ಇತಿಹಾಸ ಮನಮೋಹನರಿಗೆ ಕೊಡಬಹುದಾದ ಸ್ಥಾನವೇನು?
ಅಂತ್ಯ ಚೆನ್ನಾಗಿದ್ದರೆ ಆದಿಯಲ್ಲಾದ ತಪ್ಪುಗಳೆಲ್ಲವೂ ಮರೆತುಬಿಡುತ್ತವೆ...
ಅಂತ್ಯ ಚೆನ್ನಾಗಿದ್ದರೆ ಆದಿಯಲ್ಲಾದ ತಪ್ಪುಗಳೆಲ್ಲವೂ ಮರೆತುಬಿಡುತ್ತವೆ ಎನ್ನುತ್ತದೆ ನಾಣ್ಣುಡಿ. ಆದರೆ ಮನಮೋಹನ್ ಸಿಂಗ್ ಅವರ ವಿಷಯಕ್ಕೆ ಇದನ್ನು ಅನ್ವಯಿಸಿದರೆ ಈ ಗಾದೆ ತನ್ನ ಅರ್ಥವನ್ನು ಕಳೆದುಕೊಂಡುಬಿಡುತ್ತದೆ. ಇತಿಹಾಸ ತಮ್ಮನ್ನು ಭಿನ್ನವಾಗಿ ಮತ್ತು ಕರುಣೆಯಿಂದ ನೋಡಬಹುದು ಎಂದಿದ್ದಾರೆ ಮನಮೊಹನ್ ಸಿಂಗ್ ಅವರು. ಅವರು ಹೀಗೆ ಹೇಳಿದರಾದರೂ, ಸ್ವತಂತ್ರ ಭಾರತದ ಐತಿಹಾಸಿಕ ದಾಖಲೆಯಲ್ಲಿ ಅವಧಿ ಮುಗಿಯುವ ಆರು ತಿಂಗಳ ಮುನ್ನವೇ ನಿವೃತ್ತಿಯನ್ನು ಘೋಷಿಸಿದ ಮೊದಲ ಪ್ರಧಾನಿಯಾಗಿ ಅವರು
ಜಾಗಪಡೆಯಲಿದ್ದಾರೆ. ಹಾಗೆ ನೋಡಿದರೆ, ರಾಜಕಾರಣಿಗಳ ಕ್ಯಾಲೆಂಡರಿನಲ್ಲಿ ಕೊನೆಯ ದಿನಾಂಕವೇ ಇರುವುದಿಲ್ಲ. ಮನಮೋಹನ್ ಸಿಂಗ್ ಇದಕ್ಕೆ ಅಪವಾದ. ಜವಾಹರ್ ಲಾಲ್ ನೆಹರು ನಂತರ ಸತತ ಎರಡು ಅವಧಿಗೆ ಪ್ರಧಾನಿಯಾದ ಏಕೈಕ ವ್ಯಕ್ತಿ ಇವರು. ಅಲ್ಲದೆ ತಮ್ಮ ಪಕ್ಷಕ್ಕೆ ಲೋಕಸಭೆಯಲ್ಲಿ ಎರಡೂ ಅವಧಿಯಲ್ಲಿ ಬಹುಮತವಿಲ್ಲದಿರುವಾಗಲೂ ಕುರ್ಚಿಯಲ್ಲಿ ಭದ್ರವಾಗಿ ಕುಳಿತ ಮೊದಲ ಪ್ರಧಾನಿಯೂ ಇವರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಗಳು, ಈ ಒಕ್ಕೂಟ ಯುಗದಲ್ಲಿ 10 ವರ್ಷದ ವರೆಗೆ ಹುದ್ದೆಯಲ್ಲಿ ಉಳಿದುಕೊಂಡಿರುವುದೂ ತಮ್ಮ ಒಂದು ಸಾಧನೆ ಎಂದಿದ್ದಾರೆ. ಅವರ ಮಾತಿನಲ್ಲಿ ಸತ್ಯವೂ ಇದೆ. ಆದರೆ ಆ 10 ವರ್ಷಗಳು ಸರ್ಕಾರವನ್ನು ಭದ್ರವಾಗಿರಿಸುವುದಕ್ಕೆ ಮಿತ್ರಪಕ್ಷಗಳ ಬೇಡಿಕೆಗಳನ್ನು ಪೂರೈಸುತ್ತಾ ತಾವು ಮತ್ತು ದೇಶ ತೆತ್ತ ಬೆಲೆಯ ಬಗ್ಗೆ ಅವರೇನನ್ನುತ್ತಾರೆ? ಇನ್ನು ಮನಮೋಹನ್ ಸಿಂಗ್ ಅವರು ಯಶಸ್ಸನ್ನೆಲ್ಲ ತಮ್ಮ ಸಹೋದ್ಯೋಗಿಗಳಿಗೆ ಕಟ್ಟಿ, ವೈಫಲ್ಯವನ್ನು ತಮ್ಮ ತಲೆಯ ಮೇಲೆ ಹೊತ್ತುಕೊಳ್ಳುವ ರಾಜಕಾರಣಿಯಲ್ಲ ಎನ್ನುವುದು ಅವರ ಭಾಷಣ ಕೇಳಿದಾಗ ಅರ್ಥವಾಯಿತು. ತಮ್ಮ ಸರ್ಕಾರದ ವೈಫಲ್ಯಕ್ಕೆ ಪ್ರತಿಯೊಂದು ಸಂಸ್ಥೆಯನ್ನೂ, ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಸಿದ್ಧಾಂತವನ್ನೂ ಅವರು ದೂರಿದರು. ಇದೇನೇ ಇದ್ದರೂ ಅವರ ಈ ಸ್ವಯಂಪ್ರೇರಿತ ನಿವೃತ್ತಿ, 'ಬೆಟ್ಟವನ್ನು ಕೊಡುತ್ತೇನೆಂದು ಆಸೆ ತೋರಿಸಿ, ಒಂದು ಬಿಣುಚುಕಲ್ಲನ್ನೂ ಕೊಡಲಾಗದ' ಅಧಿಕಾರಯುಕ್ತ ಪ್ರವಾದಿಯೊಬ್ಬರ ದುರಂತ ಅವಸಾನವೇ ಸರಿ. 2004ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಮ ವರ್ಗದ ಆಪ್ತಮಿತ್ರನಾಗಿದ್ದರು, 2014ರಲ್ಲಿ ಅದೇ ವ್ಯಕ್ತಿ ದೇಶದ ಕಡುವೈರಿಯಾಗಿ ಕಾಣಿಸುತ್ತಿದ್ದಾರೆ. ಮಾಧ್ಯಮದ ಮುಂದೆ ಅವರು ಮಾತನಾಡಿದ ಪರಿಯನ್ನು ಸೂಕ್ಷವಾಗಿ ಗಮನಿಸಿದರೆ, ಅವರಲ್ಲೊಬ್ಬ ಕ್ರುದ್ಧ ವೃದ್ಧ ಕಾಣಿಸುತ್ತಾನೆ. ನರೇಂದ್ರ ಮೋದಿಯವರ ಮೇಲಿನ ಅವರ ವಾಗ್ದಾಳಿ, ಅವರ ವೈಯಕ್ತಿಕ ನೋವು ಮತ್ತು ನಿರಾಶೆಯನ್ನು ಪ್ರತಿಬಿಂಬಿಸುತ್ತದೆ.
ಒಂದು ವೇಳೆ ಮನಮೋಹನ್ ಸಿಂಗ್ ಅವರ 75 ನಿಮಿಷದ ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶ ತಮ್ಮ ಮತ್ತು ತಮ್ಮ ಸರ್ಕಾರದ ಮುಳುಗುತ್ತಿರುವ ಇಮೇಜನ್ನು ಎತ್ತಿಹಿಡಿಯುವುದೇ ಆಗಿತ್ತೆಂದರೆ, ಆ ಕೆಲಸದಲ್ಲಿ ಅವರು ನಿಸ್ಸಂಶಯವಾಗಿಯೂ ಸೋತಿದ್ದಾರೆ! ತಮ್ಮ ಸಾಧನೆಗಳ ಬಗ್ಗೆ ನೆನಪು ಮಾಡಿಕೊಂಡಾಗಲೂ ಅವರು ಎಚ್ಚರಿಕೆಯಿಂದ ಆಯ್ದ ಭಾಗಗಳನ್ನಷ್ಟೇ ಮಾಧ್ಯಮಗಳ ಮುಂದಿಟ್ಟರು. ಕಳೆದ 9 ವರ್ಷದ ಯುಪಿಎ ಆಡಳಿತದಲ್ಲಿ ದೇಶದ ಜಿಡಿಪಿ ಅದ್ಭುತವಾಗಿತ್ತು ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು. ಆದರೆ ಅವರು ಅಧಿಕಾರ ವಹಿಸಿಕೊಳ್ಳುವ ವೇಳೆಗಾಗಲೇ ದೇಶದ ಆರ್ಥಿಕತೆಯಲ್ಲಿ 8 ಪ್ರತಿಶತ ಹೆಚ್ಚಳವಾಗಿತ್ತು. ಅದು ವಾಜಪೇಯಿ ಸರ್ಕಾರದ ಸಾಧನೆಯಲ್ಲವೇ? ಆದರೆ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಕೆಳಗಿಳಿದಾಗ ದೇಶದ ಆರ್ಥಿಕ ಬೆಳವಣಿಗೆ 5 ಪ್ರತಿಶತಕ್ಕಿಂತಲೂ ಕಡಿಮೆಯಿರಲಿದೆ. ಪ್ರತಿಯೊಂದು ವಲಯದಲ್ಲೂ ಯುಪಿಎದ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಎನ್ಡಿಎ ಸರ್ಕಾರದ ಕೊನೆಯ ವರ್ಷದಲ್ಲಿ 9 ಪ್ರತಿಶತದಷ್ಟಿದ್ದ ಕೃಷಿವಲಯದ ಬೆಳವಣಿಗೆ ಯುಪಿಎ ಅಡಿಯಲ್ಲಿ ಏಕಾಏಕಿ 4.80 ಪ್ರತಿಶತಕ್ಕೆ ಕುಸಿದುಬಿಟ್ಟಿತು. ಉತ್ಪಾದನಾ ವಲಯದ ಅಭಿವೃದ್ಧಿ ದರ 7.30 ಪ್ರತಿಶತದಿಂದ 1.50 ಪ್ರತಿಶತಕ್ಕಿಳಿಯಿತು. ಈ ಎಲ್ಲದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದದ್ದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡ ಮನಮೋಹನ್ ಸಿಂಗ್ ಅವರ ನಿಲುವು! ಇದೇ ಮನಮೋಹನ್ ಸಿಂಗ್, 2008ರಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದ ಭಾರತವನ್ನು ರಕ್ಷಿಸಿದ್ದು ತಮ್ಮ ಸರ್ಕಾರದ ದೃಢವಾದ ನೀತಿಗಳು ಎಂದು ಹೇಳಿದ್ದರು. ಹಾಗಿದ್ದರೆ ಅದೇ ಸರ್ಕಾರ 2013ರ ವೇಳೆಗೆ ಸೋತು ಸುಣ್ಣವಾಗಿದ್ದೇಕೆ? ಇದಕ್ಕೆ ಉತ್ತರ ಪ್ರಧಾನಿಗಳ ಬಳಿಯೂ ಇಲ್ಲ, ವಿದೇಶದಲ್ಲಿ ಶಿಕ್ಷಣ ಪಡೆದುಬಂದಿರುವ ಅವರ ಆರ್ಥಿಕ ಸಲಹೆಗಾರರ ಬಳಿಯೂ ಇಲ್ಲ. ಇನ್ನು ಹಣದುಬ್ಬರದ ಸಂಕಷ್ಟದಲ್ಲೂ ಯುಪಿಎದ ಕಾರ್ಯವೈಖರಿ ಕೆಟ್ಟದಾಗಿತ್ತು. 2004ರಲ್ಲಿ 3.8ರಷ್ಟಿದ್ದ ಗ್ರಾಹಕ ಬೆಲೆ ಸೂಚ್ಯಂಕ 2013ರ ವೇಳೆಗೆ 10 ಪ್ರತಿಶತಕ್ಕೆ ಏರಿತು.
ನಮ್ಮ ರಾಜಕಾರಣಿಗಳ ಸದ್ಗುಣಗಳಲ್ಲಿ 'ಸ್ಥಿರತೆ'ಗೆ ಜಾಗವೇ ಇಲ್ಲ. ಅಂತೆಯೇ ಅಚಾನಕ್ಕಾಗಿ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರಲ್ಲೂ ಕೂಡ ಈ ಗುಣವಿಲ್ಲ. ಆದರೆ, ಅವರ ವೈಯಕ್ತಿಕ ಪ್ರಾಮಾಣಿಕತೆಯಷ್ಟೆ ಸ್ಥಿರವಾಗಿದೆ, ಅದನ್ನೂ ಬಿಟ್ಟು ಬೇರೇನೂ ಅಲ್ಲ ಎಂದು ಹೇಳಬಹುದು. ಅವರ ಮೊದಲ ಅಧಿಕಾರಾವಧಿ ವಿವಾದಗಳಿಂದ ಕೂಡಿದ್ದರೂ ಅದಕ್ಕೊಂದು ಉದ್ದೇಶವಿತ್ತು. ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಅವರು ಪಟ್ಟುಹಿಡಿದು ಸಹಿ ಹಾಕಿದರು. ಆದರೆ ಭರವಸೆ ನೀಡಿದಂತೆ ಅದರ ಫಲವಿನ್ನೂ ನಮಗೆ ದೊರೆತಿಲ್ಲ. ಇನ್ನು ಎರಡನೆಯ ಅಧಿಕಾರಾವಧಿಯನ್ನು ಒಂದು 'ಉದ್ದೇಶವಿಲ್ಲದ, ಗುರಿ ಇಲ್ಲದ ಅಥವಾ ಸಂದೇಶವಿಲ್ಲದ' ಆಡಳಿತ ಎಂದೇ ಕರೆಯಬೇಕು. ಆ ಸಮಯವಂತೂ ಅವರ ಏಕೈಕ ಉದ್ದೇಶ ಕುರ್ಚಿಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕಷ್ಟೇ ಮೀಸಲಾಯಿತು. ಇದಕ್ಕಾಗಿ ಅವರಿಗೆ ಗಾಂಧಿ ಕುಟುಂಬದ ಪೂರ್ಣ ಬೆಂಬಲವೂ ದೊರಕಿತು. ಒಮ್ಮೆ ಅವರು, "ಗಾಂಧಿ ಕುಟುಂಬದಿಂದ ಆದೇಶಗಳು/ ಸಲಹೆಗಳು ಬಂದವೆಂದರೆ ಸರ್ಕಾರದ ನಿರ್ಧಾರಗಳನ್ನು ತಿರುಗಿಸಲೂ ತಾವು ಸಿದ್ಧ" ಎಂದು ಧೈರ್ಯವಾಗಿಯೇ ಹೇಳಿದ್ದರು.
ಆದರೆ ಆ ಧೈರ್ಯದ ಹಿಂದೆ ಇದ್ದ ಅಧಿಕಾರದಲ್ಲಿ ಮುಂದುವರಿಯುವ ಅವರ ಆಸೆ ಅನಾವರಣವಾಗಿತ್ತು. ಮನಮೋಹನ್ ಸಿಂಗ್ ಅವರನ್ನು 2014ರ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದರೆ ತನ್ನ ಹಾದಿ ಮತ್ತಷ್ಟು ಕಠಿಣಕರವಾಗಲಿದೆ ಎನ್ನುವುದು ಗಾಂಧಿ ಪರಿವಾರಕ್ಕೆ ಅರ್ಥವಾಗಿದೆ. ಕೆಲವೇ ವಾರಗಳ ಹಿಂದೆ ಸೋನಿಯಾ ಗಾಂಧಿಯವರು ಸಾರ್ವತ್ರಿಕ ಚುನಾವಣೆಗಳಿಗೂ ಮುನ್ನ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಲಿದೆ ಎಂದು ಹೇಳಿದರು. ಮನಮೋಹನ್ ಸಿಂಗ್ ಅವರಿಗೆ ಸ್ವಷ್ಟವಾದ ಸೂಚನೆ ಸಿಕ್ಕಿತು. ಹೀಗಾಗಿ ಅವರು ಹಿನ್ನೆಲೆಗೆ ಸರಿಯುವ ಮಾತನಾಡಿದ್ದಾರೆ. ರಾಹುಲ್ ಗಾಂಧಿಯವರು ಭವಿಷ್ಯದ ಆಡಳಿತ ವೈಖರಿಯ ಬಗ್ಗೆ ಮತ್ತು ನೀತಿ ನಿರ್ಣಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ನ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಿಗೆ ಕರೆ ನೀಡಿದರಾದರೂ ಈ ಬಗ್ಗೆ ಪ್ರಧಾನಿಗಳಿಗೆ ಒಂದು ಮಾತನ್ನೂ ತಿಳಿಸಲಿಲ್ಲ. ಚುನಾವಣೆಗಳು ಶುರುವಾಗುವುದಕ್ಕಿಂತ ಮುನ್ನವೇ ಮನಮೋಹನ್ರನ್ನು ಸರಿಸಿ, ರಾಹುಲ್ರನ್ನು ಮುಂದೆ ನಿಲ್ಲಿಸಬೇಕು ಎನ್ನುವ ತಯಾರಿಯಿದು. ಅನೇಕ ಅರ್ಹರಿದ್ದರೂ ಪ್ರಧಾನಿ ಹುದ್ದೆಗೆ ತಮ್ಮನ್ನು ಆಯ್ಕೆ ಮಾಡಿದ ಗಾಂಧಿ ಕುಟುಂಬಕ್ಕಾಗಿ ಅಧಿಕಾರದಲ್ಲಿರುವವರೆಗೆ ತಗ್ಗಿ ಬಗ್ಗಿ ನಡೆದ ನಾಯಕನಾಗಿ ಮನಮೋಹನ್ ಸಿಂಗ್ ಅವರು ಇತಿಹಾಸದ ಪುಟಗಳಲ್ಲಿ ಸೇರಲಿದ್ದಾರೆ. ಇತಿಹಾಸ ತಮ್ಮ ಬಗ್ಗೆ ಕರುಣೆ ತೋರಿಸಬಹುದು ಎಂದು ಮನಮೋಹನ್ ಸಿಂಗ್ ಅವರು ಹೇಳುತ್ತಿದ್ದಾರೆ. ಆದರೆ ಇತಿಹಾಸ ಅವರೊಂದಿಗೆ ನಿರ್ದಯವಾಗಿಯೇ ನಡೆದುಕೊಳ್ಳಲಿದೆ(ಅವರ ಪಕ್ಷ ಮತ್ತು ಕೆಲವು ಗೆಳೆಯರು ನಡೆದುಕೊಂಡರಲ್ಲ ಹಾಗೆ!). ಬಹುಶಃ ಮನಮೋಹನ್ ಸಿಂಗ್ ಅವರು ಇತಿಹಾಸದ ಪುಟಗಳಲ್ಲಿ ದಾಖಲಾಗುವುದು, "ಪ್ರಧಾನಿ ಕುರ್ಚಿಯ ಶ್ರೇಷ್ಠತೆಯನ್ನು ಕಡಿಮೆ ಮಾಡಿದ ವ್ಯಕ್ತಿಯಾಗಿ" ಎಂದು ವಿರೋಧಿಗಳು ಊಹಿಸುತ್ತಿದ್ದಾರೆ.
- ಪ್ರಭು ಚಾವ್ಲಾ
anisikeprabha@gmail.com