ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಾಸ್ತುಕಾರಣ ಏನಿಲ್ಲ, ವಾಸ್ತವ ಹೀಗಿದೆ

Vishwanath S
Updated On : 12 Jan 2014, 12:38 pm

'ದಲಿತರು ಬಂದರು ರಾಜ್ಯ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ' ಎಂದ ಕವಿ ಡಾ.ಸಿದ್ದಲಿಂಗಯ್ಯ ಅವರ ಆಶಯ ಒಂದಿಲ್ಲೊಂದು ದಿನ ರಾಜ್ಯದಲ್ಲಿ ನಿಜವಾಗುತ್ತದೆ. ಆದರೆ ಅಲ್ಲಿಯವರೆಗೆ ಕಾಯಬೇಕು. ಕಾಂಗ್ರೆಸ್ ದಲಿತರನ್ನು ಎಂದೂ ಕಡೆಗಣಿಸಿಲ್ಲ. ಅಪಸ್ವರ ನಮ್ಮ ಬೆಳವಣಿಗೆಯನ್ನು ಕುಗ್ಗಿಸುತ್ತದೆ ಎಂಬುದನ್ನು ಯಾರೂ ಮರೆಯಬಾರದು'..! ಇದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರ ಅಭಿಪ್ರಾಯ.
*    ಕೆಲ ದಿನಗಳ ಹಿಂದೆ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರು ದಲಿತರಿಗೆ ಅಧಿಕಾರ ನಿರಾಕರಿಸಲಾಗುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ನೀವು ಇದನ್ನು ಒಪ್ಪುತ್ತೀರಾ ?
ಆ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಪರಮೇಶ್ವರ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಅಭಿಮಾನವಿದೆ. ಆದರೆ ಅವರು ಏಕೆ ಬಹಿರಂಗವಾಗಿ ಈ ಮಾತನ್ನು ಹೇಳಿದರು ಎಂಬುದೇ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಯಾವತ್ತೂ ದಲಿತರನ್ನು ನಿರ್ಲಕ್ಷಿಸಿಲ್ಲ. ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದೇ ಇದಕ್ಕೆ ಸಾಕ್ಷಿ. ನಮ್ಮ ಪಕ್ಷದ ಮಟ್ಟಿಗೆ ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿಗಳಿಗಿಂತ ಹೆಚ್ಚು ಪವರ್‌ಫುಲ್! ಕಾಂಗ್ರೆಸ್‌ನ ಸರ್ವೋಚ್ಚ ಸಂಸ್ಥೆ ಸಿಡಬ್ಲ್ಯುಸಿ. ಇದರಲ್ಲಿ ಯಾವುದೇ ಸಚಿವನಿಗೆ ಪಾಲ್ಗೊಳ್ಳುವುದಕ್ಕೆ ಅವಕಾಶವಿರುವುದಿಲ್ಲ. ಆದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಮುಖ್ಯಮಂತ್ರಿ ಆದಿಯಾಗಿ ರಾಜ್ಯದ ಎಲ್ಲ ಕಾಂಗ್ರೆಸ್ ಮುಖಂಡರು ಚುನಾವಣೆಗೆ ಸ್ಪರ್ಧಿಸುವಾಗ ಬಿ ಫಾರ್ಮ್ ಕೊಡುವ ಅಧಿಕಾರ ಇರುವುದು ಅವರಿಗೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಕ್ರಮಣ ಕಾಲದಲ್ಲಿ ಇಂಥ ಬಹಿರಂಗ ಅಸಮಾಧಾನ ಬೇಡವಿತ್ತು ಎಂಬುದು ನನ್ನ ಭಾವನೆ.
*    ಹಾಗಾದರೆ ಪರಮೇಶ್ವರ ಸಂಪುಟ ಸೇರುವುದು ನಿಮಗೆ ಇಷ್ಟವಿಲ್ಲವೇ?
ನನ್ನ ಮಾತಿನ ಅರ್ಥ ಹಾಗಲ್ಲ. ಪರಮೇಶ್ವರ ಅವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಆ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿಲ್ಲ. ದಲಿತರು ಮಂತ್ರಿಯಾಗುವುದು ಬೇಡವೇ, ಮುಖ್ಯಮಂತ್ರಿಯಾಗುವುದು ಬೇಡವೇ? ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಆ ಅರ್ಹತೆ ಮತ್ತು ಅವಕಾಶವಿದೆ. ಆದರೆ ತಾಳ್ಮೆ ವಹಿಸಬೇಕು. ನಮ್ಮದು ಹೈಕಮಾಂಡ್ ಸಂಸ್ಕೃತಿ ಇರುವ ಪಕ್ಷ. ಇಲ್ಲಿ ಬಂಡಾಯ ಅಥವಾ ಬಹಿರಂಗ ಅಸಮಾಧಾನ ವ್ಯಕ್ತಪಡಿಸಬಾರದು. 10 ಜನಪಥ್ ಮತ್ತು ಚೌಬೀಸ್ ಅಕ್ಬರ್ ರೋಡ್‌ಗೆ ಹೋಗಿ ನಿವೇದನೆ ಮಾಡಿಕೊಳ್ಳಬೇಕು. ಪರಮೇಶ್ವರ ಪಕ್ಷಕ್ಕಾಗಿ ದುಡಿದಿದ್ದಾರೆ. ಜತೆಗೆ ಅವರಿಗೆ ಅವಕಾಶವೂ ಇದೆ. ಆದರೆ ಕೊಂಚ ತಾಳ್ಮೆ ವಹಿಸುವುದು ಸೂಕ್ತ ಎಂಬುದು ನನ್ನ ಭಾವನೆ. ಈ ರೀತಿ ತಾಳ್ಮೆ ವಹಿಸಿದವರು ಕಾಂಗ್ರೆಸ್‌ನಲ್ಲಿ ಎಂತೆಂಥ ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂಬುದಕ್ಕೆ ನಮ್ಮ ಹಿರಿಯ ಮುಖಂಡರಾದ ಎಸ್.ಎಂ.ಕೃಷ್ಣ ಅವರೇ ಸಾಕ್ಷಿ.
*    ಸೋತವರಿಗೆ ಸಂಪುಟದಲ್ಲಿ ಅವಕಾಶ ನೀಡಬಾರದು ಎಂಬ ಕೂಗು ನಿಮ್ಮ ಪಕ್ಷದಲ್ಲಿ ಎದ್ದಿದೆ. ನೀವು ಇದನ್ನು ಒಪ್ಪುತ್ತೀರಾ?
ಸ್ಥಾನಮಾನ ನೀಡುವುದಕ್ಕೆ ಸೋಲೇ ಮಾನದಂಡವಲ್ಲ. ದಲಿತರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನೇ ಈ ದೇಶದಲ್ಲಿ ಸೋಲಿಸಿದರು. ಕ್ರಿಯಾಶೀಲತೆ, ಬದ್ಧತೆ ಇದ್ದವರು ಚುನಾವಣೆಯಲ್ಲಿ ಸೋತರೂ ಸಮಾಜಕ್ಕೆ ಉಪಯುಕ್ತರಾಗಿರುತ್ತಾರೆ. ನಾನು ಕೂಡಾ ಚುನಾವಣೆಯಲ್ಲಿ ಮೂರು ಬಾರಿ ಸೋತಿದ್ದೆ. ಗೆಲುವಿಗಾಗಿ ಕಾದೆ. ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದ ನನ್ನ ಕಣ್ಣೆದುರೇ ಹಲವರು ಕಾಂಗ್ರೆಸ್‌ನಲ್ಲಿ ಸಚಿವರಾದರು. ಆದರೆ ಈ ಬಗ್ಗೆ ನನಗೆ ಬೇಸರವಿಲ್ಲ. ಇದರರ್ಥ ಪರಮೇಶ್ವರ ಅವರನ್ನು ನಾನು ವಿರೋಧಿಸುತ್ತೇನೆ ಎಂದು ಯಾರೂ ಭಾವಿಸಬಾರದು.
*    ಆದರೂ ಗೋಡೆ ಕೆಡವಿದ್ದು ಭಾರಿ ಸುದ್ದಿ ಆಯ್ತಲ್ಲ ?
ನಾನು ಗೋಡೆ ಒಡೆಸಿಲ್ಲ ಸ್ವಾಮಿ, ಪಾರ್ಟಿಶನ್ ಮಾತ್ರ ತೆಗೆಸಿದ್ದೇನೆ. ವಿಧಾನಸೌಧದ ಗೋಡೆ ಒಡೆಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ವಿಧಾನಸೌಧದ ಗೋಡೆ 3 ಅಡಿ ಇದೆ. ನಾನು ತೆಗೆಸಿದ್ದು, 4 ಇಂಚಿನ ಪಾರ್ಟಿಶನ್ ಗೋಡೆ. 1980ರಲ್ಲೇ ಈ ಕೋಣೆಯನ್ನು 4 ಇಂಚಿನ ಗೋಡೆ ಹಾಕಿ ವಿಭಜಿಸಿದ್ದರು. ವಿಶಾಲವಾದ ಜಾಗ ಬೇಕು ಎಂಬ ಕಾರಣಕ್ಕೆ ನಾನು ಇದನ್ನು ತೆಗೆಸಿ ಹಾಕಿದೆ. ಕೊಠಡಿ ನವೀಕರಣಕ್ಕೆ 18 ಲಕ್ಷ ಖರ್ಚಾಗುತ್ತದೆ ಎಂಬುದೂ ನನಗೆ ಗೊತ್ತಿರಲಿಲ್ಲ. ನಾನು ಅಧಿಕಾರಿಗಳಿಗೆ ಹೇಳಿದ್ದೇನೆ- "ನನಗಾಗಿ ಈ ಕೋಣೆಯಲ್ಲಿ ರತ್ನಗಂಬಳಿ ಹಾಸಬೇಡಿ. ಅಲ್ಲಿರುವ ಶೌಚಾಲಯ ದುರಸ್ತಿ ಮಾಡಿಸಿ, ಬಂದವರಿಗೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಸಿ. ನನಗಾಗಿ ಏನೂ ಬೇಡ." ಕಚೇರಿಗೆ ಅದ್ಧೂರಿ ಸೌಲಭ್ಯ ಬೇಕು ಎಂದು ನಾನು ಬಯಸುವವನಲ್ಲ. ಉಳಿದವರ ಕತೆ ಗೊತ್ತಿಲ್ಲ, ನಾನಂತು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಇಲಾಖೆ ಕೆಲಸವನ್ನು ನಿಷ್ಕಾಮ ಕರ್ಮದಂತೆ ನಿಭಾಯಿಸುತ್ತೇನೆ. ಆದರೆ ಏನು ಮಾಡೋಣ ಹೇಳಿ? ನಾವು ಹುಟ್ಟುವಾಗಲೇ ನೋವು, ಅಪಮಾನ, ವಿವಾದ, ಶೋಷಣೆ, ಹಲ್ಲೆ, ಬಹಿಷ್ಕಾರವನ್ನು ಅನುಭವಿಸಿಕೊಂಡು ಬಂದಿದ್ದೇವೆ. ಬಹುಷ ಮೊದಲನೆಯ ದಿನ ನಾನು ಅಧಿಕಾರಿಗಳ ಜತೆ ಆ ರೀತಿ ಮಾತನಾಡದಿದ್ದರೆ ಇಷ್ಟು ವಿವಾದ ಸೃಷ್ಟಿಯಾಗುತ್ತಿರಲಿಲ್ಲ.
*    ಆದರೆ ಪತ್ರಕರ್ತರನ್ನು ವಿಧಾನಸೌಧಕ್ಕೆ ಬರುವುದನ್ನು ನಿಯಂತ್ರಿಸಿದಿರಂತೆ?
ಇಲ್ಲ, ಇಲ್ಲ. ಆ ರೀತಿ ಆದೇಶ ನೀಡುವುದಕ್ಕೆ ನಾನೇನು ಸದ್ದಾಂ ಹುಸೇನ್‌ನೇ? ಅಥವಾ ಹಿಟ್ಲರನೇ? ಮಾಧ್ಯಮದವರು ವಿಧಾನಸೌಧಕ್ಕೆ ಬರುವುದನ್ನು ನಿಯಂತ್ರಿಸುವ ಅಧಿಕಾರವೇ ನನಗೆ ಇಲ್ಲ. ಆ ಅಧಿಕಾರ ಗೃಹ ಸಚಿವರಿಗಿದೆ. ಇದೆಲ್ಲ ಗೊತ್ತಿದ್ದೂ ನಾನ್ಯಾಕೆ ಅಂಥ ಆದೇಶ ನೀಡಲಿ. ಇದೆಲ್ಲ ಸುಳ್ಳು.
*    ಹಾಗಾದರೆ ನೀವು ಕೊಠಡಿ ಬದಲಾಯಿಸಿದ್ದಕ್ಕೆ ವಾಸ್ತು ಕಾರಣವೇ ?
ಇಲ್ಲ. ನಾನು ಗಿಳಿಶಾಸ್ತ್ರ ಹೇಳುವವರಿಗೆ ಕೈ ತೋರಿಸುವುದಿಲ್ಲ. ದೇವಸ್ಥಾನಕ್ಕೆ ಹೋಗುವುದಿಲ್ಲ. ಜನರೇ ನನ್ನ ದೇವರು. ಸಾಮಾನ್ಯವಾಗಿ ಯಾರೇ ಮಂತ್ರಿಯಾದರೂ ಮೊದಲು ತಮಗೆ ನಿಗದಿಯಾದ ಕೊಠಡಿಗೆ ಜ್ಯೋತಿಷಿಗಳನ್ನು ಮತ್ತು ಆಪ್ತ ಸಹಾಯಕರನ್ನು ಕಳುಹಿಸಿ ಪರಿಶೀಲನೆ ನಡೆಸುತ್ತಾರೆ. ಆದರೆ ನಾನು ಒಬ್ಬನೇ ನನ್ನ ಕೊಠಡಿಗೆ ತೆರಳಿ, ಬಸವಣ್ಣನವರ ಫೋಟೋವನ್ನು ಕಚೇರಿಯಲ್ಲಿ ಇಟ್ಟುಕೊಂಡು ಅಧಿಕಾರ ಸ್ವೀಕರಿಸಿದೆ. ನನಗೆ ಬಡತನ, ಹಸಿವು, ಅಸಮಾನತೆ, ಶೋಷಣೆಯನ್ನು ಅನುಭವಿಸಿ ಗೊತ್ತು. ಹೀಗಾಗಿ ವೈಭವಕ್ಕೆ ಎಂದೂ ಆಸೆ ಪಟ್ಟವನಲ್ಲ. ನಾನು ಯಾವುದೇ ವ್ಯವಹಾರ ಅಥವಾ ಮಾಫಿಯಾದಲ್ಲಿ ಭಾಗಿಯಾದವನಲ್ಲ. ನನ್ನದು ಎಂದು ಸ್ವಲ್ಪ ಭೂಮಿ ಇದೆ. ಮಂತ್ರಿಯಾಗುವುದಕ್ಕೆ ಮುನ್ನ ನಾನೇ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲಸದಲ್ಲಿ ಪ್ರಾಮಾಣಿಕತೆ ಇರುವುದರಿಂದ ಬದುಕಿನಲ್ಲಿ ನೆಮ್ಮದಿ ಇದೆ.
*    ನೀವು ಮಾಂಸಾಹಾರ ತ್ಯಜಿಸಿದ್ದೀರಂತೆ ?
ಹೌದು. ನಾನು ಮಾಂಸಾಹಾರ ತ್ಯಜಿಸಿದ್ದೇನೆ. ಆದರೆ ಇದಕ್ಕೆ ಯಾವುದೇ ಜ್ಯೋತಿಷಿಯ ಸಲಹೆ ಕಾರಣವಲ್ಲ. ನಾನು ಎಲ್ಲ ರೀತಿಯ ಪ್ರಾಣಿಗಳನ್ನು ತಿಂದಿದ್ದೇನೆ. ಈಗ ಸಾಕು ಎನಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಯಸ್ಸಾಗಿದೆ. ಆರೋಗ್ಯದ ಕಡೆ ಗಮನ ನೀಡಬೇಕು. ದೇಹದ ತೂಕ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಂಸಾಹಾರ ತ್ಯಜಿಸಿದ್ದೇನೆ.
*    ಬ್ರಾಹ್ಮಣರಿಗೆ ಮತ್ತು ವೈಶ್ಯರಿಗೆ ಮೀಸಲು ಕಲ್ಪಿಸುವ ಪ್ರಯತ್ನ ಎಲ್ಲಿಗೆ ಬಂತು?
ನಾನು ಈ ಮಾತಿಗೆ ಈಗಲೂ ಬದ್ಧನಿದ್ದೇನೆ. ಬಡತನ ಯಾವುದೇ ಜಾತಿಗೆ ಸೀಮಿತವಲ್ಲ. ಬ್ರಾಹ್ಮಣರು ಮತ್ತು ವೈಶ್ಯರಲ್ಲೂ ಬಡವರಿದ್ದಾರೆ. ಆದರೆ ಆ ಎರಡು ವರ್ಗದವರಿಗೆ ಮಾತ್ರ ಮೀಸಲು ಸೌಲಭ್ಯವಿರಲಿಲ್ಲ. ನಾನು ಮಂತ್ರಿಯಾಗುವುದಕ್ಕೆ ಮೊದಲೇ ಈ ಬಗ್ಗೆ ಚಿಂತನೆ ನಡೆಸಿದ್ದೆ. ಎಷ್ಟೋ ಬ್ರಾಹ್ಮಣ ಕುಟುಂಬಗಳು ಬಡತನದಲ್ಲಿ ಬಳಲುತ್ತಿರುವುದನ್ನು ನೋಡಿದ್ದೇನೆ. ವಿದ್ಯಾಭ್ಯಾಸಕ್ಕಾಗಿ ತೊಂದರೆ ಪಟ್ಟಿದ್ದನ್ನು ಗಮನಿಸಿದ್ದೇನೆ. ಹೀಗಾಗಿ ಬ್ರಾಹ್ಮಣರು ಮತ್ತು ವೈಶ್ಯರಿಗೆ ಮೀಸಲು ಕಲ್ಪಿಸಬೇಕೆಂದು ನಿರ್ಧರಿಸಿದ್ದೆ. ಅದೃಷ್ಟವಶಾತ್ ನನಗೆ ಸಮಾಜ ಕಲ್ಯಾಣ ಇಲಾಖೆ ಸಚಿವನಾಗುವ ಅವಕಾಶ ಲಭಿಸಿತು. ನಾನು ಈ ಘೋಷಣೆ ಮಾಡಿದ ನಂತರ ಕೆಲವರು ಬಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನಾನು ಅದ್ಯಾವುದಕ್ಕೂ ಮಣಿದಿಲ್ಲ. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸುತ್ತೇನೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅಧ್ಯಕ್ಷರ ನೇಮಕವಾದ ತಕ್ಷಣವೇ ಅವರಿಂದ ಶಿಫಾರಸು ಪತ್ರ ಪಡೆದು ಮೀಸಲು ಕಲ್ಪಿಸಲಾಗುವುದು. ನಾನು ಈ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
*    ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಭರವಸೆ ನೀಡಿದ್ದಿರಿ. ಎಲ್ಲಿಗೆ ಬಂತು?
ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಎಲ್ಲಿಯೂ ಹಾಸ್ಟೆಲ್ ಪ್ರವೇಶ ನಿರಾಕರಿಸಬಾರದು ಎಂಬ ಕಾರಣಕ್ಕಾಗಿ ಹೊಸ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ. ವಸತಿಗೃಹಗಳ ಸುಧಾರಣೆಗಾಗಿ ರು. 110 ಕೋಟಿ ಬಿಡುಗಡೆ ಮಾಡಲಾಗಿದೆ. ವಿದ್ಯಾಸಿರಿ ಎಂಬ ಕ್ರಾಂತಿಕಾರಕ ಯೋಜನೆ ಆರಂಭಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಂಧ್ರಪ್ರದೇಶವನ್ನು ಬಿಟ್ಟರೆ, ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಗೆ ಬಿಡುಗಡೆಯಾಗುವ ಹಣವನ್ನು ಒಂದೇ ಕಡೆ ಕ್ರೋಢಿಕರಿಸಿ ಏಕ ಗವಾಕ್ಷಿ ಯೋಜನೆ ಮೂಲಕ ಹಂಚಿಕೆ ಮಾಡುವ ಕಾಯಿದೆ ಜಾರಿಗೆ ತರಲಾಗಿದೆ. ಮಾತ್ರವಲ್ಲ ಈ ರೀತಿ ಬಿಡುಗಡೆಯಾಗುವ ಹಣ ಆಯಾ ಆರ್ಥಿಕ ವರ್ಷದಲ್ಲಿ ಬಳಕೆಯಾಗದೇ ಇದ್ದರೆ, ಮುಂದಿನ ಆರ್ಥಿಕ ವರ್ಷದಲ್ಲೂ ಬಳಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡತನ, ಶೋಷಣೆಯನ್ನು ಅನುಭವಿಸಿದ ನನಗೆ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಮತ್ತು ವಾತ್ಸಲ್ಯಪೂರಿತ ಹೃದಯವಿದೆ.


- ರಾಘವೇಂದ್ರ ಭಟ್, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement