ವಾರಾಣಸಿ ದೇಶದ ಬೌದ್ಧಿಕ ರಾಜಧಾನಿಯಾಗಲಿ
ಪ್ರಿಯ ವಾರಾಣಸಿ ಜನರೇ, ಪ್ರಾಚೀನ...
ಪ್ರಿಯ ವಾರಾಣಸಿ ಜನರೇ, ಪ್ರಾಚೀನ ನಗರಿ ವಾರಾಣಸಿ ಸಾವಿರಾರು ವರ್ಷಗಳಿಂದ ಜ್ಞಾನ, ಶಿಕ್ಷಣ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇದು ಶಿವನ ನಗರಿ. ಶಿವ, ವಿಭಿನ್ನ ಸಂಸ್ಕೃತಿಯ ನಡುವಿನ ಸಮನ್ಮಯ ಸೇತುವೆ. ಶಿವ, ಸಂಸಾರದ ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡಲು ವಿಷ ಸೇವಿಸಿ ನೀಲಕಂಠನೆಂದು ಕರೆಸಿಕೊಂಡವ. ಇಂದು ಇಡೀ ದೇಶದ ದೃಷ್ಟಿ ವಾರಾಣಸಿಯ ಮೇಲೆ ನಿಂತಿದೆ. ಇದಕ್ಕೆ ಕಾರಣವೂ ವಾರಾಣಸಿಯ ಇದೇ ಶಿವಸ್ವರೂಪವೇ. ಆತ ರಕ್ಷಿಸಲು ವಿಷವನ್ನೂ ಕುಡಿಯಬಲ್ಲ ಮತ್ತು ದೇಶವನ್ನು 'ನಿರಾಸೆಯ ಕೂಪಕ್ಕೆ ದೂಡುವವರಿಂದ' ಮುಕ್ತಗೊಳಿಸಲು ಢಮರುಗವನ್ನೂ ಬಾರಿಸಬಲ್ಲ.
ವಾರಾಣಸಿಯಲ್ಲೇ ಗಂಗಾಮಾತೆಯ ಸೌಂದರ್ಯ ಮತ್ತು ಮಹತ್ವ ಅತ್ಯುತ್ತಮ ಸ್ತರವನ್ನು ಪಡೆಯುತ್ತದೆ. ಆಕೆಯ ದರ್ಶನವೇ ಮುಕ್ತಿಯ ಮಾಧ್ಯಮವಾಗಿಬಿಡುತ್ತದೆ. ಆದರೆ ಇಂದು ಇದೇ ಮೋಕ್ಷದಾಯಿನಿ ಗಂಗೆ, ಸ್ವಯಂ ತನ್ನ ಅಸ್ತಿತ್ವಕ್ಕಾಗಿ ಸಂಘರ್ಷ ಮಾಡುತ್ತಿದ್ದಾಳೆ. ಸಾವಿರಾರು ಕೋಟಿ ಖರ್ಚು ಮಾಡಿದರೂ ಕಲುಷಿತ ಗಂಗೆಯ ಸ್ಥಿತಿ ಬದಲಾಗಿಲ್ಲ. ಗಂಗೆ ವಾರಾಣಸಿ ನಗರದ ಗೌರವದ ಪ್ರತೀಕ. ಆ ಗೌರವವನ್ನು ಪುನಃಸ್ಥಾಪಿಸಲು ವ್ಯಾಪಕ ಪ್ರಯತ್ನದ ಅವಶ್ಯಕತೆಯಿದೆ.
ವಾರಾಣಸಿ, ಗಂಗಾ-ಜಮುನಾ ಸಂಸ್ಕೃತಿಯ ಅತಿ ದೊಡ್ಡ ಕೇಂದ್ರವೂ ಹೌದು. ಭಾರತರತ್ನ ಬಿಸ್ಮಿಲ್ಲಾ ಖಾನ್ರ ಶಹನಾಯಿಯ ಪ್ರತಿಧ್ವನಿ ಹಿಂದು-ಮುಸ್ಲಿಂ ಏಕತೆಯನ್ನು ಸಾರಿ ಹೇಳಿದ್ದೂ ಇಲ್ಲಿಯೇ. ಪರಿಣಾಮವಾಗಿ, ವಾರಾಣಸಿ ಇಂದು ಆಧ್ಯಾತ್ಮಿಕ ಜ್ಞಾನ ಪ್ರಪಂಚದ ಅತಿ ದೊಡ್ಡ ಕೇಂದ್ರವಾಗಿದೆ. ದೆಹಲಿ ದೇಶದ ರಾಜಕೀಯ ರಾಜಧಾನಿ. ಮುಂಬೈಯನ್ನು ವಿತ್ತೀಯ ರಾಜಧಾನಿ ಎಂದು ಕರೆಯಲಾಗುತ್ತದೆ. ವಾರಾಣಸಿ ದೇಶದ ಬೌದ್ಧಿಕ ರಾಜಧಾನಿಯೆಂದು ಕರೆಸಿಕೊಳ್ಳಲಿ. ಇಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯ ಮತ್ತು ಕಾಶಿ ವಿದ್ಯಾಪೀಠದಂಥ ವಿಶ್ವಸ್ತರದ ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥಾನಗಳು ಕೇವಲ ವಾರಾಣಸಿಯ ಗುರುತಷ್ಟೇ ಅಲ್ಲದೇ, ಭೋಜಪುರಿ ಕ್ಷೇತ್ರಗಳ ಸಹಿತ ಇಡೀ ಪೂರ್ವಾಂಚಲದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸಲು ಮುಖ್ಯವಾಗಿವೆ. ಹಾಗಾಗಿ ಇವುಗಳ ಸಂವರ್ಧನೆ ಮತ್ತು ವಿಕಾಸದ ಅವಶ್ಯಕತೆಯಿದೆ.
ಪ್ರವಾಸಿ ತಾಣವಾಗಿರುವ ವಾರಾಣಸಿ, ಕರಕುಶಲ ಮತ್ತು ಕಲೆಯಿಂದಲೂ ವಿಶ್ವವಿಖ್ಯಾತವಾಗಿದೆ. ಆದರೂ ಇಲ್ಲಿನ ಯುವಕರು ನಿರುದ್ಯೋಗಿಗಳಾಗಿ ಒದ್ದಾಡುತ್ತಿದ್ದಾರೆ. ಹಿಂದೊಮ್ಮೆ ದೇಶಾದ್ಯಂತ ಬನಾರಸಿ ಪಾನ್ ಮತ್ತು ಸೀರೆಯ ವರ್ಚಸ್ಸು ಎಷ್ಟಿತ್ತೆಂದರೆ, ಸಾವಿರಾರು ಜನರು ಇವುಗಳಿಂದಲೇ ಉದ್ಯೋಗ ಪಡೆದಿದ್ದರು. ಇಂದು ಇವೆರಡೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ವಾರಾಣಸಿಯ ಕರಕುಶಲ ಮತ್ತು ಕರಮಗ್ಗ ಕೈಗಾರಿಕೆಗಳನ್ನು ಪುನರುದ್ಧಾರ ಮಾಡುವ ಅವಶ್ಯಕತೆಯಿದೆ. ಇಲ್ಲಿಯೇ ಉದ್ಯೋಗಗಳನ್ನು ಸೃಷ್ಟಿಸುವುದರಿಂದ ಸಾವಿರಾರು ಜನರಿಗೆ ತಮ್ಮ ನೆಲದಲ್ಲೇ ಉದ್ಯೋಗ ಸಿಗುವುದಲ್ಲದೇ, ವಾರಾಣಸಿಯ ಹಿಂದಿನ ಪ್ರತಿಷ್ಠೆಯನ್ನು ಮತ್ತೆ ಸ್ಥಾಪಿಸಿದಂತಾಗುತ್ತದೆ. ಅದಾಗ್ಯೂ ಇದೆಲ್ಲ ಉತ್ತಮ ನಾಗರಿಕ ಸೌಲಭ್ಯಗಳಿಲ್ಲದೇ ಸಾಧ್ಯವಾಗುವುದಿಲ್ಲ. ಇಂದು ವಾರಾಣಸಿ ಕೆಟ್ಟ ರಸ್ತೆಗಳು, ಟ್ರಾಫಿಕ್ ಜಾಮ್ ಮತ್ತು ವಿದ್ಯುತ್-ನೀರಿನ ಸಮಸ್ಯೆಯೊಂದಿಗೆ ಸೆಣಸುತ್ತಿದೆ. ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ. ಇದರೊಟ್ಟಿಗೆ ಸರ್ಕಾರಿ ವಿಭಾಗಗಳಲ್ಲಿ ಮಾಫಿಯಾಗಳು ಮತ್ತು ಗುತ್ತಿಗೆದಾರರ ಹಸ್ತಕ್ಷೇಪವೂ ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತಿದೆ. ದೆಹಲಿಯಿಂದ ಹಿಡಿದು ಬನಾರಸ್ವರೆಗೆ ಜನರ ಹಣವನ್ನು ಲೂಟಿ ಮಾಡುವ ಪ್ರತಿಯೊಬ್ಬ ಮಾಫಿಯಾಗಳ ಪ್ರಾಬಲ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತಿದ್ದೇನೆ.
ನಿಮಗೆಲ್ಲ ನೆನಪುರಬಹುದು, 20ನೇ ಶತಮಾನದ ಅಂತಿಮ ವರ್ಷಗಳಲ್ಲಿ ಪ್ರಪಂಚದ ಚಿಂತಕರು ಮತ್ತು ತತ್ವಜ್ಞಾನಿಗಳು '21ನೇ ಶತಮಾನ ಭಾರತದ ಕೈಯಲ್ಲಿದೆ' ಎಂದು ಹೇಳಿದ್ದರು. 21ನೇ ಶತಮಾನದ ಶುರುವಾತಿನ ವರ್ಷಗಳಲ್ಲಿ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಿಂದ ಈ ಭವಿಷ್ಯವಾಣಿ ನಿಜವಾಗುವತ್ತ ಸಾಗಿತ್ತು. ಪ್ರಪಂಚ ಭಾರತದತ್ತ ನೀರೀಕ್ಷೆಯ ನೋಟವನ್ನು ನೆಟ್ಟಿತ್ತು. ದೇಶದ ನವಯುವಕರಲ್ಲಿ ಅದಮ್ಯ ಉತ್ಸಾಹವಿತ್ತು ಮತ್ತು ಪ್ರತಿ ಕುಟುಂಬದ ಬಳಿಯೂ ತಮ್ಮ ಮಕ್ಕಳ ಯಶಸ್ಸಿನ ಕಥೆಗಳಿದ್ದವು. ಆದರೆ ಯುಪಿಎದ ಹತ್ತು ವರ್ಷಗಳ ಕುಶಾಸನದಿಂದ ದೇಶ ದಶಕಗಳಷ್ಟು ಹಿಂದಕ್ಕೆ ದೂಡಲ್ಪಟ್ಟಿದೆ. ಬೆಳೆಯುತ್ತಿರುವ ಭಾರತದ ಕಥೆಯೂ ಅರ್ಧಕ್ಕೇ ನಿಂತುಬಿಟ್ಟಿದೆ.
ಮಿತ್ರರೇ, ಇಂದು ಆ ಸಮಯ ಬಂದಿದೆ. ನಾವು ಈ ಸ್ಥಿತಿಯನ್ನು ಬದಲಾಯಿಸೋಣ. ದೇಶದ ರಾಜಕೀಯದ ಪ್ರತಿಬಿಂಬ ವಾರಾಣಸಿಯಲ್ಲಿ ಕಾಣಿಸುತ್ತದೆ ಎಂದು ಹೇಳುತ್ತಾರೆ. ಹಾಗಿದ್ದರೆ ಬನ್ನಿ ಶುರುವಾತು ಇಲ್ಲಿಂದಲೇ ಆಗಲಿ.
- ನರೇಂದ್ರ ಮೋದಿ