ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾನವೀಯತೆ ಮೆರೆದ ವರದಿ ಸಮಕಾಲೀನವೆನಿಸದ ಕತೆ

Vishwanath S
Updated On : 27 Apr 2014, 12:27 pm

ಏಪ್ರಿಲ್ 20, 2014ರ ಖುಷಿ ಸಾಪ್ತಾಹಿಕದಲ್ಲಿ ಕುಶಾಲನಗರದ ದುಬಾರೆ ಕಾಡಿನೊಳಗೆ ಪ್ರಜ್ಞಾ ಚೌಟ 'ಆನೆಮನೆ' ಎಂಬ ಆನೆಗಳ ಮನೆಯ ಬಗ್ಗೆ ಪ್ರಕಟವಾದ ಲೇಖನ ಅಚ್ಚರಿ ಮೂಡಿಸಿತು. ನಾಯಿ, ಬೆಕ್ಕುಗಳನ್ನು ಸಾಕುವಷ್ಟು ಸುಲಭವಲ್ಲ ಆನೆಗಳನ್ನು ಸಾಕುವುದು. ಆಧುನಿಕ ಸಮಾಜದ ಎಲ್ಲ ಸುಖ ಸೌಲತ್ತುಗಳ ಅರಿವಿದ್ದು, ಖರ್ಚು ಮಾಡಲು ಹಣವಿದ್ದೂ, ಅವುಗಳನ್ನು ಬಿಟ್ಟು ಪ್ರಜ್ಞಾ ದಂಪತಿ ಕಾಡಿನತ್ತ ಹೆಜ್ಜೆ ಹಾಕಿದ್ದಾರೆ. ಸುಖ ಅಂದ್ರೆ ಸೌಲತ್ತುಗಳಲ್ಲ, ಜೀವನ ಪ್ರೀತಿ ಅನ್ನೋದಕ್ಕೆ ಸಾಕ್ಷಿಯಾಗಿದ್ದಾರೆ. ಜಗಮೆಚ್ಚಿದ ಮಗನಂತೆ ಗಜಮೆಚ್ಚಿದ ಮಗಳು ಎಂಬ ಸಂಗತಿ ಹೆಮ್ಮೆ ಎನಿಸಿದೆ.
-ವಿ. ಹೇಮಂತಕುಮಾರ್, ಬೆಂಗಳೂರು. ಮೊ. 9035 992900

ಕಳೆದ ತಲೆಮಾರಿನ ಜನಪ್ರಿಯ ಕಾದಂಬರಿಕಾರ, ಕಥೆಗಾರ ಟಿ.ಕೆ. ರಾಮರಾವ್ ಅವರ ಪತ್ನಿ ಶಕುಂತಲಾ ಅವರು ಪತಿಯ ನಿಧಾನಾನಂತರ ಅನುಭವಿಸಿಕೊಂಡು ಬಂದಿರುವ ನೋವಿನ ಕಥೆಯನ್ನು ತೆರೆದಿಟ್ಟು 'ಕನ್ನಡಪ್ರಭ' ತನ್ನ ಪತ್ರಿಕಾ ಧರ್ಮವನ್ನೂ, ಮಾನವೀಯತೆಯನ್ನೂ ಮೆರೆದಿದೆ. ರಾಮರಾಯರ ಎಲ್ಲ 71 ಕೃತಿಗಳನ್ನು ಓದಿರುವ ನಾನು ಎಲ್ಲವನ್ನೂ ಮೆಚ್ಚಿದ್ದೇನೆ. ಪತ್ತೇದಾರಿ ಕೃತಿಗಳನ್ನು ಅವರಷ್ಟು ಸೊಗಸಾಗಿ ಬರೆದವರು ಕನ್ನಡದಲ್ಲಿ ಬೇರೊಬ್ಬರಿಲ್ಲ. ಆ ದಿನಗಳಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆ, ಕಾದಂಬರಿಗಳು (ಧಾರಾವಾಹಿಗಳು) ವಿಫುಲವಾಗಿ ಪ್ರಕಟಗೊಳ್ಳುತ್ತಿದ್ದವು. ಎಲ್ಲ ಓದುಗರೂ ಅವರ ಕೃತಿಗಳನ್ನು ಇಷ್ಟಪಡುತ್ತಿದ್ದರು. ಸರಳ ವ್ಯಕ್ತಿತ್ವದ ರಾಮರಾಯರು, ಸಾಹಿತ್ಯದ, ರಾಜಕೀಯ ರಂಗದ ಮತ್ತು ಸಾಮಾಜಿಕ ಸಂಘಟನೆಗಳ ಆಷಾಢಭೂತಿ 'ಗಣ್ಯ'ರನ್ನು 'ಮೋಡಗಳ ಮಹಾಮಹಿಮರು' ಎಂದು ತಮಾಷೆಯಾಗಿ ಕರೆಯುತ್ತಿದ್ದುದ್ದನ್ನು ನಾನು ಪ್ರತ್ಯಕ್ಷ ಗಮನಿಸಿದ್ದೇನೆ. ರಾಮರಾಯರ ನಿಧನಾನಂತರ ಅಂಥ ಆ ಮಹಾಮಹಿಮರ್ಯಾರೂ ರಾಮರಾಯರ ಪತ್ನಿಯ ಜೀವನ ನಿರ್ವಹಣೆಯ ಬಗ್ಗೆ ಕೈಗೊಳ್ಳಬೇಕಾದ ಕರ್ತವ್ಯವನ್ನು ಕೈಗೊಳ್ಳಲಿಲ್ಲ. ಸಾಹಿತಿಯೊಬ್ಬರ ಡಯಾಲಿಸಿಸ್ ಇತ್ಯಾದಿಗಳಿಗೆ ವರ್ಷಗಳಿಂದಲೂ ಹಣ ನೀಡುತ್ತಿರುವ ನಮ್ಮ ರಾಜ್ಯ ಸರ್ಕಾರವು, ಈ ಸಾಹಿತಿಯ ಕೃತಿ ಓದಿದವರ ಸಂಖ್ಯೆಯ ಹತ್ತುಪಟ್ಟು ಓದುಗರಿಂದ ಪ್ರಶಂಸೆ ಗಳಿಸಿದ ರಾಮರಾಯರ ಕುಟುಂಬದತ್ತ ತಿರುಗಿ ನೋಡಲೂ ಇಲ್ಲ!
ಇನ್ನಾದರೂ ಈ 'ಮೋಡಗಳ ಮಹಿಮಾಮಹಿಮರು' ಶಕುಂತಲಾ ಅವರ ಜೀವನ ನಿರ್ವಹಣೆಗೆ ಹಾಗೂ ಚಿಕಿತ್ಸಾ ವೆಚ್ಚಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ತಮ್ಮ ಕರ್ತವ್ಯಪ್ರಜ್ಞೆ ಮೆರೆಯಲು ಅವಕಾಶವಿದೆ.
-ಎಚ್. ಆನಂದರಾಮಶಾಸ್ತ್ರೀ, ಬೆಂಗಳೂರು.

ತಾ. 20.4.2014ರಂದು ಪ್ರಕಟವಾದ ಡಾ. ಬಿ.ಎಲ್. ವೇಣು ಅವರ ಕತೆ 'ವರನಲ್ಲೇನೋ ಐಬಿರಬೇಕಂತೆ' ಚೆನ್ನಾಗಿತ್ತು. ಸ್ತ್ರೀ ಶೋಷಣೆಯನ್ನು ಬಿಂಬಿಸುವುದಾಗಿತ್ತು. ಹೆಣ್ಣಿನ ಆದರ್ಶವನ್ನು ಪ್ರಕಟಿಸುವ ಕತೆ ಎನಿಸಿತ್ತು. ಆದರೆ ಕತೆ ಸಮಕಾಲೀನವಲ್ಲ. ಒಂದಿಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಹೊಂದಾಣಿಕೆಯಾಗುವಂತಿತ್ತು; ಹೆಣೆದಂತಿತ್ತು. ಕಡೆಯ ವಸ್ತು ವಾಸ್ತವ್ಯಕ್ಕೆ ವ್ಯತಿರಿಕ್ತವಾಗಿದೆ. ಸಮಾಜದಲ್ಲಿ ಇಂದು ಮದುವೆ ಗಂಡಿಗೆ ಹೆಣ್ಣಿನ ಬರ ವಿನಾ ಗಂಡಿನ ಬರ ಇಲ್ಲವಾಗಿದೆ. ಸ್ತ್ರೀ ಭ್ರೂಣ ಹತ್ಯೆಯ ವಿರುದ್ಧ ಸಮರ ಹೂಡಲಾಗಿದೆ. ವರದಕ್ಷಿಣೆಯ ಸ್ಥಾನವನ್ನು ವಧುದಕ್ಷಿಣೆ ಆಕ್ರಮಿಸಿಕೊಂಡಿದೆ. ಕಥೆ ವಸ್ತುಸ್ಥಿತಿಗೆ ಹೊರತಾಗಿದ್ದ ತನ್ನ ಹೊಳಪನ್ನು, ಔಚಿತ್ಯವನ್ನು ಕಳೆದುಕೊಂಡಿರುತ್ತದೆ ಎನ್ನಲಡ್ಡಿಯಿಲ್ಲ.
-ಎನ್.ಡಿ. ಕಾರಂತ್, ಉಡುಪಿ, ಮೊ. 810 55 30343

ದಿ. 18ರ ಕ.ಪ್ರ. ತಾ. 18ರ ಮತದಾನದ ರಸಗವಳವನ್ನು ಹೊತ್ತು ತಂದಿದ್ದು ಒಳ್ಳೆಯ ಮನರಂಜನೆ ಕೊಟ್ಟಿತು. ಅದನ್ನು ಓದಿದ ನಂತರ ನನ್ನ ಮನಸ್ಸಿಗೆ ಬಂದಿದ್ದನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
1.    ಮೊದಲನೇ ಮತದಾನದ ಹಕ್ಕು ಪಡೆದ ರಮೇಶ ಎಚ್.ಕೆ. ಮತ್ತು ಸುಶ್ಮಿತಾ ಕಾಮತ್ ಎಂಬ ಇಬ್ಬರು ವಿದ್ಯಾರ್ಥಿಗಳು ನೋಟಾ ಬಟನ್ ಒತ್ತುವ ಮೂಲಕ ತಾವು ಈಗಾಗಲೇ ಪ್ರಬುದ್ಧರಾಗಿದ್ದೇವೆ ಎಂದು ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
2. ಕೊರ್ನಕೋಟೆ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದನ್ನು ನೋಡಿದಾಗ, 63 ವರ್ಷಗಳಿಂದ ಬಡವರ ಉದ್ಧಾರ, ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಮತದಾರರನ್ನು ಮೂರ್ಖಮಾಡುವ ರಾಜಕಾರಣಿಗಳು ದಪ್ಪ ಚರ್ಮದವರು. ಇನ್ನಾದರೂ ಆ ಕ್ಷೇತ್ರದ ಶಾಸಕರು ತಮ್ಮ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕ್ಳೊಬೇಕು.
3. ಶತಾಯುಷಿ ಗಂಗಮ್ಮ ತನ್ನ ಮತದಾನದ ಹಕ್ಕಿನ ಬಗ್ಗೆ ಅರಿತು, ಮೊಮ್ಮಕ್ಕಳ ಸಹಾಯದಿಂದ ಮತ ಚಲಾಯಿಸಿದ್ದು, ರಜೆಯ ಮಜ ಅನುಭವಿಸುತ್ತಾ ಕಾಲಕಳೆದ ಸೋಮಾರಿ ಮತದಾರರು ನಾಚಿಕೆಯಿಂದ ತಲೆತಗ್ಗಿಸುವಂತಾಗಬೇಕು.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ.

ಚುನಾವಣೆ ದಿನಾಂಕ ಘೋಷಣೆ  ಆದಾಗಿನಿಂದ ಚುನಾವಣೆ ಮುಗಿಯುವವರೆಗೂ ಪತ್ರಿಕೆಯ ಎಲ್ಲಾ ಪುಟಗಳಲ್ಲೂ ರಾಜಕೀಯದ್ದೇ ಸುದ್ದಿ. ಮುಖ್ಯ ಪುಟಗಳಲ್ಲಿ ಮಾತ್ರ ಪ್ರಕಟವಾಗಿದ್ದರೆ ಸಹಿಸಿಕೊಳ್ಳಬಹುದಿತ್ತು. ಆದರೆ ಮನಸ್ಸಿಗೆ ಹಿತ ನೀಡುವ ಬೈಟು ಕಾಫಿ ಸಂಚಿಕೆಯಲ್ಲೂ ಕೊಳಕು ರಾಜಕೀಯಗಳ ಹಳೆಯ ಸುದ್ದಿಗಳನ್ನು ಪ್ರಕಟಿಸಿ ಶಿಕ್ಷೆ ನೀಡಿದ್ದೀರ.   
-ಫ್ಯಾಷನ್ ಡಿಸೈನರ್ ಮಧು, ಹಾಸನ 99457 37427


ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು:  anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement