ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇದು ಸಂಸತ್ತಾ, ಲೋಕತಂತ್ರದ ಗ್ಯಾಸ್ ಚೇಂಬರ್ರಾ?

ಲೋಕಸಭೆಯಲ್ಲಿ ಮೆಣಸಿನ ಸ್ಪ್ರೇ ಸಿಡಿಸಿದ್ದರಿಂದ ಹಿಡಿದು, ಕೈ ಕೈ ಮಿಲಾಯಿಸುವ, ಪೋಸ್ಟರ್‌...

Rashmi Kasaragodu
Updated On : 26 Feb 2014, 1:52 am

ಲೋಕಸಭೆಯಲ್ಲಿ ಮೆಣಸಿನ ಸ್ಪ್ರೇ ಸಿಡಿಸಿದ್ದರಿಂದ ಹಿಡಿದು, ಕೈ ಕೈ ಮಿಲಾಯಿಸುವ, ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮತ್ತು ಸಭಾಪತಿಗಳ ಆಸನಕ್ಕೆ ಆಘಾತ ಮಾಡುವುದನ್ನೆಲ್ಲ 'ನಾಚಿಕೆಗೇಡಿನ ಅಥವಾ ಸದನದ ಘನತೆಯನ್ನು ಕುಗ್ಗಿಸುವ ಅಥವಾ ಲೋಕತಂತ್ರವನ್ನು ಕಳಂಕಿತಗೊಳಿಸುವ' ಕೆಲಸಗಳೆಂದು ಕರೆಯುವುದು ಈಗಂತೂ ಅಪ್ರಸ್ತುತ ಮತ್ತು ಟೊಳ್ಳು ಮಾತುಗಳು ಎಂದೆನಿಸುತ್ತದೆ! ಗೂಂಡಾಗಳಂತೆ ವರ್ತಿಸುವುದು ಮತ್ತು ಅದನ್ನು ಲೋಕತಂತ್ರದ ಮಹತ್ವಪೂರ್ಣ ಅಂಗವೆನ್ನುವಂತೆ ಬಿಂಬಿಸುವ ಕೆಲಸ ಎಷ್ಟೊಂದು ಹೆಚ್ಚಾಗಿಬಿಟ್ಟಿದೆಯೆಂದರೆ, ಮುಂದಿನ ದಿನಗಳಲ್ಲಿ ಎಂಥ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನುವುದನ್ನು ಊಹಿಸುವುದು ಅಸಂಭವವೇನಲ್ಲ. ಮುಂದೆ ಮಸೂದೆಯೊಂದನ್ನು ಮಂಡಿಸುವ ವೇಳೆಯಲ್ಲಿ, ಅದನ್ನು ವಿರೋಧಿಸುವ ಸಂಸದನೊಬ್ಬ ತನ್ನ ಬ್ಯಾಗಿನಿಂದ ಪಿಸ್ತೂಲು ತೆಗೆದು ಗುಂಡು ಹಾರಿಸಿದರೆ, ಸಚಿವರು ಅಥವಾ ಸಭಾಪತಿಯ ಮೇಲೆ ಆಕ್ರಮಣ ಮಾಡಿ ಪತ್ರಿಕೆಗಳಿಗೆ ನಗುನಗುತ್ತಾ ಪೋಸು ಕೊಟ್ಟರೆ ಆಶ್ಚರ್ಯವೇನೂ ಆಗಲಿಕ್ಕಿಲ್ಲವೇನೋ?!
ತೆಲಂಗಾಣದ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಲೋಕಸಭೆಯಲ್ಲಿ ಪೆಪ್ಪರ್ ಸ್ಪ್ರೇ ಸಿಡಿದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ, ನಾವು ಲೋಕತಂತ್ರದ ಶಿಖರ ಸಮಾನವಾದ ಸ್ಥಳದಲ್ಲಿದ್ದೇವೋ ಅಥವಾ ಭಯೋತ್ಪಾದಕರಿಂದ ದಾಳಿಗೊಳಗಾದ ನಕ್ಸಲ್ ಪೀಡಿತ ಹಳ್ಳಿಯೊಂದರಲ್ಲಿದ್ದವೋ ಎನ್ನುವುದೇ ಅರ್ಥವಾಗಲಿಲ್ಲ. ಅಂದು ಆ ರೀತಿ ಗದ್ದಲವೆಬ್ಬಿಸಿ ವಿಧೇಯಕವನ್ನು ತಡೆಯಲು ಪ್ರಯತ್ನಿಸಿದವರೆಲ್ಲ ಭಾರತದ ಪ್ರಜಾಪ್ರಭುತ್ವದ ರಕ್ಷಕರಂತೆ!
ಚುನಾವಣಾ ರಾಜಕೀಯದ ವಿಷಫಲ ಸಂಸದರನ್ನೂ ವಿಷಮಯವಾಗಿಸುವಲ್ಲಿ ಕೊನೆಗೂ ಸಫಲವಾಗಿದೆ. ಚುನಾವಣೆ ಗೆಲ್ಲುವುದಕ್ಕೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ. ಮಹಿಳಾ ರಕ್ಷಣಾ ಕಾನೂನು ಬರುವುದಿಲ್ಲ ಆದರೆ, ತೆಲಂಗಾಣ ಮಾತ್ರ ತರಬೇಕು! 2004ರಿಂದಲೂ ಕಾಂಗ್ರೆಸ್ ತಾನು ತೆಲಂಗಾಣ ರಾಜ್ಯ ರಚನೆ ಮಾಡುವುದಾಗಿ ಸ್ಪಷ್ಟವಾಗಿ ಘೋಷಣೆ ಮಾಡುತ್ತಲೇ ಬಂದಿತ್ತು. ಆದರೆ ಮಾಡಿದ್ದು ಯಾವಾಗ? ಲೋಕಸಭೆ ಚುನಾವಣೆ ಹತ್ತಿರದಾಗ, 15ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನಗಳಲ್ಲಿ, ಕೋಲಾಹಲ ಮತ್ತು ವಿರೋಧದ ನಡುವೆ! ಆಂಧ್ರದ ಮುಖ್ಯಮಂತ್ರಿ ಈ ನಿರ್ಣಯವನ್ನು ವಿರೋಧಿಸುತ್ತಾ ಹೈದ್ರಾಬಾದ್‌ನಲ್ಲಿ ಧರಣಿ ಕೂರುತ್ತಾರೆ ಮತ್ತು ಉಪಮುಖ್ಯಮಂತ್ರಿ ತಮ್ಮ ಮುಖ್ಯಮಂತ್ರಿಯ ವಿರುದ್ಧವೇ ಪ್ರದರ್ಶನ ನಡೆಸುತ್ತಾರೆ. ಲೋಕಸಭೆಯಲ್ಲಿ ತೆಲಂಗಾಣ ಬಿಲ್ ಪಾಸಾಗುತ್ತಿದ್ದಂತೆಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ರಾಜೀನಾಮೆಯನ್ನೂ ಕೊಟ್ಟುಬಿಟ್ಟರು. ಸರ್ಕಾರದ ಕೇಂದ್ರ ಕ್ಯಾಬಿನೆಟ್ ಮಂತ್ರಿ, ತಮ್ಮ ಸರ್ಕಾರದ ನಿರ್ಣಯದ ವಿರುದ್ಧ ಸದನದ ಬಾವಿಗೆ ಜಿಗಿದು ಕೂಗು ಹಾಕುತ್ತಾರೆ. ಪೋಸ್ಟರ್ ಪ್ರದರ್ಶಿಸುತ್ತಾರೆ, ಘೋಷಣೆ ಕೂಗುತ್ತಾರೆ.   
ಇನ್ನು ಸರ್ಕಾರವನ್ನು ಬೆಂಬಲಿಸುವ ಅಥವಾ ವಿರೋಧಿಸುವ ವಿಪಕ್ಷಗಳ ಸಂಸದರೂ ಕೂಡ ಬ್ಯಾನರ್ ಪ್ರದರ್ಶಿಸುವುದನ್ನು, ಅಸಭ್ಯವಾಗಿ ಅಬ್ಬರಿಸುವುದನ್ನೆಲ್ಲ ಲೋಕತಾಂತ್ರಿಕ ಪ್ರಕ್ರಿಯೆಯ ಅತಿ ಮುಖ್ಯ ಅಂಶ ಎಂದು ಭಾವಿಸಿಬಿಟ್ಟಿರುವಂತಿದೆ! ತಾವು ಕಲಾಪಗಳಿಗೆ ಅಡ್ಡಿಪಡಿಸಿದರೆ ಮಾತ್ರ ತಮ್ಮ ಮಾತನ್ನು ಕೇಳಲಾಗುತ್ತದೆ ಎನ್ನುವ ಭ್ರಮೆ ವಿರೋಧಪಕ್ಷಗಳಿಗಿದೆ. ಸದನದ ಬಾವಿಗೆ ನುಗ್ಗಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುವವರನ್ನು ಅಟಲ್ ಬಿಹಾರಿ ವಾಜಯೇಪಿಯವರಂತೂ ಮೊದಲಿನಿಂದಲೂ ಖಂಡಿಸುತ್ತಿದ್ದರು.
ಆದರೆ ಈಗಿನ ಅಧಿಕಾರಾರೂಢ ಸರ್ಕಾರಗಳೂ ಕೂಡ ವಿಪಕ್ಷಗಳನ್ನು ತಿರಸ್ಕಾರದ ದೃಷ್ಟಿಯಿಂದ ನೋಡುವುದರಿಂದ, ತೀವ್ರ ಪ್ರತಿಕ್ರಿಯೆಗಳು ಜನ್ಮ ತಾಳುತ್ತಿವೆ. ವಿಪಕ್ಷ, ಹೆಲಿಕಾಪ್ಟರ್ ಖರೀದಿಯ ಕುರಿತು ಚರ್ಚೆ ಮಾಡಲು ಬಯಸಿದರೆ, ಆ ವಿಷಯವನ್ನು ಹೇಗಾದರೂ ಮಾಡಿ ಮುಚ್ಚಿಹಾಕಿಬಿಡುತ್ತದೆ! ಹೀಗಾದಾಗ ಏನು ಮಾಡಬೇಕು? ಇದೇ ಕಾರಣಕ್ಕಾಗಿಯೇ ಅಲ್ಲವೆ ಯುಪಿಎದ ಕೆಲವು ಸಂಸದರು ಮತ್ತು ಮಂತ್ರಿಗಳು ತಮ್ಮ ಪಕ್ಷದ ವಿರುದ್ಧವೇ ಮುಗಿಬೀಳುತ್ತಿರುವುದು, ಗದ್ದಲವೆಬ್ಬಿಸುತ್ತಿರುವುದು? ಇಂದು ಪ್ರಧಾನಿಗಳು ತಮ್ಮದೇ ಪಕ್ಷದ ಸಂಸದರನ್ನು ಮತ್ತು ಸಚಿವರನ್ನು ನಿಯಂತ್ರಿಸಲಾಗದಷ್ಟು ಅಸಮರ್ಥರಾಗಿದ್ದಾರೆ. ಈ ರೀತಿಯ ವಿದ್ಯಮಾನಗಳು ದೇಶಕ್ಕೆ ಮತ್ತು ಸಂಸತ್ತಿನ ಘನತೆಗೆ ಅಪಾಯವನ್ನು ತಂದೊಡ್ಡಿವೆ.  
ಏನಾದರೂ ಮಾಡಿ ಮರುದಿನ ಮಾಧ್ಯಮಗಳಲ್ಲಿ ಮೆರೆಯಬೇಕು ಎನ್ನುವುದೇ ಇಂದಿನ ಸಂಸದರ ಏಕೈಕ ಗುರಿಯಾಗಿಬಿಟ್ಟಿದೆ. ಅದಕ್ಕಾಗಿ ಅವರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು. ಸುದ್ದಿಯಲ್ಲಿದ್ದರೆ ಜೀವಂತವಾಗಿದ್ದಂತೆ, ಇಲ್ಲದಿದ್ದರೆ ಜೀವನವೇ ವ್ಯರ್ಥ ಎಂದು ಅವರು ಭಾವಿಸುತ್ತಿದ್ದಾರೆ. ಒಂದು ಕಾಲದಲ್ಲಿ ಉತ್ತಮ ಭಾಷಣ, ಮಹತ್ವಪೂರ್ಣ ವಿಚಾರಗಳ ಮೇಲೆ ನಡೆಯುವ ಗಂಭೀರ ಚರ್ಚೆಗಳಿಂದಾಗಿಯೇ ಸಂಸತ್ತು ಸುದ್ದಿಯಲ್ಲಿರುತ್ತಿತ್ತು. ಆದರೆ ಈಗ? ಹಾಗೆ ನೋಡಿದರೆ ಈಗಲೂ ಒಮ್ಮೊಮ್ಮೆ ಉತ್ತಮ ಚರ್ಚೆಯನ್ನು ಕೆಲವು ಪತ್ರಕರ್ತರು ಮತ್ತು ಸಂಪಾದಕರು ಉಲ್ಲೇಖಿಸುತ್ತಿದ್ದಾರಾದರೂ, ಬಹುತೇಕ ಮಾಧ್ಯಮಗಳು ಹೆಚ್ಚು ಗಮನ ಕೊಡುವುದು ಸಂಸದರ ಹುಚ್ಚಾಟಗಳಿಗಷ್ಟೆ. ಇಂಥ ಹುಚ್ಚಾಟಗಳೇ ಚಾನೆಲ್‌ಗಳ ಟಿ.ಆರ್.ಪಿ.ಯನ್ನು ಹೆಚ್ಚಿಸುತ್ತವೆ. ಗಂಭೀರ ಚರ್ಚೆಗಳಿಗೆ 'ನ್ಯೂಸ್ ವ್ಯಾಲ್ಯೂ' ಕೊಡುವಂತೆಯೇ ಇಲ್ಲ ಎನ್ನುವ ಮನೋಭಾವ ಅವುಗಳದ್ದು. ಒಂದು ವೇಳೆ ತಮ್ಮ ಹುಚ್ಚಾಟಗಳು ಮಾಧ್ಯಮಗಳಲ್ಲಿ ಪ್ರಕಟವೇ ಆಗುವುದಿಲ್ಲ ಎನ್ನುವುದು ರಾಜಗೋಪಾಲ್ ಅವರಿಗೆ ಗೊತ್ತಿದ್ದರೆ, ಅವರು ಈ ಪರಿ ಗದ್ದಲವೆಬ್ಬಿಸುತ್ತಿದ್ದರೆ?
ರಾಶಿ ರಾಶಿ ಹಣ ಹೊಂದಿರುವ ಅಹಂಕಾರಿ ಸಂಸದರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಅಹಂ ಯಾವ ಮಟ್ಟಕ್ಕಿರುತ್ತದೆಂದರೆ ಎದುರಿನವರೆಲ್ಲ ಅವರಿಗೆ ಕ್ರಿಮಿಗಳಂತೆಯೇ ಕಾಣುತ್ತಾರೆ. ಇಂಥ ಕೆಲವೊಬ್ಬ ಸಂಸದರ ಆಸ್ತಿಯಂತೂ ಅನಂತವಾದದ್ದು. ಕೆಲವರಂತೂ 4 ಸಾವಿರ ಕೋಟಿಯಿಂದ ಹತ್ತು ಸಾವಿರ ಕೋಟಿ ರುಪಾಯಿವರೆಗಿನ ಸಂಪತ್ತಿನ ಒಡೆಯರು. ಒಟ್ಟಾರೆಯಾಗಿ ಇವೆಲ್ಲಾ ಅಂಶಗಳೂ ಒಗ್ಗೂಡಿ ವೋಟ್ ಬ್ಯಾಂಕ್, ಜಾತಿ ಸಮೀಕರಣ, ದಳದೊಳಗಿನ ಪಕ್ಷೀಯವಾದ, ಸದನದ ಒಳಗಿನ ಕೋಲಾಹಲ ಮತ್ತು ಕರ್ಕಶವನ್ನು ಹುಟ್ಟುಹಾಕುತ್ತಿವೆಯೇ ಹೊರತು,  ಸಂವಾದ-ಸಂವೇದನೆಯನ್ನಲ್ಲ. ವೋಟ್ ಬ್ಯಾಂಕ್ ಎಲ್ಲಿಯವರೆಗೂ ಸೀಮಿತವಾಗಿದೆಯೂ ಅಲ್ಲಿಯವರೆಗಷ್ಟೇ ಇದೆ ಇವರ ಭಾರತದ ಸೀಮೆ!
ವಾಜಪೇಯಿಯವರು ಸರ್ವಾನುಮತದೊಂದಿಗೇ ಮೂರು ರಾಜ್ಯಗಳನ್ನು ಹುಟ್ಟುಹಾಕಿದರು. ಆದರೆ ಈಗಿನ ಹೊಸ ಪ್ರದೇಶ, ನಿರ್ಮಾಣವಾಗುವುದಕ್ಕೂ ಮುಂಚೆಯೇ ಸದನದಲ್ಲಿ ಕೋಲಾಹಲವೆಬ್ಬಿಸಿತು ಮತ್ತು ಆಂಧ್ರಪ್ರದೇಶದಲ್ಲಂತೂ ರಕ್ತಚರಿತ್ರೆಯನ್ನು ಬರೆಯಿತು.
ಸಂಸತ್ತಿನ ಘನತೆಯನ್ನು ಕಾಪಾಡುವುದು ಯಾರೋ ಒಬ್ಬರ ಜವಾಬ್ದಾರಿಯಲ್ಲ, ಇದು ಎಲ್ಲರೂ ಒಂದಾಗಿ ಮಾಡಬೇಕಾದಂಥ ಕೆಲಸ. ಸದನದಲ್ಲಿ ಈಗೀಗ ಚರ್ಚೆ, ವಾದ ಮತ್ತು ಮಂಥನಗಳು ಮಾಯವಾಗುತ್ತಾ ಹೋಗುತ್ತಿವೆ. ವಿಮರ್ಶೆಯ ಜಾಗವನ್ನು 'ಆರ್ಭಟ' ಆಕ್ರಮಿಸಿಕೊಂಡಿದೆ.  ಒಂದು ವೇಳೆ ಭಾರತದ ಪ್ರತಿಷ್ಠೆಗೆ ಅಪಾಯ ಎದುರಾಯಿತೆಂದರೆ, ಅದರ ಪರಿಣಾಮವನ್ನು ಎಲ್ಲರೂ ಎದುರಿಸಬೇಕಾಗುತ್ತದೆ ಎನ್ನುವುದು ನೆನಪಿರಲಿ. ಆದರೇನು ಮಾಡುವುದು, ಸರ್ವಾನುಮತಿ ಹೊರಡುವಂತೆ ಮಾಡಬಲ್ಲ ವಿರಾಟ ವ್ಯಕ್ತಿತ್ವದ ಅಜಾತಶತ್ರು ಸದ್ಯಕ್ಕೆ ಸಂಸತ್ತಿನಲ್ಲಿಲ್ಲ.


- ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement