ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಲಬೆರಕೆ ಇಂಧನ ತಡೆಗೆ ಬರಲಿ ಬಲಿಷ್ಠ ಕಾನೂನು

Vishwanath S
Updated On : 13 Feb 2014, 12:51 pm

ಮಿತಿ ಮೀರಿದ ಪ್ರಮಾಣದಲ್ಲಿ ಬೆಳೆದು, ಜನರ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ಕಲಬೆರಕೆ ದಂಧೆ ವಿರುದ್ಧ ಸಮರ ಸಾರುವುದಕ್ಕೆ ರಾಜ್ಯ ಸರ್ಕಾರದ ಬಳಿ ಸೂಕ್ತ ಕಾನೂನೇ ಇಲ್ಲ. ಇರುವ ಕಾನೂನು ಹಲ್ಲಿಲ್ಲದ ಹಾವಿನಂತಿದ್ದು, ಪರಿಣಾಮಕಾರಿ ಜಾರಿಗೆ ಮೂರು ಇಲಾಖೆಗಳು ಸೇರಿ ಕಾರ್ಯಾಚರಣೆ ಮಾಡಬೇಕಾದಂತಹ ವಿಚಿತ್ರ ಕಾನೂನು ರಾಜ್ಯದಲ್ಲಿದೆ.  
ಕಲಬೆರಕೆ ಇಂಧನ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ಕಾನೂನು ಮೂಲತಃ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ವಾಹನಗಳು ಬಳಸುವ ಕಲಬೆರಕೆ ಇಂಧನ ಪತ್ತೆ ಹಚ್ಚಬೇಕು ಅಥವಾ ಕಾರ್ಯಾಚರಣೆಗೆ ಇಳಿಯಬೇಕು ಎಂದರೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಜಂಟಿ ಕಾರ್ಯಾಚರಣೆಗೆ ಇಳಿಯಬೇಕು. ಮೂರು ಇಲಾಖೆಗಳ ಸಿಬ್ಬಂದಿ ಒಟ್ಟಿಗೆ ಸೇರಿ ಕಾರ್ಯಾಚರಣೆ ನಡೆಸುವುದು ಎಂದರೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅಸಾಧ್ಯದ ಮಾತು. ರಾಜ್ಯದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಮಿತಿ ಮೀರಿರುವ ಕಲಬೆರಕೆ ದಂಧೆಗೆ ಕಡಿವಾಣ ಹಾಕುವುದಕ್ಕೆ ಸರ್ಕಾರದಿಂದ ಆಗುತ್ತಿಲ್ಲ. ಕಲಬೆರಕೆ ಇಂಧನ ಪೂರೈಸುವ ಪೆಟ್ರೋಲ್ ಬಂಕ್‌ಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುವುದಕ್ಕೆ ಸದ್ಯ ಜಾರಿಯಲ್ಲಿರುವ ಕಾನೂನು ಅವಕಾಶ ಮಾಡಿಕೊಡುತ್ತದೆ. ಅದೂ ಕೂಡ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಯನ್ನು ಮಂಗಳೂರಿನಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳ ಪ್ರಯೋಗಶಾಲೆಗೆ ಕಳುಹಿಸಿ ನಂತರ ಪ್ರಯೋಗಾಲಯ ನೀಡಿದ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ವಾಸ್ತವದಲ್ಲಿ ಬಹುತೇಕ ಪೆಟ್ರೋಲಿಯಂ ಕಂಪನಿಗಳು ಕಲಬೆರಕೆ ವಿರುದ್ಧ ಇಂದು ಕ್ರಮ ತೆಗೆದುಕೊಂಡಿರುವುದರಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಕಲಬೆರಕೆ ಇಂಧನ ಮಾರಾಟ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಲಬೆರಕೆ ಇಂಧನ ಇಂದು ಬಹುತೇಕ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವುದು ಕಾಳಸಂತೆಗಳಲ್ಲಿ, ಹೀಗಾಗಿ ಕಲಬೆರಕೆ ಉದ್ಯಮದಲ್ಲಿ ತೊಡಗಿರುವ ಕುಳಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಕೆಲವೊಮ್ಮೆ ಆಸಾಧ್ಯ ಎನ್ನಿಸಿದರೂ, ಕಲಬೆರಕೆ ಇಂಧನ ಉಪಯೋಗಿಸುವ ವಾಹನಗಳ ಮಾಲೀಕರ ಅಥವಾ ಚಾಲಕರ ವಿರುದ್ಧ ನೇರ ಕಾರ್ಯಾಚರಣೆಗೆ ಇಳಿಯುವ ಮೂಲಕ ಬೇಡಿಕೆ ಪ್ರಮಾಣ ಕುಗ್ಗಿಸಬಹುದು. ಆದರೆ ಕಲಬೆರಕೆ ಇಂಧನ ಬಳಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಪೊಲೀಸ್ ಇಲಾಖೆಯಿಂದಾಗಲಿ, ಆಹಾರ ಮತ್ತು ನಾಗರಿಕ ಮತ್ತು ಸರಬರಾಜು ಇಲಾಖೆ ಅಥವಾ ಸಾರಿಗೆ ಇಲಾಖೆಯಿಂದ ಸಾಧ್ಯವಿಲ್ಲ. ಏಕೆಂದರೆ ಕಾನೂನೇ ಯಾವುದೇ ಒಂದು ಇಲಾಖೆಗೆ ನೇರವಾಗಿ ಕಾರ್ಯಾಚರಣೆಗೆ ಇಳಿಯುವುದಕ್ಕೆ ಆಸ್ಪದ ನೀಡುವುದಿಲ್ಲ. ಕಲಬೆರಕೆ ಇಂಧನ ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರೆ ಮೂರು ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆಗೆ ಇಳಿಯಬೇಕು.
 ಕಲಬೆರಕೆ ಇಂಧನದ ಪರಮ ಪ್ರಿಯ ಗ್ರಾಹಕರು ಎಂದರೆ ಆಟೋ ಚಾಲಕರು. ಮಹಾನಗರ, ನಗರ ಮತ್ತು ಪಟ್ಟಣ ಪ್ರದೇಶಗಳ ಇತಿಮಿತಿಯಲ್ಲಿ ಸಂಚರಿಸುವ ಆಟೋಗಳ ಮೇಲೆ ಕಣ್ಣಿಡುವುದಕ್ಕೆ ಪೊಲೀಸ್ ಇಲಾಖೆಗೆ ಅಧಿಕಾರ ನೀಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಕಲಬೆರಕೆ ರಾಕ್ಷಸನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ. ಕಟ್ಟುನಿಟ್ಟು ಕ್ರಮಗಳ ಪರಿಣಾಮ ಆಟೋ ಚಾಲಕರು ಕಲಬೆರಕೆ ಇಂಧನದತ್ತ ಮುಖ ಮಾಡುವುದನ್ನು ನಿಲ್ಲಿಸುತ್ತಾರೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನ ನಿಯಮಾವಳಿಯಂತೆ ಪೆಟ್ರೋಲ್‌ನಲ್ಲಿ ಸೀಮೆ ಎಣ್ಣೆ ಅಂಶ ಇರಕೂಡದು, ಮೇಲಾಗಿ ಸುಪ್ರೀಂ ಕೋರ್ಟ್ ಕೂಡ ಪೆಟ್ರೋಲ್ ಬಳಸುವ ವಾಹನಗಳಿಂದ ಹೊರಹೊಮ್ಮುವ ಹೊಗೆಯಲ್ಲಿ ಬೆಂಜಿನ್ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇರಕೂಡದು ಎಂದು ಹೇಳಿದ್ದು, ಆದರೆ ಕಲಬೆರಕೆ ಇಂಧನದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸೀಮೆ ಎಣ್ಣೆಯಿಂದಾಗಿ ಹೊರಸೂಸುವ ಹೊಗೆಯಲ್ಲಿ ಬೆಂಜಿನ್ ಪ್ರಮಾಣ ಶೇ. 9ರಿಂದ 12ರವರೆಗೆ ಇರುತ್ತದೆ. ಉಸಿರಾಟದ ಮುಖಾಂತರ ದೇಹಕ್ಕೆ ಸೇರುವ ಬೆಂಜಿನ್‌ನಿಂದ ಶ್ವಾಸಕೋಶದ ಕ್ಯಾನ್ಸರ್, ಕಿಡ್ನಿ ವೈಫಲ್ಯ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ ಎನ್ನುತ್ತವೆ ವೈದ್ಯಕೀಯ ವರದಿಗಳು.  
 ಸದ್ಯ ಜಾರಿಯಲ್ಲಿರುವ ಕಾನೂನಿನ ಆಧಾರದ ಮೇಲೆ ಬಳಕೆದಾರರ ಮೇಲೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಒಂದೇ ಇಲಾಖೆಯ ಕೈಗೆ ಕಲಬೆರಕೆ ವಿರುದ್ಧ ಸಮರ ಸಾರುವುದಕ್ಕೆ ಕಾನೂನು ರೂಪಿಸಿದಲ್ಲಿ ಈ ಸಮಸ್ಯೆ ವಿರುದ್ಧ ಹೋರಾಡುವುದಕ್ಕೆ ಅಧಿಕಾರಿಗಳಿಗೆ ಬಲ ನೀಡಿದಂತಾಗುತ್ತದೆ.


- ಸತೀಶ ಪಾಗಾದ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement