ಶಾಲಾ ಅಭಿವೃದ್ಧಿ ವ್ಯವಸ್ಥೆಯೇ ಬೇಡವೆ?
ದಿನಾಂಕ 5ನೇ ಫೆಬ್ರವರಿಯಂದು ಕಿರಣ್ ಜೋಶಿ ಬರೆದ ಲೇಖನ ಓದಿ ಸಂತೋಷವೇನೋ ಆಯಿತು. ಆದರೆ ಅವರು ತಮ್ಮ ಬರಹದಲ್ಲಿ "ಶಿಕ್ಷಕರನ್ನು ವ್ಯವಸ್ಥೆಯು ಬಹಳವಾಗಿ ತನ್ನ ಕೈ ಬೊಂಬೆಯಾಗಿಸಿಕೊಂಡಿರುವುದು, ಅದರಿಂದ ಶಿಕ್ಷಕ ಪಾಠಪ್ರವಚನ ಮಾಡುವಲ್ಲಿ ಗುಣಮಟ್ಟದ ಸಮಯ (ಕ್ವಾಲಿಟಿ ಟೈಮ್) ಕೊಡಲು ಸಾಧ್ಯವಾಗದೇ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ ಇಂದು ಸರ್ಕಾರಿ ಶಾಲೆಗಳಲ್ಲಿ ಬೋಧನೆಯು ಆತಂಕ ಪರಿಸ್ಥಿತಿಯನ್ನು ಎದುರಿಸುತ್ತಿದೆ" ಎಂಬ ತಲ್ಲಣದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಅದು ಭಾಗಶಃ ಸರಿಯಿರಬಹುದೇನೋ. ಆದರೆ ಅದು ಶಿಕ್ಷಣದ ಒಂದು ಮುಖ, ಅದನ್ನು ನೂರಕ್ಕೆ ನೂರು ಇಲ್ಲ ಎಂದು ತಳ್ಳಿ ಹಾಕುವಂತಿಲ್ಲ. ಆದರೆ ಅದೇ ನೂರಕ್ಕೆ ನೂರು ವಾಸ್ತವವಲ್ಲ. ನಾನೂ ಸಹ ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕನಾಗಿ ದುಡಿದ ತಂದೆಯ ಮಗನಾಗಿ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರ ತರಬೇತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಶಿಕ್ಷಕರು ತಮ್ಮ ಕರ್ತವ್ಯವನ್ನು ಬಹುತೇಕ ಮರೆಯುತ್ತಿದ್ದಾರೆ. ಕಿರಣ್ ಜೋಶಿಯವರು "ಶಿಕ್ಷಕರನ್ನು ಆಡಳಿತಾತ್ಮಕ ಚಟುವಟಿಕೆಗಳಿಂದ ಮುಕ್ತಗೊಳಿಸಿ, ಬರಿ ಪಾಠ ಮಾಡಲು ಅವಕಾಶ ಕೊಡಿ" ಎನ್ನುತ್ತಾರೆ. ಇದು ಒಂದು ಕಾಲ ಘಟ್ಟಕ್ಕೆ ಸರಿಹೊಂದುತ್ತಿತ್ತು, ಹೊಂದಿತ್ತೂ ಕೂಡ. ಆದರೆ ಇಂದು ಯಾವುದೇ ಶಾಲೆಯ ಮುಖೋಪಾಧ್ಯಾಯರನ್ನಾಗಲಿ ಈ ವಿಚಾರವಾಗಿ ಕೇಳಿದರೆ, ಅವರು ಈ ಅಧಿಕಾರವನ್ನು ಬಿಟ್ಟುಕೊಡಲು ತಯಾರಿರುವುದಿಲ್ಲ. ಅದರಲ್ಲಿ ಅದರದ್ದೇ ಆದ ಲಾಭವಿರಬಹುದು.
ಶಾಲಾ ಅಭಿವೃದ್ಧಿ ಮತ್ತು ವ್ಯವಸ್ಥಾಪಕ ಸಮಿತಿ (ಎಸ್ಡಿಎಂಸಿ) ಬಂದದ್ದಾರೂ ಯಾಕೆ? ಹಳ್ಳಿಗಳಲ್ಲಿ ಶಿಕ್ಷಕರು ನ್ಯಾಯ ಸಮ್ಮತವಾದ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಯೇ ಎಂಬ ಅನುಮಾನದಿಂದಲೇ ತಾನೇ ಶಾಲಾ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ಬಂದದ್ದು. 73ನೇ ಸಂವಿಧಾನ ತಿದ್ದುಪಡಿಯಿಂದಾಗಿ ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಯಿತು. ಅದರ ಪ್ರಭಾವದಿಂದ ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಂತಹ ವ್ಯವಸ್ಥೆಯು ಆಡಳಿತ ಸುಧಾರಣೆಯ ಹಿನ್ನೆಲೆಯಲ್ಲಿ ಬಂದವು. ಇಂದು ಈ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯುವ ಧೈರ್ಯ ಯಾವ ಸರ್ಕಾರಕ್ಕೆ ಇದೆ ಹೇಳಿ? ಅದು ಆಗುವ ಮಾತೆ? ಆದ ಕಾರಣದಿಂದ ಶಾಲೆಯ ಸರ್ವಾಂಗೀಣ ಸುಧಾರಣೆಯಲ್ಲಿ ಸಮುದಾಯ ಭಾಗವಹಿಸಬೇಕು ಮತ್ತು ಶಾಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದ ಹಿಡಿದು ಪಾಠ ಪ್ರವಚನದ ಗುಣಮಟ್ಟದಲ್ಲಿಯೂ ಸುಧಾರಣೆಯಾಗಿ ವಿಧ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವ ಕೇಂದ್ರವಾಗಿ ಶಾಲೆ ರೂಪಗೊಳ್ಳಬೇಕು ಎಂಬ ಸದುದ್ದೇಶದಿಂದ ಶಾಲಾ ಅಭಿವದ್ಧಿ ಮತ್ತು ವ್ಯವಸ್ಥಾಪಕ ಮಂಡಲಿಯ ರಚನೆಯಾಯಿತು. ಇದರಿಂದ ಆಗಿರುವ ಒಳ್ಳೆಯ ಕೆಲಸವನ್ನೂ ನೋಡಬೇಕು. ಕೆಲವು ಸಲ ರಜಕ್ಕೆ ತೊಂದರೆ ಮಾಡುತ್ತಾರೆ, ಕಾಮಗಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲಾ ಅಭಿವೃದ್ಧಿ ವ್ಯವಸ್ಥೆಯನ್ನೇ ಬೇಡ ಎನ್ನುವುದು ತರವಲ್ಲ.
ಬಹುತೇಕ ಶಿಕ್ಷಕರು ತರಗತಿಗಳಿಗೆ ತಯಾರಾಗಿ ಬರುವುದೇ ಅನುಮಾನ, ಜೊತೆಗೆ ಬಹುತೇಕರಿಗೆ ಬೋಧನಾ ಕೌಶಲ್ಯದ ಬಗ್ಗೆ ಅರಿವಿಲ್ಲ, ಪಾಠಪ್ರವಚನ ಮಾಡುವಾಗ ಪ್ರಸ್ತುತವಿದ್ಯಮಾನಗಳತ್ತ ಸಮೀಕರಿಸಿ ಬೋಧನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿಲ್ಲ. ಇನ್ನೂ ದಾರುಣ ಸಂಗತಿಯೆಂದರೆ ನಾನೇ ನೋಡಿರುವಂತೆ ಶಾಲೆಗಳಿಗೆ ಕುಡಿದು ಬರುವವರಿದ್ದಾರೆ! ನನ್ನ ಎಷ್ಟೋ ತರಬೇತಿಗಳಲ್ಲಿ ಕುಡಿದು ತರಬೇತಿಗೆ ಬಂದಂತಹ ಶಿಕ್ಷಕರನ್ನು ಅವರ ಸಹ ಶಿಕ್ಷಕರೇ ತೋರಿಸಿದ್ದಾರೆ. ಇಂತಹ ವಾತಾವರಣ ಇರುವಲ್ಲಿ ವಾಚ್ ಡಾಗ್ ಬೇಡವೆಂದರೆ ಹೇಗೆ? ಯಾವುದೇ ವ್ಯಕ್ತಿ ಎಂಥದೇ ನೀತಿಗಳನ್ನು ಹೇರಿದರೂ ತನ್ನ ಕೆಲಸವನ್ನು ಪ್ರಾಮಣಿಕವಾಗಿ ಮಾಡಬೇಕು. ಆಗಲೇ ಆತನ ಶ್ರಮಕ್ಕೆ ಗೌರವ. ಸಿ.ಎನ್.ಆರ್. ರಾವ್ ಹಾಗೂ ಸಚಿನ್ರಿಗೆ "ಭಾರತ ರತ್ನ" ನೀಡಿ ಗೌರವಿಸಿದರು. ನಾವುಗಳೆಲ್ಲ ಹೆಮ್ಮೆ ಪಟ್ಟಿದ್ದೇವೆ. ಆದರೆ ಈ ಇಬ್ಬರೂ ಮಹನೀಯರು ಈ ಹಂತ ತಲಪಲು ಅದೆಷ್ಟು ಪರಿಯ ಸಂದಿಗ್ಧತೆಯನ್ನು ಎದುರಿಸಿಲ್ಲ? ಯಾವುದೇ ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ. ಇಂತಹ ಸಣ್ಣ ಪುಟ್ಟ ಸಂದಿಗ್ಧಗಳು ಬದುಕಿನ ಅವಿಭಾಜ್ಯ ಅಂಗ. ಹಾಗಾಗಿ ಶಿಕ್ಷಕರಲ್ಲಿ ನನ್ನ ವಿನಮ್ರ ನಿವೇದನೆ ಏನೆಂದರೆ ಪಲಾಯನವಾದವನ್ನು ಪಕ್ಕಕ್ಕಿಟ್ಟು ನಿಮ್ಮ ಶ್ರಮವನ್ನು ನೂರಕ್ಕೆ ನೂರರಷ್ಟು ಮಕ್ಕಳ ಕಲಿಕೆಯಲ್ಲಿ ಹಾಕಿ ಕೆಲಸ ಮಾಡಿದಲ್ಲಿ ಖಂಡಿತಾ ಶಿಕ್ಷಕ ಸಮುದಾಯದಿಂದ ಅದ್ಭುತವನ್ನು ಸಾಧಿಸಲು ಸಾಧ್ಯ. ಆ ಶಕ್ತಿ ಶಿಕ್ಷಕರಲ್ಲಿದೆ. ಅದನ್ನು ಬಳಸಿಕೊಳ್ಳಿ, ಸಾಧಿಸಿ ತೋರಿಸಿ. ಆಗ ಬೇರೆ ಎಲ್ಲಾ ತೊಂದರೆಗಳು ಮಾಯವಾಗಿ, ಸರ್ಕಾರಿ ಶಿಕ್ಷಣ ವ್ಯವಸ್ಥೆ ಸಧೃಡವಾಗಿ ತಲೆಯೆತ್ತಿ ನಿಲ್ಲುತ್ತದೆ. ಹಾಗಾಗಲೆಂದು ಹಾರೈಸೋಣ.
- ನ.ವೆಂ.ರಂಗನಾಥ
navemranganatha@gmail.com