ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವೇಗದ ಬದುಕಿನಲ್ಲಿ ಹಿಂದುಳಿಯದಿರಲಿ ಸಂಸ್ಕಾರ

ಇಂದಿನ ನಮ್ಮ ಆಚಾರ-ವಿಚಾರ, ನಡೆ-ನುಡಿ, ಆಟ-ಊಟ, ಅಧ್ಯಯನ-ಬರವಣಿಗೆ...

Mainashree
Updated On : 22 Feb 2014, 10:45 am

ಇಂದಿನ ನಮ್ಮ ಆಚಾರ-ವಿಚಾರ, ನಡೆ-ನುಡಿ, ಆಟ-ಊಟ, ಅಧ್ಯಯನ-ಬರವಣಿಗೆ ಮುಂತಾದವುಗಳೆಲ್ಲಾ ಮಜ್ಜಿಗೆ ಪೂರ್ತಿ ರಾಮಾಯಣದಂತಾಗಿವೆ. ವೈಜ್ಞಾನಿಕ, ಯಾಂತ್ರಿಕ, ಜಾಗತಿಕ ವೇಗದಲ್ಲಿ ನೂರಾರು ವರ್ಷಗಳಿಂದ ಪರಂಪರಾಗತವಾಗಿ ಹರಿದು ಬಂದ ಜಾನಪದದ ಎಲ್ಲ ವಿಷಯ-ವಸ್ತುಗಳು ಕಣ್ಮರೆಯಾಗುತ್ತಾ ಸಾಗಿವೆ.  ಹಿಂದಿನ ಜನಪದ ಮೌಲ್ಯಗಳೆಲ್ಲವೂ ಇಂದಿನವರಿಗೆ ಯಃಕಶ್ಚಿತ್ತಾಗಿ ಕಾಣುತ್ತಿವೆ.  ಕೃಷಿ ಸಂದರ್ಭದಲ್ಲಿ ಎತ್ತುಗಳಿಂದ ಉಳುವಾಗ, ಬಿತ್ತುವಾಗ, ರಂಟೆ ಹೊಡೆಯುವಾಗ, ರಾಶಿ ಮಾಡುವಾಗ ಇತ್ಯಾದಿ ಪ್ರಸಂಗಗಳಲ್ಲಿ ಹಿಂದೆ ರೈತರು ಲಾವಣಿ, ಹಂತಿ, ತತ್ವಪದ ಮುಂತಾದ ಹಾಡುಗಳನ್ನು ಹೇಳುತ್ತಿದ್ದರು. ಬೇಸರ, ನೋವು ಹಾಗೂ ಸಮಯ ಕಳೆಯಲು ಇತರರೊಂದಿಗೆ ಗಾದೆ, ಒಗಟು, ಒಡಪುಗಳನ್ನು ಪ್ರದರ್ಶಿಸುತ್ತಿದ್ದರು.  ಈಚೆಗೆ ಯಾಂತ್ರಿಕ ಉಪಕರಣಗಳು ಉಪಯೋಗ ತೀವ್ರವಾಗಿರುವುದರಿಂದ ನಮ್ಮ ಜನಪದ ಸಾಹಿತ್ಯದ ಎಲ್ಲ ಪ್ರಕಾರಗಳು ದಿನದಿನಕ್ಕೂ ಕಣ್ಮರೆಯಾಗುತ್ತಿವೆ.
ಇವತ್ತು ಮೊಬೈಲ್, ಇಂಟರ್ನೆಟ್‌ಗಳ ಹಾವಳಿ ಹೆಚ್ಚಾದಂತೆ ನಮ್ಮ ಪ್ರಾದೇಶಿಕತೆಯ ಜಾನಪದದ ಪರಂಪರೆ ಮೂಲೆಗುಂಪಾಗುತ್ತಿದೆ.  ಜನಪದ ಆಟಗಳು, ಅಡುಗೆಗಳು, ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳು ಮುಂತಾದವುಗಳೆಲ್ಲ ದಿನದಿನಕ್ಕೂ ಕಡಿಮೆಯಾಗುತ್ತಿವೆ. ಕಂಪ್ಯೂಟರ್ ಪರದೆಯ ಮೇಲೆ ವಿದೇಶಿ ಆಟಗಳು ಅತಿಯಾಗಿ ವಿಜೃಂಭಿಸುತ್ತಿದ್ದುದರಿಂದ ಮಕ್ಕಳು ಸಹಜವಾಗಿ ಅವುಗಳ ಆಕರ್ಷಣೆಯ ಬಲೆಗೆ ಬಿದ್ದಿದ್ದಾರೆ.  ಕಂಪ್ಯೂಟರ್ ಕೇಂದ್ರಗಳಿಗೆ ಹೋಗಿ ದುಡ್ಡು ಕೊಟ್ಟು ಆಡುತ್ತಿದ್ದಾರೆ. ಅದರಲ್ಲಿ ಅತಿಯಾಗಿ ವಾಹನ ಚಾಲನೆ, ಹೆಚ್ಚು ಆಕ್ಸಿಡೆಂಟ್, ಮತ್ತೊಬ್ಬನನ್ನು ಹೊಡೆದು ಗೆಲ್ಲುವ ಕ್ರೂರ ಬುದ್ಧಿ, ಕಳ್ಳತನ, ಮೋಸ, ಕೊಲೆ, ಸುಲಿಗೆ, ಸಾವು...ಇವೇ ತುಂಬಿರುತ್ತವೆ. ಇಂಥ ಆಟಗಳನ್ನು ದಿನವಹಿ ಮೇಲಿಂದ ಮೇಲೆ ಆಡುವುದನ್ನು, ನೋಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಈ ಮಕ್ಕಳಿಂದು ಸಮಾಜದಲ್ಲಿ ಕನಿಕರ, ಕಳಕಳಿ, ಪ್ರಾಮಾಣಿಕತೆ, ಆಶ್ಚರ್ಯ, ಅಸಹ್ಯ, ಅಘಾತಗಳ ಬಗ್ಗೆ ಕಿಂಚಿತ್ತೂ ಸ್ಪಂಧಿಸಲಾರದ ಮಟ್ಟಕ್ಕಿಳಿದಿದ್ದಾರೆ.  ತಮ್ಮ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ, ಎತ್ತ ಸಾಗುತ್ತಿದ್ದಾರೆ, ಅವರ ಆಲೋಚನೆಗಳೇನು, ಹೊರಗಡೆ ಹೋದಾಗ ಏನನ್ನು ತಿನ್ನುತ್ತಿದ್ದಾರೆ, ಎಂಥವರ ಸ್ನೇಹ ಸಂಪರ್ಕದಲ್ಲಿದ್ದಾರೆ ಮುಂತಾದವುಗಳ ಬಗ್ಗೆ ಇಂದಿನ ಕೆಲ ಪಾಲಕರು-ಪೋಷಕರು ಗಮನ ಹರಿಸುತ್ತಿಲ್ಲ. ಇದರಿಂದ ಮಕ್ಕಳು ಹಿರಿಯರ ಭಯವಿಲ್ಲದೆ ನಿಜಕ್ಕೂ ಹಾಳಾಗುತ್ತಿದ್ದಾರೆ. ತಮ್ಮ ಮಗ-ಮಗಳು ಆಧುನಿಕ ಜ್ಞಾನದಲ್ಲಿ ಜಾಣರಾಗಿದ್ದಾರೆಂಬುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ವಿನಃ ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿಲ್ಲ. ಮಕ್ಕಳಿಗೆ ಕೇಳಿದಷ್ಟು ಹಣ ಕೊಡುವ ತಂದೆ-ತಾಯಿಗಳಿದ್ದಾರೆಯೇ ಹೊರತು ಆ ಹಣದಿಂದ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.  ಈ ಕ್ರಿಯೆ-ಪ್ರಕ್ರಿಯೆ ಆರಂಭದಲ್ಲಿ ಚಿಕ್ಕದಾಗಿ ಕಂಡರೂ ಮುಂದೆ ದೊಡ್ಡದಾಗಿ ಭಯಾನಕವಾಗುವ ಸಂಭವ ನೂರಕ್ಕೆ ನೂರರಷ್ಟು ಸತ್ಯ.
ಸಮಾಜಸೇವೆ ಮಾಡುತ್ತೇವೆ ಎಂದು ಹೇಳುವ ಎಷ್ಟೋ ಜನರ ಮಕ್ಕಳೇ ಸಮಾಜದಲ್ಲಿ ಕಂಟಕರಾಗಿ, ವಿಚಿತ್ರವಾಗಿ ಬದುಕುತ್ತಿದ್ದಾರೆ.  ಅಂಥವರು ಮೊದಲು ತಮ್ಮ ಮಕ್ಕಳಿಗೆ ಜಾನಪದ ಸಂಸ್ಕೃತಿ ಸಂಸ್ಕಾರನ್ನು ಕಲಿಸಿಕೊಡಲಿ. ಅರ್ಧದಷ್ಟು ಸಮಾಜ ಸೇವೆ ಮಾಡಿದ ಹಾಗಾಗುತ್ತದೆ!  ಹಿಂದಿನವರು ತಮ್ಮ ಮಕ್ಕಳಿಗೆ ಕಾಯ, ವಾಚಾ, ಮನಸಾ ಸಿದ್ಧ-ಶುದ್ಧತೆಯಿಂದ ಜನಪದದಲ್ಲಿನ ದೇವರ ಕಥೆ, ಪ್ರಾಣಿ-ಪಕ್ಷಿಗಳ ಕಥೆ, ಮಹಾತ್ಮರ ಕಥೆ ಹೇಳಿ ಒಳ್ಳೆಯ ಸಂಸ್ಕಾರ ನೀಡುತ್ತಿದ್ದರು. ಹಾಗಾಗಿ ಆ ಮಕ್ಕಳು ದಾರಿ ತಪ್ಪುತ್ತಿರಲ್ಲಿಲ್ಲ.  
ಇಂದು ಸಮಾಜದಲ್ಲಿ ಹೆಣ್ಣು-ಗಂಡು ಎಂಬ ಭೇದ-ಭಾವಗಳಿಲ್ಲವಾದರೂ ಹೆಣ್ಣನ್ನು ವಿಕೃತವಾಗಿ ನೋಡುವುದು, ಅಸಹ್ಯವಾಗಿ ನಡೆಸಿಕೊಳ್ಳವುದು...ಅಲ್ಲದೆ ಇಂಥ ವಿಷಯಗಳು ದಿನನಿತ್ಯ ಮಾಧ್ಯಮಗಳಲ್ಲಿ ಸಹಜವಾಗಿ ನೋಡುವಂತಾಗಿರುವುದು, ಓದುವಂತಾಗಿರುವುದು ನಿಜಕ್ಕೂ ದುರಂತದ ಪರಮಾವಧಿ. ಅದೇರೀತಿ ಮಕ್ಕಳಿಗಾಗಿ ಹಗಲಿರುಳು ತಂದೆ-ತಾಯಿಗಳು ಕಷ್ಟಪಟ್ಟು ದುಡಿಯುತ್ತಾರೆಯೇ ಹೊರತು ಮಕ್ಕಳಿಗಾಗಿ ಇಷ್ಟಪಟ್ಟು ಒಂದು ದಿನವೂ ಅವರೊಂದಿಗೆ ಪ್ರೀತಿ-ವಿಶ್ವಾಸದ ಮಾತುಗಳನ್ನಾಡದ ಪರಿಸ್ಥಿತಿ ಹೆಚ್ಚಾಗುತ್ತಿದೆ.  ಅವಿಭಕ್ತ ಕುಟುಂಬದಲ್ಲಿ ಹಿರಿಯರು ಮಕ್ಕಳೊಂದಿಗೆ ಅನ್ಯೋನ್ಯತೆಯಿಂದ ಬೆರೆಯುತ್ತಿದ್ದರು. ಇಂದು ತಂದೆ-ತಾಯಿಗಳಿದ್ದರೂ ಮಕ್ಕಳು ಅನಾಥರಂತೆ ಬಾಳುತ್ತಿರುವ ದೃಶ್ಯ! ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಟ್ಟು ಪ್ರೀತಿಯಿಂದ ಮಾತಾಡಿಸುವುದು, ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು, ಜೊತೆಯಲ್ಲಿ ಕೂತು ಊಟ ಮಾಡುವುದು, ಹಾಡುಗಳನ್ನು  ಕಲಿಸಿಕೊಡುವುದು ಮಾಡಿದರೆ ಆ ಮಕ್ಕಳು ಎಂದಿಗೂ ಪೋಷಕರಿಂದ ಮಾನಸಿಕವಾಗಿ ದೂರವಾಗಲಾರವು.   
 ಪರಿಚಿತರೊಬ್ಬರು ಹೇಳಿದ ಸತ್ಯ ಘಟನೆ ಹೀಗಿದೆ: ಒಬ್ಬನೇ ಮಗ ಅಮೆರಿಕದಲ್ಲಿ ಯಾವುದೋ ದೊಡ್ಡ ಕಂಪನಿಯಲ್ಲಿ ಐಷಾರಾಮ ಉದ್ಯೋಗ ಮಾಡುತ್ತಿದ್ದ. ಹೆಂಡತಿ-ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ. ಇತ್ತ ಭಾರತದಲ್ಲಿ ಆತನ ತಂದೆ-ತಾಯಿ ತಕ್ಕ ಮಟ್ಟಿಗೆ ಜೀವನ ನಡೆಸುತ್ತಿದ್ದರು. ವಯಸ್ಸಾದ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗಿ ದಿನದಿನಕ್ಕೂ ಕ್ಷೀಣವಾಗುತ್ತಿರುವ ವಿಷಯ ಮಗನಿಗೆ ಗೊತ್ತಾದರೂ ಒಮ್ಮೆಯೂ ನೋಡಲು ಬರಲಿಲ್ಲ. ಮುಂದೊಂದು ದಿನ ಮಗನ ನೆನಪಲ್ಲಿ ತಾಯಿ ತೀರಿಕೊಂಡಳು. ಈ ಸುದ್ದಿ ಮಗನಿಗೆ ತಿಳಿದರೂ "ಅಂತಿಮ ಸಂಸ್ಕಾರಕ್ಕೆ ನನಗೆ ಬರಲಾಗುತ್ತಿಲ್ಲ. ಅದನ್ನು ಚೆನ್ನಾಗಿ ಮಾಡಿಬಿಡಿ, ಎಷ್ಟು ಹಣ ಖರ್ಚಾದರೂ ನಾನು ಕಳಿಸುತ್ತೇನೆಂದು" ದೂರವಾಣಿ ಮೂಲಕ ತಿಳಿಸಿದನಂತೆ.  ಇದನ್ನು ಕೇಳಿದ ತಂದೆ ಬಹಳ ದುಃಖಿತನಾಗಿ ಇಂಥ ಮಗ ಇದ್ದರೇನು ಸತ್ತರೇನು ಎಂದು ಶಪಿಸಿದನಂತೆ. ಅವರ ಮನೆಯ ಅಕ್ಕ ಪಕ್ಕದವರು ಮಗನ ಬಗೆಗೆ ಏನೂ ಮಾತಾಡದೇ ಈ ತಂದೆ ತಾಯಿಯ ಬಗೆಗೆ ಮಾತಾಡಿಕೊಳ್ಳುತ್ತಾ, "ಒಂದು ದಿನವೂ ಈ ತಂದೆ ತಾಯಿಗಳು ಮಗನನ್ನು ಬಾಲ್ಯದಲ್ಲಿ ಪ್ರೀತಿಯಿಂದ ಮಾತಾಡಿಸಲಿಲ್ಲ, ಅವನು ಕೇಳಿ ಕೇಳಿದಾಗಲೆಲ್ಲಾ ಹಣ ಕೊಟ್ಟು ಸದಾ ತಮ್ಮ ದುಡಿಮೆ, ಸಭೆ-ಸಮಾರಂಭ, ಆಸ್ತಿ-ಅಂತಸ್ತು ಎಂದು ಬರೇ ತಿರುಗಾಡುವುದೇ ಆಗಿತ್ತು. ಬರೀ ಯಾಂತ್ರಿಕವಾಗಿ ಸಾಕಿ ಬೆಳೆಸಿದರ ಪ್ರತಿಫಲ ಇದು. ಈಗ ಮಗನಿಗೆ ಬೈದರೇನು ಪ್ರಯೋಜನ?" ಅಂದರಂತೆ.      
ಇಂದು ನಮ್ಮ ಮಕ್ಕಳಿಗೆ ತಂದೆ-ತಾಯಿ, ಗುರು, ಬಂಧುಗಳು ಹಾಗೂ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಈಗ ವಿದೇಶಿ ವ್ಯಾಮೋಹ ಹೆಚ್ಚಾಗಿ, ದೇಶೀಯ ಸಂಸ್ಕೃತಿ ನಾಶವಾಗುತ್ತಿದೆ.  ಇಂದು ಹಳ್ಳಿಯ ಯುವಕರು ವಿದ್ಯಾಬ್ಯಾಸಕ್ಕೆಂದು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಪಟ್ಟಣದ ಯಾಂತ್ರಿಕ
ಬದುಕು ಜೀವನವನ್ನು ನಾಶ ಮಾಡುತ್ತಿದೆ.
  ನಮ್ಮ ಮಕ್ಕಳಿಗೆ ಪ್ರೀತಿಯ ಅಮೃತವನ್ನು ಹರಿಸಿ ಅವರನ್ನೂ ಸುಸಂಸ್ಕೃತರನ್ನಾಗಿಸಿಸೋಣ.  ನಾವು ಮಕ್ಕಳಿಗೆ ಅವರಿಗೆ ತಿಳಿವಳಿಕೆ ಬರುವವರೆಗೂ ಅಂತಃಕರಣದಿಂದ ನೋಡಿಕೊಂಡರೆ, ಮುಂದೆ ನಮ್ಮ ಕೊನೆಗಾಲದಲ್ಲಿ ಕನಿಕರ ಪಟ್ಟಾದರೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ!

  ಡಾ. ರಾಜಶೇಖರ ಜಮದಂಡಿ,
ಉಪನ್ಯಾಸಕರು
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಬೀದರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement