ಅಂಕಣಗಳು

ಈ ಸರ್ಕಾರಕ್ಕೆ ದೇಶದ ರಕ್ಷಣೆಗಿಂತ ಮತಗಳಿಕೆಯೇ ಹೆಚ್ಚಾಯಿತೇ?

ಪ್ರತಿ ದಿನದ ಪತ್ರಿಕೆಗಳಲ್ಲಿ ಯುಪಿಎ ಸರ್ಕಾರ ತನ್ನ ಸಾಧನೆಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ..

1. ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ 6 ಲಕ್ಷ ಕೋಟಿಗೂ ಅಧಿಕ ಸಾಲ ಸೌಲಭ್ಯ
2. ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಕ್ಷೇತ್ರದ ವ್ಯಾಪ್ತಿ ವಿಸ್ತಾರ
3. ಗ್ರಾಮೀಣ ವಿದ್ಯುದ್ದೀಕರಣಕ್ಕೆ ಹತ್ತು ಹಲವು ಕೋಟಿ ರೂ. ವೆಚ್ಚ
4. ಗ್ರಾಮೀಣ ಸಡಕ್ (ರಸ್ತೆ) ಯೋಜನೆಯಡಿ ಭಾರಿ ಅಭಿವೃದ್ಧಿ
ಪ್ರತಿ ದಿನದ ಪತ್ರಿಕೆಗಳಲ್ಲಿ ಯುಪಿಎ ಸರ್ಕಾರ ತನ್ನ ಸಾಧನೆಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಸರಣಿ ಜಾಹೀರಾತು ಎಲ್ಲರ ಕಣ್ಣು ಕುಕ್ಕುವಂತಿದೆ. ಒಂದೊಂದು ಯೋಜನೆಯಡಿ ಸರ್ಕಾರ ತಾನೇ ಹೇಳಿಕೊಳ್ಳುತ್ತಿರುವಂತೆ ವೆಚ್ಚ ಮಾಡಿರುವ ಹಣದ ಲೆಕ್ಕ ಹಿಡಿದರೆ ಲಕ್ಷ ಕೋಟಿಗಳು ಅಂಕೆಗೇ ಸಿಗುವುದಿಲ್ಲ. ಶಿಕ್ಷಣ, ಆಹಾರ, ಗ್ರಾಮೀಣಾಭಿವೃದ್ಧಿ, ವಿದ್ಯುತ್, ಮೊಬೈಲ್ ಸಂಪರ್ಕ ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ತಾನೆಷ್ಟು ಜನಪರ ಎಂದು ತೋರಿಸಿಕೊಳ್ಳುವುದರ ಮೂಲಕ ಸರ್ಕಾರ ಜನ'ಮತ'ದ ಮೇಲೆ ಕಣ್ಣಿಟ್ಟಿದೆ. ಯಾವುದೇ ಸರ್ಕಾರ ಜನ ಕಲ್ಯಾಣಕ್ಕೆ ಟೊಂಕ ಕಟ್ಟಿ ನಿಂತು ಅದಕ್ಕಾಗಿ ಕೋಟಿಗಟ್ಟಲೆ ಹಣ ಸುರಿದೆ ಎಂದು ಹೇಳಿಕೊಳ್ಳುವುದರಲ್ಲಿ ಮತ್ತು ಅದಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಈ ಯೋಜನೆಗಳ ಫಸಲಿನಲ್ಲಿ ಕಾಳೆಷ್ಟು, ಜೊಳ್ಳೆಷ್ಟು, ಯಾವ ಯೋಜನೆಯ ಲಾಭ ಯಾರಿಗೆ ಎಷ್ಟರ ಮಟ್ಟಿಗೆ ತಲುಪಿದೆ; ಇವುಗಳಿಂದ ಎಷ್ಟು ಜನರ ಬದುಕು ಬಂಗಾರವಾಗಿದೆ ಎಂಬುದು ಬೇರೆ ಮಾತು. 1985ರ ನಂತರ ಇದೇ ಮೊದಲ ಬಾರಿಗೆ ಭಾರತವು ಸತತ ಎರಡು ವರ್ಷಗಳಲ್ಲಿ ಶೇ.5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂಬ ಕರಾಳ ಅಂಕಿ-ಅಂಶಗಳು ಈ ಯೋಜನೆಗಳು, ಅವುಗಳ ಯಶಸ್ಸಿನ ಟೊಳ್ಳುತನಕ್ಕೆ ಕನ್ನಡಿ ಹಿಡಿಯುತ್ತವೆ. ತಕ್ಕ ಮಟ್ಟಿಗೆ ಸೇವಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ಮರೀಚಿಕೆಯಾಗಿದೆ. ಹಾಲಿ ವಿತ್ತ ವರ್ಷದ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಏನಾದರೂ ಪವಾಡ ಸಂಭವಿಸಿದರಷ್ಟೇ ಭಾರತದ ಅಭಿವೃದ್ಧಿ ದರ 5ರ ಗಡಿ ದಾಟಲು ಸಾಧ್ಯ. ಆದರೆ, ವಿತ್ತ ಪಂಡಿತರ ಭವಿಷ್ಯದ ಪ್ರಕಾರ ಅಂತಹ ಯಾವುದೇ ಪವಾಡ ಆಗುವ ಸಾಧ್ಯತೆಗಳಿಲ್ಲ. 1985ರ ನಂತರದ ಈ ಅವಧಿಯಲ್ಲಿ ಭಾರತದ ಅಭಿವೃದ್ಧಿ ಎಂದೂ ಈ ರೀತಿ ಕುಸಿತ ಕಂಡಿರಲಿಲ್ಲ. ಅದರಲ್ಲಿಯೂ 1991ರಲ್ಲಿ ಆರ್ಥಿಕ ಸುಧಾರಣೆಗಳ ಪರ್ವ ಆರಂಭವಾದಾಗಿನಿಂದಲಂತೂ ದೇಶದ ಅಭಿವೃದ್ಧಿ ದರ ಏಕಮುಖವಾಗಿ ಏರಿಕೆ ಕಾಣುತ್ತಲೇ ಬಂದಿದೆ. ಆದರೆ, ಕಳೆದೆರಡು ವರ್ಷಗಳ ಅವಧಿಯಲ್ಲಿ ಮಾತ್ರ ಇಂತಹ ಪರಿಸ್ಥಿತಿ ಎದುರಾಗಿದೆ. ಯೋಜನೆಗಳ ವಿಚಾರದಲ್ಲಿ ಬೆನ್ನು ತಟ್ಟಿಕೊಳ್ಳುವ ಯುಪಿಎ ಸರ್ಕಾರ ಈ ಆರ್ಥಿಕ ಕುಸಿತಕ್ಕೂ ಹೊಣೆ ಹೊರಬೇಕಾಗುತ್ತದೆ. ಸರ್ಕಾರದ ಈ ಜಾಹೀರಾತುಗಳನ್ನು ನೋಡಿದರೆ ಅದು ಕೊಡುಗೈ ದಾನಿಯಂತೆ ಗೋಚರಿಸುತ್ತದೆ. ಹಾಗೆ ದಾನ ಮಾಡಬೇಕಾದರೆ ಕೊಪ್ಪರಿಗೆ ತುಂಬ ಹಣ ಇರಲೇಬೇಕು. ಸರ್ಕಾರ ಈ ಪರಿಯಲ್ಲಿ ಜನ ಕಲ್ಯಾಣಕ್ಕೆ  ಹಣ ಒದಗಿಸುತ್ತದೆ ಎಂದ ಮೇಲೆ ಅದರ ಆರ್ಥಿಕ ಶಕ್ತಿ ಆರೋಗ್ಯಕರವಾಗಿರಲೇಬೇಕು. ಯಾವುದಕ್ಕೂ ಸರ್ಕಾರದ ಬಳಿ ಹಣದ ಕೊರತೆ ಇರಲೇಬಾರದು. ಜನರ ಅಶನ-ವ್ಯಸನ, ಸಮೃದ್ಧಿಯ ಜೊತೆಗೆ ದೇಶದ ಗಡಿ ಕಾಯುವ ಯೋಧರು ಮತ್ತು ಅವರ ಆ ಕೆಲಸಕ್ಕೆ ತೀರಾ ಅಗತ್ಯವಾದ ಸಾಮಗ್ರಿ, ಶಸ್ತ್ರಾಸ್ತ್ರ ಪೂರೈಸುವುದೂ ಸರ್ಕಾರದ ಆದ್ಯ ಕರ್ತವ್ಯವೇ ಅಲ್ಲವೇ? ಸರ್ಕಾರದ ಬಳಿ ರೊಕ್ಕಕ್ಕೆ ಕೊರತೆ ಇಲ್ಲ ಎಂಬುವುದು ನಿಜವೇ ಆದರೆ ದೇಶದ ರಕ್ಷಣೆ ವಿಚಾರವಾಗಿ ಯಾವುದೇ ಚೌಕಾಸಿಗೆ ಆಸ್ಪದವೇ ಇಲ್ಲ. ಆದರೆ...
There is no money for major defense procurements (ರಕ್ಷಣಾ ಸಾಮಗ್ರಿ ಕೊಳ್ಳಲು ಸರ್ಕಾರದ ಬಳಿ ಹಣ ಇಲ್ಲ!)
ಹೀಗೆಂದು ಕಳೆದ ವಾರವಷ್ಟೇ ದೇಶದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ನಾಚಿಕೆಯ ಲವಲೇಶವೂ ಇಲ್ಲದೆ ಘೋಷಿಸಿದರು. ಈ ವಿತ್ತೀಯ ಸಾಲಿನಲ್ಲಿ ಒದಗಿಸಲಾಗಿದ್ದ ಹಣ ಹೆಚ್ಚು ಕಡಿಮೆ ಪೂರ್ತಿ ಖರ್ಚಾಗಿದೆ. ತೀರಾ ಪ್ರಮುಖ ಹಾಗೂ ದೊಡ್ಡ ಪ್ರಮಾಣದ ಕೊಳ್ಳುವಿಕೆಗೆ ಕೈಹಾಕುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ. ಅದೇನಿದ್ದರೂ ಮುಂದಿನ ವಿತ್ತ ವರ್ಷದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ತೀರ್ಮಾನ. ಅಲ್ಲಿಯವರೆಗೆ ಕಾಯದೆ ವಿಧಿ ಇಲ್ಲ ಎಂದು ದೇಶದ ಅತಿ ದೀರ್ಘಾವಧಿಯ ರಕ್ಷಣಾ ಸಚಿವರೆನಿಸಿಕೊಂಡಿರುವ ಆ್ಯಂಟನಿ ಹೇಳಿದರು. ಅವರು ಹೇಳಿದ್ದು ವಾಸ್ತವವೇ ಇರಬಹುದು. ಆದರೆ ಆ ಹೇಳಿಕೆಯಿಂದ ನಮ್ಮ ವಾಯುಪಡೆಯ ಜಂಘಾಬಲವೇ ಉಡುಗಿ ಹೋಗಬಹುದು ಎಂಬ ಕಟುಸತ್ಯ ಅವರಿಗೆ ಅರಿವಿರಲಿಲ್ಲವೇ? ದೇಶದ ಖಜಾನೆಯನ್ನು ತೇಪೆ ಹಾಕಲಾಗದಷ್ಟು ತೂತು ಮಾಡಿ ತಮ್ಮ ಮೂಗಿನ ನೇರಕ್ಕೆ ಮತ್ತು ಮತದಾರರ ಮೂಗಿಗೆ ತುಪ್ಪ ಸುರಿಯುವ ಸಲುವಾಗಿ ಹಣ ವೆಚ್ಚ ಮಾಡಿದ ಸರ್ಕಾರ ರಕ್ಷಣೆಯಂತಹ ಅತಿ ಸೂಕ್ಷ್ಮ ವಿಚಾರದಲ್ಲಿ ಇಂತಹ ಹುಡುಗಾಟ ಆಡಲು ಸಾಧ್ಯವೇ? ರಕ್ಷಣಾ ಸಚಿವರ ಈ ಹೇಳಿಕೆಯಿಂದ ತಕ್ಷಣಕ್ಕೆ ನನೆಗುದಿಗೆ ಬೀಳುವುದೆಂದರೆ ಮಧ್ಯಮ ಮತ್ತು ದೂರ ವ್ಯಾಪ್ತಿಯ ಕ್ಯಾರೇಜ್ ವಿಮಾನಗಳ (ಂಂಖಈಆ) ಖರೀದಿ. ಸರ್ಕಾರದ ಈ ಚೆಲ್ಲಾಟದಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಪರಿಸ್ಥಿತಿ ಎಷ್ಟು  ಬಿಗಡಾಯಿಸಲಿದೆ ಎಂದರೆ ಈವರೆಗೆ ಪಾಕಿಸ್ತಾನದ ವಾಯುಪಡೆಯ ಮೇಲೆ ನಾವು ಹೊಂದಿದ್ದ ಸ್ಪಷ್ಟ ಮತ್ತು ಆಯಕಟ್ಟಿನ ಪ್ರಾಬಲ್ಯಕ್ಕೆ ಭಾರಿ ಪೆಟ್ಟು ಬೀಳಲಿದೆ. ಸರಿಸುಮಾರು ಭಾರತದ ಸ್ಕ್ವಾಡ್ರನ್ ದಳ ಶಕ್ತಿ ಪಾಕಿಸ್ತಾನದ ಮಟ್ಟಕ್ಕೆ ಕುಸಿಯಲಿದೆ. ಸದ್ಯ ಭಾರತ 34 ಸ್ಕ್ವಾಡ್ರನ್ ಬಲ ಹೊಂದಿದ್ದರೆ ಪಾಕಿಸ್ತಾನದ ಬಳಿ 27-28 ಸ್ಕ್ವಾಡ್ರನ್‌ಗಳಿವೆ. ಮಿಗ್ ವಿಮಾನಗಳ ಅವಸಾನದ ಜೊತೆಗೆ ಭಾರತದ ಶಕ್ತಿ 31 ಸ್ಕ್ವಾಡ್ರನ್‌ಗಳಿಗೆ ಕುಸಿಯಲಿದೆ. ಅಂದರೆ ಹೆಚ್ಚು ಕಮ್ಮಿ ಪಾಕಿಸ್ತಾನದ ಮಟ್ಟಕ್ಕೆ ಕುಸಿಯಲಿದ್ದೇವೆ. ತನ್ನ ಬೆನ್ನಿಗೆ ಸದಾ ಚೀನಾದ ಶ್ರೀರಕ್ಷೆ ಹೊಂದಿರುವ ಪಾಕಿಸ್ತಾನ ಭಾರತದ ವಿರುದ್ಧ ತಂಟೆಗೆ ಮುಂದಾದರೆ ಅದರಿಂದಾಗಬಹುದಾದ ಅಪಾಯ ಅಷ್ಟಿಷ್ಟಲ್ಲ. ಇಷ್ಟಕ್ಕೂ ಇದು ನಿನ್ನೆ-ಮೊನ್ನೆ ಅಥವಾ ಒಂದೆರಡು ವರ್ಷಗಳಲ್ಲಿ ಉದ್ಭವವಾದ ಸಮಸ್ಯೆ ಅಲ್ಲ. 2001ರಷ್ಟು ಹಿಂದೆಯೇ ಆಧುನಿಕ ಮತ್ತು ಹೆಚ್ಚು ಸದೃಢ ವಾಯು ಸಮರ ವಿಮಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಓಬಿರಾಯನ ಕಾಲದ ವಿಮಾನಗಳನ್ನು ನಿವೃತ್ತಗೊಳಿಸಿ ತನ್ನ ಶಕ್ತಿ ಇಮ್ಮಡಿಗೊಳಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯನ್ನು ವಾಯುಪಡೆ ಸರ್ಕಾರದ ಮುಂದಿಟ್ಟಿತ್ತು. ಈ ಪ್ರಸ್ತಾವನೆಗೆ ಪ್ರೇರಣೆ ಅಥವಾ ಕಾರಣ ಎಂದರೆ ಚೀನಾ. ಸಾಂಪ್ರದಾಯಿಕ ಯುದ್ಧ ವಿಮಾನಗಳ ವಿಷಯದಲ್ಲಿ ಭಾರತವು ಚೀನಾಗಿಂತ ಪ್ರಬಲವಾಗಿಯೇ ಇತ್ತು. ಇದನ್ನು ಗಮನಿಸಿದ ಚೀನಾ 1990ರ ದಶಕದಲ್ಲಿ ತನ್ನ ಹಳೆಯ ವಿಮಾನಗಳಿಗೆ ಬದಲಾಗಿ ಅತ್ಯಾಧುನಿಕ, ಬಹುಕಾರ್ಯ ಸಾಮರ್ಥ್ಯದ ವಿಮಾನಗಳನ್ನು ಅಳವಡಿಸಿಕೊಂಡು ಆಧುನಿಕ ವಾಯುಪಡೆಯಾಗಿ ಹೊರಹೊಮ್ಮಲು ನಿರ್ಧರಿಸಿತು. ಇದಕ್ಕಾಗಿ 25 ವರ್ಷಗಳ ಯೋಜನೆ ರೂಪಿಸಿತು. ಹೊಸ ವಿಮಾನಗಳನ್ನು ಕೊಳ್ಳಲು ಮುಂದಾಗುವ ಮುನ್ನ ಅದಕ್ಕೆ ಅಗತ್ಯ ಮತ್ತು ಪೂರಕವಾದ ಮೂಲಸೌಕರ್ಯ ನಿರ್ಮಾಣವನ್ನು ಕೈಗೊಂಡಿತು. ಇದರ ಫಲವಾಗಿ ಟಿಬೆಟ್‌ವರೆಗೆ ರೈಲು ಓಡಿತು, ಗಡಿಯ ಸಮೀಪ ಹೊಸ ಏರ್‌ಸ್ಟ್ರಿಪ್‌ಗಳ ನಿರ್ಮಾಣವಾಯಿತು. ಅರುಣಾಚಲ ಗಡಿ ಸಮೀಪವೂ ಆಯಕಟ್ಟಿನ ಮೂಲ ಸೌಕರ್ಯ ಸಾಕಾರಗೊಂಡಿತು. ಇದೆಲ್ಲದರ ಫಲವಾಗಿ ಇಂದು ಚೀನಾದ ವಾಯುಸೇನೆ ಅತ್ಯಂತ ಬಲಾಢ್ಯವಾಗಿ ಬೆಳೆದು ನಿಂತಿದೆ. ಇದನ್ನೆಲ್ಲ ಗಮನಿಸಿಯೇ ನಮ್ಮ ವಾಯುಪಡೆ ಕನಿಷ್ಠ ಈ ದಶಕದ ಅಂತ್ಯದ ವೇಳೆಗೆ ತನ್ನ ಸನ್ನದ್ಧತೆಯನ್ನು ಗರಿಷ್ಠ ಮಿತಿಗೆ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸರ್ಕಾರಕ್ಕೆ ತಿಳಿ ಹೇಳಿತು. ಇದರ ಬೆನ್ನಲ್ಲೇ ಮಿಗ್ ವಿಮಾನಗಳ ಸರಣಿ ಅಪಘಾತಗಳು ಮತ್ತು ಅವಧಿ ಮೀರಿದ ಸೇವೆಯ ಹಿನ್ನೆಲೆಯಲ್ಲಿ ಅವುಗಳ ಬದಲಿಗೆ ಅತ್ಯಾಧುನಿಕ ಂಂಖಈಆ ಗಳ ಖರೀದಿಯ ಅವಶ್ಯಕತೆಯನ್ನು ಪ್ರಸ್ತಾಪಿಸಿತ್ತು. ಜೊತೆಗೆ ಹೊಸ ವಿಮಾನಗಳ ಆಗಮನದೊಂದಿಗೆ ತನ್ನ ಸ್ಕ್ವಾಡ್ರನ್ ಬಲವನ್ನು ಕನಿಷ್ಠ 37ಕ್ಕೇರಿಸಿಕೊಳ್ಳಬೇಕು ಹಾಗೂ 2024ರ ವೇಳೆಗೆ ಆ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಿಕೊಳ್ಳಬೇಕಾದ ಜರೂರತ್ತನ್ನು ಸರ್ಕಾರದ ಮುಂದಿಟ್ಟಿತು. ಒಂದು ಸ್ಕ್ವಾಡ್ರನ್‌ನಲ್ಲಿ 18 ರಿಂದ 20 ವಿಮಾನಗಳಿದ್ದು ಅದರಲ್ಲಿ ಎರಡನ್ನು ಯೋಧರ ತರಬೇತಿಗೆ, ಮತ್ತುಳಿದವನ್ನು ಸನ್ನದ್ಧತೆಗೆ ಬಳಸಿಕೊಳ್ಳಲಾಗುತ್ತದೆ. ಇದು ತೀರಾ ಸೂಕ್ಷ್ಮ ವಿಚಾರ. 2007ರ ವೇಳೆಗೆ ಎರಡು ದಿಕ್ಕಿನ ಯುದ್ಧ ಸನ್ನದ್ಧತೆಗೆ ಸಿದ್ಧವಾಗುವುದು ಭಾರತದ ನೀತಿಯಾಗಿತ್ತು. ಜಲ ಸನ್ನದ್ಧತೆ ಹೊರತುಪಡಿಸಿ ಈಶಾನ್ಯ ಮತ್ತು ಉತ್ತರ ದಿಕ್ಕಿನ ಅಪಾಯಗಳ ವಿರುದ್ಧ ರಕ್ಷಿಸಿಕೊಳ್ಳುವುದೇ ಈ ನೀತಿಯ ಉದ್ದೇಶ. ಇದಕ್ಕೆ ಅತಿ ಕಡಿಮೆ ಸಮಯದಲ್ಲಿ ಯೋಧರಿಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತೊಯ್ಯುವ, ಭಾರಿ ಸಾಮರ್ಥ್ಯದ ವಿಮಾನಗಳಿಗಾಗಿ ವಾಯುಪಡೆ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಜಾಗತಿಕ ಶಸ್ತ್ರಾಸ್ತ್ರ ಬಜಾರಿಗೆ ಲಗ್ಗೆ ಇಟ್ಟಿದ್ದೂ ಆಯಿತು. ಹಲವು ವರ್ಷಗಳ ಕಾಲ ಅಳೆದು ತೂಗಿ ಕೊನೆಗೆ ಫ್ರಾನ್ಸ್‌ನ ಡಸಾಲ್ಟ್ ಸಂಸ್ಥೆಯ ರಫಾಲ್ ವಿಮಾನಗಳ ಖರೀದಿಗೆ ಸರ್ಕಾರ ಅಸ್ತು ಎಂದಿತ್ತು. ಇದಾಗಿದ್ದು 2011ರಲ್ಲಿ. ಆಗ ಆದ ಒಡಂಬಡಿಕೆಯಂತೆ ಭಾರತ 126 ವಿಮಾನಗಳನ್ನು ಖರೀದಿಸುವುದು ಎಂದಾಗಿತ್ತು. ಇದರಲ್ಲಿ 18 ವಿಮಾನಗಳು ನೇರ ಖರೀದಿ ಮತ್ತು ಉಳಿದವುಗಳನ್ನು ತಂತ್ರಜ್ಞಾನ ವಿನಿಮಯದ ಆಧಾರದಲ್ಲಿ ಭಾರತದಲ್ಲಿಯೇ ತಯಾರು ಮಾಡುವುದು ಎಂದಾಗಿತ್ತು. ಸಹಜವಾಗಿಯೇ ಈ ಬೆಳವಣಿಗೆ ವಾಯುಪಡೆಯನ್ನು ಉತ್ತೇಜಿಸಿತ್ತು.
ಇದರ ಒಟ್ಟು ವೆಚ್ಚ 88 ಸಾವಿರ ಕೋಟಿ ರೂ. ಎಲ್ಲ ಯೋಜನೆಯಂತೆ ನಡೆದರೆ 2015ರ ವೇಳೆಗೆ ಮೊದಲ ಕಂತಿನ ವಿಮಾನಗಳು ಭಾರತಕ್ಕೆ ಬಂದಿಳಿಯಬೇಕಿತ್ತು. ಆದರೆ ಪೂರೈಕೆದಾರರನ್ನು ಆಯ್ಕೆ ಮಾಡಿದ ಬಳಿಕ ಆ ಸಂಸ್ಥೆಯ ಜೊತೆ ಅಧಿಕೃತ ಒಪ್ಪಂದ ಆಗಬೇಕಲ್ಲ. ಅದು ಆಗಲೇ ಇಲ್ಲ. 2011ರಿಂದ ಈ ಕಡತದ ಮೇಲೆ ಕುಳಿತ ಸರ್ಕಾರ ಈಗ ಈ ವರ್ಷವೂ ಕೊಳ್ಳಲು ಹಣ ಇಲ್ಲ ಎಂಬ ಸಬೂಬು ಹೇಳಿದೆ. ಇನ್ನು ಮುಂದಿನ ವರ್ಷ ಒಪ್ಪಂದ ಮಾಡಿಕೊಂಡರೂ ಮೊದಲ ಕಂತಿನ ವಿಮಾನ ಪೂರೈಕೆಗೆ ಇನ್ನೂ 4 ವರ್ಷ ಕಾಯಬೇಕು. ಅಂದರೆ 2018ರ ವೇಳೆಗಷ್ಟೇ ಅವು ಭಾರತಕ್ಕೆ ಲಭ್ಯವಾಗುವುದು. ಅಷ್ಟರಲ್ಲಿ ಮಿಗ್ ವಿಮಾನಗಳು ಇತಿಹಾಸ ಸೇರಿ ಅವುಗಳ ಬದಲಿಗೆ ತಾತ್ಕಾಲಿಕವಾಗಿ ಪಡೆಯಲಾಗಿರುವ ಸುಖೋಯ್ ವಿಮಾನಗಳ ಪ್ರಯೋಜನವೂ ಕುಂಠಿತಗೊಂಡು ದೇಶದ ಸ್ಕ್ವಾಡ್ರನ್‌ಗಳ ಸಂಖ್ಯೆ 30-31ರ ಮಟ್ಟಕ್ಕೆ ಕುಸಿಯಲಿದೆ. ಈ ಒಪ್ಪಂದ ಜಾರಿಗೆ ತರಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವಿತ್ತು. ಆದರೆ, ಇಚ್ಛಾಶಕ್ತಿ ಇರಲಿಲ್ಲ. ಈ ಅವಧಿಯಲ್ಲಿ ದೇಶವಾಸಿಗಳಿಗೆ ಆಹಾರ ಭದ್ರತೆ ಒದಗಿಸಲು 10 ಸಾವಿರ ಕೋಟಿ, ನರೇಗಾ ಯೋಜನೆಗೆ 2012ರಿಂದ 2014ರವರೆಗಿನ ಎರಡು ವಿತ್ತೀಯ ವರ್ಷಗಳಲ್ಲಿ 66 ಸಾವಿರ ಕೋಟಿ (ಅದರಲ್ಲಿ ಬಳಕೆಯಾಗದೆ ಉಳಿದಿದ್ದು 20 ಸಾವಿರ ಕೋಟಿ) ವ್ಯಯ ಮಾಡಿದ ಸರ್ಕಾರಕ್ಕೆ ದೇಶದ ಗಡಿ ರಕ್ಷಣೆಗೆ 16 ಸಾವಿರ ಕೋಟಿ ರೂ. (ಆರಂಭಿಕ ಒಪ್ಪಂದ ಹಾಗೂ ವಿತರಣೆಗೆ) ವೆಚ್ಚ ಮಾಡುವುದು ಸಾಧ್ಯವಿರಲಿಲ್ಲವೇ? ದೇಶದ ರಕ್ಷಣೆಗಿಂತ ಮತಗಳಿಕೆಯೇ ಇವರಿಗೆ ಹೆಚ್ಚಾಯಿತೇ? ಕನಿಷ್ಠ ಈ ವಿತ್ತೀಯ ಸಾಲಿನಲ್ಲಿ ಸ್ಪೆಕ್ಟ್ರಂ ಹರಾಜಿನಿಂದ ಆಕರವಾಗಲಿರುವ ಹಣವನ್ನು (ಸುಮಾರು 15 ಸಾವಿರ ಕೋಟಿ) ಈ ಒಪ್ಪಂದಕ್ಕೆ ವಿನಿಯೋಗಿಸಲು ಸಾಧ್ಯವಾಗುತ್ತಿರಲಿಲ್ಲವೇ? ಸೂಕ್ಷ್ಮತೆ, ದೂರದೃಷ್ಟಿ ಇರುವ ಯಾವುದೇ ಸರ್ಕಾರವಾದರೂ ಗಡಿ ರಕ್ಷಣೆಯ ವಿಚಾರದಲ್ಲಿ ಈ ರೀತಿಯ ನಿರ್ಲಿಪ್ತತೆ ತೋರುವುದಿಲ್ಲ. ಆದರೆ, ಈ ಸರ್ಕಾರಕ್ಕೆ ಅವೆರಡೂ ಇಲ್ಲ ಬಿಡಿ. ಕನಿಷ್ಠ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಆ್ಯಂಟನಿ ಅವರಾದರೂ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಬಹುದಿತ್ತು. ಆದರೆ 'ಪ್ರಾಮಾಣಿಕ' ಆ್ಯಂಟನಿ ಅವರಿಗೂ ದೇಶದ ರಕ್ಷಣೆ ಬಗೆಗೆ 'ಪ್ರಾಮಾಣಿಕ' ಕಳಕಳಿ ಇಲ್ಲದಿರುವುದು ದುರದೃಷ್ಟ.

-ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

SCROLL FOR NEXT