ಅಹಂಕಾರಿ ಕಾಂಗ್ರೆಸ್ಅವಕಾಶವಾದಿ ತೃತೀಯ ರಂಗ
ಭಾರತ ಒಂದು ಕುತೂಹಲಕರ ಘಟ್ಟದಲ್ಲಿ...
ಭಾರತ ಒಂದು ಕುತೂಹಲಕರ ಘಟ್ಟದಲ್ಲಿ ಸಾಗುತ್ತಿದೆ. ಒಗ್ಗೂಡಿಸುವ ಮತ್ತು ಪುನಃ ಧ್ರುವೀಕರಣದ ಕೆಲಸ ಜೋರಾಗಿಯೇ ಶುರುವಾಗಿದೆ. ಸಂಬಂಧಗಳನ್ನು ಬೆಸೆಯುವ ಮೂಲಕ ಚುನಾವಣೆಗಳಲ್ಲಿ ತಮ್ಮ ಜಾಗವನ್ನು ಎಲ್ಲಿ/ ಹೇಗಿರಲಿದೆ ಎನ್ನುವುದನ್ನು ಕಂಡುಹಿಡಿಯಬೇಕೆಂದು ಅನೇಕರು ಆಶಿಸುತ್ತಿದ್ದಾರೆ. ಅಸಂಬದ್ಧತೆಯನ್ನು ತಪ್ಪಿಸಲು ಕೆಲವರು ತೃತೀಯ ಅಥವಾ ಚತುರ್ಥ ರಂಗವನ್ನು ಸ್ಥಾಪಿಸುವ ಬಯಕೆಹೊಂದಿದ್ದಾರೆ. ಒಂದೆಡೆ ನರೇಂದ್ರ ಮೋದಿ ಬೃಹತ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ನ ಕೆಲವು ಸಚಿವರು ನೀತಿಗೆಟ್ಟ ಭಾಷೆಯನ್ನೇ ಆಶ್ರಯಿಸಿ ಮಾಧ್ಯಮಗಳಲ್ಲಿ ಜಾಗಪಡೆಯುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರಂತೂ ಸದಾ ಹಸನ್ಮುಖಿ. ತಮ್ಮ ವಿನಯಶೀಲ ವರ್ತನೆಯಿಂದ ಗುರುತಿಸಿಕೊಳ್ಳುವ ವ್ಯಕ್ತಿಯವರು. ಅಚ್ಚರಿಯೆಂದರೆ ತಮ್ಮ ಸರ್ಕಾರದೊಂದಿಗೆ ಸ್ನೇಹಯುತವಾಗಿ ವರ್ತಿಸುತ್ತಿಲ್ಲ ಎನ್ನುವ ಕಾರಣಕ್ಕೆ ವಿದ್ಯುನ್ಮಾನ ಮಾಧ್ಯಮಗಳನ್ನು ಎಚ್ಚರಿಸುವ ಕೆಲಸಕ್ಕೆ ಈಗ ಕೈ ಹಾಕಿದ್ದಾರವರು. ಮಾಧ್ಯಮಗಳ ವಿರುದ್ಧ ಗುಪ್ತಚರ ಸಂಸ್ಥೆಗಳು ಒದಗಿಸುವ ಮಾಹಿತಿಯನ್ನು ಹೊರಗೆಡವಿ, ಅವುಗಳ ಬಂಡವಾಳ ಬಯಲು ಮಾಡುತ್ತೇನೆ ಎಂದಿದ್ದಾರೆ ಶಿಂದೆ. ಈ ಹೇಳಿಕೆಯಂತೂ ಅವರ ಗುಣಕ್ಕೆ ತದ್ವಿರುದ್ಧವಾಗಿ ಗೋಚರಿಸುತ್ತಿದೆ. ಆದರೆ, ನಂತರ ಇದನ್ನೆಲ್ಲ ಅಲ್ಲಗಳೆದ ಅವರು 'ಎಲೆಕ್ಟ್ರಾನಿಕ್ ಮಾಧ್ಯಮ' ಎನ್ನುವುದನ್ನು 'ಸಾಮಾಜಿಕ ಮಾಧ್ಯಮ' ಎಂದು ಓದಿಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮವನ್ನು ದೂರುವುದೇಕೆಂದು ಅರ್ಥವಾಗುತ್ತಿಲ್ಲ? ಅದು ಸ್ವಲ್ಪ ಒರಟು ಸ್ವಭಾವದ್ದು ಎನ್ನುವುದು ನಿಜ, ಅಲ್ಲದೆ ಕೆಲವೊಮ್ಮೆ ಬೇಜವಾಬ್ದಾರಿಯುತವಾಗಿಯೂ ವರ್ತಿಸುವುದು ಸಹಜ. ಆದರೆ ಸೆನ್ಸಾರ್ಶಿಪ್ ವಿಧಿಸುವುದಕ್ಕಂತೂ ಅದು ಅರ್ಹವಲ್ಲ.
ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರದ್ದು ಸಾಮಾನ್ಯವಾಗಿ ಆಪ್ಯಾಯಮಾನವಾದ ವ್ಯಕ್ತಿತ್ವ. ಆದರೆ ಅವರು ತಮ್ಮ ಕ್ಷೇತ್ರವಾದ ಫರೂಕಾಬಾದ್ಗೆ ಭೇಟಿ ನೀಡಿದಾಗ ಮಾತ್ರ ಸಂಪೂರ್ಣವಾಗಿ ಬೇರೆಯ ವ್ಯಕ್ತಿಯೇ ಆಗಿಬಿಡುತ್ತಾರೆ. ಒಂದು ಸಂದರ್ಭದಲ್ಲಂತೂ ಅವರು ಮಾಧ್ಯಮ ಗುಂಪೊಂದರ ಪತ್ರಕರ್ತರಿಗೆ, "ಫರೂಕಾಬಾದ್ ಅನ್ನು ಪ್ರವೇಶಿಸುವುದು ಬಹಳ ಸುಲಭ, ಆದರೆ ಇಲ್ಲಿಂದ ಹೊರಹೋಗುವುದು ಅಷ್ಟು ಸುಲಭವಲ್ಲ" ಎಂದು ಧಮಕಿ ಹಾಕಿದ್ದರು! ನಿನ್ನೆ ಕೂಡ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರ ವಿರುದ್ಧ ಅಸಭ್ಯ ಭಾಷೆಯನ್ನು ಬಳಸಿದ್ದಾರೆ.
ಕಾಂಗ್ರೆಸ್ ನಾಯಕರ ಹತಾಶೆ ಅರ್ಥವಾಗುವಂಥದ್ದೆ. ಇಂದು ಆ ಪಕ್ಷ ಸಾರ್ವಜನಿಕರಿಂದ ವಿರೋಧ ಎದುರಿಸುತ್ತಿದೆ. ಅದರ ಅಂತಿಮ ದಿನ ಹತ್ತಿರವಾಗುತ್ತಿದೆ. ಹತ್ತು ವರ್ಷದ ಆಡಳಿತಾವಧಿಯಲ್ಲಿ ಅದರಲ್ಲಿನ ಸಾಧಾರಣ ವ್ಯಕ್ತಿಗಳೂ ಸೊಕ್ಕು ಬೆಳೆಸಿಕೊಂಡುಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣೆಗಳಲ್ಲಿ ತಮ್ಮ ಠೇವಣಿಯನ್ನು ಕಳೆದುಕೊಳ್ಳಬಲ್ಲರು, ಆದರೆ ಅಹಂಕಾರವನ್ನಲ್ಲ! ಅವರ ಹೇಳಿಕೆಗಳು ಖಂಡನಾರ್ಹ. ಈಗೀಗಂತೂ ಈ ವಿಷಯದಲ್ಲಿ ಅವರ ಗುಣ ಅತಿರೇಕಕ್ಕೆ ಹೋಗಿಬಿಟ್ಟಿದೆ.
ಈ ಹಿಂದೆ ನಾನು ತೃತೀಯ ರಂಗವನ್ನು LOSERS FRONT ಎಂದು ಕರೆದಿದ್ದೆ. ಈ ಬಾರಿ ತೃತೀಯ ರಂಗ ಭಿನ್ನವ್ಯಕ್ತಿತ್ವದ ಜನರೊಂದಿಗೆ ಎದುರಾಗಲು ನಿರ್ಧರಿಸಿದೆ. ಅದರಲ್ಲಿ ಒಂದೆಡೆ ಎಡಪಂಥೀಯ ಮನಸ್ಥಿತಿಗಳಿದ್ದರೆ, ಮತ್ತೊಂದೆಡೆ ಕಮ್ಯುನಿಸ್ಟ್ ವಿರೋಧಿ ತೃಣಮೂಲ ಕಾಂಗ್ರೆಸ್ ಇದೆ. ಒಂದಕ್ಕೆ ಇನ್ನೊಂದನ್ನು ಸಹಿಸಿಕೊಳ್ಳಲಾಗದು. ಇನ್ನು ಈ ರಂಗದಲ್ಲಿ ರಾಜಕೀಯವಾಗಿ ಎತ್ತಬೇಕಾದರೂ(ಗಾಳಿ ಬೀಸಿದಲ್ಲಿ) ವಾಲಬಲ್ಲ ಕೆಲವರಿದ್ದಾರೆ, ಇವರು ಈ ಹಿಂದೆ ಎನ್ಡಿಎದ ಭಾಗವೂ ಆಗಿದ್ದರು. ಅವರಲ್ಲಿ ಕೆಲವರನ್ನು ಕಾಂಗ್ರೆಸ್ನ ಬೆಂಬಲ ತೆಗೆದುಕೊಳ್ಳಲು ಬಯಸುವಂತೆ ಮಾಡಲೂಬಹುದು; ಇನ್ನೂ ಕೆಲವರು ಯುಪಿಎದ ಭಾಗವೂ ಆಗಬಹುದು. ಅವರಿಗೆ ಇದೊಂದು ಉಳಿವಿಗಾಗಿನ ಯುದ್ಧವಷ್ಟೆ. ಅವರಲ್ಲಿ ಒಂದಿಷ್ಟು ಜನ ಚಾಣಾಕ್ಷ ಮತಿಗಳೂ ಸೇರಿಕೊಂಡಿದ್ದಾರೆ. ತಮ್ಮ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿರುವ ಅವರು, ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ತೃತೀಯ ರಂಗದ ಸಭೆಗಳಲ್ಲಿ ತಾವೇಕೆ ಅನುಪಸ್ಥಿತರಾಗುತ್ತಿದ್ದೇವೆ ಎನ್ನುವ ಬಗ್ಗೆ ತಮ್ಮ ವೈಯಕ್ತಿಕ ಕೆಲಸಗಳು ಮತ್ತು ಭೇಟಿಗಳ ನೆಪವೊಡ್ಡಿ ಜಾರಿಕೊಳ್ಳುವ ಕೆಲಸ ಅವರು ಇನ್ನು ಮೇಲೆ ಆರಂಭಿಸಬಹುದು.
2014ರ ಚುನಾವಣೆಗಳಲ್ಲಿ ಮುಖ್ಯ ಭೂಮಿಕೆಯಲ್ಲಿರುವುದು ಆಡಳಿತದ ಸಮಸ್ಯೆಗಳು. ಆರ್ಥಿಕತೆ, ಭ್ರಷ್ಟಾಚಾರ, ಭದ್ರತೆ ಮತ್ತು ನಾಯಕತ್ವದ ಕುರಿತಾದ ವಿಷಯಗಳ ಬಗ್ಗೆಯೇ ಎಲ್ಲೆಡೆಯೂ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಹಾಗಾಗೇ ಈ ಎಲ್ಲಾ ಸಮಸ್ಯೆಗಳತ್ತ ದೃಷ್ಟಿ ಹರಿಸುವವರ್ಯಾರು, "ಯಾರು ಸ್ಥಿರವಾದ ಸರ್ಕಾರವನ್ನು ನಡೆಸಲಿದ್ದಾರೆ?" ಎನ್ನುವ ಪ್ರಶ್ನೆಯೇ ಮತದಾರರ ಮನಸ್ಸಿನಲ್ಲಿ ಸುಳಿದಾಡುತ್ತಿದೆ. ನಿಸ್ಸಂಶಯವಾಗಿಯೂ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ದೊಡ್ಡ ಸೋಲುಕಂಡವರಿಂದಲಂತೂ ಇದು ಸಾಧ್ಯವಿಲ್ಲ. ಇನ್ನು ಸ್ಪಷ್ಟ ಸಿದ್ಧಾಂತವಿಲ್ಲದ ಭಿನ್ನಜಾತಿಯ ಗುಂಪುಗಳಿಂದ ಅಥವಾ ಗಾಳಿ ಬಂದತ್ತ ವಾಲುವವರಿಂದಲೂ ಅಲ್ಲ. LOSERS FRONT ದಿನ ದಿನಕ್ಕೆ ಚಿಕ್ಕದಾಗುತ್ತಾ ಸಾಗಲಿದೆ ಎಂದೇಕೋ ನನಗೆ ಅನಿಸುತ್ತಿದೆ. ಕೆಲವು ಉತ್ತಮ ಪಕ್ಷಗಳು ಸಂವೇದನಾಶೀಲ ಆಯ್ಕೆಗಳತ್ತ ಮುಖಮಾಡಬಹುದು. ಆದರೆ ಕಾಂಗ್ರೆಸ್ ಮಾತ್ರ ಶಿಂದೆ ಮತ್ತು ಖುರ್ಷಿದ್ರಂಥವರಿಂದ ನೀರನ್ನು ಕದಡಿ ಕೊಚ್ಚೆ ಎಬ್ಬಿಸುವ ದುರ್ಬಲ ಪ್ರಯತ್ನಗಳನ್ನಷ್ಟೇ ಮಾಡಲಿದೆ.
-ಅರುಣ್ ಜೇಟ್ಲಿ
ಪ್ರತಿಪಕ್ಷ ನಾಯಕ, ರಾಜ್ಯಸಭೆ