ಲೋಕ ಚುನಾವಣೆ, ಹೇಗಿರಲಿದೆ ಮತ ಚಲಾವಣೆ?
2014 ರ ಚುನಾವಣೆ ಸಮೀಪಿಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರದ ಕಾವು ಏರುತ್ತಿದೆ. ಒಂದಡೆ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಅಬ್ಬರ, ಮತ್ತೊಂದಡೆ ರಾಹುಲ್ ಗಾಂಧಿಯನ್ನು ಶತಾಯ ಗತಾಯ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆನ್ನುವ ಕಾಂಗ್ರೆಸ್ ನಾಯಕರ ಹಠ. ನಾವು ಕಾಂಗ್ರೆಸ್ಸಿನ ಜೊತೆಗೂ ಇಲ್ಲ, ಬಿಜೆಪಿಯ ಜೊತೆಗೂ ಇಲ್ಲ ಎನ್ನುವ ತೃತೀಯರಂಗವೆಂಬಪ್ರಾದೇಶಿಕ ಪಕ್ಷಗಳ ಗುಂಪು. ಈ ತ್ರಿಕೋನ ಪೈಪೋಟಿಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವವರು ನರೇಂದ್ರ ಮೋದಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ 2009 ರ ಚುನಾವಣೆಯಲ್ಲಿ ಒಂಬತ್ತು ರಾಜ್ಯಗಳಲ್ಲಿ ತನ್ನ ಖಾತೆಯನ್ನೇ ತೆಗೆಯದ ಬಿಜೆಪಿ 2014 ಚುನಾವಣೆಯಲ್ಲಿ 272 ಮುಟ್ಟದು ಎನ್ನುವ, ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಮೋದಿಯವರು ಸುಳ್ಳು ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತಲ್ಲಿವೆ.
9 ರಾಜ್ಯಗಳಲ್ಲಿ ನಿಮ್ಮ ಖಾತೆಯೇ ತೆರೆದಿಲ್ಲ, ಅಂದರೆ ಒಂದು ಲೋಕಸಭಾ ಸೀಟ್ ಗೆಲ್ಲಿಸಲಾಗಿಲ್ಲ, ಅದ್ಹೇಗೆ ಬಿಜೆಪಿ ದೆಹಲಿಯ ಕನಸು ಕಾಣುತ್ತಿದೆ ಎನ್ನುವವರು ಇತ್ತೀಚಿಗಿನ ಮೋದಿಯವರ ಜನಪ್ರಿಯತೆ ಹಾಗು ಹಿಂದೆಂದಿಗೂ ಈ ಮಟ್ಟದಲ್ಲಿ ರಾಜ್ಯಗಳಲ್ಲಿ ಬಿಜೆಪಿಯ ದೊಡ್ಡ ಸಂಖ್ಯೆಯ ಕಾರ್ಯಕರ್ತರನ್ನು ನೋಡಿ ಹುಬ್ಬೇರಿಸುವಂತೆ ಮಾಡಿದೆ. 2009 ರಲ್ಲಿ ನಡೆದ ಚುನಾವಣಾ ಫಲಿತಾಂಶ ನೋಡಿದರೆ ಆಂಧ್ರಪ್ರದೇಶ, ದೆಹಲಿ, ಹರ್ಯಾಣ, ಜಮ್ಮು ಕಾಶ್ಮೀರ, ಕೇರಳ, ಒಡಿಶಾ, ತಮಿಳುನಾಡು ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಒಬ್ಬ ಲೋಕಸಭಾ ಸದಸ್ಯನನ್ನು ಗೆಲ್ಲಿಸಲಾಗಲಿಲ್ಲ, ಅದನ್ನೇ ಗುರಿಯಾಗಿಟ್ಟುಕೊಂಡ ಬಿಜೆಪಿ ನರೇಂದ್ರ ಮೋದಿಯವರ ಈ ಅಲೆಯನ್ನು ಬಳಸಿ ಈ ರಾಜ್ಯಗಳಲ್ಲಿ ತನ್ನ ಪ್ರಭಾವ ಹೆಚ್ಚಿಸುವದರಲ್ಲಿ ಒಂದಷ್ಟು ಮಟ್ಟಿಗೆ ಯಶಸ್ವಿಯಾಗಿದೆ. ಯಾವ ಜಮ್ಮು ಹಾಗು ಕಾಶ್ಮೀರ ಅಬ್ದುಲ್ಲಾಗಳ ಕೈಯಲ್ಲಿ ಕಳೆದ 60 ವರ್ಷಗಳಿಂದ ಬೇರೆ ರಾಜಕೀಯ ವಿಕಲ್ಪವೇ ಇಲ್ಲವೇನು ಅನ್ನುತ್ತಿತ್ತೋ ಅಲ್ಲಿಂದ ಪ್ರಾರಂಭಿಸಿ, ಬರಿ ಡಿಎಂಕೆ ಹಾಗು ಎಐಡಿಎಂಕೆಗಳಿಗೆ ಮಾತ್ರ ಇಲ್ಲಿ ಉಳಿಗಾಲ ಎನ್ನುವ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವನ್ನೂ ಸುಳ್ಳು ಮಾಡಲು ಹೊರಟಿದೆ. ಇದಕ್ಕೆ ಸಾಕ್ಷಿಯಾಗಿದ್ದೆ ಜಮ್ಮು ಹಾಗು ತಮಿಳುನಾಡಿನಲ್ಲಿ ನಡೆದ ಬೃಹತ್ ಸಮಾವೇಶ ಹಾಗೂ ಸಾಲು ಸಾಲು ಬಿರುಸಿನ ರಾಜಕೀಯ ಚಟುವಟಿಕೆಗಳು.
ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯಿಂದ ಹೊರಗೆ ವಿಚಾರ ಮಾಡದ ಕೇರಳ ಹಾಗು ಪಶ್ಚಿಮ ಬಂಗಾಳ ಮೋದಿಯವರ ಅಭಿವೃದ್ಧಿ ಮಾದರಿಗೆ ಮಾರು ಹೋದಂತಿದೆ. ಇದನ್ನೇ ಮತಗಾಳಾಗಿ ಪರಿವರ್ತಿಸಲು ನರೇಂದ್ರ ಮೋದಿಯವರು ಮತ್ತೆ ಮತ್ತೆ ಈ ರಾಜ್ಯಗಳಿಗೆ ಹೆಚ್ಚಿನ ಪ್ರವಾಸ ಮಾಡುತ್ತಿದ್ದಾರೆ. ಇನ್ನು ಅಭಿವೃದ್ಧಿಯಿಂದ ವಂಚಿತವಾಗಿರುವ ಹಾಗೂ ಬರೀ ಸ್ಥಳೀಯ ನಾಯಕರ ಪ್ರಚಾರಕ್ಕೆ ಮಾತ್ರ ಸೇರುತ್ತಿದ್ದ ಗುವಾಹಟಿಯಲ್ಲಿ ಮೊನ್ನೆ 3 ಲಕ್ಷಕ್ಕಿಂತ ಹೆಚ್ಚು ಜನ ಮೋದಿಯವರ ಇಂಫಾಲ್ ಸಮಾವೇಶಕ್ಕೆ ಬಂದಿದ್ದು ಎಲ್ಲರಿಗೂ ಅಚ್ಚರಿ ಹುಟ್ಟಿಸಿತು. ಆಂಗ್ಲ ಪತ್ರಿಕೆಯೊಂದು ಹೇಳುವಂತೆ 80ರ ದಶಕದ ನಂತರ ರಾಷ್ಟೀಯ ನಾಯಕನೊಬ್ಬನಿಗೆ ಅಸ್ಸಾಮಿನ ಜನ ಮೆಚ್ಚಿರುವುದು ಇದೆ ಮೊದಲಿಗೆ. ಇದು ಜನರ ಬದಲಾವಣೆಯ ನಿರೀಕ್ಷೆಯನ್ನು ಎತ್ತಿ ತೋರಿಸುತ್ತಿದೆ.
ಈಗಾಗಲೇ ನಡೆದ 5 ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ತೋರಿಸಿದೆ, ಹೀಗಾಗಿ ಮೋದಿಯವರ ನಾಯಕತ್ವವನ್ನು ಒಪ್ಪಿರುವ ಸ್ಥಳೀಯ ನಾಯಕರ ಮೇಲೆ ಜವಾಬ್ದಾರಿ ವಹಿಸಿ ಸ್ವತಃ ಮೋದಿಯವರು ಅಷ್ಟೊಂದು ಪ್ರಚಾರ ಮಾಡುವ ಅವಶ್ಯಕತೆಯೇನು ಕಾಣಿಸುತ್ತಿಲ್ಲ. ಪೃಥ್ವಿರಾಜ್ ಚೌಹಾಣ್, ರಮಣ್ ಸಿಂಘ್, ವಸುಂಧರಾ ರಾಜೆ ಹಾಗೂ ದಿಲ್ಲಿಯಲ್ಲಿ ಹರ್ಷವರ್ಧನ್ ನಾಯಕತ್ವ ಲೋಕಸಭೆಯಲ್ಲಿ ಒಳ್ಳೆಯ ಫಲಿತಾಂಶ ಕೊಡುವುದು ನಿಶ್ಚಿತ. ಅಷ್ಟಕ್ಕೂ ಈಗಾಗಲೇ ಬಿಜೆಪಿಯ ಪ್ರಾಬಲ್ಯವಿರುವ ಕರ್ನಾಟಕ ಹಾಗೂ ಗೋವಾಗಳನ್ನೂ ಕೂಡ ನರೇಂದ್ರ ಮೋದಿಯವರು ಕಡೆಗಣಿಸಿಲ್ಲ. ಸ್ಥಳೀಯ ಕಾರ್ಯಕರ್ತರ ಜೊತೆ ಮೋದಿಯವರು ಇಲ್ಲೂ ತಮ್ಮ ಪ್ರಭಾವವನ್ನು ಹೆಚ್ಚಿಸಲು ಬಿರುಸಿನ ಪ್ರಚಾರ ಕೆಲಸ ನಡೆಸುತ್ತಲೇ ಇದ್ದಾರೆ.
ವಿವಿಧ ರಾಜ್ಯಗಳಲ್ಲಿ ಸ್ಥಳೀಯ ವಿಷಗಳ ಮುಖಾಂತರ ಹತ್ತಿರವಾಗುವುದರಲ್ಲಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ, ಆಂಧ್ರದಲ್ಲಿ ತೆಲಂಗಾಣ, ತಮಿಳುನಾಡಿನಲ್ಲಿ ಶ್ರೀಲಂಕಾ, ಅಸ್ಸಾಮಿನಲ್ಲಿ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮಾತನಾಡಿದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯ ಮಂತ್ರ. ಆ ರಾಜ್ಯದ ಜನ ಅವಕಾಶ ಕೊಟ್ಟಲ್ಲಿ ಆಯಾ ರಾಜ್ಯಗಳ ಸಮಸ್ಯೆ ಬಗೆಹರಿಸುವುದರ ಕಡೆಗೆ ಮೊದಲು ಗಮನ ಹರಿಸುತ್ತೇನೆ ಎನ್ನುವ ವಿಶ್ವಾಸವನ್ನು ಜನರಲ್ಲಿ ಮೂಡಿಸುತ್ತಾರೆ. ಅದಕ್ಕೇ ಇರಬೇಕು, ಹಿಂದಿಯನ್ನೇ ಸರಿಯಾಗಿ ಅರಿಯದ ತಮಿಳು ನಾಡಿನ ಹಾಗೂ ಕೇರಳದ ಲಕ್ಷಾನು ಲಕ್ಷ ಜನ ಮೋದಿಯವರನ್ನು ಕಂಡು ಖುಷಿ ಪಡುವುದು.
ಮೊದಲೇ ಕಾಂಗ್ರೆಸ್ಸಿನ ದುರಾಡಳಿತ ಹಾಗು ಭ್ರಷ್ಟಾಚಾರದಿಂದ ಬೇಸತ್ತ ಸಾಮಾನ್ಯ ಜನರಿಗೆ ನರೇಂದ್ರ ಮೋದಿ ಒಬ್ಬ ನಾಯಕನಷ್ಟೇ ಅಲ್ಲ, ಬದಲಾವಣೆಯ ದಾರಿ ದೀಪವಾಗಿ ಕಾಣುತಿದ್ದಾರೆಂದರೆ ತಪ್ಪಾಗದು. ಮೋದಿ ಆ ಬದಲಾವಣೆಯ ದಾರಿಯೆಡೆಗೆ ಕರೆದುಕೊಂಡು ಹೋಗಬಲ್ಲ ಸಮರ್ಥ ನಾಯಕ ಎನ್ನುವ ವಿಶ್ವಾಸ ಇಡೀ ಭಾರತದ ಜನರಲ್ಲಿ ಎದ್ದು ಕಾಣಿಸುತ್ತಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ದುಡ್ಡಿದ್ದವರು ಯಾರಾದರು ದೊಡ್ಡ ಸಮಾವೇಶಗಳನ್ನು ಮಾಡಬಹುದು ನಿಜ, ಆದರೆ ಮೋದಿಯವರ ಸಮಾವೇಶಗಳಲ್ಲಿ ಸೇರುವ ಯುವಕರ ಸಂಖ್ಯೆ, ಅವರಲ್ಲಿನ ಶಿಸ್ತು ಹಾಗು ಅವರಲ್ಲಿರುವ ಉತ್ಸಾಹ ಅವರು ಹಣಕ್ಕೆ ಬಂದವರಲ್ಲವೆಂದು ಸ್ಪಷ್ಟವಾಗಿ ತೋರಿಸುತ್ತದೆ.
ಇನ್ನು ಮೊದಲಿಂದಲೂ "ಒಂದು ಚುನಾವಣೆಗೆ ಒಬ್ಬ ನಾಯಕ" ಎನ್ನುವುದರಲ್ಲಿ ನಂಬಿಕೆಯಿಟ್ಟ ಬಿಜೆಪಿ ಮೋದಿಯವರ ದಿಟ್ಟ ಮಾತು, ಸ್ವಚ್ಚಾರಿತ್ರ್ಯ ಹಾಗು ಸ್ಪಷ್ಟ ಗುರಿಯನ್ನು ತನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವುದರಲ್ಲಿ ಯಾವುದೇ ರೀತಿಯಲ್ಲಿ ಹಿಂದುಳಿದಿಲ್ಲ. ಪ್ರಾರಂಭದಲ್ಲಿ ಒಂದಿಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಮೋದಿಯೇ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದ ಮೇಲೆ ಯಾವುದೇ ರೀತಿ ಗೊಂದಲಗಳಿಲ್ಲದೇ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಡೆದು ಅಳುವದರಲ್ಲಿ ನಿಸ್ಸೀಮರಾದ ಕಾಂಗ್ರೆಸ್ಸಿನ ನಾಯಕರು ನರೇಂದ್ರ ಮೋದಿಯವರ ದೂಷಣೆಯನ್ನು ಕಡಿಮೆ ಮಾಡಿಲ್ಲ. ಚುನಾವಣೆ ಹತ್ತಿರ ಬಂದಂತೆಲ್ಲ ಮೋದಿ, ಬಿಜೆಪಿ ಹಾಗು ಅರ್ಎಸ್ಎಸ್ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಫಲಿತಾಂಶಗಳಲ್ಲಿ ಒಂದಿಷ್ಟು ಎಡವಟ್ಟಾದರು ಕಮ್ಯುನಲ್ ಪಕ್ಷದವರನ್ನು ದೂರವಿಡಬೇಕು ಎನ್ನುವ ನೆಪ ಮಾಡಿ ಯುಪಿಎ, ಥರ್ಡ್ ಫ್ರಂಟ್ ಅನ್ನುವ, ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿಯಿಲ್ಲದ ರಾಜಕೀಯ ಪಕ್ಷಗಳೊಡನೆ ಸೇರಿದರೂ ಸೇರಬಹುದು. ಇನ್ನು ದಿನಬೆಳಗಾದರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷದಿಂದ ಅಷ್ಟೇನೂ ಸಮಸ್ಯೆ ಎದುರಾಗಲಿಕ್ಕಿಲ್ಲ ಆದರೆ ಅದನ್ನು ಸಂಪೂರ್ಣ ತಳ್ಳಿಹಾಕುವಂತೆಯೂ ಇಲ್ಲ.
ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಬೇರೆ ಸಮಯದಲ್ಲಿ ಸಾಮಾನ್ಯ ಜನ ಪ್ರಭು ಆಗುತ್ತಾರೋ ಇಲ್ಲವೋ, ಆದರೆ ಚುನಾವಣೆಯಲ್ಲಿ ಮಾತ್ರ ಮತದಾರನೇ ಪ್ರಭು, ದೇಶದ ಭವಿಷ್ಯದ ಬಗ್ಗೆ ಅವನು ಮಾಡಿದ್ದ ನಿರ್ಧಾರವೇ ಕೊನೆ, ಆದರೆ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಬರೀ ಹೆಚ್ಚಿನ ಸಂಖ್ಯೆಯ ಲೋಕಸಭಾ ಸೀಟ್ ಗೆಲ್ಲುವುದಷ್ಟೇ ಅಲ್ಲ, ದೇಶದ ಉದ್ದಗಲಕ್ಕೂ ಬಿಜೆಪಿಯ ವೋಟ್ ಷೇರ್ ಹೆಚ್ಚು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿಯ ಚುನಾವಣೆಯ ಫಲಿತಾಂಶ ಎಲ್ಲಾ ಲೆಕ್ಕಗಳನ್ನು ಮೀರಿಸುವುದಂತು ಶತಸಿದ್ಧ. ಅಷ್ಟಕ್ಕೂ ಭಾರತಕ್ಕೆ ಈಗ ಬೇಕಿರುವೂದು ಒಬ್ಬ ಪ್ರಭುದ್ಧ ರಾಜಕಾರಣಿ ಹಾಗು ಸ್ಪಷ್ಟ ಬಹುಮತದ ಸ್ಥಿರ ಸರ್ಕಾರ.
-ಅನಿಲ್ ಚಳಗೇರಿ, ಉದ್ಯಮಿ
anil.chalageri@gmail.com