ಇದು ಮೂರ್ಖತನ ಹಾಗೂ ಮೂಢನಂಬಿಕೆಯ ಪರಮಾವಧಿ!
ಬಾಲಕಿಯನ್ನು ಸುಟ್ಟು ಮತ್ತೆ ಆಕೆ ಜೀವಂತವಾಗಿ ಅವತರಿಸುತ್ತಾಳೆಂಬ ಡೋಂಗಿ ಸ್ವಾಮಿಯ ಮಾತನ್ನು ಕುರುಡಾಗಿ ನಂಬಿ ಅವರ ತೆಕ್ಕೆಗೆ ಹೆಣ್ಣು ಮಗುವನ್ನು ಒಪ್ಪಿಸಿದ ಪೋಷಕರಿಗೆ ನಿಜವಾಗಲೂ ಸಾಮಾನ್ಯ ಜ್ಞಾನವೂ ಇಲ್ಲ. ಅಥಣಿ ತಾಲೂಕಿನ ಝುಂಜರವಾಡ ಅಪ್ಪಯ್ಯ ಮಠ ಸ್ವಾಮಿಯ ವಿಕೃತ ಹಾಗೂ ಹುಚ್ಚುತನಕ್ಕೆ ಸ್ವಲ್ಪದರಲ್ಲೇ ಹೆಣ್ಣು ಮಗವೊಂದು ಬಲಿಯಾಗುವುದು ಸುದೈವವಷಾತ್ ತಪ್ಪಿದೆ. ಆದರೆ, ಈ ಸ್ವಾಮಿಯ ಟ್ರ್ಯಾಕ್ ರೆಕಾರ್ಡ್ ಗಮನಿಸಿ, ಅವನ ಮೇಲೊಂದು ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರೆ ಇಂಥ ಅನಾಹುತಕ್ಕೆ ಅವಕಾಶವಿರುತ್ತಿರಲಿಲ್ಲ. ಆದರೇನು ಮಾಡುವುದು ನಮ್ಮ ಆಡಳಿತದ ಚರ್ಮ ತುಂಬಾ ದಪ್ಪ. ಅದಕ್ಕೆ ಬೇಗ ಏನೂ ನಾಟುವುದಿಲ್ಲ. ಈ ಅಪ್ಪಯ್ಯ ಮಠದ ಸ್ವಾಮಿ ಹಿಂದೆಯೂ ಇಂಥದೊಂದು ದುಸ್ಸಾಹಸಕ್ಕೆ ಕೈ ಹಾಕಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ಅಮಾನವೀಯವಾಗಿ ನಡೆದುಕೊಂಡಿದ್ದ. ಸುಮಾರು ಒಂದು ವರ್ಷದ ಹಿಂದೆ ಈತ ಬಾಲಕಿಯ ಮೇಲೆ ಲೈಗಿಂಕ ಕಿರುಕುಳ ನಡೆಸಿದ್ದಾನೆಂಬ ಆರೋಪ ಕೇಳಿಬಂದಿತ್ತು. ಆಗ, ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ, ಮಾಧ್ಯಮಗಳೆದರು ತಾನು ಲೈಂಗಿಕವಾಗಿ ಅಸಮರ್ಥ ಎಂದು ತೋರಿಸುವುದುಕ್ಕಾಗಿ ಬಟ್ಟೆಯನ್ನೇ ಬಿಚ್ಚಿ ನಿಂತಿದ್ದ. ಆಗಲೇ ಈತನನ್ನು ನಿಮಾನ್ಸ್ ಅಥವಾ ಡಿಮಾನ್ಸ್‌ಗೆ ಅಡ್ಮಿಟ್ ಮಾಡಿ, ಚಿಕಿತ್ಸೆ ಕೊಡಿಸಿದ್ದರೆ ಸರಿ ಹೋಗುತ್ತಿದ್ದ. ಅಲ್ಲದೆ, ಈಗ ನಡೆದ ಘಟನೆಗೆ ಅವಕಾಶವೇ ಇರುತ್ತಿರಲಿಲ್ಲ.
ಹೌದು ಇಂಥ ಘಟನೆಗಳು ಹೇಗೆ ಮತ್ತು ಯಾಕೆ ನಡೆಯುತ್ತವೆ? ಎಂದು ಪ್ರಶ್ನೆ ಮಾಡಿದರೆ, ಉತ್ತರ ಹುಡುಕುವುದು ತೀರಾ ದೊಡ್ಡ ಕಷ್ಟವೇನಿಲ್ಲ. ಇದನ್ನು ಎರಡು ರೀತಿಯಿಂದ ವಿಶ್ಲೇಷಿಸಬಹುದು. ಮೊದಲನೆಯದಾಗಿ, ಬಿಗಿಯಾದ ಕಾನೂನು ಅಥವಾ ಭಯ ಹುಟ್ಟಿಸುವಂಥ ಕಾಯ್ದೆಗಳ ಕೊರತೆ. ಎರಡನೆಯದಾಗಿ ಮೌಢ್ಯಗಳ ವಿರುದ್ಧ ಇನ್ನೂ ಹಳ್ಳಿಗಳ(ಪಟ್ಟಣಗಳು, ನಗರಗಳೂ ಇದರಿಂದ ಹೊರತಾಗಿಲ್ಲ ಬಿಡಿ) ಮಟ್ಟದಲ್ಲಿ ಜನಜಾಗೃತಿಯಾಗದೇ ಇರುವುದು. ನಮ್ಮ ಸರ್ಕಾರಗಳು ಜನರನ್ನು ಅಕ್ಷರಸ್ಥರನ್ನಾಗಿ ಮಾಡುತ್ತಿವೆಯೇ ಹೊರತು, ಬುದ್ಧಿವಂತರನ್ನಲ್ಲ. ಹಾಗಾಗಿಯೇ, ಇಂಥ ಮೌಢ್ಯ ತುಂಬಿದ ಆಚರಣೆಗಳು, ಪವಾಡ ಸೃಷ್ಟಿಯಂಥ ಘಟನೆಗಳು ಆಗಾಗ ನಮ್ಮ ಸುತ್ತ ಮುತ್ತ ನಡೆಯತ್ತಲೇ ಇರುತ್ತವೆ. ಇಂಥ ಘಟನೆಗಳು ನಡೆದಾಗ ಟಿವಿ, ಪತ್ರಿಕೆಗಳಲ್ಲಿ ಒಂದಿಷ್ಟು ಸೌಂಡ್ ಆಗುತ್ತದೆ. ಬಳಿಕ ಎಲ್ಲವೂ ಮರೆತು ಹೋಗುತ್ತದೆ. ನಂತರ ಮತ್ತೆ ಅದೇ ಚಾಳಿ ಶುರುವಾಗುತ್ತದೆ. ಇವೆಲ್ಲದಕ್ಕೂ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿದೆ. ಝುಂಜರವಾಡ ಮಠದ ಸ್ವಾಮಿ ಮಾಡಿದ ಘನಕಾರ್ಯ ಗಮನಿಸಿದರೆ ಮೂಢನಂಬಿಕೆ ಪ್ರತಿಬಂಧಕ(ಅದರಲ್ಲಿರುವ ಕೆಲವು ಆಕ್ಷೇಪಾರ್ಹ ವಿಷಯಗಳನ್ನು ಹೊರತುಪಡಿಸಿ) ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕಾದ ಅಗತ್ಯ ಎದ್ದು ಕಾಣುತ್ತದೆ. ಹಾಗಂತ, ಕೇವಲ ಕಾಯ್ದೆಯನ್ನು ಜಾರಿಗೆ ತಂದರೆ ಸರ್ಕಾರದ ಕೆಲಸ ಮುಗಿಯುವುದಿಲ್ಲ. ಅದನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜನರಲ್ಲಿ ಈ ಬಗ್ಗೆ ವ್ಯಾಪಕವಾದ ಜಾಗೃತಿ ಮೂಡಿಸಬೇಕು. ಜಾಗೃತಿ ಇಲ್ಲದ ಹೊರತು ಕಾನೂನುಗಳು ಕೂಡಾ ಬಲಿಷ್ಠಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟೊಟ್ಟಿಗೆ ಕೂಡಿ ಕೆಲಸ ಮಾಡಬೇಕು. ಆಗಲೇ ಮೂಢನಂಬಿಕೆಯ ಆಚರಣೆಗಳಿಗೆ ಕಡಿವಾಣ ಹಾಕಲು ಸಾಧ್ಯ.
ಈ ಘಟನೆಯನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜ್ಯದ ಯಾವ್ಯಾವ ಪ್ರದೇಶಗಳಲ್ಲಿ ಇಂಥ ಡೋಂಗಿ ಸ್ವಾಮಿಗಳಿದ್ದಾರೆ ಅಂಥವರನ್ನು ಸರ್ಕಾರವೇ ಗುರುತಿಸಿ, ಅವರಿಗೆ ಮಾನಸಿಕ ಚಿಕಿತ್ಸೆಯನ್ನು ಕೊಡಿಸಬೇಕು. ಇಲ್ಲದಿದ್ದರೆ, ಏನೂ ಅರಿಯದ ಎಷ್ಟೋ ಜೀವಗಳು ಮೌಢ್ಯದ ಸಂಕೋಲೆಯಲ್ಲಿ ಜೀವ ಕಳೆದುಕೊಳ್ಳಬೇಕಾಗುತ್ತದೆ.
ಅನಕ್ಷರಸ್ಥರು ಹಾಗೂ ಹಳ್ಳಿಗರನ್ನು ಕಪಟಿ ಅಪ್ಪಯ್ಯ ಸ್ವಾಮಿಯಂಥವರು ತಮ್ಮ ಬಲೆಗೆ ಕೆಡವಿಕೊಂಡರೆ, ಸುಶಿಕ್ಷಿತ ಹಾಗೂ ವಿದ್ಯಾವಂತರೆಂದು ಕರೆಯಿಸಿಕೊಳ್ಳುವವರನ್ನು ಟಿವಿಯಲ್ಲಿ ಕಾಣಿಸಿಕೊಳ್ಳುವ ಬ್ರಹ್ಮಾಂಡದಂಥ ಸ್ವಾಮೀಜಿಗಳು ತಮ್ಮ ಜಾಲದಲ್ಲಿ ಸಿಕ್ಕಿಸಿ ಬಿಡುತ್ತಾರೆ. ಇದು ನಮ್ಮ ಸಮಾಜದ ವಿಪರ್ಯಾಸ. ಇಂಥ ದಿನ ಇಂಥ ದೀಪ ಹಚ್ಚಿ. ನಾಳೆ ಈ ಹಬ್ಬ.
ಇಂತಿಂಥ ದೇವಸ್ಥಾನಕ್ಕೆ ನಾನು ಬರ್ತಿನಿ. ನೀವೂ ಬನ್ನಿ. ಎಲ್ಲರೂ ಸೇರಿ ಪೂಜೆ ಮಾಡೋಣ ಎಂದು ಟಿವಿಯಲ್ಲಿ ಕುಳಿತೇ ಅಪ್ಪಣೆ ಕೊಡಿಸುತ್ತಾರೆ. ಇವರ ಮಾತನ್ನೇ ನಂಬಿ ಅಸಂಖ್ಯಾತ ಜನರು ಬಂದು ಬಿಡುತ್ತಾರೆ. ಅಲ್ಲಿ ಕಾಲ್ತುಳಿತದಂಥ ಘಟನೆಗಳಿಗೆ ಅವಕಾಶ ಸೃಷ್ಟಿಯಾಗುತ್ತದೆ. ಇಂಥದ್ದಕ್ಕೆಲ್ಲ ಬ್ರೇಕ್ ಹಾಕಬೇಕಾದ ತುರ್ತು ಅಗತ್ಯವಿದೆ. ದೇವರು ಎಂಬ ನಂಬಿಕೆಯೇ ತುಂಬಾ ವೈಯಕ್ತಿಕ ಹಾಗೂ ಖಾಸಗಿಯಾಗಿರುವಂಥದ್ದು. ಅಲ್ಲಿ ಪವಾಡ ಗಿವಾಡ, ವಂಚನೆ, ಮೂಢನಂಬಿಕೆಗಳಿಗೆ ಅವಕಾಶವೇ ಇಲ್ಲ ಎಂಬುದನ್ನು ಅರಿತರೆ ಇಂಥ ಘಟನೆಗಳು ನಡೆಯುವುದೇ ಇಲ್ಲ.
ಮಲ್ಲಿಕಾರ್ಜುನ ತಿಪ್ಪಾರ
ಕನ್ನಡಪ್ರಭ