ಈ ಅಂಕಣ ವೈಯಕ್ತಿಕ ವಿವರ ಎಂದೆನಿಸಿದರೂ, ನನ್ನ ತಲ್ಲಣವು ನಾನು ಪ್ರತಿನಿಧಿಸುತ್ತಿರುವ ತಲೆಮಾರಿನ ಕಂಪನವೂ ಆಗಿದ್ದಿರಬಹುದು ಎಂಬ ವಿಶ್ವಾಸದಲ್ಲಿ ಕೆಲ ಅಂಶಗಳನ್ನಿಲ್ಲಿ ದಾಖಲಿಸಬೇಕಾಗಿದೆ. ಇದೊಂದು ಭೇಟಿಯ ಕತೆ.
ಅದೊಂದು ಯಾವತ್ತೂ ನೆನಪಿನಲ್ಲುಳಿಯುವ ಸುಂದರ ಸಾಯಂಕಾಲ. ಹೀಗೆಂದು ಶುರು ಮಾಡಿದರೆ ಕೇಳಿದವನು ಸಹಜವಾಗಿ ತನ್ನದೇ ಆದ ಕಲ್ಪನೆಗಳನ್ನು ಕಟ್ಟಿಕೊಳ್ಳಬಹುದು. ಹೊತ್ತು ಮುಳುಗುವ ವೇಳೆ ಗೆಳತಿಯ ಕೈ ಹಿಡಿದು ನಡೆದ ಕ್ಷಣಗಳ ಮೆಲುಕುಗಳವು ಅಂತ ಯಾರಾದರೂ ಅಂದುಕೊಳ್ಳಬಹುದು. ಆದರೆ ಆ ಸಾರ್ಥಕ ನೆನಕೆಯ ಒಡಲಲ್ಲಿರುವ ರೋಚಕತೆ ಬೇರೆಯದೇ ತೆರನಾದದ್ದು. ಕತೆ ಶುರುವಾಗಿದ್ದು ಹೀಗೆ...
'ಅವರು ನಮಗೆ ಸಂಬಂಧಿಕರಾಗಬೇಕು. ಅದಕ್ಕಿಂತ ಹೆಚ್ಚಾಗಿ ಬಹಳ ಅದ್ಭುತ ವ್ಯಕ್ತಿತ್ವ. ನೀನೂ ಬೆಂಗಳೂರಿನಲ್ಲೇ ಇರುವುದಾದ್ದರಿಂದ ಒಮ್ಮೆ ಹೋಗಿ ಬಾ' ಅಂತ ಊರಲ್ಲಿ ಅಪ್ಪ ಬಹಳಷ್ಟು ಬಾರಿ ಹೇಳಿದ್ದರು. ಆದರೆ ನನ್ನದೇ ಜಗತ್ತಿನಲ್ಲಿ ವ್ಯಸ್ತವಾಗಿ ನಾನದನ್ನು ಗಂಭೀರವಾಗಿಯೇನೂ ತೆಗೆದುಕೊಂಡಿರಲಿಲ್ಲ. ಅಲ್ಲದೇ, ಈ ನಿಟ್ಟಿನಲ್ಲಿ ಇರಿಸುಮುರಿಸು ತರುವ ಕೆಲವು ಅನುಭವಗಳೂ ಆಗಿದ್ದಿದೆ. ಮನೆಯವರೇನೋ ಯಾವುದೋ ಕಾಲದ ಸಲುಗೆಯಲ್ಲಿ ನಮ್ಮವರವರು ಎಂದು ಮಾತಾಡಿರುತ್ತಾರೆ. ಅವರ ಉಮೇದನ್ನು ನಂಬಿಕೊಂಡು ಸಂಬಂಧದ ಜಾಡು ಹಿಡಿದು ಯಾರದೋ ಮನೆಯ ಬಾಗಿಲು ತಟ್ಟಿದಾಗ ಅವರು ಹುಬ್ಬುಗಂಟಿಕ್ಕಿಕೊಂಡು 'ಹೌದಾ, ಓಹೊ' ಎಂದೆಲ್ಲ ಮಾತಾಡುತ್ತಾರೆ. ಕಳುಹಿಸುವವರೆಗೂ ಅವರ ಮುಖದ ಮೇಲಿನ ಆ ಪ್ರಶ್ನಾರ್ಥಕ ಚಿಹ್ನೆ ಮಾಸಿರುವುದೇ ಇಲ್ಲ. ಮನೆಯವರ ಒತ್ತಾಯಕ್ಕೆ ಅಲ್ಲಿ ಹೋದವನಿಗೆ ಅಲ್ಲಿದ್ದಷ್ಟು ಕಾಲವೂ ತನ್ನದಲ್ಲದ ಟೈಮ್‌ಜೋನ್ ಒಂದರಲ್ಲಿ ಒದ್ದಾಡಿ ಬಂದ ಅನುಭವವೂ ಆಗಿತ್ತು.
ಅಪ್ಪ ಭೇಟಿ ಮಾಡಲು ಹೇಳುತ್ತಿದ್ದದ್ದು ರಂಗನಾಥ ಶರ್ಮ ಅವರನ್ನು. ಭಾರತೀಯ ಪರಂಪರೆಯ ಹಿರಿಯ ವಿದ್ವಾಂಸರ ಅಗ್ರಶ್ರೇಣಿಯಲ್ಲಿ ಅವರಿದ್ದಾರೆ ಎಂಬ ಸಂಗತಿ ವಾಸ್ತವದಲ್ಲಿ ಉತ್ತೇಜನ ಕೊಡುವುದಕ್ಕಿಂತ ಒಂದು ಬಗೆಯ ಭಯವನ್ನೇ ಹುಟ್ಟುಹಾಕಿತ್ತು. ಅಂಥ ವಿದ್ವತ್‌ವಲಯದಲ್ಲಿರುವವರನ್ನು ನನ್ನಂಥ ಹುಡುಗ ಭೇಟಿಯಾಗಿ ಮಾತನಾಡುವುದಾದರೂ ಏನನ್ನು? ಸಂಬಂಧದ ನೆಲೆಯಲ್ಲಿ ನನ್ನಪ್ಪನ ತಲೆಮಾರಿಗೆ ಅವರಲ್ಲಿ ಹಂಚಿಕೊಳ್ಳುವುದಕ್ಕೆ ವಿಷಯಗಳಿರುತ್ತವೆ. ನೂರು ವಸಂತಗಳನ್ನು ಸಮೀಪಿಸುತ್ತಿರುವ ಆ ಹಿರಿಜೀವದ ಎದುರು ಕುಳಿತು ತಾನು ಮಾತನಾಡುವುದಾದರೂ ಏನನ್ನು? ಮಾತಾಡುವುದಾದರೆ ಆ ವಲಯಕ್ಕೆ ಸಂಬಂಧಿಸಿ, ಅವರ ಬರವಣಿಗೆಗೆ ಸಂಬಂಧಿಸಿ ಒಂದಿಷ್ಟನ್ನಾದರೂ ಓದಿಕೊಂಡಿದ್ದರೆ ಹೌದು. ಹಾಗೆಂದು ಪ್ರಾಚೀನ ಗ್ರಂಥಗಳನ್ನು ಅಭ್ಯಸಿಸಿ ಸರಿ- ತಪ್ಪಿನ ವಿಮರ್ಶೆಗಿಳಿಯುವ ಕೆಲಸವೆಲ್ಲ ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ಹೀಗೆಲ್ಲ ಯೋಚಿಸಿ ಸುಮ್ಮನೆ ಆ ವಿಷಯವನ್ನೇ ಮರೆತಿದ್ದೆ.
ಹೀಗಿರಲೊಂದು ದಿನ ಪತ್ರಕರ್ತ ಮಿತ್ರರು, ಹಿರಿಯರು ಆದ ಸೂರ್ಯಪ್ರಕಾಶ ಪಂಡಿತರು ಕರೆ ಮಾಡಿ ರಂಗನಾಥ ಶರ್ಮರ ಬಗ್ಗೆ ಮಾತನಾಡುತ್ತ, 'ನಾನು ಅವರನ್ನು ಭೇಟಿಯಾದ ಹಲವು ಸಂದರ್ಭಗಳಲ್ಲಿ ನಿಮ್ಮ ಬಗ್ಗೆ ವಿಚಾರಿಸಿದ್ದರು. ಇನ್ನು ಕೆಲವೇ ದಿನಗಳಲ್ಲಿ ಅವರು ಮೈಸೂರಿಗೆ ಶಿಫ್ಟ್ ಆಗುತ್ತಿದ್ದಾರೆ. 'ಆ ಹುಡುಗ ಬೆಂಗಳೂರಿನಲ್ಲೇ ಇದಾನಂತೆ, ನನ್ನ ಭೇಟೀನೇ ಆಗಿಲ್ಲ' ಎಂದು ಈ ಬಾರಿ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ತಪ್ಪದೇ ಹೋಗಿಬನ್ನಿ' ಎಂದು ಮನೆ ವಿಳಾಸ ಕೊಟ್ಟಾಗ ಅಚ್ಚರಿಯೆನಿಸಿತು. ಅದುವರೆಗಿನ ನನ್ನ ಹಿಂಜರಿಕೆಗಳೆಲ್ಲ ಪೆದ್ದುತನವಾಗಿ ಕಾಣತೊಡಗಿತು. ನಾನಂತೂ ಮುಖಾಮುಖಿ ಭೇಟಿಯಾಗಿರದ, ಪರಿಚಯ ಮಾಡಿಕೊಂಡಿರದೇ ಇರುವ ಅಜ್ಜನೊಬ್ಬ ನನ್ನನ್ನು ನೋಡುವುದಕ್ಕೆ ಉತ್ಸುಕನಾಗಿದ್ದಾರೆ ಎಂಬ ಸಂಗತಿ ಯಾರಲ್ಲಾದರೂ ಒಂದು ಅನೂಹ್ಯ ರೋಮಾಂಚನವನ್ನು ತುಂಬದೇ ಇರುವುದಿಲ್ಲ. ಹಾಗೊಂದು ಕುತೂಹಲದೊಂದಿಗೆ ಆಗ ಗಿರಿನಗರದಲ್ಲಿದ್ದ ರಂಗನಾಥ ಶರ್ಮರ ಮನೆಗೆ ಹೋಗಿ ಪರಿಚಯಿಸಿಕೊಂಡಾಗ...
'ಓಹ್! ನೀನೇನೋ? ಇಲ್ಲೇ ಬೆಂಗಳೂರಲ್ಲೇ ಇದೀಯಂತೆ. ಇಷ್ಟು ತಡವಾಗಿ ಬರ್ತಿದೀಯಲ್ಲಪ್ಪ. ಬಾ ಕುಳಿತುಕೊ. ನೋಡು, ನನ್ನ ಕಣ್ಣೂ ಈಗೀಗ ಮಂಜಾಗಿಬಿಟ್ಟಿದೆ. ಎಲ್ಲವೂ ಸ್ವಲ್ಪ ಮಸುಕು ಮಸುಕಾಗಿ ಕಾಣುತ್ತೆ. ನೀನು ಮೊದಲೇ ಬರಬೇಕಿತ್ತು ಮಾರಾಯಾ, ಈಗಲಾದರೂ ಬಂದೆಯಲ್ಲ. ನಿನ್ನ ಲೇಖನಗಳನ್ನೆಲ್ಲ ಓದಿಸಿಕೊಂಡು ಕೇಳಿದೀನಿ. ಇಲ್ಲೇ ಇದೀಯಾ ಅಂತ ಗೊತ್ತು. ಆದರೆ ನಂಗೆ ಸುತ್ತಾಡೋಕಾಗಲ್ಲಪ್ಪ ಈಗ. ನಾನಂತೂ ನಿನ್ನ ಬಂದು ಕಾಣೋಕಾಕ್ತಿರಲಿಲ್ಲ. ನಿನಗೆ ಯಾರ ಹತ್ರ ಅಂತ ಹೇಳಿ ಕಳುಹಿಸೋದು? ಇರಲಿ, ಬಂದ್ಯಲ್ಲ!'
ಈ ಬಗೆಯ ಅನಿರೀಕ್ಷಿತ ಅಕ್ಕರೆಯ ಅಲೆಗೆ ಪ್ರತಿಕ್ರಿಯಿಸುವುದಾದರೂ ಹೇಗೆ? ಅಬ್ಬಾ, ಆ ಪ್ರೀತಿಯ ಸರೋವರದಲ್ಲಿ ಮೌನವಾಗಿ ಮಿಂದೇಳುವುದು ಬಿಟ್ಟರೆ ಮತ್ತೇನೂ ತೋಚದಾಯಿತು. ತೊಂಬತ್ತೆಂಟರ ಪ್ರಾಯದ ತಾತನ ಆ ಸರಣಿ ಮಾತುಗಳಿಗೆ ಅದ್ಯಾವ ತೊದಲು ಪ್ರತಿಕ್ರಿಯೆ ಕೊಟ್ಟಿದ್ದಾಯಿತೋ ಈಗಲೂ ನೆನಪಿಗೆ ಬರುತ್ತಿಲ್ಲ. ಆ ಕ್ಷಣದಲ್ಲಿ ಕಾಡಿದ್ದು ಅಂಥದೊಂದು ಪ್ರೀತಿಯ ಪರ್ವತವನ್ನು ಎದುರಾಗುವುದಕ್ಕೆ ಅದುವರೆಗೆ ಸುಮ್ಮನೇ ಹಿಂಜರಿದುಕೊಂಡಿದ್ದರ ಪಶ್ಚಾತ್ತಾಪ ಮಾತ್ರ.
ಮಹಾಮಹೋಪಾಧ್ಯಾಯ ರಂಗನಾಥ ಶರ್ಮ ಮೊನ್ನೆ ತೀರಿಕೊಂಡರು. ಅದಕ್ಕೂ ಮೊದಲು ಹಾಗೊಂದು ದಿವ್ಯ ಸಾಯಂಕಾಲದ ಆಟೊಗ್ರಾಫ್ ಅನ್ನು ಅವರಿಂದ ಪಡೆದುಕೊಳ್ಳುವ ಭಾಗ್ಯ ನನಗೆ ಬರೆದಿತ್ತು ಎಂದುಕೊಳ್ಳೋಣ. ಆದರೆ ನನ್ನಂಥ ಹುಡುಗರು ಬದುಕಲ್ಲಿ ನಿಜಕ್ಕೂ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಆ ಒಂದು ಚಿಕ್ಕ ಭೇಟಿಯೇ ನಿಚ್ಚಳವಾಗಿಸಿಬಿಟ್ಟಿತು.
ನಮ್ಮಲ್ಲಿ ಹೆಚ್ಚಿನವರೆಲ್ಲ ಬದುಕಿನ ಹೋರಾಟದಲ್ಲಿ ಕಾಲುದಾರಿ, ಕಚ್ಚಾದಾರಿಗಳನ್ನೆಲ್ಲ ಹಾಯ್ದೇ ಮುಖ್ಯರಸ್ತೆಗೆ ತಲುಪಿಕೊಂಡವರು. ಆದರೆ ಹಾಗೆ ತಲುಪಿಕೊಂಡ ನಂತರ ಸಂದಿಗೊಂದಿ, ಬೀದಿಗಳ ಬಗ್ಗೆ ಆಸಕ್ತಿ ಕುಂದಿಹೋಗಿರುತ್ತದೆ. ಮತ್ತೆ ಅಲ್ಲಿಗೆ ಹೋಗುವುದು ನಮಗೆ ಖುಷಿ ಕೊಡುವುದಿಲ್ಲ. ನಮ್ಮ ನಮ್ಮ ವೃತ್ತಿ ಬದುಕುಗಳಲ್ಲಿ ನಮಗೆ ಹಿತಕರವೆನಿಸುವ ಸರ್ಕಲ್ ಒಂದನ್ನು ಸೃಷ್ಟಿಸಿಕೊಂಡು ಅಲ್ಲಿಯೇ ವಿಹರಿಸುತ್ತೇವೆ. ಉಳಿದಿದ್ದು ನಮಗೆ ಬೇಡದ ಉಸಾಬರಿ ಎನಿಸುತ್ತದೆ. ಏಕೆಂದರೆ ಬದುಕಿನ ಪುಟದಲ್ಲಿ ಸಾಕಷ್ಟು ವಿವರಗಳು ತುಂಬಿಕೊಂಡಿರುತ್ತವೆ. ಹೀಗಾಗಿ ಯಾವುದೋ ಸಂಬಂಧ, ಹಳೆ ಪರಿಚಯಗಳೆಲ್ಲ ಈಗ ಒಳಗೆ ಬಿಟ್ಟುಕೊಂಡು ಖುಷಿಪಡಬಹುದಾದ ವಿವರ ಎಂದು ಅನ್ನಿಸುವುದಿಲ್ಲ. ಒಂದು ಕಾಲದಲ್ಲಿ ಜತೆ ಜತೆಗಿದ್ದವರೂ ಬಹಳ ವರ್ಷಗಳ ನಂತರ ಸಿಕ್ಕಿದಾಗ, ಅವರ ವೃತ್ತಿಬದುಕುಗಳು ಭಿನ್ನ ಮಗ್ಗುಲುಗಳಲ್ಲಿದ್ದ ಸಂದರ್ಭದಲ್ಲಿ ಮಾತಾಡುವುದಕ್ಕೆ ಯಾವುದೂ ವಿಷಯ ಸಿಗದೆ, ನಾಸ್ಟಾಲ್ಜಿಯಾ ಸಹ ಈಗಿರುವ ಜೀವನದ ಓಘಕ್ಕೆ ಅಪ್ರಸ್ತುತ ಎನಿಸಿ ಅದದೇ ಪೆಚ್ಚು ನಗೆಯೊಂದಿಗೆ ಮಂಕಾಗಿಬಿಡುತ್ತಾರೆ. ಪರಿಸ್ಥಿತಿ ಹೀಗಿರುವಾಗ....
ಯಾರೋ ಒಬ್ಬ ಚೈತನ್ಯ ಎಂಬಾತನ ಬಗ್ಗೆ, ಬದುಕಿನಲ್ಲಿ ಅದಾಗಲೇ ಸಮೃದ್ಧ ವಿವರಗಳನ್ನು ತುಂಬಿಸಿಕೊಂಡಿದ್ದ ರಂಗನಾಥ ಶರ್ಮರಂಥ ಹಿರಿಯ ಜೀವ ಯಾಕಾದರೂ ಸಂಭ್ರಮಿಸಬೇಕು? ವೈಯಕ್ತಿಕ ನೆಲೆಯಲ್ಲಿ ನನ್ನಜ್ಜಿಗೆ ಅವರು ಸೋದರ ಮಾವ. ಅದೇನೇ ಇದ್ದರೂ ಆ ವಿದ್ವತ್‌ಪೂರ್ಣ ಬಾಳಲ್ಲಿ ಈ ವಿವರಕ್ಕೆ ಯಾವ ಪ್ರಾಮುಖ್ಯವೂ ಬೇಕಿಲ್ಲ. ಸಂಸ್ಕೃತದ ಎಂತೆಂಥ ಪಂಡಿತರೆಲ್ಲ ಶರ್ಮರನ್ನು ಗುರು ಸ್ಥಾನದಲ್ಲಿಟ್ಟಿದ್ದಾರೆ. ತಮ್ಮ ತುಂಬು ಜೀವನದಲ್ಲಿ ಅವರು ಎಂತೆಂಥ ಘನ ವೇದಿಕೆಗಳಲ್ಲಿ ವಿಜೃಂಭಿಸಿದ್ದಾರೆ, ಪರಂಪರೆಯ ಶ್ರೇಷ್ಠ ಪೀಠಗಳಲ್ಲಿ ಕುಳಿತ ಎಷ್ಟೋ ಮಹಾಮಹಿಮರು ಶರ್ಮರ ವಿದ್ವತ್ತಿಗೆ ಬೆರಗಾಗಿ ಶಾಲು ಹೊಚ್ಚಿದ್ದಾರೆ. ಅಂಥದ್ದರಲ್ಲಿ ವಯಸ್ಸು, ವಿದ್ಯೆ ಯಾವ ಮಾನದಲ್ಲೂ ಅವರೆದುರು ಕಾಣಿಸದ ಕಣದಂತಿರುವ ನನ್ನಂಥ ಯಕಃಶ್ಚಿತ ಹುಡುಗನ ಬಗ್ಗೆ ಅವರಿಗೆ ಆಮಟ್ಟಿಗಿನ ವಿನಾಕಾರಣ ವಾತ್ಸಲ್ಯ ಸಾಧ್ಯವಾಯಿತು ಎಂದಾದರೆ ಆ ಪ್ರೇಮಮಯಿ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹೇಗೆ ಹಿಡಿದಿಡುವುದು? ವಾಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ತಂದ, ಸಂಸ್ಕೃತದ ಜ್ಞಾನಭಂಡಾರವನ್ನು ಅರಗಿಸಿಕೊಂಡು ಅರವತ್ತು ಕೃತಿಗಳನ್ನು ಕೊಟ್ಟ ಅವರ ವಿದ್ವತ್ತು ಅನುಪಮವಾದದ್ದು. ಆದರೆ ಆ ಬಗ್ಗೆ ಅದೇ ಜಾಡಿನಲ್ಲಿ ಜ್ಞಾನ ಸಂಪಾದನೆ ಮಾಡಿದವರು ಮಾತನಾಡಬೇಕಾಗುತ್ತದೆ. ಶತಾವಧಾನಿ ಆರ್. ಗಣೇಶರು ರಂಗನಾಥ ಶರ್ಮರ ಬದುಕು- ಬರಹಗಳ ಕುರಿತೇ ಬರೆದಿರುವ 'ವಾಣೀ ವಾಹನ' ಕೃತಿಯನ್ನು ಓದಿದಾಗ ಸ್ಪಷ್ಟವಾಗಿದ್ದು- ರಂಗನಾಥಜ್ಜ ಎಲ್ಲರನ್ನೂ ಅಷ್ಟೇ ತೀವ್ರ ಕಕ್ಕುಲಾತಿಯಿಂದ ನೋಡಿದ್ದು ಅಂತ. ಹೀಗಾಗಿ ಅವರ ವಿದ್ವತ್ತಿನ ವಿಷಯ ಹಾಗಿರಲಿ, ಅವರಿಗೆ ಅಷ್ಟು ತೀವ್ರವಾಗಿ ಪ್ರೀತಿಸುವುದು ಅದು ಹೇಗೆ ಸಾಧ್ಯವಾಯಿತು ಎಂಬುದೇ ವಿಸ್ಮಯವಾಗಿ ಕಾಡುತ್ತಿದೆ.
ನಿಮ್ಮ ದಿನಚರಿ ಏನು ಎಂದು ಕೇಳಿದಾಗ ಹೇಳಿದ್ದರು- 'ಬೆಳಗ್ಗೆ ಒಬ್ಬರು ಬಂದು ನನಗೆ ಎಲ್ಲ ಪತ್ರಿಕೆಗಳನ್ನೂ ಓದಿ ಹೋಗ್ತಾರೆ. ಈಗ ಹೊರಗಡೆ ಸುತ್ತಾಟಕ್ಕೆ ಹೋಗೋಕಾಗಲ್ಲ. ಅವರಿವರು ಬಂದು ಭೇಟಿಯಾಗಿ ಪ್ರೀತಿಯಿಂದ ಮಾತಾಡಿ ಹೋಗ್ತಾರೆ. ಊಟ- ವಿಶ್ರಾಂತಿ ಬಳಿಕ ಮಧ್ಯಾಹ್ನದ ಹೊತ್ತು ಶಾಸ್ತ್ರ- ಗ್ರಂಥಗಳನ್ನು ಓದಿಸಿಕೊಳ್ಳುವುದು, ಆ ಬಗ್ಗೆ ಚರ್ಚೆ ಎಲ್ಲ ಆಗ್ತಿರುತ್ತೆ.' ಎಂಥ ಜೀವನೋತ್ಸಾಹ!
'ಅಲ್ವೋ. ಊಟ- ವಸತಿಗೆಲ್ಲ ಏನು ಮಾಡ್ಕೊಂಡಿದೀಯಾ? ಪತ್ರಿಕೆಯಲ್ಲಿ ಕೊಡುವ ಹಣ ಸಾಕಾಗುತ್ತೇನೋ' ಎಂಬ ಕಾಳಜಿಯ ವಿಚಾರಣೆ. 'ಈಗ ಅಂಥ ಸ್ಥಿತಿ ಏನಿಲ್ಲ, ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ' ಎಂದು ಸಂಬಳದ ಬಗ್ಗೆ ಹೇಳಿದಾಗ, 'ಪರವಾಗಿಲ್ಲ ಕಣಯ್ಯಾ, ಅಷ್ಟು ಕೊಡ್ತಾರೆ ಅಂದ್ರೆ..' ಎನ್ನುತ್ತ ಪತ್ರಿಕೆ ಹೇಗೆ ನಡೆಯುತ್ತೆ, ಏನೆಲ್ಲ ಬದಲಾವಣೆಗಳಾಗಿವೆ, ಪ್ರಸರಣ ಯಾವ ಪತ್ರಿಕೆಯದ್ದು ಎಷ್ಟು ಎಂಬುದನ್ನೆಲ್ಲ ಪ್ರಶ್ನಿಸಿ ಅತ್ಯಂತ ಕುತೂಹಲದಿಂದ ತಿಳಿದುಕೊಂಡರು. 'ನಿಮ್ಮ ಪ್ರತಾಪ ಸಿಂಹ ಬಹಳ ಚೆನ್ನಾಗಿ ಬರೀತಾನೆ. ನೀನು ಅನುವಾದಿಸಿದ ಪುಸ್ತಕವನ್ನೂ ನಿನ್ನಪ್ಪ ಕೊಟ್ಟು ಹೋಗಿದ್ದರು. ಓದಿಸಿದೆ. ಮುನ್ನುಡಿಯಲ್ಲಿ ವಿಶ್ವೇಶ್ವರ ಭಟ್ಟರು ನಿನ್ನ ಬಗ್ಗೆ ಚೆನ್ನಾಗಿ ಬರ್ದಿದಾರೆ..' ಬಹುಶಃ ಕಿರಿಯರಿಗೆ ಹೀಗೆಲ್ಲ ಪ್ರೋತ್ಸಾಹಿಸುತ್ತಲೇ ರಂಗನಾಥಜ್ಜ ನಿಜಾರ್ಥದಲ್ಲಿ ಹಿರಿಯರಾದರು.
ನಮ್ಮ ಕುಟುಂಬದಲ್ಲಿ ಯಾವತ್ತೋ ಆಗಿಹೋದ ಸಾವೊಂದನ್ನು ನೆನೆದು, 'ನಿಮ್ಮಜ್ಜಿ ಅವತ್ತು ಬೆಂಗಳೂರಿಗೆ ಬಂದಾಗ ನಮ್ಮ ಮನೆಯಲ್ಲೇ ಉಳಿದಿದ್ದಳು. ತುಂಬ ದುಃಖ ಪಟ್ಳು. ಪುತ್ರ ಶೋಕಂ ನಿರಂತರಂ...' ಎನ್ನುತ್ತ ತಮ್ಮ ಕರುಳಿಗೆ ಆಗಷ್ಟೇ ತಾಗಿದ ವೇದನೆ ಎಂಬಂತೆ ಭಾವುಕರಾದರು. ಅವರ ಬದುಕಿಗೆ ವಾಸ್ತವದಲ್ಲಿ ಏನೂ ಅಲ್ಲದ ನನ್ನನ್ನು ಆಶೀರ್ವದಿಸಿ ಬೀಳ್ಕೊಡುತ್ತ, 'ಮೈಸೂರಿಗೆ ಬದಲಾವಣೆ ಹೊಂದುತ್ತಿದ್ದೇನೆ. ಇನ್ನು ನೀನು ಸಿಗುವುದು ಯಾವಾಗಲೋ ಏನೋ' ಅಂದರು. ಒಂದು ಅನಿರ್ವಚನೀಯ ಭಾವದೊಂದಿಗೆ ಅಲ್ಲಿಂದ ಹೊರಬೀಳುವ ಹೊತ್ತಿಗೆ ಅವರು ಆಕಾಶವಾಣಿಯ ಪ್ರದೇಶ ಸಮಾಚಾರಕ್ಕೆ ಕಿವಿಯಾಗುತ್ತಿದ್ದರು. ಉಳಿದಿದ್ದು ಅದೊಂದೇ ಬೆರಗಿನ ಪ್ರಶ್ನೆ- ಇವರಿಗೆ ಎಲ್ಲವನ್ನೂ ಇಷ್ಟೆಲ್ಲ ಉತ್ಕಟವಾಗಿ ಪ್ರೀತಿಸುವುದು ಹೇಗೆ ಸಾಧ್ಯವಾಗುತ್ತಿದೆ?
----
ಹೊಸ ತಲೆಮಾರಿನ ಹುಡುಗರು ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಟಾಟಾ- ಬಿರ್ಲಾಗಳಲ್ಲಿ ನಮ್ಮ ಆದರ್ಶ-ಅಭಿಲಾಷೆ ಕಂಡುಕೊಂಡಿದ್ದೇವೆ. ತಪ್ಪೇನಿಲ್ಲ. ಆದರೆ ಬದುಕಿನ ಪೂರ್ಣತ್ವಕ್ಕೆ ಬೇಕಾದ ಮೌಲ್ಯ-ಶೈಲಿಗಳನ್ನು ರಂಗನಾಥ ಶರ್ಮರಂಥ ಹಿರಿಯರ ಪದತಲದಲ್ಲೂ ಅರಸಬೇಕು ಎಂಬ ಅರಿವು ಮೂಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಎಂದಿನ ಫ್ಲೈ ಓವರ್‌ಗಳ ಕೆಳಗೆ ನಮ್ಮ ಲಕ್ಷ್ಯಕ್ಕೆ ಬಾರದೆ, ಹೊಸದಾಗಿಯೇ ಕಂಗೊಳಿಸುತ್ತಿರುವ ಹಳೆರಸ್ತೆಗಳಲ್ಲಿ ನಡೆಯಬೇಕು. ಫೇಸ್‌ಬುಕ್ ಪ್ರೀತಿಸುತ್ತಲೇ ಬಿಡುವು ಮಾಡಿಕೊಂಡು ಧೂಳು ಹಿಡಿದ ಗ್ರಂಥಾಲಯಗಳ ಆವಾರವನ್ನೂ ಇಣುಕಬೇಕು. ಮಾಗಿದ ಜೀವಗಳ ಬಳಿ ಕುಳಿತು ಅವರ ಮಾತಿನ ನಾವೆಯೇರಿ ನಾವೆಂದೂ ನೋಡಿರದ ಕಾಲಗರ್ಭಗಳನ್ನು ಹೊಕ್ಕು ಬರಬೇಕು. ಅವೆಲ್ಲ ಸಾಧ್ಯವಾದರೆ ಬದುಕನ್ನು ಉತ್ಕಟವಾಗಿ ಪ್ರೀತಿಸುವ ಪರಿ ನಮ್ಮೆದುರೂ ತುಸು ತೆರೆದುಕೊಂಡೀತೇನೋ....
- ಚೈತನ್ಯ ಹೆಗಡೆ
cchegde@gmail.com