ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೇಜ್ರಿವಾಲ್ ಹೇಳಿದ ಹಸೀ ಸುಳ್ಳುಗಳು...

ಆಮ್ ಆದ್ಮಿ ಪಕ್ಷವೇ ಈಗ ಭಾರತದಲ್ಲಿ ಚರ್ಚೆಯ ಹೊಸ ವಸ್ತು...

Vishwanath S
Updated On : 9 Jan 2014, 11:33 am

ಆಮ್ ಆದ್ಮಿ ಪಕ್ಷವೇ ಈಗ ಭಾರತದಲ್ಲಿ ಚರ್ಚೆಯ ಹೊಸ ವಸ್ತು. ಟಿ.ವಿ. ಮಾಧ್ಯಮಗಳಂತೂ 24/7 ಅದೇ ಸುದ್ದಿ. ಹೇಗೆ ಆಪ್‌ನಕೆಲವು ಆಂದೋಲನಕಾರರು ರಾಜಕಾರಣಿಗಳಾದರು ಎನ್ನುವ ಭಜನೆಯನ್ನು ಅವು ಮಾಡುತ್ತಲೇ ಇವೆ. 'ಆಮ್ ಆದ್ಮಿ' ಕೊನೆಗೂ ದೆಹಲಿಯನ್ನು ಆಳತೊಡಗಿದ ಎಂದು ಪತ್ರಿಕಾ ಮಾಧ್ಯಮಗಳು ಮುಚ್ಚಟೆಯಿಂದ ಲೇಖನಗಳನ್ನು ಪ್ರಕಟಿಸತೊಡಗಿವೆ. ರಾಜಕೀಯ ಪಂಡಿತರಂತೂ, ಕೇಜ್ರೀವಾಲ್ ಎಂಬ ಅಸಾಧಾರಣ ವ್ಯಕ್ತಿ ಹೇಗೆ ಭಾರತದ ರಾಜಕೀಯ ರಚನೆಯನ್ನೇ ಬದಲಿಸಿ, ನರೇಂದ್ರ ಮೋದಿಯಂಥ ಸ್ಥಾಪಿತ ಶಕ್ತಿಗಳನ್ನು ಕಿತ್ತೆಸೆಯಲಿದ್ದಾರೆ ಎನ್ನುವ ಕುರಿತು ಪ್ರವಚನ ನೀಡತೊಡಗಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿರುವ ಆಪ್‌ನ ಬೆಂಬಲಿಗರು, ಈ ಹೊಸ "ಆವಿಷ್ಕಾರ" ಎಂಥ ಅದ್ಭುತಗಳನ್ನು ಸಾಧಿಸಲಿದೆ ಎನ್ನುವುದರ ವರ್ಣನೆಯಲ್ಲಿ ತೊಡಗಿದ್ದಾರೆ.
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ರಚಿಸಿದ ಒಂದು ವಾರದ ನಂತರ, ಆ ಪಕ್ಷ ಹೇಳಿದ ಸುಳ್ಳುಗಳನ್ನು ಮತ್ತು ಹೊಡೆದ ಯು-ಟರ್ನ್‌ಗಳ ಬಗ್ಗೆ ಪಟ್ಟಿ ಮಾಡಿ ಕಳುಹಿಸಲು ಟ್ವಿಟರ್‌ನಲ್ಲಿ ನಾನು ಸಂದೇಶವೊಂದನ್ನು ಬರೆದೆ. ಕೇವಲ ಎರಡೇ ತಾಸಿನಲ್ಲಿ, ಈ ಲೇಖನವನ್ನು ಬರೆಯುವಷ್ಟು(ಅದಕ್ಕಿಂತಾ ಹೆಚ್ಚಿನ) ಸರಕು ನನಗೆ ದೊರಕಿತು. #AAPL‌ies ಎನ್ನುವ ಹ್ಯಾಷ್‌ಟ್ಯಾಗಿನಡಿಯಲ್ಲಿ ಪ್ರಕಟವಾದ ಆಯ್ದ ಕೆಲ ಟ್ವೀಟುಗಳು ಇಲ್ಲಿವೆ.  
ಕೇಜ್ರಿವಾಲರು ಮೊದಲು ಹೇಳಿದ್ದೇನು, ನಂತರ ಮಾಡಿದ್ದೇನು ಎನ್ನುವ ಪಟ್ಟಿ ಮಾಡಿದ್ದಾರೆ @be‌c‌h​a​a‌ra​:​

1) ಭರವಸೆ: ಶೀಲಾದೀಕ್ಷಿತ್‌ರ ವಿರುದ್ಧದ ಸಾಕ್ಷ್ಯಾಧಾರಗಳು ಸಿದ್ಧವಾಗಿವೆ! ನಾವು ಸರ್ಕಾರ ರಚಿಸಿದ 15 ದಿನಗಳೊಳಗೆ ಆಕೆ ಜೈಲು ಸೇರಲಿದ್ದಾರೆ.
ಈಗ ಹೇಳುತ್ತಿರುವುದು ಮೊದಲು ಬಿಜೆಪಿ ನಮಗೆ ಸಾಕ್ಷ್ಯಾಧಾರಗಳನ್ನು ಒದಗಿಸಲಿ, ನಂತರ ನಾವು ಸೂಕ್ತಕ್ರಮ ಕೈಗೊಳ್ಳುತ್ತೇವೆ.
2. ಭರವಸೆ: ನಿಷ್ಕಳಂಕ ವ್ಯಕ್ತಿಗಳಿಗಷ್ಟೇ ನಾವು ಟಿಕೆಟ್ ಕೊಡುತ್ತೇವೆ
ವಾಸ್ತವ: ಮಾಜಿ ಕಾಂಗ್ರೆಸ್ಸಿಗರಿಗೆ ಮತ್ತು ಬಿಜೆಪಿಯಲ್ಲಿ ಬಂಡಾಯವೆದ್ದವರಿಗೆ ಕೇಜ್ರೀವಾಲ್ ಟಿಕೆಟ್ ಕೊಟ್ಟರು.
3) ಭರವಸೆ: ನಮಗೆ ಸರ್ಕಾರಿ ಭದ್ರತೆ ಬೇಕಿಲ್ಲ!
ವಾಸ್ತವ:ಮೂರು ಸ್ತರದ ಭದ್ರತೆಯನ್ನು ಕೇಜ್ರೀವಾಲ್ ಈಗ ಪಡೆದಿದ್ದಾರೆ. ಪ್ರತಿ ದಿನ ಇದಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚಾಗಲಿದೆ.
4)ಭರವಸೆ: ನಮಗೆ ಅಧಿಕಾರ ದಾಹವಿಲ್ಲ.
ಈಗ ಹೇಳುತ್ತಿರುವುದು: ನಾವು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಈಗ ಹೇಳುತ್ತಿದ್ದಾರೆ.
5)ಭರವಸೆ:  ಸರ್ಕಾರ ರಚನೆಯಾದ 15 ದಿನದಲ್ಲಿ ಲೋಕಪಾಲ್ ಮಸೂದೆಯನ್ನು ಜಾರಿಗೆ ತರುತ್ತೇವೆ
ಈಗ ಹೇಳುತ್ತಿರುವುದು: ಆ ಕೆಲಸ ಮಾಡಲು ನಮ್ಮ ಬಳಿ ಅಧಿಕಾರದ ಅಗತ್ಯ ಮೂಲಾಂಶಗಳಿಲ್ಲ.
6) ಭರವಸೆ:  ಪಕ್ಷದ ಸದಸ್ಯರೂ ಒಂದು ವೇಳೆ ಅನುಚಿತ ವರ್ತನೆ ತೋರಿದರೆ, ಮುಲಾಜಿಲ್ಲದೆ ಅವರನ್ನು ಹೊರಹಾಕುತ್ತೇವೆ
ವಾಸ್ತವ: ಶಾಜಿಯಾ ಇಲ್ಮಿ ಮತ್ತು ಕುಮಾರ್ ವಿಶ್ವಾಸ್ ರಸೀದಿ ಇಲ್ಲದೆಯೇ ಹಣ ಕೇಳಲು ಹೋಗಿ ಸಿಕ್ಕಿಬಿದ್ದರು. ಆದರೂ ಅವರನ್ನು ಕೇಜ್ರಿವಾಲ್ ಪಕ್ಷದಲ್ಲೇ ಉಳಿಸಿಕೊಂಡಿದ್ದಾರೆ.
7) ಭರವಸೆ: ನಮಗೆ ದೇಶ ಮೊದಲು, ಜಾತಿ ಅಥವಾ ಧರ್ಮವಲ್ಲ
ವಾಸ್ತವ: ಹಿಂದುಗಳ ವಿರುದ್ಧ ದೌರ್ಜನ್ಯವೆಸಗಿ, 32 ಕೇಸುಗಳನ್ನು ಎದುರಿಸುತ್ತಿರುವ ರಜಾರನ್ನು ಭೇಟಿ ಮಾಡಿ, ಅವರ ಬೆಂಬಲ ಕೋರುತ್ತಾರೆ ಕೇಜ್ರೀವಾಲ್. ಇಶ್ರತ್ ಜಹಾನ್‌ಳ ಮೇಲಾದದ್ದು ನಕಲಿ ಎನ್ಕೌಂಟರ್ ಎಂದು ಹೇಳಿ ಒಂದು ಕೋಮಿಗೆ ಪತ್ರ ಬರೆದು, ಮೋಹನ್ ಚಾಂದ್ ಶರ್ಮಾರನ್ನು ಅವಮಾನಿಸುತ್ತಾರೆ.
​@s‌ha‌ks‌in‌g‌h​ ಮಾಡಿದ ಪಟ್ಟಿ: ಕಾಗೆ ಹಾರಿಸಿ ಕೇಜ್ರೀವಾಲ್ ಆಗಬಹುದು. ಕೇಜ್ರೀವಾಲ್ ಹೇಳಿದ ಸುಳ್ಳುಗಳು:
1) ಬಿಜೆಪಿ ಜನಲೋಕಪಾಲನ್ನು ಬೆಂಬಲಿಸಲಿಲ್ಲ 2) ನಾನು ಐಟಿ ಕಮೀಷನರ್ ಆಗಿದ್ದೆ 3)ನರೇಂದ್ರ ಮೋದಿಯವರ ರ್ಯಾಲಿಯೊಂದಕ್ಕೆ 1500 ಕೋಟಿ ರುಪಾಯಿ ಖರ್ಚಮಾಡಲಾಗಿದೆ(ಇದಕ್ಕೆ ಕೇಜ್ರೀವಾಲ್ ಆಧಾರವನ್ನೂ ಕೊಡಲಿಲ್ಲ) 4) ನನ್ನ ಚಾರಿತ್ರ್ಯಹರಣ ಮಾಡುವುದಕ್ಕೆ ಬಿಜೆಪಿ ಮಾಧ್ಯಮಗಳಿಗೆ 1200 ಕೋಟಿ ರುಪಾಯಿ ಕೊಟ್ಟಿದೆ(ಈ ಮಾತಿಗೂ ಅವರು ಸಾಕ್ಷ್ಯವೊದಗಿಸಿಲ್ಲ) 5)ಮೌಲಾನಾ ತೌಕೀರ್ ಎಂದಿಗೂ ಹೆಣ್ಣುಮಕ್ಕಳು ಮೇಲೆ ಫತ್ವಾ ಹೊರಡಿಸಿಲ್ಲ(ಹಾಗಿದ್ದರೆ ತಸ್ಲೀಮಾ ನಸ್ರೀನ್ ವಿರುದ್ಧ ಫತ್ವಾ ಹೊರಡಿಸಿದವರ್ಯಾರು ಕೇಜ್ರೀವಾಲರೇ?) 6) ಬಿಜೆಪಿ ನಮಗೆ ಬೇಷರತ್ ಬೆಂಬಲ ಕೊಡುವುದಾಗಿ ಹೇಳಿತು 7) ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಇನ್ನೊಂದು ಪಕ್ಷದ ಬೆಂಬಲ ಪಡೆಯುವುದಿಲ್ಲ.
@RP‌r​a​s​ad_7​ ಕೇಳುತ್ತಾರೆ: ಬಿಜೆಪಿ ತಮಗೆ ಬೆಂಬಲ ನೀಡಲು ಸಿದ್ಧವಾಗಿತ್ತು ಎಂದು ಜನರಿಗೆ ಆಪ್ ಹೇಳುತ್ತಿರುವುದೇಕೆ? ಅದಕ್ಕೆ ಬೇಷರತ್ ಬೆಂಬಲ ನೀಡಲು ಮುಂದಾಗಿದ್ದು ಕೇವಲ ಕಾಂಗ್ರೆಸ್ ಅಲ್ಲವೇ? ಹೀಗಿದ್ದರೂ ಕೂಡ ಎಸ್‌ಎಮ್‌ಎಸ್ ಜನಮತ ಸಂಗ್ರಹದ ವೇಳೆ ಕೇಜ್ರೀವಾಲರು, "ನಮ್ಮ ಪಕ್ಷ ಯಾರ ಬೆಂಬಲ ಪಡೆಯಬೇಕು, ಕಾಂಗ್ರೆಸ್/ ಬಿಜೆಪಿ? " ಎಂದು ಕೇಳುತ್ತಾರೆ!
@nat‌i‌on​a​l‌i​ze‌r ಆಪ್‌ನ ಸಮಯ ಸಾಧಕತನವನ್ನು ಹೊರಗೆಡವಿದ್ದಾರೆ. ಅವರು ಹೇಳುತ್ತಾರೆ: "ಕೆಲ ದಿನಗಳ ಹಿಂದೆ 'ಆಪ್‌' ತನ್ನ ಜಾಲತಾಣದಲ್ಲಿ, "ಪೋಲ್‌ಖೋಲ್(ಬಂಡವಾಳ ಬಯಲು)" ಎನ್ನುವ ಶೀರ್ಷಿಕೆಯಡಿಯಲ್ಲಿ ಹೇಗೆ ಶೀಲಾ ದೀಕ್ಷಿತ್‌ರ ಸರ್ಕಾರ ಕೊಡುತ್ತಿರುವ ವಿದ್ಯುತ್ ಮತ್ತು ನೀರು ಸರಬರಾಜಿನ ದರ ಅತಿ ಹೆಚ್ಚಾಯಿತು ಎನ್ನುವ ಬಗ್ಗೆ ಲೇಖನವೊಂದನ್ನು ಪ್ರಕಟಿಸಿತ್ತು. ಆದರೆ ಈಗ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸುತ್ತಿದ್ದಂತೆ, ಆ ಲೇಖನವನ್ನು ತನ್ನ ಜಾಲತಾಣದಿಂದ ಅಳಿಸಿಹಾಕಿದೆ."
@d‌rea​m​t‌h​a​t​w‌o‌r‌ks​ ಕೇಳುತ್ತಾರೆ: 7 ದಿನದಲ್ಲಿ ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಪರಿಶೀಲಿಸಲಿದ್ದೇವೆ ಎಂದು ಕೇಜ್ರೀವಾಲ್ ಹೇಳಿದ್ದರು. ಆಗಲೇ 7 ದಿನಗಳು ಕಳೆದುಹೋದವು., ಈಗ ಏನಾಯಿತು ಮಿ. ಕ್ಲೀನ್?
@‌iam​s‌r‌i​v​a​t​s​anv ಎನ್ನುವವರು T‌he F‌ree Wa​te‌r-​‌N‌ot s‌o f‌ree,​​ af​te‌r all​ ಎನ್ನುವ ಶೀರ್ಷಿಕೆಯಡಿಯಲ್ಲಿ, ದೆಹಲಿಯ ನೀರು ಸರಬರಾಜಿನ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದಾರೆ. ಅವರನ್ನುತ್ತಾರೆ: "ದೆಹಲಿಯಲ್ಲಿ ನೀರು ಸರಬರಾಜು ಇಲ್ಲದೇ ಇರುವ ಕುಟುಂಬಗಳ ಸಂಖ್ಯೆ 1,34,200(ಶೇ. 38.6). ಆ ನಗರದಲ್ಲಿ 17.3ಪ್ರತಿಶತದಷ್ಟು ಅನಧಿಕೃತ ಏರಿಯಾಗಳಿವೆ. ಈ ಏರಿಯಾಗಳು ಜಲ ನಿಗಮ ಪ್ರತಿದಿನ ಕೊಡುವ 666 ಲೀಟರ್ ಉಚಿತ ನೀರಿನ ಯೋಜನೆಯಲ್ಲಿ ಬರುವುದಿಲ್ಲ. ಹಾಗಾಗಿ ಈ ಸಬ್ಸಿಡಿ ಸಿಗುವುದು ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗಗಳಿಗೆ ಮಾತ್ರ. ಅಂದರೆ ಸಬ್ಸಿಡಿ/ ಉಚಿತ ಸ್ಕೀಮುಗಳ ಅವಶ್ಯಕತೆಯಿಲ್ಲದ 48.6 ಪ್ರತಿಶತ ಜನರಿಗೆ ಉಚಿತವಾಗಿ ನೀರು ಸಿಗುತ್ತದೆ.
ಪ್ರಸಕ್ತ ದೆಹಲಿ ಜಲ ನಿಗಮದ ವಾರ್ಷಿಕ ಆದಾಯ 532 ಕೋಟಿ ರು. ಅದರಲ್ಲಿ ಸಬ್ಸಿಡಿ(ಶ್ರೀಮಂತರಿಗೆ) ರೂಪದಲ್ಲೇ 406 ಕೋಟಿ ರುಪಾಯಿ ಖರ್ಚಾಗಿ ಹೋಗುತ್ತದೆ. ಇನ್ನುಳಿದ 38.6 ಪ್ರತಿಶತ ಜನಸಂಖ್ಯೆಗೆ ಹೊಸ ಸಂಪರ್ಕ ಕಲ್ಪಿಸಲು ಮತ್ತು ನೀರು ಸೋರಿಕೆ ತಡೆಯಲು ಹಣವೇ ಉಳಿಯುವುದಿಲ್ಲ. ಹಾಗಾಗೇ 'ಆಪ್‌' ನೀರು ಮಾಫಿಯಾದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಒಟ್ಟಾರೆ ಎಂದಿನಂತೆ ಉಚಿತ ನೀರು ಸರಬರಾಜಿನ ಲಾಭ ಪಡೆಯುವುದು ಶ್ರೀಮಂತವರ್ಗವಷ್ಟೆ! ರಾಬಿನ್‌ಹುಡ್ ಶ್ರೀಮಂತರಿಂದ ಹಣ ಕಸಿದುಕೊಂಡು ಬಡವರಿಗೆ ಹಂಚುತ್ತಿದ್ದ, ಕೇಜ್ರೀವಾಲ್ ಅದಕ್ಕೆ ತದ್ವಿರುದ್ಧ ಕೆಲಸವನ್ನು ಮಾಡುತ್ತಿದ್ದಾರೆ.
@pa​w​and​ande ಹೇಳುತ್ತಾರೆ: ರಾಖಿ ಬಿರ್ಲಾ ತಮ್ಮ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದರೆಂದು ಹೇಳಿ ಸುದ್ದಿಯಾದರು. ಆದರೆ ನಿಜಕ್ಕೂ ನಡೆದದ್ದೇ ಬೇರೆ. ಕ್ರಿಕೆಟ್ ಚೆಂಡು ಬಂದು ಅವರ ಕಾರಿಗೆ ಬಡೆದಿತ್ತಷ್ಟೇ, ಚೆಂಡು ಹೊಡೆದ ಹುಡುಗನೂ ಅವರಿಗೆ ಕ್ಷಮೆ ಕೇಳಿದ್ದ. ಆದರೂ ಕೇಜ್ರಿವಾಲ್‌ರ ಈ ಆಪ್ತೆ, ಇಷ್ಟೆಲ್ಲಾ ನಾಟಕವಾಡಿ, ಎಫ್‌ಐಆರ್ ದಾಖಲಿಸಿದ್ದೇಕೆ?
***
ಜಮೀನು ಒತ್ತುವರಿ ಮಾಡಿಕೊಂಡು, ಚರ್ಚೆಗೀಡಾಗಿರುವ ಆಮ್ ಆದ್ಮಿ ಪಕ್ಷದ ಮತ್ತೊಬ್ಬ ನಾಯಕಿ ಅಂಜಲಿ ದಮಾನಿಯಾ, ಸಾಮಾಜಿಕ ಮಾಧ್ಯಮಗಳಲ್ಲಿ 'ಭೂ ತಿಮಿಂಗಿಲ' ಎಂದೇ ಕುಖ್ಯಾತರಾಗಿದ್ದಾರೆ. ಅವರ ಮೇಲೆ ಆರೋಪ ಬಂದಾಗ ಕೇಜ್ರೀವಾಲ್, "ಅಂಜಲಿ ದಮಾನಿಯಾ ಆಮ್ ಆದ್ಮಿ ಪಕ್ಷದ ಯಾವ ಸ್ಥಾನವನ್ನೂ ನಿರ್ವಹಿಸುತ್ತಿಲ್ಲ. ಅವರು ನಮ್ಮವರಲ್ಲ ಎಂದ ಮೇಲೆ, ಅವರನ್ನು ತೆಗೆದುಹಾಕುವುದು ಹೇಗೆ?" ಎಂದು ಕೇಳಿದ್ದರು. ಈಗ ಇದೇ ಅಂಜಲಿ, ಮಹಾರಾಷ್ಟ್ರದ ನಾಗ್ಪುರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ!
***
ಚುನಾವಣಾ ಆಯೋಗದ ಕ್ಲೀನ್ ಚಿಟ್: ಶಾಜಿಯಾ ಇಲ್ಮಿ, ಕುಮಾರ್ ವಿಶ್ವಾಸ್ ಮತ್ತು ಇನ್ನುಳಿದವರು ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರು, ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಿ ತಮಗೆ ಕ್ಲೀನ್ ಚಿಟ್ ಕೊಟ್ಟಿದೆ ಎಂದು ಕೇಜ್ರೀವಾಲ ಹೇಳಿದರು. ಆದರೆ ಕೇಜ್ರೀವಾಲ್ ಬೊಗಳೆ ಬಿಟ್ಟಿದ್ದಾರೆ ಎನ್ನುವುದನ್ನು  @‌ram​e​s‌hn​s​w​a​my ಸಾಕ್ಷಿ ಸಮೇತ ಸಾದರಪಡಿಸುತ್ತಾರೆ. ಖುದ್ದು ಚುನಾವಣಾ ಆಯುಕ್ತ ಹೆಚ್.ಎಸ್. ಬ್ರಹ್ಮಾ ಅವರೇ ತಾವಿನ್ನೂ ಆಪ್‌ಗೆ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
***
ಸರ್ಕಾರಿ ಕಾರನ್ನು ತಮ್ಮ ಪಕ್ಷವೆಂದಿಗೂ ಬಳಸದು ಎಂದು ಹಿಂದೊಮ್ಮೆ ಕೇಜ್ರೀವಾಲ್ ಟ್ವೀಟ್ ಮಾಡಿದ್ದರು. ಈಗವರ ಪಕ್ಷದ ಬಹುತೇಕರು ಐಷಾರಾಮಿ ಕಾರುಗಳಲ್ಲಿ ಕಾಲು ಚಾಚಿ ಪಯಣಿಸುತ್ತಿದ್ದಾರೆ. ಈ ಕುರಿತು ಮತ್ತೆ ವರಸೆ ಬದಲಿಸಿ ಟ್ವೀಟ್ ಮಾಡಿದ್ದಾರೆ ಕೇಜ್ರೀವಾಲ್. ಅವರು ಈ ಬಾರಿ, "ನಾವು ಸರ್ಕಾರಿ ಸಾರಿಗೆಯನ್ನೇ(ಕಾರುಗಳನ್ನು) ಬಳಸುವುದಿಲ್ಲ ಎಂದು ಎಂದಿಗೂ ಹೇಳಿಲ್ಲ" ಎನ್ನುತ್ತಾರೆ.
@‌Mma​s​a​l​a​_‌c‌h​a​as ಈ ಸುಳ್ಳನ್ನು ವೀಡಿಯೋವೊಂದನ್ನು ಪೋಸ್ಟ್ ಮಾಡಿ ಬೆತ್ತಲೆಗೊಳಿಸಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ(ಕೇಜ್ರೀವಾಲರನ್ನು ಹೊರತುಪಡಿಸಿ)  ಉಳಿದ ನಾಯಕರಿಗೆ ಟೊಯೋಟಾ ಇನ್ನೋವಾ ಕಾರುಗಳನ್ನು ಕೊಡಲಾಗಿದೆ. ಮನೀಷ್ ಸಿಸೋಡಿಯಾ, ರಾಖಿ ಬಿರ್ಲಾ ಮತ್ತು ಸೌರಭ್ ಭಾರದ್ವಾಜ್ ದೆಹಲಿ ವಿಧಾನಸಭೆಗೆ ಇನೋವಾ ಕಾರಿನಲ್ಲಿಯೇ ಬರುತ್ತಿದ್ದಾರೆ. ಈ ಬಗ್ಗೆ ಕೇಜ್ರಿವಾಲರನ್ನು ಪ್ರಶ್ನಿಸಿದಾಗ ಅವರು, "ನಮ್ಮ ಪಕ್ಷದ ಮಂತ್ರಿಗಳು ಕಾರು ಬಳಸುವುದಿಲ್ಲ ಎಂದು ನಾವು ಹೇಳಿಲ್ಲವಲ್ಲ?" ಎಂದು ಮರುಪ್ರಶ್ನಿಸುತ್ತಾರೆ!
ಕೇಜ್ರೀವಾಲ್ ಇದೇ ರೀತಿ ಎಷ್ಟು ಸುಳ್ಳುಗಳನ್ನು ಹೇಳಿದ್ದಾರೆ ಎನ್ನುವುದರ ಬಗ್ಗೆ ನೂರಾರು ಟ್ವೀಟ್‌ಗಳು ನನಗೆ ಬಂದಿವೆ. ಆದರೆ ಈಗ ಇಷ್ಟು ಸಾಕು ಎನಿಸುತ್ತಿದೆ! ನಿಜಕ್ಕೂ ಇಂಥ ಊಸರವಳ್ಳಿ ರಾಜಕಾರಣಿಗಳನ್ನು ನಂಬಬೇಕೇ?!
 
- ಕಿರಣ್ ಕುಮಾರ್. ಎಸ್
kirankumars@hotmail.‌c‌om

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement