ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಫೀಜ್ ಸಯೀದ್ ಹೇಳಿಕೆಯಲ್ಲಿ ಸತ್ಯವೆಷ್ಟು?

ಮೋದಿ ದೂಷಕರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದರು ಗಿರಿರಾಜ್ ಸಿಂಗ್...

Mainashree
Updated On : 25 Apr 2014, 1:16 am

ಪಾಕಿಸ್ತಾನದಲ್ಲಿ ನೀನು ಹಿಂದು ಆದರೂ ಒಂದೇ, ಮುಸ್ಲಿಂ ಆದರೂ ಒಂದೆ. ಏಕೆಂದರೆ ಇಲ್ಲಿ ಬದುಕಬೇಕಾದರೆ ಭಯದೊಂದಿಗೆ ಬದುಕುವುದು ಕಲಿಯಬೇಕು. ಆಕ್ರೋಶ, ಭಯ, ಗೊಂದಲ ಮತ್ತು ಅಸಹಾಯಕತೆಯೊಂದಿಗೆ ಜೀವನ ಸಾಗಿಸಬೇಕು...

ಮೋದಿ ದೂಷಕರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದರು ಗಿರಿರಾಜ್ ಸಿಂಗ್. ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು. ಹಿಂದುಗಳಿರುವ ಪ್ರದೇಶದಲ್ಲಿ ಆಸ್ತಿ ಕೊಳ್ಳುವ ಮುಸ್ಲಿಮರ ಜಾಗವನ್ನು ಅತಿಕ್ರಮಿಸಿಕೊಳ್ಳಿ ಎಂದ ಪ್ರವೀಣ್ ತೊಗಾಡಿಯಾ ವಿರುದ್ಧವೂ ಕೇಸು ದಾಖಲಿಸಲಾಯಿತು. ಈ ಗದ್ದಲದ ನಡುವೆಯೇ "ತಮ್ಮಿಂದ ಯಾರಿಗೂ ಅಪಾಯವಿಲ್ಲ, ಯಾರೂ ಪಾಕಿಸ್ತಾನಕ್ಕೆ ಹೋಗಬೇಕಿಲ್ಲ" ಎನ್ನುವ ಹೇಳಿಕೆ ನರೇಂದ್ರ ಮೋದಿಯವರಿಂದ ಬಂತು. ಜತೆಗೆ, ಪಾಕಿಸ್ತಾನದಲ್ಲಿರುವ ಹಿಂದುಗಳ ಶೋಚನೀಯ ಸ್ಥಿತಿ ಬಗ್ಗೆ ಅವರ ಮನಸ್ಸಿನಲ್ಲಿ ಮಡುಗಟ್ಟಿದ್ದ ಬೇಸರವೂ ಹೊರಬಿತ್ತು. ಅಷ್ಟರಲ್ಲೇ ಗಡಿಯಾಚೆಯ ಟ್ವೀಟೊಂದು ಸುದ್ದಿ ಮಾಡಿದೆ!
"ಪಾಕಿಸ್ತಾನದಲ್ಲಿರುವ ಹಿಂದುಗಳನ್ನು ಪ್ರಚೋದಿಸುವ ಬದಲು ನರೇಂದ್ರ ಮೋದಿ ಭಾರತದಲ್ಲಿರುವ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲಿ. ಪಾಕಿಸ್ತಾನದಲ್ಲಿರುವ ಹಿಂದುಗಳು ಸುರಕ್ಷಿತವಾಗಿದ್ದಾರೆ."
ಈ ಟ್ವೀಟ್ ಯಾರೋ ರಾಜಕಾರಣಿಯದ್ದಲ್ಲ. ಎನ್‌ಐಎ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ಹಫೀಜ್ ಮುಹಮ್ಮದ್ ಸಯೀದ್‌ನದ್ದು. 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಈತ. ಇಂಥವನು ಹೇಳೋದೇನು ಗೊತ್ತಾ? ಪಾಕಿಸ್ತಾನದಲ್ಲಿ ಉಗ್ರವಾದವನ್ನು ಹರಡುತ್ತಿರುವುದು ಭಾರತವಂತೆ!
ಹೀಗೆ ಒಂದಲ್ಲಾ, ಎರಡಲ್ಲಾ, ಟ್ವೀಟ್‌ಗಳ ಸರಮಾಲೆಯನ್ನೇ ಹರಿಸಿರುವ ಹಫೀಜ್, ಅಚಾನಕ್ಕಾಗಿ ಪಾಕಿಸ್ತಾನದಲ್ಲಿರುವ ಹಿಂದುಗಳ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾನೆ. ಆದರೆ ನಿಜಕ್ಕೂ ಪಾಕ್‌ನಲ್ಲಿರುವ ಹಿಂದುಗಳು ಸುರಕ್ಷಿತವಾಗಿದ್ದಾರೆಯೇ? ಖಂಡಿತ ಇಲ್ಲ.
ರಾಜಕೀಯ ಲಾಭಕ್ಕಾಗಿ ಉಗ್ರವಾದ, ಮತಾಂಧತೆಗೆ ನೀರೆರೆದು ಪೋಷಿಸುವ ರಾಜಕಾರಣಿಗಳಿರುವ ನಾಡು ಅದು. ಅಲ್ಲಿನ ಮತಾಂಧರು ಹಿಂದುಗಳ ಮೇಲೆ ಎಸಗುತ್ತಿರುವ ದೌರ್ಜನ್ಯ ಒಂದೆರಡಲ್ಲ. ಹಿಂದುಗಳನ್ನು ಬಿಡಿ, ಅವರು ತಮ್ಮದೇ ಧರ್ಮದವರ ಮೇಲೂ ಕರುಣೆ ತೋರಿಸುತ್ತಿಲ್ಲ!
ಅಲ್ಲಿನ ಮುಗ್ಧ ಹಿಂದು ಹುಡುಗಿಯರು ತಮ್ಮ ಮಾನ ಉಳಿಸಿಕೊಳ್ಳಲು ಒದ್ದಾಡುತ್ತಾರೆ. ಬಡ ಕುಟುಂಬಗಳನ್ನು ರಸ್ತೆಗೆ ತಳ್ಳಲಾಗಿದೆ. ಮಕ್ಕಳು, ಮುದುಕರೆಂದೂ ನೋಡದೆ ಹಿಂದುಗಳನ್ನು ಬಲಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಲಿಸಲಾಗುತ್ತಿದೆ. ಬರೀ ಇವರಷ್ಟೇ ಅಲ್ಲ, ಕ್ರೈಸ್ತರೂ ಅಲ್ಲಿ ಸುರಕ್ಷಿತರಲ್ಲ. ದೇವಸ್ಥಾನ, ಇಮಾಂದರ್ಗಾ, ಮಸೀದಿ ಮತ್ತು ಚರ್ಚುಗಳೆಲ್ಲವೂ ಮತಾಂಧರ ಆಕ್ರೋಶಕ್ಕೆ ಸಿಕ್ಕಿ ಜರ್ಝರಿತವಾಗುತ್ತಲೇ ಇವೆ.
"ಪಾಕಿಸ್ತಾನದಲ್ಲಿ ನೀನು ಹಿಂದು ಆದರೂ ಒಂದೇ, ಮುಸ್ಲಿಂ ಆದರೂ ಒಂದೆ. ಏಕೆಂದರೆ ಇಲ್ಲಿ ಬದುಕಬೇಕಾದರೆ ಭಯದೊಂದಿಗೆ ಬದುಕುವುದು ಕಲಿಯಬೇಕು. ಆಕ್ರೋಶ, ಭಯ, ಗೊಂದಲ ಮತ್ತು ಅಸಹಾಯಕತೆಯೊಂದಿಗೆ ಜೀವನ ಸಾಗಿಸಬೇಕು. ಬಾಂಬ್ ದಾಳಿ ಸಾಮಾನ್ಯ. ಸ್ಫೋಟದಿಂದ ಕಟ್ಟಡಗಳು ಧ್ವಂಸವಾಗುತ್ತವೆ. ಮತ್ತೆ ಆ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಪುನಃ ಆ ಕಟ್ಟಡಗಳ ಮೇಲೆ ದಾಳಿ ಮಾಡಲಾಗುತ್ತದೆ. ಹೇಗೋ ಜೀವನ ನಡೆಯುತ್ತದೆ."
ಸ್ವತಃ ಪಾಕಿಸ್ತಾನಿ ಯುವತಿಯೊಬ್ಬಳು ಹೇಳಿದ ಮಾತಿವು!
ಇದನ್ನೆಲ್ಲ ಕೇಳಿದರೆ ನಾವು ಅದೆಷ್ಟೋ ಪುಣ್ಯ ಮಾಡಿರಬೇಕು ಎಂಬ ಯೋಚನೆ ಬರುತ್ತದೆ. ಅದರಲ್ಲೂ ಅಲ್ಲಿನ ಅಲ್ಪಸಂಖ್ಯಾತರಂತೂ ತಮ್ಮ ಕಣ್ಮುಂದೆಯೇ ಮಕ್ಕಳು, ಮಡದಿ, ನೆಂಟರು, ಗೆಳೆಯರು ಸಾಯುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಭಾರತಕ್ಕೆ ಬಂದ ಪಾಕಿಸ್ತಾನಿ ಹಿಂದುಗಳು ಮರಳಿ ಆ ದೇಶಕ್ಕೆ ಹೋಗಲು ಇಚ್ಛಿಸುವುದಿಲ್ಲ. ಏಕೆಂದರೆ ಪಾಕಿಸ್ತಾನದಲ್ಲಿ ಅವಮಾನ, ಆತಂಕ ಮತ್ತು ಸಂಕಟ ಬಿಟ್ಟರೆ ಬೇರೇನು ಸಿಗದು ಅವರಿಗೆ. ಹಿಂದು ದೇವರ ವಿಗ್ರಹಗಳನ್ನು ಎತ್ತಿ ಬಿಸಾಡಲಾಗುತ್ತದೆ, ಹಿಂದು ಸಂಪ್ರದಾಯಗಳ ಬಗ್ಗೆ ಟೀಕೆ- ತಮಾಷೆ ಮಾಡಲಾಗುತ್ತದೆ. ತಡೆಯಲು ಹೋದರೆ ಥಳಿಸಲಾಗುತ್ತದೆ.  
ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ನೋಡಿ. ಅದರಲ್ಲಿ ಎಷ್ಟು ಹಿಂದು ಆಟಗಾರರಿದ್ದಾರೆ? ಎಷ್ಟು ಹಿಂದುಗಳು ಪಾಕಿಸ್ತಾನದಲ್ಲಿ ಸಿನಿಮಾ ತಾರೆಯರಾಗಿದ್ದಾರೆ? ಎಷ್ಟು ಹಿಂದು ರಾಜಕಾರಣಿಗಳಿದ್ದಾರೆ ಪಾಕಿಸ್ತಾನದಲ್ಲಿ? ಅದೇ ಭಾರತದಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯವಿದ್ದವರಿಗೆ ಕ್ರೀಡೆ, ಚಿತ್ರರಂಗ, ರಾಜಕೀಯದಲ್ಲಿ ಸ್ಥಾನ ಮಾನ ದೊರೆಯುತ್ತದೆ.
ಅಲ್ಪಸಂಖ್ಯಾತ ಹಿಂದುಗಳು ಮತ್ತು ಕ್ರಿಶ್ಚಿಯನ್ನರ ಅಂತ್ಯ ಸಂಸ್ಕಾರವನ್ನೂ ಶಾಂತಿಯಿಂದ ನೆರವೇರಿಸಲು ಬಿಡುವುದಿಲ್ಲ ಈ ಪಾಕಿಸ್ತಾನಿ ಉಗ್ರರು. ಇನ್ನು ಹಿಂದು ಯುವತಿಯರ ಪಾಡನ್ನಂತೂ ಹೇಳುವಂತೆಯೇ ಇಲ್ಲ. ಹಾಡಹಗಲೇ ಅಪಹರಿಸಿ ಅತ್ಯಾಚಾರ ಮಾಡಲಾಗುತ್ತದೆ. ಮತಾಂತರವಾಗಲು ಒಪ್ಪದಿದ್ದಾಗ ಬಲವಂತವಾಗಿ ಮುಸಲ್ಮಾನ ಯುವಕರೊಂದಿಗೆ ಮದುವೆ ಮಾಡಲಾಗುತ್ತದೆ. ಭಾರತಕ್ಕೆ ಗುಪ್ತಚರರಾಗಿ ಹೋಗಿ ಮಾಹಿತಿ ಕಳುಹಿಸುವಂತೆ ಒತ್ತಾಯಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಯಾತ್ರೆಯ ನೆಪದಲ್ಲಿ ಭಾರತಕ್ಕೆ ಬರುವ ಹಿಂದುಗಳು ಮತ್ತೆ ಪಾಕಿಸ್ತಾನದತ್ತ ತಲೆ ಹಾಕಿ ಮಲಗಲೂ ಇಷ್ಟಪಡುವುದಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದರೂ ಪಾಕಿಸ್ತಾನದಲ್ಲಿ ಹಿಂದುಗಳು ಸುರಕ್ಷಿತರಂತೆ!
ಹಿಂದು, ಕ್ರೈಸ್ತ ಅಥವಾ ಇತರ ಅಲ್ಪಸಂಖ್ಯಾತರನ್ನು ಬಿಡಿ, ತಮಗಿಂತ ಭಿನ್ನ ಆಚರಣೆಗಳಿವೆ ಎನ್ನುವ ಕಾರಣಕ್ಕಾಗಿಯೇ ಮುಸ್ಲಿಮರನ್ನೇ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಅಲ್ಲಿನ ಸುನ್ನಿಗಳು.
ಸುನ್ನಿ ಉಗ್ರ ಸಂಘನೆಗಳಾದ ಲಷ್ಕರ್-ಎ-ಜಂಗ್ವಿ ಮತ್ತು ಸಿಪಾಹ್-ಎ-ಸಹಾಬಾ, ಅಲ್‌ಖೈದಾ ಮತ್ತು ತಾಲಿಬಾನ್ ಸಂಘಟನೆಗಳ ಬೆಂಬಲದಿಂದ ಕ್ವೆಟ್ಟಾದಲ್ಲಿರುವ ಹಝಾರಾ ಸಮುದಾಯದ 800 ಮಂದಿಯನ್ನು ಬಲಿತೆಗೆದುಕೊಳ್ಳಲಾಗಿದೆ! ಈಶಾನ್ಯ ಪಾಕಿಸ್ತಾನದ ಪರಚಿನಾರ್, ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶಗಳಲ್ಲಿ ಶಿಯಾ ಮುಸ್ಲಿಮರ ಅಸ್ತಿತ್ವವೇ ಇಲ್ಲದಂತಾಗಿದೆ ಎಂದರೆ ತಪ್ಪಾಗದು.
ತಮ್ಮದೇ ದೇಶದಲ್ಲಿ ದಿಕ್ಕು ದೆಸೆಯಿಲ್ಲದೇ, ಅನಾಥರಂತೆ ಜೀವ ಉಳಿಸಿಕೊಳ್ಳಲು ಓಡಾಡುವ ಸ್ಥಿತಿ ಈ ಶಿಯಾ ಮುಸ್ಲಿಮರದ್ದು. ಯಾವ ಘಳಿಗೆಯಲ್ಲೂ ಸಾವು ಇವರನ್ನು ಅಟ್ಟಿಸಿಕೊಂಡು ಬರಬಹುದು! ಎಂತಹಾ ವಿಪರ್ಯಾಸ ನೋಡಿ. ಸಹ ಮುಸಲ್ಮಾನರನ್ನೂ ಬದುಕಲು ಬಿಡದ ಆ ದೇಶ ಇನ್ನುಳಿದ ಧರ್ಮದವರನ್ನು ನೆಮ್ಮದಿಯಾಗಿರಲು ಬಿಟ್ಟೀತೇ?
ಅವರಲ್ಲೇ ಐಕ್ಯತೆ ಇಲ್ಲದಿದ್ದಾಗ ಭಾರತದ ಬಗ್ಗೆ ಮಾತನಾಡುವ ಹಕ್ಕು ಪಾಕಿಸ್ತಾನಿಗಳಿಗೆ ಎಲ್ಲಿಂದ ಬಂತು? ನಮ್ಮಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದಂತೆ, ಅಲ್ಲಿ ಪ್ರತಿನಿತ್ಯವೂ ಬಾಂಬ್‌ಗಳು ಸ್ಫೋಟಿಸುತ್ತವೆ. ಪರಧರ್ಮ ಸಹಿಷ್ಣುತೆ ಎನ್ನುವ ಪದವೇ ವರ್ಜ್ಯವಾಗಿರುವ ಪಾಕಿಸ್ತಾನಕ್ಕೆ, ಭಾರತದಲ್ಲಿರುವ ಮುಸ್ಲಿಮರು ಮತ್ತು ಪಾಕಿಸ್ತಾನದಲ್ಲಿರುವ ಹಿಂದುಗಳ ಬಗ್ಗೆ ಭಾಷಣ ಬಿಗಿಯುವ ಹಫೀಜ್‌ರಂತವರಿಗೆ ಭಗವಂತನೇ ಬುದ್ಧಿ ಕೊಡಬೇಕು!

= ಅದಿತಿಮಾನಸ. ಟಿ. ಎಸ್
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement