ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತೀಯರ ಉಳಿತಾಯ ದರ ಹೆಚ್ಚಿಸಲು ಹೀಗೊಂದು ಉಪಾಯ!

ಯುರೋಪಿಯನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ನನ್ನ...

Mainashree
Updated On : 25 Apr 2014, 1:17 am

ಸ್ವಂತ ಮನೆಯಿರುವ ಒಂದು ಮಧ್ಯಮ ವರ್ಗದ ಕುಟುಂಬದ ಕಥೆಯನ್ನೇ ತೆಗೆದುಕೊಳ್ಳಿ. ಆ ಮನೆಗೆ ಒಂದು ಸಂಪ್, ಮನೆಯ ಮೇಲೊಂದು ಸಿಂಟೆಕ್ಸ್, ಒಂದು ಮೋಟಾರ್ ಮತ್ತು ಇತರ ಉಪಕರಣಗಳು ಬೇಕು. ಅಲ್ಲದೆ, ವಿದ್ಯುತ್ ಶೇಖರಣೆಗಾಗಿ ಇನ್ವರ್ಟರ್ ಬೇಕು, ಆ ಇನ್ವರ್ಟರಗೆ ಕಾಲಕಾಲಕ್ಕೆ ಸರ್ವಿಸಿಂಗ್ ಮಾಡಿಸುತ್ತಿರಬೇಕು. ಇವೆಲ್ಲದಕ್ಕಾಗಿ (ಫ್ರಿಡ್ಜ್ ಮತ್ತು ಎಸಿ ಒಳಗೊಂಡು) ಕನಿಷ್ಠವೆಂದರೂ 5 ಲಕ್ಷ ರುಪಾಯಿ ಬೇಕೇ ಬೇಕು.

ಯುರೋಪಿಯನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ನನ್ನ ಮನೆಯಲ್ಲಿನ ಸಂಪು ನೋಡಿ ಅಚ್ಚರಿಪಟ್ಟರು. ಅದರ ಬಗ್ಗೆ ತಿಳಿದುಕೊಳ್ಳುವ ತೀವ್ರ ಕುತೂಹಲ ಅವರಲ್ಲಿತ್ತು. ಹಾಗಾಗಿ ನಾನು "ನಾವದರಲ್ಲಿ ನೀರು ಶೇಖರಿಸುತ್ತೇವೆ" ಎಂದು ಅವರಿಗೆ ವಿವರಿಸಿದೆ. 'ಯಾಕೆ?' ಎನ್ನುವ ಪ್ರಶ್ನೆ ಎದುರಾಯಿತು. 'ಮೇಲಕ್ಕೆ ಪಂಪ್ ಮಾಡಲು' ಎಂದುತ್ತರಿಸಿದೆ. 'ಆಮೇಲೆ?' ಎಂದು ಕೇಳಿದರು. 'ಮತ್ತೆ ಅದನ್ನು ಕೆಳಕ್ಕೆ ಹರಿಸುತ್ತೇವೆ...' ಎಂದೆ! ಆದರೆ ಅಚಾನಕ್ಕಾಗಿ ಈ ಸಂಗತಿಯೇ ನನ್ನನ್ನೂ ತಬ್ಬಿಬ್ಬುಗೊಳಿಸಿತು. ಇನ್ನು ಮೋಟರ್ ಪಂಪನ್ನು ಕಬ್ಬಿಣದ ಬೋನಿನಲ್ಲಿ ಇಡುತ್ತೇವೆ ಎಂದು ವಿವರಿಸುವಾಗಲೂ ನಾನು ತಬ್ಬಿಬ್ಬಾದೆ.
ನಿರಂತರ ನೀರಿನ ಸರಬರಾಜನ್ನು ನೋಡಿರುವ ಆ ವ್ಯಕ್ತಿಗೆ ನೀರನ್ನು ಶೇಖರಿಸಿಡುವ ವಿಚಾರ ಅಚ್ಚರಿ ಮೂಡಿಸಿದ್ದು ಸಹಜವೇ. ಆದರೆ ಈ ಯುರೋಪಿಯನ್ ಸಹೋದ್ಯೋಗಿಗೆ ನನ್ನ ಗ್ಯಾರೇಜಿನಲ್ಲಿನ ದೊಡ್ಡ ಜನರೇಟರ್ ಮತ್ತು ಅಡುಗೆ ಮನೆಯಲ್ಲಿದ್ದ ಇನ್ವರ್ಟರ್ ನೋಡಿದ ಮೇಲಂತೂ ನಿಜಕ್ಕೂ ಆಘಾತವಾಯಿತು. ಕುಟುಂಬವೊಂದು ನೀರು ಶೇಖರಿಸಿಡಲು, ವಿದ್ಯುತ್ ಉತ್ಪಾದಿಸಲು ಮತ್ತು ಆ ವಿದ್ಯುತ್ತನ್ನು ಇನ್ವರ್ಟರ್‌ನಲ್ಲಿ ಕೂಡಿಡಲು ಎಷ್ಟು ಖರ್ಚು ಮಾಡಬಹುದು ಎನ್ನುವುದನ್ನು ಆತ ಲೆಕ್ಕಹಾಕತೊಡಗಿದ. ಸರ್ಕಾರ ಅಷ್ಟೇ ನೀರು ಮತ್ತು ವಿದ್ಯುತ್ತನ್ನು ಪ್ರತೀ ಮನೆಗೂ ಅರ್ಧದಷ್ಟು ಹೂಡಿಕೆಯಲ್ಲಿ ಒದಗಿಸಬಹುದಿತ್ತು ಎನ್ನುವುದನ್ನು ಆತನ ಲೆಕ್ಕಾಚಾರ ಹೇಳಿತು.
ಇದೇ ನೋಡಿ ನಮ್ಮ ದುರ್ದೈವವೆಂದರೆ. ಯಾವ ನೀರು ಮತ್ತು ವಿದ್ಯುತ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ 'ಟೇಕನ್ ಫಾರ್ ಗ್ರಾಂಟೆಡ್‌'(ತಲೆಕೆಡಿಸಿಕೊಳ್ಳುವುದಿಲ್ಲವೋ) ಆಗಿದೆಯೋ, ಭಾರತದಲ್ಲಿನ ಕುಟುಂಬಗಳ ಅತಿದೊಡ್ಡ ಹೂಡಿಕೆಯೇ ಅವುಗಳಿಗೆ ಮೀಸಲಾಗಿದೆ! ನಮ್ಮ ಉಳಿತಾಯವನ್ನೆಲ್ಲ ವಿದ್ಯುತ್ ಮತ್ತು ನೀರು ನುಂಗಿಹಾಕುತ್ತವೆ. ಕೇವಲ ಮಧ್ಯಮ ಮತ್ತು ಶ್ರೀಮಂತ ವರ್ಗಗಳಿಗಷ್ಟೇ ಅಲ್ಲದೆ, ಬಡವರಿಗೂ ಕೂಡ ಇದು ಅನ್ವಯಿಸುತ್ತದೆ. ನಿರಂತರ ನೀರಿನ ಸರಬರಾಜು ಇದ್ದಿದ್ದರೆ, ಅವರೇಕೆ ಪ್ಲಾಸ್ಟಿಕ್ ಮತ್ತು ಸ್ಟೀಲ್ ಬಕೇಟ್‌ಗಳನ್ನು ಖರೀದಿಸಬೇಕಿತ್ತು? ಈ ಎಲ್ಲಾ ಅನಿಶ್ಚಿತತೆಗಳಿಂದಾಗಿ, ನಾವು ಪಟ್ಟಭದ್ರ ಹಿತಾಸಕ್ತಿಗಳಾದ ವಾಟರ್ ಟ್ಯಾಂಕ್ ಮಾಫಿಯಾಗಳನ್ನು ಮತ್ತು ವಿದ್ಯುತ್ ಕಳ್ಳತನ ಮಾಡುವ ಗೂಂಡಾಗಳನ್ನು ಹುಟ್ಟುಹಾಕಿದ್ದೇವೆ.
ಸ್ವಂತ ಮನೆಯಿರುವ ಒಂದು ಮಧ್ಯಮ ವರ್ಗದ ಕುಟುಂಬದ ಕಥೆಯನ್ನೇ ತೆಗೆದುಕೊಳ್ಳಿ. ಆ ಮನೆಗೆ ಒಂದು ಸಂಪ್, ಮನೆಯ ಮೇಲೊಂದು ಸಿಂಟೆಕ್ಸ್, ಒಂದು ಮೋಟಾರ್ ಮತ್ತು ಇತರ ಉಪಕರಣಗಳು ಬೇಕು. ಅಲ್ಲದೆ, ವಿದ್ಯುತ್ ಶೇಖರಣೆಗಾಗಿ ಇನ್ವರ್ಟರ್ ಬೇಕು, ಆ ಇನ್ವರ್ಟರಗೆ ಕಾಲಕಾಲಕ್ಕೆ ಸರ್ವಿಸಿಂಗ್ ಮಾಡಿಸುತ್ತಿರಬೇಕು. ಇವೆಲ್ಲದಕ್ಕಾಗಿ (ಫ್ರಿಡ್ಜ್ ಮತ್ತು ಎಸಿ ಒಳಗೊಂಡು) ಕನಿಷ್ಠವೆಂದರೂ 5 ಲಕ್ಷ ರುಪಾಯಿ ಬೇಕೇ ಬೇಕು. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ಇವೆಲ್ಲವನ್ನೂ ಮಾಲೀಕನೇ ಕೂಡಿಸಿರುತ್ತಾನಾದ್ದರಿಂದ ಅದರಲ್ಲಿ ವಾಸಿಸುವವರಿಗೆ ಶೇಖರಣಾ ಸಮಸ್ಯೆಯೊಂದಿಗೆ ಏಗುವ ಪ್ರಮೇಯವೇನೂ ಬರುವುದಿಲ್ಲ. ಆದರೆ ಮುಂಗಡ ಅಥವಾ ಬಾಡಿಗೆಯಲ್ಲಿ ಈ ಖರ್ಚನ್ನೆಲ್ಲಾ ಸೇರಿಸಲಾಗಿರುತ್ತದೆ.    
ಬೆಂಗಳೂರಿನಂಥ ಮಹಾನಗರಗಳಲ್ಲಿ ಏನಿಲ್ಲವೆಂದರೂ ಪ್ರತಿವರ್ಷ 50,000 ಹೊಸ ಮನೆಗಳು ಹುಟ್ಟಿಕೊಳ್ಳುತ್ತವೆ. ಇವುಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜಿಗಾಗಿ ಕನಿಷ್ಠ 2,500 ಕೋಟಿ ರುಪಾಯಿಗಳಾದರೂ ಕಟ್ಟಬೇಕಾಗುತ್ತದೆ. ಈ ಮೊತ್ತವನ್ನು ನಾವು ಇಂಥದ್ದೇ ಹತ್ತು ಮಹಾನಗರಗಳೊಂದಿಗೆ ಗುಣಿಸಿದರೆ, ವಾರ್ಷಿಕ 25,000 ಕೋಟಿ ರುಪಾಯಿಗಳಾಯಿತು. ಅಲ್ಲದೆ, ವಾರ್ಷಿಕ 1000 ದಿಂದ 3,000 ಮನೆಗಳು/ ಯೂನಿಟ್‌ಗಳು ಅಸ್ತಿತ್ವಕ್ಕೆ ಬರಬಹುದಾದ 50 ರಿಂದ 100 ಚಿಕ್ಕ ಪಟ್ಟಣಗಳಿವೆ. ಆದಾಗ್ಯೂ ಅಂಥಲ್ಲಿ ಮೇಲ್ಸೂಚಿಸಿದ ಶೇಖರಣಾ ವ್ಯವಸ್ಥೆಗೆ ತಗಲಬಹುದಾದ ವೆಚ್ಚ 3ಲಕ್ಷ ರುಪಾಯಿ ಆಗುತ್ತದೆ ಎಂದಿಟ್ಟುಕೊಳ್ಳಿ. ಅಂಥ ನೂರು ಪ್ರದೇಶಗಳಲ್ಲಿನ 3,000 ಯೂನಿಟ್‌ಗಳನ್ನು ಲೆಕ್ಕ ಹಾಕಿದರೆ ವಾರ್ಷಿಕ ವೆಚ್ಚ 10,000 ಕೋಟಿ ರುಪಾಯಿಗಳಷ್ಟಾಯಿತು!
ಒಂದು ವೇಳೆ ನಗರಗಳಲ್ಲಿ ಸರಿಯಾದ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆ ಇದ್ದರೆ, ಮಧ್ಯಮ ವರ್ಗಗಳಿಗೆ ವಾರ್ಷಿಕವಾಗಿ 35,000 ಕೋಟಿ ರುಪಾಯಿ ಉಳಿತಾಯವಾಗುತ್ತದೆ. ನೀರು ಶೇಖರಣೆಯ ತಾಪತ್ರಯವೇ ಇಲ್ಲವೆಂದರೆ, ಟ್ಯಾಂಕ್‌ಗಳನ್ನು ಸ್ವಚ್ಛ ಮಾಡುವ ತೊಂದರೆಯೂ ಇರುವುದಿಲ್ಲ, ನೀರಿನಿಂದ ಹರಡುವ ರೋಗಗಳನ್ನೂ ತಪ್ಪಿಸಬಹುದು. ಇನ್ನು ಕೆಲವೊಂದು ಲಾಭಗಳನ್ನಂತೂ ಲೆಕ್ಕ ಹಾಕುವುದಕ್ಕೂ ಸಾಧ್ಯವಿಲ್ಲ. ಇದು ಕೇವಲ ಒಂದು ವರ್ಷದ ವೆಚ್ಚವಷ್ಟೇ. ಇದರಿಂದ, ನಿರ್ವಹಣೆ ಮತ್ತು ನವೀಕರಣದ ಅಗತ್ಯವಿಲ್ಲದ ಮುಳುಗಡೆಯಾದ ವೆಚ್ಚವನ್ನು ಹೊರಗಿಡಲಾಗಿದೆ.
ನೆನಪಿಡಿ, ಈ ಲೆಕ್ಕದಿಂದ ನಿಯಮಿತವಾಗಿ ಇನ್‌ವರ್ಟರ್ ಮತ್ತು ಜನರೇಟರ್‌ಗಳನ್ನು ಬಳಸುವ ಉದ್ಯಮಗಳನ್ನು ಹೊರಗಿಟ್ಟಿದ್ದೇವೆ. ಅವುಗಳ ವೆಚ್ಚ ಏನಿಲ್ಲವೆಂದರೂ ಸುಲಭವಾಗಿ 50,000 ಕೋಟಿ ರುಪಾಯಿಗಳನ್ನು ದಾಟುತ್ತದೆ ಮತ್ತು ಒಟ್ಟು ಬಿಡುಗಡೆಯಾಗುವ ಹಣ 1 ಲಕ್ಷ ಕೋಟಿಯಷ್ಟಾಗುತ್ತದೆ. ಇದು ಬಹುದೊಡ್ಡ ಮೊತ್ತವೇ. ಈಗ ಸದ್ಯಕ್ಕೆ ಕುಟುಂಬಗಳ ಉಳಿತಾಯದತ್ತ ನೋಡೋಣ. ಅವುಗಳು ವಿದ್ಯುತ್ ಮತ್ತು ನೀರಿನ ಸಂಬಂಧೀ ಖರ್ಚುಗಳಿಗಾಗಿ ಹೂಡಿಕೆ ಮಾಡಿದ ಹಣವನ್ನು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಯ ರೂಪದಲ್ಲಿ, ಇನ್ಶುರೆನ್ಸ್‌ನಲ್ಲಿ ಅಥವಾ ಪಿಂಚಣಿ ಫಂಡ್‌ಗಳಲ್ಲಿ ಇಟ್ಟಿದ್ದರೆ ಏನಾಗುತ್ತಿತ್ತೋ ಯೋಚಿಸಿ?
 ಮೇ 16ರಂದು ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರ ಚಿಕ್ಕ ಚಿಕ್ಕ ವಿಷಯಗಳಲ್ಲಿ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳತ್ತ ಚಿತ್ತ ಹರಿಸಬೇಕು. ಅದು ಮತದಾರರ ಮನಸ್ಥಿತಿಯ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಮತ್ತು ಉದ್ಯೋಗಗಳನ್ನು ಸೃಷ್ಟಿಸಬೇಕು. ನೂತನ ಸರ್ಕಾರ ಮೊದಲು ಪರಿಹರಿಸಲು ತೊಡಗಬೇಕಾದ ಅತಿ ದೊಡ್ಡ ವಿಷಯವೆಂದರೆ ವಿದ್ಯುತ್ ಮತ್ತು ನೀರಿನ ಸಮಸ್ಯೆ.  
ನೀರಿನ ವಿಷಯಕ್ಕೆ ಬಂದರೆ, ರಾಜ್ಯದೊಳಗಿನ ನದಿಗಳ ಜೋಡಣೆಗಾಗಿ ರಾಜ್ಯ ಸರ್ಕಾರಗಳಿಗೆ ಹಣ ನೀಡಿ ಪ್ರೋತ್ಸಾಹಿಸುವ ಕೆಲಸವನ್ನೂ ಅದು ಮಾಡಬೇಕು. ಅಂತಾರಾಜ್ಯ ನದಿಜೋಡಣೆಯ ಕೆಲಸವನ್ನು ನಂತರ ಮಾಡಬಹುದು. ಇಲ್ಲಿಯೂ ಕೂಡ, ಇಂಟರ್ ಸ್ಟೇಟ್ ಸಮಿತಿಗಳನ್ನು ತಿಂಗಳಿಗೊಂದು ಸಾರಿ ಸಭೆ ಸೇರುವಂತೆ ಮಾಡಬೇಕಾಗುತ್ತದೆ, ಅಂತಾರಾಜ್ಯ ನದಿಗಳ ಜೋಡಣೆಗಾಗಿನ ಸಮಿತಿ ಮೂರು ತಿಂಗಳಿಗೆ ಒಂದು ಬಾರಿ ಸಭೆ ನಡೆಸುವಂತಾಗಬೇಕು. ಬಹುತೇಕ ರಾಜ್ಯಗಳು ಈ ಚರ್ಚಾ ಚಾವಡಿಯಲ್ಲಿ ಪಾಲ್ಗೊಳ್ಳುವಂತಾಗಬೇಕು.
ಇನ್ನು ವಿದ್ಯುತ್ ಸಮಸ್ಯೆ. ಈ ಕ್ಷೇತ್ರದಲ್ಲಿ ಖಾಸಗಿ ಮತ್ತು ಜಾಗತಿಕ ಹೂಡಿಕೆಯಾಗುವಂತಾಗಬೇಕು. ಎಲ್ಲಾ ರೀತಿಯ ವಿದ್ಯುತ್ ಕೂಡ ಅವಶ್ಯಕವೇ. ಗುಜರಾತ್‌ನಲ್ಲಿ ಸೌರವಿದ್ಯುತ್ ಉತ್ಪಾದನೆ ಲಾಭದಾಯಕವಾಗಿ ಸಾಬೀತಾಗಿದೆ. ಆ ಜಾಲವನ್ನು ಎಲ್ಲೆಡೆಯೂ ವಿಸ್ತರಿಸಬೇಕು. ಎಲ್ಲಾ ಯೋಜನೆಗಳೂ ಸಮಯಕ್ಕೆ ಕಟ್ಟುಬೀಳಬೇಕು. ಒಂದು ವೇಳೆ ಜಾಗತಿಕ ಶಕ್ತಿಗಳು ಪರಿಸರ ಲಾಬಿಯ ಮುಖಾಂತರ ಬೆಳವಣಿಗೆಯನ್ನು ನಿಲ್ಲಿಸಲು ಪ್ರಯತ್ನಿಸಿದರೆ, ಅವಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು. ಉದಾಹರಣೆಗೆ, ಕೂಡಂಕುಲಂ ಯೋಜನೆಯ ವಿರುದ್ಧ ಜಾಗತಿಕ ಶಕ್ತಿಗಳ ಬೆಂಬಲ ಪಡೆದು ಇಲ್ಲಿನ ಲಾಬಿಗಳು ನಡೆಸಿದ ಪ್ರತಿಭಟನೆ. ಅದರಿಂದಾಗಿ ಸಮಯ ಮತ್ತು ಹಣವೂ ವ್ಯರ್ಥವಾಗುತ್ತಾ ಸಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇವಲ ಮೂಕ ಪ್ರೇಕ್ಷಕನ ಪಾತ್ರ ವಹಿಸಿಕೊಂಡಿವೆ. ಹೊಸ ಸರ್ಕಾರಕ್ಕೆ ಮೊದಲ ಒಂದೆರಡು ವರ್ಷ ಅನುಕೂಲಕರ ವಾತಾವರಣವಿರುತ್ತದೆ. ಈ ಸಮಯದಲ್ಲೇ ಅದು ಕಾರ್ಯನಿರತವಾಗಬೇಕು.
ಒಂದು ವೇಳೆ ವಿದ್ಯುತ್ ಮತ್ತು ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದರೆ (ಎಲ್ಲರಿಗೂ 24್ಢ7ಢ ವಿದ್ಯುತ್ ಮತ್ತು ನೀರಿನ ಪೂರೈಕೆಯಾದರೆ) ಹೊಸ ಸರ್ಕಾರ ನಿಸ್ಸಂಶಯವಾಗಿಯೂ ಪ್ರಖ್ಯಾತವಾಗಲಿದೆ ಮತ್ತು ಬಲಿಷ್ಠವಾಗಿ ತಳವೂರಲಿದೆ. ಇನ್ನುಳಿದ ಸಂಗತಿಗಳು ಈ ನಡೆಯಿಂದಲೇ ಬಗೆಹರಿಯುತ್ತಾ ಸಾಗುತ್ತವೆ. ಜನರಿಗೆ ವಿದ್ಯುತ್ ಮತ್ತು ನೀರು ಕೊಟ್ಟರೆ, ಅವರು ಇನ್ನುಳಿದ ಸಂಗತಿಗಳಾದ ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರದ ವಿಷಯವನ್ನು ತಾವೇ ನೋಡಿಕೊಳ್ಳುತ್ತಾರೆ.

- ಪ್ರೊ. ಆರ್. ವೈದ್ಯನಾಥನ್
ಪ್ರಾಧ್ಯಾಪಕರು, ಐಐಎಮ್‌ಬಿ
vaidya@iimb.ernet.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement