ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರೋಮ್‌ನಲ್ಲಿ ಮಹಾತ್ಮ ಗಾಂಧಿ- ಅಂದು ಮತ್ತು ಇಂದು

Vishwanath S
Updated On : 1 Oct 2013, 11:14 am

ಸನಾತನ ನಗರ ರೋಮ್ ಎಂದಿನಂತೆ ಇಂದಿಗೂ ಕೂಡ ಆಹ್ಲಾದಕರ ವಾತಾವರಣ ಹೊಂದಿದೆ. ಆದರೆ ಸುದೀರ್ಘ ಕಾಲದ ಆರ್ಥಿಕ ಕುಸಿತ, ಲಂಚಕೋರ ರಾಜಕಾರಣಿಗಳಿಂದ ಉಂಟಾದ ರಾಜಕೀಯ ಅಸ್ಥಿರತೆ, ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಕುಖ್ಯಾತ ರಾಜಕಾರಣಿ ಮತ್ತು ಇನ್ನೇನು ಜೈಲಿಗೆ ಸೇರಲಿರುವ ಮಾಜಿ ಪ್ರಧಾನಮಂತ್ರಿ ಸಿಲ್ವಿಯೋ ಬರ್ಲುಸ್ಕೋನಿ, ಮತ್ತು ವ್ಯಾಟಿಕನ್‌ನ ಹೊಸ ಪೋಪ್‌ರ ಆಗಮನದಂಥ ಎಲ್ಲಾ ಅಂಶಗಳೂ ಸೇರಿ ಇಟಲಿಯ ರಾಜಧಾನಿಯ ವಾತಾವರಣದಲ್ಲಿ ಹೊಸ ಆಲೋಚನೆಗಳು ಹರಿದಾಡತೊಡಗಿವೆ.
ನನ್ನ ಪುಸ್ತಕ Music of the spinning wheel- Mahatma gandhi's Manifesto for the Internet Age' ಬಗ್ಗೆ ಮಾತನಾಡಲು  ರೋಮ್‌ನಲ್ಲಿ ಪೋಪ್ ಕೌನ್ಸಿಲ್ ಆಯೋಜಿಸಿರುವ ಅಂತರ್ ಧರ್ಮೀಯ ಸಮಾವೇಶಕ್ಕೆ ನಾನು ಬಂದಿದ್ದೇನೆ. ಇದಷ್ಟೇ ಅಲ್ಲದೆ, ಶಾಂತಿ ಸ್ಥಾಪನೆಯ ಬಗ್ಗೆ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಮಾತುಕತೆಯಲ್ಲೂ ಭಾಗವಹಿಸಲಿದ್ದೇನೆ.
ಇಟಲಿಗೆ ಬರುವುದಕ್ಕಿಂತ ಮುನ್ನ ನಾನು, ಇತ್ತೀಚೆಗೆ ಎಲ್ಲೆಡೆಯೂ ಚರ್ಚೆಯಾಗುತ್ತಿರುವ ಪೋಪ್ ಫ್ರಾನ್ಸಿಸ್ ಅವರ ಭಾಷಣದ ಬಗ್ಗೆ ಟ್ವೀಟ್ ಮಾಡಿದ್ದೆ. ಗಾಂಧೀಜಿಯವರು ತಿರಸ್ಕರಿಸಿದ್ದ 'ನೈತಿಕತೆಯಿಲ್ಲದ ಆರ್ಥಿಕತೆ' ಮತ್ತು ಪೋಪ್‌ರ 'ಹಣಕ್ಕೇ ದೇವರ ಸ್ಥಾನ ಕೊಟ್ಟು, ಜನರನ್ನು ಕಡೆಗಣಿಸುತ್ತಿರುವ' ಪ್ರಸಕ್ತ ಆರ್ಥಿಕ ವ್ಯವಸ್ಥೆಯ ಟೀಕೆಯ ನಡುವಿನ ಸಾಮ್ಯತೆಯನ್ನು ನಾನು ಆ ಟ್ವೀಟ್‌ನಲ್ಲಿ ಚರ್ಚಿಸಿದ್ದೆ. ಸರ್ದಿನಿಯಾದಲ್ಲಿ, ಹೆಚ್ಚಾಗಿ ನಿರುದ್ಯೋಗಿಗಳೇ ಕಿಕ್ಕಿರಿದು ತುಂಬಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪೋಪ್- 'ದುರ್ಬಲರನ್ನು, ಹಿರಿಯರನ್ನು, ನಿರ್ಗತಿಕರನ್ನು ಮತ್ತು ಯುವ ಜನಾಂಗವನ್ನು ಗೌರವದಿಂದ ಬದುಕಲು ಬಿಡದ ನೈತಿಕತೆಯಿಲ್ಲದ ವ್ಯವಸ್ಥೆ/ ಹಣಕ್ಕೆ ಪ್ರಾಮುಖ್ಯತೆ ಕೊಡುವ ಮನಸ್ಥಿತಿಯ ವಿರುದ್ಧ ಹೋರಾಡೋಣ' ಎಂದಿದ್ದರು.  
ಮನುಷ್ಯನ ಗೌರವವನ್ನು ಕಾಪಾಡುವುದೇ ಗಾಂಧೀಜಿ ಮತ್ತು ಏಸುಕ್ರಿಸ್ತನ ಬೋಧನೆಗಳ ಸಾರವಾಗಿತ್ತು. ಇಂಥ ಸಿದ್ಧಾಂತಕ್ಕೆ ಪೋಪ್ ಭಾವಪೂರ್ಣವಾದ ಧ್ವನಿಯನ್ನು ಒದಗಿಸುತ್ತಿದ್ದಾರೆ. ಇನ್ನು ಶಾಂತಿ ಸಮಾವೇಶದಲ್ಲಿ ಗಾಂಧೀಜಿಯ ವಿಚಾರಗಳ ಬಗ್ಗೆ ತಮ್ಮ ಅರ್ಥಪೂರ್ಣ ಭಾಷಣದೊಂದಿಗೆ ಜನರ ಹೃದಯಗಳನ್ನು ತಟ್ಟಿದವರೆಂದರೆ ಈಗಿನ ಪ್ರಧಾನಮಂತ್ರಿ ಎನ್ರಿಕೋ ಲೆಟ್ಟಾ(ಸಿಲ್ವಿಯೋ ಬರ್ಲುಸ್ಕೋನಿ ಅವರ ಬೆಂಬಲಿಗರು ಲೆಟ್ಟಾರ ಸಮ್ರಿಶ್ರ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ). "ಮಾತುಕತೆಯ ಮೂಲಕ ಸಂಘರ್ಷವನ್ನು" ಕೊನೆಗೊಳಿಸುವುದು ಎನ್ನುವ ವಿಷಯದ ಕುರಿತು ಅವರು ಮಾತನಾಡುತ್ತಾ, "ಸಿರಾಯಾದ ಮೇಲೆ ಅಮೆರಿಕ ದಾಳಿ ನಡೆಸಿದ್ದರೆ ಪ್ರಪಂಚದಾದ್ಯಂತ ಯುದ್ಧಗಳು ಶುರುವಾಗುವ
ಸಾಧ್ಯತೆಯಿತ್ತು. ಆದರೆ ವಿಶ್ವಸಂಸ್ಥೆಯ ಹಲವು ರಾಷ್ಟ್ರಗಳ ನಡುವಿನ ಮಾತುಕತೆಯಿಂದಾಗಿ ಅಮೆರಿಕ, ಸಿರಿಯಾದ ಮೇಲೆ ದಾಳಿ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು ಜಾಗತಿಕ ಸಮುದಾಯಕ್ಕೆ ನಿಶ್ಚಿಂತೆಯಿಂದ ಉಸಿರಾಡುವಂತೆ ಮಾಡಿದೆ. ಸಿರಿಯಾ ತನ್ನ ರಾಸಾಯನಿಕ ಅಸ್ತ್ರಗಳನ್ನು ನಿಷ್ಕ್ರಿಯಗೊಳಿಸುವ ನಿರ್ಣಯಕ್ಕೆ ಒಪ್ಪಿಕೊಂಡಿದ್ದು ನಿಜಕ್ಕೂ ಪವಾಡವೇ ಸರಿ. ವಿಶ್ವಸಂಸ್ಥೆಯ ಘನತೆ, ಉಪಯುಕ್ತತೆ ಕೊನೆಗೂ ಮರುಸ್ಥಾಪನೆಯಾಗಿದೆ" ಎಂದರು. ಅವರ ಈ ಮಾತನ್ನು ಕೇಳಿ ಸಭಾಂಗಣ ಕಿವಿಗಡಚಿಕ್ಕುವ ಕರತಾಡನಗಳಿಂದ ತುಂಬಿಹೋಯಿತು.        
ನನ್ನ ಪ್ರಕಾರ, ಇಟಲಿ ಮತ್ತು ಯುರೋಪಿನ ಇನ್ನಿತರ ರಾಷ್ಟ್ರಗಳಲ್ಲಿನ ವಾತಾವರಣದಲ್ಲಿ ಹೊಸ ಆಲೋಚನೆಯೊಂದು ಹಾರಾಡುತ್ತಿರುವುದಕ್ಕೆ ಪ್ರಮುಖ ಕಾರಣವೊಂದಿದೆ. ಜನರ ಜೀವನವನ್ನು ಹಿಡಿತದಲ್ಲಿಟ್ಟುಕೊಂಡಿರುವ, ತಮ್ಮ ದೇಶಗಳಲ್ಲಿ ಸಿನಿಕತೆ ಮತ್ತು ದುರ್ಗತಿಯನ್ನು ಹೆಚ್ಚಿಸುತ್ತಿರುವ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳ ವಿವೇಚನಾರಹಿತ ಗುಣವನ್ನು ಅಲ್ಲಿನ ಜನತೆ ಚೆನ್ನಾಗಿ ಅರ್ಥಮಾಡಿಕೊಳ್ಳತೊಡಗಿದ್ದಾರೆ
ಎಂಬುದು. ಯುರೋಪ್‌ನ ಆಧ್ಯಾತ್ಮಿಕ ಮತ್ತು ನೈತಿಕ ಸಂಪ್ರದಾಯವನ್ನು ಕಡೆಗಣಿಸಿದ್ದರ ಫಲವಾಗಿ ಬಂದೆರಗಿರುವ ದಾರಿದ್ರ್ಯದ ಅರಿವು ಈಗ ಅವರಿಗಾಗತೊಡಗಿದೆ. ತಮ್ಮ ಧರ್ಮ ಎಲ್ಲಾ ಧರ್ಮಗಳಿಗಿಂತಲೂ ಭಿನ್ನವಾದದ್ದು, ಉನ್ನತವಾದದ್ದು ಎನ್ನುವ ಹಳೆಯ ಗೊಡ್ಡು ಮನಸ್ಥಿತಿಯ ಬದಲಾಗಿ, ಅಂತರ್‌ಸಂಬಧೀ ಪ್ರಪಂಚದಲ್ಲಿನ ಎಲ್ಲ ನಂಬಿಕೆಗಳನ್ನು ಗೌರವಿಸಬೇಕು, ಅವುಗಳಿಂದ ಕಲಿಯಬೇಕು ಎಂಬ ಅವರ ತುಡಿತಕ್ಕೆ ಈಗ ಪೋಪ್‌ರ ಬೆಂಬಲ ದೊರಕುತ್ತಿದೆ. ಹೊಸ ಪೋಪ್‌ರ ಅಸಾಂಪ್ರದಾಯಿಕ ಘೋಷಣೆಗಳಲ್ಲಿ ಧರ್ಮವನ್ನು ಹೊಸ ಬೆಳಕಿನಲ್ಲಿ ಕಾಣಬೇಕೆಂದು ಬಯಸುವ ಜನರ ತುಡಿತಕ್ಕೆ ವಿಸ್ತರಣೆ ಸಿಗತೊಡಗಿದೆ.
ಶಾಂತಿಮಾತುಕತೆಯ ವೇಳೆಯಲ್ಲಿ ಸದ್ದು ಮಾಡುತ್ತಿರುವ ಈ ಸಂಗತಿಗಳಿಗೆಲ್ಲ ಸಾಕ್ಷಿಯಾಗುತ್ತಿರುವ ನನಗೆ, 1931ರ, ಡಿಸೆಂಬರ್ ತಿಂಗಳಲ್ಲಿ ಗಾಂಧೀಜಿಯವರು ಇಟಲಿಗೆ ಭೇಟಿ ನೀಡಿದ ಐತಿಹಾಸಿಕ ಘಟನೆ ನೆನಪಾಗುತ್ತಿದೆ. ಅವರು ಲಂಡನ್‌ನ ದುಂಡು ಮೇಜಿನ ಸಭೆ ವಿಫಲವಾದ ನಂತರ ನೇರವಾಗಿ ಇಟಲಿಗೆ ಬಂದಿಳಿದಿದ್ದರು. ಆ ಸಭೆ ಸಫಲವಾಗದು ಎಂದು ಅವರಿಗೆ ಮೊದಲೇ ಗೊತ್ತಿತ್ತಾದರೂ, ಅವರ ಮುಖ್ಯ ಉದ್ದೇಶ ಯುರೋಪ್‌ಗೆ ಪ್ರಯಾಣ ಬೆಳೆಸಿ, 'ಅಹಿಂಸೆ, ವಿಶ್ವವ್ಯಾಪಿ ಭ್ರಾತೃತ್ವ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಸರ್ವರಿಗೂ ಸಮಾನ ಘನತೆ ದೊರಕಿಸಿಕೊಡಬೇಕು' ಎಂಬ ತಮ್ಮ ಸಂದೇಶಗಳನ್ನು ಅಲ್ಲಿ ಸಾರುವುದೇ ಆಗಿತ್ತು. ಅನೇಕರ ಸೂಚನೆಯನ್ನು ಕಡೆಗಣಿಸಿ ಅವರು ಇಟಲಿಯ ಫ್ಯಾಸಿಸ್ಟ್ ಆಡಳಿತಗಾರ ಬೆನಿಟೋ ಮುಸ್ಸೋಲಿನಿಯನ್ನು ಭೇಟಿ ಮಾಡಿದರು. ಆ ಸಮಯದಲ್ಲಂತೂ ಯುರೋಪಿನ ಆಗಸದಲ್ಲಿ ವಿಶ್ವ ಯುದ್ಧದ ಕಪ್ಪು ಮೋಡಗಳು ಸುತ್ತು ಹೊಡೆಯುತ್ತಿದ್ದವು. ಆದರೆ "ಶಾಂತಿ ಸ್ಥಾಪನೆಗಾಗಿನ ಮಾತುಕತೆಗಳಲ್ಲಿ ಯಾರನ್ನೂ ಹೊರಗಿಡುವಂತಿಲ್ಲ, ಸರ್ವಾಧಿಕಾರಿಗಳು ಮತ್ತು ನಿರಂಕುಶ ಪ್ರಭುಗಳನ್ನೂ ಕೂಡ"
ಎನ್ನುವುದು ಗಾಂಧೀಜಿಯವರ ನಂಬಿಕೆಯಾಗಿತ್ತು.
ಇಟಿಲಿಯ ಅವರ ಪ್ರವಾಸದಲ್ಲಿ ಹೆಚ್ಚು ಮಹತ್ವ ಪಡೆದಿರುವುದು ಅವರ ವ್ಯಾಟಿಕನ್‌ಗೆ ನೀಡಿದ ಭೇಟಿ. ಆಘಾತಕಾರಿ ಸಂಗತಿಯೆಂದರೆ, ಅಂದಿನ ಪೋಪ್ ಗಾಂಧೀಜಿಯವರನ್ನು ಭೇಟಿಯಾಗಲು ನಿರಾಕರಿಸಿದರು ಎಂಬುದು! ಕ್ರಿಶ್ಚಿಯಾನಿಟಿಯ ಮೂಲ ಸಂದೇಶವನ್ನು ಕಡೆಗಣಿಸಿ ಅಂದಿನ ಚರ್ಚ್ ಎಷ್ಟೊಂದು ಮುಂದಕ್ಕೆ ಸಾಗಿಬಿಟ್ಟಿತ್ತು ಎನ್ನುವುದನ್ನು ಈ ಘಟನೆ ತೋರಿಸುತ್ತಿತ್ತು. ವ್ಯಾಟಿಕನ್‌ನ ಹೊರ ಹಿರಿಮೆ ಗಾಂಧೀಜಿಯವರನ್ನು ಅಷ್ಟಾಗಿ ಸೆಳೆಯಲಿಲ್ಲ.  ಆದರೆ ಸಿಸ್ಟೀನ್ ಎಂಬ ಇಗರ್ಜಿಯಲ್ಲಿನ ಕ್ರಿಸ್ತನ ಶಿಲುಬೆ ಅವರನ್ನು ಗಾಢವಾಗಿ ವಿಸ್ಮಿತಗೊಳಿಸಿಬಿಟ್ಟಿತು. ಆ ಸಮಯದಲ್ಲಿ ಗಾಂಧೀಜಿಯವರೊಂದಿಗಿದ್ದ ಅವರ ಅನುಯಾಯಿ ಮೀರಾಬೆಹನ್ ಆ ಶಿಲುಬೆ ಗಾಂಧೀಜಿಯವರ ಮೇಲೆ ಬೀರಿದ ಪ್ರಭಾವವನ್ನು ಮುಂದಿನ ದಿನಗಳಲ್ಲಿ ಹೀಗೆ ಬಣ್ಣಿಸಿದ್ದರು- "ಅವರು(ಗಾಂಧೀಜಿ) ಮೌನವಾಗಿ ಕುಳಿತುಬಿಟ್ಟರು. ಇನ್ನೂ ಧ್ಯಾನದಲ್ಲಿದ್ದಾರೇನೋ ಎನ್ನುವಂತಹ ಮೌನವದು. ನಂತರ ಅವರು ಹೇಳಿದರು: "ಆ ಶಿಲುಬೆ ನನ್ನ ಮೇಲೆ ಎಷ್ಟೊಂದು ಪ್ರಭಾವ ಬೀರಿದೆಯೆಂದರೆ ಅದೊಂದೇ ಈಗ ಮನಸ್ಸನ್ನು ಆವರಿಸಿದೆ. ವ್ಯಾಟಿಕನ್‌ನ ಉಳಿದ ಸ್ಥಳಗಳ ಭೇಟಿಯ ಬಗ್ಗೆ ನನಗೇನೂ ನೆನಪಾಗುತ್ತಿಲ್ಲ." ಆ ಮೂರ್ತಿಯ ಮುಂದೆ ನಿಂತಾಗ, 17 ವರ್ಷಗಳ ನಂತರ ತಾನು ಹುತಾತ್ಮನಾಗುತ್ತೇನೆ ಎನ್ನುವ ಪೂರ್ವಸೂಚನೆ ಮಹಾತ್ಮರಿಗೆ ಸಿಕ್ಕಿರಬಹುದೇ?
ಅವರ ಇಟಲಿಯ ಭೇಟಿಯನ್ನು ಆ ಸಮಯದಲ್ಲಿ ವ್ಯಾಟಿಕನ್ ಪ್ರೆಸ್ ಅವಹೇಳನ ಮಾಡಿತ್ತು. ಅದೇನೇ ಇದ್ದರೂ, 1986ರಲ್ಲಿ ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಿದ್ದ ಪೋಪ್ ಜಾನ್ ಪಾಲ್, "ಶಾಂತಿಯ ಯಾತ್ರಿಯಾಗಿರುವ ನಾನು, ಮೌನವೀಯತೆಯ ಮಹಾನ್ ನಾಯಕನಿಗೆ ನಮಿಸಲು ಬಂದಿದ್ದೇನೆ. ಗಾಂಧೀಜಿಯ ವರ್ಚಸ್ಸು ಮತ್ತು ಅವರ ಜೀವನ ಕಾರ್ಯದ ಅರ್ಥ ಮಾನವಕುಲದ ಪ್ರಜ್ಞೆಯೊಳಗೆ ಹಾಸುಹೊಕ್ಕಿದೆ" ಎಂದು ಹೇಳಿದ್ದರು!
ಗಾಂಧೀಜಿಯವರ ಇಟಲಿ ಭೇಟಿಯನ್ನು, ಅವರು ಬಹುವಾಗಿ ಮೆಚ್ಚುತ್ತಿದ್ದ ಆ ದೇಶದ ಆರ್ಥಿಕತಜ್ಞೆ ಮರಿಯಾ ಮಾಂಟೆಸ್ಸರಿ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. "ಅವರ (ಗಾಂಧೀಜಿಯ) ಚೇತನ ಬಲಿಷ್ಠ ಶಕ್ತಿಯಿದ್ದಂತೆ. ಏಕೆಂದರೆ ಅದು ಜನರಲ್ಲಿನ ಕೆಲ ಸಂವೇದನೆಗಳನ್ನು ಜಾಗೃತಗೊಳಿಸಿ ಅವರನ್ನು ಒಂದಾಗಿಸುತ್ತದೆ. ಈ ನಿಗೂಢ ಮತ್ತು ಅದ್ಭುತ ಶಕ್ತಿಗೆ 'ಪ್ರೀತಿ'ಯೆಂದು ಹೆಸರು... ಈ ಅನುಭವ ನನಗಾಗಿದ್ದು ರೋಮ್‌ನಲ್ಲಿ ಗಾಂಧೀಜಿಯವರೊಂದಿಗೆ ಕೆಲ ಕ್ಷಣಗಳನ್ನು ಕಳೆದಾಗ. ಅವರು ರೋಮ್‌ನಿಂದ ಭಾರತಕ್ಕೆ ಹಿಂದಿರುಗಲಿದ್ದರು. ಹಾಗಾಗಿ ನಾವೆಲ್ಲ ಗೌರವಾರ್ಥವಾಗಿ ಚಿಕ್ಕ ಭೇಟಿಯನ್ನು ಏರ್ಪಡಿಸಿದ್ದೆವು. ನೆಲದ ಮೇಲೆ ಕುಳಿತು ದಾರವನ್ನು ನೂಲುತ್ತಿದ್ದ ಗಾಂಧೀಜಿಯ ಸುತ್ತ ಮಕ್ಕಳು ಮೌನವಾಗಿ ಮತ್ತು ಪ್ರಶಾಂತವಾಗಿ ಕುಳಿತಿದ್ದವು. ಈ ಅವಿಸ್ಮರಣೀಯ ಘಳಿಗೆಗೆ ಸಾಕ್ಷಿಯಾದ ವಯಸ್ಕರೂ ಕೂಡ ಮೌನವಾಗಿ, ನಿಶ್ಚಲರಾಗಿ ಕುಳಿತಿದ್ದರು. ಅಲ್ಲಿ ಮಾತುಗಳ ಅವಶ್ಯಕತೆಯಿರಲಿಲ್ಲ. ಆಧ್ಯಾತ್ಮಿಕ ಸೆಳೆತವೊಂದು ಎಲ್ಲರನ್ನೂ ಒಂದಾಗಿಸಿತ್ತು. ಈ ಆಧ್ಯಾತ್ಮಿಕ ಸೆಳೆತವನ್ನು ಅನುಭವಿಸುವುದನ್ನು ನಾವು ಕಲಿಯಬೇಕು. ಮಾನವೀಯತೆಯನ್ನು ಉಳಿಸಬಲ್ಲ ಅಗಾಧ ಸೆಳೆತವದು. ಕೇವಲ ವಸ್ತು ವಿಷಯಕ್ಕೆ ಅಂಟಿಕೊಂಡಿರುವ ನಮ್ಮನ್ನೆಲ್ಲ ಒಂದಾಗಿಸಲು ಈ ಆತ್ಮಾನುಭೂತಿ ಅಂಟಾಗಬೇಕು, ಗಂಟಾಗಬೇಕು".
ಪ್ರಪಂಚ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿರುವ ವೇಳೆಯಲ್ಲಿ, ಗಾಂಧೀಜಿಯವರ ನಿಗೂಢ, ಪ್ರೇಮಮಯ ಶಕ್ತಿಯ ಅನುಭವ ನನಗಾಗುತ್ತಿದೆ.

- ಸುಧೀಂದ್ರ ಕುಲಕರ್ಣಿ, ಅಂಕಣಕಾರರು
sudheenkulkarni@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement