ಎಲ್ಲವನ್ನೂ ಬದಲಾಯಿಸಲು ನಮ್ಮ ಬಳಿ ಮಂತ್ರದಂಡವಿಲ್ಲ
ದೆಹಲಿಯ ನೂತನ ಮುಖ್ಯಮಂತ್ರಿ,...
-ದೆಹಲಿಯ ನೂತನ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್, ಹೊಸ ರೀತಿಯ ಆಡಳಿತ ನೀಡುವಲ್ಲಿ ತಮ್ಮ ಯೋಜನೆಗಳು ಹೇಗಿವೆ ಮತ್ತು ನಾಗರಿಕ ಕೇಂದ್ರಿತ ಆಡಳಿತದಿಂದಾಗುವ ಪ್ರಯೋಜನಗಳೇನು ಎನ್ನುವ ಕುರಿತು 'ಇಂಡಿಯಾ ಟುಡೆ'ದ ನಿರ್ವಾಹಕ ಸಂಪಾದಕ ಎಸ್. ಪ್ರಸನ್ನರಾಜನ್ ಅವರೊಂದಿಗೆ ಮಾತನಾಡಿದ್ದಾರೆ...
ಆಂದೋಲನದಿಂದ ಆಡಳಿತಕ್ಕೆ ಬಂದಾಯಿತು. ಈ ಬದಲಾವಣೆಯನ್ನು ಹೇಗೆ ನೋಡುತ್ತೀರಿ?
ನನ್ನ ಜೀವನ ಮೊದಲಿನಂತೆಯೇ ಇದೆ. ಮೊದಲು ನಾವು ಮಾಹಿತಿ ಹಕ್ಕಿಗಾಗಿ ಆಂದೋಲನಕ್ಕಿಳಿದಿದ್ದೆವು, ನಂತರ ಲೋಕಪಾಲ್ ಆಂದೋಲನದಲ್ಲಿ ಧ್ವನಿಯೆತ್ತಿದೆವು, ಈಗ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದೇವೆ. ಮಾರ್ಗ ಬದಲಾಗುತ್ತಿದೆ, ಆದರೆ ಗುರಿ ಮಾತ್ರ ಒಂದೇ. ಹೀಗಾಗಿ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ.
ಅಧಿಕಾರಕ್ಕೇರಿದ ಮೇಲೂ ಹೋರಾಟ ಮುಂದುವರಿಸುತ್ತೀರಾ?
ಖಂಡಿತ. ನಾವು ಅಧಿಕಾರವನ್ನು ಹೇಗೆ ನೋಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅದನ್ನು ಜವಾಬ್ದಾರಿ ಎಂದು ಭಾವಿಸಿದರೆ, ಅನ್ಯಾಯದ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಒಂದು ವೇಳೆ ಅಧಿಕಾರ ತಲೆಗೇರಿದರೆ ಆಗ ನಮಗೂ ಹಾಗೂ ಇತರರಿಗೂ ಅಪಾಯಗಳು ಎದುರಾಗುತ್ತವೆ. ಆಗ ಇತರರು ನಮ್ಮ ಮೇಲೆ ಯುದ್ಧ ಸಾರುತ್ತಾರೆ.
ಬೀದಿ ಹೋರಾಟಗಾರನ ರೊಮ್ಯಾಂಟಿಕ್ ಯಾತ್ರೆ ಮುಗಿದಿದೆ. ರಾಜಕೀಯದ ನಿಷ್ಠುರ ಸತ್ಯವನ್ನು ಎದುರಿಸಲು ತಯಾರಾಗಿದ್ದೀರಾ?
ಅದೆಂದಿಗೂ ನಮಗೆ ರೊಮ್ಯಾಂಟಿಕ್ ಆಗಿರಲಿಲ್ಲ. ಪ್ರತಿ ಹಂತದಲ್ಲೂ ನಮ್ಮ ಹೋರಾಟ ಜವಾಬ್ದಾರಿಯಿಂದ ಕೂಡಿತ್ತು. ಆಂದೋಲನ ಮುಗಿದ ತಕ್ಷಣ ನಾವು ಸುಮ್ಮನಾಗಿಬಿಟ್ಟರೂ ನಡೆಯುತ್ತಿತ್ತಲ್ಲ? ಏಕೆಂದರೆ ಆಗ ನಮಗೆ ಭಾರೀ ಕೀರ್ತಿ ಸಿಕ್ಕಿತ್ತು. ಆದರೆ ನಾವು ಹೋರಾಟವನ್ನು ಮುಂದುವರಿಸುವುದಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದೆವು. ಕೆಲವರು ನಮ್ಮನ್ನು ಅಧಿಕಾರದಾಹಿಗಳೆಂದು ಜರಿದರು.
ವಿಕೇಂದ್ರೀಕರಣ ನಿಮ್ಮ ಸಿದ್ಧಾಂತದ ಪ್ರಮುಖ ಅಂಶ. ಒಂದು ವೇಳೆ ವಿಕೇಂದ್ರೀಕರಣ ಸಾಧ್ಯವಾಗಬೇಕೆಂದರೆ, ಯಾವ ಆಯ್ಕೆ ಸರಿಯೆಂದು ಭಾವಿಸುತ್ತೀರಿ? ಹಾನಿಗೊಳಗಾದ ಸಂಸ್ಥೆಗಳ ಮರುಸ್ಥಾಪನೆ ಮಾಡುವ ಮೂಲಕವೋ ಅಥವಾ ಅವುಗಳನ್ನು ಮುಚ್ಚಿಹಾಕಿಯೋ?
ಕೆಲವು ಸಂಸ್ಥೆಗಳನ್ನು ಬಲಿಷ್ಠಗೊಳಿಸಬೇಕಿದೆ, ಇನ್ನೂ ಕೆಲವನ್ನು ಮತ್ತೊಮ್ಮೆ ಕಟ್ಟಬೇಕಿದೆ, ಉಳಿದ ಕೆಲವು ಸಂಸ್ಥೆಗಳನ್ನು ಕೊನೆಗಾಣಿಸುವುದೇ ಉತ್ತಮ. ಈಗ ಸಿಎಜಿ ಉತ್ತಮ ಸಂಸ್ಥೆ, ಇನ್ನು ನ್ಯಾಯಾಂಗ ಅತಿ ಮುಖ್ಯವಾದದ್ದು. ಅವುಗಳನ್ನು ಬಲಿಷ್ಠಗೊಳಿಸಬೇಕಿದೆ. ಅಂತೆಯೇ ಲೋಕ್ಪಾಲ್ನಂಥ ಹೊಸ ಕಾಯ್ದೆಗಳ, ಮೊಹಲ್ಲಾ ಸಭೆಗಳ, ವಾರ್ಡ್ ಸಭೆಗಳ ಸ್ಥಾಪನೆಯ ಅಗತ್ಯವೂ ಇದೆ.
ವಿಕೇಂದ್ರೀಕರಣದ ಯೋಚನೆ ನಿಮ್ಮ ತಲೆಯಲ್ಲಿ ನುಸುಳಿದ್ದು ಹೇಗೆ? ಅಂದರೆ ನಿಮ್ಮ ಜೀವನದ ಯಾವ ಘಟ್ಟದಲ್ಲಿ?
ನನಗೆ ಅರುಣಾಜೀ(ಅರುಣಾ ರಾಯ್ ) ಅವರ ಪರಿಚಯವಾದದ್ದು 2001ರಲ್ಲಿ. ಆಗ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ನಾನು ತಿಳಿದುಕೊಂಡೆ. ಯಾವಾಗ ನಾವು ಆರ್ಟಿಐನ ಮೇಲೆ ಕೆಲಸ ಮಾಡಲು ಶುರುಮಾಡಿದೆವೋ ಆಗ ಭ್ರಷ್ಟಾಚಾರದ ಅನೇಕ ಕೇಸುಗಳು ನಮ್ಮೆದುರಾದವು. ನಾವು ಸರ್ಕಾರದ ಬಳಿ ಹೋಗಿ ಏನನ್ನಾದರೂ ಕೇಳಿದರೆ, ತಮ್ಮ ಬಳಿ ಹಣವಿಲ್ಲ ಎಂದವರು ಹೇಳುತ್ತಿದ್ದರು. ಬಹಳಷ್ಟು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಾಗರಿಕ ಕೇಂದ್ರಿತ ಆಡಳಿತವಿರುವುದು ನಮಗೆ ತಿಳಿದುಬಂತು. ಅಮೆರಿಕ, ಬ್ರೆಜಿಲ್, ಸ್ವಿಟ್ಜರ್ಲ್ಯಾಂಡ್, ಬ್ರಿಟನ್ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳ ಜನರಿಗೆ ಕೇಂದ್ರ ಸರ್ಕಾರದ ಆಡಳಿತದ ಭಾಗವಾಗಲು ಸಾಧ್ಯವಿಲ್ಲವಾದರೂ, ಅವರು ತಮ್ಮ ಊರಿನಲ್ಲಿ, ನಗರಪಾಲಿಕೆಯಲ್ಲಿ ನಡೆಯಬೇಕಾದ ಕೆಲಸಗಳ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲ್ಲಿಂದಲೇ ನಮ್ಮ ಇಡೀ ಪರಿಕಲ್ಪನೆ ಹುಟ್ಟಿಕೊಂಡಿತು.
ನಿಮ್ಮ ಪುಸ್ತಕ 'ಸ್ವರಾಜ್' ಅನ್ನು ಓದುತ್ತಿದ್ದೆ. ಸ್ವರಾಜ್ ಮತ್ತು ವಿಕೇಂದ್ರೀಕರಣದ ಉದ್ದೇಶ ಒಂದೇ ಅಲ್ಲವೇ?
ಸಾಮ್ಯತೆಯಂತೂ ಇದೆ. ಜನರಿಗೆ ಅಧಿಕಾರ ನಡೆಸುವ ಶಕ್ತಿಯಿದ್ದರೆ ಅದನ್ನು ಸ್ವರಾಜ್ ಅಥವಾ ನೇರ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ವಿಕೇಂದ್ರೀಕರಣ ಎನ್ನುವುದು ಸರಿಯಾದ ಬಳಕೆಯಲ್ಲ. ವಿಕೇಂದ್ರೀಕರಣ 'ಅಧಿಕಾರ ಮೇಲ್ಮಟ್ಟದಲ್ಲಿದೆ' ಎಂದು ಹೇಳುತ್ತದೆ. ಆದರೆ ಅಧಿಕಾರ ಇರುವುದು ಕೆಳಮಟ್ಟದಲ್ಲೇ.
21ನೇ ಶತಮಾನದ ಭಾರತದ ಬಗ್ಗೆ ನಿಮ್ಮ ಕಲ್ಪನೆ ಹೇಗಿದೆ?
ಎಲ್ಲಾ ಜಾತಿ ಮತ್ತು ಧರ್ಮದವರು ಸುಖ, ಶಾಂತಿಯಿಂದ ಬದುಕಬೇಕು. ಒಬ್ಬರನ್ನೊಬ್ಬರು ಗೌರವಿಸಬೇಕು. ಎಲ್ಲರಿಗೂ ಶಿಕ್ಷಣ ದೊರಕಬೇಕು. ತಮ್ಮ ಮತ್ತು ತಮ್ಮ ಕುಟುಂಬದ ಹೊಟ್ಟೆ ತುಂಬಿಸುವಷ್ಟು ಶಕ್ತಿ ಎಲ್ಲರಿಗೂ ದೊರಕುವಂತಾಗಬೇಕು. ಹಾಗಂತ ಎಲ್ಲರೂ ಶ್ರೀಮಂತರಾಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಉತ್ತಮ ಶಿಕ್ಷಣ ಪಡೆಯಲು ಮತ್ತು ಸುಖದಿಂದಿರುವುದಕ್ಕೆ ಸಾಧ್ಯವಾಗುವಷ್ಟು ಗಳಿಕೆಯಿರಬೇಕು ಎನ್ನುತ್ತಿದ್ದೇನೆ.
ಈಗ ಅಧಿಕಾರದಲ್ಲಿದ್ದೀರಿ. ಆಡಳಿತದ ವಾಸ್ತವ ಮತ್ತು ನಿಮ್ಮ ಪ್ರತಿಭಟನಾ ಮನಸ್ಥಿತಿಯನ್ನು ಹೇಗೆ ಸರಿತೂಗಿಸುತ್ತೀರಿ?
ನಾನು ತೆರಿಗೆ ಇಲಾಖೆಯಲ್ಲಿದ್ದೆ. ಅಂದರೆ ಆಡಳಿತದ ಭಾಗವಾಗಿ ದುಡಿದಿದ್ದೇನೆ. ಪ್ರಶಾಂತ್ ಭೂಷಣ್ ವಕೀಲರಾಗಿ ಸೇವೆ ಸಲ್ಲಿಸಿದವರು. ಯೋಗೇಂದ್ರ ಯಾದವ್ ಶಿಕ್ಷಕರಾಗಿದ್ದರು. ಸಂಜಯ್ ಸಿಂಘ್ ಉತ್ತರ ಪ್ರದೇಶದ ಅನೇಕ ಆಂದೋಲನಗಳ ಭಾಗವಾಗಿದ್ದವರು. ಇನ್ನು ಮನೀಶ್ ಸಿಸೋಡಿಯಾ ಪತ್ರಕರ್ತರಾಗಿದ್ದರು. ಹಾಗಾಗೇ ನಮ್ಮದು ವಿಶಿಷ್ಟ ವ್ಯಕ್ತಿತ್ವಗಳಿಂದ ಕೂಡಿದ ಒಂದು ತಂಡ. ಇವರೆಲ್ಲ ತಮ್ಮ ಜೀವಮಾನವನ್ನು ಪ್ರತಿಭಟನಾ ಮನಸ್ಥಿತಿಯಲ್ಲೇ ಕಳೆದಿದ್ದಾರೆ ಎಂದಲ್ಲ. ನಾವೆಲ್ಲಾ ಜೊತೆಯಾಗಿರುವುದು, ಅನ್ಯಾಯದ ವಿರುದ್ಧ ಹೋರಾಡುವುದಕ್ಕಾಗಿ. ಒಂದು ವಿಷಯ ಹೇಳುತ್ತೇನೆ ಕೇಳಿ, ನಾವು ಭಾರೀ ಬುದ್ಧಿವಂತರು ಮತ್ತು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಭಾವನೆ ನಮಗ್ಯಾರಿಗೂ ಇಲ್ಲ. ನಮ್ಮ ಬಳಿ ಮಂತ್ರ ದಂಡವೂ ಇಲ್ಲ. ಆದರೆ ದೆಹಲಿಯ ಜನತೆಯೊಂದಿಗೆ ಸೇರಿ ಕೆಲಸ ನಿರ್ವಹಿಸಿದಾಗ, ಅನೇಕ ಸಮಸ್ಯೆಗಳನ್ನು ಅವರೇ ಬಗೆಹರಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಸರ್ಕಾರದ ವ್ಯಾಖ್ಯಾನವನ್ನು ನಾವು ಬದಲಿಸುತ್ತೇವೆ. ಈಗ ಪ್ರತಿಯೊಬ್ಬ ದೆಹಲಿಗನೂ ಸರ್ಕಾರವಾಗುತ್ತಾನೆ.
ಸ್ವಾತಂತ್ರ್ಯ ಹೋರಾಟಗಳ ಇತಿಹಾಸವನ್ನು ನೋಡಿದಾಗ, ಒಂದು ವಿಷಯ ನಮ್ಮ ಗಮನಕ್ಕೆ ಬರುತ್ತದೆ- ಸ್ವಾತಂತ್ರ್ಯವನ್ನು ನಿಭಾಯಿಸುವುದು ಕಷ್ಟ, ಆದರೆ ಅದಕ್ಕಾಗಿ ಹೋರಾಡುವುದು ಸುಲಭ ಎನ್ನುವುದು. ಮುಂದೆ ಕಠಿಣ ಸಮಯ ಕಾದು ಕುಳಿತಿದೆ ಎಂದು ಭಾವಿಸುತ್ತೀರಾ?
ಜನರು ನಮ್ಮ ಮೇಲೆ ಬಹಳ ಭರವಸೆಯಿಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಕೆಲವೊಮ್ಮೆ ನನಗೆ ಹೆದರಿಕೆಯಾಗಿಬಿಡುತ್ತದೆ. ಹಾಗಾಗೇ ನಾನು ನಮ್ಮ ಶಾಸಕರಿಗೆ ಆಗಾಗ ಹೇಳುತ್ತಿರುತ್ತೇನೆ- "ಜನ ನಿಮ್ಮನ್ನು ಗಮನಿಸುತ್ತಿದ್ದಾರೆ. ಒಂದು ತಪ್ಪು ಹೆಜ್ಜೆಯಿಟ್ಟರೂ ಕೂಡ, ಇತಿಹಾಸ ನಿಮ್ಮನ್ನು ಕ್ಷಮಿಸದು" ಎಂದು.
ಈಗ ಪ್ರಮುಖ ಹುದ್ದೆಯೊಂದು ನಿಮಗೆ ದೊರಕಿದೆ. ಆಂದೋಲನಗಳ ನೇತೃತ್ವ ವಹಿಸಿ ಅಧಿಕಾರಕ್ಕೆ ಬಂದವರನ್ನು ಸರ್ವೋಚ್ಚ ನಾಯಕರೆಂದು ಜನರು ಆರಾಧಿಸಬಹುದಾದ ಅಪಾಯವಿದೆ.
ಇದಕ್ಕೆ ಪರಿಹಾರವೆಂದರೆ ವಿಕೇಂದ್ರೀಕರಣ. ಒಂದು ವೇಳೆ ಎಲ್ಲಾ ಅಧಿಕಾರವನ್ನು ನನಗೇ ಕೊಟ್ಟುಬಿಟ್ಟರೆ, ಬಹುಶಃ ನಾಳೆ ನಾನು ಅಹಂಕಾರಿಯಾಗಬಹುದು ಅಥವಾ ಜನರಿಂದ ದೂರವಿದ್ದುಬಿಡಬಹುದು. ಹಾಗಂತ ಭ್ರಷ್ಟನಾಗುತ್ತೇನೆಂದಲ್ಲ, ಆದರೆ ಬೇರೆ ಯಾವುದೋ ರೀತಿಯ ಕೆಟ್ಟ ಬದಲಾವಣೆ ನನ್ನಲ್ಲಿ ಆಗಿಬಿಡಬಹುದು. ಹಾಗಾಗೇ ಎಲ್ಲಾ ಅಧಿಕಾರವೂ ನನ್ನ ಕೈಯಲ್ಲಿರಬಾರದು. ಅಧಿಕಾರವೇನಿದ್ದರು ಜನರ ಕೈಯಲ್ಲಿರಬೇಕು.
ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಎಂದಾದರೂ ಅನಿಸಿತ್ತೇ?
ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಥವಾ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುತ್ತೇನೆ ಎಂದು ಕನಸುಮನಸಿನಲ್ಲಿಯೂ ಯೋಚಿಸಿರಲಿಲ್ಲ.
ಜನಮತಸಂಗ್ರಹದ ಬಗ್ಗೆ ಕೇಜ್ರಿವಾಲರಿಗಿರುವ ಒಲವು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೆಲ್ಲಾ ನೀವು ಜನರ ಅಭಿಪ್ರಾಯ ಕೇಳಲಿದ್ದೀರಾ?
ಜನಮತಸಂಗ್ರಹದಿಂದಲೇ ಸರ್ಕಾರ ನಡೆಸುವುದಕ್ಕೆ ಸಾಧ್ಯವಿಲ್ಲ. ಆದರೆ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಜನರ ಅಭಿಪ್ರಾಯ ಕೇಳುತ್ತೇವೆ.
ಪ್ರಜಾಪ್ರಭುತ್ವದಲ್ಲಿ ಒಂದು ಮಹತ್ವದ ನಿರ್ಣಯ ತೆಗೆದುಕೊಳ್ಳುವಾಗ "ಒಮ್ಮತ"ವಿರಲೇ ಬೇಕೆ? ನಾಯಕನಾದವನು ಕೆಲವೊಮ್ಮೆ ಜನಪ್ರಿಯವಲ್ಲದ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಅದೂ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕಾಗಿಯೇ. ಅಂಥ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವುದಿಲ್ಲವೇ?
ಜನಾಭಿಪ್ರಾಯಕ್ಕೆ ಮೊರೆ ಹೋದರೆ ಬರೀ ಜನಪ್ರಿಯ ಯೋಜನೆಗಳನ್ನೇ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು. ಹಾಗೆ ಹೇಳುವವರಿಗೆ ಜನತೆ ಹೇಗೆ ವರ್ತಿಸುತ್ತಾರೆ ಎನ್ನುವುದರ ಅರಿವಿರುವುದಿಲ್ಲ. ನಾವು ಕೆಲವು ಸಾರ್ವಜನಿಕ ಸಭೆಗಳಲ್ಲಿ, ಅಪ್ರಿಯ ಯೋಜನೆಗಳನ್ನೂ ಕೈಗೆತ್ತಿಕೊಂಡಿದ್ದೇವೆ. ಆದರೆ ಆ ಯೋಜನೆಯ ಸಾಧಕ-ಬಾಧಕಗಳನ್ನು ಪ್ರಾಮಾಣಿಕವಾಗಿ ಜನರ ಮುಂದಿಡಬೇಕಾದುದು ಅವಶ್ಯಕ.
ಒಮ್ಮೆ ನಿಮ್ಮದು ಗಾಂಧೀ ಸಿದ್ಧಾಂತವೆನಿಸುತ್ತದೆ ಮತ್ತೊಮ್ಮೆ ನೀವು ಕಮ್ಯುನಿಷ್ಟರಂತೆ ಕಾಣಿಸುತ್ತೀರಿ...!
ನಾವು ಸಾಮಾನ್ಯ ಜನರು. ನಮಗೆ ಪರಿಹಾರ ಬೇಕು. ನಮ್ಮೆದುರು ಸಮಸ್ಯೆಗಳಿವೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ಶಿಕ್ಷಣ ಸಮಸ್ಯೆ, ಆರೋಗ್ಯ ಸಮಸ್ಯೆ....ಹೀಗೆ...ಈ ಸಮಸ್ಯೆಗಳಿಗೆ 'ಎಡ'ಗಡೆಯಿಂದ ಪರಿಹಾರ ದೊರಕುತ್ತದೆಂದರೆ, ಅಲ್ಲಿಂದಲೂ ಎರವಲು ಪಡೆಯುತ್ತೇವೆ. 'ಬಲ'ಗಡೆಯಲ್ಲಿ ಪರಿಹಾರ ಸಿಕ್ಕರೆ, ಅಲ್ಲಿಂದಲೂ ಸಾಲ ಪಡೆಯುವುದಕ್ಕೆ ನಾವು ಸಿದ್ಧ. ನಮಗೆ ಪರಿಹಾರ ಮುಖ್ಯ.
-ನೀವು ಸಾಮಾನ್ಯರ ಮೈದಾಳಿದ್ದೀರಿ. ಸಾಮಾನ್ಯರಂತೆ ಇರುವುದೂ ಹೊರೆಯಲ್ಲವೇ?
ಇದನ್ನು ನಾನು ಹೊರೆಯೆಂದು ಭಾವಿಸುವುದಿಲ್ಲ. ನಾವು ಯಾರು ಎನ್ನುವುದು ನಮ್ಮ ಪ್ರಕೃತಿಯಲ್ಲೇ ಅಡಕವಾಗಿರುತ್ತದೆ. ಬೇರೆ ರೀತಿಯಲ್ಲಿ ಬದುಕುವುದಕ್ಕೆ ನನಗೆ ಸಾಧ್ಯವಿಲ್ಲ.