ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನೀವು ಯಾವತ್ತೂ ಹಳ್ಳಿ ತಿರುಗುತ್ತಿರಿ

Mainashree
Updated On : 4 Jan 2014, 9:43 am

ನಗುಮುಖದ ಯಡಿಯೂರಪ್ಪನವರ ಭಾವಚಿತ್ರವನ್ನೊಳಗೊಂಡ ಕ.ಪ್ರ. 25/12 ರ ಸಂಚಿಕೆ ನೋಡಿ, ನಮ್ಮ ರಾಜಕಾರಣಿಗಳಿಗೆ ಸಹಜ ಧರ್ಮವಾದ ನಗುವೂ ಬರುತ್ತದೆಂಬುದು ಖಾತ್ರಿಯಾದಂತಾಯಿತು. ಅಪರೂಪದ ಈ ಚಿತ್ರ ಪ್ರಕಟಿಸಿದ ಕ.ಪ್ರ.ಕ್ಕೆ ಧನ್ಯವಾದ. ಈ ನಗು ಯಡಿಯೂರಪ್ಪನವರ ಮೊಗದಲ್ಲಿ ಸಂಕ್ರಾಂತಿಯ ನಂತರವೂ ಕಾಣಸಿಗಬಹುದೇ ಎಂಬುದು ಯಕ್ಷ ಪ್ರಶ್ನೆ. ಇನ್ನು ಕಾಣದ ಊರಿಗೆ ಪಯಣಿಸಿದ್ದ ಜಿ.ಎಸ್. ಶಿವರುದ್ರಪ್ಪನವರಿಗೆ ನಮನ ಸಲ್ಲಿಸಿದ ಕೆಲವು ಗಣ್ಯರ ಭಾವಚಿತ್ರವೂ ನಗುಮುಖದ್ದೇ ಆಗಿತ್ತು. (ಕ.ಪ್ರ. 24/12) ಸಂತಾಪ ಸೂಚಕ ಸಮಯಕ್ಕೆ ಹೊಂದುವ ಇನ್ನಾವ ಭಾವಚಿತ್ರವೂ ಸಿಗಲಿಲ್ಲವೋ ಏನೋ? ಅಂದ ಹಾಗೆ, ಡಿಸೆಂಬರ್ 24ರ ಜಿಎಸ್‌ಎಸ್ ಅವರ ವ್ಯಕ್ತಿ ಚಿತ್ರಣ ಹೊತ್ತು ತಂದ ಸಂಚಿಕೆ ಮಾಹಿತಿಪೂರ್ಣವಾಗಿತ್ತು. ಹಣತೆ ಆರಿದರೂ ಬೆಳಕು ಇನ್ನೂ ಇತ್ತು.
-ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ.
ಮೊ. 9632 821920

ಸಂಪಾದಕರು ಕಾರ್ಯನಿಮಿತ್ತ ಶಿರಾಡಿಘಾಟ್ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿ ಬಂದಿದ್ದರಿಂದ ರಸ್ತೆಯ ದುರವಸ್ಥೆ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರ ಕಣ್ಣು ತೆರೆಸುವಂತೆ ವರದಿಗಳು ಪ್ರಕಟವಾದವು. ಹಾಲಿನ ಕಲಬೆರಕೆ ಹಾಗೂ ಮ್ಯಾಕ್‌ಡೊನಾಲ್ಡ್ ಇಬ್ಬಂದಿತನದ ಬಗ್ಗೆಯೂ ಒಳ್ಳೆಯ ವರದಿಗಳು ಪ್ರಕಟವಾಗಿವೆ. ಮಹಾತ್ಮ ಗಾಂಧೀಜಿಯವರು ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಎಂದು ನಂಬಿದ್ದರು. ತಾವು ವಿದೇಶಗಳಿಗೆ ಪ್ರವಾಸ ಹೋದಂತೆ, ಗ್ರಾಮವಾಸ್ತವ್ಯವನ್ನೂ ಮಾಡಿ ಕುಂದುಕೊರತೆಗಳ ಬಗ್ಗೆ ನಿರಂತರ ಬರೆಯುತ್ತಿರಬೇಕೆಂದು ಮನವಿ.
-ಎಂ. ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು

ಕನ್ನಡಪ್ರಭ ಪತ್ರಿಕೆಯಲ್ಲಿ ಶಿರಾಡಿಘಾಟ್‌ನ ಕರ್ಮಕಾಂಡವನ್ನು ವಿವರವಾಗಿ ಪ್ರಕಟಿಸಿ, ಜನರ ಗಮನಕ್ಕೆ ಅಲ್ಲದೆ, ಸಂಬಂಧಪಟ್ಟ ಸಚಿವರ ಕಣ್ಣು ತೆರೆಸಿ, ಅವರು ಘಾಟ್‌ನ ಸಮಗ್ರ ದುರಸ್ತಿ ಆಗುವಂತೆ ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದೂ ಅಲ್ಲದೇ ಅಲ್ಲಿ ನಡೆಯುವ ಕಾಮಗಾರಿ ಮೇಲೆ ನಿತ್ಯ ಕಣ್ಗಾವಲು ಇಟ್ಟಿರುತ್ತಾರೆ. ಈ ಬಗ್ಗೆ ತಮಗೆ, ಪತ್ರಿಕೆಗೆ ಅನಂತ ಧನ್ಯವಾದಗಳು.
-ಕೆ. ಧರ್ಮಯ್ಯ, ಶಿವಮೊಗ್ಗ, 08182-22814.

ಡಿಸೆಂಬರ್ 22ರ ಭಾನುವಾರದ "ಕನ್ನಡಪ್ರಭ"ದಲ್ಲಿ ದಿನಭವಿಷ್ಯ ಮಾಯವಾಗಿತ್ತು. ಅದೇ ರೀತಿ ಈ ಭಾನುವಾರದ (29.12.13) "ಖುಷಿಯಲ್ಲಿ" ವಾರಭವಿಷ್ಯವೇ ಮಾಯವಾಗಿ ಬಿಟ್ಟಿದೆ. ಸ್ವಾಮಿ, ನಿಮ್ಮ ಪತ್ರಿಕೆಯ ಸಿಬ್ಬಂದಿಯವರು "ಖುಷಿ"ಯ ಸಂಭ್ರಮದಲ್ಲಿ ವಾರಭವಿಷ್ಯವನ್ನೇ ಮಾಯ ಮಾಡಿ ನಮಗೆ ಭವಿಷ್ಯವೇ ಇಲ್ಲದಂತೆ ಮಾಡಿಬಿಟ್ಟಿದ್ದೀರಲ್ಲಾ.
-ಕೆ. ಪ್ರಾಣೇಶರಾವ್, ಜಯನಗರ, ಬೆಂಗಳೂರು-560041.

ಎ.ಆರ್. ಮಣಿಕಾಂತ್ ಅವರು ಕ.ಪ್ರ. ಡಿ.25ರ ಸಂಚಿಕೆಯಲ್ಲಿ ಬೆಂಗಳೂರು ನಾಗರತ್ನಮ್ಮ ಅವರ ಬಗೆಗೆ ಬರೆದಿರುವ ಲೇಖನದಲ್ಲಿ ನುಡಿನಮನಕ್ಕಿಂತ ಆಕ್ರೋಶವೇ ಮುಂದಾಗಿದೆ! ಲೇಖಕರು ಈಗಾಗಲೇ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ಕೆಲ ಲೇಖನಗಳನ್ನು ಹೆಸರಿಸಿದ್ದಾರೆ. ಆದರೆ ಆಕೆಯ ಬಗೆಗೆ ಬಹುಮುಖ್ಯವಾಗಿ ಕನ್ನಡದಲ್ಲಿರುವ ಪುಸ್ತಕವನ್ನೇ ಅವರು ಅಲಕ್ಷಿಸಿದ್ದಾರೆ! ಹಿರಿಯ ವಿಮರ್ಶಕ ಹಾಗೂ ಗಣ್ಯ ವಿದ್ವಾಂಸ ಬಿ.ವಿ.ಕೆ. ಶಾಸ್ತ್ರಿಗಳು ಬರೆದಿರುವ "ಬೆಂಗಳೂರು ನಾಗರತ್ನಮ್ಮ" ಆಕೆಯ ಜೀವನವನ್ನು ಸಮಗ್ರವಾಗಿ ಕಟ್ಟಿಕೊಡುವ ಕನ್ನಡದ ಏಕೈಕ ಪುಸ್ತಕ. ಕನ್ನಡಿಗರು ಆಕೆಯನ್ನು ಅಲಕ್ಷಿಸಿಲ್ಲ, ಮರೆತೂ ಇಲ್ಲ. ಸ್ವಯಂಘೋಷಿತ ನಾಯಕರುಗಳಿಗೆ ಇದು ಅರ್ಥವಾಗುವುದೂ ಇಲ್ಲ!
-ಸಾವಿತ್ರಿ ಭಟ್, ನಂ. 739, 3ನೇ ಬ್ಲಾಕ್, ಎಲ್.ಐ.ಸಿ. ಕಾಲೋನಿ, ಜಯನಗರ, ಬೆಂಗಳೂರು.

18.12ರ ಬೈಟು ಕಾಫಿಯಲ್ಲಿಯ "ಪುಳಕದ ಜಳಕ" ಓದಿ ನಾನೇ ಪುಳಕಗೊಂಡೆ. ನಮ್ಮದು ಒಂದು ಸಾಧಾರಣ ಹಳ್ಳಿ. ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯ ಕೆಲವು ಹೆಂಗಸರು ಮಕ್ಕಳಿಗೆ ಜಳಕ (ಸ್ನಾನ) ಮಾಡಿಸಲು ನಮ್ಮ ತಾಯಿಯವರನ್ನು ಕರೆದುಕೊಂಡು ಹೋಗುತ್ತಿದ್ದರು. ನಮ್ಮ ತಾಯಿಯವರೂ ಹೋಗಿ ಸ್ನಾನ ಮಾಡಿಸಿ ಬರುತ್ತಿದ್ದರು. ನಾವು ಅವರ ಮನೆ ಮಗುವಿಗೆ ನೀನೇಕೆ ಸ್ನಾನ ಮಾಡಿಸಬೇಕು? ಎಂದು ಕೇಳಿದಾಗ, ಅದು ನಿನಗೆ ಗೊತ್ತಾಗುವುದಿಲ್ಲ ಬಿಡು ಎಂದು ಬಿಡುತ್ತಿದ್ದರು. ನಮ್ಮ ಅಕ್ಕಪಕ್ಕ ಗೊತ್ತಿರುವ, ಎಲ್ಲರ ಮಕ್ಕಳಿಗೆ ಸ್ನಾನ ಮಾಡಿಸಲು ಅವರೇ ಹೋಗುತ್ತಿದ್ದರು. ನಮ್ಮ ತಾಯಿಗೆ ಕಾರಣ ಹೇಳಲು ಬರುತ್ತಿರಲಿಲ್ಲ. ಆಗ ನಮಗೂ ಅರ್ಥವಾಗುತ್ತಿರಲಿಲ್ಲ. ಈಗ ನಿಮ್ಮ ಬೈಟುಕಾಫಿಯನ್ನು ಓದಿ, 'ಓ ಅದಾ ಕಾರಣ' ಎಂದುಕೊಂಡೆವು.
-ಡಿ. ಗುರುಮಲ್ಲಪ್ಪ, ದೊಡ್ಡಪುರ, ತಾಳವಾಡಿಪಿರ್ಕ

ದಿನದಿಂದ ದಿನಕ್ಕೆ ನಮ್ಮ ಪತ್ರಿಕೆಯು ವಿಶೇಷ ವಿಚಾರಗಳನ್ನೊಳಗೊಂಡಿದೆ. ಕೆಲವೊಂದು ವಿಷಯಗಳನ್ನು ಎಲ್ಲಾ ಮರೆತಿರುವಾಗ ನಮ್ಮ ಪತ್ರಿಕೆ ಪ್ರತಿದಿನ ನ್ಯೂಸ್ ವಾಚ್‌ನಲ್ಲಿ ಎ.ಟಿ.ಎಂ.ನಲ್ಲಿ ಮಹಿಳೆ ಚೇತರಿಸಿಕೊಂಡರು. ಆರೋಪಿ ಎಲ್ಲಿ ಎಂದು ಇನ್ನು ಪ್ರಶ್ನಿಸುತ್ತಲೇ ಇದೆ. ನಮ್ಮ ಪತ್ರಿಕೆಯ ಜವಾಬ್ದಾರಿ ಬಗ್ಗೆ ಹೆಮ್ಮೆ ಅನ್ಸುತ್ತೆ.
-ಸುಮಿತ್ರ ಹರೀಶ್,ಬ್ಯೂಟಿಷಿಯನ್, ಬಸರೀಕಟ್ಟೆ

ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement