ನಿಂತೇ ಹೋಗಿರುವ ಕನ್ನಡ ಕಟ್ಟುವ ಕೆಲಸ
"ಈಗ ತುರ್ತಾಗಿ ಆಗಬೇಕಿರುವುದು ಕನ್ನಡ ಭಾಷೆಯನ್ನು ರಕ್ಷಿಸುವ ಕೆಲಸ...
"ಈಗ ತುರ್ತಾಗಿ ಆಗಬೇಕಿರುವುದು ಕನ್ನಡ ಭಾಷೆಯನ್ನು ರಕ್ಷಿಸುವ ಕೆಲಸ. ನಮ್ಮ ಮಕ್ಕಳನ್ನು ಸಲಹಿದಂತೆ ಕನ್ನಡವನ್ನು ಸಲಹುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕನ್ನಡ ಭಾಷೆಯನ್ನು ನಾವೇ ಬಳಸದಿದ್ದರೆ ಅದನ್ನು ಬೇರೆ ಯಾರು ಬಳಸುತ್ತಾರೆ? ಬಳಸದಿದ್ದರೆ ಅದು ಬೆಳೆಯುವುದಾದರೂ ಹೇಗೆ? ಮುಂದಿನ ಪೀಳಿಗೆಯವರಿಗೆ ಉಳಿಯುವುದಾದರೂ ಹೇಗೆ? ಕನ್ನಡಕ್ಕೆ ಬೇರೆ ಭಾಷೆ ಅಥವಾ ಹೊರಗಿನವರು ವಿರೋಧಿಗಳಲ್ಲ, ಕನ್ನಡಕ್ಕಾಗಿ ಕೆಲಸ ಮಾಡದಿದ್ದರೆ ನಾವೇ ಕನ್ನಡ ವಿರೋಧಿಗಳು!" ಇಂತಹ ಮಾತುಗಳನ್ನು ನಾವು ಹಲವಾರು ಸಭೆ ಸಮಾರಂಭಗಳ ವೇದಿಕೆಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಮೊನ್ನೆ ಅಷ್ಟೇ ಕೊಡಗಿನಲ್ಲಿ ಕೊನೆಗೊಂಡ ಎಂಬತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರೂ ಸಹ ಇಂತಹದೇ ಕಳಕಳಿಯ ಮಾತುಗಳನ್ನು ಆಡಿದ್ದಾರೆ. ಹಂಪನಾ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಕನ್ನಡ ಬಳಸಿ, ಕನ್ನಡ ಉಳಿಸಿ" ಎಂಬ ಚಳವಳಿ ನಾಡಿನಾದ್ಯಂತ ವ್ಯಾಪಕವಾಗಿ ಆಗಬೇಕು ಎಂದಿದ್ದಾರೆ.
ನಿಜ ಕನ್ನಡ ಭಾಷೆಯನ್ನು ಬಳಸಬೇಕು. ಇದಕ್ಕಾಗಿ ಒಂದು ವ್ಯಾಪಕ ಚಳವಳಿಯೇ ಆಗಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಬಹುತೇಕ ಅಡ್ಡದಾರಿ ಹಿಡಿದಿರುವ ಅನೇಕ ಕನ್ನಡ ಚಳವಳಿಗಾರರ ಹೋರಾಟಗಳ ಅವಸ್ಥೆಗಳನ್ನು ಗಮನದಲ್ಲಿರಿಸಿಕೊಂಡು ನೋಡಿದಾಗ "ಕನ್ನಡ ಚಳವಳಿ" ಎಂಬ ಪದವೇ ಚಳಿಜ್ವರ ತರಿಸುತ್ತದೆ. ಇದೇನೇ ಇರಲಿ, ಕನ್ನಡದ ಹಿರಿಯ ಜೀವಿ ಹಂಪನಾ ಅವರ ಮಾತುಗಳಲ್ಲಿರುವ ಪ್ರಾಮಾಣಿಕ ಕಳಕಳಿಯನ್ನು ಅರ್ಥ ಮಾಡಿಕೊಳ್ಳೋಣ. ಅವರು ಹೇಳಿದಂತೆ ಇಂತಹ ಚಳವಳಿ ಆರಂಭಗೊಳ್ಳಬೇಕು. ಆದರೆ ಅದು ಎಲ್ಲಿಂದ ಆರಂಭಗೊಳ್ಳಬೇಕು? 'ಮನೆಯೇ ಮೊದಲ ಪಾಠಶಾಲೆ' ಎಂಬಂತೆ ಇದು ಕನ್ನಡಿಗರ ಮನೆಮನಗಳಲ್ಲಿ ಮೊದಲಾಗಬೇಕು ಎಂದುಕೊಂಡರೆ ಇಂದು ಕನ್ನಡಿಗರ ಮನೆಗಳ ಪರಿಸ್ಥಿತಿಯಾದರೂ ಹೇಗಿದೆ ಎಂಬುದನ್ನು ನೋಡಬೇಕಾಗುತ್ತದೆ. ನಗರಪ್ರದೇಶಗಳಲ್ಲಂತೂ ಬಹುತೇಕ ಎಲ್ಲರ ಮನೆಗಳಲ್ಲೂ ಮೊದಲ ಗುರುಗಳಾದ ತಂದೆತಾಯಿಗಳು ಸಾಫ್ಟ್ವೇರ್ ಇಂಜನಿಯರುಗಳು. ಅಥವಾ ತತ್ಸಮಾನ ವೃತ್ತಿಯಲ್ಲಿರುವವರು. ವಿದೇಶಗಳಲ್ಲಿ ನೆಲೆಸಿರುವ ಅಥವಾ ವೃತ್ತಿನೆವದಿಂದ ಆಗಾಗ ವಿದೇಶಗಳಿಗೆ ಹೋಗಿಬರುವ ಅವರಲ್ಲಿ ಕನ್ನಡ ಭಾಷೆಯನ್ನು ಸ್ವಯಿಚ್ಛೆಯಿಂದ ಬಳಸುವವರು ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ಅತೀ ಕಡಿಮೆ. ಅಲ್ಲಿ ಕಂಡು ಬರುವುದು "ಮಮ್ಮಿ- ಡ್ಯಾಡಿ, ಡ್ಯೂಡ್" ಸಂಸ್ಕೃತಿಯೇ. ಇನ್ನು ಇಂತಹವರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದಂತೂ ಕನಸಿನಲ್ಲಿಯೂ ಕಾಣದ ಮಾತು. ಇನ್ನು ಪಟ್ಟಣಗಳತ್ತ ಮುಖಮಾಡಿ ಆ ಬಾಳುವೆಯನ್ನೇ ಆದರ್ಶ ಎಂದು ತಿಳಿದು ಅದಕ್ಕಾಗಿ ಹಪಾಹಪಿಸುವ ನಮ್ಮ ನಾಡಿನ ಹಳ್ಳಿಗರ ಪರಿಸ್ಥಿತಿಯೂ ಸಹ ಹೆಚ್ಚು ಕಡಿಮೆ ಇದೇ ರೀತಿಯದ್ದು ಎಂದೇ ಹೇಳಬೇಕು.
ಕನ್ನಡ ನಾಡಿನ ಶಾಲಾ ಕಾಲೇಜುಗಳ, ಅದರಲ್ಲೂ ನಗರಪ್ರದೇಶಗಳ ಶಿಕ್ಷಣ ಸಂಸ್ಥೆಗಳ ಕನ್ನಡದ ಸ್ಥಿತಿಗತಿಗಳಂತೂ ತಾಯಿ ಭುವನೇಶ್ವರಿಗೇ "ಜೀನ್ಸ್" ಹಾಕುವಂತಿದೆ. ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಸುವ ಶಿಕ್ಷಣ ಸಂಸ್ಥೆಗಳು ಮರಳುಗಾಡಿನ ಮರೀಚಿಕೆಯಂತೆ ಅಲ್ಲಲ್ಲಿ ಕಂಡು ಬಂದರೂ ಅವುಗಳ ಗುಣಮಟ್ಟ ಹೇಳಿಕೊಳ್ಳುವಂತಿಲ್ಲ. ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳಲ್ಲಿ ಕನ್ನಡ, ಕೆಲವೇ ವಿದ್ಯಾರ್ಥಿಗಳು ಪಂಪ, ರನ್ನರನ್ನು ಓದುವ ದ್ವಿತೀಯ ಭಾಷೆಯಾಗಿ ಪಠ್ಯದಲ್ಲಷ್ಟೇ ಸೀಮಿತಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ಅವರು ಬರೆಯುವ ಭಾಷೆಯಂತೂ ಆ ಪಂಪನಿಗೇ ಪ್ರೀತಿ.
ನಿಜವಾದ ಅರ್ಥದಲ್ಲಿ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುವುದು ವಿದ್ಯಾರ್ಥಿಯ ಶಿಕ್ಷಣ ಹಂತದಲ್ಲಿ. ಕನ್ನಡವನ್ನು ಉಳಿಸಿ, ಬೆಳೆಸುವ ಭಾವನೆಗಳನ್ನು ಪರಿಣಾಮಕಾರಿಯಾಗಿ ತುಂಬುವುದು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಸಾಧ್ಯ. ಇಂದು ಕನ್ನಡದ ಬಗ್ಗೆ ಕೆಲವರಾದರೂ ಕಳಕಳಿಯನ್ನು ಹೊಂದಿರುವುದು ಅವರ ಕಾಲದಲ್ಲಿದ್ದ ಶಿಕ್ಷಕರಿಂದ ಮತ್ತು ಶಿಕ್ಷಣ ಸಂಸ್ಥೆಗಳಿಂದ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿ.ಎಂ.ಶ್ರೀ, ತೀನಂಶ್ರೀ, ವಿಸೀ, ಕುವೆಂಪು, ರಾಜರತ್ನಂ ಅವರಂತಹ ಸಾಹಿತಿಗಳು ಮಾಡಿದ ಕನ್ನಡ ಕಟ್ಟುವ ಕೆಲಸ ನೂರ್ಕಾಲವಾದರೂ ಮಾಸದಂಥದ್ದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ದಶಕಗಳ ಕಾಲ ಜಿ.ಪಿ. ರಾಜರತ್ನಂ ಮಾಡಿದ ಕನ್ನಡ ಪರಿಚಾರಿಕೆ ನಿಜವಾದ ಅರ್ಥದಲ್ಲಿ ಒಂದು ಚಳವಳಿಯೇ. ರಾಜರತ್ನಂ ತುಂಬಿದ ಕನ್ನಡಪರ ಕಾಳಜಿ ನೂರಾರು ವಿದ್ಯಾರ್ಥಿಗಳಲ್ಲಿ ಒಂದು ವಿನೂತನ ಸಂಚಲನವನ್ನೇ ಉಂಟುಮಾಡಿತು ಎಂಬುದರಲ್ಲಿ ಒಂದಿಷ್ಟೂ ಅತಿಶಯೋಕ್ತಿಯಿಲ್ಲ. ಹಲವಾರು ಪ್ರತಿಭಾನ್ವಿತ ಲೇಖಕರು, ಕವಿಗಳು, ಚಿಂತಕರು ರೂಪುಗೊಳ್ಳುವುದಕ್ಕೆ ರಾಜರತ್ನಂ ಅವರ ಪ್ರಯತ್ನ ಕಾರಣವಾಯಿತು. ರಾಜರತ್ನಂ ಅವರ ಈ ಸ್ತುತ್ಯ ಕಾರ್ಯವನ್ನು ಅವರ ಕೆಲವು ಶಿಷ್ಯರು ಮುಂದುವರೆಸಿದರು. ಅವರಲ್ಲಿ ಶ್ರೀನಿವಾಸ ರಾಜು ಗುರು ಪರಂಪರೆಯನ್ನು ಮುಂದುವರೆಸಿ ಕನ್ನಡ ಪ್ರಾಧ್ಯಾಪಕರಾಗಿ ತಾವು ಕೆಲಸ ಮಾಡುತ್ತಿದ್ದ ಕ್ರೈಸ್ಟ್ ಕಾಲೇಜಿನ ಆಂಗ್ಲಮಯ ಪರಿಸರದಲ್ಲಿಯೂ ಕನ್ನಡಪರ ಮಿಂಚನ್ನು ಸಮರ್ಥವಾಗಿ ಮೂಡಿಸಿದರು. ಕ್ರೈಸ್ಟ್ ಕಾಲೇಜಿನಲ್ಲಿ ಶ್ರೀನಿವಾಸ ರಾಜು ಅವರು ಮಾಡಿದ ಕೆಲಸ ಒಂದು ಅರ್ಥದಲ್ಲಿ ಒಂದು ಚಳವಳಿಯೇ.
ಇಂತಹದೇ ಚಳವಳಿಯನ್ನು ಸದ್ದಿಲ್ಲದೇ ಸಮರ್ಥವಾಗಿ ಮಾಡಿದ ಮತ್ತೊಬ್ಬ ಮಹಾನುಭಾವರೆಂದರೆ ಹಿರಿಯ ಗಾಂಧಿವಾದಿಗಳಾಗಿದ್ದ ಡಾ. ಎಚ್. ನರಸಿಂಹಯ್ಯ ಅವರು. ತಮ್ಮ ಶಿಷ್ಯವೃಂದದಲ್ಲಿ ಎಚ್ಚೆನ್ ಎಂದೇ ಗುರುತಿಸಲ್ಪಡುತ್ತಿದ್ದ ಅವರು ದೇಶೀಯ ವಿದ್ಯೆಗೆ ಹೆಸರಾದ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡಕ್ಕೆ ನೀಡಿದ ಪ್ರಾಧಾನ್ಯ ಕನ್ನಡವನ್ನು ಉಳಿಸಿ, ಬೆಳೆಸುವ ಒಂದು ಚಳವಳಿಯೇ ಸರಿ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಎಚ್ಚೆನ್ ಮಾಡಿದ ಸಾಧನೆ ಹೆಮ್ಮೆ ತರುವಂಥದ್ದು. ಶಿಕ್ಷಣತಜ್ಞರಾದ ಅವರು ತಮ್ಮ ಆತ್ಮಚರಿತ್ರೆಯಾದ 'ಹೋರಾಟದ ಹಾದಿ'ಯಲ್ಲಿ ಶಿಕ್ಷಣ ಹಂತದಲ್ಲಿಯೇ ಕನ್ನಡಪರ ಕಾಳಜಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಬಗ್ಗೆ ಸಾಕಷ್ಟು ಒತ್ತಿ ಹೇಳಿರುವುದು ಶಿಕ್ಷಣ ಹಂತದಲ್ಲಿ ಕನ್ನಡತನವನ್ನು ಕಲಿಸುವುದು ಎಷ್ಟು ಮುಖ್ಯ ಎಂಬುದರ ಮಹತ್ವವನ್ನು ಸಾರುತ್ತದೆ. ಇಂತಹುದೇ ಕೆಲಸ ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಸ್ವಲ್ಪಮಟ್ಟಿಗೆ ನಡೆಯಿತಾದರೂ ಕನ್ನಡ ನಾಡಿನ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಏನೇನು ಸಾಲದು ಎಂದೇ ಹೇಳಬೇಕಾಗುತ್ತದೆ.
ಇಂದಿನ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ಭಿನ್ನವಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಉದ್ಯಮಿಗಳೇ ಹೆಚ್ಚಿದ್ದಾರೆ. ತಮ್ಮ ಹಲವು ಉದ್ಯಮಗಳಲ್ಲಿ ಶಿಕ್ಷಣ ಸಂಸ್ಥೆಯನ್ನೂ ಸಹ ಹಣ ಮಾಡುವ ಒಂದು ಉದ್ಯಮವಾಗಿ ಪರಿಗಣಿಸಿರುವ ಅವರಲ್ಲಿ ವ್ಯಾಪಾರಿ ದೃಷ್ಟಿಕೋನದ ಪಾರುಪತ್ಯವೇ ಅಧಿಕ. ಹಣದಾಹ, ಹೆಸರಿನ ಹಪಾಹಪಿ ಮತ್ತು ಅಹಮ್ಮಿಕೆಯ ಗುಮ್ಮಕ್ಕೆ ಬಲಿಯಾದ ಇಂತಹವರಿಂದ ಕನ್ನಡಪರ ಕೆಲಸಗಳಿಗೆ ಉತ್ತೇಜನ ದೊರಕುವುದು ಕನಸಿನ ಮಾತೇ. ಆದರೆ ಎಲ್ಲಾ ಉದ್ಯಮಿಗಳೂ ಇಂತಹವರಲ್ಲ. ಹೋಟೆಲ್ ಉದ್ಯಮಿಯಾದರೂ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಿಗರಾದ ಡಾ. ಪಿ. ಸದಾನಂದ ಮಯ್ಯ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆ ಸ್ತುತ್ಯಾರ್ಹ. ಇನ್ನು ಮಠಾಧಿಪತಿಗಳ ಹಾಗೂ ಕ್ರೈಸ್ತ ಮಿಷನರಿಗಳ ಒಡೆತನದಲ್ಲಿಯೂ ಹಲವು ಶಿಕ್ಷಣ ಸಂಸ್ಥೆಗಳಿವೆ. ಧಾರ್ಮಿಕ ಹಾಗೂ ಮತೀಯ ಭಾವನೆಗಳು ಒತ್ತು ಪಡೆದಷ್ಟು ಕನ್ನಡತನ ಇಲ್ಲಿ ಅಗ್ರಪಟ್ಟವನ್ನು ಪಡೆದುಕೊಳ್ಳುವುದು ಸ್ವಲ್ಪ ಕಷ್ಟವೇ. ಇದಕ್ಕೆ ಅಪವಾದವೆಂಬಂತೆ ಮೂಡಬಿದರೆಯ ಮೋಹನ ಆಳ್ವ ಅವರು ನಡೆಸುತ್ತಿರುವ ಕನ್ನಡ ಸೇವೆ ಅದ್ಭುತ ಕೆಲಸ. ಇದನ್ನು ಮುಂದಿನ ಇತಿಹಾಸ ಗಮನದಲ್ಲಿಟ್ಟುಕೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸ್ತುತ್ಯಾರ್ಹ ಕಾರ್ಯವನ್ನು ಮಾಡುತ್ತಿರುವ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ಇದ್ದರೂ ಅವುಗಳ ಸಂಖ್ಯೆ ತೀರ ಗೌಣ. ಇನ್ನು ಇತ್ತೀಚಿನ ದಿನಗಳಲ್ಲಂತೂ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮುಂದಾಗಿದ್ದಾರೆ. ತಮ್ಮದೇ ತತ್ವಧೋರಣೆ ಹಾಗೂ ತೆವಲನ್ನು ತುಂಬುವ ಕಾಯಕಕ್ಕಿಂತ ಹೆಚ್ಚಿನದನ್ನು ಈ ಸಂಸ್ಥೆಗಳಿಂದ ನಿರೀಕ್ಷೆ ಮಾಡವುದು ಹುಸಿಯೇ ಸರಿ.
ಇಷ್ಟಾದರೂ ಹಂಪನಾ ಅವರು ಹೇಳಿದ "ಕನ್ನಡ ಭಾಷೆ ಸಾಯದು. ಹಲವು ದಾಳಿಗಳನ್ನು ಎದುರಿಸಿ ಕನ್ನಡ ಗಟ್ಟಿಯಾಗಿ ನಿಂತಿದೆ" ಎಂಬ ಮಾತುಗಳು "ಕನ್ನಡ ಬಳಸಿ, ಕನ್ನಡ ಉಳಿಸಿ" ಎಂಬ ಚಳವಳಿ ಸದ್ದಿಲ್ಲದೆ ಮುಂದುವರೆಯುವ ನಿರೀಕ್ಷೆಯನ್ನು ಮಾತ್ರ ಜೀವಂತವಾಗಿಟ್ಟಿದೆ.
-ಜಯಸಿಂಹ ಪ್ರಾಧ್ಯಾಪಕರು,
ನ್ಯಾಷನಲ್ ಕಾಲೇಜ್ , ಬೆಂಗಳೂರು
jayasimhas63@yahoo.com