ವಿಶೇಷ ಸೌಲಭ್ಯ, ಮೀಸಲಾತಿಯಲ್ಲಿ ಬದಲಾವಣೆ ಬೇಕಿದೆ
ಭಾರತೀಯ ಸಂವಿಧಾನದ ವಿಧಿ 15(3)ರಲ್ಲಿ ಮಹಿಳಾ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಬಹುದೆಂತಲೂ ಹಾಗೂ ವಿಧಿ 16(4)ರಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಸಾರ್ವಜನಿಕ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ದತ್ತವಾಗಿದೆ. ಈ ಎರಡೂ ಅವಕಾಶಗಳು ವಿಧಿ 14ರಲ್ಲಿ ಪ್ರತಿಷ್ಠಾಪಿಸಲಾದ ಸಮಾನತೆಗೆ ವ್ಯತಿರಿಕ್ತವಾಗಿ ಅಳವಡಿಸಲಾಗಿಲ್ಲ. ಸಂವಿಧಾನದ ತಿರುಳೇ ಸಮಾನತೆ ಹಾಗೂ ಸಮಾನ ಅವಕಾಶ. ಆದರೆ ನಮ್ಮ ಸಮಾಜದಲ್ಲಿ ಕೆಲವರು ಸಮಾನ ಅವಕಾಶದಿಂದ ಸ್ವಾಭಾವಿಕವಾಗಿ ವಂಚಿತರಾಗಿದ್ದರೆ ಎನ್ನುವುದು ವಾಸ್ತವ ಸತ್ಯ. ಅವರೇ ಈ ಹಿಂದುಳಿದವರು. ಹಿಂದುಳಿದಿರುವಿಕೆಯನ್ನು ಮೂರು ಮುಖ್ಯ ಲಕ್ಷಣಗಳಿಂದ ಗುರುತಿಸಲಾಗಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವಿಕೆ.
ಈ ವರ್ಗದವರು ಮುಖ್ಯವಾಹಿನಿಯಲ್ಲಿರುವವರೊಡನೆ ಸ್ಪರ್ಧಿಸಲು ಅಸಮರ್ಥರಾಗಿದ್ದಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಇವರನ್ನು ಒಂದು ನೆಗೆತದ ಮೂಲಕ ಮುಖ್ಯವಾಹಿನಿಗೆ ಬರುವಂತೆ ಪ್ರೇರೇಪಿಸುವುದೇ ಮೀಸಲಾತಿಯ ಉದ್ದೇಶ. ಈ ವಿಚಾರವಾಗಿ ಮಂಡಲ ಆಯೋಗದ ವರದಿ ಎಂದೇ ಪ್ರಖ್ಯಾತವಾದ ಪ್ರಕರಣದಲ್ಲಿ ಇಂದಿರಾ ಸ್ವಹಾನಿ ಮತ್ತಿತರರು ಸಲ್ಲಿಸಿದ ದೂರಿನ ಕುರಿತಾಗಿ ಸರ್ವೋಚ್ಚ ನ್ಯಾಯಾಲಯದ ನವ ಸದಸ್ಯ ಸಂವಿಧಾನ ಪೀಠ ವಿಸ್ತೃತವಾದ ಚರ್ಚೆ ನಡೆಸಿದೆ.
ಸಂವಿಧಾನದ ರಚನೆಯ ಕಾಲಕ್ಕೆ ಮೀಸಲಾತಿ ಆದ್ಯತೆಯ ಪಟ್ಟಿಯಲ್ಲಿರಲಿಲ್ಲ. ಆದರೆ ಆ ಕಾಲದ ವಾಸ್ತವಿಕ ಸ್ಥಿತಿಯನ್ನು ಲಕ್ಷಿಸಿ ಶೀಘ್ರಾತಿ ಶೀಘ್ರದಲ್ಲಿ ಸಮಾನತೆಯನ್ನು ಸಾಧಿಸುವ ಪರಮ ಉದ್ದೇಶದಿಂದ ತಾತ್ಕಾಲಿಕ ಕ್ರಮವೆಂಬಂತೆ ಮೀಸಲಾತಿಯನ್ನು ಅಳವಡಿಸಲಾಯಿತು. ಮೊದಲು ಹತ್ತು ವರ್ಷಕ್ಕೆ ಸೀಮಿತವಾದ ಮೀಸಲಾತಿ ಹತ್ತತ್ತೇ ವರ್ಷಕ್ಕೆ ವಿಸ್ತರಿಸಲ್ಪಡುತ್ತಾ ಬಂದಿತಲ್ಲದೆ ಈಗ ಅದರ ಪ್ರಮಾಣ ಕೂಡ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಈ ಪರಿಸ್ಥಿತಿಗೆ ನಮ್ಮ ರಾಜಕೀಯವೇ ಕಾರಣ. ಮೀಸಲಾತಿ ಹಾಗೂ ವಿಶೇಷ ಸೌಲಭ್ಯಗಳ ಮೂಲ ಉದ್ದೇಶ ಮರೆತ ರಾಜಕಾರಣಿಗಳು ಅದು ರಾಜಕೀಯವಾಗಿ ಬೀರಿದ ಪ್ರಭಾವಕ್ಕೆ ಮಾರು ಹೋಗಿದ್ದಾರೆ. ಹಿಂದುಳಿದವರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು ಇತ್ಯಾದಿ ಸಾಮಾಜಿಕ ವಿಭಜನೆಗಳನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಲು ರಾಜಕಾರಣಿಗಳಿಗೆ ಅನುಕೂಲವಾಯಿತು. ಲಾಭವೂ ಆಯ್ತು. ರಾಜಕೀಯ ದೃಷ್ಟಿಯಿಂದ ಇದರ ಮುಂದುವರಿಕೆ ಅನಿವಾರ್ಯವಾಯ್ತು. ವಿರೋಧಪಕ್ಷದಲ್ಲಿದ್ದ ರಾಜಕಾರಣಿಗಳೂ ಇದು ಬಹಳ ಸೂಕ್ಷ್ಮ ವಿಚಾರವೆಂದೇ ಪರಿಗಣಿಸಿದರು. ಮುಂದೊಂದು ದಿನ ತಮಗೂ ಅಧಿಕಾರಕ್ಕೆ ಬರಲು ಇದು ಸಹಕಾರಿ ಎಂಬ ಕಾರಣಕ್ಕಾಗಿ ಚರ್ಚಾತೀತವಾಗಿ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿದರು. ಸದ್ಯ ಎಲ್ಲ ರಾಜಕೀಯ ಪಕ್ಷಗಳಿಗೂ ಮೀಸಲಾತಿ ಕಾಮನ್ ಅಜೆಂಡಾ.
1992ರಲ್ಲಿ ಹೊರಬಿದ್ದ ಮಂಡಲ ಆಯೋಗದ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಮೀಸಲಾತಿಯ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದೆ. ಮೀಸಲಾತಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ಅದು 'ಒಂದು ಸಲದ' ಪ್ರಯೋಜನ. ಅಂಥ ಅವಕಾಶ ಪಡೆದವರು ಮುಖ್ಯವಾಹಿನಿಯಲ್ಲಿರುವವರೊಡನೆ ಸ್ಪರ್ಧಿಸುತ್ತಾ ತಮ್ಮ ಪರಿಶ್ರಮದ ಮೂಲಕ ಮುಖ್ಯವಾಹಿನಿಯಲ್ಲಿ ಐಕ್ಯವಾಗಬೇಕೆಂಬುದು ನಿರೀಕ್ಷೆ. ಸಮಾಜದಲ್ಲಿ ಒಂದೇ ವಾಹಿನಿ ಇರಬೇಕೆಂಬುದೇ ಸಂವಿಧಾನದ ಆಶಯ. ಮೀಸಲಾತಿ ಸೌಲಭ್ಯಗಳನ್ನು ಪದೇ ಪದೆ ಹಾಗೂ ಹಂತ ಹಂತದಲ್ಲಿ ನೀಡಿದರೆ ಸಮಾಜದಲ್ಲಿ ಪ್ರತ್ಯೇಕ ವಾಹಿನಿಯೊಂದು ಸೃಷ್ಟಿಯಾಗುತ್ತದೆ. ಅದು ಮೀಸಲಾತಿ ಉದ್ದೇಶಕ್ಕೆ ಹಾಗೂ ಸಂವಿಧಾನದ ಆಶಯಕ್ಕೆ ವಿರೋಧ ಎಂದು ಘನ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಗಾಗಿ ಭಡ್ತಿ ಮೀಸಲಾತಿಗೆ ಆರ್ಟಿಕಲ್ 16(4) ಪ್ರೇರಣೆ ನೀಡುವುದಿಲ್ಲವೆಂತಲೂ ಸಾರಿದೆ. ಮುಂದುವದು 'ಹಿಂದುಳಿದಿರುವಿಕೆಯನ್ನು ಜನ್ಮಸಿದ್ಧ ಹಕ್ಕು ಎಂದು ಆ ವರ್ಗದ ಜನ ಭಾವಿಸಬಾರದು. ಮೀಸಲಾತಿ ಪ್ರಯೋಜನ ಪಡೆದು ಪ್ರಗತಿ ಹೊಂದುತ್ತಲೇ ಮೇಲ್ಸ್ತರಕ್ಕೆ ಕಾಲಿಡಬೇಕು. ಈ ಪ್ರಗತಿಯನ್ನು ನಿರ್ಣಯಿಸಿ ನಿಯಂತ್ರಿಸಲು 'ಕೆನೆಪದರ' (Creamy layer) ಎಂಬ ಮಾನದಂಡ ನಿಗದಿ ಪಡಿಸಬೇಕೆಂದು' ಸಹ ಘನ ನ್ಯಾಯಾಲಯ ಸೂಚನೆ ನೀಡಿದೆ.
ತೀರ್ಪಿನ ಇನ್ನೊಂದು ಪ್ರಮುಖ ಅಂಶವೆಂದರೆ ಸರಕಾರ ಮೀಸಲಾತಿ ನಿಗದಿಪಡಿಸುವಾಗ ಹಾಗೂ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸುವಾಗ ವಹಿಸಬೇಕಾದ ಎಚ್ಚರಿಕೆ. ಸಂವಿಧಾನದ ವಿಧಿ 335ರಲ್ಲಿ ಉಲ್ಲೇಖಿಸಲಾದ ಆಡಳಿತದಲ್ಲಿ ಸಂಗತವಾದ ದಕ್ಷತೆಗೆ ಧಕ್ಕೆಯಾಗದಂತೆ ಮೀಸಲಾತಿ ಅಳವಡಿಸಬೇಕೆಂಬ ಎಚ್ಚರಿಕೆ ನೀಡಿದೆಯಲ್ಲದೆ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50ಕ್ಕಿಂತ ಅಧಿಕವಾಗ ಕೂಡದು ಎಂದು ಸಹ ಕಿವಿಮಾತು ಹೇಳಿದೆ. ಸರ್ಕಾರ ಈ ಯಾವ ನಿರ್ದೇಶನಗಳನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ನ್ಯಾಯಾಲಯ ಸೂಚನೆ ನೀಡುತ್ತಿರುವಂತೆ ಸಂವಿಧಾನ ತಿದ್ದುಪಡಿ ಮಾಡುತ್ತಾ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. 77ನೇ ತಿದ್ದುಪಡಿ ಮೂಲಕ 16(4ಎ) ಎಂಬ ಉಪ ಕಲಂ ಅನ್ನು ಸೃಜಿಸಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಪದೋನ್ನತಿಯಲ್ಲಿ ಮೀಸಲಾತಿಯನ್ನು ಸಂವಿಧಾನ ಬದ್ಧಗೊಳಿಸಲಾಯ್ತು. ಆರ್ಟಿಕಲ್ 335ಕ್ಕೆ ತಿದ್ದುಪಡಿ ತಂದು (ಅದು 82ನೇ ತಿದ್ದುಪಡಿ) ಅರ್ಹತೆಯ ಮಾನದಂಡವನ್ನು ಸಡಿಲಿಸಿ ದಕ್ಷತೆಯಲ್ಲಿ ನೇರ ರಾಜಿ ಮಾಡಿಕೊಳ್ಳಲಾಯ್ತು. ಈ ದೇಶ ಕಂಡ ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ರಾಜಕಾರಣಿಗಳಲ್ಲೊಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಯವರ ನೇತೃತ್ವದ ಕೇಂದ್ರ ಸರ್ಕಾರ 85ನೇ ಸಂವಿಧಾನ ತಿದ್ದುಪಡಿ ಮೂಲಕ ಆರ್ಟಿಕಲ್ 16(4ಎ)ಗೆ ವಿಶಿಷ್ಟ ರೂಪಕೊಡಿಸಿ ಪ.ಜಾತಿ ಮತ್ತು ಪ.ಪಂಗಡದ ನೌಕರರ ಸೇವಾ ಜೇಷ್ಠತೆಯನ್ನು ಪದೋನ್ನತಿಯ ಪ್ರತಿಹಂತದಲ್ಲೂ 1995 ರಿಂದಲೇ ಪೂರ್ವಾನ್ವಯವಾಗುವಂತೆ ಉಳಿಸಿಕೊಳ್ಳುವ ಅವಕಾಶ ಕಲ್ಪಿಸಲಾಯ್ತು. ಇದರಿಂದ ಎಲ್ಲ ರಾಜಕೀಯ ಪಕ್ಷಗಳ ನಿಲುವು ಮೀಸಲಾತಿ ಬಗ್ಗೆ ಒಂದೇ ಎಂದಂತಾಯ್ತು.
ಪರಂತು 85ನೇ ಸಂವಿಧಾನ ತಿದ್ದುಪಡಿಯನ್ನು ಪ್ರಶ್ನಿಸಿದ ಕರ್ನಾಟಕದ ಎಂ. ನಾಗರಾಜ್ ಅವರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ದತ್ತವಾಗಿರುವುದನ್ನು ಎತ್ತಿ ಹಿಡಿದರೂ ಸರ್ಕಾರ ತನ್ನ ವಿವೇಚನಾ ಸಾಮರ್ಥ್ಯವನ್ನು ನ್ಯಾಯಯುತವಾಗಿ ಬಳಸಲಿಲ್ಲ ಎಂಬುದನ್ನು ಬೊಟ್ಟು ಮಾಡಿದೆ. ಮೇಲಿನ ತಿದ್ದುಪಡಿಯಲ್ಲಿ ಹಾಗೂ ಮೂಲ ಆರ್ಟಿಕಲ್ 16(4)ರಲ್ಲಿಯೂ ಸರ್ಕಾರ ಮೀಸಲಾತಿ ನಿಗದಿಪಡಿಸುವ ಮುನ್ನ ಬೇಡಿಕೆಯ ಪ್ರಮಾಣ ನಿರ್ಧರಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ವಿಧಿ 16(4)ರಲ್ಲಿ 'ಸಾರ್ವಜನಿಕ ನೇಮಕಾತಿಯಲ್ಲಿ ಯಾವುದಾದರೂ ವರ್ಗದ ಜನರ ಪ್ರಾತಿನಿಧ್ಯ ಸಾಕಷ್ಟಿಲ್ಲ ಎಂದು ಸರಕಾರ ಭಾವಿಸುವುದಾದರೆ' ಎಂಬ ಪದ ಪ್ರಯೋಗವಿದೆ. ಇದರರ್ಥ ಮೀಸಲಾತಿ ಅಳವಡಿಸುವ ಮುನ್ನ ಆ ವರ್ಗದ ಪ್ರಾತಿನಿಧ್ಯ ಎಷ್ಟಿದೆ ಹಾಗೂ ಯಾವ ಪ್ರಮಾಣದಲ್ಲಿ ಅಳವಡಿಸಬೇಕೆನ್ನುವ ನಿಷ್ಕರ್ಷೆ ಸರ್ಕಾರ ಮಾಡಬೇಕಾಗಿತ್ತು.
ಆದರೆ ಸರ್ಕಾರ ಕೇವಲ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಪ್ರಮಾಣ ನಿಗದಿಪಡಿಸಿದೆ ಹಾಗೆ ಆ ಪ್ರಮಾಣ ಈಗಲೂ ಮುಂದುವರಿಯುತ್ತಿದೆ. ಇಷ್ಟು ವರ್ಷಗಳ ಬಳಿಕವೂ ಮೀಸಲಾತಿಯ ಪರಿಣಾಮ ಏನಾಗಿದೆ ಎಂಬ ಬಗ್ಗೆ ಹಾಗೂ ಪ್ರಸಕ್ತ ಬೇಡಿಕೆಯ ನಿಖರತೆಯ ನಿಷ್ಕರ್ಷೆಯ ಗೋಜಿಗೆ ಹೋಗಲೇ ಇಲ್ಲ. ನಿಜವಾದ ಬೇಡಿಕೆಯ ನಿಗದಿಯನ್ನು ಯಾವತ್ತೂ ಮಾಡಲಾಗಿಲ್ಲ. ಈ ವಿಚಾರವನ್ನು ಸಮೀಕ್ಷೆಗೆ ಗುರಿಪಡಿಸುವುದಿಲ್ಲ. ಕಾರಣವೇನೆಂದರೆ ಸಮೀಕ್ಷೆಯ ಫಲಿತಾಂಶ ರಾಜಕೀಯ ಹಿತಾಸಕ್ತಿಗೆ ಅಡ್ಡಿ ಬಂದೀತೆಂಬ ಅನುಮಾನ. ಆ ವರ್ಗದ ಜನರ ಒಟ್ಟು ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಮೀಸಲಾತಿ ಪ್ರಮಾಣ ಇನ್ನೂ ಹೆಚ್ಚಿಸಬೇಕೆಂಬ ಹತಾಶ ಪ್ರಯತ್ನದಲ್ಲಿಯೇ ಜನನಾಯಕರಿದ್ದಾರೆ. ಇನ್ನಾದರೂ ಸರಕಾರದ ದೃಷ್ಟಿಕೋನ ಬದಲಾಗಬೇಕಲ್ಲವೇ?
ಈ ಬಗ್ಗೆ ಪಾಶ್ಚಾತ್ಯ ರಾಷ್ಟ್ರದ ಕಡೆ ನೋಡಬೇಕಾದೀತು. ಅಮೆರಿಕದಲ್ಲಿ Affirmation ಎಂಬ ಮೀಸಲಾತಿ ಪ್ರಯೋಜನದ ಅವಕಾಶವಿದೆ. ಆದರೆ ಅಲ್ಲಿ ಆ ವ್ಯಾಪ್ತಿಯಲ್ಲಿ ಬರುವ ಮಂದಿಗಳಲ್ಲಿ ಅನೇಕರು ಮುಖ್ಯವಾಹಿನಿಯಲ್ಲಿಯೇ ಸ್ಪರ್ಧಿಸಿ ತಮ್ಮ ಪ್ರತಿಭೆಗೆ ತಕ್ಕ ಉದ್ಯೋಗ ಪಡೆಯುತ್ತಾರೆ. ಭಾರತದಲ್ಲಿ ಅಂಥ ಮನಸ್ಥಿತಿಯ ಯುವಕರು ಇಲ್ಲವೆಂದು ವಾದಿಸುವುದು ಅವಸರದ ತೀರ್ಮಾನವಾದೀತು. ಆದರೆ ಸರ್ಕಾರವೇ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಪ್ರತಿ ವರ್ಷವೂ ಮೀಸಲಾತಿ ಪ್ರಮಾಣವನ್ನು ತುಸು ಕಡಿಮೆ ಮಾಡುತ್ತಾ ಸ್ಪರ್ಧಾ ಮನೋಭಾವವನ್ನು ಪ್ರೇರೇಪಿಸುವ ಕೆಲಸವನ್ನು ಪ್ರಗತಿಪರ ಸರ್ಕಾರ ಮಾಡಬೇಕು.
ಮೀಸಲಾತಿ ಹಾಗೂ ಇತರೇ ಸೌಲಭ್ಯಗಳ ಯೋಜನೆ ಜಾರಿಗೊಳಿಸುವ ಮೊದಲು ಸಾಕಷ್ಟು ಚಿಂತಿಸಿ ಅದು ಮತ ಬ್ಯಾಂಕ್ ರಾಜಕೀಯ ಎಂಬ ಅನುಮಾನ ಮೂಡದಂತೆ ನೋಡಿಕೊಳ್ಳುವುದು ಉತ್ತಮ. ಸರ್ಕಾರ ಈಗ ಅಭಿವೃದ್ಧಿ ಎಂಬ ಹುಸಿ ಕವಚಗೊಳಗಡೆ ನೀಡುವ ಕೊಡುಗೆ ಅನುಚಿತ ಹಾಗೂ ಅಪ್ರಸ್ತುತ. ಕೇವಲ ರಾಜಕೀಯ ಉದ್ದೇಶವೆಂದರೆ ತಪ್ಪಾಗಲಾರದು. ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳು ಪ್ರಾಥಮಿಕ ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಪ್ರತಿದಿನದ ಹಾಜರಾತಿಗೆ ರು. 2ರಂತೆ ಅನುದಾನ ಘೋಷಿಸಿರುವುದು ಒಂದು ಜ್ವಲಂತ ನಿದರ್ಶನ. ಕರ್ನಾಟಕದಲ್ಲಿ 2011ರ ಜನಗಣತಿಯಂತೆ ಮಹಿಳಾ ಸಾಕ್ಷರತೆ ಶೇ. 68.13 ಇದೆ. 2001-2011ರ ದಶಕದಲ್ಲಿ ಸುಮಾರು ಶೇಕಡಾ 12ರಷ್ಟು ಮಹಿಳಾ ಸಾಕ್ಷರತೆಯಲ್ಲಿ ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಈಗ ಪ್ರಾಥಮಿಕ ಶಾಲೆಗಳ ಅಭಿವೃದ್ಧಿ, ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ, ಆರೋಗ್ಯಪೂರ್ಣ ಶಾಲಾ ಪರಿಸರದಂಥ ಉತ್ತಮ ಯೋಜನೆಗಳನ್ನು ರೂಪಿಸಬೇಕಾದ ಕಾಲದಲ್ಲಿ ಹೆಣ್ಣು ಮಕ್ಕಳ ಶಾಲಾ ಹಾಜರಾತಿಗೆ ಅನುದಾನ ಘೋಷಿಸಿದ ಪರಿಯನ್ನು ನೋಡುವಾಗ ಇವರಿಗೆ ಸ್ವಲ್ಪವೂ ಮುಜುಗರವೆಂಬುದಿಲ್ಲ ಎಂದೆನಿಸುತ್ತದೆ. ನಮಗೆ ಸ್ವಾತಂತ್ರ್ಯ ದೊರೆತು ಆರೂವರೆ ದಶಕಗಳೇ ಕಳೆದಿದೆ. ಜನ ಬದಲಾಗಿದ್ದಾರೆ ಸಾಕಷ್ಟು ತಿಳುವಳಿಕೆ ಹೊಂದಿದ್ದಾರೆ. ಇನ್ನಾದರೂ ಓಟ್ಬ್ಯಾಂಕ್ ಉದ್ದೇಶದಿಂದ ಜನಮರುಳು ಕಾರ್ಯಕ್ರಮಗಳನ್ನು ಬಿಡುವುದು ಒಳಿತು.
- ಬೇಳೂರು ರಾಘವ ಶೆಟ್ಟಿ
ಉಡುಪಿ