ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಲಾಖೆಗಳು ಹೆಚ್ಚಾದಷ್ಟೂ ದ್ವಂದ್ವಗಳು ಅಧಿಕ

ಕರ್ನಾಟಕ ಸರ್ಕಾರವು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು...

Vishwanath S
Updated On : 14 Jan 2014, 1:39 am

ಕರ್ನಾಟಕ ಸರ್ಕಾರವು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಗಂಭೀರವಾಗಿ ಚಿಂತಿಸುತ್ತಿರುವುದು ನಿಜಕ್ಕೂ ಒಂದು ಸೂಕ್ತ, ಪ್ರಗತಿಶೀಲ ಹಾಗೂ ಅಭಿವೃದ್ಧಿಕಾರಕ ಚಿಂತನೆ. ಇದು ಆಡಳಿತಾತ್ಮಕ ಹೊರೆಯನ್ನು ಇಳಿಸುವುದರ ಜೊತೆಗೆ ರೈತಾಪಿ ಜನರಿಗೂ ಇದರಿಂದ ಹೆಚ್ಚು ಪ್ರಯೋಜನಗಳು ದೊರೆಯುತ್ತವೆ.
ರಾಷ್ಟ್ರೀಯ ಕೃಷಿ ಸಂಶೋಧನೆ ಮತ್ತು ಶಿಕ್ಷಣ ವ್ಯವಸ್ಥೆಯ ಬಹುತೇಕ ಸಂಶೋಧನೆಗಳು ಹಾಗೂ ರೈತರೇ ಅನ್ವೇಷಣಾತ್ಮಕವಾಗಿ ಕಂಡುಕೊಂಡು, ಅನೇಕ ತಂತ್ರಜ್ಞಾನಗಳನ್ನು ಅಗತ್ಯವಿರುವವರಿಗೆ ಮುಟ್ಟಿಸುವಲ್ಲಿ ಮೇಲೆ ಹೇಳಿದ ಒಂದೊಂದು ಇಲಾಖೆಯೂ ನ್ಯಾಯ ಒದಗಿಸುವಲ್ಲಿ ವಿಫಲವಾಗಿರುವುದು ಉತ್ಪ್ರೇಕ್ಷೆಯ ಮಾತಲ್ಲ. ನಮ್ಮ ರಾಷ್ಟ್ರದ ಸಂಶೋಧನಾ ಜಾಲ ಹಾಗೂ ಪ್ರಗತಿಪರ / ಅನ್ವೇಷಣಾತ್ಮಕ ರೈತರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಬೇರಾವುದೇ ರಾಷ್ಟ್ರಕ್ಕಿಂತ ಮುಂದಿದ್ದಾರೆಯಾದರೂ, ಅವುಗಳನ್ನು ಬೇರು ಮಟ್ಟದಲ್ಲಿ ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ವಿಷಾದದಿಂದ ಒಪ್ಪಿಕೊಳ್ಳಬೇಕಾಗಿದೆ. ಇದಲ್ಲದೆ ರೈತರ ವಿವಿಧ ಅವಶ್ಯಕತೆಗಳಿಗೆ ಸ್ಪಂದಿಸುವ ಇಲಾಖೆಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿ, ಯಾವುದೇ ಒಂದು ಸಮಸ್ಯೆಗೆ ಬೇರೆ ಬೇರೆ ವಿಸ್ತರಣಾ ಕಾರ್ಯಕರ್ತರು ವಿಭಿನ್ನ ಸಲಹೆಗಳನ್ನು ನೀಡುವಂತಹ ದ್ವಂದ್ವ ಹಾಗೂ ವೈಪರೀತ್ಯಗಳನ್ನೂ ಕಾಣುತ್ತಿದ್ದೇವೆ.
ಅದರಲ್ಲೂ ನಮ್ಮ ರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು, ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುವವರು. ಇಂಥವರು ಕೃಷಿಯಲ್ಲಿ ಭರಿಸಲಾಗದ ಸಂಕಷ್ಟಗಳಿಂದಾಗಿ ತಲತಲಾಂತರದಿಂದ ನೆಚ್ಚಿಕೊಂಡಿದ್ದ ಕೃಷಿ ಕಸುಬಿಗೇ ತಿಲಾಂಜಲಿಯಿತ್ತು ನಗರಾಭಿಮುಖರಾಗಿದ್ದಾರೆ. ಅತ್ಯಲ್ಪ ಸಮಯದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ರೈತರ ಜಮೀನುಗಳಿಗೆ ಪಸರಿಸಿ, ಅಳವಡಿಸಿ, ಅಧಿಕ ಉತ್ಪಾದನೆ ಪಡೆದುಕೊಳ್ಳುವುದರ ಜೊತೆಗೆ ಅತ್ಯಧಿಕ ಲಾಭವನ್ನೂ ದೊರಕಿಸಿಕೊಡಬಹುದೆಂಬುದನ್ನು ಸಾಬೀತು ಮಾಡುವುದರಲ್ಲಿ ಚೀನಾ ದೇಶ ಒಂದು ಉತ್ತಮ ಉದಾಹರಣೆ. ಇದರಿಂದಾಗಿ ಚೀನಾ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿರುವುದು ಮಾತ್ರವಲ್ಲ, ಭಾರತಕ್ಕಿಂತಲೂ ಕಡಿಮೆ ಕೃಷಿ ಭೂಮಿ ಹೊಂದಿದ್ದರೂ ಭಾರತದ ಕೃಷಿ ಉತ್ಪಾದನೆಯ ಎರಡರಷ್ಟು ಉತ್ಪಾದನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಾದರೂ, ಹಸಿರುಕ್ರಾಂತಿಯನ್ನು ಸಾಧಿಸಿದ ಸಮಯದಲ್ಲಿ ಗ್ರಾಮಮಟ್ಟದಲ್ಲಿ ಗ್ರಾಮಸೇವಕರಿದ್ದರು. ಆಂಗ್ಲ ಭಾಷೆಯಲ್ಲಿ Village Level Worke ಎಂಬ ಅಭಿದಾನ ಹೊಂದಿದ ಇವರುಗಳು ಗ್ರಾಮಗಳಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಸಂಶೋಧನಾ ತಂತ್ರಜ್ಞಾನಗಳನ್ನು ಅಲ್ಪಸಮಯದಲ್ಲಿ ಬಹುತೇಕ ರೈತರು ಅಳವಡಿಸಿಕೊಳ್ಳಲು ಉತ್ತಮ ನೆರವು ನೀಡಿದರು. ಆ ದಿನಗಳಲ್ಲಿ ಅತ್ಯಂತ ರಚನಾತ್ಮಕವಾಗಿ ವಿವಿಧ ಪ್ರದೇಶಗಳ ಮೇಲ್ಮುಖ ಮುನ್ನಡೆಗಾಗಿ ಜಾರಿಗೆ ತಂದ ಕ್ಷೇತ್ರ ಅಭಿವೃದ್ಧಿ (block development) ಕಾರ್ಯದಲ್ಲಿ ಅನುಕರಣೀಯ ಪಾತ್ರ ನಿರ್ವಹಿಸಿದರು.
ಗಮನಿಸಬೇಕಾದ ಸಂಗತಿಯೆಂದರೆ  ಒಂದೇ ದ್ವಾರದ ಮೂಲಕ, ರೈತರ ಯಾವುದೇ ಸಮಸ್ಯೆಗಳಿಗೆ ಸೂಕ್ತವಾದ ವೈಜ್ಞಾನಿಕ ತಳಹದಿಯಮೇಲೆ ಸಿದ್ಧಪಡಿಸಿದ ಕೃಷಿ ವಿಧಾನಗಳ ಶಿಫಾರಸುಗಳನ್ನು ಒದಗಿಸಲಾಗುತ್ತಿದ್ದುದರಿಂದ ಯಾವುದೇ ಗೊಂದಲವಿರುತ್ತಿರಲಿಲ್ಲ. ವಿವಿಧ ಮೂಲಗಳಿಂದ ಬಂದ ತಂತ್ರಜ್ಞಾನಗಳನ್ನು ಒಂದೆಡೆ ಸಂಗ್ರಹಿಸಿ, ಅಲ್ಲಿಂದ ರೈತರಿಗೆ ಸೂಕ್ತವಾಗುವಂತೆ ಕ್ರೋಢೀಕರಿಸಿ ಶಿಫಾರಸುಗಳನ್ನು ಮಾಡುತ್ತಿದ್ದುದರಿಂದ ಇದು ಸಾಧ್ಯವಾಗಿತ್ತು. ಪ್ರಸ್ತುತ ಪ್ರಸ್ತಾವನೆಯು ಇಂತಹ ಒಗ್ಗೂಡುವಿಕೆಯಿಂದ, ವಿಸ್ತರಣಾ ಕಾರ್ಯಕರ್ತರ ಮನಃಪೂರ್ವಕ ತೊಡಗಿಸಿಕೊಳ್ಳುವಿಕೆಯಿಂದ ರೈತರಿಗೆ ಉಪಯುಕ್ತ ತಂತ್ರಜ್ಞಾನಗಳ ಗುಚ್ಛವನ್ನು ಒದಗಿಸುವುದನ್ನು ಉದ್ಭೋದಿಸುತ್ತದೆ.
ಭೂಮಿಯಿಲ್ಲದ ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೆರವಾಗಬಲ್ಲ ಸಮಗ್ರ ಕೃಷಿ ರಾಷ್ಟ್ರಾದ್ಯಂತ ಶಿಫಾರಸಿನಲ್ಲಿರುವುದು ವೈಜ್ಞಾನಿಕವಾಗಿ ಸೂಕ್ತವಾಗಿದೆ. ಆದರೆ, ಅದನ್ನು ಸಂಪೂರ್ಣವಾಗಿ ಬಳಕೆಯಲ್ಲಿ ತರುವ ದೃಷ್ಟಿಯಿಂದಲೂ ಕೃಷಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಮತ್ತು ವಿಸ್ತರಣಾ ಇಲಾಖೆಗಳನ್ನು ವಿಲೀನಗೋಳಿಸುವುದು ಅರ್ಥಪೂರ್ಣ. ಇದರಿಂದಾಗಿ "ಸಮಗ್ರ ಕೃಷಿ" ಪದ್ಧತಿಯನ್ನು ಅನುಸರಿಸಿ ಅಲ್ಪ ಸಮಯದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. "ಸಮಗ್ರ ಕೃಷಿ"ಯ ಅನುಸರಣೆಯಿಂದ ಯಾವುದಾದರೂ ಒಂದು ಬೆಳೆ ನಾಶವಾಗುವಂಥ ತೊಂದರೆಗಳು ದೂರವಾಗಿ, ರೈತ ಹಾಕಿದ ಬಂಡವಾಳಕ್ಕೆ ಲಾಭದಾಯಕ ಫಲ ಪಡೆಯುವುದು ಸಾಧ್ಯ. ಅಲ್ಲದೆ ರೈತರು ಎದುರಿಸುವ ಎಲ್ಲ ಸಣ್ಣಪುಟ್ಟ ಸಮಸ್ಯೆಗಳಿಗೂ ಸುಲಭ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯ.
ಸಮಗ್ರತೆಯನ್ನು ತರುವ ಇಂತಹ ವಿಲೀನ ಕಾರ್ಯ ವಿಶ್ವವಿದ್ಯಾನಿಲಯಗಳಲ್ಲೂ ಜರುಗಬೇಕು. ಹಾಗೆಂದ ಮಾತ್ರಕ್ಕೆ, ಈಗಿರುವ ವಿಶ್ವವಿದ್ಯಾನಿಲಯಗಳ ಸಂಖ್ಯೆಯನ್ನು ಕಡಿಮೆಮಾಡಬೇಕು ಅಥವಾ ಅವುಗಳ ನಾಮಫಲಕ ಬದಲಾಗಬೇಕು ಎಂದಲ್ಲ. ನಿಜವಾಗಿ ನೋಡುವಾಗ ರಾಜ್ಯದಲ್ಲಿ ಇನ್ನಷ್ಟು ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶವಿದೆ. ಆದರೆ ಕೇವಲ ಸಂಖ್ಯೆಯಲ್ಲ, ಅವುಗಳು ಪ್ರಾದೇಶಿಕ ಸಮಸ್ಯೆಗಳ ನಿವಾರಣೆಗೆ ಹಾಗೂ ಆಯಾ ಪ್ರದೇಶದ ಅಗತ್ಯಗಳಿಗೆ ಅನುವಾಗುವಂತೆ ಸೂಕ್ತವಾದ ಪ್ರದೇಶಗಳಲ್ಲಿ ಕಾಲೇಜುಗಳನ್ನು ಹಾಗೂ ಸಂಶೋಧನಾ ನಿರ್ದೇಶನಾಲಯಗಳನ್ನು ಸ್ಥಾಪಿಸಬೇಕು. ಉದಾಹರಣೆಗೆ ಪ್ರಸಕ್ತ ವ್ಯವಸ್ಥೆಯಲ್ಲಿ, ಒಂದೇ ಜಿಲ್ಲೆಯಲ್ಲಿ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಿಗೆ ಸೇರಿದ ಒಂದಕ್ಕಿಂತ ಹೆಚ್ಚು ಸಂಶೋಧನಾ ಕೇಂದ್ರಗಳಿದ್ದು, ಎಲ್ಲೆಡೆಗಳಲ್ಲಿ ಒಂದೇ ವಿಷಯದ ತಜ್ಞರು ಕಾರ್ಯನಿರತರಾಗಿದ್ದರೆ ಅದು ಅನವಶ್ಯಕವಾಗಿ ಅಗತ್ಯಕ್ಕಿಂತ ಹೆಚ್ಚು ಒತ್ತುಕೊಟ್ಟಂತಾಗಿ, ಬೇರೆ ವಿಷಯಗಳಲ್ಲಿ ನಿರೀಕ್ಷಿತ ಅಧ್ಯಯನ ಇಲ್ಲವಾಗುತ್ತದೆ. ಕಾಲೇಜುಗಳಲ್ಲಿ ಕೀಟಶಾಸ್ತ್ರ, ರೋಗಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ, ಅರ್ಥಶಾಸ್ತ್ರ, ಕೃಷಿ ಮಾರುಕಟ್ಟೆ ಅಧ್ಯಯನ ಮುಂತಾದವುಗಳನ್ನು ತೋಟಗಾರಿಕೆ ಬೆಳೆಗಳಿಗೆ, ಮಳೆಯಾಶ್ರಿತ (ಹೊಲದ) ಬೆಳೆಗಳಿಗೆ, ಮೇವಿನ ಬೆಳೆಗಳಿಗೆ, ಮುಂತಾದವುಗಳಿಗೆ ಪ್ರತ್ಯೇಕವಾಗಿ ಬೋಧಿಸುವುದಿಲ್ಲ. ಒಂದು ಕೃಷಿ ಪರಿಸರದ ಪರಿಸ್ಥಿತಿಯನ್ನು ಮನಗಂಡು ತಾಂತ್ರಿಕತೆಯನ್ನು ವಿವಿಧ ಮೂಲಗಳಿಂದ ಒಗ್ಗೂಡಿಸಿ ಉಪಯೋಗ ಪಡೆಯುವುದೇ ಸಮರ್ಥನೀಯ. ಈ ನಿಟ್ಟಿನಲ್ಲಿ ಸರ್ಕಾರದ ಚಿಂತನೆಯು ಕಾರ್ಯರೂಪಕ್ಕೆ ಬಂದು ಕಡಿಮೆ ಖರ್ಚಿನಿಂದ ಅಲ್ಪಸಮಯದಲ್ಲಿ ವೈಜ್ಞಾನಿಕವಾಗಿ ಸೂಕ್ತವಾದ ಸಮಗ್ರ ತಾಂತ್ರಿಕ ಶಿಫಾರಸುಗಳು ಹೊರಬಂದು ಚೀನಾ ದೇಶದಲ್ಲಿ ಕಂಡುಕೊಂಡಿರುವ ಸಫಲತೆಯನ್ನು ನಾವೂ ಕಂಡುಕೊಳ್ಳಲು ಸಾಧ್ಯ. ಕೃಷಿಗೆ ಹೆಚ್ಚು ಬಂಡವಾಳ ಹೂಡುವಿಕೆಯ ಜೊತೆಗೆ, ಸರ್ಕಾರವು ಆದ್ಯತೆಯ ಮೇಲೆ ಗಮನಕೊಟ್ಟು ಕುಂಟುತ್ತಿರುವ ಕೃಷಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವುದು ಇಂದಿನ ಅಗತ್ಯವಾಗಿದೆ.
ಕ್ರಿಕೆಟ್ ಆಟಕ್ಕೆ ಕೊಡುತ್ತಿರುವ ಪ್ರೋತ್ಸಾಹದ ಅಲ್ಪ ಪ್ರಮಾಣವಾದರೂ ಕೃಷಿಗೆ ದೊರಕಿದ್ದೇ ಆದರೆ ದೇಶ ಆಹಾರ ಹಾಗೂ ಪೋಷಕಾಂಶ ಭದ್ರತೆಯತ್ತ ಸಾಗುತ್ತದೆ ಎಂದು ಆಶಿಸಬಹುದು. ಭಾರತ ರತ್ನ ಪ್ರಶಸ್ತಿಯು ಕ್ರಿಕೆಟ್ ಪಟುವಿಗೆ ಸಿಕ್ಕಿರುವುದು ತಪ್ಪಲ್ಲದಿದ್ದರೂ ಹಸಿರು ಕ್ರಾಂತಿಗೆ ಕಾರಣರಾದ ಪ್ರೊ. ಎಂ. ಎಸ್. ಸ್ವಾಮಿನಾಥನ್‌ರವರನ್ನು ಉಪೇಕ್ಷಿಸಿರುವುದು ಖೇದದ ವಿಷಯ.
ನಮ್ಮ ದೇಶದ ಜನಸಂಖ್ಯೆಯ ಶೇಕಡಾ 58ಕ್ಕಿಂತ ಹೆಚ್ಚು ಜನರ ಜೀವನೋಪಾಯಕ್ಕೆ ಕೃಷಿಯೇ ಮುಖ್ಯ ಕಸುಬು. ಕೃಷಿಯೇತರ ವಲಯಗಳಿಗೆ ಬೇಕಾಗುವ ಪದಾರ್ಥಗಳು ಮತ್ತು ಕೈಗಾರಿಕಾ ವಲಯಕ್ಕೆ ಬೇಕಾಗುವ ಕಚ್ಚಾ ಪದಾರ್ಥಗಳನ್ನು ಎಷ್ಟೇ ಬೇಕಾದರೂ ಒದಗಿಸಬಹುದಾದ ಸಾಮರ್ಥ್ಯವನ್ನು ನಮ್ಮ ಕೃಷಿಯು ಹೊಂದಿದೆ. ಕರ್ನಾಟಕ ಸರ್ಕಾರವು ಕೃಷಿ ಸಚಿವಾಲಯವನ್ನು (Ministry of Agriculture) ಸ್ಥಾಪಿಸಬೇಕು. ಕೃಷಿಗೆ ಸಂಬಂಧಿಸಿದ ಕೃಷಿ ಇಲಾಖೆ, ಜಲಾನಯನ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳನ್ನು ಕೃಷಿ ಸಚಿವಾಲಯದ (Ministry of Agriculture) ಅಧೀನ ಇಲಾಖೆಗಳನ್ನಾಗಿಸಬೇಕು. ಇದೇ ರೀತಿಯಲ್ಲಿ ಕೃಷಿ ಸಂಶೋಧನೆಗೆ ಮತ್ತು ಶಿಕ್ಷಣಕ್ಕೆ  ಸಂಬಂಧಿಸಿದ ಎಲ್ಲಾ ಸಂಸ್ಥೆಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ಸಮಯನ್ವಯಿಸಲು ಒಂದು ಪರಿಷತ್ತನ್ನು ರಚಿಸಿ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕು.


- ಪ್ರೊ.ಎಂ. ಮಹದೇವಪ್ಪ
ವಿಶ್ರಾಂತ ಕುಲಪತಿ, ಕೃಷಿ ವಿವಿ, ಧಾರವಾಡ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement