ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಿಹಾರದಲ್ಲಿ ಮಾಯವಾಯ್ತು ಅಭಿವೃದ್ಧಿ ಮಂತ್ರ!

Mainashree
Updated On : 20 Feb 2014, 11:21 am

2007- 2008ರಲ್ಲಿ  ದೇಶ, ಜನತಾದಳ(ಯು)- ಬಿಜೆಪಿ ಸರ್ಕಾರದ ಅಡಿಯಲ್ಲಿ ಬಿಹಾರದಲ್ಲಾದ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಅದೇ ಸಮಯದಲ್ಲೇ ಅಷ್ಟೇ ಆಶ್ಚರ್ಯಕರ ಬದಲಾವಣೆಯೊಂದು ಅಲ್ಲಿ ಘಟಿಸಿತು. 1991-92ರಲ್ಲಿ ಭಾರತದ ಆರ್ಥಿಕತೆಯ ಬಾಗಿಲು ತೆರೆದಾಗಿನಿಂದ ಅನೇಕ ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ಸಾಗಿದವು. ಆದರೆ ಜಾತಿಯ ಜಾಲದಲ್ಲಿ ಸಿಲುಕಿದ್ದ ಬಿಹಾರದಲ್ಲಿ ಮಾತ್ರ ಅಭಿವೃದ್ಧಿಯ ಸುದ್ದಿಯೇ ಇರಲಿಲ್ಲ. 2009ರ ಲೋಕಸಭಾ ಚುನಾವಣೆಗೂ ಮುನ್ನ, 'ಅಭಿವೃದ್ಧಿ' ಎಂಬ  ಹೊಸ ಪದ ಅಲ್ಲಿನ ಜನಮಾನಸದಲ್ಲಿ ಜಾಗಪಡೆಯಿತು.
ಎಲ್ಲಾ ರಾಜ್ಯಗಳಲ್ಲೂ ಜಾತಿ ಲೆಕ್ಕಾಚಾರ ಇದ್ದದ್ದೇ ಬಿಡಿ. ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಬಿಹಾರದಲ್ಲಿ ಇದರ ಪ್ರಭಾವ ತುಸು ಹೆಚ್ಚು ಎನ್ನುವಂತಿತ್ತು. ಯಾವಾಗಲೂ ಅಲ್ಲಿನ ರಾಜಕೀಯ ಪಕ್ಷಗಳ ಮುಖ್ಯ ಆಯ್ಕೆ ಪ್ರಬಲ ಜಾತಿಯ ಅಭ್ಯರ್ಥಿಯೇ ಆಗಿರುತ್ತಿದ್ದ. ಆದರೆ 2009ರ ಲೋಕಸಭಾ ಚುನಾವಣೆಗಳಲ್ಲಿ ಸನ್ನಿವೇಶ ತುಸು ಬದಲಾಯಿತು. ಆಗಲೂ ಜಾತಿಯ ಪಾರುಪತ್ಯವಿತ್ತಾದರೂ, ಅಭಿವೃದ್ಧಿ ಎಂಬ ಮಂತ್ರ, ಚಿಕ್ಕ ಆದರೆ ನಿರ್ಣಾಯಕ ಪಾತ್ರವಹಿಸಿತ್ತು. ಇನ್ನು 2010ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲೂ ಮತ್ತೆ ಅಂಥದ್ದೇ ಚಿತ್ರಣ ಎದುರಾಯಿತು. ಆ ಬಾರಿಯೂ ಜಾತಿಯೇ ದೊಡ್ಡ ಪಾತ್ರ ವಹಿಸಿತಾದರೂ, ತನ್ನ ಜೋಳಿಗೆಯಲ್ಲಿ ಅಭಿವೃದ್ಧಿಯ ಹೊತ್ತಿಗೆಯಿಟ್ಟುಕೊಂಡು ಅಡ್ಡಾಡಿದ ನಾಯಕರದ್ದೇ ಮೇಲುಗೈಯಾಯಿತು. ಪರಿಣಾಮವಾಗಿ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ ಮತ್ತು ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಾರ್ಟಿ ಮೂಲೆಗುಂಪಾದವು.
ಜೆಡಿಯು-ಬಿಜೆಪಿ ಮತ್ತು ನಿತೀಶ್ ಕುಮಾರ್-ಸುಶೀಲ್ ಕುಮಾರ್ ಮೋದಿ ಮೈತ್ರಿ ಬಲಿಷ್ಠವಾಗುತ್ತಾ ಸಾಗಿ, ಆ ರಾಜ್ಯ ಅಭಿವೃದ್ಧಿಯ ಹಳಿ ಹಿಡಿಯುತ್ತಿದ್ದಂತೆಯೇ, ಇನ್ನು ಬಿಹಾರದ ಭವಿಷ್ಯ ಉತ್ತಮವಾಗಲಿದೆ ಎಂದು ಎಲ್ಲರೂ ಭಾವಿಸಿದರು.  ಆ ಸಮಯದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಚರ್ಚಿತವಾದ ಮುಖ್ಯಮಂತ್ರಿಯೆಂದರೆ ನಿತೀಶ್ ಕುಮಾರ್.
ಲಾಲು ಮತ್ತು ಅವರ ಪತ್ನಿ ರಾಬ್ಡಿ ದೇವಿಯ ಅಡಿಯಲ್ಲಿ ಬಿಹಾರ ಎಲ್ಲಾ ರೀತಿಯಿಂದಲೂ ಅಧೋಗತಿಗಿಳಿದುಬಿಟ್ಟಿತ್ತು. ಆತ್ಮಸ್ಥೈರ್ಯವಿಲ್ಲದ ಆಡಳಿತ ಯಂತ್ರ, ಅಸ್ತಿತ್ವ ಕಳೆದುಕೊಂಡ ಕಾನೂನು ಸುವ್ಯವಸ್ಥೆ, ಚಿಂದಿಯಾದ ಅರ್ಥವ್ಯವಸ್ಥೆ..ಇವುಗಳೊಟ್ಟಿಗೆ ಕುಚೇಷ್ಟೆಯಲ್ಲಿ ತೊಡಗಿದ್ದ ಅಸಡ್ಡ ನಾಯಕತ್ವದಿಂದಾಗಿ ಆ ರಾಜ್ಯ ಪ್ರಪಾತಕ್ಕಿಳಿದಿತ್ತು. ಆದರೆ 2005ರಲ್ಲಿ ಹೊಸ ಪ್ರಭುತ್ವದ ಆಗಮನಾನಂತರ ನಿಧಾನವಾಗಿ ಪರಿಸ್ಥಿತಿ ಬದಲಾಗತೊಡಗಿತು. ಜೆಡಿಯು-ಬಿಜೆಪಿಯ ಮೊದಲ ಮತ್ತು 2013ರವರೆಗಿನ ಅವುಗಳ ಎರಡನೆಯ ಅವಧಿಯವರೆಗೂ ಆ ರಾಜ್ಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಯಾಯಿತು. ಆದರೆ ಕೈಗಾರಿಕಾ ವಲಯದಲ್ಲಿ ಮಾತ್ರ ಹೇಳಿಕೊಳ್ಳುವಂಥ ಸಾಧನೆ ಆಗಲಿಲ್ಲ ಎನ್ನುವುದಂತೂ ಸತ್ಯ.
ಆದರೆ ಯಾವಾಗ ಪರದೆ ಸರಿಯಿತೋ, ಆಗ 'ಎಲ್ಲವೂ ಸರಿಯಿಲ್ಲ' ಎನ್ನುವುದು ಅರ್ಥವಾಯಿತು. ಈ ಎರಡೂ ಮಿತ್ರಪಕ್ಷಗಳ ನಡುವೆ ಅಭಿವೃದ್ಧಿಯ ಕ್ರೆಡಿಟ್ ತೆಗೆದುಕೊಳ್ಳುವ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆದೇ ಇತ್ತು! ಇವು, ತಾವು ಎಲ್ಲರನ್ನೂ ಒಳಗೊಂಡ ಆಡಳಿತ ನಡೆಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡವಾದರೂ, ಅವುಗಳ ಯೋಜನೆಗಳನ್ನು ಹತ್ತಿರದಿಂದ ನೋಡಿದಾಗ 'ಸಾಂಪ್ರದಾಯಿಕ ಮತಗಳನ್ನು ಒಡೆಯುವ ಮತ್ತು ನಿರ್ದಿಷ್ಟ ಜಾತಿಯ ಗುಂಪುಗಳನ್ನು ಒಲಿಸಿಕೊಳ್ಳುವ' ಗುರಿಯಿಟ್ಟುಕೊಂಡೇ ಅವು ಅಸ್ತಿತ್ವಕ್ಕೆ ಬಂದಿವೆ ಎನ್ನುವುದು ಅರ್ಥವಾಗುತ್ತದೆ. ಮುಂದುವರಿದ ಜಾತಿಗಳಾದ-ಭೂಮಿಹಾರಿಗಳು, ಬ್ರಾಹ್ಮಣರು, ರಜಪೂತರು, ಕಾಯಸ್ಥರು ಮತ್ತು ಬನಿಯಾಗಳು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಜೆಡಿಯುನ ಬೆನ್ನಹಿಂದೆ ನಿಂತದ್ದು ಕುರ್ಮಿಗಳು (ನಿತೀಶ್ ಕುಮಾರ್ ಜಾತಿ). ಅಲ್ಲದೆ ಕೋರಿ ಮತ್ತು ಇನ್ನೂ ಅನೇಕ ಅತಿ ಹಿಂದುಳಿಗ ಜಾತಿಗಳ ಬೆಂಬಲವೂ ನಿತೀಶ್ ಅವರಿಗಿತ್ತು. ಇನ್ನೊಂದೆಡೆ ಆರ್‌ಜೆಡಿಯ ಸಾಂಪ್ರದಾಯಿಕ ಮತಬ್ಯಾಂಕ್ ಎಂದರೆ ಯಾದವ್-ಮುಸ್ಲಿಂ ಜನಾಂಗ. ಪಾಸ್ವಾನ್ ಅವರಿಗೆ ತಮ್ಮದೇ ಜಾತಿಯ ಬೆಂಬಲವಿದೆ. ಇನ್ನು ಅಸ್ತಿತ್ವದಲ್ಲೇ ಇಲ್ಲದಂತಿರುವ ಕಾಂಗ್ರೆಸ್ ಕೆಲವು ಮೇಲ್ವರ್ಗ-ಹಿಂದುಳಿದ ವರ್ಗಗಳ -ಮುಸ್ಲಿಂ ಮತಗಳ ಮೇಲಷ್ಟೇ ಉಸಿರಾಡುತ್ತಿದೆ.
2009 ಮತ್ತು 2010ರ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ, ನಿತೀಶ್ ಕುಮಾರ್ ಅಭಿವೃದ್ಧಿಯ ಮಂತ್ರದದಂಡದ ಮೇಲೆ ಕುಳಿತು ವಿರೋಧ ಪಕ್ಷವನ್ನು ನೆಲಕ್ಕೆ ತಳ್ಳಿದರು. ಕೆಲವು ಸ್ಥಾನಗಳಿಗೆ ಮುಸಲ್ಮಾನರ ಬೆಂಬಲವೂ ಜೆಡಿಯು-ಬಿಜೆಪಿಗೆ ದೊರಕಿತಾದರೂ, ಆ ಜನಾಂಗದ ಒಟ್ಟಾರೆ ಮತಗಳು ಆರ್‌ಜೆಡಿ ಬತ್ತಳಿಕೆಯಲ್ಲೇ ಬಿದ್ದವು.
ಜೆಡಿಯು ಬಿಜೆಪಿಯಿಂದ ದೂರವಾಗಿರುವುದರಿಂದ ಮೇಲ್ವರ್ಗದ ಮತದಾರರುಮುನಿಸಿಕೊಂಡಿರಬಹುದಾದ ಸಾಧ್ಯತೆ ಇದೆ. ಇನ್ನು ಬಿಪಿಯ ಜೋಳಿಗೆಯಲ್ಲಿ ಮುಂದುವರಿದ ವರ್ಗಗಳ ಮತಗಳು ಭದ್ರವಾಗಿರುವುದಲ್ಲದೇ, ಆರ್‌ಜೆಡಿ ದುರ್ಬಲವಾಗಿರುವ ಪ್ರದೇಶಗಳಲ್ಲಿ ಯಾದವರ ವೋಟುಗಳನ್ನು ಗಳಿಸಬಹುದೆಂಬ ಲೆಕ್ಕಾಚಾರವಂತೂ ಅದಕ್ಕಿದೆ. ಇನ್ನು ಲಾಲು ಅವರ ಈ ಪರಿಸ್ಥಿತಿಗೆ ನಿತೀಶ್ ಕುಮಾರ್ ಅವರೇ ಕಾರಣ ಎಂದು ಭಾವಿಸಿರುವ ಯಾದವರು ಜೆಡಿಯುಗೆ ಮತಹಾಕುವುದು ಅಷ್ಟರಲ್ಲೇ ಇದೆ. ಆದರೆ ಒಂದು ವೇಳೆ ಆರ್‌ಜೆಡಿ- ಕಾಂಗ್ರೆಸ್ ಮತ್ತು ಎಲ್‌ಜೆಪಿಯ ಮೈತ್ರಿ ಕೆಲಸ ಮಾಡದಿದ್ದರೆ, ಕಡೇಪಕ್ಷ ಮೋದಿಯವರನ್ನು ತಡೆಯುವುದಕ್ಕಾದರೂ ಅವರು ಜೆಡಿಯುಗೆ ಜೈ ಅನ್ನಬಹುದೇನೋ?
ಅತ್ತ ಆರ್‌ಜೆಡಿ ತನ್ನ ಸಾಂಪ್ರದಾಯಿಕ ಮತಗಳನ್ನು ನಂಬಿಕೊಂಡು ಕೂತರೆ, ಇತ್ತ ಕಾಂಗ್ರೆಸ್ ಮತ್ತು ಎಲ್‌ಜೆಪಿ ತಮ್ಮ ಮೈತ್ರಿಕೂಟ 2004ರಲ್ಲಿನಂತೆಯೇ ಮತ್ತೊಮ್ಮೆ ಮ್ಯಾಜಿಕ್ ಮಾಡಲಿದೆ ಎಂದು ಭಾವಿಸುತ್ತಿವೆ. ಮೇವು ಹಗರಣದಲ್ಲಿ ಲಾಲು ಪ್ರಸಾದ್ ಜೈಲಿಗೆ ಹೋಗಿ ಬಂದಿರುವುದರಿಂದ ಅವರತ್ತ ಅನುಕಂಪದ ಅಲೆ ಹರಿದುಬರಲಿದೆ ಎಂದು ಭಾವಿಸುತ್ತಿದೆ ಆರ್‌ಜೆಡಿ. ಮಹಾರಾಜ ಗಂಜ್‌ನ ಉಪಚುನಾವಣೆಗಳಲ್ಲಿ ಬಿಹಾರದ ಶಿಕ್ಷಣ ಸಚಿವ ಮತ್ತು ಜೆಡಿಯುನ ಅಭ್ಯರ್ಥಿ ಪಿ.ಕೆ. ಶಾಹಿ ಭೂಮಿಯಾರ್ ಜನಾಂಗಕ್ಕೆ ಸೇರಿದವರಾಗಿದ್ದರೂ ಸಹ, ಆರ್‌ಜೆಡಿಯ ಪ್ರಭುನಾಥ್ ಎದುರು ಹೀನಾಯವಾಗಿ ಸೋತರು. ಪ್ರಭುನಾಥ್ ಕೇವಲ ತಮ್ಮ ಜಾತಿಯವರಷ್ಟೇ ಅಲ್ಲದೆ ಮುಸ್ಲಿಂ ಮತ್ತು ಯಾದವರ ಮತಗಳನ್ನೂ ಬಾಚಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು, ಮುಸ್ಲಿಂ ಮತ್ತು ಅತ್ಯಂತ ಹಿಂದುಳಿದ ವರ್ಗಗಳನ್ನು ಒಲಿಸಿಕೊಳ್ಳುವ ಇಂಗಿತವನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ.
ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಯ ಮತದಾರರ ಸಂಖ್ಯೆ 32 ಪ್ರತಿಶತದಷ್ಟಿದೆ. ಹಾಗಂತ ಇವರೇನೂ ಏಕರೂಪದ ಮತಚಲಾವಣೆ ಮಾಡುತ್ತಾರೆಂದಲ್ಲ, ಆದರೆ ಬಹುತೇಕ ಬಾರಿ ಇವರೆಲ್ಲ ಯಾವ ಪಾರ್ಟಿಗೆ ಮತ ನೀಡಬೇಕೆನ್ನುವುದನ್ನು ಮೇಲ್ವರ್ಗಗಳೇ ನಿರ್ಧರಿಸುತ್ತವೆ. ಇಲ್ಲಿ ಬಿಜೆಪಿಗೆ ಲಾಭವಿದೆ. ತನ್ನ ಮತದಾರರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿರುವುದರಿಂದ ಈ ಇಬಿಸಿಗಳ ಮತದ ಹರಿವನ್ನೂ ಅವರು ತನ್ನತ್ತ ಬದಲಿಸಬಲ್ಲರು ಎನ್ನುವುದು ಆ ಪಕ್ಷಕ್ಕೆ ಗೊತ್ತಿದೆ. ಅಷ್ಟೇ ಅಲ್ಲದೆ, ಅದಾಗಲೇ ಕೆಲವು ಯಾದವ ಮತಗಳು ಬಿಜೆಪಿಯ ಜೋಳಿಗೆಗೆ ಬಂದು ಬೀಳಲು ಇಚ್ಛೆ ತೋರಿಸತೊಡಗಿವೆ. ನರೇಂದ್ರ ಮೋದಿಯವರ ಹಿಂದುಳಿದ ವರ್ಗದ ಮೂಲವನ್ನು ಮುಂದಿಟ್ಟು ಜೆಡಿಯುನ ಮತಬ್ಯಾಂಕನ್ನೂ ಲೂಟಿ ಮಾಡುವ ಯೋಚನೆ ಬಿಜೆಪಿಗಿದೆ.
ಲಾಲು ಟ್ವಿಟರ್‌ನಲ್ಲಿ ಖಾತೆ ತೆರೆದಿದ್ದಾರೆ. ಅವರ ಮಕ್ಕಳಾದ ತೇಜ್ ಪ್ರತಾಪ್, ತೇಜಸ್ವಿ ಯಾದವ್ ಫೇಸ್‌ಬುಕ್‌ನಲ್ಲಿ ಪಕ್ಷಕ್ಕೆ ಟೆಕ್‌ಸೇವಿ ಮುಖವಾಡವನ್ನು ತೊಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ ಆರ್‌ಜೆಡಿಯ ಆಡಳಿತದ ದೂರದೃಷ್ಟಿಯಂತೂ ಯಾರಿಗೂ ಗೋಚರಿಸುತ್ತಿಲ್ಲ. ಅದೂ ಕೂಡ ಜಾತಿಯ ಹಿಂದೆಯೇ ಬಿದ್ದಿದೆ.
ಅಭಿವೃದ್ಧಿಯನ್ನೇ ಚುನಾವಣಾ ಮಂತ್ರ ಮಾಡಿಕೊಂಡಿದ್ದ ಬಿಹಾರದ ಆ ದಿನಗಳು ಅದಾಗಲೇ ದೂರವಾಗಿವೆ. ಮತ್ತೆ ಈಗ ಆ ರಾಜ್ಯ ಹಿಂದಿನ ದುರವಸ್ಥೆಯನ್ನೇ ಎದುರಿಸುತ್ತಿದೆ. ಈ ತಪ್ಪಿನಲ್ಲಿ ಎಲ್ಲಾ ಪಕ್ಷಗಳು ಸಮಾನ ಅಪರಾಧಿಗಳು!

 ಪ್ರಿಯರಾಗ್ ವರ್ಮಾ
ಸಿಎನ್‌ಎನ್-ಐಬಿಎನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement