ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಮೂ, ಗಿಕಾ, ಮರುಳರ ತಂಡಕ್ಕೆ ಪ್ರೀತಿಯ ಪ್ರಶ್ನೆಗಳು

ಕೆಲವು ಸಾಹಿತಿಗಳು ಬಹಿರಂಗವಾಗಿ ಒಂದು ಪಕ್ಷದ ಪರ ಗುರುತಿಸಿಕೊಂಡು...

Mainashree
Updated On : 8 Apr 2014, 1:10 am

"ಕೆಲವು ಸಾಹಿತಿಗಳು ಬಹಿರಂಗವಾಗಿ ಒಂದು ಪಕ್ಷದ ಪರ ಗುರುತಿಸಿಕೊಂಡು ಪ್ರಚಾರಕ್ಕಿಳಿದಿರುವುದು ನಿಜಕ್ಕೂ ಐತಿಹಾಸಿಕವಾದುದು" ಎಂಬ ಚಂಪಾ ಅವರ ಮಾತು ಸತ್ಯ. ಅಂತೆಯೇ ಕನ್ನಡದ ಉಳಿದ ಸಾಹಿತಿಗಳು, ಚಿಂತಕರು, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣ್ಯರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಆ ದೃಷ್ಟಿಯಿಂದ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್, ಎಸ್.ಜಿ ಸಿದ್ದರಾಮಯ್ಯ, ಅಂತೆಯೇ ಮತ್ತೊಂದು ಪಕ್ಷದ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿರುವ ಎಸ್.ಎಲ್ ಭೈರಪ್ಪ, ಚಿದಾನಂದಮೂರ್ತಿ, ದೊಡ್ಡರಂಗೇಗೌಡರರು ಅಭಿನಂದನಾರ್ಹರು. ಆದರೆ ಈ ಎರಡೂ ತಂಡಗಳನ್ನು ಪಕ್ಷಗಳು ಹಾಗೂ ಸಮಾಜವು ಕೇವಲ ರಾಜಕೀಯ ಸೋಲು ಗೆಲುವುಗಳ ಲೆಕ್ಕಾಚಾರದಲ್ಲಿ ಟೀಕಿಸುವಂಥ ಕೆಸರೆರಚಾಟ ಮಾಡಬಾರದು. ಬದಲಿಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಳೆದು ಬಂದ ರಾಜಕೀಯ ಸಿದ್ಧಾಂತಗಳು ಹಾಗೂ ಅದರಿಂದಾಗಿರುವ ಪರಿಣಾಮಗಳ ಅವಲೋಕನದ ಮೂಲಕ ರಾಜಕೀಯ ಚರ್ಚೆಯನ್ನು ರಾಷ್ಟ್ರದ ಭವಿಷ್ಯದ ವೈಚಾರಿಕ ಚರ್ಚೆಯನ್ನಾಗಿಸಬೇಕು. ಆಗ ಮಾತ್ರ ಸಾಹಿತಿಗಳ ಬೆಂಬಲ ಜಡ್ಡುಗಟ್ಟಿರುವ ರಾಜಕೀಯ ಪಕ್ಷಗಳ ಸೈದ್ಧಾಂತಿಕ ವ್ಯವಸ್ಥೆಗೆ ಜೀವ ತರುತ್ತದೆ. ಹೊಸತಾದ ದಾರಿಯೊಂದು ತೆರೆದುಕೊಳ್ಳುತ್ತದೆ. ಆದ್ದರಿಂದ  ಅನಂತಮೂರ್ತಿ, ಗಿರೀಶ್ ಕಾರ್ನಾಡ, ಮರುಳಸಿದ್ದಪ್ಪನವರ ತಂಡಕ್ಕೆ ಕೆಲವು ಪ್ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ:
ಇವರು 'ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಯುಳ್ಳವರು, ಅಧಿಕಾರಕ್ಕೆ ಬಂದರೆ ಯುದ್ಧವಾಗುತ್ತದೆ. ದೇಶ ವಿಭಜನೆಯಾಗುತ್ತದೆ' ಎಂಬ ಭಯವನ್ನು ಸಮಾಜದಲ್ಲಿ ಬಿತ್ತುವ ಮೂಲಕ ತಮ್ಮ ವಿಚಾರವನ್ನು ಪ್ರತಿಪಾದಿಸುತ್ತಿದ್ದಾರೆ. ಅದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್ಗೆ ಬೆಂಬಲ ಸೂಚಿಸುತ್ತಿದ್ದಾರೆ ಹಾಗೂ ಬಿಜೆಪಿಯ ಎಲ್.ಕೆ.ಆಡ್ವಾಣಿ ಅವರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಅಂದರೆ ಇವರು ಬಿಜೆಪಿಯನ್ನು ವಿರೋಧಿಸುತ್ತಿಲ್ಲ. ಕೇವಲ ನರೇಂದ್ರ ಮೋದಿಯನ್ನು ಮಾತ್ರ. ಅದಕ್ಕೆ ಏಕೈಕ ಕಾರಣ ಗೋಧ್ರೋತ್ತರ ಕೋಮುಗಲಭೆಯೇ ಆಗಿದೆ.
1. ಮೋದಿ ಅಧಿಕಾರಕ್ಕೆ ಬಂದರೆ ದೇಶ ವಿಭಜನೆಯಾಗುತ್ತದೆ ಎನ್ನುತಿದ್ದೀರಲ್ಲಾ ಹಾಗಾದರೆ 1885ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟವನ್ನು, ಅಂದಿನ ಮುಸ್ಲಿಮರನ್ನು ತೃಪ್ತಿಪಡಿಸುವುದಕ್ಕಾಗಿ ಖಿಲಾಫತ್ ಚಳವಳಿಯನ್ನು ಮತ್ತು ಟರ್ಕಿ ದೇಶದ ರಾಜನ ಪದಚ್ಯುತಿಯಾಗಬಾರದೆಂದು ಹೋರಾಟ ನಡೆಸಿತಲ್ಲಾ? ಆದಾಗ್ಯೂ ದೇಶ ವಿಭಜನೆ ಏಕಾಯ್ತು? ರಾಷ್ಟ್ರೀಯ ಧ್ವಜವನ್ನು ಕೇಸರಿಯ ಬದಲು ತ್ರಿವರ್ಣ ಧ್ವಜವನ್ನು ಅಂಗೀಕರಿಸಿದರೂ ದೇಶ ವಿಭಜನೆ ಏಕಾಯ್ತು? ವಂದೇಮಾತರಂ ಪೂರ್ಣಹಾಡದೆ ಇಂದಿಗೂ ತುಂಡರಿಸಿ ಹಾಡುತ್ತಿದ್ದರೂ ದೇಶವಿಭಜನೆ ಏಕಾಯ್ತು? ಅಂದು ನರೇಂದ್ರ ಮೋದಿಯವರು ಇರಲಿಲ್ಲ. ನೀವು ಪ್ರಬಲವಾಗಿ ವಿರೋಧಿಸುತ್ತಿರುವ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ಅಧಿಕಾರವೂ ಇರಲಿಲ್ಲ. ಅವರು ಎರಡು ಜೀವಾವಧಿ ಶಿಕ್ಷೆಗೆ ಒಳಗಾಗಿ ಸೆಲ್ಯುಲರ್  ಜೈಲಿನಲ್ಲಿ ಅಂಡಮಾನಿನಲ್ಲಿ ರಾಷ್ಟ್ರಕ್ಕಾಗಿ ತಮ್ಮ ಬಾಳನ್ನೇ ಬಲಿಕೊಟ್ಟರು. ನಿಮ್ಮಂತೆ, ನೀವು ಬೆಂಬಲಿಸುತ್ತಿರುವ ಪಕ್ಷದವರಂತೆ ಯಾವ ಅಧಿಕಾರವನ್ನೂ ಅನುಭವಿಸಲಿಲ್ಲ. ಆದರೂ ದೇಶವೇಕೆ ವಿಭಜನೆ ಆಯ್ತು? ಮೋದಿಯವರನ್ನು ವಿರೋಧಿಸುತ್ತಿರುವವರ ಹಿಂದೆ ಭಾರತ ದೇಶದ ಚಾ ಮಾರುತ್ತಿದ್ದ ಬಡ, ಶೂದ್ರ, ವ್ಯಕ್ತಿಯೊಬ್ಬ ಪ್ರಧಾನಿಯಾಗಬಾರದೆಂಬ, ಸವರ್ಣ ಪ್ರೀತಿ ಅಡಗಿದೆಯೇ? ಗುಜರಾತಿನಲ್ಲಿ ಗೋಧ್ರಾ ಘಟನೆ ಅನಂತರ ಯಾವುದೇ ಕೋಮುಗಲಭೆ ನಡೆದಿಲ್ಲ. ಗುಜರಾತಿನ ಮುಸ್ಲಿಮರು ಮೋದಿಗೆ ಮತಹಾಕಿ ಹತ್ತು ವರ್ಷ ಆಳಲು ಅನುವು ಮಾಡಿಕೊಟ್ಟಿರುವಾಗ, ಗುಜರಾತ್ ವಿಭಜನೆಯಾಗುವ ಬದಲು ಹಿಂದೂ ಮುಸ್ಲಿಂರ ಐಕ್ಯತೆಯ ಕೇಂದ್ರವಾಗಿರುವಾಗ ನೀವೇಕೆ ಕರ್ನಾಟಕದ ಮತದಾರರಲ್ಲಿ ಮತೀಯ ಭಯ ಬಿತ್ತುತ್ತಿದ್ದೀರಿ? ನಮ್ಮ ದೇಶ 1947ರಲ್ಲಿ ವಿಭಜನೆಯಾಗಿರುವುದಕ್ಕೆ ಮತ್ತು ಅನಂತರ ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧ ನಡೆದಿರುವುದಕ್ಕೆ, ಬಾಂಗ್ಲಾ, ಪಾಕಿಸ್ಥಾನಗಳಲ್ಲಿ ಇಂದಿಗೂ ಹಿಂದೂಗಳ ನರಮೇಧ ನಡೆಯುತ್ತಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ತಸ್ಲೀಮಾ ನಸ್ರೀನ್ ಅವರ ಲಜ್ಜಾ ಕಾದಂಬರಿಯನ್ನು ಓದಿರುವಿರಾ? ಅದರಲ್ಲಿ ನಿಮ್ಮಂತಹದೇ ವಿಚಾರವಾದದ ನಾಸ್ತಿಕ ನಾಯಕ ಕಾದಂಬರಿಯ ಕಡೆಯಲ್ಲಿ ತನ್ನ ಮಗನ ಬಳಿ ಇಂಡಿಯಾಗೆ ಹೋಗುವಾ ಎನ್ನುತ್ತಾನಲ್ಲಾ, ಹಾಗಾದರೆ ಆತ ಜೀವನದುದ್ದಕ್ಕೂ ಹೇಳುತ್ತಾ ಬಂದ ನಿಮ್ಮದೇ ವೈಚಾರಿಕತೆ ಬಾಂಗ್ಲಾದೇಶದ ಸಂತ್ರಸ್ತ ಹಿಂದುಗಳಿಗೆ ಯಾವುದೇ ರೀತಿಯ ಆತ್ಮವಿಶ್ವಾಸವನ್ನಾಗಲೀ, ಸ್ವಾವಲಂಬನೆಯನ್ನಾಗಲೀ, ಬಲವನ್ನಾಗಲೀ ನೀಡಿದೆಯೇ? ಅಥವಾ ಆಕ್ರಮಣಕಾರಿ, ಕ್ರೂರ ದಾಳಿಕೋರರ, ಭಯೋತ್ಪಾದಕರ ಹೃದಯಗಳನ್ನು ಬದಲಾಯಿಸಿದೆಯೇನು? ನೀವು ತಮ್ಮ ಬಾಳಿನುದ್ದಕ್ಕೂ ದೇಶವೆಂದರೆ 'ಭಾವಿಸುವುದು ಹಾಗೂ ಭೋಗಿಸುವಂಥದ್ದು' ಎಂದು ಬೋಧಿಸುತ್ತಾ ಬರೆಯುತ್ತಾ ಬಂದಿದ್ದೀರಿ. ದೇಶವೆಂದರೆ ಕಟ್ಟುವಂಥದ್ದು, ಅದಕ್ಕಾಗಿ ನಮ್ಮ ಬದುಕನ್ನು ಸಮರ್ಪಿಸುವಂಥದ್ದು ಎಂಬ ಸ್ವಾಮಿ ವಿವೇಕಾನಂದ, ಅರವಿಂದ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ರಂಥವರ ವಿವೇಕವನ್ನಾಗಲೀ, ಹೃದಯವಂತಿಕೆಯಾಗಲೀ, ರಾಷ್ಟ್ರ ಭಕ್ತಿಯನ್ನಾಗಲೀ ಹೇಳಿದ್ದೀರಾ, ಬರೆದಿದ್ದೀರಾ? ನೀವು ಬೆಂಬಲಿಸುತ್ತಿರುವ ಪಕ್ಷ ಹಾಗೂ ಅದರ ಮುಸ್ಲಿಂ ತುಷ್ಟೀಕರಣದ ದುರ್ಬಲ ರಾಜನೀತಿಯೇ ಭಾರತದ ವಿಭಜನೆಗೆ, ಪಾಕಿಸ್ತಾನ, ಚೀನಾಗಳೊಂದಿಗಿನ ಯುದ್ದಕ್ಕೆ ಅಮೆರಿಕದ ಆರ್ಥಿಕ ದಾಳಿಗೆ ತಲೆ ಬಾಗುತ್ತಿರುವುದಕ್ಕೆ ಕಾರಣವೆಂದು ಎಂದೂ ನಿಮಗನಿಸಿಲ್ಲವೇ? ಕಾಂಗ್ರೆಸ್ ಅನ್ನು ನೀವು ಬೆಂಬಲಿಸುತ್ತಿರುವುದಕ್ಕೆ ಅದು ದುರ್ಬಲವಾಗಿದೆಯೆಂಬ ಕಾರಣವೋ ಅಥವಾ ವೈಯಕ್ತಿಕ ಲಾಭಗಳ ಆಶ್ವಾಸನೆಗಳು ಕಾರಣವೋ? ಇದ್ಯಾವುದೂ ಅಲ್ಲದಿದ್ದರೆ ಈ ದೇಶದಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್ ಸಂಗಮದ ಕುಡಿಯೊಂದು ಪ್ರಧಾನಿಯಾಗಬೇಕೆಂಬ ದೂರ ದೃಷ್ಟಿಯೋ ಅಥವಾ ಶೂದ್ರನೆಂದೂ ಪ್ರಧಾನಿಯಾಗಬಾರದೆಂಬ ಬ್ರಾಹ್ಮಣ ಗ/ಡ ಶೂದ್ರ ಹೋರಾಟದ ಮುಂದುವರಿಕೆಯ ಹುನ್ನಾರವೋ?
2. ನರೇಂದ್ರ ಮೋದಿಯು ಪ್ರಧಾನಿಯಾದರೆ ಯುದ್ಧ ಎಲ್ಲಿ ಸಂಭವಿಸುತ್ತದೆ? ದೇಶದ ಒಳಗೋ, ಹೊರಗೋ?  ಆ ಯುದ್ಧ ಘೋಷಿಸುವವರು ಯಾರು? ಹಿಂದುಗಳೋ, ವಿಚಾರವಾದಿಗಳೋ, ಮುಸ್ಲಿಮರೋ, ಕ್ರಿಶ್ಚಿಯನ್ನರೋ, ಪಾಕಿಸ್ತಾನವೋ, ಚೀನಾವೋ ಅಥವಾ ಅಮೆರಿಕವೋ? ಯುದ್ಧ ಸಂಭವಿಸುತ್ತದೆ ಎಂಬ ವಾದಕ್ಕೆ ನಿಮ್ಮ ಬಳಿ ಯಾವ ಆಧಾರವಿದೆ? ಅಲ್ಲದೆ ಪಾಕಿಸ್ತಾನ ನಾಲ್ಕುಬಾರಿ ಯುದ್ಧ ಘೋಷಿಸಿತ್ತಲ್ಲಾ ಆವಾಗ ನೀವು ಬೆಂಬಲ ನೀಡುತ್ತಿರುವ ಪಕ್ಷವೇ ಅಧಿಕಾರದಲ್ಲಿತ್ತಲ್ಲ, ಯುದ್ಧವೇಕಾಯ್ತು? ಅದೇ ಇಂದಿರಾಗಾಂಧಿಯವರು ಪಾಕಿಸ್ತಾನದ ಬಂಧಿತ ಸೈನಿಕರನ್ನು ಉದಾರವಾಗಿ ಬಿಡುಗಡೆ ಮಾಡಿದ್ದಲ್ಲದೆ ಲಡಾಖ್ವರೆಗೆ ಹೋಗಿ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದಿದ್ದ ಭಾರತೀಯ ಸೈನ್ಯವನ್ನು ನೈತಿಕವಾಗಿ ದುರ್ಬಲವಾಗುವಂತೆ ಮಾಡಿ ವಿಶ್ವಮಾನವತ್ವ ಸಾರಿದರಲ್ಲಾ, ಆ ನೆಲದಲ್ಲಿರುವ ಹಿಂದುಗಳು ಇಂದಿಗೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರಲ್ಲಾ, ಅವರಿಗೆ ನಿಮ್ಮ ವಿಚಾರ ನಿಮ್ಮ ಪಕ್ಷ, ನಿಮ್ಮ ನಾಯಕರು ಯಾವ ಆತ್ಮವಿಶ್ವಾಸ, ಸ್ವಾಭಿಮಾನದ ಬದುಕು, ರಾಷ್ಟ್ರೀಯತೆಯನ್ನು ನೀಡಿದ್ದಾರೆ? ಎಂದಾದರೂ ಕಾಶ್ಮೀರ, ಆಕ್ರಮಿತ ಕಾಶ್ಮೀರ, ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು ಹೇಗಿದ್ದಾರೆಂದು ಯೋಚಿಸಿದ್ದೀರಾ? ಅವರ ಬಗ್ಗೆ ನೀವೇಕೆ ಬರೆಯುವುದಿಲ್ಲ? ಅವರಿಗೆ ಬದುಕು ಕೊಡಿ ಎಂದು ರಾಹುಲ್ ಅಥವಾ ಸೋನಿಯಾಗಾಂಧಿ ಕುಟುಂಬಕ್ಕೆ ಹೇಳಬಲ್ಲಿರಾ? ಭಯೋತ್ಪಾದನೆಯ ದೂರಿನಲ್ಲಿ ಬಂಧಿತರಾಗಿರುವ ಉಗ್ರಗಾಮಿಗಳನ್ನು ಧರ್ಮದ ತುಷ್ಟೀಕರಣದ ಕಾರಣಕ್ಕೆ ಬಿಡುಗಡೆ ಮಾಡಲು ಮುಂದಾಗಿರುವ ನಿಮ್ಮ ಪಕ್ಷದವರಿಂದ ದೇಶ ಸುರಕ್ಷಿತವಾಗಿರಬಲ್ಲದೇ? ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಹತ್ತು ವರ್ಷಗಳಲ್ಲಿ ಗುಜರಾತ್ನಲ್ಲಿ ಎಷ್ಟು ಗಲಭೆಗಳು ಆಗಿವೆ? ನೀವು ಬೆಂಬಲಿಸುತ್ತಿರುವ ಕಾಂಗ್ರೆಸ್ನ ಮುಖ್ಯಮಂತ್ರಿಗಳಿರುವ ರಾಜ್ಯಗಳಲ್ಲಿ ಎಷ್ಟು ಕೋಮು ಗಲಭೆಗಳಾಗಿವೆ ಎಂಬ ಅಧ್ಯಯನವನ್ನೇನಾದರೂ ತಾವು ಮಾಡಿದ್ದರೆ ವಸ್ತುನಿಷ್ಠವಾಗಿ ಬರೆಯುತ್ತಿದ್ದಿರೆಂದು ಭಾವಿಸುತ್ತೇನೆ. ಅಧ್ಯಯನವಿಲ್ಲದೆ, ಆಧಾರಗಳಿಲ್ಲದೆ ಸುಳ್ಳು ಸುಳ್ಳು ಪ್ರಚಾರಮಾಡಿ ಭಯ ಹುಟ್ಟಿಸುವುದು ವಿಚಾರವಂತಿಕೆ ಎನಿಸುವುದಿಲ್ಲ.
3. ಮೋದಿ ಸರ್ವಾಧಿಕಾರಿ ಎಂದಿದ್ದೀರಲಾ,್ಲ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ್ದು ಪ್ರಜಾತಂತ್ರವೇ? ನೂರು ಕೋಟಿಗೂ ಅಧಿಕ ಜನಸಂಖ್ಯೆ, ಸಾವಿರಾರು ಜಾತಿ, ಹಲವಾರು ಧರ್ಮಗಳಿಂದ ಕೂಡಿದ ಬಹು ಸಂಸ್ಕೃತಿಯ ಭಾರತದಲ್ಲಿ 1947ರಿಂದಲೂ ಒಂದು ರಾಷ್ಟ್ರೀಯ ಪಕ್ಷಕ್ಕೆ ಆ ಕುಟುಂಬದವರೇ ಹೈಕಮಾಂಡ್ ಆಗಿ, ಉಳಿದ ಕಾರ್ಯಕರ್ತರೆಲ್ಲಾ ನಡು ಬಗ್ಗಿಸಿ ನಡೆದಾಡುವುದು ನಿಮಗೆ ಪ್ರಜಾಪ್ರಭುತ್ವದ ಸಂಕೇತವೆನಿಸುತ್ತದೆಯೇ? ಅದು ಸರ್ವಾಧಿಕಾರವಲ್ಲವಾ? ಆಡ್ವಾಣಿಗೆ ಅನ್ಯಾಯವಾಗಿದೆ ಅಂತ ಕಾಂಗ್ರೆಸ್ಗೆ ಬೆಂಬಲಿಸುತ್ತಿದ್ದೀರಲ್ಲಾ? ಪ್ರಣಬ್ ಮುಖರ್ಜಿ, ಸೀತಾರಾಂಕೇಸರಿ, ಶರದ್ ಪವಾರ್, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ನಿಜಲಿಂಗಪ್ಪ, ಡಾ.  ಅಂಬೇಡ್ಕರ್, ಸುಭಾಷ್ಚಂದ್ರ ಭೋಸ್, ಜಗಜೀವನ್ರಾಂ ಮೊದಲಾದ ಪ್ರಧಾನಿಯಾಗಬಲ್ಲಂಥ ವ್ಯಕ್ತಿಗಳಿಗೆ ಇದೇ ಕಾಂಗ್ರೆಸ್ನ ಕುಟುಂಬ ರಾಜಕಾರಣದಿಂದ ಅನ್ಯಾಯವಾಗಿದೆ ಅಂತ ಅನ್ನಿಸುತ್ತಿಲ್ಲವೇ? ಸಿದ್ದರಾಮಯ್ಯನ ಆಪ್ತರಾದ ನೀವೆಲ್ಲ ಎಷ್ಟು ದೀನ ದಲಿತ, ಶೂದ್ರರ ಪರವಾಗಿ ಮಾತನಾಡುತ್ತಿದ್ದೀರಿ? ದಲಿತರಾದ ಡಾ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಒಂದೇ ಒಂದು ಬಾರಿಯಾದರೂ ಹೇಳಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲಿ ಉತ್ತರ ಕರ್ನಾಟಕವೂ ಅಭಿವೃದ್ಧಿಯಾಗಲೀ ಎಂದು ಒಮ್ಮೆಯಾದರೂ ಹೇಳಿದ್ದೀರಾ? ಕೊನೆ ಪಕ್ಷ ಬಿಜೆಪಿ ಎಲ್.ಕೆ ಆಡ್ವಾಣಿಯವರ ಮನವೊಲಿಸಿ ಚಹಾ ಮಾರುತ್ತಾ ಬೆಳೆದು ಬಂದ ಶೂದ್ರನೊಬ್ಬನನ್ನು ಪ್ರಧಾನಿ ಎಂದು ಘೋಷಿಸಿದ್ದನ್ನು ನೋಡಿ ನಿಮಗೆಲ್ಲ ಬಹಳ ಸಂಕಟವಾಗಿರಬೇಕು ಪಾಪ. ದೇಶದಲ್ಲಿ ಜೀವನದುದ್ದಕ್ಕೂ ಅಂಬೇಡ್ಕರ್ ವಾದದ ಮೂಲಕ ದಲಿತರ ಕಲ್ಯಾಣಕ್ಕೆ ಹೋರಾಡುತ್ತಾ ಬಂದಿರುವ ಬಿಹಾರದ ರಾಮವಿಲಾಸ್ ಪಾಸ್ವಾನ್, ಮಹಾರಾಷ್ಟ್ರದ ರಾಮದಾಸ್ ಅಠವಳೆ, ಉತ್ತರ ಪ್ರದೇಶದ ಉದಿತ್ರಾಜ್ ಮೊದಲಾದ ಕೆಳವರ್ಗದ ನೇತಾರರೆಲ್ಲ ಮೋದಿಯನ್ನು ಬಿಜೆಪಿಯನ್ನು ಬೆಂಬಲಿಸಿ ಎನ್.ಡಿ.ಎ ಸೇರಿ ಚುನಾವಣೆಗಿಳಿದಿರುವಾಗ ಕರ್ನಾಟಕದ ಅಮೂ, ಗೀಕಾ, ಮುರುಳರ ತಂಡ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿರುವ ಉದ್ದೇಶ ಶೂದ್ರರು, ದಲಿತರು ದೇಶದಲ್ಲಿ ಅಧಿಕಾರ ಹಿಡಿಯುವುದನ್ನು ತಪ್ಪಿಸಿ ಬ್ರಾಹ್ಮಣ-ಕ್ರಿಶ್ಚಿಯನ್, ರಾಹುಲ್ ಗಾಂಧಿ ಅಧಿಕಾರ ಹಿಡಿಯುವಂತೆ ಮಾಡುವುದೇ ಆಗಿದೆಯಲ್ಲವೇ? 85ರ ದಶಕದಲ್ಲಿ ಬ್ರಾಹ್ಮಣರದ್ದು ಎಂದು ಆರ್ಎಸ್ಎಸ್ ಅನ್ನು ನಿಂದಿಸುತ್ತಾ ಬಂದಿದ್ರಿ. ಆದರೆ ಈಗ ಆರ್.ಎಸ್.ಎಸ್ ಶೂದ್ರನನ್ನು ಬೆಂಬಲಿಸುತ್ತಿರುವಾಗ ಮೋದಿ ಸರ್ವಾಧಿಕಾರಿ ಎಂದು ಗುಲ್ಲೇಬ್ಬಿಸುತ್ತೀದ್ದೀರಿ. ಇಂಥ ದ್ವಂದ್ವಕ್ಕೆ ಉತ್ತರ ಹೇಳಿ? ಬ್ರಾಹ್ಮಣ್ಯದ ಆರ್.ಎಸ್.ಎಸ್ ಅನ್ನು ಬರಹದಲ್ಲಿ ವಿರೋಧಿಸುತ್ತ ಬದುಕಿನಲ್ಲಿ ಒಳಗೊಳಗೆ ಪ್ರೀತಿಸುತ್ತಾ ಬಂದವರು ನೀವು. ಆದರೀಗ ಶೂದ್ರ ದೀನದಲಿತರನ್ನು ಅಂತಃಕರಣ ಪೂರ್ವಕವಾಗಿ ವಿರೋಧಿಸುತ್ತಿದ್ದೀರಿ. ನಿಮ್ಮೊಳಗಿನ ಅಂತರಂಗವನ್ನು ಹೀಗಾದರೂ ಬಯಲುಗೊಳಿಸಿದ್ದು ಕನ್ನಡಿಗರ ಹಾಗೂ ಕರ್ನಾಟಕದ ವೈಚಾರಿಕ ನಿಷ್ಕರ್ಷೆಗೆ ಒಳ್ಳೆಯದಾಗಿದೆ. ಅದಕ್ಕಾಗಿ ಮತ್ತೊಮ್ಮೆ ಅಭಿನಂದಿಸುತ್ತೇನೆ. ದೇಶ ವಿಭಜನೆಗೆ ಕಾರಣವಾದ, ಪಾಕಿಸ್ತಾನ, ಚೀನಾದೊಡನೆ ಯುದ್ಧಮಾಡಿ ನಮ್ಮ ಸೈನಿಕರನ್ನು ಬಲಿಕೊಟ್ಟು ಭಾರತದ ಸುರಕ್ಷೆಯನ್ನು ಹರಾಜಿಗಿಟ್ಟು, ವಂಶಾಡಳಿತದ ಮೂಲಕ ಪ್ರಜಾತಂತ್ರವನ್ನು ದುರ್ಬಲಗೊಳಿಸಿದ್ದೀರಿ. 1,76,000 ಕೋಟಿಯ 2ಜಿ ಸ್ಪೆಕ್ಟ್ರಂ, 86000 ಕೋಟಿಯ ಕಾಮನ್ವೆಲ್ತ್ ಗೇಂ ಹಗರಣದ ಪಕ್ಷವನ್ನು ಬೆಂಬಲಿಸಿದ್ದೀರಿ. 2012ರೊಂದರಲ್ಲಿಯೇ 24 ಸಾವಿರ ಅತ್ಯಾಚಾರಗಳು ನಡೆದು ಜಗದ ಮುಂದೆ ಭಾರತ ತಲೆ ತಗ್ಗಿಸುವಂತೆ ಮಾಡಿದವರಿಗೆ ನೀವು ಬೆಂಬಲ ಘೋಷಿಸಿದ್ದೀರಿ. ಈ ಎಲ್ಲಾ ಸಂಗತಿಗಳ ಬಗ್ಗೆ ತಮ್ಮ ಸಮ್ಮತಿ ಇದೆಯೇ? ದಯಮಾಡಿ ರಾಜ್ಯದ ಜನತೆಯ ಎದುರು ಸ್ಪಷ್ಟಪಡಿಸಿ.

-ಬಿ.ವಿ ಅರುಣ್ ಕುಮಾರ್
ಮೈಸೂರು ವಿವಿ ಅಕಡೆಮಿಕ್ ಕೌನ್ಸಿಲ್ನ ಮಾಜಿ ಸದಸ್ಯರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement