ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಾರ್ಪೊರೇಟ್ ಕಾರ್ಯವಿಧಾನ ಸರ್ಕಾರಿ ಯೋಜನೆಗಳಲ್ಲೂ ಬರಲಿ

ಒಂದು ಕಾರ್ಪೊರೇಟ್ ಸಂಸ್ಥೆಯ ನಿರ್ವಹಣಾ ವಿಧಾನ, ನಮ್ಮ ಸರ್ಕಾರಿ ಯೋಜನೆಗಳ...

Mainashree
Updated On : 27 Apr 2014, 9:52 am

ಒಂದು ಕಾರ್ಪೊರೇಟ್ ಸಂಸ್ಥೆಯ ನಿರ್ವಹಣಾ ವಿಧಾನ, ನಮ್ಮ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಬಹಳಷ್ಟು ಪಾಠ ಕಲಿಸಬಲ್ಲದು. ಉದಾಹರಣೆಗೆ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಗ್ರಾಮಸ್ಥರಿಗೆ ಶೌಚಾಲಯಗಳನ್ನು ನೀಡಬೇಕಾದರೆ ಒಂದು ವ್ಯವಸ್ಥಿತ ನಿರ್ವಹಣಾ ತಂತ್ರ (ಮ್ಯಾನೇಜ್ಮೆಂಟ್ ಸ್ಟ್ರಾಟೆಜಿ) ತಯಾರಿಸಿತ್ತು. ನಿಗದಿಪಡಿಸಿದ ಆರ್ಥಿಕ ಸಂಪನ್ಮೂಲಗಳನ್ನು ಆಧರಿಸಿ ಗುರಿಯನ್ನು ಹಾಕಿಕೊಳ್ಳುವುದು, ಅದರಂತೆ ಹತ್ತು ಸಾವಿರ ಶೌಚಾಲಯಗಳನ್ನು ನಿರ್ಮಿಸಲು ಯೋಚಿಸಿದ ನಂತರ ಹಳ್ಳಿಗಳ/ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತುಂಬಾ ಅಚ್ಚುಕಟ್ಟಾಗಿ ತಯಾರಿಸುವುದು, ಪ್ರಚಾರ ಹಾಗೂ ತರಬೇತಿ ಮೂಲಕ ಜನಜಾಗೃತಿ ಮೂಡಿಸುವುದು, ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಮತ್ತು ತಾಂತ್ರಿಕ ಸಹಾಯದಿಂದ ಸಮಯಬದ್ಧವಾಗಿ ಮೇಲ್ವಿಚಾರಣೆ ಮತ್ತು ಪ್ರಗತಿ ಸಾಧಿಸುವುದು ಅದರ ಮುಖ್ಯ ಅಂಶಗಳಾಗಿದ್ದವು.
ಮೊಟ್ಟಮೊದಲನೆಯದಾಗಿ, ಗ್ರಾಮಗಳನ್ನು ಆಯ್ಕೆ ಮಾಡಲು ಕೆಲವು ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಉದಾ: ನೀರಿನ ಸರಬರಾಜು ಇದೆಯೇ? ದೇವಸ್ಥಾನದ ಸಹಕಾರ ಯಾವರೀತಿ ಇದೆ? ಗ್ರಾಮವು ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯಲ್ಲಿದೆಯೇ? ಗ್ರಾಮದ ಪ್ರವಾಸೋದ್ಯಮದ ಮಹತ್ವ, ಊರಿನ ಜನರ ಆಸಕ್ತಿ, ಗ್ರಾಮದ ನಾಯಕತ್ವ, ಹಳೆಯ ಹೂಡಿಕೆಗಳು ಯಶಸ್ವಿಯಾಗಿವೆಯೇ? ಗ್ರಾಮದಲ್ಲಿನ ಶೌಚಾಲಯಗಳು ಎಷ್ಟಿವೆ? ಶೌಚಾಲಯ ಬಳಸಲು ಸಿದ್ಧರಿರುವವರ ಸಂಖ್ಯೆ, ಗ್ರಾಮದ ಭರವಸೆಯ ಅಂಕ ಎಷ್ಟಿದೆ? ಎನ್ನುವುದನ್ನೆಲ್ಲ ಗಮನಿಸಲಾಯಿತು.
ಸಾಮಾನ್ಯವಾಗಿ ಸರ್ಕಾರದ ಯೋಜನೆಗಳಲ್ಲಿ ಬರುವ ಹಣವನ್ನು ಸರಿಸಮಾನವಾಗಿ ಜಿಲ್ಲೆ/ತಾಲೂಕು/ ಗ್ರಾಮ ಪಂಚಾಯತ್‌ಗಳಲ್ಲಿ ಹಂಚುವ ಸಂಪ್ರದಾಯ ಇರುತ್ತದೆ. ಏಕೆಂದರೆ ಎಲ್ಲಾ ಕ್ಷೇತ್ರದ ಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಕೇಳುತ್ತಾರೆ. ಆದರೆ ಎಲ್ಲಿ ಹೆಚ್ಚಿನ ಅವಶ್ಯಕತೆ ಇದೆ ಹಾಗೂ ಯಶಸ್ಸಿನ ಸಾಧ್ಯತೆ ಇದೆ, ಅದರ ವಿಶ್ಲೇಷಣೆಯನ್ನು ಮಾಡಿ, ಹಂತ ಹಂತವಾಗಿ ಕ್ಷೇತ್ರದ ಆಯ್ಕೆ ಮಾಡಿದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ. ಮತ್ತು ಅಂತಹ ಮಾದರಿಯನ್ನು ಇಟ್ಟುಕೊಂಡು ಎರಡನೇ ಅಥವಾ ಮೂರನೇ ಹಂತದ ಅನುಷ್ಠಾನ ಮಾಡಿದಲ್ಲಿ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಇಲ್ಲವಾದಲ್ಲಿ ಕೆಲವು ಕಡೆ ಯಶಸ್ಸು ಮತ್ತು ಕೆಲವು ಕಡೆ ವೈಫಲ್ಯ ಬರುವುದು ಸ್ವಾಭಾವಿಕ. ಇಂತಹ ಸಮಯದಲ್ಲಿ ಜನರು ವೈಫಲ್ಯವನ್ನು ಹೆಚ್ಚಾಗಿ ನೋಡುತ್ತಾರೆ ಮತ್ತು ಮಾಧ್ಯಮಗಳಿಗೆ ವೈಫಲ್ಯವೇ ಎದ್ದು ಕಾಣುತ್ತದೆ. ಇದರಿಂದ ಯೋಜನೆಯನ್ನು ಅನುಷ್ಠಾನಗೊಳಿಸುವವರು ಧೃತಿಗೆಡುತ್ತಾರೆ, ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ.
ಹಳ್ಳಿಗಳ ಆಯ್ಕೆ ಆದ ಮೇಲೆ ಕುಟುಂಬಗಳ ಆಯ್ಕೆಗೆ ಈ ಕೆಳಕಂಡ ಮಾನದಂಡಗಳನ್ನು ನಿರ್ಧರಿಸಲಾಯಿತು.
ಏನೂ ತಕರಾರು ಇಲ್ಲದ ಜಾಗ ಇದೆಯೇ? ಸಾಕಷ್ಟು ನೀರಿನ ಅನುಕೂಲ ಇದೆಯೇ? ಕನಿಷ್ಠ ಇಬ್ಬರಾದರೂ ಸಾಲ ಮರುಪಾವತಿ ಬಗೆಗೆ ಭರವಸೆ ಕೊಟ್ಟಿದ್ದಾರೆಯೇ? ಫಲಾನುಭವಿಗೆ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದರಲ್ಲಿ ಪೂರ್ತಿ ಆಸಕ್ತಿ ಇದೆಯೇ? ಸತತವಾಗಿ ಶೌಚಲಯವನ್ನು ಉಪಯೋಗಿಸಲು ಇವರಿಗೆ ಒಪ್ಪಿಗೆ ಇದೆಯೇ?
ಅಕ್ಕ-ಪಕ್ಕದವರದ್ದೇನಾದರೂ ತೊಂದರೆ ಇದೆಯೇ? ಮೊದಲು ಶೌಚಾಲಯ ನಿರ್ಮಾಣಕ್ಕಾಗಿ ಸೌಲಭ್ಯ ತೆಗೆದುಕೊಂಡಿದ್ದಾರೆಯೇ?
ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದು, ಅದರಲ್ಲಿಯೂ ಬಡವರ ಸಂಖ್ಯೆ ಹೆಚ್ಚು ಇರುವುದರಿಂದ ಯಾವಾಗಲೂ ಯಾವುದೇ ಸೌಲಭ್ಯವನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ನೀಡಲು ಪ್ರಾರಂಭ ಮಾಡಿದರೆ ಅದಕ್ಕಾಗಿ ಸಂಪನ್ಮೂಲಗಳಿಂದ ಅತಿ ಹೆಚ್ಚು ಬೇಡಿಕೆ ಇರುತ್ತದೆ. ಆದುದರಿಂದ ಸರಿಯಾಗಿ ಫಲಾನುಭವಿಗಳ ಆಯ್ಕೆಯನ್ನು ಮಾಡುವುದು ದೊಡ್ಡ ಸವಾಲು ಆಗಿರುತ್ತದೆ. ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಯಾವುದೇ ಫಲಾನುಭವಿಗಳ ಆಯ್ಕೆ ಆಗಬೇಕಾದರೆ ಗ್ರಾಮ ಸಭೆ ಮೂಲಕವೇ ಆಗಬೇಕೆಂದು ನಿರ್ಧರಿಸಲಾಗಿದೆ. ಆದರೆ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳ ಪ್ರಸ್ತಾವನೆ ಬಂದಿದೆಯೋ ಇಲ್ಲವೋ ಎನ್ನುವುದು ಗ್ರಾಮ ಪಂಚಾಯತ್ ವ್ಯವಸ್ಥೆ ಮೇಲೆ ನಿರ್ಧಾರವಾಗುತ್ತದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಜನರಿಗೆ ಇಂತಹ ಸೌಲಭ್ಯಗಳ ಬಗ್ಗೆ ತಿಳಿವಳಿಕೆಯನ್ನು ಯಾವುದೇ ಪಕ್ಷಪಾತ ಮಾಡದೇ ನೀಡಿದರೆ ಖಂಡಿತವಾಗಿ ಆಯ್ಕೆ ಪ್ರಕ್ರಿಯೆ ಯಶಸ್ವಿ ಆಗುತ್ತದೆ. ಆದರೆ ಕೆಲವೊಮ್ಮೆ ಆಯ್ಕೆ ಮಾಡುವಾಗ ಫಲಾನುಭವಿಗಳು ಬಡವರಾಗಿದ್ದರೂ ಅವರು ಸದರಿ ಸೌಲಭ್ಯಗಳ ಉಪಯೋಗ ಪಡೆಯಲು ಸಕ್ಷಮ ಆಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಪ್ರಾಮಾಣಿಕ ಪ್ರಕ್ರಿಯೆ ಹೆಚ್ಚಾಗಿ ನಡೆಯುವುದಿಲ್ಲ. ಉದಾಹರಣೆಗೆ ಒಂದು ಬಡ ಕುಟುಂಬದವರು ಶೌಚಾಲಯಬೇಕೆಂದು ಅರ್ಜಿ ನೀಡುತ್ತಾರೆ. ಆದರೆ ಅವರ ಹತ್ತಿರ ಶೌಚಾಲಯ ಕಟ್ಟಲು ಸ್ಥಳ ಇರುವುದಿಲ್ಲ ಅಥವಾ ಕಾರಣಾಂತರಗಳಿಂದ ಆ ಆಸ್ತಿಯನ್ನು ಪಡೆಯಲು ತಮ್ಮ ಶ್ರಮದಾನ ಅಥವಾ ಭಾಗಶಃ ಕೊಡುಗೆ ನೀಡಲು ಅವರಿಗೆ ಆಗುವುದಿಲ್ಲ. ಆಗ ಅಂತಹ ಫಲಾನುಭವಿಗಳಿಗೆ ನಿಗದಿಪಡಿಸಿದ ಹಣ ವರ್ಷಾಂತ್ಯಕ್ಕೆ ಉಪಯೋಗ ಆಗುವುದಿಲ್ಲ ಹಾಗೂ ಇನ್ನಿತರ ಸಕ್ಷಮ ಫಲಾನುಭವಿಗಳು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದರಿಂದ ಸದರಿ ಯೋಜನೆ ಬಗ್ಗೆ ಒಂದು ಕೆಟ್ಟ ಅಭಿಪ್ರಾಯ ಜನ ಸಾಮಾನ್ಯರಲ್ಲಿ ಉಂಟಾಗುತ್ತದೆ. ಇಂತಹ ಒಂದು ಸಂದರ್ಭ ಎದುರಾಗಬಾರದು ಎಂಬ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಷನ್‌ರವರು ಫಲಾನುಭವಿಗಳ ಆಯ್ಕೆಗೆ ಆದ್ಯತಾ ಪರಿಶೀಲನಾ ಪಟ್ಟಿ ಮಾಡಲು ಕೆಲವು ಷರತ್ತುಗಳನ್ನು ಅಳವಡಿಸಿಕೊಂಡಿದ್ದರು.
ಸರಿಯಾದ ಪ್ರಚಾರ ಇಲ್ಲದೆ ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ಜನರಿಗೆ ಅರಿವು ಸಿಗದೇ ಸರ್ಕಾರದ ಉದ್ದೇಶ ನೂರಕ್ಕೆ ನೂರರಷ್ಟು ಸಂಪೂರ್ಣವಾಗಿ ಈಡೇರಲು ಸಾಧ್ಯವಾಗುವುದಿಲ್ಲ.  ಆದರೆ ಈ ಯೋಜನೆಗಳ ಬಗ್ಗೆ ಬೇಡಿಕೆ ಹುಟ್ಟಿಸಿದರೆ ಜನರಿಗೆ ಆಸಕ್ತಿ ಬರುತ್ತದೆ. ವೈಯಕ್ತಿಕ ಶೌಚಾಲಯ ಯೋಜನೆ ಬಗ್ಗೆ ಸಮರ್ಪಕ ಪ್ರಚಾರವನ್ನು ಬಹುಮುಖಿ ಮಾಧ್ಯಮಗಳಿಂದ ಹಮ್ಮಿಕೊಳ್ಳಲಾಯಿತು. ಏಕೆಂದರೆ ಎಲ್ಲರೂ ಸಮಾಚಾರ ಪತ್ರಿಕೆಗಳನ್ನು ಓದುವುದಿಲ್ಲ, ಎಲ್ಲರೂ ಯಾವಾಗಲೂ ಟಿ.ವಿ. ನೋಡುವುದಿಲ್ಲ ಮತ್ತು ರೇಡಿಯೋ ಕೇಳುವುದಿಲ್ಲ. ಹಾಗಾಗಿ ಕೇವಲ ಸಾಂಪ್ರದಾಯಿಕ ಮಾಧ್ಯಮ ಮೇಲೆ ನಿರ್ಧಾರವಾದರೆ ಬಹಳಷ್ಟು ಅರ್ಹರ ಕುಟುಂಬಗಳು ಲಾಭದಿಂದ ವಂಚಿತವಾಗುವ ಸಂಭವ ಇರುತ್ತದೆ. ಆದುದರಿಂದ ಸ್ಥಳೀಯವಾಗಿ ಗ್ರಾಮಸ್ಥರ ಸ್ಥಿತಿಗತಿ ಬಗ್ಗೆ ಪ್ರಜಾಪರವಾದ ಸ್ವಯಂ-ಸೇವಾ ಸಂಸ್ಥೆಗಳೊಂದಿಗೆ ಅಥವಾ ಅವರ ಮೂಲಕ ಪ್ರಚಾರ ಹಾಗೂ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆಯನ್ನು ಹಮ್ಮಿಕೊಂಡಿದ್ದರಿಂದ ಜನರಿಗೆ ತಿಳಿವಳಿಕೆ ನೀಡುವುದು ಸಾಧ್ಯವಾಯಿತು. ಮಾತ್ರವಲ್ಲ ಸರ್ಕಾರಿ ಶಾಲಾ-ಕಾಲೇಜು ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಆಂದೋಲನ ರೂಪದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರಿಂದ ಬಡ ಕುಟುಂಬಗಳ ಪಾಲಕರಿಗೆ ಈ ವಿಷಯವನ್ನು ತಲುಪಿಸುವುದಕ್ಕೆ ಅನುಕೂಲವಾಯಿತು.
'ಪರಿಶುದ್ಧ' ಯೋಜನೆಯಲ್ಲಿ ಒಂದು ತಂತ್ರಾಂಶದ ಮೂಲಕ ಹತ್ತು ಸಾವಿರ ಫಲಾನುಭವಿಗಳ, ಪ್ರತಿಯೊಂದು ಹಂತದಲ್ಲಿ ಆಗಿರುವ ಸಾಧನೆಯನ್ನು ವಿಶ್ಲೇಷಿಸಲು ಹಾಗೂ ಕಡಿಮೆ ಪ್ರಗತಿ ಆಗಿದ್ದರೆ ಅದನ್ನು ಸರಿಪಡಿಸಲು ಮೇಲ್ವಿಚಾರಣಾ ಸಮಿತಿಯವರು ಕೂಡಲೇ ಕ್ರಮ ಜರುಗಿಸುತ್ತಾರೆ. ಯಾವುದೇ ಒಂದು ಯೋಜನೆಯನ್ನು ಅನುಷ್ಠಾನ ಮಾಡಿದಾಗ ಅದರಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಆದರೆ ಅದನ್ನು ಆಗಲೇ ಸರಿಪಡಿಸಿದರೆ ಸಮಯ ಹಾಗೂ ಸಂಪನ್ಮೂಲ ಎರಡನ್ನೂ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಯಾವುದೇ ಒಂದು ಕಾರ್ಯಕ್ರಮದಲ್ಲಿ ಮೇಲ್ವಿಚಾರಣೆ ಇಲ್ಲದೇ ಇದ್ದರೆ ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಮತ್ತು ಹೆಚ್ಚಿನ ವ್ಯಾಪ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಾಗ ಅದನ್ನು ಭೌತಿಕವಾಗಿ ಲೆಕ್ಕ ಇಡಲು ಕಷ್ಟವಾಗುತ್ತದೆ. ಆದರೆ ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ, ಕಡಿಮೆ ಪ್ರಗತಿ ಇರುವಂಥ ಭಾಗಗಳಲ್ಲಿ ಮಾತ್ರ ಆಡಳಿತ ಪಕ್ಷದವರು ಗಮನವನ್ನು ಕೊಟ್ಟರೆ ಒಟ್ಟಾರೆ ಯೋಜನೆಯ ಯಶಸ್ಸು ಉತ್ತಮವಾಗಿ ಆಗುತ್ತದೆ.
'ಪರಿಶುದ್ಧ' ಯೋಜನೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಮುಖಂಡರ ಜೊತೆಗೆ ಸಮಾಜ ಸೇವಕರಿಗೆ ಹಾಗೂ ಸ್ವಯಂ-ಸೇವಾ ಕಾರ್ಯಕರ್ತರಿಗೆ ಸರಿಯಾದ ತರಬೇತಿಯನ್ನು ನೀಡಿ ಒಂದು ಯೋಜನೆ ಯಶಸ್ವಿ ಮಾಡಲು ಗುರಿಯನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದರಿಂದ, ಎಲ್ಲರ ಸಹಭಾಗಿತ್ವದಿಂದ ಶುಚಿತ್ವವನ್ನು ಒಂದು ಆಂದೋಲನ ರೂಪದಲ್ಲಿ ಮಾಡಲು ಸಾಧ್ಯವಾಯಿತು. ಈ ಯೋಜನೆ ತಮಗಾಗಿ ಇದೆ ಹಾಗೂ ತಾವು ಇದರ ಪ್ರಯೋಜನವನ್ನು ಸರಿಯಾಗಿ ಪಡೆದರೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆಂದು ಎಂದು ಜನರಿಗೆ ಮನದಟ್ಟಾಯಿತು. ಕಾರ್ಯಕ್ರಮದ ಪ್ರಗತಿ ಪರಿಶೀಲನೆಯನ್ನು ಮಾಡುವ ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಮತ್ತು ಮೇಲ್ವಿಚಾರಣೆ ಆದಷ್ಟು ಜನರ ಸಮೀಪ ಇರುವ ಸಂಸ್ಥೆಗಳ ಮೂಲಕ ಆಗಬೇಕು. ಯಾರೋ ಒಬ್ಬ ಮೇಲ್ವಿಚಾರಕರ ಬದಲು ಸಮಿತಿಯ ಮೂಲಕ ಅಥವಾ ಗುಂಪಿನ ಮೂಲಕ ಮೇಲ್ವಿಚಾರಣೆ ಆದರೆ ಹೆಚ್ಚಿನ ಪಾರದರ್ಶಕತೆ ಇರುತ್ತದೆ.
ಕೇಂದ್ರ ಸರ್ಕಾರದ ಕಂಪೆನಿ ಕಾಯ್ದೆ, 2013ರ ಕಲಂ 135ರ ಮಾರ್ಗಸೂಚಿ ಅಡಿಯಲ್ಲಿ 500 ಕೋಟಿಗಿಂತ ಹೆಚ್ಚಿನ ಮೌಲ್ಯವುಳ್ಳ, ಸಾವಿರ ಕೋಟಿಗಿಂತ ಹೆಚ್ಚಿನ ವ್ಯವಹಾರವುಳ್ಳ ಮತ್ತು ಐದು ಕೋಟಿಗಿಂತ ಹೆಚ್ಚಿನ ನಿವ್ವಳ ಆದಾಯವುಳ್ಳ ಎಲ್ಲಾ ಉದ್ಯಮಗಳು ಕನಿಷ್ಠ ಶೇಕಡ ಎರಡರಷ್ಟು ಲಾಭಾಂಶವನ್ನು ಸಾಮಾಜಿಕ ಜವಾಬ್ದಾರಿಯುತ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಗಳಿಗೆ ಖರ್ಚು ಮಾಡಬೇಕಾಗುತ್ತದೆ.
ನಮ್ಮಲ್ಲಿ ಸಾವಿರಾರು ಉದ್ಯಮಗಳು ಕೋಟ್ಯಂತರ ರುಪಾಯಿ ಲಾಭ ಮಾಡುತ್ತವೆ. ಅವುಗಳ ಶೇಕಡ ಎರಡರಷ್ಟು ಹಣ ಮತ್ತು ಒಂದು ವ್ಯವಸ್ಥಿತ ಕಾರ್ಯತಂತ್ರವನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳೊಂದಿಗೆ ಕೈ ಜೋಡಿಸಿದಲ್ಲಿ ನಮ್ಮ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿ ಆಗಬಲ್ಲದು ಎಂದು ಭಾವಿಸುತ್ತೇನೆ.

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement