ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರತಿಯೊಬ್ಬ ಸಾಮಾನ್ಯ ಮತದಾರ, ಭಾರತದ ಬದಲಾವಣೆಯ ಹರಿಕಾರ

ಅತಿ ಹೆಚ್ಚು ಜನರನ್ನು ಒಳಗೊಂಡು ನಡೆಯುವ ಪ್ರಪಂಚದ ಘಟನೆಯೆಂದರೆ ನಿಸ್ಸಂಶಯವಾಗಿ...

Vishwanath S
Updated On : 27 Apr 2014, 12:23 pm

ಅತಿ ಹೆಚ್ಚು ಜನರನ್ನು ಒಳಗೊಂಡು ನಡೆಯುವ ಪ್ರಪಂಚದ ಘಟನೆಯೆಂದರೆ ನಿಸ್ಸಂಶಯವಾಗಿ ಅದು ಭಾರತದ ಲೋಕಸಭಾ ಚುನಾವಣೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ತನಗೆ ಬೇಕಾದ ಸರ್ಕಾರವನ್ನು ಆರಿಸಿಕೊಳ್ಳುವ ಮತ್ತು ತನ್ನ ಬೇಕು-ಬೇಡಗಳನ್ನು ಸ್ವತಃ ನಿರ್ಧರಿಸುವ ಹಕ್ಕು ಇರುವುದು ನಮ್ಮಂತಹ ರಾಷ್ಟ್ರಗಳಲ್ಲಿ ಮಾತ್ರ. ಭಾರತದಲ್ಲಿ ಚುನಾವಣೆ ಎಂಬುದು ಕ್ರಿಯೆ ಮತ್ತು ಪ್ರಕ್ರಿಯೆಗಳನ್ನೊಳಗೊಂಡ ಸಾದೃಶ ಘಟನಾವಳಿಗಳ ಗುಚ್ಛ. ಸ್ವತಂತ್ರ ಚುನಾವಣಾ ಆಯೋಗ, ನೀತಿಸಂಹಿತೆ, ಕಾಲಮಿತಿ, ಖರ್ಚು ವೆಚ್ಚಗಳಿಗೆ ಕಡಿವಾಣ ಮಿಗಿಲಾಗಿ ಗುಪ್ತ ಮತದಾನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತಲೇ ಬಂದಿವೆ.
ಕೆಲವೊಮ್ಮೆ ಅಪ್ರಬುದ್ಧನಂತೆ ಕಾಣುವ ಭಾರತೀಯ ಮತದಾರ ತನ್ನ ಒಡಲೊಳಗೆ ಅನೇಕ ಅಚ್ಚರಿಗಳನ್ನು ಹುದುಗಿಸಿಕೊಂಡು ವಿಶ್ಲೇಷಣೆಗೆ ಮೀರಿದ ಫಲಿತಾಂಶಗಳನ್ನು ನೀಡಿದ್ದಾನೆ. ಈ ಅಚ್ಚರಿಗಳು ಭ್ರಷ್ಟರು, ಸೋಮಾರಿಗಳು, ದುರಹಂಕಾರಿಗಳು ಮತ್ತು ವಂಚಕರನ್ನು ಮಣ್ಣು ಮುಕ್ಕಿಸಿವೆ. ಕೇವಲ ಜಾತಿ, ಧರ್ಮ, ಹಣಬಲ ಮುಂತಾದವುಗಳಿಗೆ ಸೀಮಿತವಾಗದೆ ಅದರಾಚೆಗೂ ಚಾಚಿಕೊಂಡ ಮನುಷ್ಯ ಪ್ರೀತಿ, ಪ್ರಾಮಾಣಿಕತೆ ಮತ್ತು ನಾಯಕತ್ವಗಳನ್ನು ಗುರುತಿಸಿ ಪೋಷಿಸಿವೆ.
1951ರ ಮೊದಲ ಮಹಾ ಚುನಾವಣೆಯಿಂದಾಗಿ ಬದಲಾವಣೆಗೆ ಒಳಪಡುತ್ತಲೇ ಬಂದ ನಮ್ಮ ಪ್ರಜಾಪ್ರಭುತ್ವ ಕಳೆದೆರಡು ದಶಕಗಳಿಂದೀಚೆಗೆ ಕ್ಷಿಪ್ರಗತಿಯ ಸ್ಥಿತ್ಯಂತರಗಳಿಗೆ ಒಳಪಟ್ಟಿದೆ. ಜಾಗೃತಗೊಂಡ ರಾಜಕೀಯ ಪ್ರಜ್ಞೆ, ಅನೇಕ ಪ್ರಾದೇಶಿಕ ಪಕ್ಷಗಳ ಉದಯ, ವಿದ್ಯಾವಂತರ ಸಂಖ್ಯೆಯಲ್ಲಿ ಹೆಚ್ಚಳ, ಚುನಾವಣಾ ಸುಧಾರಣೆಗಳು ಮತ್ತು ಆರ್ಥಿಕ ಪ್ರಗತಿಗಳು ಬದಲಾವಣೆ ತರುವಲ್ಲಿ ತಮ್ಮ ಪಾಲನ್ನು ನೀಡಿವೆ. ಕ್ಷಿಪ್ರ ಗತಿಯಲ್ಲಿ ಏರುತ್ತಿರುವ ನಗರೀಕರಣ ಇನ್ನೊಂದು ದಶಕದೊಳಗೆ ಅಂದರೆ ಮುಂದಿನ ಎರಡು ಮಹಾಚುನಾವಣೆಯಷ್ಟರಲ್ಲಿ ರಾಜಕೀಯ ಮತ್ತು ಚುನಾವಣಾ ಸಮೀಕರಣವನ್ನು ಬಹಳಷ್ಟು ಬದಲಾಯಿಸುವ ಸಾಧ್ಯತೆಗಳಿವೆ. ಈಗಿನ ಗ್ರಾಮೀಣ ಕೇಂದ್ರಿತ ರಾಜಕೀಯ ಚಟುವಟಿಕೆಗಳು ನಗರ ವಲಯದ ಮತದಾರರ ಪ್ರಾಬಲ್ಯದಿಂದಾಗಿ ಹೊಸ ರೀತಿಯ ಧ್ರುವೀಕರಣಕ್ಕೆ ಒಳಪಡುತ್ತವೆ. ಆಗಿನ ಪ್ರಣಾಳಿಕೆಗಳು ಕೇವಲ ಬಡತನ ನಿವಾರಣೆ, ಮೀಸಲಾತಿ ಮತ್ತು ಜನಪ್ರಿಯ ಯೋಜನೆಗಳ ಮೊರೆ ಹೋಗದೆ ಉದ್ಯೋಗ ಸೃಷ್ಟಿ, ಉತ್ತಮ ನಾಗರಿಕ ಸೌಲಭ್ಯ, ಉತ್ತರದಾಯಿತ್ವ, ಪಾರದರ್ಶಕತೆ, ಆಧುನಿಕ ತಂತ್ರಜ್ಞಾನ, ಅಭಿವೃದ್ಧಿ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನಗರಗಳಿಗೆ ವಲಸೆ ಬಂದ ಜನ ಅಥವಾ ಅಲ್ಲೇ ಹುಟ್ಟಿ ಬೆಳೆದವರು ಜಾತಿ, ಭಾಷೆ ಮತ್ತು ಧರ್ಮಗಳಾಚೆ ಯೋಚನೆ ಮಾಡುತ್ತಾರೆ. ಇದು ಸಾಧ್ಯವಾಗುವುದು ಅವರು ಬದುಕಬೇಕಾದ ಸನ್ನಿವೇಶಗಳಿಂದ. ಅಂತಹ ಸನ್ನಿವೇಶಗಳು ಮನುಷ್ಯನನ್ನು ಜಾತಿ-ಭಾಷೆ ಪರಿಧಿಗಳಾಚೆ ಯೋಚಿಸುವಂತೆ ಪ್ರೇರೇಪಿಸುತ್ತವೆ. ಜಾತಿ-ಭಾಷೆಗಳಿಗಿಂತ ವ್ಯಕ್ತಿಯ ಚಾರಿತ್ರ್ಯ ಮತ್ತು ಬದ್ಧತೆ ಮುಖ್ಯವಾಗಿ ಚುನಾವಣಾ ಪರಿಭಾಷೆ ಬದಲಾವಣೆಗೊಳಪಡುತ್ತದೆ. ಇದು ದೇಶದ ಅರ್ಧಕ್ಕೂ ಹೆಚ್ಚು ಮತದಾರರ ಆಲೋಚನಾ ಪರಿಯಾಗುವುದರಿಂದ ಯಾವ ರಾಜಕೀಯ ಪಕ್ಷವೂ ಈ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸುವಂತಿಲ್ಲ. ಇದು ಸಾಧ್ಯವಾದರೆ ಎಲ್ಲಾ ಪಕ್ಷಗಳು ತನ್ನಿಂತಾನೇ ಶುದ್ಧೀಕರಣ ಕ್ರಿಯೆಗೆ ಒಳಪಡುತ್ತವೆ. ಹಣಬಲ ಮತ್ತು ತೋಳ್ಬಲದ ಪ್ರಾಬಲ್ಯ ಕಡಿಮೆಯಾಗಿ ರಾಜಕೀಯ ರಂಗದಲ್ಲೂ ಆರೋಗ್ಯಕರ ವಾತಾವರಣ ಏರ್ಪಡುತ್ತದೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ 'ಮತದಾನ' ಎಂಬುದು ಹೆಚ್ಚು ಅರ್ಥವಂತಿಕೆಯ ಶಬ್ದ ಅಲ್ಲ. ಅದೇನು ಬೇಕಾಬಿಟ್ಟಿ ದಾನ ಮಾಡಿ ಮುಂದಿನ ಐದು ವರ್ಷಗಳ ಕಾಲ ಅಪಾತ್ರರಿಂದ ನಮ್ಮ ಪ್ರಜಾತಂತ್ರವನ್ನು ಹಾಳುಗೆಡವುವ ವಸ್ತುವಲ್ಲ. ಸರಿಯಾಗಿ ಯೋಚಿಸಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಒಂದು ವಿವೇಚನಾ ಕ್ರಿಯೆಯಾದ್ದರಿಂದ ಮತದಾನವನ್ನು 'ಮತ ಬದಲಾವಣೆ' ಎಂದು ಕರೆಯುವುದೇ ಹೆಚ್ಚು ಸೂಕ್ತ. ಅದೊಂದು ಗಂಭೀರ ಜವಾಬ್ದಾರಿ. ದೇಶದ ಅಭಿವೃದ್ಧಿಗೆ ಬೇಕಾದ ತಯಾರಿಗಳೇನು, ಅನುಸರಿಸಬೇಕಾದ ರೀತಿ-ನೀತಿಗಳು, ಸ್ಥಾಪಿತವಾಗ ಬೇಕಾಗಿರುವ ಸರ್ಕಾರ ಇವುಗಳನ್ನು ಐದು ವರ್ಷಗಳಿಗೊಮ್ಮೆ ಪರಾಮರ್ಶಿಸಬೇಕಾದ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಸಂವಿಧಾನ ನೀಡಿರುವ ಅವಕಾಶ. ಅಂತಹ ಸಾಂವಿಧಾನಿಕ ಹಕ್ಕನ್ನು ದಾನ ಮಾಡಿ ಬದಲಾವಣೆಯನ್ನು ಬಯಸುವುದಕ್ಕಾಗುತ್ತದೆಯೇ?     
 ಸಂವಹನ ತಂತ್ರಜ್ಞಾನ ಮತ್ತು ವಿಧಾನ ಅಭಿವೃದ್ಧಿ ಹೊಂದಿದಂತೆಲ್ಲ ಮತದಾರರನ್ನು ತಲುಪುವ ವಿಧಾನಗಳು ಬದಲಾಗತೊಡಗಿವೆ. ಸಾಂಪ್ರದಾಯಿಕ ರೀತಿಗಳಾದ ಬಹಿರಂಗ ಪ್ರಚಾರ, ಸಮಾವೇಶ, ಮನೆ-ಮನೆ ಭೇಟಿಗಳ ಜೊತೆಯಲ್ಲೇ ಅಂತರ್ಜಾಲದ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್, ಯೂಟ್ಯೂಬ್ ಮುಂತಾದವುಗಳು ಜನಪ್ರಿಯ, ಸುಲಭ ಮತ್ತು ಪರಿಣಾಮಕಾರಿ ಪ್ರಚಾರ ಮಾರ್ಗಗಳಾಗುವುದರಲ್ಲಿ ಅನುಮಾನ ಇಲ್ಲ. ಮುಂಬರುವ ಚುನಾವಣೆಗಳಲ್ಲಿ ಇ-ಮೇಲ್‌ಗಳ ಮೂಲಕ ಅಭ್ಯರ್ಥಿಗಳು, ಪಕ್ಷಗಳು ಮತದಾರರಿಗೆ ಮನವಿ ಮಾಡಿಕೊಳ್ಳಬಹುದು.  ಈ ಬಾರಿಯ ಚುನಾವಣೆಗಳಲ್ಲಿ ಹೊಸದಾಗಿ ಅವಕಾಶ ಮಾಡಿಕೊಡಲಾಗಿರುವ 'ಮೇಲಿನ ಯಾವ ಅಭ್ಯರ್ಥಿಗೂ ವೋಟು ಇಲ್ಲ' ಎಂಬ ಆಯ್ಕೆ ಸುಶಿಕ್ಷಿತ ಮತ್ತು ಆಮಿಷಗಳಿಗೆ ಬಲಿಯಾಗದ ಮತದಾರರಿಗೆ ಅಸ್ತ್ರವಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳ ಆಯ್ಕೆಯಾದಲ್ಲಿ ಹೆಚ್ಚು ಪಾರದರ್ಶಕತೆ ವಹಿಸಬೇಕಾಗುತ್ತದೆ. ಅಭ್ಯರ್ಥಿಗಳ ಹಿನ್ನೆಲೆ, ಸಾಧನೆ, ಪ್ರಾಮಾಣಿಕತೆ ಮುಂತಾದ ಅಂಶಗಳಿಗೆ ಹೆಚ್ಚು ಮಹತ್ವ ಕೊಡಲೇಬೇಕಾಗುತ್ತದೆ. ಇವೆಲ್ಲ ನಿಧಾನವಾಗಿ, ಆದರೆ ಅನುಸರಿಸಲೇಬೇಕಾದ ಚುನಾವಣಾ ಸುಧಾರಣಾ ಕ್ರಮಗಳಾಗುವುದರಲ್ಲಿ ಸಂಶಯವಿಲ್ಲ.
ಮುಂದೊಂದು ದಿನ ಚುನಾಯಿತ ಅಭ್ಯರ್ಥಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಮತ್ತು ಉತ್ತರದಾಯಿತ್ವ ಇಲ್ಲ ಎಂಬ ಕಾರಣಕ್ಕಾಗಿ ವಾಪಸ್ಸು ಕರೆಸಿಕೊಳ್ಳುವ ಹಕ್ಕು ಪ್ರಾಪ್ತವಾದರೆ ಆಶ್ಚರ್ಯಪಡಬೇಕಾಗಿಲ್ಲ. ವಿಧಾನಸಭೆ, ಲೋಕಸಭೆ ಅಥವಾ ರಾಜ್ಯಸಭೆಗಳ ಸದಸ್ಯರಾಗಿರುವವರು ಬೇಕಾಬಿಟ್ಟಿ ರಾಜೀನಾಮೆ ನೀಡಿ ಪದೇ ಪದೇ ಉಪಚುನಾವಣೆಗಳಾಗುವುದನ್ನು ತಪ್ಪಿಸುವುದು ಕೂಡಾ ಸುಧಾರಣಾ ಕ್ರಮಗಳಲ್ಲಿ ಸೇರಬಹುದು. ಇವೆಲ್ಲ ಚುನಾವಣಾ ರಂಗದ ತೀವ್ರ ಸ್ವರೂಪದ ಬದಲಾವಣೆಗಳು ಅಥವಾ ಸುಧಾರಣೆಗಳು ಅನಿಸಿದರೂ ಪ್ರಜಾಪ್ರಭುತ್ವವನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದಕ್ಕೆ, ಬಲಪಡಿಸುವುದಕ್ಕೆ ಮತ್ತು ಅರ್ಥಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗಬಹುದು.  ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಸಾರಿಯ ಚುನಾವಣೆಯಲ್ಲಿ ಯುವಕರು ಮತ್ತು ಮಧ್ಯಮ ವರ್ಗದವರ ಪಾತ್ರ ಬಹುಮುಖ್ಯವಾಗಿರುತ್ತದೆ. ಏಕೆಂದರೆ ಹೊಸದಾಗಿ ಹಲವು ಲಕ್ಷಗಳಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇವರೆಲ್ಲ ಉತ್ಸಾಹಿಗಳು ಮತ್ತು ವಿದ್ಯಾವಂತರು ಆಗಿರುವುದರಿಂದ ಫಲಿತಾಂಶಗಳಿಗೆ ಹೊಸ ಭಾಷ್ಯ ಬರೆಯಬಲ್ಲರು. ಹೊಸ ತಲೆಮಾರಿನ ಇವರು ಸ್ವತಂತ್ರ ಆಲೋಚನೆ ಉಳ್ಳವರು ಮತ್ತು ಹಿರಿಯರು ಹೇಳಿದ ಎಲ್ಲವನ್ನು ಒಪ್ಪಿಕೊಳ್ಳಬೇಕೆಂಬ ಮನಸ್ಥಿತಿಯವರು ಅಲ್ಲ. ಸಂಪರ್ಕ ಕ್ಷೇತ್ರದಲ್ಲಾಗಿರುವ ಕ್ರಾಂತಿ ಇವರ ಬೆನ್ನಿಗಿದೆ ಮತ್ತು ಆಲೋಚನೆಗಳನ್ನು ಹರಡುವುದಕ್ಕೆ ಸಹಕಾರಿಯಾಗಿದೆ. ಇದರಿಂದ ವಿಚಾರಧಾರೆಗಳು ಕಾಳ್ಗಿಚ್ಚಿನಂತೆ ಹರಡಬಲ್ಲವು ಮತ್ತು ಇತರರನ್ನು ಪ್ರಭಾವಿಸಬಲ್ಲವು.
ಇನ್ನು ಕಳೆದೆರಡು ದಶಕಗಳಿಂದ ಆರ್ಥಿಕ ರಂಗದಲ್ಲಿ ಆಗಿರುವ ಸುಧಾರಣೆಗಳಿಂದ ಭಾರತದಲ್ಲಿ ಮಧ್ಯಮವರ್ಗದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶದ ಬಹುಸಂಖ್ಯಾತ ಮತದಾರರು ಮಧ್ಯಮವರ್ಗದ ಜನರೇ ಆಗಿರುವುದರಿಂದ ಸರ್ಕಾರದ ನೀತಿ ನಿರೂಪಣೆಗಳು ಇವರನ್ನೆಲ್ಲ ಹೆಚ್ಚಾಗಿ ತಟ್ಟುತ್ತವೆ. ಬೆಲೆ ಏರಿಕೆಯಂತಹ ಆಘಾತಗಳಿಂದ ಮೊದಲು ನಲುಗುವುದೇ ಈ ವರ್ಗ. ಆರ್ಥಿಕ ಸ್ಥಿರತೆ ಮತ್ತು ಪ್ರಗತಿ ಇವರ ಮತ ಚಲಾವಣೆಯ ದಿಕ್ಕನ್ನು ನಿರ್ಧರಿಸಬಲ್ಲವು.
ಒಟ್ಟಿನಲ್ಲಿ ಭಾರತದ ಚುನಾವಣೆಗಳು ಚರಿತ್ರೆಯ ಒಂದು ರೋಚಕ ಅಧ್ಯಾಯ. ಅಲ್ಲಿ ಸಾಮಾನ್ಯ ಮತದಾರನೆ ನಾಯಕ. ಚುನಾವಣೆಯಿಂದ ಚುನಾವಣೆಗೆ ಸದ್ದಿಲ್ಲದೇ ಬದಲಾವಣೆಗಳನ್ನು ತಂದಿರುವ ಹರಿಕಾರ. ಅತ್ಯಂತ ವೈವಿಧ್ಯಮಯ ಮತ್ತು ಬಹು ಸಂಸ್ಕೃತಿಯ ನಾಡಾದ ಭಾರತದಲ್ಲಿ ಚುನಾವಣೆಗಳು ಒಂದು ಅದ್ಭುತ. ಅಲ್ಲಿ ಉಂಟಾಗುವ ಬದಲಾವಣೆಗಳು ಬಹುಜನ್ಯ ಸುಧಾರಣೆಗಳು. ಹಾಗಾಗಿ ಅವು ನಮ್ಮ ಪ್ರಜಾಪ್ರಭುತ್ವವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಬಲಿಷ್ಠಗೊಳಿಸಿ ಜನಮುಖಿಯನ್ನಾಗಿಸುತ್ತಿವೆ.


 - ಡಾ. ತೈಲೂರು ದೇವರಾಜ್
ಸಹಪ್ರಾಧ್ಯಾಪಕರು,
ಸರ್ಕಾರಿ ವಿಜ್ಞಾನ ಕಾಲೇಜು, ನೃಪತುಂಗ ರಸ್ತೆ, ಬೆಂಗಳೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement