ಮತಗಟ್ಟೆಗಳಲ್ಲಿ ಶುಚಿ ಊಟ, ಹಿತ ವಾಸ್ತವ್ಯ
ನಾನು ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು,...
ನಾನು ದ.ಕ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ತಾಲ್ಲೂಕಿನಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆತದ್ದು ಬಹಳ ಸಂತೋಷದ ಸಂಗತಿ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲೂ ಚುನಾವಣೆ ಕರ್ತವ್ಯದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಾನು, ಆ ಕುರಿತ ನನ್ನ ಕಹಿ ಅನುಭವಗಳನ್ನು 2013, ಮೇ 16ರ 'ಕನ್ನಡಪ್ರಭ'ದಲ್ಲಿ ಹಂಚಿಕೊಂಡಿದ್ದೆ. 'ಚಿಲಕವಿಲ್ಲದ ಶೌಚಾಲಯ, ಬೆಳಕಿಲ್ಲದ ಬಲ್ಬುಗಳು. ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಪಾಡೇನು?' ಎಂಬ ಶೀರ್ಷಿಕೆಯಲ್ಲಿ ಹಲವು ಅವ್ಯವಸ್ಥೆಗಳನ್ನು ನಿರೂಪಿಸಿದ್ದೆ. ಆದರೆ, ಈ ಬಾರಿ ಚುನಾವಣಾ ಆಯೋಗ ವಹಿಸಿದ ಕಾಳಜಿಯನ್ನು ಪ್ರಶಂಸಿಸದೇ ಇದ್ದರೆ ಕೇವಲ ನೇತ್ಯಾತ್ಮಕ ಸಂಗತಿಗಷ್ಟೇ ನಮ್ಮ ಗಮನ ಎಂಬಂತಾಗಿಬಿಡುತ್ತದೆ. ಹೀಗಾಗಿ ಖುಷಿ-ಖುಷಿಯಲ್ಲೇ ಈ ಬಾರಿಯ ಸಿಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.
ಕಳೆದ ಬಾರಿಯಂತೆ, ಕಾರ್ಯಕ್ಷೇತ್ರದ ತಾಲ್ಲೂಕಿನಿಂದ ಬಹುದೂರ ಪಯಣಿಸುವ ಆಯಾಸ, ಮರಳುವ ಹೊತ್ತಲ್ಲದ ಹೊತ್ತಿನ ಬಗ್ಗೆ ಆತಂಕ ಮಾಯವಾಗಿ, ಸಮಾಧಾನ ಚಿತ್ತದಿಂದ ಮಹಿಳೆಯರು ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗಕ್ಕೆ ಎಲ್ಲ ಮಹಿಳೆಯರ ಪರವಾಗಿ ಧನ್ಯವಾದಗಳು.
ಈ ವರ್ಷ ಬಹುಪಾಲು ಕಡೆಗಳಲ್ಲಿ ಮತಗಟ್ಟೆಗಳ ಮೂಲಭೂತ ಸೌಕರ್ಯಗಳಲ್ಲಿ ಗಣನೀಯ ಸುಧಾರಣೆಗಳಾಗಿರುವುದು ಗಮನಕ್ಕೆ ಬಂದೀತು. ಪ್ರತಿ ಮತಗಟ್ಟೆಗೂ 20 ಲೀ. ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಿದುದು, ಈ ಬಿರುಬೇಸಿಗೆಯಲ್ಲಿ ಕರ್ತವ್ಯನಿರತ ಚುನಾವಣಾ ಸಿಬ್ಬಂದಿಗಳನ್ನು ಬಹುತೇಕ ನಿರಾಳಗೊಳಿಸಿತು. ಬಹುತೇಕ ಮತಗಟ್ಟೆಗಳು ಸರ್ಕಾರಿ ಶಾಲೆಗಳಾಗಿದ್ದ ಸಂದರ್ಭ ಅಕ್ಷರ ದಾಸೋಹ ಸೌಕರ್ಯಗಳನ್ನು ಬಳಸಿಕೊಂಡು, ಚುನಾವಣಾ ಆಯೋಗದ ಅನುದಾನದಲ್ಲಿ ಕರ್ತವ್ಯನಿರತ ಮತಗಟ್ಟೆ ಅಧಿಕಾರಿಗಳಿಗೆ ಊಟ-ತಿಂಡಿಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಯವರ ಮತ್ತು ಶಿಕ್ಷಣ ಇಲಾಖೆಯ ವಿಶೇಷ ಸೂಚನೆ ಇದ್ದ ಕಾರಣ, ಶುಚಿ-ರುಚಿಯಾಗಿ ಬಿಸಿಬಿಸಿಯಾದ ಊಟವು ಲಭಿಸುವಂತಾಯಿತು. ಅಗತ್ಯವಿದ್ದವರಿಗೆ ಕುಡಿಯಲು ಬಿಸಿ ನೀರೂ ಸಿಗುವಂತಾಯಿತು. ನಾನು ಪತ್ರಿಕೆಗಳಲ್ಲಿ ಓದಿ ತಿಳಿದ ಹಾಗೆ, ಬಹುತೇಕ ಮಂದಿಯಲ್ಲಿ ಕೇಳಿ ತಿಳಿದ ಹಾಗೆ ಈ ಶುದ್ಧ ಕುಡಿಯುವ ನೀರು ಅಕ್ಷರ ದಾಸೋಹ ಸಹಕಾರದೊಂದಿಗೆ ಊಟದ ವ್ಯವಸ್ಥೆ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ. ಇಂತಹದೊಂದು ಸುವ್ಯವಸ್ಥೆಗೆ ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಅಭಿನಂದನೆಗಳು.
ಬೆಳ್ತಂಗಡಿಯಂತಹ ಒಂದೊಂದು ತಾಲ್ಲೂಕಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಅನುಪಾಲನೆಯಲ್ಲಿ ತೊಡಕಾದರೂ ಉಳಿದಂತೆ ದ.ಕ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿರುವುದು. ಅಕ್ಷರ ದಾಸೋಹ ಸೌಕರ್ಯಗಳಿಲ್ಲದ ಕಡೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಊಟದ ವಿತರಣೆಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಅಂಶಗಳಾಗಿವೆ. ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಚುನಾವಣಾಧಿಕಾರಿಗಳ ಮೂಲಭೂತ ಅಗತ್ಯಗಳ ಲಭ್ಯತೆಗೆ ಆದ್ಯತೆ ನೀಡಿ ವಿಶೇಷ ಗಮನ ಹರಿಸಿದ ಸಂಬಂಧಪಟ್ಟ
ಜಿಲ್ಲಾಧಿಕಾರಿಯವರ ಕಾಳಜಿಗೂ, ಇವುಗಳ ಸಮರ್ಪಕ ಅನುಷ್ಠಾನದಲ್ಲಿ ವಿವಿಧ ಇಲಾಖೆಗಳ ಪರಿಶ್ರಮಕ್ಕೂ ಮನದಾಳದ ವಂದನೆಗಳು.
ನನಗೆ ಕರ್ತವ್ಯ ನಿರ್ವಹಣೆಗೆ ಲಭಿಸಿದ ಗೋಳ್ತಮಜಲಿನ ಪಂಚಾಯತ್ ಕೂಡ ಒಳಗೊಂಡಂತೆ ಬಹುತೇಕ ಮತಗಟ್ಟೆಗಳು ಸ್ವಚ್ಛತೆಯಿಂದ ಕೂಡಿದ್ದವು. ವಿದ್ಯುಚ್ಛಕ್ತಿ, ಶೌಚಾಲಯ ಒಳಗೊಂಡಂತೆ ಅಗತ್ಯ ಸೌಕರ್ಯಗಳಿದ್ದುದು, ಮತಗಟ್ಟೆಯ ಬಿ.ಎಲ್.ಓ.ರವರ ಉತ್ತಮ ಸ್ಪಂದನೆಯೂ ಸೇರಿದಂತೆ ಎಲ್ಲವೂ ಈ ವರ್ಷದ ಚುನಾವಣಾ ಕರ್ತವ್ಯವನ್ನು ಸವಿ ಅನುಭವವಾಗಿಸಿತು. ಮಸ್ಟರಿಂಗ್ ಡಿ ಮಸ್ಟರಿಂಗ್ ಕೂಡ ಯಾವ ಗೊಂದಲಕ್ಕೂ ಒಳಗಾಗದಂತೆ ಅಚ್ಚುಕಟ್ಟಾಗಿದ್ದು ನಿರೀಕ್ಷೆಗೂ ಮೀರಿ ಒಳ್ಳೆಯ ಸೌಲಭ್ಯ ಸ್ಪಂದನೆಗಳು ದೊರಕಿ ಮುಂಬರುವ ಚುನಾವಣಾ ಕರ್ತವ್ಯಗಳನ್ನು ನಿಶ್ಚಿಂತೆಯಿಂದ ಎದುರುಗಾಣುವ ಭರವಸೆಯನ್ನು ಈ ಚುನಾವಣೆ ನೀಡಿತು.
ಆಧುನಿಕ ವಿದ್ಯುನ್ಮಾನ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು, ಮತಗಟ್ಟೆ ಅಧಿಕಾರಿಗಳ ಯೋಗಕ್ಷೇವುದ ಬಗ್ಗೆ ಮುತುವರ್ಜಿಯಿಂದ ಕೇಳುತ್ತಿದ್ದುದು ಕೆಲವೊಂದು ಮಾದರಿ ಮತಗಟ್ಟೆಗಳ ಮೂಲಕ ಮತದಾರ ಸ್ನೇಹೀ ವಾತಾವರಣ ಕಲ್ಪಿಸಿದುದು ಮತಗಟ್ಟೆ ಅಧಿಕಾರಿಗಳ ಗೌರವಧನವನ್ನು ಹೆಚ್ಚಿಸಿದುದು ಎಲ್ಲವೂ ಚುನಾವಣಾ ಆಯೋಗದ ಬಗ್ಗೆ ಮೆಚ್ಚತಕ್ಕ ಅಂಶಗಳಾಗಿವೆ.
ವಿದ್ಯಾ ಕಾರ್ಕಳ