ಜನಸಾಮಾನ್ಯನ ದಿಕ್ಕೆಡಿಸಿರುವ ಪಂಚಾಯತ್ ಅವ್ಯವಸ್ಥೆ
ನಮ್ಮ ದೇಶದಲ್ಲಿ ಸುದೃಢವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿದ್ದರೂ ಸ್ಥಳೀಯ ಆಡಳಿತದ ವಿಚಾರ ನಮಗೆ...
ನಮ್ಮ ದೇಶದಲ್ಲಿ ಸುದೃಢವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿದ್ದರೂ ಸ್ಥಳೀಯ ಆಡಳಿತದ ವಿಚಾರ ನಮಗೆ ಹೊಸತೇನೂ ಅಲ್ಲ. ವೇದಗಳ ಕಾಲದಲ್ಲಿಯೇ ಜನಪದಗಳೆಂಬ ಸ್ಥಳೀಯ ಆಡಳಿತದ ವಿಧಾನ ಚಾಲ್ತಿಯಲ್ಲಿದ್ದುದಾಗಿ ತಿಳಿದುಬರುತ್ತದೆ. ಇಲ್ಲಿ ಪ್ರಥಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೌರ್ಯರ ಅನಂತರದ ಆಳ್ವಿಕೆಯಲ್ಲೂ ವಿಕೇಂದ್ರೀಕರಣಗೊಂಡ ಆಡಳಿತ ವಿಚಾರ ಅಲ್ಲಲ್ಲಿ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಗ್ರಾಮ ಸಮಿತಿಗಳು ಅಸ್ತಿತ್ವದಲ್ಲಿದ್ದು, ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು. ಇವು ರಾಜ ಪ್ರತಿನಿಧಿಗಳೊಂದಿಗೆ ಸೇರಿ ವೈಯಕ್ತಿಕ ಹಾಗೂ ಸಾಮಾಜಿಕ ಆಸ್ತಿಗಳ ಪರಿಶೀಲನೆ ನಡೆಸುತ್ತಿದ್ದವು.
ಬ್ರಿಟಿಷರು ಕ್ರಿ.ಶ. 1688ರಲ್ಲಿ ಸ್ಥಾಪಿಸಿದ ಮದ್ರಾಸ್ ಮುನ್ಸಿಪಲ್ ಕಾರ್ಪೋರೇಷನ್ನ ಮೂಲಕ ನಮ್ಮ ದೇಶದಲ್ಲಿ ನಾಗರಿಕ ಆಡಳಿತ ಸಂಸ್ಥೆಗಳ ಹೊಸ ಪರಿಕಲ್ಪನೆ ರೂಪಗೊಂಡಿತು. ಕ್ರಿ.ಶ 1885ರಲ್ಲಿ ಗ್ರಾಮೀಣ ವಿಭಾಗಕ್ಕೂ ಈ ಬಗೆಯ ಆಡಳಿತ ವಿಸ್ತರಣೆಗೊಂಡು ಸಣ್ಣಪುಟ್ಟ ಬದಲಾವಣೆಗಳೊಂದಿಗೆ 1950ರ ಸುಮಾರಿನವರೆಗೂ ಇದೇ ವ್ಯವಸ್ಥೆ ಮುಂದುವರಿದುಕೊಂಡು ಬಂದಿತು. ಕೇಂದ್ರ ಸರ್ಕಾರವು 1977ರಲ್ಲಿ ರಚಿಸಿದ ಅಶೋಕ ಮೆಹತಾ ನೇತೃತ್ವದ ಸಮಿತಿಯು ಈ ದಿಸೆಯಲ್ಲೊಂದು ಮೈಲಿಗಲ್ಲಾಗಿದೆ. ಈ ಸಮಿತಿಯ ಶಿಫಾರಸಿನ ಅನಂತರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಸಂಚಲನ ಮೂಡಿಬಂತು.
ಜುಲೈ 1989ರಲ್ಲಿ ಆಗಿನ ಪ್ರಧಾನಿ ರಾಜೀವಗಾಂಧಿ ನೇತೃತ್ವದ ಸರ್ಕಾರ ಮಂಡಿಸಿದ ಸಂವಿಧಾನದ 64 ಮತ್ತು 65ನೇ ವಿಧಿವಿಧಾನಗಳ ತಿದ್ದುಪಡಿಯು ಮೇಲ್ಕಾಣಿಸಿದ ಸಮಿತಿಯ ಶಿಫಾರಸಿನಂತೆ ಮಾಡಿದ್ದಾಗಿತ್ತು. ಈಗ ಪ್ರಚಲಿತವಿರುವ ಹೆಚ್ಚಿನೆಲ್ಲಾ ಅಂಶಗಳು ಅದರಲ್ಲಿದ್ದರೂ, ಲೋಕಸಭೆಯ ಅಂಗೀಕಾರ ಪಡೆಯುವುದರಲ್ಲಿ ಅದು ವಿಫಲವಾಯಿತು. ಅಂತಿಮವಾಗಿ 1992ರಲ್ಲಿ ಮೊದಲಿದ್ದ ಕೆಲವು ಪ್ರಮುಖ ಅಂಶಗಳನ್ನು ಉಳಿಸಿಕೊಂಡು ಸರ್ಕಾರವು ಕರಡೊಂದನ್ನು ಸಿದ್ಧಪಡಿಸಿ, ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿ, 1993ರಲ್ಲಿ ಅದು ಅಂಗೀಕಾರವಾಯಿತು. (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14).
ಈ ತಿದ್ದುಪಡಿ ಮಸೂದೆಯ ಮೂಲ ಉದ್ದೇಶ ಆಡಳಿತವನ್ನು ವಿಕೇಂದ್ರಿಕರಿಸುವುದೇ ಆಗಿತ್ತು. ಇದರಿಂದ ಸ್ಥಳೀಯ ಸಂಸ್ಥೆಗಳು ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುವ ಬದ್ಧತೆಯನ್ನು ಹೊಂದಿವೆ. ಎಂಜಿನಿಯರಿಂಗ್ ವಿನ್ಯಾಸ, ಯೋಜನಾ ನಿರ್ವಹಣೆ ಯಂತ್ರೋಪಕರಣಗಳ ದೇಖಿರೇಖಿ ಇತ್ಯಾದಿಗಳಲ್ಲಿ ಕುಶಲತೆಯನ್ನು ಸಾಧಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಸಂಬಂಧಪಟ್ಟವರಿಗೆ ಕಾಲಕಾಲಕ್ಕೆ ತರಬೇತಿ ನೀಡಿ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದು ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ಸಾಮರಸ್ಯ ಬಲವರ್ಧನೆಗೆ ಸಹಕಾರಿಯಾಗಲಿದೆ. ಇದೀಗ ಕರ್ನಾಟಕದಲ್ಲಿ ಮೂರು ಹಂತಗಳ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದ್ದು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯ್ತಿಗಳು ಕಾರ್ಯನಿರ್ವಹಿಸುತ್ತಾ ಬಂದಿವೆ. ನಮ್ಮಲ್ಲಿ 5626 ಗ್ರಾಮ ಪಂಚಾಯ್ತಿ, 176 ತಾಲೂಕು ಪಂಚಾಯ್ತಿ, 30 ಜಿಲ್ಲಾ ಪಂಚಾಯ್ತಿಗಳಿಗೆ. ಗ್ರಾಮಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮ ತಮ್ಮ ಕಚೇರಿ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಮೂರು ಹಂತಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿದ್ದು ಸಾಮಾನ್ಯ ಜನರ, ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಜವಾಬ್ದಾರಿ ಹೊತ್ತಿರುತ್ತಾರೆ.
ಗ್ರಾಮ ಪಂಚಾಯ್ತಿ ಹಂತದಲ್ಲಿ ಜನಪರ ಎಂಬ ಹೆಸರಿನಲ್ಲಿ ಚುನಾಯಿತ ಪ್ರತಿನಿಧಿಗಳು, ಕಾನೂನಿನ ಚೌಕಟ್ಟು ಎಂಬ ಹೆಸರಿನಲ್ಲಿ ಅಭಿವೃದ್ಧಿ ಅಧಿಕಾರಿಗಳು ಹೀಗೆ ಇವರಲ್ಲಿ ಭಿನ್ನಾಭಿಪ್ರಾಯ ಘರ್ಷಣೆಗಳಾಗುವುದನ್ನು ನಾವು ಆಗಾಗ್ಗೆ ಕಾಣುತ್ತೇವೆ. ಕೆಲವೊಮ್ಮೆ ಇದು ಪ್ರತ್ಯಕ್ಷ ದೈಹಿಕ ಹಲ್ಲೆಗೆ ಕಾರಣವಾದರೆ, ಇನ್ನು ಕೆಲವೊಮ್ಮೆ ಅನುಚಿತ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಯಂತಹ ಅಕಾರ್ಯಗಳನ್ನು ಮಾಡಲು ಪ್ರೇರಣೆಯಾದದ್ದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ತತ್ಕ್ಷಣದ ಕೆಲವು ಪರ- ವಿರೋಧ ಬಿಸಿ ಬಿಸಿ ಹೇಳಿಕೆಗಳು, ಬಿಕ್ಕಟ್ಟನ್ನು ಬಗೆಹರಿಸುವ ಮೇಲಿನವರ ಆಶ್ವಾಸನೆಗಳು- ಇವುಗಳನ್ನು ಬಿಟ್ಟು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಲ್ಲಿ ಮಾತ್ರ ಎಲ್ಲಾ ಬಗೆಯ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬಹುದಾಗಿದೆ.
ತಳಮಟ್ಟದ ಪಂಚಾಯತ್ ಆಡಳಿತದಲ್ಲಿ ಜನಸಾಮಾನ್ಯರ ಹಿತದೃಷ್ಟಿ ಬಹಳ ಮುಖ್ಯವಾಗಿದೆ. ಮಹಾತ್ಮಾಗಾಂಧಿಯವರ ಗ್ರಾಮಸ್ವರಾಜ್ಯದ ಕಲ್ಪನೆಯ ತಿರುಳು ಇದು. ಅಂತೆಯೇ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣವೆಂದರೆ ಜನಸಾಮಾನ್ಯರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು, ಆಡಳಿತದ ವಿರುದ್ಧ ಸಕಾರಣ ಅಸಮಾಧಾನ ವ್ಯಕ್ತಪಡಿಸಲು ಅವಕಾಶವಿರುವುದು ಮತ್ತು ತನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಸಾಧ್ಯವಾಗುವುದು. ಆದರೆ ಇಂದು ಸಾಮಾನ್ಯವಾಗಿ ಪಂಚಾಯತ್ ಮಟ್ಟದಲ್ಲಿ ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಸ್ತುನಿಷ್ಠ ಬೇಡಿಕೆಗಳನ್ನು ವ್ಯಕ್ತಿನಿಷ್ಠ ಸವಾಲಾಗಿ ಗ್ರಹಿಸಲಾಗುತ್ತಿದೆ. ಸಾಮಾಜಿಕ ವಿನಯವಂತಿಕೆಯನ್ನು ಇಲ್ಲಿ ದೌರ್ಬಲ್ಯವಾಗಿ ಪರಿಗಣಿಸಲಾಗುತ್ತಿದೆ, ಹುದ್ದೆಯ ಅಧಿಕಾರ ಬಲದಿಂದ ಧಮನಿಸಲು ಪ್ರಯತ್ನಿಸಲಾಗುತ್ತದೆ. ವಿನಮ್ರತೆ, ಸಜ್ಜನಿಕೆಗಳು ಉಪಯೋಗಕ್ಕೆ ಬಾರದಿದ್ದಾಗ, ಅನಿವಾರ್ಯವಾಗಿ ಜನಸಾಮಾನ್ಯನು ಲಿಖಿತ ದಾಖಲೆಗಳನ್ನು ಕೇಳಿದರೆ ಅದನ್ನೇ ಒಂದು ಅಪರಾಧವೆಂಬಂತೆ ಪರಿಗಣಿಸಲಾಗುತ್ತದೆ. ನಕಾರಾತ್ಮಕ ಪ್ರಯೋಗಗಳನ್ನು ಮಾಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತಾನು ಪ್ರತಿನಿಧಿಸುವ ಜನರ ಅಹವಾಲುಗಳಿಗೆ ಧ್ವನಿಯಾಗಬೇಕಾದ ಚುನಾಯಿತ ಜನಪ್ರತಿನಿಧಿಗಳಲ್ಲಿ ಕೆಲವರು ಅಧಿಕಾರಿಗಳೊಂದಿಗಿನ ಸ್ನೇಹಭಾವದಿಂದಲೋ, ಸ್ವಲಾಭ ಚಿಂತನೆಯಿಂದಲೋ, ಅಜ್ಞಾನದಿಂದಲೋ ಅಥವಾ ಇನ್ನಾವ ಅದೃಶ್ಯ ಕಾರಣಗಳಿಂದಲೋ ತಟಸ್ಥರಾಗಿ ಬಿಡುವುದು ಸಾಮಾನ್ಯ ನಾಗರಿಕ ಹೋರಾಟದ ಹಾದಿಯಲ್ಲಿ ಮುಳ್ಳಾಗಿ ಪರಿಣಮಿಸುವುದು, ಸ್ವಲ್ಪ ಮಟ್ಟಿನ ಹಿನ್ನಡೆಗೂ ಕಾರಣವಾಗುವುದು.
ಸರ್ಕಾರಿ ಕಚೇರಿಗಳಲ್ಲಿ ಇನ್ನೊಂದು ಬಗೆಯ ಅಲಿಖಿತ ನಿಯಮ ಇದ್ದಂತಿದೆ. ಅದೆಂದರೆ ಕೆಲವು ಮೇಲಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು, ನೌಕರರು ಮಾಡಿದ ತಪ್ಪಿನ ಬಗ್ಗೆ ದೂರು ಬಂದಾಗ ಅದನ್ನು ಅಲಕ್ಷಿಸಿ, ವಿಚಾರ ವಿಮರ್ಶೆ ಮಾಡದೆ ತಮ್ಮವರ ಪರ ವಹಿಸುವುದು. ಇದರಿಂದ ಸಾರ್ವನಿಕರಿಗೆ ಸಿಗಬೇಕಾದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಮಾತ್ರವಲ್ಲದೇ ಕೆಳಹಂತದ ಅಧಿಕಾರಿ, ನೌಕರರಿಗೆ ಸ್ವೇಚ್ಛಾಚಾರಿಗಳಾಗಿ ವರ್ತಿಸಲು ಪರವಾನಗಿ ನೀಡಿದಂತಾಗುವುದು. ಹೀಗೆ ಎಲ್ಲಿ ಕಾನೂನು, ಕಾನೂನಿನ ಆಡಳಿತ ನಡೆಯುವುದಿಲ್ಲವೋ ಅಲ್ಲಿ ಅರಾಜಕತೆ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುವುದು. ಅದು ಸರ್ಕಾರದಿಂದ ಅಧಿಕಾರ ಪಡೆದು ನಡೆಸುವ ಜಂಗ್ಲೀ ನ್ಯಾಯವಾಗುವುದು.
ಒಮ್ಮೆ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್ನ ಹಿಂದಿನ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕರ್ತವ್ಯಲೋಪಕ್ಕಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲಾಯಿತು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಉಡುಪಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಲಾಯಿತು. ಅವರು ಉಡುಪಿ ಜಿಲ್ಲಾ ಪಂಚಾಯತ್ಗೆ ದೂರು ಅರ್ಜಿ ರವಾನಿಸಿ, ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಲು ತಿಳಿಸಿದರು. ಜಿಲ್ಲಾಪಂಚಾಯತಿಯವರು ಗ್ರಾಮ ಪಂಚಾಯತ್ ಪಿಡಿಒ ವಿರುದ್ಧದ ದೂರು ತಾಲೂಕು ಮಟ್ಟದಲ್ಲಿಯೇ ಬಗೆಹರಿಯಬೇಕೆಂದು ಅದನ್ನು ತಾಲೂಕು ಇ.ಒ ಅವರಿಗೆ ವಾಪಸ್ ಕಳುಹಿಸಿ, ಅದರ ಪ್ರತಿಯನ್ನು ದೂರುದಾರರಿಗೆ ನೀಡಿದರು.
ಆಶ್ಚರ್ಯ ಮತ್ತು ಆಘಾತದ ಸಂಗತಿಯೆಂದರೆ ಮೇಲಧಿಕಾರಿಗಳ ಆದೇಶಕ್ಕೂ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಕವಡೆಯ ಕಿಮ್ಮತ್ತು ನೀಡಲಿಲ್ಲ. ಜಿಪಂ ಸಿಇಒ ಆರು ಸಲ ನೆನಪೋಲೆ ಬರೆದು ದೂರುದಾರರಿಗೆ ಪ್ರತಿ ನೀಡಿದ್ದಾರೆ. ಇದ್ಯಾವುದೂ ತನಗೆ ಸಂಬಂಧಪಟ್ಟದ್ದಲ್ಲವೆಂಬಂತೆ ಕುಂದಾಪುರ ತಾಪಂ ಇಒ ಆರಾಮವಾಗಿ ಇದ್ದರು. ಇಂತಹ ಅಧಿಕಾರಿಗಳ ಪೂರ್ಣ ರಕ್ಷಣೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗಿದ್ದರೆ ಯಾವ ಪಿಡಿಒ ಕಾನೂನುಬದ್ಧವಾಗಿ ಕೆಲಸ ಮಾಡುತ್ತಾನೆ ಅರ್ಥಾತ್ ಈ ದುರಾಡಳಿತದ ಜಾಲ ಶಕ್ತಿಶಾಲಿಯಾಗಿ ಸಾಮಾನ್ಯ ಜನರ ಅಹವಾಲುಗಳಿಗೆ ಕಿವುಡಾಗಿ, ತನ್ನ ಕಾರ್ಯ ಮೆರೆಯುತ್ತಲೇ ಇದೆ. ಇದು ಸಾಲದೆಂಬಂತೆ ಒಮ್ಮೆ ಗ್ರಾಮ ಪಂಚಾಯತ್ನಿಂದ ಕಾನೂನು ಪ್ರಕಾರ ತಪ್ಪಾದರೆ ಅದನ್ನು ಸರಿಪಡಿಸಲು ಅವಕಾಶವಿಲ್ಲವೆಂಬ ಫಾರ್ಮಾನ್ ಹೊರಡಿಸುವ ಪಿಡಿಒ ಕಾನೂನಿಗೆ, ಆಡಳಿತಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಕೀರ್ತಿ ತರುತ್ತಿದ್ದಾರೆ.
ಗ್ರಾಮ ಸ್ವರಾಜ್ಯ, ಆಡಳಿತ ವಿಕೇಂದ್ರಿಕರಣಗಳ ಪರಿಕಲ್ಪನೆಗಳಲ್ಲೇ ವಿಹರಿಸುವ, ವಾಸ್ತವದ ಅರಿವಿರದ, ವಾತಾನುಕೂಲಿ(ಏರ್ ಕಂಡೀಶನ್ಡ್) ಕಚೇರಿಗಳಲ್ಲಿ ಕುಳಿತು ನಿಯಮ ರೂಪಿಸುವ ರಾಜಧಾನಿಯ ಮುಗ್ಧ ಅಧಿಕಾರ ವರ್ಗದವರಿಗೆ ಜನಸಾಮಾನ್ಯರ ಸಾಮಾನ್ಯ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ. ಅವರ ಆದೇಶಗಳನ್ನು ಜಾರಿಗೆ ತರಬೇಕಾದ ಪಂಚಾಯತ್ ವರ್ಗ ಅದಕ್ಕೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ಹೀಗಾಗಿ ಜನಸಾಮಾನ್ಯರ ದೈನಂದಿನ ಗೋಳು ಅರಣ್ಯ ರೋದನವಾಗಿದೆ. ಧ್ವನಿಯೇ ಇಲ್ಲದ ಶ್ರೀಸಾಮಾನ್ಯನಿಗೆ ನಿಟ್ಟುಸಿರು ಬಿಡುವುದೊಂದೇ ಉಳಿದಿರುವ ದಾರಿಯಾಗಿದೆ. ಇಂತಹ ಸ್ಥಿತಿಯಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಧೀಮಂತನ ಉದಯವಾಗಬೇಕಿದೆ.
-ಡಾ. ಕೆ.ಎಸ್.ಎನ್. ಉಡುಪ
ನಿವೃತ್ತ ಪ್ರಾಧ್ಯಾಪಕರು