ಮಾಹಿತಿ ಇಲ್ಲದೆ ಮಂಕಾಗಿರುವ ಭೂಸ್ವಾಧೀನ ಕಾಯ್ದೆ
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಈ ದೇಶದ ರೈತಾಪಿ ವರ್ಗಕ್ಕೆ ಹರುಷವನ್ನು ತರುವಂತಹ, ಜೊತೆಗೆ ಒಳಗೊಳಗೆ ಒಂದು ರೀತಿಯ ಆತಂಕವನ್ನು ಉಂಟುಮಾಡುವಂತಹ ಮಸೂದೆಯೊಂದು ಭಾರತ ಸರ್ಕಾರ ಜಾರಿಗೆ ತಂದಿದೆ. ಅದರ ಪ್ರಕಾರ 'ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ವಿಧೇಯಕ - 2012' ಎಂದು ಹೆಸರಿಸಿರುವ ಕಾಯಿದೆಯಲ್ಲಿ ಏನಿದೆ? ಯಾರೂ ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಎಲ್ಲಾ ಕಡೆಯಲ್ಲೂ ಆರ್.ಟಿ.ಐ. ಕಾಯಿದೆಯಷ್ಟೆ ಬಲಿಷ್ಠ ಕಾನೂನಾಗಿ ರೈತ ಪರ ಎಂದು ಹೆಗ್ಗಳಿಕೆಯನ್ನು ಹೊಂದಿದ್ದರೂ ಹಳ್ಳಿಯ ಒಬ್ಬೆ ಒಬ್ಬ ರೈತನಿಗೂ 'ಈ ಕಾಯಿದೆಯನ್ನು ಹೀಗೇ ಉಪಯೋಗಿಸಬಹುದು' ಎಂದೇಕೆ ಯಾರೂ ಹೇಳಿಕೆ ಹೊರಡಿಸುತ್ತಿಲ್ಲ?
ಹಿಂದೊಮ್ಮೆ ತೀವ್ರ ವಿರೋಧ ಎದುರಿಸಿದ್ದ 'ಭೂಸ್ವಾಧೀನ, ಪುನರ್ವಸತಿ ಮತ್ತು ಮುರುಸ್ಥಾಪನೆ -2011' ರ ಸುಧಾರಿತ ಕಾನೂನು ಇದು. ಕಾರಣ 1894 ರಲ್ಲಿ ಬ್ರಿಟಿಷ್ ಸರ್ಕಾರ ರೂಪಿಸಿದ್ದ ಕಾನೂನಿನ ಪ್ರಕಾರವೇ ಇವತ್ತಿಗೂ ನಮ್ಮಲ್ಲಿ ಸರ್ಕಾರಿ ಮತ್ತು ಸರ್ಕಾರ ಒಪ್ಪಿತ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಇದು ರೈಲು ನಿಲ್ದಾಣ ಮತ್ತು ಹಳಿಗಳ ನಿರ್ಮಾಣ, ಬಟ್ಟೆ ಗಿರಣಿಗಳ ಕಾರ್ಖಾನೆ ಸಂಬಂಧ ರೂಪಿಸಲಾಗಿತ್ತು. ಇದರಿಂದಾಗಿ ಯಾವತ್ತೂ ಭಾರತದಲ್ಲಿ ಹೆಸರು ಮಾಡಿದ ಯೋಜನೆಗಳು ವ್ಯಾಜ್ಯಗಳಿಂದ ಮುಕ್ತವಾಗಲೇ ಇಲ್ಲ. ಕಾರಣ 2011ರ ಈ ಕಾನೂನು ಚರ್ಚೆಗಿಳಿಯುತ್ತಿದ್ದಂತೆ ಸರ್ವೋಚ್ಚ ನ್ಯಾಯಾಲಯ ಇದನ್ನು ಕುರಿತು ಕಟುವಾಗಿ ಸರ್ಕಾರವನ್ನು, ಹಳೆಯ ಕಾನೂನನ್ನು ಜರೆದು ಹಾಕಿತ್ತು. ಅದರ ಪ್ರಕಾರ,
'ಭಾರತದಲ್ಲಿ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವುದು ಕ್ರೌರ್ಯ. ಬೆಳವಣಿಗೆಗಾಗಿ ಸೂರು ಕಸಿದ ನಂತರ ಅವರಿಗೆ ಮರುವಸತಿಯಂತಹ ಕನಿಷ್ಠ ಸೌಲಭ್ಯ ಒದಗಿಸದಿರುವುದೇ ದುರಂತ. ದೇಶದ ಜಿ.ಡಿ.ಪಿ. ಬೆಳವಣಿಗೆಗೆ ಪಾತ್ರವಾಗುವಂತಹ ಯೋಜನೆಗಳಿಗಾಗಿ ಸ್ವಾಧೀನ ನಡೆದಿದೆಯೇ? ಹೆಚ್ಚಿನಂಶ ಟೌನ್ಶಿಪ್ ನಿರ್ಮಾಣ, ಮಾಲ್ಗಳು ಮತ್ತು ರೆಸಾರ್ಟ್ಗಳಿಗಾಗಿ ಒಕ್ಕಲೆಬ್ಬಿಸಲಾಗಿದೆ ಹೊರತಾಗಿ ಯಾವುದೇ ಬ್ಯಾರೇಜು, ಮಹಾನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಅಥವಾ ವಿದ್ಯುತ್ ಯೋಜನೆಗಳಂತಹ ಪ್ರಗತಿಪರ ಆಯಾಮದಲ್ಲಿ ಎಲ್ಲಿಯೂ ನ್ಯಾಯ ಸಮ್ಮತ ಕ್ರಿಯೆ ನಡೆಯುತ್ತಿಲ್ಲ. ಭೂಮಿ ಕಳೆದುಕೊಂಡ ಯಾವ ಕುಟುಂಬವೂ ಭಾರತದಲ್ಲಿ ಸುಖಿಯಾಗಿಲ್ಲ. ಅವರೆಲ್ಲ ಎರಡ್ಮೂರು ತಲೆಮಾರುಗಳವರೆಗೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದಕ್ಕಿಂತ ಅವರೆಲ್ಲಾ ತುಂಡು ಭೂಮಿಯಲ್ಲಿ ಎಲ್ಲಿದ್ದಾರೋ ಅಲ್ಲಿಯೇ ಸುಖವಾಗಿರಲಿ..' ಎನ್ನುವ ಸುಪ್ರೀಂಕೋರ್ಟ್ನ ಮಾತಿಗೆ ಸಹ ಕಾರ್ಯನಿರ್ವಾಹಕ ಸಂಸದೀಯ ಸ್ಥಾಯಿ ಸಮಿತಿ ಬೆಚ್ಚಿ ಬಿದ್ದು, ಕೂಡಲೆ ಅದನ್ನು ಹಿಂಪಡೆಯಿತಲ್ಲದೆ 2012 ರ ಹೊಸ ವಿಧೇಯಕವನ್ನು ಮಂಡಿಸಿತು.
ಅದೇ ಈಗ 'ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ವಿಧೇಯಕ - 2012' ಕಾಯಿದೆಯಾಗಿ ಜನವರಿ 1, 2014 ರಿಂದ ಜಾರಿಯಾಗಿದೆ. ಅಷ್ಟರ ಮಟ್ಟಿಗೆ ಈ ದೇಶದ ಸರಿ ಸುಮಾರು 11.24 ಕೋಟಿ ರೈತ ಕುಟುಂಬಗಳು ಸುರಕ್ಷತೆಯ ತೆಕ್ಕೆಗೆ ಬಂದಿವೆ. ಇಂತಹ ಅತಿ ಪ್ರಮುಖ ಮಾಹಿತಿಯನ್ನು ವ್ಯಾಪಕವಾಗಿ ಚರ್ಚಿಸುವ ಹಾಗೂ ಇದರ ಎಲ್ಲ ಆಯಾಮಗಳನ್ನು ಜನರಿಗೆ ತಲುಪಿಸುವ ಅಗತ್ಯವನ್ನು ಮಾಧ್ಯಮವು ಅಷ್ಟಾಗಿ ಕಾಳಜಿಗೆ ತೆಗೆದುಕೊಂಡಿಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ.
ಈ ವಿಧೇಯಕದ ಪ್ರಕಾರ ಇನ್ನು ಮೇಲೆ ಈ ಕೆಳಗಿನ ಪ್ರಮುಖ ಅಂಶಗಳ ಪ್ರಕಾರವೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
* ಜಮೀನು ಕಳೆದುಕೊಳ್ಳುವ ಕುಟುಂಬದ ಒಬ್ಬರಿಗೆ ಲಭ್ಯವಾಗುವ ನೌಕರಿಯ ಸೌಲಭ್ಯವನ್ನು ಪೂರೈಸಿದ ನಂತರವೇ ಸ್ವಾಧೀನ ಪ್ರಕ್ರಿಯೆ ನಡೆಯಬೇಕು. * ಅಕಸ್ಮಾತ್ ನೌಕರಿಯನ್ನು ಕುಟುಂಬ ಪಡೆಯಲಿಚ್ಚಿಸಿಲ್ಲವಾದರೆ ಅಥವಾ ತಾಂತ್ರಿಕ ತೊಂದರೆಯಿಂದ ಪೂರೈಸಲು ಅನಾನುಕೂಲವಿದ್ದರೆ ಸ್ವಾಧೀನಕ್ಕೂ ಮುನ್ನ ಆ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರುಪಾಯಿ ಮತ್ತು ಮುಂದಿನ 20 ವರ್ಷಗಳ ಕಾಲ ಪ್ರತಿವರ್ಷ ಈಗಿನ ದರದಂತೆ 24 ಸಾವಿರ ರುಪಾಯಿಯನ್ನು ಆಡಳಿತ ಸ್ಥಳಿಯವಾಗಿ ಕೊಡತಕ್ಕದ್ದು. * ಈ ಕಾಯಿದೆಯ ಪ್ರಕಾರ ಹೀಗೆ ಪ್ರತಿವರ್ಷ ನೀಡುವ ಹಣದ ಮೊಬಲಗನ್ನು ಆಯಾ ವರ್ಷದ ಹಣಕಾಸಿನ ಪರಿಸ್ಥಿತಿಯ ಅನುಗುಣವಾಗಿ ಹೆಚ್ಚು ಮಾಡಲು ಮತ್ತು ಕೇಳುವ ಅಧಿಕಾರ ಆ ಕುಟುಂಬಕ್ಕಿದೆ. * ಸ್ವಾಧೀನ ಪಡಿಸಿಕೊಂಡ ಜಮೀನು ನಗರೀಕರಣದಂತಹ ಕಾರ್ಯಗಳಿಗೆ ಉಪಯೋಗಿಸುವುದಾದರೆ, ಸಂತ್ರಸ್ತ ಕುಟುಂಬಕ್ಕೆ ಅದೇ ಜಮೀನಿನಲ್ಲಿ ಕನಿಷ್ಠ 50 ಚದರ ಗಜ ಅಡಿಯಷ್ಟು ಜಾಗದಲ್ಲಿ ಮನೆ ಕಟ್ಟಿಕೊಡಬೇಕು.
* ಇನ್ನು ಜಮೀನು ಸ್ವಾಧೀನ ಪಡಿಸಿಕೊಳ್ಳುವ ಮುಂಚೆ ಪುನರ್ವಸತಿ ಆಗುವವರೆಗೂ ಆ ಕುಟುಂಬವನ್ನು ಸರ್ಕಾರ, ಜಿಲ್ಲಾಡಳಿತ, ವಹಿಸಿಕೊಂಡ ಸಂಸ್ಥೆ ಹೇಗೆ ಯಾರೆಂದರೆ ಯಾರೂ ಅವರನ್ನು ಒಕ್ಕಲೆಬ್ಬಿಸುವಂತಿಲ್ಲ. * ಇನ್ನು ಭೂಮಿಯ ಪರಿಹಾರವಾಗಿ ಮಾರುಕಟ್ಟೆಯ ದರದ 4 ಪಟ್ಟು (ಗ್ರಾಮೀಣ ಭಾಗಕ್ಕೆ) ಹಾಗು 2 ಪಟ್ಟು (ನಗರ ವಿಭಾಗಕ್ಕೆ) ದರವನ್ನು ನಿಗದಿಗೊಳಿಸಲಾಗಿದ್ದು, ಮಸೂದೆಯ ಸಂಸತ್ ಸ್ಥಾಯಿ ಸಮಿತಿ ಈ ದರದ ಪರಿಷ್ಕರಣೆಯನ್ನು ಎತ್ತಿ ಹಿಡಿದಿದ್ದು ಇದು ಇಲ್ಲಿಯವರೆಗೆ ಸಂಪೂರ್ಣ ಇತ್ಯರ್ಥ ಆಗದಿರುವ ಜಮೀನು ತಕರಾರಿನ ವಾಜ್ಯಗಳಿಗೂ ಅನ್ವಯವಾಗಲಿದೆ ಎನ್ನುವುದು ಗಮನಾರ್ಹ. * ಪ್ರಮುಖವಾಗಿ ಗಮನಿಸಬೇಕಾದ ಮತ್ತು ರೈತ ವರ್ಗವನ್ನು ಸೆಳೆಯಬೇಕಾದ ಅಂಶವೆಂದರೆ ಯಾವುದೇ ರೀತಿಯ ಸರ್ಕಾರಿ ಶುಲ್ಕ. ಸ್ಟಾಂಪ್ ಡ್ಯೂಟಿ, ತೆರಿಗೆ, ಸೇವಾತೆರಿಗೆ ಹೀಗೆ ಯಾವುದೇ ಶುಲ್ಕವನ್ನು ಈ ವ್ಯವಹಾರದಲ್ಲಿ ಸೇರಿಸುವಂತಿಲ್ಲ.
* ಕೃಷಿ ಭೂಮಿಯನ್ನು ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ. ಆ ಸ್ಥಳದಿಂದ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಯಾವುದೇ ಅವಕಾಶ ಇಲ್ಲದಿದ್ದಾಗ, ಹಾಗಂತ ಸ್ಥಾಯಿ ಸಮಿತಿ ಅದನ್ನು ಪುರಸ್ಕರಿಸದಿದ್ದಾಗ, ಸ್ಥಳದ ಅನಿವಾರ್ಯತೆಯನ್ನು ಗಮನಿಸಿಕೊಂಡು ಕೃಷಿ ಭೂಮಿಯ ಸ್ವಾಧೀನಕ್ಕೆ ಅನುಮತಿ ನೀಡಲಾಗುತ್ತದೆ. ಇಲ್ಲದಿದ್ದರೆ ಯಾವುದೇ ಕಮರ್ಶಿಯಲ್ ಕಾರಣಗಳಿಗೆ ಕೃಷಿ ಭೂಮಿಯನ್ನು ಕೇಳುವಂತೆಯೇ ಇಲ್ಲ. ಟ ಹೀಗೆ ಯಾವುದೇ ಭೂಮಿಯನ್ನು ಸ್ವಾಧೀನಕ್ಕೆ ಯತ್ನಿಸುವ ಮತ್ತದಕ್ಕೆ ಅನುಮತಿ ಪಡೆದಿರುವ ಸಂಸ್ಥೆ ಅಥವಾ ಸರಕಾರಿ ಕಾರ್ಯಾಲಯಗಳಿಗೆ ಸ್ಥಳೀಯ ಆಯಾ ಪ್ರದೇಶದ ಜನರ ಒಪ್ಪಿಗೆ ಅವಶ್ಯವಿದ್ದು ಸರಕಾರಿ ಸಮ್ಮತಿಯ ಜಂಟಿ ಯೋಜನೆಯಿದ್ದರೆ ಶೇ.70 ರಷ್ಟು ಮತ್ತು ಸಂಪೂರ್ಣ ಖಾಸಗಿ ಯೋಜನೆ ಇದ್ದರೆ ಶೇ.80 ರಷ್ಟು ಸ್ಥಳೀಯರ ಸಮ್ಮತಿ ಕಡ್ಡಾಯ.* ಇವೆಲ್ಲದಕ್ಕಿಂತಲೂ ಪ್ರಮುಖವಾದ ಅಂಶವೆಂದರೆ ಇನ್ನು ಮುಂದೆ ಹೀಗೆ ಯಾವುದೇ ಕಾರಣಕ್ಕೂ ಭೂ ಸ್ವಾಧೀನದ ಅಧಿಕಾರ ಜಿಲ್ಲಾಡಳಿತ- ಜಿಲ್ಲಾಧಿಕಾರಿ ಅಥವಾ ಇನ್ನಾವುದೇ ಹಂತದ ಸರ್ಕಾರಿ ಅಧಿಕಾರಿಗೆ ಇರುವುದಿಲ್ಲ. ಅವರ ವಿವೇಚನಾ ಅಧಿಕಾರವನ್ನು ಈ ವಿಷಯದಲ್ಲಿ ಮೊಟಕುಗೊಳಿಸಲಾಗಿದ್ದು ಭೂ ಸ್ವಾಧೀನಕ್ಕಾಗಿ ಜಿಲ್ಲಾಧಿಕಾರಿ ಅಧಿಕೃತ ಸೂಚನೆ- ಅಧಿಸೂಚನೆ ಹೊರಡಿಸುವಂತಿಲ್ಲ.
* ಆಣೆಕಟ್ಟೆ, ವಿದ್ಯುತ್ ಕೇಂದ್ರ, ಹೆದ್ದಾರಿ ರೀತಿಯ ಬೃಹತ್ ಯೋಜನೆಗಳಿಗೆ ಸಮುದಾಯ ಒಪ್ಪಿತ ಪುನರ್ವಸತಿಯನ್ನು ಪೂರೈಸಿದ ನಂತರವೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. * ಅಕಸ್ಮಾತ್ ಯೋಜನಾವಧಿ ಒಂದೆರಡು ದಶಕಗಳ ಮಾತ್ರದ್ದಾದರೆ ಅಂಥ ಯೋಜನೆಗಳಿಗೆ ರೈತರು ಭೂಮಿಯನ್ನು ಮಾರಬೇಕೆಂದಿಲ್ಲ. ಒಪ್ಪಂದದ ಮೇರೆಗೆ ಸರಕಾರಿ ನಿಗದಿತ ದರದಲ್ಲಿ ಲೀಸ್ ಮಾಡಬಹುದಾಗಿದೆ. * ಅಕಸ್ಮಾತ್ ಸ್ಥಳೀಯ ಆಡಳಿತ- ಮುನ್ಸಿಪಲ್ಲು ಇತ್ಯಾದಿಗಳು ನಗರಾಭಿವೃದ್ಧಿಗಾಗಿ ಭೂ ಕಬಳಿಕೆ ಮಾಡುವುದಾದರೆ ಆಯಾ ಸಂತ್ರಸ್ತರ ಕುಟುಂಬದ ಅನುಕೂಲಕ್ಕೆ ತಕ್ಕಂತೆ ಪುನರ್ವಸತಿ ಅದೇ ಸ್ಥಳದಲ್ಲಿ ಒದಗಿಸಬೇಕು. * ತುರ್ತುಕಾರ್ಯ, ಪ್ರಕೃತಿ ವಿಕೋಪ, ಯುದ್ಧ ಮುಂತಾದ ರಾಷ್ಟ್ರೀಯ ಮಹತ್ವದ ವಿಷಯದಲ್ಲಿ ಈ ಎಲ್ಲಾ ಕಾಯಿದೆಗಳು ರದ್ದಾಗುತ್ತಿದ್ದು ಜಿಲ್ಲಾಧಿಕಾರಿ ವಿಷೇಶ ಅಧಿಕಾರ ಬಳಸಿ ಭೂ ಸ್ವಾಧೀನಕ್ಕೆ ತೆಗೆದುಕೊಳ್ಳಬಹುದಾಗಿದೆ. ತುರ್ತು ಕಾರ್ಯಾಚರಣೆ ಕೊನೆಯಾದಾಗ ಸರ್ಕಾರ ವಿವೇಚನೆಯ ಮೇರೆಗೆ ಆ ಜಮೀನನ್ನು ಅವರಿಗೆ ಹಿಂದಿರುಗಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕೊಡಬೇಕಾಗುತ್ತದೆ.
* ಭೂ ಸ್ವಾಧೀನ ಮಾಡಿಕೊಂಡು ಒಪ್ಪಿತ ಪರಿಹಾರ ಒದಗಿಸಿದ ಐದು ವರ್ಷದಲ್ಲಿ ಯೋಜನೆ ಆರಂಭಿಸಿ ನಿರೀಕ್ಷಿತ ಹಂತ ತಲುಪದಿದ್ದರೆ ಸ್ವಾಧೀನ ಪಡಿಸಿಕೊಂಡ ಜಮೀನು ಮಾಲೀಕರಿಗೆ ಹಿಂದಿರುಗಿಸಬೇಕು. * 50 ಎಕರೆ ಪಟ್ಟಣ, ನಗರ ವ್ಯಾಪ್ತಿ ಮತ್ತು 100 ಎಕರೆಯಷ್ಟು ಹಳ್ಳಿಗಳ ವ್ಯಾಪ್ತಿಯಲ್ಲಿ ಸ್ವಾಧೀನಕ್ಕೆ ಕೇಳುವ ಖಾಸಗಿ ಸಂಸ್ಥೆಗಳು ಅಂಥಾ ಸಂದರ್ಭದಲ್ಲಿ ಪರಿಹಾರದ ಜೊತೆಗೆ ಸೂಕ್ತವಾದ ಪುನರ್ವಸತಿಯನ್ನು ಕಲ್ಪಿಸಬೇಕಾಗುತ್ತದೆ. * ಗುತ್ತಿಗೆ ಆಧಾರದಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯ ಹಕ್ಕು ಮಾತ್ರ ಆಯಾ ರೈತನ ಬಳಿಗೆ ಉಳಿದಿದ್ದು, ಒಪ್ಪಂದದಂತೆ ಕಾಲಕಾಲಕ್ಕೆ ಅವನ ನಿಗದಿತ ಹಣ ಸಂದಾಯವಾಗಬೇಕು (ಇದು ಪ್ರತಿಪಕ್ಷ ಬಿ.ಜೆ.ಪಿ ಸೇರಿಸಿದ ಪ್ರಮುಖ ಅಂಶ) * 2010 ರಿಂದ ಈಚೇಗೆ ಖರೀದಿಸಿದ ಹೊಸ ವ್ಯವಹಾರಗಳಿದ್ದಲ್ಲಿ ಅದರಲ್ಲಿ ಅರ್ಧ ಪಾಲು ಅದರ ಮೂಲ ಮಾಲೀಕರಿಗೇ ಸಿಗಲಿದೆ. (ಇಂಥಹದ್ದೊಂದು ಮಸೂದೆ ಮಂಡನೆಯಾಗುವ ಸುಳಿವು ದೊರೆತು ಲಕ್ಷದ ಲೆಕ್ಕದಲ್ಲಿ ಭೂಮಿ ಖರೀದಿಸಿರುವ ಭೂ ಮಾಫಿಯವನ್ನು ಮುರಿಯಲು ಯೋಚಿಸಿರುವ ಕಾರಣ, ಮಾಫಿಯಾ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.)
ಈ ರೀತಿ ತುರಾತುರಿಯಲ್ಲಿ ಜನಪ್ರಿಯ (ಲೋಕಸಭೆಯಲ್ಲಿ 216-19 ಮತಗಳಿಂದ ಒಪ್ಪಿತ) ವಿಧೇಯಕ ಜಾರಿಗೆ ತರುತ್ತಿರುವ ಕಾರಣ ಎದುರಿಗಿರುವ ಚುನಾವಣೆ ಎನ್ನುವುದು ಹೌದಾದರೂ ಒಡಿಶಾದಲ್ಲಿ ಪೋಸ್ಕೊ ಮತ್ತು ದೈತ್ಯ ವೇದಾಂತ ಕಂಪೆನಿಗಳು ಅಲ್ಲಿನ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ಹೊರಟು ವಿಫಲವಾದದ್ದು ಸರ್ಕಾರಕ್ಕೊಂದು ಪಾಠವಾಗಿತ್ತು. ಕಾರಣ ಇವತ್ತು ಈ ಕಾನೂನಿನಿಂದ ಸರಿ ಸುಮಾರು 36.27 ಕೋಟಿ ಹೆಕ್ಟೇರ್ ಕೃಷಿ ಭೂಮಿ ಮತ್ತು ಸರಾಸರಿ ಐದು ಜನರನ್ನೊಳಗೊಂಡ 11.84 ಕೋಟಿ ಕುಟುಂಬಗಳು ನೇರ ಲಾಭ ಪಡೆಯಲಿವೆ. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರ ಬಳಿಗೆ ತಲುಪಿಸಬೇಕಾದವರು ಸುಮ್ಮನಿದ್ದಾರೆ. ಮಾಹಿತಿಯೇ ಇಲ್ಲವಾದ ಮೇಲೆ ಸ್ವಾಧೀನದ ಪ್ರಕ್ರಿಯೆ ನ್ಯಾಯಯುತವಾಗಿ ನಡೆಯುತ್ತದೆ ಎನ್ನುವ ಗ್ಯಾರಂಟಿ ಯಾರು ಕೊಡುತ್ತಾರೆ?
- ಸಂತೋಷಕುಮಾರ ಮೆಹೆಂದಳೆ
sjmehandale@npcil.co.in