ದೇಶದ ಬಗ್ಗೆ ಅರಿವಿಲ್ಲದವರು, ದೇಶವಾಳುತ್ತಾರಂತೆ!
ಭಾರತದ ಗಡಿರೇಖೆಗಳ ಮಹತ್ವ ಯಾರಿಗೆ ತಿಳಿದಿಲ್ಲವೋ, ತಮ್ಮವರ ಮನೆ...
ಭಾರತದ ಗಡಿರೇಖೆಗಳ ಮಹತ್ವ ಯಾರಿಗೆ ತಿಳಿದಿಲ್ಲವೋ, ತಮ್ಮವರ ಮನೆ ನೆಲಸಮವಾಗುವುದರ ನೋವು, ತಮ್ಮ ಭಾಷೆ, ನೆಲ, ಸಂಸ್ಕೃತಿ, ಸಂಗೀತ ಮತ್ತು ಸಂತಸವನ್ನು ಕಳೆದುಕೊಳ್ಳುವುದರ ವೇದನೆಯ ಅರಿವು ಯಾರಿಗೆ ಇರುವುದಿಲ್ಲವೋ, ಯಾರು ದೇಶದ ಒಂದು ಪ್ರಮುಖ ಅಂಗವನ್ನು ಸೈಟ್ನಂತೆ ಮಾರುವ/ ದಾನ ಕೊಡುವ ಮಾತನಾಡುತ್ತಾರೋ, ಅಂಥವರು ಅಂಗಡಿ ತೆರೆದುಕೊಂಡು ವ್ಯಾಪಾರ ಮಾಡುವುದೊಳಿತು. ದೇಶ ಮುನ್ನಡೆಸುವ ಅರ್ಹತೆ ಅವರಿಗಿರುವುದಿಲ್ಲ.
ದೇಶವೆಂದರೆ ಕೇವಲ ರೊಟ್ಟಿ, ಬಟ್ಟೆ ಮತ್ತು ಮನೆಯಷ್ಟೇ ಅಲ್ಲ. ಅಷ್ಟೇ ಆಗಿದ್ದರೆ ಸೋವಿಯತ್ ಸಂಘ ಮುರಿದುಕೊಂಡು ನೆಲಕ್ಕೆ ಬೀಳುತ್ತಿರಲಿಲ್ಲ. ಕೇವಲ ಅಧಿಕಾರ ಮತ್ತು ಆಹಾರದಿಂದ ದೇಶವೊಂದರ ನಿರ್ಮಾಣವಾಗುವುದು ಸಾಧ್ಯವಿತ್ತೆಂದರೆ ಬಾಂಗ್ಲಾದೇಶ ಹುಟ್ಟಿಕೊಳ್ಳುತ್ತಿರಲಿಲ್ಲ ಮತ್ತು ಕೊಟ್ಯಂತರ ಡಾಲರ್ ಬಾಚಿಕೊಂಡರೂ ಕೂಡ ಅಘ್ಘಾನಿಸ್ತಾನಅಭದ್ರ ಮತ್ತು ಅಶಾಂತ ನೆಲೆಯಾಗಿ ಉಳಿಯುತ್ತಿರಲಿಲ್ಲ.
ದೇಹಕ್ಕೆ ಅನ್ನ, ವಸ್ತ್ರ ಮತ್ತು ಸೂರು ಬೇಕೇ ಬೇಕು. ಹಾಗಂತ ಮನುಷ್ಯ ಕೇವಲ ಹಸಿವು ಮತ್ತು ಭೋಗದ ಯಂತ್ರವಷ್ಟೇ ಅಲ್ಲವಲ್ಲ? ಮನುಷ್ಯ ಅಂದರೆ ಮನಸ್ಸು, ಮನುಷ್ಯ ಅಂದರೆ ಚೇತನ. ಆತನ ಸ್ವಭಾವವೇ ಆತನನ್ನು ನಿರ್ದಿಷ್ಟ ಉದ್ದೇಶದತ್ತ ಕೈಹಿಡಿದು ಕರೆದೊಯ್ಯುತ್ತದೆ. ಇದೇ ಕಾರಣಕ್ಕಾಗಿಯೇ ನಾವು ಹಸಿದಿದ್ದರೂ, ಬಾಯಾರಿದ್ದರೂ, ಬಡವರಾಗಿದ್ದರೂ ಕೂಡ ಸ್ವಾತಂತ್ರ್ಯ ಮತ್ತು ಲೋಕತಂತ್ರವನ್ನು ಬಯಸುತ್ತೇವೆ. ಒಂದು ವೇಳೆ ಬ್ರಿಟಿಷರು ಮೃಷ್ಠಾನ್ನ ಹಾಕಿದ್ದರೂ ನಾವು ಅವರಡಿಯಲ್ಲಿ ಸುಖವಾಗಿ ಬಾಳುತ್ತಿರಲಿಲ್ಲ.
ಕೆಲವರು ನೀರಿನ ಗಡಿಗೆಗಳು ಮತ್ತು ವಿದ್ಯುತ್ ಕಂಬಗಳನ್ನು ಹಾಕಿ ತಾತ್ಕಾಲಿಕ ಶಹಬ್ಬಾಸ್ಗಿರಿ ಪಡೆಯುತ್ತಿದ್ದಾರೆ. ಹಾಗಂತ ಇದರಲ್ಲಿ ತಪ್ಪೇನೂ ಇಲ್ಲ. ಇದು ಕೆಲಸ ಮಾಡದೆ ಕುಳಿತ ಮೈಗಳ್ಳ ನಾಯಕರಿಗೆ ಸರಿಯಾದ ಪಾಠವೂ ಹೌದು. ಆದರೆ ನೀರು ಕೊಟ್ಟೆ, ಕಂಬ ನೆಟ್ಟೆ ಎಂದು ಮೋಡದ ಮೇಲೆ ತೇಲಾಡುತ್ತಿರುವವರು ತಾವು ಯಾವ ವಿಷಯದ ಬಗ್ಗೆಯಾದರೂ ಮಾತನಾಡಬಹುದು ಎಂದು ಬೀಗುತ್ತಿದ್ದಾರಲ್ಲ, ಅದು ತಪ್ಪು. ಕಾಶ್ಮೀರದ ವಿಷಯವನ್ನು ನಿರ್ಧರಿಸಲು ಅವರ್ಯಾರು? ಅವರಿಗ್ಯಾವ ಅರ್ಹತೆಯಿದೆ? ಅಲ್ಲ, ಈ ದೇಶ ನಗರಪಾಲಿಕಾ ಅಧಿಕಾರಿಗಳ ಟೌನ್ಹಾಲ್ ಆಗಬೇಕೋ ಅಥವಾ ಆತಂಕ, ಅರ್ಥವ್ಯವಸ್ಥೆ, ಗಡಿ ಸುರಕ್ಷೆ ಪಾಕಿಸ್ತಾನದ ನೆರಳಿನಲ್ಲಿ ಬದುಕುತ್ತಿರುವ ದೇಶದ್ರೋಹಿಗಳ ವಿರುದ್ಧ ಕಠಿಣ ನಿಲುವ ತಾಳಬಲ್ಲ ನಾಯಕರಿಂದ ಮುನ್ನಡೆಯಬೇಕೋ? ದುರ್ದೈವವೆಂದರೆ ಇವೆರಡೂ ಗುಣವಿಲ್ಲದವರೇ ಇಂದು ದೇಶವನ್ನು ನಡೆಸುತ್ತಿದ್ದಾರೆ. ದೇಶದ್ರೋಹ ಮತ್ತು ದೇಶಭಕ್ತಿಯ ನಡುವೆ ವ್ಯತ್ಯಾಸ ತಿಳಿಯದವರು ದೇಶದ ಭವಿಷ್ಯವನ್ನು ಹೇಗೆ ರೂಪಿಸಬಲ್ಲರು?
ಭಾರತ ಇಂದು ನಾಲ್ಕೂ ಕಡೆಯಿಂದ ಅಪಾಯವನ್ನು ಎದುರಿಸುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವ ಕೆಲಸಗಳೂ ಜರುಗುತ್ತಿಲ್ಲ, ಸೇನೆಯನ್ನು ಭ್ರಷ್ಟಾಚಾರದ ಕಾರ್ಮೋಡ ಕವಿದಿದೆ, ಅಮೆರಿಕದಿಂದ ಹಿಡಿದು ಮಾಲ್ಡೀವ್ನಂಥ ರಾಷ್ಟ್ರಗಳೂ ನಮ್ಮ ದೇಶವನ್ನು ಅಪಹಾಸ್ಯ ಮಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಆಟೋದಲ್ಲಿ ಅಥವಾ ಮೆಟ್ರೋ ರೈಲುಗಳಲ್ಲಿ ಚಕ್ಕರ್ ಹೊಡೆಯುತ್ತಾ ನಾಟಕವಾಡುವವರಿಗಿಂತ ಹೆಚ್ಚಿನ ಗಮನ, ಪ್ರಾಮುಖ್ಯವನ್ನು ರಾಷ್ಟ್ರೀಯತೆಯ ಭಾವನೆಗೇ ಕೊಡಬೇಕಾಗುತ್ತದೆ.
ಇಂದು ಈ ದೇಶ, ಮೊಘಲ್ ಸುಲ್ತಾನರ ಕೊನೆಯ ದಿನಗಳನ್ನು ನೆನಪಿಸುತ್ತಿದೆ. ಆ ಸಮಯದಲ್ಲಿ ಸುಲ್ತಾನರನ್ನು 'ಶಹನ್ಶಾಹೇ ಹಿಂದ್' ಎಂದು ಕರೆಯಲಾಗುತ್ತಿತ್ತು. ಹಾಗೆ ಕರೆದರೂ ಕೂಡ ಆ ಶಹನ್ಶಾಗಳ ಆಜ್ಞೆಯನ್ನು ಕೇಳುವವರೇ ಇರಲಿಲ್ಲ !
ಪ್ರತಿದಿನ ನಡೆಯುವ ರೈಲು ದುರ್ಘಟನೆಗಳಲ್ಲಿ ಅಮಾಯಕರು ಸಾವನಪ್ಪುತ್ತಿದ್ದಾರೆ. ದಂಗೆಗಳಿಂದಾಗುವ ಗಾಯ ಕಡಿಮೆಯಾಗುವ ಮೊದಲೇ ನಮ್ಮ ಸೆಕ್ಯುಲರ್ ಮಂತ್ರಿವರ್ಯರು ಯುರೋಪ್ ಪ್ರವಾಸಕ್ಕೆ ಕುಣಿಯುತ್ತಾ ಹೊರಟಿದ್ದಾರೆ. ಈ ಹಳೆಯ, ಅರ್ಧಂಬರ್ಧ ತಿಳಿದುಕೊಂಡಿರುವ ನಾಯಕರು ದೇಶಕ್ಕೆ ಅಂಟಿಕೊಂಡಿರುವ ದುರ್ದೆಸೆ ಮತ್ತು ದೌರ್ಭಾಗ್ಯದ ಪ್ರತೀಕಗಳಾಗಿ ಗೋಚರಿಸುತ್ತಿದ್ದಾರೆ. ದೊಡ್ಡ ದೊಡ್ಡ ರಾಷ್ಟ್ರೀಯ ನೇತಾರರ ಅಹಂಕಾರ ಮತ್ತು ಹಣದಾಸೆಯಿಂದ ರೋಸಿಹೋದ ಜನ ಯುವ ಪರಿವರ್ತನಾವಾದಿಗಳ ಮೇಲೆ ವಿಶ್ವಾಸವಿಟ್ಟರೆ, ಅವರು ಕಾಶ್ಮೀರದ ವ್ಯಾಪಾರಕ್ಕಿಳಿದು, ಆತಂಕವಾದಿಗಳನ್ನು ತಮ್ಮ ಓಟ್ ಬ್ಯಾಂಕ್ ಮಾಡಿಕೊಳ್ಳಲು ಓಡಾಡತೊಡಗಿದ್ದಾರೆ. ಇದು ಜನತೆಯ ವಿಶ್ವಾಸಕ್ಕೆ ಮಾಡಿದ ಅಪಹಾಸ್ಯವಲ್ಲವೇ? ಆದರೆ ಇದಕ್ಕೆ ಉತ್ತರವನ್ನು ಕೀಳಮಟ್ಟದ ಹೋರಾಟದಿಂದಲ್ಲ, ಬದಲಾಗಿ ತರ್ಕ ಮತ್ತು ಭದ್ರತೆಯಿಂದ ನಮ್ಮ ನೆಲೆಯನ್ನು ಗಟ್ಟಿಗೊಳಿಸುವ ಮೂಲಕ ನೀಡಬೇಕು.
ಹೊಡೆದಾಟಗಳನ್ನು ಹಚ್ಚಿ ಅದರಿಂದ ಲಾಭಮಾಡಿಕೊಳ್ಳುವ ಕುಬೇರರು ಮತ್ತು ಜಾತಿವಾದಿ ಸಾಮಂತಶಾಹಿಗಳಿಂದ ಜನರು ಜಿಗುಪ್ಸೆಗೊಂಡಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ಲೋಕತಂತ್ರ ಇಂದು ಯಾವ ಪಕ್ಷದಲ್ಲಿದೆ ಹೇಳಿ? ಕೆಲವರಂತೂ ಪ್ರಭಾವಿ ನಾಯಕರ ಸುತ್ತ ಟೆಂಟ್ ಹಾಕಿ ಅಲ್ಲಿಂದಲೇ ಪಕ್ಷವನ್ನು ನಡೆಸುತ್ತಾರೆ. ಸಾಧಾರಣ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಮತದಾರರೊಂದಿಗೆ ಇವರು ಯಾವುದೇ ಸಂಬಂಧವಿಟ್ಟುಕೊಳ್ಳುವುದಿಲ್ಲ. ವಿಮಾನನಿಲ್ದಾಣದಿಂದ ಸರ್ಕಿಟ್ ಹೌಸ್ ಅಥವಾ ಪಂಚತಾರಾ ಹೊಟೇಲ್ಗಳಲ್ಲಿ ಉಳಿದುಕೊಂಡು ಅಲ್ಲಿಂದ ಐಷಾರಾಮಿ ಕಾರುಗಳಲ್ಲಿ ತೆರಳಿ ಪತ್ರಿಕಾಗೋಷ್ಠಿ/ ಪಬ್ಲಿಕ್ ಮೀಟಿಂಗ್ ನಡೆಸಿ, ನೇರವಾಗಿ ವಿಮಾನ ಹತ್ತುತ್ತಾರೆ. ಸರಳವಾಗಿ ಹೇಳಬೇಕೆಂದರೆ, ನಮ್ಮ ರಾಜನೀತಿ ಮತ್ತು ಲೋಕತಾಂತ್ರಿಕ ಅನುಷ್ಠಾನದ ಸಾರ ಮತ್ತು ಸಂಕ್ಷೇಪ ಇಷ್ಟೇ!
ಒಂದು ವೇಳೆ ಯಾರಾದರೂ ಇಂಥ ವಾತಾವರಣವನ್ನು ಬದಲಿಸಲು ಮುಂದಾಗುತ್ತಾರೆಂದರೆ, ಸಹಜವಾಗಿಯೇ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಕಡಿಮೆ ಖರ್ಚು, ಸರಳತೆ ಮತ್ತು ಆತ್ಮೀಯ ವ್ಯವಹಾರಗಳಿಂದ ಮೋಹನಚಂದ, ಮಹಾತ್ಮಾ ಗಾಂಧಿಯಾದರು. ತಂದೆ-ತಾಯಿ ಇಲ್ಲದ ಗ್ರಾಮೀಣ ಬಾಲಕನೊಬ್ಬ ದೀನದಯಾಳ್ ಉಪಾಧ್ಯಾಯನಾದ. ಇದನ್ನೆಲ್ಲ ನಾವೇಕೆ ಮರೆತುಬಿಡುತ್ತೇವೆ?
ಯಾರಿಗೆ ದೇಶದ ಬಗ್ಗೆ ಅರಿವಿಲ್ಲವೋ, ಯಾರಿಗೆ ಈ ದೇಶದ ಇತಿಹಾಸದ ಜ್ಞಾನವಿಲ್ಲವೋ, ಭಾರತದಲ್ಲಿ ಔರಂಗಜೇಬನ ಹೆಸರಲ್ಲಿ ರಸ್ತೆಯಿದೆ ಆದರೆ ದಾರಾಶಿಖೋಹ್ನ ಹೆಸರಲ್ಲಿಲ್ಲ ಎನ್ನುವುದು ಯಾರಿಗೆ ತಿಳಿದಿಲ್ಲವೋ, ಗುರುಗೋವಿಂದ ಸಿಂಗ್ ಅವರ ಅನುಯಾಯಿಗಳು ಮಾಡಿದ ತ್ಯಾಗವನ್ನು ಯಾರು ನೆನೆಯುವುದಿಲ್ಲವೋ, ಕಾಶ್ಮೀರೀ ಹಿಂದುಗಳ ಉಳಿವಿಗಾಗಿ ಹೋರಾಡಿ ಔರಂಗಜೇಬನ ಕ್ರೌರ್ಯಕ್ಕೆ ಬಲಿಯಾದ ಗುರು ತೇಜ್ ಬಹಾದೂರ್(ಹಿಂದ್ ಕೀ ಚಾದರ್)ರ ದೇಶಪ್ರೇಮವನ್ನು ಯಾರು ಗೌರವಿಸುವುದಿಲ್ಲವೋ ಅಂಥವರ ಕೈಗೆ ದೇಶವನ್ನು ಕೊಡುವ ಕಲ್ಪನೆ ಮಾಡಿಕೊಳ್ಳುವುದೂ ಅಸಾಧ್ಯ.
ಕಾರಿನಲ್ಲಿ ಕಾಲು ಚಾಚಿ ಕೆಂಪು ದೀಪ ಉರಿಸಿಕೊಂಡು ಓಡಾಡುವ ಅಥವಾ ತಮ್ಮ ಪಕ್ಷದ ಸುಲ್ತಾನನಂತೆ ವರ್ತಿಸುವವರಿಗೆ, ಸಾಧಾರಣ ವ್ಯಕ್ತಿಯೊಬ್ಬನ ಮನೆಯಲ್ಲಿ ಹಾಲು, ಹಣ್ಣು, ತರಕಾರಿ ಮಾಯವಾಗುತ್ತಿರುವುದರ ಕಿಂಚಿತ್ ಅರಿವಾದರೂ ಇದೆಯೇ? ನೌಕರಿಗಾಗಿ ಹತ್ತಾರು ಕಿಲೋಮೀಟರ್ ಸೈಕಲ್ನಲ್ಲಿ ತೆರಳುವ ಕೂಲಿ ಕಾರ್ಮಿಕರ ಬೆವರಿನ ಗಂಧ ಹೇಗಿರುತ್ತದೆ ಎಂದು ಇವರಿಗೆ ಗೊತ್ತೇ? ಅದು ಗೊತ್ತಿದ್ದವರಿಗೆ ಮಾತ್ರ ದೇಶವನ್ನಾಳುವ ಅಧಿಕಾರ ಸಿಗಬೇಕು.
ನಾವು ಅತ್ತ ದೇವಯಾನಿ ಖೋಬ್ರಾಗಡೆಯ ಆತ್ಮಾಭಿಮಾನದ ರಕ್ಷಣೆಯನ್ನೂ ಮಾಡುತ್ತಿಲ್ಲ, ಇತ್ತ ಪಾಕಿಸ್ತಾನ ಮತ್ತು ಚೀನಾದ ಅಟ್ಟಹಾಸಕ್ಕೆ ತಕ್ಕ ಉತ್ತರವನ್ನೂ ಕೊಡುತ್ತಿಲ್ಲ. ದೇಶದ ಉತ್ಪಾದನಾ ವಲಯಕ್ಕೆ ಚೀನಾದಿಂದ ಆಮದಾಗುತ್ತಿರುವ ಸಾಮಾನುಗಳು ಪೆಟ್ಟುಕೊಡುತ್ತಿವೆ. ರುಪಾಯಿ ದುರ್ಬಲವಾಗುತ್ತಲೇ ಸಾಗಿದೆ. ವ್ಯಾಪಾರಕ್ಕೆ ವಿಷಾದದ ಛಾಯೆ ಆವರಿಸಿದೆ.
ಅಹಂಕಾರಿ ರಾಜಕಾರಣಿಗಳನ್ನು ವಿರೋಧಿಸಬೇಕಾದ ಸಮಯವಿದು. ಭಾರತ ಹೊಸ ವಸಂತದ ನಿರೀಕ್ಷೆಯಲ್ಲಿದೆ.
- ತರುಣ್ ವಿಜಯ್
tarunvijay2@yahoo.com