ಮೋದಿ ಮತ್ತು ಮುಖ್ಯಮಂತ್ರಿಗಳ ನಡುವೆ ಯುದ್ಧ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಳ ನಡುವೆ ಯುದ್ಧ...
ಮೇ 16ರಂದು ಬದಲಾವಣೆಯ ಬೆಳಕು ಹರಿಯಲಿದೆ. ಒಂದೊಮ್ಮೆ ಮಿಂಚಿ- ಮಂಕಾಗಿರುವ ವಿತ್ತ ಮಾದರಿಯನ್ನು ಹೊತ್ತ ಪ್ರಧಾನಿಗಳು ವಿಷಾದ ಪರ್ವ ಅಂತ್ಯವಾಗಲಿದೆ. ಇದೇ ವೇಳೆಯಲ್ಲೇ ಕೆಳಹಂತದಿಂದ ಮೇಲೇಳುವ ರಾಜಕೀಯ ಮಾದರಿಯೊಂದು ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಉದಯವಾಗಬಹುದು. ಒಂದು ವೇಳೆ ಅಭಿಪ್ರಾಯ ಸಂಗ್ರಹಗಳು ಮತ್ತು ಮಾಧ್ಯಮಗಳ ಹೇಳಿಕೆಗಳು ಸತ್ಯವಾದರೆ, ಇದೇ ಮೊದಲ ಬಾರಿಗೆ ದೇಶದ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ದೆಹಲಿಯ ಬದಲು ರಾಜ್ಯದ ರಾಜಧಾನಿಗಳತ್ತ ಹರಿಯಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ, ಭಾರತದ 15ನೇ ಪ್ರಧಾನಿಯಾಗುವ ಬೇರು ಮಟ್ಟದ ನಾಯಕನೊಬ್ಬನ ಕನಸನ್ನು ತಡೆಯುವಲ್ಲಿ ಯಾವ ಪಕ್ಷಗಳಿಗೂ ಸಾಧ್ಯವಿಲ್ಲದಂಥ ಸನ್ನಿವೇಶ ನಿರ್ಮಾಣವಾಗಲಿದೆ. ಒಂದಂತೂ ನಿಶ್ಚಿತ, ಈ ಬಾರಿ ದೆಹಲಿಯ ಗಾದಿ ಹಿಡಿಯುವವನು ಒಂದೋ ಅಧಿಕಾರದಲ್ಲಿರುವ ಮುಖ್ಯಮಂತ್ರಿಯಾಗಿರುತ್ತಾನೆ ಅಥವಾ ಮಾಜಿ ಮುಖ್ಯಮಂತ್ರಿಯಾಗಿರುತ್ತಾನೆ. ಇದುವರೆಗೂ ನರೇಂದ್ರ ಮೋದಿಯೊಬ್ಬರೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿತವಾಗಿರುವ ಮುಖ್ಯಮಂತ್ರಿಯಾದರೂ, ಜಯಲಲಿತಾ, ಮಮತಾ ಬ್ಯಾನರ್ಜಿಯಿಂದ ಹಿಡಿದು, ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಮತ್ತು ಚಂದ್ರಬಾಬು ನಾಯ್ಡೂ ಕೂಡ ತಮ್ಮನ್ನು ತಾವು ಪ್ರಧಾನಿ ಹುದ್ದೆಗೆ ಸಮರ್ಥರೆಂದೇ ಭಾವಿಸುತ್ತಾರೆ. ಹೊಸ ರಾಜಕೀಯದ ಅಧ್ಯಾಯದಲ್ಲಿ 'ಹಳೆಯದ್ದೇ ಹೊನ್ನು'(ಓಲ್ಡ್ ಈ ಗೋಲ್ಡ್) ಮತ್ತು ಅನುಭವವೇ ಆನಂದ ಎನ್ನುವ ಮಾತಿಗೆ ಹೆಚ್ಚು ಮನ್ನಣೆ ಸಿಕ್ಕಿದೆ. ಬಲಿಷ್ಠ ಶಕ್ತಿಗಳಾದ ಸಂಸದೀಯ ಮಂಡಳಿಗಳ ಬದಲಾಗಿ, ಮಾಜಿ ಮತ್ತು ಹಾಲಿ ಸಿಎಂಗಳ ಗುಂಪು ತಮ್ಮಲ್ಲಿ ಯಾರು ಮುಂದಿನ ಪ್ರಧಾನಿಯಾಗುತ್ತಾರೆ ಅನ್ನುವುದನ್ನಷ್ಟೇ ಅಲ್ಲದೆ, ಮುಂದಿನ ಸರ್ಕಾರದ ರೂಪುರೇಷೆಯನ್ನೂ ನಿರ್ಧರಿಸಲಿದ್ದಾರೆ.
ಪ್ರಧಾನಿ ಹುದ್ದೆಗಾಗಿ ಹೋರಾಡುತ್ತಿರುವ ಏಕೈಕ ಸಿಎಂ ಮೋದಿಯೊಬ್ಬರೇ ಅಲ್ಲ, ಆದರೆ ತಮ್ಮ ಸ್ಥಾನವನ್ನು ತ್ಯಜಿಸದೇ ಸ್ಪರ್ಧಿಸುತ್ತಿರುವ ಏಕೈಕ ಮುಖ್ಯಮಂತ್ರಿ ಮಾತ್ರ ಅವರೇ. ಹಲವಾರು ರಾಜ್ಯಗಳಿಂದ ಸುಮಾರು 29 ಮಾಜಿ ಮುಖ್ಯಮಂತ್ರಿಗಳು ಸಂಸತ್ತಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ಈ ಸ್ಪರ್ಧೆಯಲ್ಲಿ ಆರು ಮುಖ್ಯಮಂತ್ರಿಗಳೊಡನೆ ಮುಂಚೂಣಿಯಲ್ಲಿದ್ದರೆ, ಉತ್ತರ ಪ್ರದೇಶ-5, ಉತ್ತರಾಖಂಡದಿಂದ 3, ಬಿಹಾರ, ಮಹಾರಾಷ್ಟ್ರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ್ ಹಾಗೂ ಜಾರ್ಖಂಡ್ನಿಂದ ತಲಾ 2. ಪಂಜಾಬ್, ಹಿಮಾಚಲಪ್ರದೇಶ, ಒಡಿಶಾ ಮತ್ತು ಮಧ್ಯಪ್ರದೇಶದಿಂದ ಒಬ್ಬೊಬ್ಬ ಮಾಜಿ ಮುಖ್ಯಮಂತ್ರಿಯಿದ್ದಾರೆ. ಇದರಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಮಹಿಳೆಯರು. ಬಿಹಾರದಲ್ಲಿ ಜೆಡಿ(ಯು) 90 ವರ್ಷದ ಮಾಜಿ ಮುಖ್ಯಮಂತ್ರಿ ರಾಮ್ಸುಂದರ್ ದಾಸ್ ಅವರನ್ನು ಕಣಕ್ಕಿಳಿಸಿದೆ. ದೆಹಲಿಯಲ್ಲಿ 49 ದಿನಗಳು ಆಡಳಿತ ನಡೆಸಿದ, 49 ವರ್ಷದ ಕೇಜ್ರೀವಾಲ್ ವಾರಾಣಸಿಯಲ್ಲಿ ಮೋದಿ ವಿರುದ್ಧ ನಿಂತಿದ್ದಾರೆ(ಇವರು ಈ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗಿಂತಲೂ ವಯಸ್ಸಿನಲ್ಲಷ್ಟೇ ಅಲ್ಲದೆ, ಅನುಭವದಲ್ಲೂ ಚಿಕ್ಕವರೇ). ಸುಷ್ಮಾ ಸ್ವರಾಜ್ ಕೂಡ ಮುಖ್ಯಮಂತ್ರಿಯಾಗಿ ಕೇವಲ 100 ದಿನಗಳು ಆಡಳಿತ ನಡೆಸಿದವರು. ಕರ್ನಾಟಕದಲ್ಲಿ, ಹೆಚ್.ಡಿ. ದೇವೇಗೌಡ ಮತ್ತು ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದವರು. ಲಾಲು ಪ್ರಸಾದ್ರ ಮೇಲೆ ಈ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲಾಗಿದೆಯಾದರೂ, ಅವರ ಪತ್ನಿ ರಾಬ್ಡಿ ದೇವಿ ಶರಣ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದಾರೆ. ಅಖಾಡದಲ್ಲಿರುವ ಇನ್ನುಳಿದ ಮಾಜಿ ಮುಖ್ಯಮಂತ್ರಿಗಳೆಂದರೆ ಪೂರ್ಣೋ ಸಾಂಗ್ಮಾ, ಬಾಬೂಲಾಲ್ ಮರಾಂಡಿ, ಶಿಬು ಸೋರೆನ್, ಫಾರೂಕ್ ಅಬ್ದುಲ್ಲಾ ಮತ್ತು ಮುಲಾಯಂ ಸಿಂಗ್ ಯಾದವ್.
ಬಿಜೆಪಿಯಲ್ಲಿ ಸುಮಾರು 10 ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿದ್ದರೆ, ಕಾಂಗ್ರೆಸ್ನಲ್ಲಿ ಅವರ ಸಂಖ್ಯೆ 8. ನಿಸ್ಸಂಶಯವಾಗಿಯೂ ಬಿಜೆಪಿ ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿಯಾಗಿಸಲು ನಿಶ್ಚಯಿಸಿದೆ. ಆದರೆ ಒಂದು ವೇಳೆ ಮೋದಿ ಆ ಸ್ಥಾನಕ್ಕೆ ತಲುಪಲು ವಿಫಲರಾದರೆ, ರಾಜ್ನಾಥ್ ಸಿಂಗ್ ಮತ್ತು ಸುಷ್ಮಾ ಸ್ವರಾಜ್ ಎಂಬ ಪರ್ಯಾಯಗಳೂ ಅದರ ಬತ್ತಳಿಕೆಯಲ್ಲಿವೆ. ಇನ್ನು ಅದೇ ಪಟ್ಟಿಯಲ್ಲೇ ಉಮಾಭಾರತಿ ಮತ್ತು ಹಿಮಾಚಲ ಪ್ರದೇಶದ ಶಾಂತಾ ಕುಮಾರ್ ಕೂಡ ಅವರಿದ್ದಾರೆ. ಮೋದಿಯನ್ನು ಪ್ರಧಾನಿ ಮಾಡಲು ಸಹಾಯ ಕೋರಿ ಉತ್ತರಾಖಂಡದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಜೆಪಿ ಮನವೊಲಿಸಿದೆ. ಹಿಮಾಚಲ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇನ್ನೊಂದೆಡೆ ಕರ್ನಾಟಕದಲ್ಲಿ ಸದಾನಂದ ಗೌಡ ಮತ್ತು ಬಿ.ಎಸ್. ಯಡಿಯೂರಪ್ಪನವರು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಸೆಣಸುತ್ತಿದ್ದಾರೆ. ಕಂಗಾಲಾಗಿರುವ ಕಾಂಗ್ರೆಸ್ ಕೂಡ ಚುನಾವಣೆಯಲ್ಲಿ ತುಸು ಮಿಂಚಲು ಮಾಜಿ ಮುಖ್ಯಮಂತ್ರಿಗಳನ್ನು ಆರಿಸಿಕೊಂಡಿದೆ. ಅದು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಮತ್ತು ಅಶೋಕ್ ಚೌಹಾಣ್ರನ್ನು ಮಹಾರಾಷ್ಟ್ರದಿಂದ, ಧರಂಸಿಂಗ್ ಮತ್ತು ವೀರಪ್ಪ ಮೋಯ್ಲಿಯವರನ್ನು ಕರ್ನಾಟಕದಿಂದ, ಅಮರಿಂದರ್ ಸಿಂಗ್ರನ್ನು ಪಂಜಾಬ್ನಿಂದ, ಗಿರಿಧರ್ ಗೋಮಾಂಗೋರನ್ನು ಒಡಿಶಾದಿಂದ, ಗುಲಾಮ್ ನಬಿ ಆಜಾದ್ರನ್ನು ಜಮ್ಮು ಮತ್ತು ಕಾಶ್ಮೀರದಿಂದ ಹಾಗೂ ಶಂಕರ್ಸಿನ್ಹ ವಾಘೇಲಾರನ್ನು ಗುಜರಾತ್ನಿಂದ ಕಣಕ್ಕಿಳಿಸಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಮಾಜಿ ಮುಖ್ಯಮಂತ್ರಿಗಳಿಗೆ ಚುನಾವಣಾ ಭಾರವನ್ನು ಹೊರುವ ಜವಾಬ್ದಾರಿ ವಹಿಸಿರುವುದು ಕಾಕತಾಳೀಯವೇನೂ ಅಲ್ಲ. ವ್ಯಂಗ್ಯವೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಮಾತೆತ್ತಿದರೆ ಹೊಸ ಮತದಾರರು ಮತ್ತು ಯುವ ನಾಯಕರ ಮಹತ್ವದ ಬಗ್ಗೆ ಎಷ್ಟೇ ಭಾಷಣ ಹೊಡೆದರೂ, ಕೊನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ವೃದ್ಧರಿಗೇ ಹೆಚ್ಚು ಮನ್ನಣೆ ಕೊಟ್ಟಿವೆ. ಎರಡೂ ಪಕ್ಷಗಳ ಸುಮಾರು 70 ಪ್ರತಿಶತ ಟಿಕೆಟ್ಗಳು 65 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಿಕ್ಕಿವೆ. ಕಣದಲ್ಲಿರುವ ಬಹುತೇಕ ಮಾಜಿ ಮುಖ್ಯಮಂತ್ರಿಗಳು 65 ದಾಟಿದ್ದರೆ, ಇನ್ನುಳಿದವರು 70ರ ಮೇಲಿನವರು. ಈ ಮಾನ್ಯರಿಗೆ ಟಿಕೆಟ್ ಕೊಟ್ಟರೆ ಅವರು ತಮ್ಮ ಕ್ಷೇತ್ರಗಳಲ್ಲಿ ಗೆಲ್ಲುವುದಷ್ಟೇ ಅಲ್ಲದೆ, ತಮಗೆ ಬೇಕಾದವರನ್ನೂ ಗೆಲ್ಲಿಸಬಲ್ಲರು ಎನ್ನುವುದು ಮೋದಿ ಮತ್ತು ರಾಹುಲ್ಗೆ ಗೊತ್ತಿದೆ. ಅಲ್ಲದೇ ಅವರ ಪ್ರಭಾವ ವಲಯ ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸುವ ಸಮಯದಲ್ಲೂ ಸಹಾಯಕ್ಕೆ ಬರಲಿದೆ.
ಸೌತ್ ಬ್ಲಾಕ್ಗೆ ತಲುಪಲು ಯಾವ ಮಾಜಿ ಮುಖ್ಯಮಂತ್ರಿಗೂ ಆಗದೇ ಇದ್ದ ಪಕ್ಷದಲ್ಲಿ, ಹಾಲಿ ಮುಖ್ಯಮಂತ್ರಿಯೊಬ್ಬರು ಪ್ರಧಾನಿ ಹುದ್ದೆಯನ್ನು ಆಲಂಗಿಸಬಹುದು. ಕೇವಲ ಎರಡೇ ಪಕ್ಷಗಳು- ಟಿಎಮ್ಸಿ ಮತ್ತು ಏಐಎಡಿಎಮ್ಕೆ- ಮಾತ್ರ ಅಧಿಕೃತವಾಗಿ ತಮ್ಮ ನಾಯಕಿಯರಾದ ಮಮತಾ ಮತ್ತು ಜಯಲಲಿತಾ ಅವರ ಹೆಸರನ್ನು ಘೋಷಿಸಿವೆ. ಏಕೆಂದರೆ ಇವರು ತಮ್ಮ ರಾಜ್ಯಗಳಲ್ಲಿ 30ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಲ್ಲರು. ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಹಿರಿಯ ನಾಯಕರು ಅದಾಗಲೇ ಮುಲಾಯಂ ಸಿಂಗ್ ಮತ್ತು ಮಾಯಾವತಿಯವರನ್ನೊಳಗೊಂಡು ವಿವಿಧ ಮಾಜಿ ಮುಖ್ಯಮಂತ್ರಿಗಳ ಸುತ್ತ ಓಡಾಡತೊಡಗಿದ್ದಾರೆ. ಅವರ ಉದ್ದೇಶ ಅಬ್ಕಿ ಬಾರ್ ಮೋದಿ ಸರ್ಕಾರ್ ಅನ್ನು ತಡೆಯುವುದಷ್ಟೇ ಅಲ್ಲ, ಅದರೊಟ್ಟಿಗೆ ತೃತೀಯ ಪರ್ಯಾವವನ್ನು ರಚಿಸುವುದೂ ಆಗಿದೆ. ಮುಖ್ಯಮತ್ರಿಗಳ ಗುಂಪಿನ ಸಾಂಘಿಕ ಶಕ್ತಿಯ ಅರಿವು ಮೋದಿಯವರಿಗೆ ಮೊದಲಿನಿಂದಲೂ ಇತ್ತು ಎನ್ನುವುದು ಈಗ ಗೋಚರಿಸುತ್ತಿದೆ. ಈ ಕಾರಣಕ್ಕಾಗಿಯೇ ತಮ್ಮ ಆಡಳಿತ ಮಾದರಿಯನ್ನು ತೆರೆದಿಡುವಾಗ ಅವರು, "ಮುಖ್ಯಮಂತ್ರಿಗಳ ಮಂಡಳಿಯೊಂದನ್ನು ಸ್ಥಾಪಿಸುತ್ತೇನೆ ಮತ್ತು ಆ ಮಂಡಳಿಯೇ ರಾಜ್ಯಗಳ ಭದ್ರತೆಯನ್ನು ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವ ನಿರ್ಧಾರ ಕೈಗೊಳ್ಳಲಿದೆ" ಎಂದು ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಅವರಿಗೆ ಈ ವಿಷಯದಲ್ಲಿ ಹಿಡಿತ ಸಿಕ್ಕಿಲ್ಲ, ಏಕೆಂದರೆ ಉಳಿದ ಮುಖ್ಯಮಂತ್ರಿಗಳು ಪ್ರಧಾನಿ ಹುದ್ದೆ ನಿಭಾಯಿಸುವಲ್ಲಿ ಮೋದಿಗಿಂತಲೂ ತಾವೇ ಸಮರ್ಥರು ಎಂದು ಭಾವಿಸುತ್ತಾರೆ. ಚಂದ್ರಬಾಬು ನಾಯ್ಡು ಅವರನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಮೋದಿಯವರ ಪರೋಕ್ಷ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಾರೆ. ಮುಂದಿನ ಕೆಲವೇ ವಾರಗಳಲ್ಲಿ, 2014ರ ಚುನಾವಣೆ ಕೇವಲ ಮೋದಿ ಮತ್ತು ರಾಹುಲ್ ನಡುವಿನ ಯುದ್ಧವಲ್ಲ ಎನ್ನುವುದು ಎಲ್ಲರಿಗೂ ಅರ್ಥವಾಗಲಿದೆ. ಹಾಗೆ ನೋಡಿದರೆ ಈ ಯುದ್ಧ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನದ್ದೂ ಅಲ್ಲ. ಅದು ಕಣ್ಣಿಗೆ ಗೋಚರಿಸುತ್ತಿರುವ ಮೋದಿ ಮತ್ತು ಅಗೋಚರ ಮುಖ್ಯಮಂತ್ರಿಗಳ ಕಪಟ ಗುಂಪಿನ ಯುದ್ಧವಾಗಲಿದೆ. ಹಾಗಿದ್ದರೆ ದೆಹಲಿಯಲ್ಲಿ ಯಾರು ಗದ್ದುಗೆ ಹಿಡಿಯಲಿದ್ದಾರೆ? ಮುಂದೆ ನೋಡಿ!
= ಪ್ರಭುಚಾವ್ಲಾ
ನ್ಯೂಇಂಡಿಯನ್ ಎಕ್ಸ್ಪ್ರೆಸ್