ಅಂಕಣಗಳು

ಬೆಂಗಳೂರಿನ ಕಷ್ಟ ಪರಿಹರಿಸಲು ನಮಗೊಬ್ಬ ಕೇಜ್ರೀವಾಲ್ ಬೇಕು

ಚರಿತ್ರಾತ್ಮಕ ವರ್ಷವೊಂದು ಹಿಂದಾಗಿದೆ. 2013ರ ಅಚ್ಚರಿಗಳ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಅತ್ಯದ್ಭುತ ಉತ್ಕರ್ಷ ಮೊದಲ ಸ್ಥಾನ ಪಡೆದಿದೆ. ಬೆಲೆಯೇರಿಕೆ, ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಮೂಲಭೂತ ಅಗತ್ಯಗಳ ಬಗ್ಗೆ ರಾಜಕೀಯ ವರ್ಗದಲ್ಲಿದ್ದ ಅಸಂವೇದಿತನವನ್ನೆಲ್ಲ ನೋಡಿ ಸಾಮಾನ್ಯ ಜನರಲ್ಲಿ ಕುದಿಯುತ್ತಿದ್ದ ರೋಷವೂ ಆಸ್ಫೋಟಗೊಂಡಿತು. ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಕಡೆಗಣಿಸಿ ದೆಹಲಿಗರು ಆಮ್ ಆದ್ಮಿ ಪಕ್ಷಕ್ಕೆ ಜೈಕಾರ ಹಾಕಿದರು. ಉತ್ತಮ ನಾಯಕತ್ವ ಮತ್ತು ಆಡಳಿತಕ್ಕೆ ಜನಾದೇಶದೊರಕಿತು. ಆಪ್ ಕೂಡ ತನ್ನನ್ನು ನಂಬಿದವರನ್ನು ಕಡೆಗಣಿಸಲಿಲ್ಲ. ಸಾಂಪ್ರದಾಯಿಕ ಪಕ್ಷಗಳಂತೆ ಅದರ ಭರವಸೆಗಳೂ ಕೇವಲ ಕಾಗದದ ಮೇಲೆ ಉಳಿಯಲಿಲ್ಲ. ತಾನು ನೀಡಿದ 18 ಭರವಸೆಗಳಲ್ಲಿ, ಪ್ರತಿ ದಿನ ಪ್ರತೀ ಮನೆಗೂ 700 ಲೀಟರ್ ಉಚಿತ ಕುಡಿಯುವ ನೀರು ಮತ್ತು ವಿದ್ಯುತ್ ದರದಲ್ಲಿ 50 ಪ್ರತಿಶತ ಕಡಿತಗೊಳಿಸುವ ಎರಡು ಭರವಸೆಗಳನ್ನು ಸರ್ಕಾರ ರಚಿಸಿದ ಕೆಲವೇ ಕ್ಷಣಗಳಲ್ಲಿ ಆಪ್ ಈಡೇರಿಸಿತು.  
ನಿಜಕ್ಕೂ ಭರವಸೆ ಮೂಡಿಸುವಂಥ ನಡೆಯಿದು. ಇದೆಲ್ಲ ನಿಜಕ್ಕೂ ನಡೆಯುತ್ತಿದೆಯೇ ಎನ್ನುವುದನ್ನು ಮನಗಾಣಲು ದೆಹಲಿಗರು ತಮ್ಮನ್ನು ತಾವು ಚಿವುಟಿಕೊಂಡು ನೋಡಿದರು. ಆಪ್‌ನ ಮಾದರಿ ಪ್ರಖ್ಯಾತವಾಗುತ್ತಿದೆ. ಆ ಪಕ್ಷದ ಏಕ್‌ದಂ ಏಳಿಗೆಯನ್ನು ಕಂಡು ಹೆದರಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೆಲ್ಲ ಅದೇ ಮಾದರಿಯನ್ನು ಅಳವಡಿಸಿಕೊಳ್ಳಲು ಯೋಚಿಸುತ್ತಿವೆ. ಹರ್ಯಾಣಾ ಸರ್ಕಾರ ಅದಾಗಲೇ ವಿದ್ಯುತ್ ಮತ್ತು ನೀರಿನ ದರವನ್ನು ಕಡಿತಗೊಳಿಸಿದೆ. ಮಹಾರಾಷ್ಟ್ರ ಕೂಡ ಇದೇ ದಾರಿಯಲ್ಲಿ ಸಾಗಲು ಸಿದ್ಧವಾಗಿದೆ. ಇನ್ನುಳಿದ ಸರ್ಕಾರಗಳೂ ತಮ್ಮ ಲಹರಿಯನ್ನು ಬದಲಿಸುತ್ತಿವೆ. ಹೀಗಿದೆ ಆಮ್ ಆದ್ಮಿ ಪಕ್ಷದ ಪ್ರಭಾವ!
ಇದು 2014. ನಿರೀಕ್ಷೆಗಳು ಹೆಚ್ಚಾಗಿವೆ. ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಇಡೀ ರಾಷ್ಟ್ರದ ಗಮನ ಆಪ್‌ನತ್ತ ಹೊರಳಿದೆ. ಆಡಿದಂತೆ ಮಾಡಿ ತೋರಿಸುವ ಪಕ್ಷ ಇಲ್ಲಿದೆ ಎಂದು ಜನ ಮಾತನಾಡುತ್ತಿದ್ದಾರೆ. ಜನಪರ ಕಾಳಜಿಯಿರುವ, ಸ್ವಚ್ಛ ಮತ್ತು ಸರಳತೆಯನ್ನು  ಮೈಗೂಡಿಸಿಕೊಂಡಿರುವ, ಉತ್ತಮ ಆಡಳಿತದ ಮೇಲಷ್ಟೇ ದೃಷ್ಟಿ ನೆಟ್ಟಿರುವ, ನಾಗರಿಕ ಕೇಂದ್ರಿತ ಆಡಳಿತವನ್ನು ಪ್ರೋತ್ಸಾಹಿಸುವ, ಸಾಂಪ್ರದಾಯಿಕ ಪಕ್ಷಗಳಿಗೆ ಬಲಿಷ್ಠ ಪರ್ಯಾಯವಾಗಬಲ್ಲ ಪಕ್ಷ, ಆಪ್.   ಇದು ಕೇವಲ ಶುರುವಾತಷ್ಟೆ. ನಿಸ್ಸಂಶಯವಾಗಿಯೂ ಆ ಪಕ್ಷದ ಚಲನವಲನಗಳನ್ನು, ತೀರ್ಮಾನಗಳನ್ನು ಮತದಾರರು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ. ಅದು ಯಾವುದಾದರೂ ತಪ್ಪು ಮಾಡಿ ಸಿಕ್ಕಿಬೀಳಲಿ ಎಂದು ಸಾಂಪ್ರದಾಯಿಕ ಪಕ್ಷಗಳು ಕಾಯತೊಡಗುತ್ತವೆ. ಇನ್ನು ಜನಪ್ರಿಯ ನೀತಿಗಳ ಬಲೆಗೆ ಸಿಲುಕುವ ಅಪಾಯವೂ ಆಪ್‌ಗಿರುವುದರಿಂದ ಅದು ಎಚ್ಚರಿಕೆಯಿಂದ ಮುಂದಡಿಯಿಡಬೇಕು. ಕೇಜ್ರಿವಾಲ್‌ರು ಅಧಿಕಾರ ತಲೆಗೇರದಂತೆ ಎಚ್ಚರಿಕೆ ವಹಿಸಿ, ಉತ್ತಮ ಆಡಳಿತದತ್ತ ತಮ್ಮ ಗಮನ ಕೇಂದ್ರೀಕರಿಸಬೇಕು. ಸರಳವಾಗಿ ಹೇಳಬೇಕೆಂದರೆ, ಸಾಂಪ್ರದಾಯಿಕ ಪಕ್ಷಗಳು ಸಾಗುತ್ತಿರುವ ಹಾದಿಯಲ್ಲಿ ಆಪ್ ಹೆಜ್ಜೆಯಿಡಬಾರದು.   ಒಂದು ವೇಳೆ ದೆಹಲಿಗರನ್ನು ತೃಪ್ತಿಪಡಿಸಲು ಆ ಪಕ್ಷ ಸಫಲವಾಯಿತೆಂದರೆ, ಮುಂದೆ ಅದು ಮೆಟ್ರೋ ಸಿಟಿಗಳಾದ ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ ಮತ್ತು ಹೈದ್ರಾಬಾದ್‌ನತ್ತ ದೃಷ್ಟಿ ಹರಿಸಬಹುದು. ಮಹಾನಗರಿಗಳು ಮಿತಿಮೀರಿದ ಭ್ರಷ್ಟಾಚಾರ ಮತ್ತು ಕಳಪೆ ಆಡಳಿತದಿಂದ ಕಳಾಹೀನವಾಗಿವೆ. ಅದಾಗ್ಯೂ, ನಗರಗಳು ಆರ್ಥಿಕತೆಯ ಯಂತ್ರಗಳಾಗಿ ಬದಲಾಗಿವೆಯಾದರೂ ಸರಿಯಾದ ಯೋಜನೆಗಳು ಮತ್ತು ಉತ್ತರದಾಯಿತ್ವವಿಲ್ಲದೆ ಇರುವುದರಿಂದ ನಾಗರಿಕರ ಜೀವನ ಗುಣಮಟ್ಟ ಕುಸಿಯುತ್ತಿದೆ. ನಿವಾಸಿ ಕಲ್ಯಾಣ ಸಂಘಗಳ ಮೂಲಕ ನಗರದ ಅಭಿವೃದ್ಧಿಯಲ್ಲಿ ಮತ್ತು ಆಡಳಿತದಲ್ಲಿ ಭಾಗವಾಗುವ ಉತ್ಸಾಹ ಜನರಲ್ಲಿದೆ. ಆದರೆ ರಾಜಕೀಯ ವರ್ಗ ಅವರನ್ನು ಎಂದಿಗೂ ಒಳಬಿಟ್ಟುಕೊಂಡಿಲ್ಲ. ಬಹುತೇಕ ಎಲ್ಲಾ ಪಕ್ಷದ ರಾಜಕಾರಣಿಗಳ ಮನಸ್ಥಿತಿ ಇದೇ ಆಗಿದೆ. ಇನ್ನು ಅಧಿಕಾರಿ ವರ್ಗದ ಕಥೆಯೂ ಭಿನ್ನವಾಗಿಲ್ಲ.
ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಳ್ಳಿ. ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಇದೂ ಒಂದು. ಈ ಬೆಳವಣಿಗೆಗೆ ಪ್ರಮುಖ ಕಾರಣ ಸಾಫ್ಟ್‌ವೇರ್ ವಲಯ. ಆದರೆ ಈ ಬೆಳವಣಿಗೆಗೆ ಸಾಥ್ ನೀಡುವಂಥ ಮೂಲಸೌಕರ್ಯಗಳು ಬೆಂಗಳೂರಿನಲ್ಲಿಲ್ಲ. ಈ ಐಟಿ ನಗರಿಯ ಭವ್ಯತೆಯಲ್ಲಿ ಬೆಚ್ಚಗೆ ಆಡಳಿತ ನಡೆಸಿದ್ದ ಯಾವ ಪಕ್ಷಗಳೂ ಕೂಡ ಮೂಲಸೌಕರ್ಯಾಭಿವೃದ್ಧಿಯತ್ತ ಒಲವು ತೋರಿಸಲೇ ಇಲ್ಲ. ನಗರಪಾಲಿಕೆಗಳ ನಡುವಿನ ಸಮನ್ವಯತೆಯ ಕೊರತೆ, ಪ್ರತೀ ಹಂತದಲ್ಲೂ ಭ್ರಷ್ಟಾಚಾರ, ನಿಧಿಗಳ ಕಬಳಿಕೆ ಮತ್ತು ಭ್ರಷ್ಟ ಅಧಿಕಾರಿಗಳು-ನಿರ್ಲಜ್ಜ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಗಳೆಲ್ಲ ನಗರದ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಪರಿಣತರು ಕಾಲಕಾಲಕ್ಕೆ ಸೂಕ್ತವಾದ ಪರಿಹಾರ ಕ್ರಮಗಳನ್ನು ಸೂಚಿಸುತ್ತಲೇ ಬಂದಿದ್ದಾರಾದರೂ, ರಾಜಕೀಯ ವರ್ಗ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
 ಈ ಕಾರಣಕ್ಕಾಗಿಯೇ ಹಾಳಾದ ರಸ್ತೆಗಳು, 24/7 ಟ್ರಾಫಿಕ್ ಸಮಸ್ಯೆ, ಅದೃಶ್ಯವಾದ ಫುಟ್‌ಪಾತ್‌ಗಳು, ಕಟ್ಟಿಕೊಂಡ ಡ್ರೈನೇಜ್‌ಗಳು, ಸಾಯುತ್ತಿರುವ ಕೆರೆಗಳು, ಅಸಮರ್ಪಕ ಸಾರಿಗೆ ವ್ಯವಸ್ಥೆ, ವಿದ್ಯುತ್ ಸಮಸ್ಯೆ, ಭೂಕಬಳಿಕೆ...ಇತ್ಯಾದಿ ಇತ್ಯಾದಿ ಸಮಸ್ಯೆಗಳ ಸಾಗರವೇ ಸೃಷ್ಟಿಯಾಗಿದೆ. ಹೀಗಾಗಿ ಬೆಂಗಳೂರಿಗರು ಆಮ್ ಆದ್ಮಿ ಪಕ್ಷದತ್ತ ಆಸೆಯ ಕಣ್ಗಳಿಂದ ನೋಡುತ್ತಿದ್ದಾರೆ. ಏಕೆಂದರೆ ದೆಹಲಿ ಕೂಡ ಬೆಂಗಳೂರಿನಂಥದ್ದೇ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರ ಸಮಸ್ಯೆ ಬೆಂಗಳೂರಿಗಿಂತಲೂ ಜಟಿಲವಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ. ಅವಶ್ಯಕವಿರುವ ಬದಲಾವಣೆಯನ್ನು ತರಲು ದೆಹಲಿಗರು ಆಪ್ ಪಕ್ಷವನ್ನು ನಂಬುತ್ತಾರೆಂದಾದರೆ, ಬೆಂಗಳೂರಿಗರು ಹಾಗೇಕೆ ಮಾಡಬಾರದು? ಒಂದು ವೇಳೆ ಈಗೇನಾದರೂ ನಗರಸಭಾ ಚುನಾವಣೆಗಳನ್ನು ನಡೆಸಿದರೆ, 198 ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳನ್ನು ಆಮ್ ಆದ್ಮಿ ಪಕ್ಷವೇ ದೋಚಿಕೊಳ್ಳುವುದರಲ್ಲಿ ಸಂಶಯವಿಲ್ಲ. ಇನ್ನು 25 ಶಾಸಕ ಸ್ಥಾನಗಳ ವಿಷಯವೂ ಅಷ್ಟೆ. ಲೋಕಸಭಾ ಚುನಾವಣೆಗಳಲ್ಲಿ ಒಂದು ವೇಳೆ ಆಮ್ ಆದ್ಮಿ ಪಕ್ಷ ಇನ್ನಷ್ಟು ದೊಡ್ಡ ಹೆಜ್ಜೆ ಇಡಲು ಬಯಸಿ ಉತ್ತಮ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತೆಂದರೆ, ಅದು ಬೆಂಗಳೂರಿನ ಎಲ್ಲಾ ಮೂರೂ ಸ್ಥಾನಗಳನ್ನು ನಿಸ್ಸಂಶಯವಾಗಿಯೂ ಗೆಲ್ಲಬಹುದು. ಬೆಂಗಳೂರಿಗೆ ಕೇಜ್ರೀವಾಲ್‌ರಂಥ ನಾಯಕರ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಕಂಗಾಲಾಗಿವೆ.

ಕೊನೆಯ ಗುಟುಕು: ಆಮ್ ಆದ್ಮಿ ಪಕ್ಷದ ಅದ್ಭುತ ಪಾದಾರ್ಪಣೆಯನ್ನು ನೋಡಿ ಜನರು ಹಿಂದಿ ಹಾಡೊಂದನ್ನು ಗುನುಗುತ್ತಿದ್ದಾರೆ. ಯಾವುದೆಂದಿರಾ? "ಆಪ್ ಜೈಸಾ ಕೋಯಿ, ಮೇರಿ ಜಿಂದಗಿ ಮೇ ಆಯೇ, ತೋ ಬಾತ್ ಬನ್ ಜಾಯೇ....!"

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!