ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದಕ್ಷಿಣ ಸುಡಾನ್ ಏಕೆ ಸುಡುಗಾಡಾಗುತ್ತಿದೆ?

ಜುಲೈ 9, 2011ರಂದು ಹೊಸ ರಾಷ್ಟ್ರವೊಂದರ...

Mainashree
Updated On : 2 Jan 2014, 11:21 am

ಇತ್ತೀಚೆಗೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿದ್ದ ಇಬ್ಬರು ಭಾರತೀಯ ಯೋಧರು ದಕ್ಷಿಣ ಸುಡಾನ್ನಲ್ಲಿನ ಕಾರ್ಯಾಚರಣೆಯಲ್ಲಿ ನಿಧನರಾದರು. ಈ ಸುದ್ದಿ ಅಷ್ಟು ಚರ್ಚೆಯಾಗಲೇ ಇಲ್ಲ. ಇಷ್ಟಕ್ಕೂ ಎರಡು ವರ್ಷದ ಹಿಂದೆ ಹುಟ್ಟಿಕೊಂಡ ಈ ಹೊಸ ರಾಷ್ಟ್ರದಲ್ಲಿ ಈ ಪರಿಯ ಘರ್ಷಣೆಗಳು ಏಕೆ ಆಗುತ್ತಿವೆ. ದಕ್ಷಿಣ ಸುಡಾನ್ನ ಆಂತರ್ಯದಲ್ಲಿ ನಡೆಯುತ್ತಿರುವುದೇನು? ಈ ಬಗ್ಗೆ ಬೆಳಕು ಚೆಲ್ಲುವ 'ವಾಶಿಂಗ್ಟನ್ ಪೋಸ್ಟ್'ನ ವಿಶ್ಲೇಷಣೆಯೊಂದು ಇಲ್ಲಿದೆ...

ಜುಲೈ 9, 2011ರಂದು ಹೊಸ ರಾಷ್ಟ್ರವೊಂದರ ಉದಯವಾಯಿತು. ದಕ್ಷಿಣ ಸುಡಾನ್ ಎಂಬ ಹೊಸ ರಾಷ್ಟ್ರದ ಹುಟ್ಟಿಗೆ ಮುಂಚೂಣಿಯಲ್ಲಿ ನಿಂತು ಮಧ್ಯಸ್ಥಿಕೆ ವಹಿಸಿದ್ದು ಒಬಾಮಾ. ಈ ಕಾರಣಕ್ಕಾಗಿಯೇ ಇದನ್ನು ಅಧ್ಯಕ್ಷ ಒಬಾಮಾ ಅವರ ವಿದೇಶಾಂಗ ನೀತಿಯ ಗೆಲುವು ಎಂದೇ ಕೊಂಡಾಡಲಾಯಿತು. ಕ್ರಿಶ್ಚಿಯನ್ನರ ಬಾಹುಳ್ಯವಿರುವ ದಕ್ಷಿಣ ಸುಡಾನ್ ಮತ್ತು ಮುಸಲ್ಮಾನರ ಪ್ರಾಬಲ್ಯವಿರುವ ಸುಡಾನ್ನ(ಉತ್ತರ) ಮಧ್ಯೆ ಬಹಳ ವರ್ಷಗಳಿಂದ ವೈರತ್ವವಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ಪ್ರದೇಶಗಳ ನಡುವಿನ ತಿಕ್ಕಾಟ ಹೆಚ್ಚಾಗುತ್ತಲೇ ಸಾಗಿತ್ತು. ಯಾವಾಗ ಕ್ರಿಶ್ಚಿಯನ್ನರ ದಕ್ಷಿಣ ಸುಡಾನ್ ತಾನು ಹೊಸ ರಾಷ್ಟ್ರವಾಗಬೇಕೆಂದು ನಿರ್ಧರಿಸಿತೋ, ಕೂಡಲೇ ಅಧ್ಯಕ್ಷ ಒಬಾಮಾ ಅವರು ಈ ಕಾರಣಕ್ಕಾಗಿ ಇಬ್ಬರು ರಾಜತಾಂತ್ರಿಕ ಪ್ರತಿನಿಧಿಗಳನ್ನು ನೇಮಿಸಿದರು. ನಂತರ ಸುಡಾನ್ ಕುರಿತು ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡರು ಮತ್ತು ಸುಡಾನ್ನ ನಾಯಕರಿಗೆ ಹೊಸ ಮಾರ್ಗಸೂಚಿಯನ್ನು ನೀಡಲು ಸೆನೆಟರ್ ಜಾನ್ ಎಫ್ ಕೆರ್ರಿಯನ್ನು ಅಲ್ಲಿಗೆ ಕಳುಹಿಸಿಕೊಟ್ಟರು. ಜನಾಭಿಪ್ರಾಯ ಸಂಗ್ರಹಣೆಯಾದ ನಂತರ ಜುಲೈನಲ್ಲಿ, 80 ಲಕ್ಷ ಜನಸಂಖ್ಯೆಯೊಂದಿಗೆ ಹೊಸ ರಾಷ್ಟ್ರ ಹುಟ್ಟಿತು. ವರ್ಷಗಳಿಂದ ಸುಡಾನ್ ಸರ್ಕಾರ ತಮ್ಮ ಮೇಲೆ ಮಾಡುತ್ತಾ ಬಂದ ಶೋಷಣೆಯಿಂದ ಜರ್ಝರಿತರಾಗಿದ್ದ ದಕ್ಷಿಣ ಸುಡಾನ್ನ ಜನತೆ ಕೊನೆಗೂ ನಿಟ್ಟುಸಿರುಬಿಟ್ಟರು. ಹೊಸ ರಾಷ್ಟ್ರ ತಮ್ಮನ್ನು ಶಾಂತಿಯುತ ಭವಿಷ್ಯದೆಡೆಗೆ ಕೊಂಡೊಯ್ಯುತ್ತದೆ ಎಂದು ಸಂತಸ ಪಟ್ಟರು.
ಆದರೆ ಆ ಸಂತಸದ ವಾತಾವರಣ ಎರಡೇ ವರ್ಷಗಳಲ್ಲಿ ಮಾಯವಾಗಿದೆ. ಇದಕ್ಕೆ ಕಾರಣ ದಕ್ಷಿಣ ಸುಡಾನ್ನ ಹೊಸ ನಾಯಕರ ಕ್ಷುದ್ರ ವರ್ತನೆ. ಅಧ್ಯಕ್ಷ ಸಲ್ವಾ ಕಿರ್, ಬಹುಸಂಖ್ಯಾತ 'ಡಿಂಕಾ' ಪಂಗಡಕ್ಕೆ ಸೇರಿದವರು. ಅವರು ಅತಿ ಹಿಂದುಳಿದ ತಮ್ಮ ದೇಶವನ್ನು ತೈಲವ್ಯಾಪಾರವೊಂದರಿಂದಲೇ ಮೇಲಕ್ಕೆತ್ತುವ ಪ್ರಯತ್ನ ಮಾಡಬಹುದಿತ್ತು. ಏಕೆಂದರೆ ಅಷ್ಟು ಪ್ರಮಾಣದಲ್ಲಿ ತೈಲ ಸಂಪತ್ತು ಆ ದೇಶದಲ್ಲಿದೆ. ಆದರೆ ಅದನ್ನು ಬಿಟ್ಟು ಬೇರೆಲ್ಲಾ ಮಾಡಿದರು. ಭ್ರಷ್ಟಾಚಾರಕ್ಕೆ ಜಾಗ ಬಿಟ್ಟುಕೊಟ್ಟರು, 'ನ್ಯೂರ್' ಪಂಗಡಕ್ಕೆ ಸೇರಿದ ಉಪಾಧ್ಯಕ್ಷ ರೀಕ್ ಮಚಾರ್ ಅವರೊಂದಿಗೆ ದ್ವೇಷಕಟ್ಟಿಕೊಂಡರು. ಅವರ ಆಪ್ತರಾಗಿದ್ದ 11 ಅಧಿಕಾರಿಗಳನ್ನು ಜೈಲಿಗಟ್ಟಿದರು. ಇವರಿಬ್ಬರ ಜಗಳದಿಂದಾಗಿ ಈಗ ದಕ್ಷಿಣ ಸುಡಾನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಆದರೆ ಆಫ್ರಿಕಾದ ನಾಯಕರು ಮತ್ತು ಒಬಾಮಾ ಆಡಳಿತದ ಒತ್ತಡಕ್ಕೆ ಸಿಲುಕಿ ಇವರಿಬ್ಬರೂ ಪರಸ್ಪರ ಮಾತುಕತೆಯಾಡುವುದಾಗಿ ಹೇಳಿದ್ದಾರೆ. ಆದರೆ ಇಬ್ಬರ ನಡುವಿನ ಜಗಳ ಮಾತ್ರ ಮುಂದುವರಿದಿದೆ. ಮಚಾರ್ ಅವರಿಗೆ ಸೇರಿದ 'ವೈಟ್ ಆರ್ಮಿ' ಎನ್ನುವ ಸೇನೆ, ದಕ್ಷಿಣ ಸುಡಾನ್ನ ಪ್ರಮುಖ ನಗರವಾದ ಬೋರ್ ಅನ್ನು ಕೈವಶಮಾಡಿಕೊಂಡಿದೆ. ಕೇವಲ 2 ದಿನದಲ್ಲಿ ಸಾವಿರಾರು ಜನರು ಅಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.  ನಿರಾಶ್ರಿತರಾದವರ ಸಂಖ್ಯೆ 2 ಲಕ್ಷದಷ್ಟಿದೆ ಎಂದು ಅಮೆರಿಕ ಹೇಳುತ್ತಿದೆ.
ಆದರೆ ಒಬಾಮಾ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಾಗಿ ಮಧ್ಯಸ್ಥಿಕೆ ವಹಿಸುತ್ತಿದೆ. ಅಮೆರಿಕದ ರಾಜತಾಂತ್ರಿಕ ಪ್ರತಿನಿಧಿಯಾದ ಡೋನಾಲ್ಡ್ ಬೂತ್, ಕಿರ್ ಮತ್ತು ಮಚಾರ್ರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಪ್ರದೇಶದ ಮೇಲೆ ಅಮೆರಿಕಕ್ಕೆ ಗಣನೀಯವಾದ ಹಿಡಿತವಿದೆ. ಏಕೆಂದರೆ ಅದು ಹೊಸ ರಾಷ್ಟ್ರ ದಕ್ಷಿಣ ಸುಡಾನ್ಗೆ ಕೋಟ್ಯಂತರ ರುಪಾಯಿಗಳ ಸಹಾಯ ಮಾಡಿದೆ. ಅಮೆರಿಕದಂತೆಯೇ, ಇಥಿಯೋಪಿಯಾ ಮತ್ತು ಕೀನ್ಯಾ ಕೂಡ ದಕ್ಷಿಣ ಸುಡಾನ್ನ ಮೇಲೆ ಪ್ರಭಾವ ಹೊಂದಿವೆ. ಈ ಎರಡೂ ರಾಷ್ಟ್ರಗಳ ನಾಯಕರು ಮಾತುಕತೆಯೇ ಸರಿಯಾದ ಹಾದಿ ಎಂದು ಹೇಳುತ್ತಿದ್ದರೆ. ಉಗಾಂಡಾದ ನಾಯಕ ಬೋಯೇರಿ ಮುಸೋವೇನಿ ಮಾ, ಕಿರ್ ಅವರ ಪರ ವಾಲಿದ್ದಾರೆ. ಒಂದು ವೇಳೆ ಮಚಾರ್ ಕದನವಿರಾಮ ಘೋಷಿಸದಿದ್ದರೆ ತಮ್ಮ ದೇಶ ಅವರ ಹಿಂದೆ ಬೀಳಲಿದೆ ಎಂದು ಎಚ್ಚರಿಸಿದ್ದಾರೆ ಬೋಯೇರಿ!
ಈ ವಿಷಯದಲ್ಲಿ ವಿದೇಶಗಳ ಮಧ್ಯಸ್ಥಿಕೆ ದಕ್ಷಿಣ ಸುಡಾನ್ನ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು. ಈಗ ಅತ್ಯವಶ್ಯವಾಗಿ ಆಗಬೇಕಿರುವ ಕೆಲಸವೆಂದರೆ ಇಬ್ಬರೂ ನಾಯಕರ ಮೇಲೆ ಮಾತುಕತೆಗೆ ಮುಂದಾಗುವಂತೆ ಒತ್ತಡ ಹೇರುವುದು. ದಕ್ಷಿಣ ಸುಡಾನ್ನ ನಾಯಕತ್ವಕ್ಕಾಗಿ 2015ರಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಸೆಣಸಬೇಕೇ ಹೊರತು, ಯುದ್ಧರಂಗದಲ್ಲಲ್ಲ ಎನ್ನುವುದನ್ನು ಅವರಿಬ್ಬರಿಗೂ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ. ಒಂದು ಒಪ್ಪಂದಕ್ಕೆ ಇಬ್ಬರೂ ಬರದಿದ್ದರೆ, ನಿಸ್ಸಂಶಯವಾಗಿಯೂ ಆ ರಾಷ್ಟ್ರ ಎಂದಿಗೂ ನಿಲ್ಲದ ಜನಾಂಗೀಯ ಸಂಘರ್ಷದ ಸುಳಿಗೆ ಸಿಲುಕುವ ಸಾಧ್ಯತೆ ಇದೆ.
ಈ ಒಳಜಗಳದ ನಡುವೆಯೇ ಇನ್ನೊಂದು ಅಪಶಕುನವೂ ದಕ್ಷಿಣ ಸುಡಾನ್ನ ಸುತ್ತ ಗಿರಕಿ ಹೊಡೆಯತೊಡಗಿದೆ. ದಕ್ಷಿಣ ಸುಡಾನ್ನ ಬಹುಪಾಲು ಆದಾಯ, ತೈಲ ವ್ಯಾಪಾರದಿಂದಲೇ ಬರುತ್ತದೆ. ಆದರೆ ಆ ದೇಶ ತೈಲ ರಫ್ತಿಗಾಗಿ ಇಂದಿಗೂ ಸುಡಾನ್ನ ಪೈಪ್ಲೈನ್ಗಳ ಮೇಲೆಯೇ ಅವಲಂಬಿತವಾಗಿದೆ. ಇದೇ ವೇಳೆಯಲ್ಲೇ ಸುಡಾನ್ನಲ್ಲಿನ ಸರ್ಕಾರ ಮತ್ತು ಬಂಡುಕೋರರ ನಡುವಿನ ಯುದ್ಧವೂ ತಾರಕಕ್ಕೇರಿದೆ. ಇದನ್ನೇ ನೆಪವಾಗಿಟ್ಟುಕೊಂಡಿರುವ ಸುಡಾನ್, "ಬಂಡುಕೋರರಿಗೆ ದಕ್ಷಿಣ ಸುಡಾನ್ ಸಹಾಯ ಮಾಡುತ್ತಿದೆ. ಈ ಕಾರಣಕ್ಕಾಗಿ ನಾವು ಅದರ ತೈಲ ರಫ್ತನ್ನು ತಡೆಹಿಡಿಯುತ್ತಿದ್ದೇವೆ" ಎಂದು ಹೇಳಿದೆ. ಹೇಳಿದಂತೆಯೇ ಮಾಡಿದೆ. ಕಳೆದ ಕೆಲವು ವಾರಗಳಿಂದ ದಕ್ಷಿಣ ಸುಡಾನ್ನ ತೈಲ ವ್ಯಾಪಾರ ನಿಂತೇ ಹೋಗಿದೆ.  
ಎರಡು ವರ್ಷದ ಹಿಂದೆ, "ಉತ್ತಮ ಆಡಳಿತ, ಉತ್ತಮ ಕಾನೂನು ಮತ್ತು ಉತ್ತರದಾಯಿತ್ವ"  ಎನ್ನುವ ಘೋಷಣೆಯೊಂದಿಗೆ ಹುಟ್ಟಿಕೊಂಡಿತು ದಕ್ಷಿಣ ಸುಡಾನ್. ಆದರೆ ಈಗ ಒಂದೆಡೆ ಆಂತರಿಕ ಕಲಹ, ಇನ್ನೊಂದೆಡೆ ಕಡುವೈರಿ ಸುಡಾನ್ನೊಂದಿಗಿನ ಜಗಳದಿಂದ ಹೈರಾಣಾಗಿ ಹೋಗಿದೆ. ಹೊಸ ಕನಸನ್ನು ಕಟ್ಟಿಕೊಂಡು ಉದಯವಾದ ಹೊಸ ರಾಷ್ಟ್ರವೊಂದು ತನ್ನ ಜನರನ್ನು ಮತ್ತೆ ಅದೇ ಹಳೆಯ ಪರಿಸ್ಥಿತಿಗೆ ದೂಡಿರುವುದು ವಿಪರ್ಯಾಸ. ಇತ್ತೀಚೆಗೆ ಇನ್ನೊಂದು ದುರ್ಘಟನೆಗೂ ಆ ರಾಷ್ಟ್ರ ಸಾಕ್ಷಿಯಾಯಿತು. ಅದು ದಕ್ಷಿಣ ಸುಡಾನ್ನ ಸೈನಿಕರು ಮತ್ತು ದಂಗೆಕೋರರ ನಡುವಿನ ಘರ್ಷಣೆ! ಈ ಎಲ್ಲಾ ಗದ್ದಲಗಳಿಂದ ನಿರಾಶ್ರಿತರಾಗಿರುವ ಸಾಮಾನ್ಯ ಜನರು ಮತ್ತೆ ಜೀವಭಯದಿಂದ ದಿನ ದೂಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement