ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಪ್‌ನಿಂದ ಲೋಕಸಭೆ ಸಮೀಕರಣ ಬದಲಾಗುವುದೇ?

Vishwanath S
Updated On : 15 Jan 2014, 12:32 pm

ಆಪ್‌ನ ಬೆಳವಣಿಗೆ ದೆಹಲಿಯಲ್ಲಿ ಉಂಟುಮಾಡಿರುವ ಛಾಪನ್ನೇ ಬೇರೆಡೆ ಬೀರುವ ಸಾಧ್ಯತೆಗಳು ಎಷ್ಟು ಎಂಬುದರ ಬಗ್ಗೆ ಫಸ್ಟ್‌ಪೋಸ್ಟ್ ಜಾಲತಾಣದಲ್ಲಿ ಅಂಕಣಕಾರ ಆಕಾರ್ ಪಟೇಲ್ ಸೊಗಸಾದ ವಿಶ್ಲೇಷಣೆ ಮಾಡಿದ್ದಾರೆ. ಅದರ ಕೆಲ ಅಂಶಗಳು ಇಲ್ಲಿವೆ.
***
ಆಮ್ ಆದ್ಮಿ ಪಕ್ಷದ ಬೆಳವಣಿಗೆ ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆ ಸುದ್ದಿಯೋ, ಕೆಟ್ಟ ಸುದ್ದಿಯೋ? ಇದನ್ನು ಎರಡು ಆಯಾಮಗಳಲ್ಲಿ ನೋಡಬಹುದು. ಆ ಎರಡು ಸಾಧ್ಯತೆಗಳ ಪೈಕಿ ಏಪ್ರಿಲ್- ಮೇನ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದು ರುಜುವಾತಾಗಲಿದೆ ಎಂಬುದು ಮಾತ್ರ ಯಕ್ಷಪ್ರಶ್ನೆಯೇ. ಆಪ್ ಅನ್ನು ಜನಾಕ್ರೋಶದ ಲಾಭ ಪಡೆಯುವ ಪಕ್ಷವನ್ನಾಗಿ ಗ್ರಹಿಸುವುದಾದರೆ, ಅದು ಯಶ ಸಾಧಿಸಿರುವುದು ಆಡಳಿತದಲ್ಲಿರುವ ಪಕ್ಷದ ವಿರುದ್ಧ ನಿರಂತರ ಅಭಿಯಾನಗೈಯ್ಯುತ್ತ ಅದೇ ವೇಳೆ ಪ್ರತಿಪಕ್ಷದ ಮತಗಳನ್ನೂ ತುಂಡರಿಸುವ ಶೈಲಿ ಅದರದ್ದು. ದೆಹಲಿಯಲ್ಲಿ ಆಗಿರುವುದು ಅದೇ.
ಈ ಪರಿಸ್ಥಿತಿಯನ್ನು ಇನ್ನೊಂದು ಆಯಾಮದಲ್ಲಿ ನಿಂತು ಯೋಚಿಸಬಹುದು. ಆಪ್‌ನ ಈಮಟ್ಟದ ಉನ್ನತ ಬೆಳವಣಿಗೆಗೆ ಕಾರಣವಾದ ಜನ ಭಾವನೆ ಯಾವುದು ಎಂಬುದನ್ನು ಗಮನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಪ್ ಸಾಧನೆ ತುಂಬ ಮುಖ್ಯವೇ ಆಗುತ್ತದೆ. ಉತ್ತರ ಭಾರತದಲ್ಲಿ ಯಾವುದೇ ಜಾತಿ ಬೆಂಬಲಕ್ಕೆ ಆತುಕೊಳ್ಳದೇ ಈಮಟ್ಟದ ಗೆಲವು ಸಾಧಿಸಿದ ಮೊದಲ ಉದಾಹರಣೆ ಆಪ್‌ನದ್ದು. ಅದು ಮತವನ್ನು ಯಾವ ಅಂಶಗಳ ಆಧಾರದ ಮೇಲೆ ಗಳಿಸಿತು? ಸರ್ಕಾರದ ಅಸಾಮರ್ಥ್ಯ ತೊಡೆದು ಹಾಕುವ, ಸಾರ್ವಜನಿಕ ಜೀವನದಲ್ಲಿ ಢಾಳಾಗಿಬಿಟ್ಟಿರುವ ಭ್ರಷ್ಟಾಚಾರವನ್ನು ತೊಡೆಯುವ ಭರವಸೆಗಳ ಮೇಲೆ ಅದು ಗೆಲವು ಸಾಧಿಸಿತು. ಇದೇ ಆಪ್ ಜಯಕ್ಕೆ ಕಾರಣ ಅಂತಲೇ ನಿರ್ಧರಿಸಿದರೂ ಈ ಬಗ್ಗೆಯೂ ವಿಭಿನ್ನ ಅಭಿಪ್ರಾಯಗಳಿವೆ. ಉದಾಹರಣೆಗೆ ಕೇಂದ್ರ ಸಚಿವ ಶರದ್ ಪವಾರ್ ಅವರ ಪ್ರತಿಪಾದನೆಯಂತೆ ಆಪ್‌ಗೆ ಮತ ಹಾಕಿದವರು ಭ್ರಷ್ಟಾಚಾರದ ಪರವಾಗಿ ಮತ ನೀಡಿದವರೂ ಆಗಿದ್ದಾರೆ. ಇದಕ್ಕೆ ಅವರು ನೀಡಿರುವ ತರ್ಕವೂ ಆಸಕ್ತಿಕರ. 'ಕಾನೂನು ಮೀರಿ ಕಟ್ಟಿಕೊಂಡಿರುವ ಕಾಲೊನಿಗಳನ್ನೆಲ್ಲ ಸಕ್ರಮ ಮಾಡುತ್ತೇವೆ' ಎಂಬ ಆಪ್‌ನ ಘೋಷಣೆಯನ್ನು ಬೆಂಬಲಿಸಿ ಮತ ಹಾಕಿದವರು ಹಲವರಿದ್ದಾರೆ. ಉಚಿತ ವಿದ್ಯುತ್, ಉಚಿತ ನೀರು ಎಂಬ ಬೊಕ್ಕಸಕ್ಕೆ ಪ್ರಹಾರ ಮಾಡುವ ಆಮಿಷಗಳಿಗೂ ಜನ ಮರುಳಾಗಿದ್ದಾರೆ. ಇದು ಯಾವ ಆಚಾರ ಎಂಬುದು ಪ್ರಶ್ನೆ!
ಈ ಮುಖದಲ್ಲಿ ನೋಡಿದಾಗ ದೆಹಲಿ ಹೊರಗಿನ ಜನ ಆಪ್ ಅನ್ನು ಭ್ರಷ್ಟಾಚಾರವನ್ನು ಪುಡಿಗಟ್ಟುವ ಬುಲೆಟ್ ಹಾಗೂ ಸುಸ್ಥಿರ ಆಡಳಿತಕ್ಕೆ ಮಾದರೆ ಎಂದು ಸ್ವೀಕರಿಸುತ್ತಾರೆಯೇ ಎಂಬ ಅನುಮಾನ ಸಹಜ. ಆಡಳಿತದ ವಿಷಯದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿಯವರೇ ಹೆಚ್ಚಿನ ಮತಗಳನ್ನು ಸೆಳೆದಾರೇನೋ. ಜನ ಕಾಂಗ್ರೆಸ್ ಪಕ್ಷವನ್ನು ಹೇಗೆ ನೋಡುತ್ತಿದ್ದಾರೋ ಅದೇ ನೆಲೆಯಲ್ಲಿ ಮೋದಿಯವರನ್ನೂ ನೋಡಲಿ ಎಂಬ ಕಾರಣಕ್ಕೆ ಆಪ್ ಮೊದಲಿನಿಂದಲೂ 'ಕಾಂಗ್ರೆಸ್ ಮತ್ತು ಬಿಜೆಪಿಗಳು ಒಂದೇ ನಾಣ್ಯದ ಎರಡು ಮುಖಗಳು' ಎಂದು ಹೇಳುತ್ತ ಬಂದಿದೆ.
ಆದರೆ ದೆಹಲಿಯಲ್ಲಿ ಅವರ ಈ ಮಾತಿಗೆ ಪೂರಕವಾದಂಥ ಭಾವನೆಯನ್ನೇನೂ ಜನರು ವ್ಯಕ್ತಪಡಿಸಿಲ್ಲ. ಏಕೆಂದರೆ ಬಿಜೆಪಿ ಮತಗಳಿಕೆ ಕೇವಲ ಶೇ. 2ರಷ್ಟು ಮಾತ್ರವೇ ಕುಸಿತ ಕಂಡಿದೆ. ಕಾಂಗ್ರೆಸ್ ವಿರೋಧಿ ಮತಗಳನ್ನು ತಾನು ಸೆಳೆದುಕೊಳ್ಳಬಹುದು ಎಂದುಕೊಂಡಿದ್ದ ಬಿಜೆಪಿ ಲೆಕ್ಕಾಚಾರ ಆಪ್‌ನಿಂದಾಗಿ ನೆರವೇರಲಿಲ್ಲ. ಹಾಗಾದರೆ ದೇಶದ ಇತರ ಭಾಗಗಳಲ್ಲೂ ಆಪ್ ಹೀಗೆಯೇ ಆಡಳಿತ ವಿರೇಧಿ ಮತಗಳನ್ನು ಬಿಜೆಪಿಗೆ ಬಿಟ್ಟುಕೊಡದೇ ತನ್ನದಾಗಿಸಿಕೊಂಡೀತೇ? ದೆಹಲಿಯಲ್ಲಿ ತನ್ನೆಲ್ಲ ಬಲವನ್ನೂ ವಿನಿಯೋಗಿಸಿ ಕಣಕ್ಕಿಳಿದ ಆಪ್, ಲೋಕಸಭೆ ಚುನಾವಣೆಯಲ್ಲಿ ದೇಶದ ಉದ್ದಕ್ಕೂ ಎಲ್ಲ ರಾಜ್ಯಗಳಲ್ಲಿ ಆ ಪ್ರಮಾಣದ ಪ್ರದರ್ಶನ ಮಾಡುವ ಅವಕಾಶಗಳು ತುಂಬ ಸೀಮಿತ. ಪಕ್ಷಕ್ಕೆ ನಿಧಿ ಸಂಗ್ರಹದಲ್ಲಿ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ದೆಹಲಿ ಮಾದರಿ ಅನುಕರಣೀಯ. ಆದರೆ ರಾಷ್ಟ್ರೀಯ ಭೂಮಿಕೆಯಲ್ಲಿ ಇದನ್ನು ಅನುಸರಿಸುವಾಗ ಬೇಕಾಗುವ ಸಂಪನ್ಮೂಲ ಹಾಗೂ ಸಮಯ ಅಧಿಕ. ಸದ್ಯಕ್ಕೆ ಆಪ್ ಬಳಿ ಈಗಿಂದೀಗಲೇ ಅಂಥ ಅವಕಾಶಗಳು ಇಲ್ಲ. ಇನ್ನೊಂದು ಮುಖ್ಯ ಪ್ರಶ್ನೆ: ಬಿಜೆಪಿಯನ್ನು ವಿಜಯವಂಚಿತರನ್ನಾಗಿ ಮಾಡುವುದಕ್ಕೆ ಆಪ್ ಗೆಲ್ಲಬೇಕಿರುವ ಸ್ಥಾನಗಳು ಎಷ್ಟು? 2009ರಲ್ಲಿ ಕಾಂಗ್ರೆಸ್ ಗಳಿಸಿದ್ದು ಸುಮಾರು 12 ಕೋಟಿ ಮತಗಳು. ಬಿಜೆಪಿ 7.84 ಕೋಟಿ ಮತಗಳನ್ನು ಗಳಿಸಿತ್ತು. ಒಟ್ಟೂ ಮತಗಳಲ್ಲಿ ಇವೆರಡರ ಪ್ರಮಾಣ ಸುಮಾರು ಅರ್ಧದಷ್ಟಾಯಿತು. ಎರಡೂ ಪಕ್ಷಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುವಾಗ, ಆಪ್ ದೆಹಲಿಯಲ್ಲಿ ಪಡೆದ ಮತಗಳು 25 ಲಕ್ಷ. ಇದು ಬಹಳ ಸ್ವಾಗತಾರ್ಹ ಮತ್ತು ಪ್ರಶಂಸಾರ್ಹ ಸಾಧನೆಯೇ ಹೌದಾದರೂ ಅದರ ಎದುರಿಗಿರುವ ಸವಾಲು ಹಿಮಾಲಯವೇ ಆಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement