ಕ್ರಿಯಾಶೀಲತೆಯನ್ನು ಉತ್ತೇಜಿಸುವುದೇ ನಮ್ಮ ಗುರಿ
ಮೈಕ್ರೋಸಾಫ್ಟ್ನ ಸಿಇಒ ಆಗಿ...
ಮೈಕ್ರೋಸಾಫ್ಟ್ನ ಸಿಇಒ ಆಗಿ ನೇಮಕವಾಗಿರುವ ಸತ್ಯ ನಾಡೆಲ್ಲಾ 'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮುಂದಿನ ಗುರಿಯೇನು, ಮೈಕ್ರೋಸಾಫ್ಟ್ ಅನ್ನು ಮುನ್ನಡೆಸಲು ಯಾವ ಮಾರ್ಗವನ್ನು ಅನುಸರಿಸಲಿದ್ದಾರೆ ಎನ್ನುವ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ...
- ನಿಮ್ಮ ಪೂರ್ವಾಧಿಕಾರಿ ಸ್ಟೀವ್ ಬಾಲ್ಮರ್ ಅವರಿಂದ ನೀವು ಕಲಿತ ನಾಯಕತ್ವದ ಪಾಠಗಳ್ಯಾವುವು?
ನನಗಿನ್ನೂ ನೆನಪಿದೆ. ಒಂದು ದಿನ ನಾನವರನ್ನು ಕೇಳಿದೆ, 'ನನ್ನ ಕೆಲಸ ನಿಮಗೆ ಹೇಗನಿಸುತ್ತಿದೆ?' ಆಗ ಸ್ವೀವ್ ಹೇಳಿದರು: "ಹೇಗೆ ಕೆಲಸ ಮಾಡುತ್ತಿದ್ದೇನೆ ಅನ್ನೊ ಪ್ರಶ್ನೆ ಕೇಳುವ ಅಗತ್ಯವಿಲ್ಲ. ಅದು ನಿನಗೆ, ನನಗೆ ಮತ್ತು ಎಲ್ಲರಿಗೂ ಮುಂದೆ ಗೊತ್ತಾಗುತ್ತದೆ."
'ಹಾಗಿದ್ದರೆ, ಹಿಂದೆ ನನ್ನ ಸ್ಥಾನದಲ್ಲಿ ಕೆಲಸ ಮಾಡಿರುವವರೊಂದಿಗೆ ನನ್ನ ಕ್ಷಮತೆಯನ್ನು ಹೇಗೆ ಹೋಲಿಸಿ ನೋಡುವುದು?' ಎನ್ನುವ ಪ್ರಶ್ನೆ ಎದುರಿಟ್ಟೆ. ಆಗ ಸ್ಟೀವ್: 'ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅಂದಿನ ಮತ್ತು ಇಂದಿನ ಸನ್ನಿವೇಶ ಭಿನ್ನವಾಗಿದೆ. ಒಂದು ಸ್ಥಾನಕ್ಕೆ ಬಂದ ನಂತರ ನೀನು ಅದೆಲ್ಲ ಯೋಚಿಸಬಾರದು. ಈಗ ನಿನ್ನ ಕೈಯಲ್ಲಿರುವ ಕಾರ್ಡ್ನೊಂದಿಗೆ ಹೇಗೆ ಆಟವಾಡುತ್ತೀ ಎನ್ನುವುದಷ್ಟೇ ಮುಖ್ಯ. ಅದರ ಮೇಲಷ್ಟೇ ನಿನ್ನ ಗಮನವಿರಲಿ'.
ಈ ಪಾಠದ ಸಾರಾಂಶವಿಷ್ಟೆ. ನಾವು ಗಟ್ಟಿಯಾಗಿ ನಿಲ್ಲಬೇಕು ಮತ್ತು ನಮ್ಮ ಪಾತ್ರವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು.
-ಬಿಲ್ ಗೇಟ್ಸ್ ಬಗ್ಗೆ ಏನು ಹೇಳುತ್ತೀರಿ?
ಬಿಲ್ ಗೇಟ್ಸ್ ವಿಶ್ಲೇಷಣಾತ್ಮಕವಾಗಿ ಅತ್ಯಂತ ಕಠಿಣ ವ್ಯಕ್ತಿ. ಅವರು ಯಾವುದೇ ವಿಷಯದಲ್ಲಾಗಲಿ ಸೂಕ್ತ ತಯಾರಿ ಮಾಡಿಕೊಂಡಿರುತ್ತಾರೆ. ನಾನು ಏನಾದರೂ ವಿಷಯ ಮಾತನಾಡಿದಾಗ ಮೊದಲ 5 ಸೆಕೆಂಡುಗಳಲ್ಲೇ ಅವರು ಅದರಲ್ಲಿನ ನ್ಯೂನತೆಗಳನ್ನು ಕಂಡುಹಿಡಿದುಬಿಡುತ್ತಾರೆ. ನನ್ನ ಶಕ್ತಿಯನ್ನೆಲ್ಲ ವಿನಿಯೋಗಿಸಿ ಆ ಕೆಲಸ ಮಾಡಿದ್ದರೂ ಅದರಲ್ಲಿನ ಆ ನ್ಯೂನತೆ ಅದೇಕೆ ನನ್ನ ಕಣ್ಣಿಗೆ ಬೀಳಲಿಲ್ಲ ಎಂದು ಅಚ್ಚರಿಪಡುತ್ತೇನೆ.
ಮೊದಲೆಲ್ಲ 'ಬಿಲ್ರನ್ನು ಕಂಡರೆ ನನಗೆ ಹೆದರಿಕೆಯಾಗುತ್ತದೆ' ಎಂದು ಹೇಳುತ್ತಿದ್ದೆ. ಆದರೆ ಅವರೊಂದಿಗೆ ವಾದಕ್ಕಿಳಿಯಬಹುದು. ಕೆಲವು ನಿಮಿಷಗಳು ವಾದಿಸಿ ನಾವು ಹೇಳಿದ್ದು ಸರಿ ಇದೆ ಎಂದೆನಿಸಿದರೆ ಯಾವುದೇ ಮುಜುಗರವಿಲ್ಲದೆ, "ಓಹ್, ನೀನು ಹೇಳಿದ್ದು ಸರಿಯಾಗಿದೆ" ಎಂದು ಒಪ್ಪಿಕೊಂಡುಬಿಡುವ ವ್ಯಕ್ತಿಯವರು. ಸ್ಟೀವ್ ಬಾಲ್ಮರ್ರಲ್ಲೂ ಇಂಥದ್ದೇ ಗುಣವಿದೆ. ಒತ್ತಡ ಹೇರಿ ಎದುರಿನ ವ್ಯಕ್ತಿಯ ಗಟ್ಟಿ ನಿರ್ಣಯವನ್ನು ಪರೀಕ್ಷಿಸುತ್ತಾರವರು.
- ನಿಮ್ಮೊಂದಿಗೆ ಬಿಲ್ ಗೇಟ್ಸ್ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಎಲ್ಲರಲ್ಲೂ ಕುತೂಹಲವಿದೆ.
ಹೊರಗಿನ ಪ್ರಪಂಚ ಇದನ್ನೆಲ್ಲ ನೋಡಿ 'ಅರೆ ಇಲ್ಲೇನೋ ಹೊಸದು ನಡೆಯುತ್ತಿದೆ' ಎಂದು ಉದ್ಗಾರ ತೆಗೆಯುತ್ತಿದೆ. ಆದರೆ ನಾವಿಬ್ಬರು ಸುಮಾರು 9 ವರ್ಷಗಳಿಂದ ಬಹಳ ಹತ್ತಿರದಿಂದ ಕೆಲಸ ಮಾಡಿದ್ದೇವೆ. ಹಾಗಾಗೆ ಕೆಲವು ಕಾರ್ಯಗಳಿಗಾಗಿ ಇಂತಿಷ್ಟು ಸಮಯ ಮೀಸಲಿಡಬೇಕೆಂದು ಅವರಿಗೆ ನಾನು ಕೇಳಿಕೊಂಡಿದ್ದೇನೆ. ನಾನು ಹೇಳಿದತ್ತ ಗಮನಹರಿಸುತ್ತಿದ್ದಾರೆ. ಬಿಲ್ಗೇಟ್ಸ್ನ ಮತ್ತೊಂದು ವೈಶಿಷ್ಟ್ಯವೆಂದರೆ, ಆ ವ್ಯಕ್ತಿ ತನ್ನ ಸುತ್ತಲಿರುವವರನ್ನೆಲ್ಲ ಕ್ರಿಯಾಶೀಲರನ್ನಾಗಿ ಮಾಡಿ, ಅವರಲ್ಲಿನ ಅತ್ಯುತ್ತಮ ಸಾಮರ್ಥ್ಯ ಹೊರಹೊಮ್ಮುವಂತೆ ಮಾಡಬಲ್ಲರು. ಇದೊಂದು ಗಿಫ್ಟ್ ಎಂದೇ ಹೇಳಬಹುದು.
- ನಿಮಗೆ ದೊರೆತ ಕೆಲವು ಆರಂಭಿಕ ನಾಯಕತ್ವದ ಪಾಠಗಳೇನು?
ನಾನು ನಮ್ಮ ಶಾಲಾ ಕ್ರಿಕೆಟ್ ತಂಡದ ಭಾಗವಾಗಿದ್ದೆ. ಬೌಲರ್ ಆಗಿದ್ದ ನಾನು, ಒಂದು ದಿನ ತುಂಬಾ ನೀರಸವಾಗಿ ಬೌಲಿಂಗ್ ಮಾಡುತ್ತಿದ್ದೆ. ಆಗ ನಮ್ಮ ಕ್ಯಾಪ್ಟನ್ ನನ್ನಿಂದ ಚೆಂಡು ತೆಗೆದುಕೊಂಡು ತಾನೇ ಬೌಲಿಂಗ್ ಮಾಡಿ ಕೆಲವು ವಿಕೆಟ್ ಪಡೆದ. ನಂತರ ನನಗೆ ಬೌಲಿಂಗ್ ಮಾಡಲು ಹೇಳಿದ.
ಯಾಕೆ ಹಾಗೆ ಮಾಡಿದೆ ಎಂದು ನಾನವನನ್ನು ಕೇಳಲಿಲ್ಲ. ನನಗನ್ನಿಸಿದ್ದೇನೆಂದರೆ, ಒಂದು ವೇಳೆ ಮತ್ತೊಮ್ಮೆ ನನಗೆ ಬೌಲಿಂಗ್ ಕೊಡದಿದ್ದರೆ ನನ್ನ ಆತ್ಮವಿಶ್ವಾಸ ಉಡುಗಿಹೋಗಬಹುದು ಎಂದು ಆತ ಭಾವಿಸಿರಬಹುದು. ಎರಡನೆಯ ಬಾರಿಗೆ ಬೌಲಿಂಗ್ ಮಾಡಿದಾಗ ಉತ್ತಮ ಪ್ರದರ್ಶನ ನೀಡಿ, ಕೆಲವು ವಿಕೆಟ್ಗಳನ್ನು ಪಡೆದೆ.
ನಾಯಕತ್ವದ ಸೂಕ್ಷ್ಮ ಮತ್ತು ಪ್ರಮುಖ ಪಾಠವಿದು. "ನಾಯಕನಾದವನು ತೊಂದರೆ ಎದುರಾದಾಗ ನಡುವೆ ಬಂದು ತಂಡಕ್ಕೆ ಆಸರೆ ನೀಡಿ ಅವರಲ್ಲಿ ಭರವಸೆ ತುಂಬಬೇಕು."
- ಹೊಸ ಹುದ್ದೆಯ ನಿರ್ವಹಣಾ ವಿಧಾನ ಯಾವ ರೀತಿ ಇರಲಿದೆ?
ತಂಡದಲ್ಲಿರುವ ಅನೇಕ ಜನರು ನನ್ನ ಗೆಳೆಯರೇ. ಅವರಲ್ಲಿ ಕೆಲವರೊಂದಿಗೆ ನಾನು ಮೊದಲೇ ಕೆಲಸ ಮಾಡಿದ್ದೇನೆ. ಎಲ್ಲರೂ ಬದ್ಧತೆಯಿಂದ ದುಡಿದು, ಒಂದು ತಂಡವಾಗಿ ಶಕ್ತಿಯನ್ನು ಅನುಭವಿಸುವುದು ಹೇಗೆ ಎನ್ನುವ ಬಗ್ಗೆ ಗಮನ ಹರಿಸಿದ್ದೇನೆ. ಅವರು ಪ್ರತ್ಯೇಕವಾಗಿ ಹೇಳುವುದನ್ನು ನಾನು ಮೌಲ್ಯಮಾಪನ ಮಾಡುತ್ತಿಲ್ಲ. ಎಲ್ಲರಲ್ಲೂ ಅದ್ಭುತ ಸಾಮರ್ಥ್ಯವಿದೆ. ಆದರೆ ಒಟ್ಟಾರೆ ಒಂದು ತಂಡದ ಮೌಲ್ಯಮಾಪನ ಮಾಡುತ್ತಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಬಳಸಿಕೊಂಡು ಹೇಗೆ ನಮ್ಮ ಸಂಸ್ಥೆಗೆ ಲಾಭ ತರುತ್ತಿದ್ದೇವೆ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ.
- 'ಒಗ್ಗಟ್ಟಿನ ಮೈಕ್ರೋಸಾಫ್ಟ್' ಸಂಸ್ಕೃತಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ನಿಮ್ಮ ಕಂಪನಿ ಹೇಳುತ್ತಿದೆ. ಅದನ್ನು ಹೇಗೆ ಸಾಧಿಸಲಿದ್ದೀರಿ?
ನಾಯಕತ್ವದ ವಿಷಯದ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆಯಾಗಿದೆ. ಮೊದಲ ನಾಯಕತ್ವದ ಸಭೆಯಲ್ಲೂ ಇದೇ ಪ್ರಶ್ನೆಯನ್ನು ನಾವು ಕೇಳಿಕೊಂಡೆವು- 'ನಮ್ಮ ತಂಡದ ಉದ್ದೇಶವೇನು?' ನಮ್ಮ ಉದ್ದೇಶವೇನಿದ್ದರೂ, ಕೆಲಸದಲ್ಲಿ ಸ್ಪಷ್ಟತೆ, ತೀವ್ರತೆ ಮತ್ತು ಒಗ್ಗಟ್ಟು ತರಬೇಕು ಎನ್ನುವುದೇ ಚರ್ಚೆಯ ಸಾರಾಂಶವಾಗಿತ್ತು.
ಸಾಂಸ್ಕೃತಿಕವಾಗಿ ನಮ್ಮ ಬಳಿ ಸರಿಯಾದ 'ಸೂತ್ರವಿದೆ' ಎಂದೇ ಭಾವಿಸಿ ಇದುವರೆಗೂ ಕಾರ್ಯನಿರ್ವಹಿಸಿದ್ದೇವೆ. ಈಗ ಹೊಸ ಸೂತ್ರವೊಂದನ್ನು ಕಂಡುಕೊಳ್ಳುವ ಪ್ರಯತ್ನವಾಗುತ್ತಿದೆ. ಈಗಿರುವ ಪ್ರಶ್ನೆಯೆಂದರೆ, ಹೇಗೆ ನಾವು 130,000 ಜನರ ಬೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತೇವೆ ಮತ್ತು ಹಿಂದಿನ ವ್ಯಾಖ್ಯಾನಗಳನ್ನೂ ಮೀರಿ ಹೊಸ ಅರ್ಥವನ್ನು ಹುಡುಕಲಿದ್ದೇವೆ ಎನ್ನುವುದು. ಈಗಿರುವ ಯಾವುದೇ ಸಾಂಸ್ಥಿಕ ರಚನೆಯೂ ಅಪ್ರಸ್ತುತ. ಏಕೆಂದರೆ, ಸ್ಪರ್ಧಾತ್ಮಕ ಮತ್ತು ಕ್ರಿಯಾತ್ಮಕ ಜಗತ್ತು ಆ ಚೌಕಟ್ಟನ್ನು ಗೌರವಿಸುವುದಿಲ್ಲ. ಅದನ್ನು ಮೀರಿ ಹೊರನಡೆಯುತ್ತಿದೆ. ಸ್ವಯಂ ಸಂಘಟನಾ ಶಕ್ತಿಯನ್ನು ಬೆಳೆಸಿಕೊಂಡು ನಾವೀನ್ಯತೆಯತೆಯನ್ನು ಹೊತ್ತು ಸಾಗುವ ಮತ್ತು ಗಮನವನ್ನು ಕೇಂದ್ರೀಕರಿಸುವ ವ್ಯವಸ್ಥೆಯನ್ನು ಸೃಷ್ಟಿಸುವುದು ಹೇಗೆ ಎನ್ನುವ ಸವಾಲು ನಮ್ಮೆದುರಿಗಿದೆ. ಅಲ್ಲದೆ ಈ ಹೈ-ಟೆಕ್ ಉದ್ಯಮ ಬಹಳ ಕಠಿಣವಾದದ್ದು, ಕೆಲವೊಮ್ಮೆ ನಾವು ವೈಫಲ್ಯದ ಮಾರ್ಗವನ್ನೇ ಹಿಡಿದಿರುತ್ತೇವೆ, ಆದರೆ ವಿಫಲವಾಗುವವರೆಗೂ ಅದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಇನ್ನು ಹಿಟ್ ಆಗುವವರೆಗೂ ಸಫಲ ಮಾರ್ಗವೂ ಅಪ್ರಯೋಜಕವೆಂದೇ ಕಾಣಿಸುತ್ತದೆ. ಹಾಗಾಗಿ ಸಫಲತೆಯ ಮಾರ್ಗವ್ಯಾವುದು ಎನ್ನುವುದನ್ನು ಗ್ರಹಿಸುವ ಸೂಕ್ಷ್ಮಗ್ರಾಹಿ ಗುಣ ನಾಯಕತ್ವಕ್ಕಿರಬೇಕು. ನೀವು 70 ಬಿಲಿಯನ್ ಡಾಲರ್ ವ್ಯಾಪಾರ ಹೊಂದಿದ್ದೀರೆಂದರೆ, ನಿಮಗೆ 1 ಮಿಲಿಯನ್ ಡಾಲರ್ ವ್ಯವಹಾರ ಅಪ್ರಸ್ತುವೆನಿಸಬಹುದು. ಆದರೆ ಆ 1 ಮಿಲಿಯನ್ ಡಾಲರ್ ವ್ಯವಹಾರವೇ ಅತ್ಯಂತ ಪ್ರಸ್ತುತವಾಗಿರಬಹುದು.
ನಾವಿನ್ಯತೆಯನ್ನು ಗುರುತಿಸಿ ಮತ್ತು ಅದರ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವುದೇ ನಮ್ಮ ಸಂಸ್ಥೆಯಲ್ಲಿ ನನಗೆ ಕಾಣಿಸುತ್ತಿರುವ ಅತಿದೊಡ್ಡ ಸಾಂಸ್ಕೃತಿಕ ಬದಲಾವಣೆ.
- ನಿಮ್ಮ ಆಯ್ಕೆ ಪ್ರಕ್ರಿಯೆ ಹೇಗಿದೆ? ನೀವು ಎದುರಿನವರಿಗೆ ಯಾವ ಪ್ರಶ್ನೆ ಕೇಳುತ್ತೀರಿ?
ನಾನು ಸರಳ ಪ್ರಶ್ನೆಗಳನ್ನೇ ಕೇಳುತ್ತೇನೆ. ನಿಮ್ಮ ಬಗ್ಗೆ ನಿಮ್ಮ ಮ್ಯಾನೇಜರ್ ಭಾವನೆ ಹೇಗಿದೆ, ಗೆಳೆಯರೇನನ್ನುತ್ತಾರೆ, ಪಾಲುದಾರರು ಅಥವಾ ಗ್ರಾಹಕರೇನನ್ನುತ್ತಾರೆ ಎಂದು ಕೇಳುತ್ತೇನೆ. ಆಗ ಆ ವ್ಯಕ್ತಿಯ ಸ್ವಪ್ರಜ್ಞೆ ಹೇಗಿದೆ ಎನ್ನುವುದು ತಿಳಿಯುತ್ತದೆ.
ಅಲ್ಲದೆ: ನೀವು ಅತಿ ಹೆಚ್ಚು ಹೆಮ್ಮೆ ಪಡುವ ಸಂಗತಿ ಯಾವುದು? 'ಓಹ್ ನಿಜಕ್ಕೂ ನಾನು ಆ ಕೆಲಸವನ್ನು ಮಾಡಿದೆನಾ?' ಎಂದು ನಿಮಗೇ ಆಶ್ಚರ್ಯವಾಗುವಂಥ ಯಾವ ಕೆಲಸವನ್ನು ಮಾಡಿದ್ದೀರಿ? ಯಾವ ನಡೆಯನ್ನು ನೆನೆದರೆ ನಿಮಗೆ ವಿಷಾದವಾಗುತ್ತದೆ...?
ಈ ರೀತಿಯ ಪ್ರಶ್ನೆಗಳಿಗೆ ಬರುವ ಉತ್ತರದಿಂದ ನನಗೆ ಎದುರಿನ ವ್ಯಕ್ತಿಯ ಬಗ್ಗೆ ಬಹಳಷ್ಟು ಸಂಗತಿಗಳು ತಿಳಿಯುತ್ತವೆ. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೆ, ನೀವು ಏನನ್ನೂ ಕಲಿಯುತ್ತಿಲ್ಲ ಎಂದರ್ಥ. ಕಲಿಕೆಯೇ ನಿಂತರೆ ಮುಂದೆ ಸಾಗುವುದಕ್ಕೆ ಸಾಧ್ಯವಿಲ್ಲ.
- ನಿಮಗೆ ಅತ್ಯಂತ ಕಿರಿಕಿರಿ ಎನಿಸುವ ಸಂಗತಿ ಯಾವುದು?
ನನಗೆ ನಿಜಕ್ಕೂ ಕಿರಿಕಿರಿಯಾಗುವುದು ಯಾರಾದರೂ ಹೊರಗಿನವರು ಬಂದು, "ನೋಡಿ ನಾವು ಆ ಕೆಲಸವನ್ನು ಹಾಗೆ ಮಾಡುತ್ತಿದ್ದೆವು' ಎಂದು ಹೇಳಿದಾಗ ಅಥವಾ ಇಲ್ಲೇ ತುಸು ವರ್ಷದಿಂದ ಇರುವವರು, 'ನಾವು ಕೆಲಸ ಮಾಡುವುದೇ ಹೀಗೆ' ಎಂದು ಹೇಳಿದಾಗ. ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿಯಾದದ್ದು. ನಿಮ್ಮ ಅನುಭವವನ್ನು ಹೇಗೆ ಇಂದಿನ ಸನ್ನಿವೇಶಕ್ಕೆ, ಬದಲಾವಣೆಗೆ ಅನ್ವಯಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ.
- ಮೈಕ್ರೋಸಾಫ್ಟ್ನಲ್ಲಿ ನಿಮ್ಮ ಛಾಪನ್ನು ಹೇಗೆ ಸ್ಥಾಪಿಸಬೇಕು ಎನ್ನುವ ಬಗ್ಗೆ ಯೋಚಿಸಿದ್ದೀರಾ?
ವ್ಯಾಪಾರದಲ್ಲಿ ಧೀರ್ಘಕಾಲ ಓಡಬೇಕೆಂದರೆ, ನಮ್ಮನ್ನು ನಾವೇ ಪುನಃ ಆವಿಷ್ಕರಿಸಿಕೊಳ್ಳಬೇಕು, ಅಪ್ಡೇಟ್ ಆಗಬೇಕು. ನಮ್ಮ ಕಂಪನಿಯ ಯಶಸ್ಸಿಗೆ ಈ ಗುಣವೇ ಕಾರಣ. ನಾವು ಇದುವರೆಗೂ ಯಶಸ್ವಿಯಾಗಿದ್ದೇವೆ. ಆದರೆ ನಮ್ಮ ಭವಿಷ್ಯಕ್ಕೂ ಹಿಂದಿನ ಯಶಸ್ಸಿಗೂ ಸಂಬಂಧವಿಲ್ಲ. ಭವಿಷ್ಯದಲ್ಲಿ ಯಶಸ್ಸಿನತ್ತ ಕರೆದೊಯ್ಯಬಲ್ಲ ಆವಿಷ್ಕಾರಗಳನ್ನು ನಾವು ಈಗ ಮಾಡಲಿದ್ದೇವೆಯೇ ಎನ್ನುವುದೇ ಮುಖ್ಯ ಪ್ರಶ್ನೆ.
ನನಗೆ ಕೌತುಕ ಹುಟ್ಟಿಸುವ ಸಂಗತಿಯೆಂದರೆ, ಎಲ್ಲದರಲ್ಲೂ, ಅಂದರೆ ನಾಗರಿಕತೆ, ಕುಟುಂಬ ಮತ್ತು ಕಂಪನಿಗಳಲ್ಲಾಗುವ ಏರಿಳಿತಗಳು. ಸಾಮಾನ್ಯವಾಗಿ ಕಂಪನಿಯೊಂದರ ಆಯುಷ್ಯ ಮನುಷ್ಯನ ಜೀವಿತಾವಧಿಗಿಂತತಲೂ ಕಡಿಮೆಯಿರುತ್ತದೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ಶತಾಯುಷಿ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟಿವೆ. 'ಕೆಲಸದಲ್ಲಿ ಆಳವಾದ ಅರ್ಥ ಕಂಡುಕೊಂಡ ಉದ್ಯೋಗಿಗಳಿರುವ' ಶತಾಯುಷಿ ಕಂಪನಿಯಾಗಬೇಕು ಎನ್ನುವುದೇ ನಮ್ಮ ಮುಂದಿರುವ ಗುರಿ.