ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಂಗಳೂರು ರ್ಯಾಲಿ ಯಶಸ್ಸಿಗೆ ಕಾರಣ ಯಾರು?

ಮೊನ್ನೆ ಫೆಬ್ರವರಿ 18ರಂದು ಮಂಗಳೂರಿನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ...

Mainashree
Updated On : 26 Feb 2014, 11:22 am

ಮೊನ್ನೆ ಫೆಬ್ರವರಿ 18ರಂದು ಮಂಗಳೂರಿನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬರೋಬ್ಬರಿ 50 ನಿಮಿಷ ನಿರರ್ಗಳವಾಗಿ ಮಾತನಾಡಿದರು. ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲೆಲ್ಲಿ ಸೋತಿದೆ, ಏನು ಮಾಡಬೇಕಿತ್ತು ಮತ್ತು ಬಿಜೆಪಿ ಸರ್ಕಾರ ಬಂದರೆ ಯಾವ ರೀತಿ ಅಭಿವೃದ್ಧಿ ಮಾಡಲಿದೆ ಎಂಬ ಸಮಗ್ರ ಭಾರತದ ದಿಕ್ಸೂಚಿ ಇದ್ದ ಪರಿಪಕ್ವ ಅಭಿವೃದ್ಧಿಯ ಆಶಯ ಅದರಲ್ಲಿತ್ತು. ಪ್ರತಿ ಯೋಜನೆಯ ಬಗ್ಗೆ ಹೇಳುವಾಗಲೂ ಅವರ ಬಳಿ ಗುಜರಾತ್‌ನ ಜ್ವಲಂತ ಉದಾಹರಣೆಗಳಿದ್ದವು. ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಮೀನು ಹಿಡಿಯಲು ದಿನಗಟ್ಟಲೆ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ಗುಜರಾತ್‌ನಲ್ಲಿ ಉಪಗ್ರಹ ಆಧರಿಸಿ ಮೀನುಗಾರಿಕೆ ಮಾಡಿ ಸಮಯ, ಹಣ ಉಳಿಸುತ್ತಾರೆ ಎಂದರು. ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ನೀಡಿದರೂ ಮಿಗತೆಯಾಗುತ್ತದೆ ಆದರೆ ಕೊಳ್ಳುವ ತಾಕತ್ತು ಕರ್ನಾಟಕಕ್ಕೆ ಇಲ್ಲ ಎಂದ ಛೇಡಿಸಿದರು. ಇದಕ್ಕೂ ಅವರ ಬಳಿ ಗುಜರಾತ್‌ನ ಉದಾಹರಣೆ ಇತ್ತು. ಹಳ್ಳಿಗಳು ಸ್ವಾವಲಂಬಿಯಾಗಬೇಕು, ರೈತನ ಖರೀದಿ ಶಕ್ತಿ ಹೆಚ್ಚಿದರೆ ಮಾತ್ರ ಪಟ್ಟಣಗಳಲ್ಲಿ ಜೀವ ಕಳೆ ಬರುತ್ತದೆ. ಕರಾವಳಿ ಹೊಂದಿರುವ ರಾಜ್ಯಗಳ ಅಭಿವೃದ್ಧಿಗೆ ಬಂದರು ಸುಧಾರಣೆಯಾಗಬೇಕು, ಪ್ರವಾಸೋದ್ಯಮ ಹೆಚ್ಚಿಸಿ, ಯುವಕರ ಕೈಗೆ ಉದ್ಯೋಗ ನೀಡಿ, ಐಟಿ ಕ್ಷೇತ್ರದಲ್ಲಿ ಕಾಲ್ ಸೆಂಟರ್‌ಗಳಂತೆ ನಾವು ಕೇವಲ 'ಶ್ರಮ' ರಫ್ತು ಮಾಡಿದರೆ ಹಿಂದೆ ಬೀಳುತ್ತೇವೆ. 'ಕೌಶಲ', 'ಬುದ್ಧಿಮತ್ತೆ' ರಫ್ತು ಮಾಡಿದರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕರಾಗುತ್ತೇವೆ. ನಾನು ತಂತ್ರಜ್ಞಾನದ ಪರವಾಗಿದ್ದೇನೆ, ಎಲ್ಲ ಕ್ಷೇತ್ರಗಳಲ್ಲಿಯೂ ಯುವಕರಿಗೆ ಪ್ರಾತಿನಿಧ್ಯ ನೀಡುತ್ತೇನೆ ಎಂದು ತಮ್ಮ ಕನಸಿನ ಭಾರತದ ಸ್ಪಷ್ಟ ರೂಪವನ್ನು ಮುಂದಿಟ್ಟರು. ಗ್ರಾಮಾಭ್ಯುದಯ, ನಗರೀಕರಣ, ಹೈ ಎಂಡ್ ಟೀ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.
ಇಂಥದ್ದೊಂದು ಚೇತೋಹಾರಿ ಭಾಷಣ ಮಾಡಲು ಮೋದಿಯವರಿಗೆ ಪ್ರೇರಣೆ, ಚೈತನ್ಯ ಕೊಟ್ಟಿದ್ದು ಮಾತ್ರ ಕಣ್ಣ ಮುಂದಿದ್ದ ಜನಸಾಗರವೆಂಬುದು ನಿಸ್ಸಂಶಯವಾಗಿ ಗೋಚರಿಸುತ್ತಿತ್ತು. ಅದನ್ನು ಮೋದಿಯವರು ಬಹಿರಂಗವಾಗಿಯೂ ಒಪ್ಪಿಕೊಂಡರು. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿರುವ ತಮ್ಮ ಪೇಜ್‌ನಲ್ಲಿ  ಮಂಗಳೂರಿನಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಚಿತ್ರವನ್ನು ಹಾಕಿ ಶ್ಲಾಘನೆಯನ್ನೂ ಮಾಡಿದರು. "ಅಂದು ಮೈದಾನ ತುಂಬುತ್ತಿರಲಿಲ್ಲ. ಈಗ ಮೈದಾನದಲ್ಲಿ ಕಾಲಿಡಲು ಜಾಗ ಇಲ್ಲ" ಎಂದರು ನರೇಂದ್ರ ಮೋದಿ. ವಿಮಾನ ನಿಲ್ದಾಣದಿಂದ ಮೈದಾನಕ್ಕೆ ಬರುವಾಗ ರಸ್ತೆಯ ಬದಿಯಲ್ಲಿ ನಿರ್ಮಾಣವಾಗಿದ್ದ ಮಾನವ ಗೋಡೆಗಳನ್ನು ಕಂಡೇ ಹಾಗೆ ಉದ್ಗರಿಸಿದರು.
ಬಹಳ ಆಶ್ಚರ್ಯದ ಸಂಗತಿಯೆಂದರೆ ಕಳೆದ ಮೇನಲ್ಲಿ ನರೇಂದ್ರ ಮೋದಿ ಅಸೆಂಬ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಏಳೆಂಟು ಸಾವಿರಕ್ಕಿಂತ ಹೆಚ್ಚು ಜನ ಬಂದಿರಲಿಲ್ಲ. ಕೇವಲ ಆರೆಂಟು ತಿಂಗಳಲ್ಲಿ ಇಂಥದ್ದೊಂದು ಅಭೂತಪೂರ್ವ ಬದಲಾವಣೆ ಕಂಡುಬಂದಿದ್ದು ಬಿಜೆಪಿಯಲ್ಲಿನ ಒಂದು ವರ್ಗ, ಪೊಲೀಸ್ ಇಲಾಖೆ ಹಾಗೂ ಎದುರಾಳಿ ಕಾಂಗ್ರೆಸ್‌ಗೆ ಆಘಾತವನ್ನೇ ಉಂಟುಮಾಡಿದೆ. ಯಾರೂ ಇಂಥದ್ದೊಂದು ತ್ವರಿತ ಬದಲಾವಣೆಯನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿಗಿಂತಲೂ ಹೆಚ್ಚಿಗೆ ಮೋದಿ ಅಭಿಮಾನಿಗಳಿರುವ ಕರಾವಳಿಯಲ್ಲಿ ಅಂದು ತೀರಾ ಕಡಿಮೆ ಜನ ಆಗಮಿಸಲು ಕಾರಣವೂ ಇತ್ತು. ಬಿಜೆಪಿ ಕಾರ್ಯಕರ್ತರೇ ಬಿಜೆಪಿಯ ಕೆಲ ನಾಯಕರ ಲಂಪಟತನದಿಂದಾಗಿ ಫೀಲ್ಡ್‌ಗೆ ಹೋಗಲು ನಾಚಿಕೆಪಡುತ್ತಿದ್ದರು. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಹೀನಾಯ ಸೋಲು, ವಿಧಾನಸಭೆ ಚುನಾವಣೆಯಲ್ಲಿಯೂ ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಕರಾವಳಿಯ ಹಿಂದುತ್ವದ ಭದ್ರ ಕೋಟೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಲಗ್ಗೆ ಹಾಕಿ ಬಿಜೆಪಿಯನ್ನು ಧೂಳಿಪಟ ಮಾಡಿತ್ತು. 2013, ಮಾರ್ಚ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗುವುದರೊಂದಿಗೆ ಪಕ್ಷದ ಕಟ್ಟಾ ಬೆಂಬಲಿಗರು, ಸಾಂಪ್ರದಾಯಿಕ ಮತದಾರರು ಹಾಗೂ ಕಾರ್ಯಕರ್ತರಲ್ಲಿನ ಹತಾಶೆ, ಭ್ರಮನಿರಸನ ವ್ಯಕ್ತವಾದರೂ ದಕ್ಷಿಣ ಕನ್ನಡದ ನಾಯಕರು ಮಾತ್ರ ಬುದ್ಧಿ ಕಲಿತಿರಲಿಲ್ಲ. ಅವರಿಗೆ ಕಿವಿ ಹಿಂಡುವ ಕೆಲಸವನ್ನು ಮೇಲಿನವರೂ ಮಾಡಲಿಲ್ಲ. ಪರಿಣಾಮವಾಗಿ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ನೆಲಕಚ್ಚಿತು. ಆಗ ಎಚ್ಚೆತ್ತುಕೊಂಡ ಸಂಘಪರಿವಾರ ದಕ್ಷಿಣ ಕನ್ನಡದಲ್ಲಿನ ಕೆಲವರ ಪಾಳೆಗಾರಿಕೆಗೆ ಅಂತ್ಯ ಕಾಣಿಸಿತು.   
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಬೂದಿಯಿಂದ ಮೇಲೆದ್ದು ಬರಲು ಕಾರಣ ಮೋದಿ ಅಲೆ ಮಾತ್ರವಲ್ಲ, ಸ್ಥಳೀಯಾಡಳಿತ ಮತ್ತು ವಿಧಾನಸಭೆ ಚುನಾವಣೆ ಬಳಿಕ ಜಿಲ್ಲೆಯ ಬಿಜೆಪಿಯಲ್ಲಿ ಆಯಕಟ್ಟಿನ ಜಾಗದಲ್ಲಿ ಕುಳಿತು ಟಿಕೆಟ್ ಹಂಚುತ್ತಾ, ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದ ಉಸ್ತುವಾರಿಗಳನ್ನೆಲ್ಲ ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿದ್ದು. ಇದು ದುರ್ಬೀನು ಹಾಕಿ ನೋಡುತ್ತಿದ್ದ ಮಾಧ್ಯಮ ಮಂದಿಗೂ ಗೊತ್ತಾಗಿರಲಿಲ್ಲ.
ಆದರೆ ಕೋಟೆ ದುರಸ್ತಿ ಕೆಲಸಕ್ಕೆ ನೇಮಕವಾದ ಬಿಜೆಪಿ ಸೇನಾನಿಗಳೂ ಮಾಧ್ಯಮಕ್ಕೆ ಹೇಳಿರಲಿಲ್ಲ. ಮೂಲ್ಕಿ ಚುನಾವಣೆಯಲ್ಲಿ ಇದು ಸ್ವಲ್ಪ ಗೋಚರವಾದರೂ ಅದಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ. ಆದರೆ ಮಂಗಳೂರಿನಲ್ಲಿ ಮೋದಿ ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಕೇಂದ್ರ (ನೆಹರು) ಮೈದಾನ ತುಂಬಿದ್ದು ಮಾತ್ರವಲ್ಲದೆ ಸುತ್ತಮುತ್ತಲ ವಿಶಾಲ ರಸ್ತೆಗಳಲ್ಲೂ ಜನಸಾಗರವಿತ್ತು.
ಮೊತ್ತ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದಕ್ಕೆ ಇಷ್ಟು ಸಂಖ್ಯೆಯ ಜನ ಒಟ್ಟಾಗಿರುವುದೂ ದಾಖಲೆಯಾಯಿತು. ಇದಕ್ಕೆ ಮುನ್ನ ಜಿಲ್ಲೆಯವರೇ ನಾಲ್ಕು ಮಂದಿ ಸಚಿವರಿದ್ದರೂ ಮೂಲ್ಕಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಆಡಳಿತವನ್ನು ಬಿಜೆಪಿ ಸ್ಪಷ್ಟ ಬಹುಮತದಿಂದ ಗೆದ್ದುಕೊಂಡಿತು. ಬಂಟ್ವಾಳ ಕಡೇಶಿವಾಲಯದ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿತು. ಈಗ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂಬ ಭರವಸೆ ಮೂಡಿದೆ.
ಇಷ್ಟೆಲ್ಲ ಸಾಧ್ಯವಾಗಿದ್ದು ಹೊಸ ತಂಡದಿಂದ. ಕೇವಲ ಏಳೆಂಟು ತಿಂಗಳಲ್ಲಿ ಆಶ್ಚರ್ಯಪಡುವಂಥ, ವಿರೋಧಿಗಳೂ ಮತ್ಸರದಿಂದ ಮೆಚ್ಚುವಂಥ ಕೆಲಸ ಮಾಡಿದೆ. ಸುಮಾರು ನಾಲ್ಕು ಸಾವಿರ ಜನ ಮೊನ್ನೆ ಮೋದಿ ರ್ಯಾಲಿಗೆ ಸ್ವಯಂ ಸೇವಕರಾಗಿ ಯಾವುದೇ ಫಲಾಫಲ ನಿರೀಕ್ಷೆಯಿಲ್ಲದೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಜತೆಗೆ ನರೇಶ್ ಶೆಣೈ ನೇತೃತ್ವದ "ನಮೋ ಬ್ರಿಗೇಡ್‌" ಕೂಡ ಹೆಗಲಿಗೆ ಹೆಗಲು ಕೊಟ್ಟು ದುಡಿದು ಕಾರ್ಯಕ್ರಮವನ್ನು ಅಭೂತಪೂರ್ವ ಯಶಸ್ಸಾಗಿ ಪರಿವರ್ತಿಸಿತು. ಬಹಳ ಸೋಜಿಗದ ಸಂಗತಿಯೆಂದರೆ ಇಂಥ ಯಶಸ್ಸನ್ನು ಸಹಿಸದೆ ದಕ್ಷಿಣಕನ್ನಡ ಬಿಜೆಪಿಯಲ್ಲೇ ಇರುವ ಒಂದು ಅತೃಪ್ತ ವರ್ಗ ಹಾಲಿ ಸಂಸದ ನಳಿನ್ ಕುಮಾರ್‌ಗೆ ಟಿಕೆಟ್ ತಪ್ಪಿಸಲು ಪಿತೂರಿ ನಡೆಸುತ್ತಿದೆ. ಇಂಥ ಪ್ರಯತ್ನವನ್ನು ಮಟ್ಟ ಹಾಕದಿದ್ದರೆ ಮತ್ತೆ ಬಿಜೆಪಿ  ದಕ್ಷಿಣ ಕನ್ನಡದಲ್ಲಿ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ.

 ಜಿತೇಂದ್ರ ಕುಂದೇಶ್ವರ
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement