂನಿಯನ್, ಅಫ್ಘನ್ ಯುದ್ಧವನ್ನು ಪ್ರಾರಂಭಿಸಿದಾಗ ಅದರ ವಿರುದ್ಧ ಒಸಾಮಾ ಬಿನ್ ಲಾಡೆನ್‌ನನ್ನು ಬಹಿರಂಗವಾಗಿಯೇ ಬೆಂಬಲಿಸುವುದಕ್ಕೆ ಅಮೆರಿಕ ಒಂದಿನಿತೂ ಹಿಂದೆಮುಂದೆ ನೋಡಲಿಲ್ಲ. 1980ರಲ್ಲಿ ಸೌದಿ ಮತ್ತು ಅಮೆರಿಕ ಜತೆಗೂಡಿ ಅಪ್ಘನ್‌ನ ಮುಜಾಹಿದೀನ್‌ಗಳಿಗೆ ನೀಡಿದ ಮೊತ್ತ ಬರೋಬ್ಬರಿ 3.5 ಬಿಲಿಯನ್ ಡಾಲರ್.
'ಯುಎಸ್ ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್' ನಿಯತಕಾಲಿಕವು 2003ರಲ್ಲಿ 'ದ ಸೌದಿ ಕನೆಕ್ಷನ್' ಎಂಬ ದೀರ್ಘ ತನಿಖಾ ವರದಿ ಪ್ರಕಟಿಸಿತು. ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದನೆ ಕುರಿತ ವಿಷಯ ಪರಿಣತರನ್ನೆಲ್ಲ ಸಂದರ್ಶಿಸಿ, ಸರ್ಕಾರದ ಮೂಲಗಳನ್ನು ತಡಕಿ, ಅಮೆರಿಕ ಹಾಗೂ ಇತರ ದೇಶಗಳ ಲಭ್ಯ ಇಂಟೆಲಿಜೆನ್ಸ್ ಮಾಹಿತಿಗಳನ್ನೆಲ್ಲ ಆಧರಿಸಿ ಬರೆದ ವರದಿ ಅದು.
ವರದಿ ಹೀಗೆ ಸಾರಿತು- 'ನಮ್ಮೆದುರಿಗಿನ ಸಾಕ್ಷ್ಯ ಸ್ಪಷ್ಟವಾಗಿದೆ. ಅಮೆರಿಕದ ಬಹುಕಾಲದ ಮಿತ್ರ, ಜಗತ್ತಿನ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರ ಸೌದಿ ಅರೇಬಿಯಾ ಭಯೋತ್ಪಾದನೆಗೆ ಹಣ ಒದಗಿಸುವ ಕೇಂದ್ರ ಸ್ಥಾನವಾಗಿದೆ. 1980ರಿಂದೀಚೆಗೆ ಸೌದಿಯ ಅರೆ ಸರ್ಕಾರಿ ಮಾದರಿಯ ದಾನ ಕಾರ್ಯವೇ ಜಗತ್ತಿನ ಜಿಹಾದಿ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದೆ. ಈ ಹಣವು ಸುಮಾರು 20 ದೇಶಗಳಲ್ಲಿ ಉಗ್ರರ ನೇಮಕ, ಮಿಲಿಟರಿ ತರಬೇತು ಹಾಗೂ ಶಸ್ತ್ರಾಸ್ತ್ರ ಖರೀದಿಗೆ ಬಳಕೆಯಾಗಿದೆ. ಸೌದಿಯಿಂದ ತನಗೆ ಹರಿದುಬರುತ್ತಿರುವ ಸಂಪತ್ತು ಅಮೆರಿಕವು ಇವೆಲ್ಲವನ್ನು ಕಡೆಗಣಿಸುವುದಕ್ಕೆ ಕಾರಣವಾಯಿತು ಎನ್ನುತ್ತಾರೆ ಇಂಟಲಿಜೆನ್ಸ್‌ನ ನಿವೃತ್ತ ಅಧಿಕಾರಿಗಳು. ಸೌದಿಯೊಂದಿಗೆ ವ್ಯವಹರಿಸುತ್ತಿದ್ದ ಅಮೆರಿಕದ ಅಧಿಕಾರ ವಲಯಕ್ಕೆ ಗುತ್ತಿಗೆಗಳ ರೂಪದಲ್ಲಿ ಬಿಲಿಯನ್‌ಗಟ್ಟಲೇ ಡಾಲರ್ ಹಣ ಸಂದಾಯವಾಗುತ್ತಿತ್ತು. ರಾಯಭಾರಿಗಳು, ಸಿಐಎಯ ವಿಭಾಗ ಮುಖ್ಯಸ್ಥರು, ಕ್ಯಾಬಿನೆಟ್ ಸೆಕ್ರಟರಿಗಳೆಲ್ಲ ಕಿಸೆ ತುಂಬಿಸಿಕೊಂಡರು. ಎಲೆಕ್ಟ್ರಾನಿಕ್ ಸಂವಹನ ಸಂದೇಶಗಳನ್ನು ಬೇಧಿಸಿದಾಗ ಸೌದಿಯ ರಾಯಲ್ ಹೌಸ್ ಕೇವಲ ಅಲ್‌ಖೈದಾಕ್ಕೆ ಮಾತ್ರವಲ್ಲದೇ ಇನ್ನೂ ಅನೇಕ ಉಗ್ರ ಸಂಘಟನೆಗಳಿಗೆ ನೆರವಾಗಿರುವುದು ಸಾಬೀತಾಗಿದೆ.'
2001ರ ವರ್ಲ್ಡ್‌ಟ್ರೇಡ್ ಸೆಂಟರ್ ಮೇಲಿನ ದಾಳಿಯ ಬೆನ್ನಲ್ಲೇ ಈ ಅಪವಿತ್ರ ಮೈತ್ರಿಯ ಇನ್ನಷ್ಟು ಆಘಾತಕಾರಿ ಮಗ್ಗುಲುಗಳು ತೆರೆದುಕೊಂಡವು. ಅದನ್ನು ಅಕ್ಟೋಬರ್ 2003ರ 'ವ್ಯಾನಿಟಿ ಫೇರ್' ನಿಯತಕಾಲಿಕ 'ಸೇವಿಂಗ್ ದ ಸೌದೀಸ್' ಎಂಬ ಶೀರ್ಷಿಕೆಯಲ್ಲಿ ವಿವರವಾಗಿ ಬರೆಯಿತು. ಇದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತ ಜಾನ್ ಪರ್ಕಿನ್ಸ್ ಬರೆಯುತ್ತಾರೆ- 'ಅಮೆರಿಕದ ಬುಷ್ ಕುಟುಂಬ, ಹೌಸ್ ಆಫ್ ಸೌದ್ ಹಾಗೂ ಒಸಾಮಾ ಕುಟುಂಬದ ನಡುವಿನ ಬಾಂಧವ್ಯದ ಬಗ್ಗೆ ವರದಿ ಗಮನಸೆಳೆದಾಗ ನನಗೇನೂ ಅದು ಅಚ್ಚರಿಯ ವಿಷಯವಾಗಿರಲಿಲ್ಲ. 1974ರಲ್ಲಿ ಸೌದಿ ಅರೇಬಿಯಾದಲ್ಲಿ ನಾನು ಇಕನಾಮಿಕ್ ಹಿಟ್‌ಮ್ಯಾನ್ ಆಗಿರುವಾಗಲೇ ರೂಪುಗೊಂಡಿದ್ದ ಬಾಂಧವ್ಯ ಇದು. 1971-73ರಲ್ಲಿ ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿಯಾಗಿ ಹಾಗೂ 1976-77ರಲ್ಲಿ ಸಿಐಎ ಮುಖ್ಯಸ್ಥರಾಗಿ ಜಾರ್ಜ್ ಎಚ್. ಡಬ್ಲ್ಯು ಬುಷ್ ಕಾರ್ಯನಿರ್ವಹಿಸಿದ್ದಾಗಲೇ ಗಟ್ಟಿಗೊಂಡ ಬಾಂಧವ್ಯ ಇದು. ಕೊನೆಗೂ ಇದರ ಝಲಕು ಪತ್ರಿಕೆಯೊಂದರಲ್ಲಿ ಬೆಳಕು ಕಾಣುವುದು ಸಾಧ್ಯವಾಯಿತಲ್ಲ ಎಂಬುದೇ ನನಗೆ ಆಶ್ಚರ್ಯವಾಗಿ ಕಾಡಿದ ಸಂಗತಿ.'
ಅಂದಹಾಗೆ ವ್ಯಾನಿಟಿ ಫೇರ್ ಹೀಗೆ ಬರೆದಿತ್ತು- 'ಜಗತ್ತಿನ ಅತಿ ಶಕ್ತಿಶಾಲಿ ಕುಟುಂಬಗಳ ಸಾಲಿನಲ್ಲಿರುವ ಬುಷ್ ಕುಟುಂಬ ಹಾಗೂ ಸೌದಿ ರಾಜಮನೆತನದ ವೈಯಕ್ತಿಕ, ಔದ್ಯಮಿಕ, ರಾಜಕೀಯ ಬಾಂಧವ್ಯ 20 ವರ್ಷಗಳಷ್ಟು ಹಳೆಯದು.
ಖಾಸಗಿ ವಲಯದಲ್ಲಿ ಪ್ರವರ್ಧಮಾನಕ್ಕೆ ಬರಲು ಹೆಣಗುತ್ತಿದ್ದ 'ಹರ್ಕೆನ್ ಎನರ್ಜಿ' ತೈಲ ಕಂಪನಿಯನ್ನು ಸೌದಿ ಮನೆತನದವರೇ ಕೈ ಹಿಡಿದು ಎತ್ತಿದರು. ಈ ಕಂಪನಿಯಲ್ಲಿ ಜಾರ್ಜ್ ಬುಷ್ ಸೀನಿಯರ್ ಒಬ್ಬ ಹೂಡಿಕೆದಾರ. ಅಮೆರಿಕದ ಮಾಜಿ ಅಧ್ಯಕ್ಷ ಸೀನಿಯರ್ ಜಾರ್ಜ್‌ಬುಷ್ ತಮ್ಮ ಬಹುಕಾಲದ ಸಹವರ್ತಿ, ಗೃಹಖಾತೆ ಮಾಜಿ ಕಾರ್ಯದರ್ಶಿ ಮೂರನೆಯ ಜೇಮ್ಸ್ ಎ. ಬೇಕರ್ ಜತೆ ಸೌದಿಯಲ್ಲಿ ಫಂಡ್‌ರೈಸರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅವರು ಹಣ ಎತ್ತುತ್ತಿದ್ದದ್ದು ಜಗತ್ತಿನಲ್ಲೇ ಅತಿದೊಡ್ಡ ಈಕ್ವಿಟಿ ಫರ್ಮ್ ಎನ್ನಬಹುದಾದ ಕಾರ್ಲೈಲ್ ಗ್ರೂಪ್‌ಗೆ. ಅಧ್ಯಕ್ಷ ಪದವಿಯಿಂದ ಇಳಿದ ನಂತರ ಬುಷ್ ಆ ಕಂಪನಿಯ ಸಲಹೆಗಾರನ ಹುದ್ದೆಗೇರಿದರು. ಈ ಕಂಪನಿಯ ಹೂಡಿಕೆದಾರರ ಪೈಕಿ ಸೌದಿ ವ್ಯಕ್ತಿಯೊಬ್ಬ 9/11ರ ದಾಳಿಯೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾಗಿದೆ....
9/11ರ ಘಟನೆ ನಡೆದ ಕೆಲದಿನಗಳಲ್ಲೇ ಅಮೆರಿಕದಲ್ಲಿದ್ದ ಸಿರಿವಂತ ಸೌದಿ ಕುಟುಂಬದ ವ್ಯಕ್ತಿಗಳನ್ನು ಪ್ರೈವೇಟ್ ಜೆಟ್‌ನಲ್ಲಿ ದೇಶದಿಂದ ಹೊರಹೋಗುವುದಕ್ಕೆ ಅನುವು ಮಾಡಿಕೊಡಲಾಯಿತು. ಈ ಪೈಕಿ ಲಾಡೆನ್ ಕುಟುಂಬಕ್ಕೆ ಸೇರಿದ ಕೆಲ ಸದಸ್ಯರೂ ಇದ್ದರು. ಈ ಬಗ್ಗೆ ತಮಗೇನೂ ಮಾಹಿತಿ ಇಲ್ಲ ಎಂದೇ ಸಂಬಂಧಿಸಿದ ಅಧಿಕಾರಿಗಳೆಲ್ಲ ನುಣುಚಿಕೊಳ್ಳುತ್ತಾರೆ. ಬುಷ್ ಕುಟುಂಬವು ಸೌದಿ ರಾಜಮನೆತನದೊಂದಿಗೆ ಹೊಂದಿದ್ದ ಸುದೀರ್ಘ ಬಾಂಧವ್ಯವೇ ಇಂಥದೊಂದು ಪರಾರಿಗೆ ಸಹಕರಿಸಿತೇ?'
***
ಅದೇಕೆ ಈ ಪರಿ ಉಗ್ರರ ದಾಳಿಗಳಾಗುತ್ತಿವೆ ಅಂತ ನಾವು ಅಚ್ಚರಿಪಡುತ್ತೇವೆ. ಮತಾಂಧರ ಅತಿರೇಕಕ್ಕೆ ಅನರ್ಥ ಪರಂಪರೆಯೊಂದು ನೀರೆರೆದುಕೊಂಡಿರುವುದು ಹೆಚ್ಚಿನ ಸಂದರ್ಭಗಳಲ್ಲಿ ಗೊತ್ತೇ ಆಗುವುದಿಲ್ಲ. ಜಗತ್ತನ್ನು ಮುಕ್ಕಲು ಒಂದು ಅರ್ಥಸಾಮ್ರಾಜ್ಯ ಇನ್ನೊಂದು ಮತಸಾಮ್ರಾಜ್ಯ ಹಪಾಹಪಿಸಿಕೊಂಡು ನಿಂತಿವೆ. ಇದೇ ವಾಸ್ತವ!
- ಚೈತನ್ಯ ಹೆಗಡೆ
cchegde@gmail.com