ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸೆಕ್ಯುಲರ್ ಮಂದಿ ಹಾಗೂ ಅರ್ಥ ಪಂಡಿತರ ಅಸಂಬದ್ಧ

Vishwanath S
Updated On : 23 Apr 2014, 12:23 pm

ಇತ್ತೀಚೆಗೆ ಒಂದು ಅಸಾಧಾರಣ ಕೋಮುವಾದಿ ಸಂಗತಿಗಳ ಸಂಯೋಗವೊಂದು ಘಟಿಸಿತು. ಮೊದಲನೆಯದು, 'ಜಾತ್ಯತೀತ' ಮತಗಳನ್ನು ಧಾರ್ಮಿಕ ಮುಖಂಡರಿಂದ ಖರೀದಿಸುವ ಭರಾಟೆಯಲ್ಲಿ ಚುನಾವಣಾ ನೀತಿ ಕಾಯ್ದೆಯ ಸಂಪೂರ್ಣ ತಾತ್ಸಾರವನ್ನು, ಸೋನಿಯಾ ಗಾಂಧಿಯವರ ಸುಪ್ತ ಮನಸ್ಸನ್ನು ಅಭಿವ್ಯಕ್ತಿಸುವ ಘಟನೆ. ಆ ಧಾರ್ಮಿಕ ಮುಖಂಡ ಬೇರಾರೂ ಅಲ್ಲ, 'ವಂದೇ ಮಾತರಂ' ಹಾಗೂ 'ಭಾರತ್ ಮಾತಾಕಿ ಜೈ' ಘೋಷಣೆಗಳು ಇಸ್ಲಾಂ ಮತಕ್ಕೆ ವಿರುದ್ಧವಾದ್ದರಿಂದ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ತಿರಸ್ಕರಿಸಲು ಮುಸ್ಲಿಮರಿಗೆ ಕರೆ ನೀಡಿದ ಶಾಹಿ ಇಮಾಮ್ ಸಯದ್ ಅಹ್ಮದ್ ಬುಖಾರಿಯವರು! ಇಮಾಮರು ಮತಗಳ ಸಗಟು ವ್ಯಾಪಾರದ ದಲ್ಲಾಳಿಯನ್ನೂ, ಆಕೆ ಸಗಟು ಖರೀದಿದಾರಳನ್ನೂ ನೆನಪಿಸುವಂತಿದೆ ಈ ಘಟನೆ.
ಎರಡನೆಯದು ತನ್ನ ವಿದ್ವತ್ತು, ವಿಶ್ಲೇಷಣೆ ಹಾಗೂ ಪಕ್ಷಪಾತರಹಿತ ವರದಿಗಳಿಗಾಗಿ ಜಗತ್ತಿನಾದ್ಯಂತ ಆದರಣೀಯವಾದ 'ದಿ ಎಕಾನಮಿಸ್ಟ್‌' ಎಂಬ ಬ್ರಿಟಿಷ್ ಪತ್ರಿಕೆಯಲ್ಲಿ ಪ್ರಕಟವಾದ, ಆದರೆ, ಅದರ ಗುಣಗಳೊಂದಿಗೇ ಕೊಂಚವೂ ಹೊಂದಾಣಿಕೆಯಿರದ ವಿಲಕ್ಷಣ ಲೇಖನ. ಭಾರತದ ಜನತೆಯು ತನ್ನ ಮುಂದಿನ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ನೀಡಿದ ಈ ಪುಕ್ಕಟ್ಟೆ ಸಲಹೆಗೆ ಕಾರಣಗಳೇ ತಿಳಿಯುತ್ತಿಲ್ಲವಾದರೂ ಅವು ಅನಿಷ್ಟ ಸಾಧ್ಯತೆಗಳಿಂದ ಕೂಡಿದೆಯೆಂಬುದಂತೂ ಸತ್ಯ. ಬ್ರಿಟಿಷ್ ಚಕ್ರಾಧಿಪತ್ಯವು ತಾನಿನ್ನೂ ವಸಾಹತುಗಳ ಮೇಲೆ ಅಧಿಕಾರ ಹೊಂದಿದ್ದೇನೆ ಎಂದು ತಿಳಿದುಕೊಂಡಿರುವಂತಿದೆ ಎಂಬ ಮನಸ್ಥಿತಿಯೊಂದನ್ನು ಈ ಲೇಖನ ಬಿಂಬಿಸುತ್ತದೆ. 'ಯಾರಾದರೂ ಮೋದಿಯನ್ನು ತಡೆಯಲು ಸಾಧ್ಯವೇ?' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಲೇಖನವು ಗರ್ವದ ಅಮಲಿನಲ್ಲಿ 'ಮೋದಿ ಬಹುಶಃ ಭಾರತದ ಮುಂದಿನ ಪ್ರಧಾನಿಯಾಗುತ್ತರಾದರೂ ಅದರರ್ಥ ಅವರು ಆಗಲೇಬೇಕಾದುದೆಂದೇನೂ ಅಲ್ಲ' ಎಂದು ಹೇಳುವ ಧಾರ್ಷ್ಟ್ಯ ತೋರುತ್ತದೆ.
'ದಿ ಎಕನಾಮಿಸ್ಟ್‌' ಮೋದಿಯವರನ್ನು ಏಕೆ ಅನುಮೋದಿಸಲಾರದು? ಪತ್ರಿಕೆಯು ನೀಡುವ ಕಾರಣಗಳು ಅಕ್ಷರಶಃ ಕಾಂಗ್ರೆಸ್ ಪಕ್ಷದ ವಕ್ತಾರರು ಹಾಗೂ ಅವರ ಕೋಮುವಾದಿ ಮಿತ್ರರು ಮೋದಿಯವರು ಊರ್ಜಿತಕ್ಕೆ ಬಂದಿದ್ದೇ ಒಡಕನ್ನು ಮೂಡಿಸುವ ಮೂಲಕ. ಅವರಿನ್ನೂ ಮತೀಯ ದ್ವೇಷವನ್ನು ಪೋಷಿಸುತ್ತಾರೆ ಎಂದು ಜರಿದು, ಕಳೆದ ದಶಕದುದ್ದಕ್ಕೂ ಅವರನ್ನು ಹಿಟ್ಲರನ ಪ್ರಚಾರ ಸಚಿವನಿಗೆ ಹೋಲಿಸಿ ಮಾಡಿದ ವಾಕರಿಕೆ ತರಿಸುವ ನಿಂದೆಗಳ ಪುನರಾವೃತ್ತಿಯಲ್ಲದೇ ಬೇರೇನೂ ಅಲ್ಲ. ಅದೇ ಪುಷ್ಟೀಕರಿಸಲಾಗದ ಮಿಥ್ಯಾ ಪ್ರಚಾರ, ಸಾಕ್ಷ್ಯರಹಿತ ಗ್ರಹಿಕೆಯನ್ನಾಧರಿಸಿದ ಪೂರ್ವಗ್ರಹ ಪೀಡಿತ ಆರೋಪಗಳಿಂದಾಗಿ ಇದೊಂದು ಅಪಪ್ರಚಾರದ ಹುಚ್ಚಂತೂ ಹೌದೆಂದು ಒಪ್ಪಿಕೊಳ್ಳಬೇಕಾಗುತ್ತದೆ.
ದಿ ಎಕನಾಮಿಸ್ಟ್ ಪತ್ರಿಕೆಯು, ಕಾಂಗ್ರೆಸ್ ಪಕ್ಷದ ಪ್ರತಿರೂಪದಂತೆ ಗೋಧ್ರಾ ರೈಲಿನಲ್ಲಿ ಮುಸ್ಲಿಂ ಸಂಚುಕೋರರಿಂದ ಸಜೀವವಾಗಿ ದಹಿಸಲ್ಪಟ್ಟ 59 ಹಿಂದೂ ಬಲಿಪಶುಗಳಿಗೆ ಯಾವುದೇ ಸಹಾನುಭೂತಿ ತೋರದೆ ಮೋದಿಯವರನ್ನು ಗೋಧ್ರಾ ಗಲಭೆಗಳಿಗೆ, ಬಾಬ್ರಿ ಮಸೀದಿ ಧ್ವಂಸದ ನಂತರ ಗಲಭೆಗಳಿಗೆ ಹೊಣೆಯಾಗಿಸುತ್ತದೆ. ಮೋದಿ ಅವರು ತಮ್ಮ 'ವೃತ್ತಿ ಜೀವನ'ದ ಪ್ರಾರಂಭದಲ್ಲಿ ಕೋಮುವಾದಿ ಭಾಷಣ ಮಾಡುತ್ತಿದ್ದರು ಎಂಬ ಆರೋಪ ಅದರದ್ದು. ಆದರೆ ಅವರು ಮಾಡಿದ ಭಾಷಣಗಳು ಕೋಮುವಾದದ ಸೋಂಕಿಲ್ಲದ ಜಾತ್ಯತೀತತೆ, ದೇಶಭಕ್ತಿಗಳನ್ನು ಹೊರತುಪಡಿಸಿ ಬೇರೇನನ್ನೂ ಪ್ರತಿಫಲಿಸದೆಂಬುದನ್ನು ಒರೆಗೆ ಹಚ್ಚಿ ನೋಡುವ ಪುರಸೊತ್ತು ಅದಕ್ಕಿಲ್ಲ. ಅವರ ಆ ಭಾಷಣಗಳು ಗುಜರಾತಿಗಳ ಸಮಾನ ಒಳಿತನ್ನು, ಒಗ್ಗಟ್ಟಿನಲ್ಲಿರುವ ಬಲವನ್ನು ಕುರಿತು ಆಡಿರುವ 'ಸಚ್ ಕಾ ಸಾಥ್ ಸಬ್ ಕಾ ವಿಕಾಸ್‌' ಎಂಬ ಧೋರಣೆಯನ್ನಷ್ಟೇ ವ್ಯಕ್ತಪಡಿಸುತ್ತದೆ.
ಗಲಭೆಗಳನ್ನು ಕುರಿತಾಗಿ ನಡೆದ ತನಿಖೆಗಳೆಲ್ಲವೂ ಯಾವುದೇ ನಿರ್ಣಯಕ್ಕೆ ಬರಲಾಗದಿರುವುದಕ್ಕೆ ಭಾರಿ ಪ್ರಮಾಣದಲ್ಲಿ ಸಾಕ್ಷ್ಯಗಳು ನಷ್ಟವಾಗಿವೆ ಅಥವಾ ಬೇಕೆಂದೇ ನಾಶಮಾಡಲ್ಪಟ್ಟಿವೆ ಎಂಬುದು ಮಿಥ್ಯಾರೋಪದ ಹುಚ್ಚಿಗೆ ಬಿದ್ದಿರುವ ಇಕನಾಮಿಸ್ಟ್‌ನ ಆರೋಪ. ಮೋದಿಯವರ ವಿರುದ್ಧ ನ್ಯಾಯಾಲಯಗಳಲ್ಲಿ ಹೂಡಿದ್ದ ಅನೇಕ ಆರೋಪಗಳು, ದೂರುಗಳೆಲ್ಲವೂ ಸುಳ್ಳೆಂದು, ಕೃತ್ರಿಮವಾಗಿ ಸೃಷ್ಟಿಸಿದ್ದೆಂದು ರುಜುವಾತಾದ ನಿರ್ಣಯವನ್ನು ಪತ್ರಿಕೆಯು ಬುದ್ಧಿಪೂರ್ವಕವಾಗಿ ಮರೆಮಾಚುತ್ತದೆ. ಮೋದಿಯವರು ಗಲಭೆಗಳ ವಿಚಾರವಾಗಿ ವಿವರಣೆಗಳನ್ನು ನೀಡಿಲ್ಲ, ಅದಕ್ಕಾಗಿ ಕ್ಷಮೆ ಕೇಳಿಲ್ಲ ಎಂಬ ಕಾರಣಕ್ಕಾಗಿ ಅವರು ನಿಜವಾಗಿಯೂ ಶಿಕ್ಷಾರ್ಹರು ಎಂಬ ದಿ ಎಕನಾಮಿಸ್ಟ್ ಪತ್ರಿಕೆಯ ತೀರ್ಮಾನ ಅಚ್ಚರಿ ಮೂಡಿಸುತ್ತದೆ. ಲೇಖಕರಿಗೆ ಮೋದಿ ಕಳೆದ ಹತ್ತು ವರ್ಷಗಳಲ್ಲಿ ಎಲ್ಲೆಡೆಯಿಂದ, ಎಲ್ಲ ಹಂತಗಳಲ್ಲಿ ಸ್ವತಃ ಸರ್ವೋಚ್ಛ ನ್ಯಾಯಾಲಯವೇ ರಚಿಸಿರುವ ಆಯೋಗಗಳನ್ನು ತನಿಖೆಗಳನ್ನು ಎದುರಿಸಿರುವರೆಂಬುದು ತಿಳಿದಿರಲೇಬೇಕು. ನ್ಯಾಯಾಲಯಗಳಲ್ಲಿರುವ ವಿಷಯಗಳ ಸಾರ್ವಜನಿಕ ಚರ್ಚೆಯು ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗುತ್ತದೆಂದೂ ಅದಕ್ಕೆ ತಿಳಿದಿರಬೇಕು. ಇವೆಲ್ಲವೂ ಬ್ರಿಟಿಷ್ ವಸಾಹುತಗಳ ಕಾಲದಿಂದಲೂ ನಾವು ಒಪ್ಪಿಕೊಂಡಿರುವ ಆಂಗ್ಲೋ-ಸಾಕ್ಸನ್ ನ್ಯಾಯಾಧೀಕರಣದ ಪದ್ಧತಿಗಳು ತಾನೇ?
ಅತ್ಯಂತ ಪೊಳ್ಳು ಪ್ರತೀಕಗಳನ್ನು ಎದೆಗವಚಿಕೊಂಡು ಮೋದಿಯವರ ವಿರುದ್ಧ ಪತ್ರಿಕೆಯು ಮಾಡುವ ಗಂಭೀರ ಆರೋಪಗಳೆಂದರೆ ಅವರ 'ನಾಯಿಮರಿ' ವಕ್ಕಣೆ ಹಾಗೂ 'ಟೋಪಿ' ಘಟನೆ! ಆರೋಪ ಹೊರಿಸುವುದರೊಂದಿಗೆ ಈ ಎರಡು ನಿದರ್ಶನಗಳ ಸಂದರ್ಭವನ್ನು ಬುದ್ಧಿಪೂರ್ವಕವಾಗಿ ಮರೆಮಾಚಲು ಪತ್ರಿಕೆಯು ಮರೆಯುವುದಿಲ್ಲ. ಅದು ಭಾರತದಲ್ಲಿ ಧನಾತ್ಮಕ ಹಿಂದು-ಮುಸ್ಲಿಂ ಕ್ರಿಯಾಶೀಲತೆಯನ್ನು ವಿಕಾಸಗೊಳಿಸುವಲ್ಲಿ ಮೋದಿಯರ ಮೂರ್ತ ಆಶಯಗಳು ಹಾಗೂ ಅದಕ್ಕಾಗಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದನ್ನು ಪತ್ರಿಕೆಯು ನಿರ್ಲಕ್ಷಿಸಿರುವುದೇ ಅಲ್ಲದೇ, 'ಶ್ರೀಮಾನ್ ಮೋದಿಯವರು ದೆಹಲಿಯಲ್ಲಿ ಶುಭಾರಂಭ ಮಾಡಿದರೂ ಮುಂದೊಂದು ದಿನ ಮತೀಯ ಹತ್ಯಾಕಾಂಡವನ್ನೋ, ಪಾಕಿಸ್ತಾನ ಸಂಬಂಧಿತ ಬಿಕ್ಕಟ್ಟನ್ನೋ ಎದುರಿಸಬೇಕಾಗುತ್ತದೆ' ಎಂಬ ಕುಚೋದ್ಯದ ಶಕುನ ನುಡಿಯುತ್ತದೆ. ಇದನ್ನು ಹಿಂದು-ಮುಸ್ಲಿಂ ಹಿಂಸಾಕಾಂಡಕ್ಕೆ ಪ್ರಚೋದಿಸುವ ತಲ್ಲಣಕಾರಿ, ಉದ್ರೇಕಕಾರಿ ಹೇಳಿಕೆಯೆಂದೇ ಅರ್ಥೈಸಬೇಕಾಗುತ್ತದೆ. ಯಾವುದೇ ಸೆಕ್ಯುಲರ್ ಸರ್ಕಾರವು ಈ ಪತ್ರಿಕೆಯನ್ನು ಕೋಮು ಹಿಂಸೆ ಹಾಗೂ ಗಲಭೆಗಳನ್ನು ಪ್ರಚೋದಿಸುತ್ತಿದೆಯೆಂಬ ಅತಿ ಗಂಭೀರ ಆಪಾದನೆಗಳಡಿ ಶಿಕ್ಷೆಗೆ ಗುರಿಪಡಿಸಬೇಕಿತ್ತು.
ಬ್ರಿಟಿಷ್ ಸಾಮ್ರಾಜ್ಯವು ಭಾರತದ ಮೇಲಿನ ತನ್ನ ನಿಯಂತ್ರಣವನ್ನು ಪರಿಣಾಮಕಾರಿಯಾಗಿಸಲು ಬಹು ಮೌಲಿಕವಾಗಿ ಒದಗಿ ಬಂದ ಕುತಂತ್ರದ ಪಳೆಯುಳಿಕೆಯೇ ಇಂದಿನ ಹಿಂದು-ಮುಸ್ಲಿಂ ಗಲಭೆಗಳು. ಬ್ರಿಟಿಷ್ ಆಧಿಪತ್ಯದಲ್ಲಿ ಭಾರತದಾದ್ಯಂತ ಅನೇಕ ಭೀಕರ ಗಲಭೆಗಳಾಗಿ ಭಾರಿ ಪ್ರಮಾಣದ ಪ್ರಾಣ ಹಾನಿಯಾಯಿತು. ಬ್ರಿಟಿಷರ ಸಾಂಪ್ರದಾಯಿಕ ನ್ಯಾಯ ಹಾಗೂ ನಿಷ್ಪಕ್ಷಪಾತಗಳಿಗನುಗುಣವಾಗಿ ದಿ ಎಕನಾಮಿಸ್ಟ್ ಪತ್ರಿಕೆಯು ಬ್ರಿಟಿಷ್ ಸರ್ಕಾರದಡಿ ನಡೆದ ಹತ್ಯಾಕಾಂಡಗಳಿಗೆ ಯಾರು ಜವಾಬ್ದಾರರು, ಹೊಣೆಗಾರಿಕೆ ಯಾರದ್ದು, ಕ್ಷಮೆ ಕೇಳಬೇಕಾದವರಾರು ಎಂಬುದನ್ನು ಶೋಧಿಸಲು ಕಾರ್ಯೋನ್ಮುಖವಾಗಲೆಂದು ಹಾರೈಸುತ್ತೇವೆ. ಇದುವರೆಗೂ ಅಂತಹ ಯಾವುದೇ ಕ್ಷಮಾಯಾಚನೆಯೂ ನನ್ನ ಕಿವಿಗೆ ಬಿದ್ದಿಲ್ಲ.
ಈ ಆಂಗ್ಲಪತ್ರಿಕೆಯು ಮೋದಿಯವರನ್ನು ಬೆಂಬಲಿಸುತ್ತದೆಯೋ, ಇಲ್ಲವೋ; ಭ್ರಷ್ಟ ನೇತಾರರನ್ನು ಮೂಲೆಗೊಗೆದು ಭಾರತವನ್ನು ಮುನ್ನಡೆಸಬಲ್ಲ ದೃಢ ಸಂಕಲ್ಪದ ನಾಯಕತ್ವವನ್ನು ಬೆಂಬಲಿಸುತ್ತದೆಯೋ, ಇಲ್ಲವೋ ಎಂಬುದಕ್ಕೆ ಭಾರತೀಯರು ಯಾವ ಸೊಪ್ಪು ಹಾಕುವುದಿಲ್ಲ. ಆದರೆ ಬ್ರಿಟಿಷರು ತಮ್ಮ ವಸಾಹತುಶಾಹಿ ಗುಂಗಿನಿಂದ ಹೊರಬಂದು ತಮ್ಮ ಹಿತ್ತಲಲ್ಲೇ ನಡೆಯುತ್ತಿರುವ ವರ್ಣಕಲಹವೆಂಬ ಸೌಮ್ಯೋಕ್ತಿಯಿಂದ ಮರೆಮಾಚಲ್ಪಡುತ್ತಿರುವ ಧಾರ್ಮಿಕ ಗಲಭೆಗಳೆಡೆ ಗಮನ ಹರಿಸುವುದು ಸೂಕ್ತವಾದೀತೇನೋ. ತಾವು ನಮಗೆ ನೀಡುತ್ತಿರುವ ಸಲಹೆ, ಮಾಡುತ್ತಿರುವ ಶಿಫಾರಸುಗಳಿಗನುಗುಣವಾಗಿ ಬ್ರಿಟಿಷ್ ಪ್ರಧಾನಿಯಿಂದ ಬ್ರಾಡ್‌ಫೋರ್ಡ್, ಟಾಟೆನ್ ಹ್ಯಾಮ್ ಅಥವಾ ಉಲ್ ವಿಚ್ ಗಲಭೆಗಳಿಗೆ ವಿವರಣೆಯನ್ನು ಕೋರಬೇಕಿದೆ. ಬ್ರಿಟಿಷ್ ಸಾಮ್ರಾಜ್ಯವು ಹೇಗೆ ಸಹ-ಬಾಳ್ವೆಯನ್ನು ಸಹಿಸುವಂತೆ ಮಾಡುವುದು. ಅದು ಒಡಕಿಗೆ ಗುರಿಯಾಗದಂತೆ ಒಂದಾಗಿರಿಸುವುದೆಂತು ಎಂಬುದನ್ನು ಕುರಿತು ತಲೆಕೆಡಿಸಿಕೊಳ್ಳುವುದು ಉತ್ತಮ. ಭಾರತವು ತನ್ನನ್ನು ತಾನು ನೋಡಿಕೊಳ್ಳಬಲ್ಲದು.
ಬಲಿಷ್ಠ ಹಿಂದು ನಾಯಕತ್ವವು ಜಗತ್ತನ್ನು ತಲ್ಲಣಗೊಳಿಸುತ್ತಿರುವಂತೆ ತೋರುತ್ತಿದೆ. ಜನಸಂಖ್ಯೆಯ ಬಹುಭಾಗವು ಸಮರಸದಿಂದ ಒಡಗೂಡಿ ಮುನ್ನಡೆಯುವ ಬಲಿಷ್ಠ ಭಾರತವು ಅಂತಾರಾಷ್ಟ್ರೀಯ ಬಲಗಳ ಸಮತೋಲನವನ್ನು ಏರುಪೇರು ಮಾಡುತ್ತದೆ. ಇದರಿಂದಾಗಿಯೇ ಸಮತೋಲನವನ್ನು ಕಾಯ್ದುಕೊಳ್ಳಲಾಗದ ವಂಚನೆಯ ಇಬ್ಬಗೆ ನೀತಿಯನ್ನನುಸರಿಸುವ ಲೇಖನಗಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಲಿವೆ. Defender of Faith, Suprme Governor of the Church of England ಎಂದು ಮುಂತಾಗಿ ಬ್ರಿಟಿಷ್ ಸಾಮ್ರಾಜ್ಞಿಯು ಕೊಡಮಾಡುವ ಬಿರುದು, ಬಾವಲಿಗಳಲ್ಲಿ ಕೋಮುವಾದದ ಆರೋಪವೆಂದೂ ಕೇಳಿಬರುವುದಿಲ್ಲ. ಅಷ್ಟೇ ಏಕೆ, ಹಿಂದಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಕ್ರೈಸ್ತ ಗುಣಗಳನ್ನು ಕೊಂಡಾಡಿದಾಗ, ಇಂದಿನ ಪ್ರಧಾನಿ, ಡೇವಿಡ್ ಕ್ಯಾಮರೋನ್, 'ನಾವೊಂದು ಕ್ರಿಶ್ಚಿಯನ್ ರಾಷ್ಟ್ರ. ಹಾಗೆಂದು ಹೇಳಿಕೊಳ್ಳಲು ಹೆದರಕೂಡದು' ಎಂದಾಗ ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಆದರೆ ಬ್ರಿಟನ್ ಎಂಬಲ್ಲಿ ಭಾರತವನ್ನೂ , ಕ್ರಿಶ್ಚಿಯನ್ ಎಂಬಲ್ಲಿ ಹಿಂದು ಎಂಬುದನ್ನು ಹಾಕಿದಾಗ ಪಾಶ್ಚಾತ್ಯ ಜಗತ್ತಿನಲ್ಲಿ ಹಾಗೂ ಒಡೆದು ಆಳುವುದನ್ನು ಕರಗತ ಮಾಡಿಕೊಂಡಿರುವ ಕಾಂಗ್ರೆಸ್ ಪಾಳೆಯದಲ್ಲಾಗುವ ಇಬ್ಬಗೆ ನೀತಿಯ 'ಸೆಕ್ಯುಲರ್‌' ಸ್ಫೋಟವನ್ನು ಊಹಿಸಿ ನೋಡಿ.
'ಇಕನಾಮಿಸ್ಟ್‌'ಗೆ ನಾನೊಂದು ಸರಳ ಪ್ರಶ್ನೆಯನ್ನು ಕೇಳಲಿಚ್ಚಿಸುತ್ತೇನೆ. ಬ್ರಿಟನ್ನಿನ ಜನಸಂಖ್ಯೆಯ ಶೇಕಡಾ 1.5ರಷ್ಟಿದೆ ಅಲ್ಲಿನ ಹಿಂದುಗಳ ಸಂಖ್ಯೆ. ಇದು ಅಲ್ಲಿನ ಎರಡನೇ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ಅಲ್ಲಿನ ಸಾರ್ವಜನಿಕ ವ್ಯವಸ್ಥೆ, ಜಾತಿ, ಮತಗಳ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ನೀಡದ ಬೇರೆ ಯಾವುದಾದರೂ ಧಾರ್ಮಿಕ ಸಮುದಾಯವನ್ನು ಬ್ರಿಟಿಷರು ತೋರಬಲ್ಲರೇ? ಅಲ್ಲೂ ಸಹಿಷ್ಣುಗಳಾಗಿರುವ ಹಿಂದುಗಳು ಭಾರತದಲ್ಲಿ ಮಾತ್ರ ವ್ಯತಿರಿಕ್ತವಾಗಿ ವ್ಯವಹರಿಸುತ್ತಾರೆ ಎಂದು ಆ ಪತ್ರಿಕೆ ಯಾವ ಆಧಾರದಲ್ಲಿ ಸಂಶಯಿಸುತ್ತದೆ?


- ರಾಮ್ ಜೇಠ್ಮಲಾನಿ
ಖ್ಯಾತ ನ್ಯಾಯವಾದಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement