ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಮಿತಿಯ ಅರಿವಿರಲಿ

ಪಳನಿಸ್ವಾಮಿ ಸದಾಶಿವಂ ಭಾರತದ 40...

Vishwanath S
Updated On : 27 Apr 2014, 1:25 am

ಪಳನಿಸ್ವಾಮಿ ಸದಾಶಿವಂ ಭಾರತದ 40ನೇ ಮುಖ್ಯನ್ಯಾಯಮೂರ್ತಿಯಾಗಿ 19 ಜುಲೈ 2013ರಿಂದ-26 ಏಪ್ರಿಲ್ 2014ರ ವರೆಗೆ ಕಾರ್ಯನಿರ್ವಹಿಸಿದವರು. ಅಲ್ಲದೆ, 18 ವರ್ಷಗಳ ಕಾಲ ಹಲವು ಹೈಕೋರ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿ, ನಟ ಸಂಜಯ್ ದತ್ ಅಪರಾಧಿಯಾಗಿ ಜೈಲು ಸೇರಲು ಕಾರಣರಾಗಿ ಸುದ್ದಿಯಾದವರು. ಅವರ ಅಧಿಕಾರಾವಧಿಯಲ್ಲೇ ಕಾಂಗ್ರೆಸ್‌ನ 2ಜಿ ಹಗರಣ, ಕಲ್ಲಿದ್ದಲು ಹಗರಣಗಳು ಸುಪ್ರೀಂಕೋರ್ಟ್‌ನಲ್ಲಿ ಹೆಚ್ಚು ಸಂಕಷ್ಟಕ್ಕೇ ಸಿಕ್ಕಿಬೀಳುತ್ತಾ ಸಾಗಿದವು. ತಮ್ಮ ಹುದ್ದೆಯಿಂದ ಇದೇ ಶುಕ್ರವಾರದಂದು ನಿವೃತ್ತಿ ಪಡೆದಿರುವ ಅವರು ಹಲವು ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ಸಂಗ್ರಹಿತ ಭಾಗ ಇಲ್ಲಿದೆ...

*  ನಾನು ತಮಿಳುನಾಡಿನ ಕಡಪ್ಪನಲ್ಲೂರ್ ಎಂಬ ಹಳ್ಳಿಯಿಂದ ಬಂದವನು. ನನ್ನ ಕುಟುಂಬದಲ್ಲಿ ಮತ್ತು ಹಳ್ಳಿಯಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ ನಾನೇ. ಹೈಕೋರ್ಟ್‌ಗಳಲ್ಲಿ ಒಟ್ಟು ಹದಿನೆಂಟುವರೆ ವರ್ಷಗಳನ್ನು ಕಳೆದಿದ್ದೇನೆ. ಹೈಕೋರ್ಟ್ ನ್ಯಾಯಾಧೀಶನಾಗಿದ್ದ ಅವಧಿಯಲ್ಲಿ ಒಂದೇ ಒಂದು ಬಾರಿಯೂ ರಜೆ ಪಡೆದುಕೊಂಡವನಲ್ಲ, ಇನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶನಾಗಿದ್ದಾಗ ಕೇವಲ ಒಂದು ದಿನ ರಜೆ ಪಡೆದಿದ್ದೇನೆ.

*  ನಾನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಹೈಕೋರ್ಟ್‌ಗಳಲ್ಲಿ 30 ಪ್ರತಿಶತ ಹುದ್ದೆಗಳು ಖಾಲಿಯಿದ್ದವು, ಅದೀಗ 28 ಪ್ರತಿಶತಕ್ಕೆ ಇಳಿದಿದೆ. ಸುಪ್ರೀಂಕೋರ್ಟ್‌ಗೆ ನಾಲ್ಕು ಮುಖ್ಯನ್ಯಾಯಾಧೀಶರು, ಹೈಕೋರ್ಟ್‌ಗಳಲ್ಲಿ 6 ಮುಖ್ಯ ನ್ಯಾಯಾಧೀಶರು ಮತ್ತು 89 ನ್ಯಾಯಾಧೀಶರ ನೇಮಕವಾಗಿದೆ. ಸುಪ್ರೀಂಕೋರ್ಟ್‌ನ ಇತಿಹಾಸದಲ್ಲೇ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆದು, ನಾವು ಸುಮಾರು 71.78 ಲಕ್ಷ ಕೇಸುಗಳನ್ನು ವಿಲೇವಾರಿ ಮಾಡಿದ್ದೇವೆ.   

*  ನ್ಯಾಯಾಧೀಶರು ತೀರ್ಪು ನೀಡುವುದರಲ್ಲಿ ವಿಳಂಬ ಮಾಡುತ್ತಾರೆ ಎನ್ನುವುದು ಸುಳ್ಳು. ಶಿಸ್ತು ಮತ್ತು ಸಮಯಪಾಲನೆಯ ವಿಷಯಕ್ಕೆ ಬಂದರೆ, ನ್ಯಾಯಾಂಗದ ಎಲ್ಲಾ ಸ್ತರಗಳಲ್ಲೂ ಅದನ್ನು ಪಾಲಿಸಲಾಗುತ್ತಿದೆ.

*  ನಾನು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಾಗ, ಬಾಕಿ ಇದ್ದ ಪ್ರಕರಣಗಳ ಸಂಖ್ಯೆ 67, 964ರಷ್ಟಿತ್ತು, ಈಗ ಅದು 63, 625ಕ್ಕೆ ಇಳಿದಿದೆ. ಒಂಬತ್ತುವರೆ ತಿಂಗಳಲ್ಲಿ ಸಂವಿಧಾನ ಪೀಠಕ್ಕೆ ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ 10. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದಿತ್ತಾದರೂ, ಪ್ರಸಕ್ತ ಸನ್ನಿವೇಶದಲ್ಲಿ ದಾಖಲಾಗುತ್ತಿರುವ ಪ್ರಕರಣಗಳೂ ಹಿಂದೆಂದಿಗಿಂತಲೂ ಹೆಚ್ಚಾಗಿವೆ ಎನ್ನುವುದನ್ನೂ ನೀವು ಗಮನಿಸಬೇಕಾಗುತ್ತದೆ.  

*  ಅಧಿಕಾರಾವಧಿಯಲ್ಲಿ ಎಂದಿಗೂ ನಮ್ಮ ಮೇಲೆ ರಾಜಕೀಯ ಒತ್ತಡ ಬಂದಿಲ್ಲ. ಆದರೆ ಹಲವಾರು ರಾಜಕೀಯ ಪ್ರಕರಣಗಳನ್ನು ನಾವು ನಿಭಾಯಿಸಿದ್ದೇವೆ, ಆಗಲೂ ಕೂಡ ಯಾವ ಸಮಸ್ಯೆಗಳೂ ಎದುರಾಗಲಿಲ್ಲ.

*  ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಅಪಸ್ವರಗಳಿವೆ. ಅದು ಪಾರದರ್ಶಕವಾಗಿಲ್ಲ ಎನ್ನಲಾಗುತ್ತದೆ. ಆದರೆ ನನ್ನ ಪ್ರಕಾರ ಈಗಿರುವ ನೇಮಕಾತಿ ವ್ಯವಸ್ಥೆ ಉತ್ತಮವಾಗೇ ಇದೆ. ಈಗಿರುವ ವ್ಯವಸ್ಥೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸುವ ಅವಕಾಶವೂ ಇದೆ. ಆದರೆ ಒಂದಂತೂ ನಿಜ, ನೇಮಕಾತಿಯ ವೇಳೆ ಬಹಳಷ್ಟು ಹಾಲಿ ನ್ಯಾಯಾಧೀಶರನ್ನು ಸಂಪರ್ಕಿಸಿ, ಅವರ ಸಲಹೆ ಪಡೆಯಬೇಕಾದ ಅವಶ್ಯಕತೆಯಿದೆ. ಆದರೆ ಈ ಕಾರಣಕ್ಕಾಗಿ ರಾಷ್ಟ್ರೀಯ ನ್ಯಾಯಾಂಗ ಆಯೋಗವನ್ನು ರಚಿಸುವ ಅಗತ್ಯವೇನೂ ಇಲ್ಲ. ಏಕೆಂದರೆ, ನ್ಯಾಯಾಧೀಶರ ಸಂಘಕ್ಕೆ ಅರ್ಹ ವ್ಯಕ್ತಿಗಳನ್ನು ಗುರುತಿಸುವ ಕ್ಷಮತೆಯಂತೂ ಇದ್ದೇ ಇದೆ. ಹೈಕೋರ್ಟ್ ಮಟ್ಟದಲ್ಲಿ, ಮುಖ್ಯನ್ಯಾಯಾಧೀಶರು ಹೊರಗಿನವರಾಗಿದ್ದುಕೊಂಡು, ಬಾರ್ ಕೌನ್ಸಿಲ್‌ನ ಹಿರಿಯ ಸದಸ್ಯರೊಂದಿಗೆ ಚರ್ಚಿಸಬೇಕು. ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಈ ಚರ್ಚೆ ಕೇವಲ ಮೂವರು ಮುಖ್ಯ ನ್ಯಾಯಾಧೀಶರ ಮಧ್ಯೆಯಷ್ಟೇ ಸೀಮಿತವಾಗಬಾರದು. ಅವರೂ ಕೂಡ ಬಾರ್ ಕೌನ್ಸಿಲ್‌ನ ಹಿರಿಯ ಸದಸ್ಯರೊಂದಿಗೆ ನೇಮಕಾತಿಯ ಬಗ್ಗೆ ಮಾತುಕತೆ ನಡೆಸಬೇಕು.

*  ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ನಿವೃತ್ತರಾದ ನಂತರ ಬೇರೆ ಹುದ್ದೆಗಳನ್ನು ನಿರ್ವಹಿಸುವುದರಲ್ಲಿ(ಲೋಕ್‌ಪಾಲ್ ಅಥವಾ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ಸದಸ್ಯರಾಗುವುದರಲ್ಲಿ) ತಪ್ಪೇನೂ ಇಲ್ಲ. ಮುಖ್ಯನ್ಯಾಯಾಧೀಶರು ನಿವೃತ್ತಿ ಪಡೆದ ನಂತರ ಮೂರು ವರ್ಷಗಳು ಮನೆಯಲ್ಲೇ ಇರಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಲೋಕ್‌ಪಾಲ್ ನೇಮಕಾತಿ ಪ್ರಕ್ರಿಯೆ ತನ್ನಲ್ಲೇ ಒಂದು ಸವಾಲಾಗಿದೆ. ಇನ್ನು ನಾನು ಆ ಹುದ್ದೆ ಪಡೆಯಲು  ಪ್ರಯತ್ನಿಸುತ್ತಿದ್ದೇನೆ ಎನ್ನುವುದೆಲ್ಲ ಸುಳ್ಳು ಸುದ್ದಿ. ಒಂದು ವೇಳೆ ಆ ಹುದ್ದೆ ನಿಭಾಯಿಸಲು ಆಹ್ವಾನ ಬಂತೆಂದರೆ ಅದನ್ನು ನಿಸ್ಸಂಶಯವಾಗಿಯೂ ಒಪ್ಪಿಕೊಳ್ಳುತ್ತೇನೆ. ನ್ಯಾಯಾಧೀಶರಾಗಿ ನಮಗೆ ಸಂಬಳ, ಸವಲತ್ತುಗಳೆಲ್ಲ ಸರ್ಕಾರದಿಂದ ಸಿಗುತವೆ ಎನ್ನುವುದು ನಿಜ. ಆದರೆ ಆ ಕಾರಣಕ್ಕಾಗಿ ನಾವೆಲ್ಲ ಸರ್ಕಾರದ ಪರವಾಗಿರುತ್ತೇವೆ ಎಂದು ಭಾವಿಸಿಬಿಡಬೇಕೇ?

*  ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 65ರಿಂದ 70ಕ್ಕೆ ಹೆಚ್ಚಿಸಬೇಕು ಎನ್ನುವುದಕ್ಕೆ ನನ್ನ ಸಹಮತವಿಲ್ಲ.
 
*  ಕೆಲವು ನಿರ್ಧಾರಗಳಲ್ಲಿ ನ್ಯಾಯಾಂಗ ಹದ್ದು ಮೀರುತ್ತದೆ ಎನ್ನುವ ಟೀಕೆಗಳಿವೆ. ಆದರೆ ಕೆಲವೊಮ್ಮೆ ಪ್ರಕರಣಗಳ ಪ್ರಖರತೆಯ ಮೇಲೆಯೂ ಇವೆಲ್ಲ ಅವಲಂಬಿತವಾಗಿರುತ್ತದೆ. ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಹೈಕೋರ್ಟ್ ನೋಡಿಕೊಳ್ಳುತ್ತದೆ. ಒಂದು ವೇಳೆ ಪ್ರಕರಣ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಪಟ್ಟಿದ್ದಾದರೆ ಸುಪ್ರೀಂ ಕೋರ್ಟ್ ಅದನ್ನು ಸ್ವೀಕರಿಸುತ್ತದೆ. ಅದಾಗ್ಯೂ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ತಮ್ಮ ಮಿತಿಯ ಅರಿವಿರಬೇಕು.   

*  ಪ್ರಾದೇಶಿಕ ಭಾಷೆಗಳನ್ನು ಅಧೀನ ನ್ಯಾಯಾಲಯದ ಮಟ್ಟದಲ್ಲಿ ಬಳಸುವಂತೆ ಮಾಡುವುದರಲ್ಲಿ ಕಷ್ಟವೇನೂ ಆಗದು. ಆದರೆ ಈ ರೀತಿಯ ವಿಷಯಗಳಿಗೆ ಆಯಾ ರಾಜ್ಯ ಸರ್ಕಾರಗಳೇ ಸರಿಯಾದ ಮಾದರಿಯೊಂದನ್ನು ಮತ್ತು ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಇನ್ನು ಪ್ರಾದೇಶಿಕ ಭಾಷೆಗಳನ್ನು ಹೈಕೋರ್ಟ್‌ಗಳಲ್ಲಿ ಅನುಷ್ಠಾನಕ್ಕೆ ತರುವ ವಿಷಯಕ್ಕೆ ಬಂದರೆ, ಬಾರ್ ಕೌನ್ಸಿಲ್, ನ್ಯಾಯಾಂಗ ಮತ್ತು ಸರ್ಕಾರ ಒತ್ತಟ್ಟಿಗೆ ಕುಳಿತು ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.  

*  ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟರು ಮತ್ತು ರಾಜಕೀಯ ಬೆಂಬಲವಿರುವವರು ಬರುತ್ತಿದ್ದಾರೆ ಎಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಭಾವಿಸುತ್ತವೆಂದರೆ, ಆ ತಪ್ಪಿಗೆ ಅವುಗಳೇ ಹೊಣೆ ಹೊರಬೇಕು! ಒಬ್ಬ ಅಭ್ಯರ್ಥಿಯ ಹಿನ್ನೆಲೆಯನ್ನು(ಒಂದು ವೇಳೆ ಆತ ಭ್ರಷ್ಟನಾ ಎನ್ನುವುದನ್ನು) ಪರಿಶೀಲಿಸುವ ಕೆಲಸವನ್ನು ಸರ್ಕಾರ ಗುಪ್ತಚರ ದಳಗಳಿಗೆ ಕೊಡಬಹುದು. ಇಂಟೆಲಿಜೆನ್ಸ್ ಬ್ಯೂರೋದ ಅಧಿಕಾರಿಗಳು, ಸರಿಯಾಗಿ ತನಿಖೆ ನಡೆಸಿ, "ಈ ಅಭ್ಯರ್ಥಿ ನ್ಯಾಯಾಧೀಶನಾಗಲು ಅರ್ಹನಲ್ಲ" ಎಂದು ಹೇಳಬೇಕು. ಆದರೆ ಈ ಕೆಲಸವಾಗುತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತು ಗುಪ್ತಚರದಳಗಳನ್ನು ಸರಿಯಾಗಿ ಬಳಸಿಕೊಂಡವೆಂದರೆ, ನಿಸ್ಸಂಶಯವಾಗಿಯೂ ಭ್ರಷ್ಟರೆಲ್ಲ ನ್ಯಾಯಾಧೀಶರಾಗುವ ಅಪಾಯ ತಪ್ಪುತ್ತದೆ.

*  ಒಂದು ವೇಳೆ ಕಾರ್ಯಾಂಗ ವಿಫಲವಾದರೆ ಮಧ್ಯಪ್ರವೇಶಿಸಿ ಅದನ್ನು ತಿದ್ದುವ, ಸರಿದಾರಿಗೆ ನಡೆಸುವ ಜವಾಬ್ದಾರಿ ನ್ಯಾಯಾಂಗಕ್ಕಿದ್ದೇ ಇರುತ್ತದೆ. ಪಿಐಎಲ್(ಸಾರ್ವಜನಿಕ ಹಿತಾಸಕ್ತಿ) ಎಂಬ ಅಸ್ತ್ರ ದುಷ್ಟರ ಕೈಗೆ ಸಿಲುಕಿ ದುರ್ಬಳಕೆಯಾಗುವ ಸಾಧ್ಯತೆಯೂ ಇದೆ. ಪಬ್ಲಿಕ್ ಲಿಟಿಗೇಶನ್ ಹೆಸರಿನಲ್ಲಿ ಈಗ ಸಲ್ಲಿಕೆಯಾಗುತ್ತಿರುವ ಬಹಳಷ್ಟು ಅರ್ಜಿಗಳು ಪ್ರೈವೇಟ್ ಇಂಟರೆಸ್ಟೇ(ಸ್ವಹಿತಾಸಕ್ತಿ) ಆಗುತ್ತಿವೆ.

*  ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಿಗೆ, ಅವರ ಜ್ಞಾನ ಮತ್ತು ಅನುಭವಕ್ಕೆ ತಕ್ಕಂತೆ ಬೆಲೆ ಸಿಗುತ್ತಿದೆ. ಆದರೆ ಹಿರಿಯರು ಎಂದಾಕ್ಷಣ ಅವರ ಕೇಸುಗಳನ್ನೇ ಮೊದಲು ಕೈಗೆತ್ತಿಕೊಳ್ಳಬೇಕು ಎನ್ನುವುದು ತಪ್ಪು. ಅವರೆಲ್ಲ ಸೇರಿ ತಾವೇ ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement