ಕೊಡಗಿನ ಕತ್ತು ಹಿಸುಕುತ್ತಿರುವ ವಿದ್ಯಮಾನಗಳು
ಕೊಡಗಿನಲ್ಲಿ ನಿರಂತರವಾಗಿ ನಡೆದಿರುವ ಮರಗಳ ಹನನದ ಬಗ್ಗೆ ಕಳೆದ ಒಂದು ದಶಕದಿಂದ ಪರಿಸರ ಕಾಳಜಿ ಉಳ್ಳವರು ...
ಕೊಡಗಿನಲ್ಲಿ ನಿರಂತರವಾಗಿ ನಡೆದಿರುವ ಮರಗಳ ಹನನದ ಬಗ್ಗೆ ಕಳೆದ ಒಂದು ದಶಕದಿಂದ ಪರಿಸರ ಕಾಳಜಿ ಉಳ್ಳವರು ನಡೆಸಿರುವ ಹೋರಾಟ, ಹಾಕುತ್ತಿರುವ ಕೂಗು ರಾಜ್ಯ ಸರ್ಕಾರದ ಕಿವಿಗೆ ತಾಗದೇ ಅರಣ್ಯ ರೋದನವಾಗಿದೆ.
ಪರಿಸರದ ಮೇಲೆ ನಡೆದಿರುವ ದೌರ್ಜನ್ಯ, ದಬ್ಬಾಳಿಕೆಯಿಂದ ಕಾವೇರಿ ನದಿ ಮುಂದೊಂದು ದಿನ ಸೊರಗುವ ಭೀತಿ ಕಾಡುತ್ತಿದೆ. ಹೀಗಾಗಿ ಕಾವೇರಿ ಬಚಾವೋ ಆಂದೋಲನ ಹೋರಾಟಗಾರರು ಕೊಡಗು ಜಿಲ್ಲೆ ಯಾವುದೇ ಅಭಿವೃದ್ಧಿಯಾಗದೇ ಹೋದರೂ ಪರ್ವಾಗಿಲ್ಲ, ನಮ್ಮ ಪರಿಸರ ಮತ್ತು ಸಂಸ್ಕೃತಿ ಉಳಿಸಿಕೊಂಡು ಬದುಕಲು ಬಿಡಿ. ಇಲ್ಲದೇ ಹೋದರೆ ಮುಂದಿನ ಪೀಳಿಗೆ ನಮಗೆ ಹಾಕುವ ಶಾಪ, ಈಗ ನಡೆದಿರುವ ದೌರ್ಜನ್ಯಕ್ಕಿಂತೂ ಮಿಗಿಲಾಗಿರುತ್ತದೆ ಎಂಬ ಕಾಳಜಿ ಮಾತುಗಳು ಅರ್ಥಪೂರ್ಣವಾಗಿವೆ.
ಅಭಿವೃದ್ಧಿ ಹೆಸರಿನಲ್ಲಿ ಟಿಂಬರ್ ಮಾಫಿಯಾಗಳು, ರೆಸಾರ್ಟ್ ದಂಧೆ, ಮರಳು ಮತ್ತು ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್ ದಂಧೆಗಳು ಕೊಡಗನ್ನು ಸರ್ವನಾಶ ಮಾಡುವ ನಿರ್ಧಾರ ಮಾಡಿವೆ. ಈ ನಡುವೆ ಈ ಕೇರಳದವರ ಹೊಡೆತ ಬೇರೆ. ಕೊಡಗಿನ ನೆಲ, ಸಂಸ್ಕೃತಿ, ಪರಿಸರ ನಾಶಕ್ಕೆ ನೇರ ಕಾರಣವಾಗಿರುವ ಕೇರಳ, ಎಲ್ಲಾ ದಂಧೆ ಮತ್ತು ಮಾಫಿಯಾಗಳಿಗೆ ಆಶ್ರಯ ನೀಡಿ ಎಲ್ಲವನ್ನೂ ದುಡ್ಡಿನಿಂದ ಖರೀದಿ ಮಾಡಿ, ಕೊಡಗಲ್ಲಿ ಕೋಲಾಹಲ ಎಬ್ಬಿಸಿದೆ ಎಂದು ಕಾವೇರಿ ಬಚಾವೋ ಆಂದೋಲನ ಸಮಿತಿ ರವಿ ಚಂಗಪ್ಪ ಹೇಳುವ ಮಾತುಗಳನ್ನು ಇವತ್ತಿಗೂ ರಾಜ್ಯ ಸರ್ಕಾರ ಅಥವಾ ಕೊಡಗಿನ ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ.
ಕೈಗಾದಿಂದ ಕೇರಳಕ್ಕೆ 400 ಕೆ ವಿ ಹೈಟೆನ್ಶನ್ ವಿದ್ಯುತ್ ಮಾರ್ಗ ತೆಗೆದುಕೊಂಡು ಹೋಗಲು ಕೊಡಗಿನ 1 ಲಕ್ಷಕ್ಕೂ ಅಧಿಕ ಮರಗಳನ್ನು ಹನನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈಗ 5 ಸಾವಿರಕ್ಕೂ ಅಧಿಕ ಮರಗಳನ್ನು ಹನನ ಮಾಡಲಾಗಿದೆ. ಜೀವ ನದಿ ಕಾವೇರಿಗೆ ಗಂಡಾಂತರ ಎದುರಾದರೂ ರಕ್ಷಣೆ ಮಾಡಬೇಕಾಗಿರುವ ಸರ್ಕಾರಗಳು ಕಣ್ಣು ಮುಚ್ಚಿಕೊಂಡು ಕುಳಿತಿವೆ. ಕೇರಳಕ್ಕೆ ಹೋಗುವ ವಿದ್ಯುತ್ ಮಾರ್ಗ ಕೊಡಗಿನ 50 ಕಿ.ಮೀ ಉದ್ದಕ್ಕೂ ಹಾದು ಹೋಗಲಿದೆ. ಇದರಲ್ಲಿ 15 ಕಿ.ಮೀ ನಲ್ಲಿ ಬತ್ತದ ಗದ್ದೆಗಳಿವೆ. ಉಳಿದ 35 ಕಿ.ಮೀಗಳಲ್ಲಿ 1 ಲಕ್ಷಕ್ಕೂ ಅಧಿಕ ಮರಗಳು, ಕೋಟ್ಯಂತರ ರು ಅಧಿಕ ಬೆಲೆ ಬಾಳುವ ಮರಗಳಾಗಿವೆ. ಇವುಗಳನ್ನು ಕಡಿದು ನಾಶ ಮಾಡಿದರೆ ಕಾವೇರಿ ನದಿ ನೀರು ಬತ್ತಿ ಹೋಗದೇ ಮತ್ತೇನು ಆಗಲು ಸಾಧ್ಯ? ಕೇರಳ ರಾಜ್ಯಕ್ಕೆ ವಿದ್ಯುತ್ ಪೂರೈಸಲು ಅನ್ಯ ರ್ಮಾಗಳ ಅವಕಾಶವಿದ್ದರೂ ಟಿಂಬರ್ ಲಾಬಿಯ ಒತ್ತಡಕ್ಕೆ ಮಣಿದು ಕಾವೇರಿ ಉಪ ನದಿಗಳಾದ ಲಕ್ಷ್ಮಣ ತೀರ್ಥ ಮತ್ತು ಇತರೆ ಸಣ್ಣ ನದಿತೊರೆಗಳ ಜಲಾನಯನ ಪ್ರದೇಶದಲ್ಲಿ 1 ಲಕ್ಷ ಮರದ ಹನನದೊಂದಿದೆ ಹೈಟೆನ್ಶನ್ ವಿದ್ಯುತ್ ಮಾರ್ಗದ ಯೋಜನೆಗೆ ಜಾರಿ ಹಾಗೂ ಈಗಾಗಲೇ 150 ವರ್ಷಗಳಷ್ಟು ಹಳೆಯದಾದ 5000 ಮರಗಳ ಹನನದಿಂದ ಲಕ್ಷ್ಮಣ ತೀರ್ಥದ ಒಡಲು ಬರಿದಾಗುವುದು ನಿಸ್ಸಂದೇಹ.
ನದಿ ಪಾತ್ರದಲ್ಲಿ ನಿಯಮ ಬಾಹಿರ ಹಾಗೂ ಅವೈಜ್ಞಾನಿಕ ಮರಳು ದಂಧೆಯಿಂದ ನದಿಯ ನಿರಂತರ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಇಂತಹ ಆಘಾತಕಾರಿ ಬೆಳವಣಿಗೆಯನ್ನು ಉತ್ತೇಜಿಸುತ್ತಿರುವ ಅಧಿಕಾರಿಗಳು. ಅತ್ಯಮೂಲ್ಯವಾದ ನಿತ್ಯ ಹರಿದ್ವರ್ಣದ ಮೀಸಲು ಅರಣ್ಯಗಳ ನಾಶ ಮಾಡಿ ವಾಣಿಜ್ಯೋದ್ಯಮಕೋಸ್ಕರವಾಗಿ ಸ್ಥಳೀಯ ಪರಿಸರಕ್ಕೆ ಪೂರಕವಲ್ಲದ ಪರದೇಶದ ತೇಗದ ತೋಪುಗಳಾಗಿ ಪರಿವರ್ತನೆ.
ಅತಿಸೂಕ್ಷ್ಮ ಹಾಗೂ ಜಲಮೂಲಕ್ಕೆ ಪೂರಕವಾದ ಪ್ರದೇಶಗಳಲ್ಲಿ ಎಗ್ಗಿಲ್ಲದೆಯೆ ಕಾನೂನು ಬಾಹಿರವಾಗಿ ನಿರಂತರವಾಗಿ ನಡೆಯುತ್ತಿರುವ ಭೂ ಪರಿವರ್ತನೆ. ಇದರೊಂದಿಗೆ ನೈಸರ್ಗಿಕವಾಗಿ ಹರಿಯುವ ನದಿ ತೊರೆಗಳಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ರೆಸಾರ್ಟ್ ದಂಧೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂತಹ ಯೋಜನೆಗಳಿಗೆ ಹಸಿರು ನಿಶಾನೆ ಕೊಡುತ್ತಿರುವ ಅಧಿಕಾರಿಗಳು.
ಬತ್ತದ ಗದ್ದೆಗಳು ಮುಖ್ಯವಾದ ನೀರಿನ ಸೆಲೆಗಳು ಇತ್ತೀಚಿನ ದಿನಗಳಲ್ಲಿ ಇಂತಹ ಬತ್ತದ ಗದ್ದೆಗಳನ್ನು ಸರ್ಕಾರದ ಅನುಮೋದನೆಯಂತೆ ಬಡಾವಣೆಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ವ್ಯತಿರಿಕ್ತ ಪರಿಣಾಮವು ಕಾವೇರಿ ನದಿಯ ಹರಿವಿನ ಮೇಲಿರುತ್ತದೆ. ಕೊಡಗಿನಂತಹ ಅತಿಸೂಕ್ಷ್ಮ ಪರಿಸರದ ಸಾಮರ್ಥ್ಯಕ್ಕಿಂತ ಮಿಗಿಲಾಗಿ ಅವೈಜ್ಞಾನಿಕವಾದ ಜನವಸತಿ ಬಡಾವಣೆಗಳ ನಿರ್ಮಾಣದಿಂದ ಮೂಲ ಸೌಲಭ್ಯ ಹಾಗೂ ನೀರಿನ ಸೆಲೆಗಳಿಗೆ ತೀವ್ರತರ ಧಕ್ಕೆ. ಇವೆಲ್ಲವೂ ಅವೈಜ್ಞಾನಿಕವಾದ ಯೋಜನೆ ಹಾಗೂ ವರದಿಗಳಾಗಿವೆ. ಹೀಗಾಗಿ ಕೊಡಗಿನ ಕೆಲವು ಮೂಲ ನಿವಾಸಿಗಳೊಂದಿಗೆ ಸಂವಾದ ನಡೆಸಿದಾಗ ಕಾವೇರಿ ನದಿ ಹರಿವನ್ನು ಉಳಿಸಿಕೊಳ್ಳಲು ಸ್ಥಳೀಯ ಆಚಾರ, ವಿಚಾರ, ಪದ್ದತಿ, ಪರಂಪರೆ ಹಾಗೂ ದೈನಂದಿನ ಬದುಕಿಗೆ ಧಕ್ಕೆಯಾಗದ ರೀತಿಯಲ್ಲಿ ಸರ್ಕಾರದ ಕೆಲವೊಂದು ನಿರ್ಧಾರಗಳ ಅವಶ್ಯಕತೆ ಇದೆ ಎಂಬುದನ್ನು ಅರಿಯಬಹುದು.
ಪರಿಹಾರೋಪಾಯಗಳು ಏನು?:
ಪ್ರಸ್ತುತ ನಡೆಯುತ್ತಿರುವ 400 ಕೆ.ವಿ ಹೈಟೆನ್ಶನ್ ವಿದ್ಯುತ್ ಮಾರ್ಗವನ್ನು ಪರಿಸರ ನಾಶವಾಗದ ರೀತಿಯಲ್ಲಿ ಬದಲಿ ಮಾರ್ಗಗಳಾದ ಮೈಸೂರು, ಕೊಡಗಿನ ಗಡಿಯಲ್ಲಿ ಡಿ ಲೈನ್ ಮುಖಾಂತರ, ಮೈಸೂರು ಕೋಯಿಕೋಡು ಮಧ್ಯೆ ಪ್ರಸ್ತುತ ಚಾಲ್ತಿಯಲ್ಲಿರುವ 220 ಕೆ.ವಿ ಲೈನ್ ಅನ್ನು ಮೇಲ್ದರ್ಜೆಗೇರಿಸುವುದು, ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಸುರಂಗ ಮಾರ್ಗದ ಮುಖಾಂತರ ತೆಗೆದುಕೊಂಡು ಹೋಗುವುದು. ಇದರಿಂದ ಪರಿಸರ ನಾಶ ತಪ್ಪಿಸಬಹುದು.
ಸ್ಥಳೀಯರ ಶ್ರದ್ಧಾ ಭಕ್ತಿ ಹಾಗೂ ನಿರ್ದಿಷ್ಟವಾಗಿರುವ ಮೂಲ ಉದ್ದೇಶವನ್ನು ಸಂರಕ್ಷಿಸಿಕೊಂಡು ಬಂದಿರುವಂತಹ ದೇವರಕಾಡು, ಗೋಮಾಳ, ಊರುಡುವೆ, ನದಿ ಪಾತ್ರಗಳು, ಕೆರೆ ಪಾತ್ರಗಳ ಅತಿಕ್ರಮಣ ತೆರೆವುಗೊಳಿಸುವುದರೊಂದಿಗೆ ಜಿಲ್ಲೆಯ ಎಲ್ಲಾ ಅನಧಿಕೃತ ಸರ್ಕಾರಿ ಹಾಗೂ ಅರಣ್ಯ ಭೂಮಿ ಒತ್ತುವರಿದಾರರನ್ನು ಪರಿಸರ ಸೂಕ್ಷ್ಮ ಪ್ರದೇಶವಾದ ಕೊಡಗು ಜಿಲ್ಲೆಯ ಹೊರಗೆ ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವುದು. ಅಂತಹ ಅತಿಕ್ರಮ ತೆರವುಗೊಳಿಸಿದ ಜಾಗದಲ್ಲಿ ಸರ್ಕಾರದ ವತಿಯಿಂದ ಸ್ಥಳೀಯವಾದ ಸದಸ್ಯ ಜಾತಿಯನ್ನೇ ಬಳಸಿ ಅರಣ್ಯೀಕರಣಗೊಳಿಸುವುದು, ಯಾವುದೇ ಕಾರಣಕ್ಕೂ ಅಂತಹ ಜಾಗವನ್ನು ಅರಣ್ಯೀಕರಣ ಹೊರತಾಗಿ ಅನ್ಯ ಉದ್ದೇಶಗಳಿಗೆ ಬಳಸಕೂಡದು.
ಕೊಡಗು ಜಿಲ್ಲಾದ್ಯಂತ ಕೃಷಿ ಹಾಗೂ ಕಾಫಿ ಜಮೀನನ್ನು ಯಾವುದೇ ವಾಣಿಜ್ಯ ಹಾಗೂ ಬಡಾವಣೆಗಳಿಗೆ ಪರಿವರ್ತಿಸದಂತೆ ತಕ್ಷಣದಿಂದಲೇ ನಿಷೇಧ ಹೇರುವುದು, ಕೊಡಗಿನಲ್ಲಿ ತಕ್ಷಣದಿಂದಲೇ ಯಾವುದೇ ರೆಸಾರ್ಟ್ ಆಗಲೀ, ವಸತಿ ಬಡಾವಣೆ, ವಿಲ್ಲಾಸ್, ವಸತಿ ಸಮುಚ್ಛಯ, ದೊಡ್ಡ ಪ್ರಮಾಣದ ಜಲ ವಿದ್ಯುತ್ ಉತ್ಪಾದನೆಗೆ ಕಡಿವಾಣ ತಕ್ಷಣದಿಂದಲೇ ಜಾರಿಗೊಳಿಸುವುದು. ಪ್ರವಾಸೋದ್ಯಮದ ಬೆಳವಣಿಗೆಗಾಗಿ ಕಾನೂನು ಬದ್ಧವಾಗಿ ಹೋಮ್ಸ್ಟೇಗಳಿಗೆ ಉತ್ತೇಜನ ನೀಡುವುದು. ಅಂತೆಯೇ ಕಾನೂನನ್ನು ಉಲ್ಲಂಘಿಸಿ ನಿಯಮ ಬಾಹಿರವಾಗಿ ತಲೆ ಎತ್ತಿರುವ ಎಲ್ಲಾ ಭೂ ಪರಿವರ್ತನೆ, ರೆಸಾರ್ಟ್, ಬಡಾವಣೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸುವುದು.
ಕೊಡಗಿನ ಜನರ ಪರಿಸರ ಕಾಳಜಿಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರು ನೆಟ್ಟು ಬೆಳೆಸಿದ ಮರಗಳ ಸಂಪೂರ್ಣ ಮಾಲೀಕತ್ವವನ್ನು ಇಂದು ಸಿಲ್ವರ್ ಮರಕ್ಕಿರುವಂತಹ ರಿಯಾಯ್ತಿ ಮಾದರಿಯಲ್ಲಿ ಜಾಗ ನಿಬಂಧನೆಗೆ ಒಳಪಡದೆ ಸಂಬಂಧಿಸಿದ ರೈತರಿಗೇ ನೀಡುವುದು. ಹೀಗೆ ನೀಡಿದ್ದಲ್ಲಿ ಸ್ಥಳೀಯ ಸಸ್ಯಜಾತಿಯ ಮರಗಳಿಗೆ ಉತ್ತೇಜನ ನೀಡುವುದರೊಂದಿಗೆ ಪರಿಸರ ಪೂರಕವಲ್ಲದ ಸಿಲ್ವರ್ ಮರದಿಂದಾಗುವ ಪರಿಸರ ಹಾನಿಯನ್ನು ತಡೆಗಟ್ಟಬಹುದು. ಹೀಗೆ ಮಾಡುವಾಗ ಕೆಲವು ನಿರ್ದಿಷ್ಟ ಒಡಂಬಡಿಕೆಗಳನ್ನು ಒಳಗೊಂಡಿರಬಹುದು. ಉದಾ- ಎಕ್ರೆ ಜಾಗದಲ್ಲಿ ಒಂದು ವರ್ಷದಲ್ಲಿ 5 ಅಡಿಗಳಿಗೆ ಮೇಲ್ಪಟ್ಟ 3 ಮರಗಳಿಗೆ ಸೀಮಿತಗೊಳಿಸುವುದು, ಹಾಗೇ ಕತ್ತರಿಸಿದ ಮರಗಳ ಬದಲಾಗಿ ಸ್ಥಳೀಯ ಜಾತಿಯ 6 ಮರಗಳನ್ನು ನೆಟ್ಟು ಬೆಳೆಸಬೇಕು.
ಕೊಡಗಿನ ಮೂಲ ಸ್ವರೂಪವನ್ನು ಹರಿದು ಹಂಚುವಂತಹ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರದಂತೆ ನಿರ್ಬಂಧಿಸುವುದು. ಕೊಡಗಿನಲ್ಲಿ ಸ್ಥಳೀಯ ಜಾತಿಯ ಸಸ್ಯಗಳ ನರ್ಸರಿಯನ್ನು ಬೆಳೆಸಿ ವಿತರಿಸುವ ಮುಖಾಂತರ ಏಕಸ್ವಾಮ್ಯದ ಸಿಲ್ವರ್ ಮರದಿಂದಾಗುವ ಪರಿಸರ ಹಾನಿಯನ್ನು ತಡೆಗಟ್ಟಬೇಕು.
-ಕೆ. ಎನ್. ರವಿ
ಕನ್ನಡಪ್ರಭ