ನಾ ಕಟ್ಟೋ ರಂಗದ ಮೇಲೆ ನಾನೊಬ್ನೇ ಕುಣಿಯೋ ಸ್ಥಿತಿ
ಟೈಮು ಹೆಂಗೆಲ್ಲ ಚೇಂಜ್ ಆಗಿಬಿಡುತ್ತೆ ಮತ್ತೆ ಎಷ್ಟೆಲ್ಲ ಫಾಸ್ಟ್ ಆಗಿ ಅಂತ ಅರ್ಥ ಆಗಬೇಕು ಅಂದ್ರೆ ನೀವು ನನ್ನ ಹೆಸರು ಕೇಳಬೇಕು. ನಾನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತಾಡ್ತಿರೋದು.... ಐ ಮೀನ್, ನನಗೆ ನಾನೇ ಮಾತಾಡ್‌ಕೊಳ್ತಿರೋದು. ಶ್.. ಯಾರಿಗೂ ಹೇಳ್ಬೇಡಿ! ಏನ್ ಮಾಡೋದು, ಬೇರೆ ಯಾರೂ ನಮ್ಮ ಮಾತು ಕಿವಿಗೆ ಹಾಕಿಕೊಳ್ಳದ ಸ್ಥಿತಿ ಬಂದಾಗ ನಮಗೆ ನಾವೇ ಮಾತಾಡ್ಕೋಬೇಕಲ್ಲ?
ಈ ಅರವಿಂದ ಕೇಜ್ರಿವಾಲ್ ಮತ್ತು ಆಪ್‌ನ ಏರುಗತಿ ಆದಾಗ ಅದನ್ನು ಬೆಂಬಲಿಸಿದವರೆಲ್ಲ ಹೀಗೊಂದು ವಿಶ್ಲೇಷಣೆ ಸುತ್ತಿದ್ರು.. 'ಇಲ್ಲೀವರೆಗೆ ಇಡೀ ರಾಷ್ಟ್ರ ರಾಜಕಾರಣ ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ ಎಂಬ ಚರ್ಚೆಯಲ್ಲೇ ಇತ್ತು. ದೆಹಲಿ ವಿಧಾನಸಭೆಯ ಚುನಾವಣಾ ಸಾಧನೆ ಮೂಲಕ ಅಂಥದೊಂದು ಚರ್ಚಾಸೌಧವನ್ನೇ ಕಂಪಿಸುವಂತೆ ಮಾಡಿರುವುದು ಆಪ್‌ನ ಹೆಗ್ಗಳಿಕೆ. ಅದು ಜನರೆದುರಿನ ಆಯ್ಕೆಯನ್ನೇ ಹಿಗ್ಗಿಸಿದೆ' ಅಂತಂದ್ರು. ಆದರೆ ಈ ಪಂಡಿತರ್ಯಾರೂ ನಮ್ಮಂಥವರ ವೇದನೆ ಗಮನಿಸಲೇ ಇಲ್ಲ ನೋಡಿ. ನೀವೇ ನೆನಪು ಮಾಡಿಕೊಳ್ಳಿ. ಈ ಕೇಜ್ರಿವಾಲ್ ರಾಜಕೀಯ ಅಖಾಡಕ್ಕೆ ಬರುವುದಕ್ಕೆ ಮುಂಚೆ ವೇಟೈಜ್ ಇದ್ದದ್ದು ಯಾರಿಗೆ? ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಮುಲಾಯಂ ಎಲ್ಲ ಕವರೇಜ್ ಏರಿಯಾದಲ್ಲಿ ಯಾವತ್ತೂ ಇದ್ವಿ. ಅದರಲ್ಲೂ ಮೋದಿ ವಿರುದ್ಧ ಮಾತನಾಡುವವರ ಪೈಕಿ ಕಾಂಗ್ರೆಸ್ಸಿಗರಿಗಿಂತ ಹೆಚ್ಚಾಗಿ ಸುದ್ದಿಯಲ್ಲಿದ್ದವ ನಾನೇ. ಮೋದಿ ಹಣಿಯಬೇಕು ಅಂತ ಅಷ್ಟೇನೂ ಸ್ನೇಹಿತರಲ್ಲದ ಕಾಂಗ್ರೆಸ್‌ನವರೂ ನನ್ನ ಮಾತಿಗೆ ತಲೆದೂಗ್ತಿದ್ರು. ಮೋದಿ ಗುಜರಾತ್‌ನಲ್ಲಿ ಆಗಿರೋ ಅಭಿವೃದ್ಧಿ ಕಮ್ಯುನಲ್, ನಂದಾದ್ರೆ ಸೆಕ್ಯುಲರ್ ಅಂತ ನಾನು ಮಾತು ಒಗೆದ್ರೆ 'ಅಹುದಹುದು' ಅಂತ ಜಾತ್ಯತೀತ ಸಂತಾನದಲ್ಲಿ ಗುರುತಿಸಿಕೊಂಡಿರುವ ಅಷ್ಟೂ ಮಂದಿ ಎದ್ದೆದ್ದು ಕೂಗ್ತಿದ್ರು. ಅಭಿವೃದ್ಧಿ ಆಧಾರದಲ್ಲಿ ಮೋದಿ ಪ್ರಧಾನಿ ಆಗ್ಬಾರ್ದಾ ಅಂತ ಕಮಲದವರು ಕೇಳಿದಾಗ್ಲೆಲ್ಲ, ಅದೇ ಮಾನದಂಡ ಅಂತಾದ್ರೆ ನಿತೀಶ್ ಕುಮಾರೇ ಬೆಟರ್ರು ಅಂತ ಅಭಿಪ್ರಾಯ ನಿರೂಪಕ ಬುದ್ಧಿಜೀವಿ ಗಣ ಬಿಳಿನಗೆ ಹರಡುತ್ತಿತ್ತು. ಒಟ್ಟಿನಲ್ಲಿ 'ಪರ್ಯಾಯ' ಎಂಬ ಪದಕ್ಕೆ ಸೆಕ್ಯುಲರ್ ರಾಜಕಾರಣದ ಶಬ್ದಕೋಶದಲ್ಲಿ ಅರ್ಥ ಹುಡುಕಿದ್ರೆ ಅಲ್ಲಿ ನಿತೀಶ್ ಕುಮಾರ್ ಅಂತ ನಿಚ್ಚಳವಾಗಿ ಫಳಫಳಿಸುವ ಇಮೇಜ್ ನಂದಾಗಿತ್ತು. ಈಗ ಆ ಜಾಗದಲ್ಲಿ ಅರವಿಂದ ಕೇಜ್ರಿವಾಲು ಅಂತ ಅಚ್ಚೊತ್ತಿರೋದು ಎದೆಗೆ ಒದ್‌ಹಂಗೆ ಆಗ್ತಿದೆ ಅಂತ ನಿಮಗೆಲ್ಲ ಹೆಂಗೆ ಹೇಳ್ಲಿ? ಲೋಕಸಭೆ ಎಲೆಕ್ಷನ್ ಬೇರೆ ಬಂತು ಅಂತ ನಾನೂ ಮೋದಿ ಥರಾನೇ ಬೆಳ್ಗೆ ಬೇಗ ಎದ್ದು ಇರೋಬರೋ ಪೇಪರ್ ಎಲ್ಲ ಓದ್‌ತೀನಿ. ಎಲ್ಲಾದ್ರೂ ನನ್ನನ್ನು ರಾಷ್ಟ್ರಮಟ್ಟದ ಶಕ್ತಿಯಾಗಿ ಬಿಂಬಿಸಿದ ಲೇಖನಗಳು ಬಂದಿವೆಯಾ ಅಂತ. ಈ ಆಪ್‌ನ ಕ್ರೇಜಿ ಹವಾ ಎದ್ದ ಮೇಲೆ ನನ್ನನ್ನು ಮೂಸೋರೆ ಇಲ್ಲ ಅಂತೀನಿ!
ನಿಮ್ಗೇ ಗೊತ್ತು. ನಾನು ಬಿಹಾರದಲ್ಲಿ ಬಿಜೆಪಿ ಮೈತ್ರಿ ಕಡಿದುಕೊಳ್ಳೋ ಸಂದರ್ಭದಲ್ಲಿ ಈ ಕಾಂಗ್ರೆಸ್ಸಿಗರು ನನ್ನನ್ನು ಅಪ್ಪಿ ಮುದ್ದಾಡೋಕೆ ಎಷ್ಟೆಲ್ಲ ಉತ್ಸುಕರಾಗಿದ್ರು ಅಂತ. ಬಿಜೆಪಿ- ಕಾಂಗ್ರೆಸ್‌ಗೆ ಸಮಾನ ಅಂತರ ಅಂತ ನಾನೂ ಆಗ ಸ್ಟೈಲ್ ಹೊಡ್ದೆ ಅನ್ನಿ. ಆದ್ರೂ ಅಂಥಾ ಕಾಂಗ್ರೆಸ್ಸು ಈಗ ನನ್ನನ್ನು ಕ್ಯಾರೇ ಎನ್ನದೇ ಲಾಲೂ- ಪಾಸ್ವಾನ್‌ರನ್ನ ಅಪ್ಪಿಕೊಳ್ಳೋದೇ? ಶಾಕಿಂಗ್ ಯಾರ್! ಬೇರೆಯವ್ರ ಕತೆ ಹಂಗಿರ್ಲಿ. ನಮ್ದೇ ಪಕ್ಷದ ಶಿವಾನಂದ ತಿವಾರಿ, ಎನ್. ಕೆ. ಸಿಂಗ್‌ರೇ ಲೋಕಸಭೆ ಚುನಾವಣೆಗೆ ನಿಲ್ಲಿ ಅಂದ್ರೆ ಬೇಕಾಗಿಲ್ಲ ಅಂತಿದಾರೆ! ನಾನು ಗೆಲ್ಲೋ ಮುಸುಡಿ ಅಲ್ಲ ಅಂತ ಎಲ್ರಿಗೂ ಗೊತ್ತಾಗ್‌ಹೋಯ್ತಾ? ಪ್ರಯತ್ನ ಬಿಡಬಾರ್ದು ಅಂತ ಈಗ್ಲೂ ಥರ್ಡ್ ಫ್ರಂಟೂ ಅಂತ ಓಡಾಡ್ತಿದೀನಿ. ನೋಡಿದ್ರೆ ಹಂಗೆ ಕಟ್ಟೋ ತೃತೀಯ ರಂಗದ ಮೇಲೆ ನಾನಷ್ಟೇ ಕುಣಿಬೇಕೋ ಏನೊ? ಯಾರಿಗ್ ಹೇಳಲಿ ಮನದ ಘೋರ ತಾಪವ?
- ಅಶ್ವಹೃದಯ