ಗಣಿ: ಎಲ್ಲರಿಗೂ ಧೂಳು ಅಂಟಿಸುವುದು ಸರಿಯೇ?
ಕಳೆದೊಂದು ದಶಕದಿಂದ ಸದ್ದು ಮಾಡಿದ...
ಕಳೆದೊಂದು ದಶಕದಿಂದ ಸದ್ದು ಮಾಡಿದ ಗಣಿ ಹಗರಣ ಈಗ ಬೇರೆ ಬೇರೆ ಹಗರಣಗಳ ಸದ್ದಿನಲ್ಲಿ ಸ್ವಲ್ಪ ಕ್ಷೀಣವಾಗಿದೆ. ಸಮಾಜ ಪರಿವರ್ತನದವರೂ, ಪರಿಸರವಾದಿಗಳೂ ಈಗ ಭೂವತ್ತುವರಿ ಮುಂತಾದ ವಿಷಯಗಳ ಮೇಲೆ ಮುಗಿಬಿದ್ದಿದ್ದಾರೆ.
ಗಣಿ ಹಗರಣದಲ್ಲಿ ಜನಾರ್ದನ ರೆಡ್ಡಿಯಿಂದ ಆರಂಭವಾದ ಬಂಧನ ಪರ್ವ ಈಗ ಕಾರವಾರ ಶಾಸಕ ಸತೀಶ ಸೈಲ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರ ಪುತ್ರನ ಬಂಧನದವರೆಗೆ ಬಂದು ನಿಂತಿದೆ. ಆದರೆ ಗಣಿ ಹಗರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಿ ಬಂಧನಗಳು ನಡೆದಿವೆಯೇ ಎಂಬ ಸಂದೇಹ ಉಂಟಾಗುತ್ತದೆ. ಉದಾಹರಣೆಗೆ ಈ ಹಗರಣದಲ್ಲಿ ಬಾಗಿ ಎನ್ನಲಾದ ಪ್ರತಿಷ್ಠಿತ ಕಂಪೆನಿಯಾದ ಆದಾನಿ ಎಂಟರ್‌ಪ್ರೈಸಸ್ ಹಾಗೂ ಕೇಂದ್ರ ಸರ್ಕಾರದ ಪಾಲುದಾರ ಪಕ್ಷವಾದ ಎನ್.ಸಿ.ಪಿ.ಯ ಬಲಿಷ್ಠ ಮುಖಂಡ ಶರದ್ ಪವಾರರ ಅಳಿಯ ಇವರುಗಳ ಪ್ರಮುಖ ಪಾತ್ರವಿದ್ದರೂ ಇವರ ಮೇಲೆ ಎಫ್.ಐ.ಆರ್. ಆಗಲೀ ಯಾವುದೇ ಚಾರ್ಜ್‌ಶೀಟ್ ಹಾಕಲಾಗಿಲ್ಲ. ಇವರ ಕಂಪನಿಗಳಿಂದ ಯಾರೊಬ್ಬರನ್ನೂ ಕನಿಷ್ಠ ತನಿಖೆಗೂ ಕರೆಸಲಿಲ್ಲ. ಇದನ್ನೆಲ್ಲಾ ನೋಡಿದರೆ ಯಾರಯಾರನ್ನೋ ಇಲ್ಲಿ ಬಲಿಪಶು ಮಾಡಲಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಹಿರೇಮಠರಂತಹ ಹೋರಾಟಗಾರರೂ ಈ ವಿಷಯದಲ್ಲಿ ಏಕೆ ಮೌನ ವಹಿಸಿದ್ದಾರೋ?
ಒಬ್ಬನನ್ನು ಅಪರಾಧಿಯೆಂದು ನ್ಯಾಯಾಲಯದಿಂದ ಘೋಷಣೆ ಮಾಡಬೇಕಾದರೆ ಸಾಕ್ಷಿ ಪುರಾವೆಗಳ ಸಮೇತ ಸಂಶಯಾತೀತವಾಗಿ ಅಪರಾಧ ಸಾಬೀತಾಗಬೇಕು. ಹಾಗಾದರಷ್ಟೇ ಅಪರಾಧಕ್ಕೆ ಶಿಕ್ಷೆ. ಏಕೆಂದರೆ ಸ್ವಾತಂತ್ರ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕಾಗಿರುತ್ತದೆ. ಇಂದು ಗಣಿ ವ್ಯವಹಾರದಲ್ಲಿ ತೊಡಗಿಕೊಂಡವರನ್ನೆಲ್ಲಾ ಸಾರಾಸಗಟಾಗಿ ಪಾತಕಿಗಳು, ರಾಷ್ಟ್ರ ದ್ರೋಹಿಗಳು ಎಂಬಂತೆ ನೋಡಲಾಗುತ್ತದೆ. ತನಿಖಾ ಸಂಸ್ಥೆಗಳೂ ಕೂಡಾ ಹೀಗೆ ಎಲ್ಲರನ್ನೂ ಒಂದೆ ತಕ್ಕಡಿಯಲ್ಲಿಟ್ಟು ತೂಗುತ್ತಿವೆಯೇನೊ ಎಂಬ ಅನುಮಾನ ಉಂಟಾಗುತ್ತವೆ. ಬಹಳಷ್ಟು ಸಾರಿ ಪರಿಸರ ಸಮತೋಲನ ಹಾಗೂ ಅಭಿವೃದ್ಧಿ ಒಟ್ಟಿಗೆ ಸಾಗುವುದಿಲ್ಲ. ಗಣಿ ಅಕ್ರಮ ಎಂಬುದು ಇಷ್ಟೊಂದು ಆಗಾಧ ಪ್ರಮಾಣದಲ್ಲಿ ಸವಾಲಾಗಿ ನಿಂತಿದೆ ಎಂದಾದಲ್ಲಿ ಇದರ ಅನೇಕ ಮುಗ್ಗಲುಗಳನ್ನೂ ಪರಿಶೀಲಿಸಬೇಕಾಗುತ್ತದೆ.
ಗಣಿ ಮಾಲೀಕರು, ಸಾಗಾಣಿಕೆದಾರರು, ರಪ್ತುದಾರರು ವಿದೇಶಿ ಖರೀದಿದಾರರು, ಟ್ರಕ್ ಮಾಲೀಕರು, ಅದರ ಚಾಲಕರು ಕೆಲವು ಬಾರಿ ಮಧ್ಯವರ್ತಿಗಳು, ಇವೆಲ್ಲದರ ಮೇಲೆ ನಿಗಾ ಇಡಬೇಕಾಗಿರುವ ಸರ್ಕಾರಿ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹೀಗೆ ಅನೇಕ ಕೊಂಡಿಗಳು ಸೇರಿದ ಒಂದು ಸರಪಣಿ ಇದಾಗಿದೆ.
ಒಂದು ಗಣಿಯಿಂದ ಹೊರಟ ಅದಿರು ಲಾರಿಗಳು ತಮ್ಮ ಗಮ್ಯವನ್ನು ತಲುಪುವಾಗ ರಾಜ್ಯ ರಾಜ್ಯಗಳ ನಡುವಿನ ಗಡಿಗಳು ಅಸಂಖ್ಯಾತ ಚೆಕ್‌ಪೋಸ್ಟ್‌ಗಳು ಮುಂತಾದ ತಡೆಗೋಡೆಗಳನ್ನು ದಾಟಿ ಬರಬೇಕು. ಖರೀದಿಸಿ ರಪ್ತು ಮಾಡುವವನು ಗಣಿ ಮಾಲೀಕನಲ್ಲ. ಅವನು ಈ ವ್ಯವಹಾರದ ಮತ್ತೊಂದು ತುದಿ ಅಷ್ಟೇ. ಅವನಿಗೆ ತಾನು ಖರೀದಿಸಿದ ಅದಿರಿನ ಪರ್ಮಿಟ್ ಅಸಲಿಯೋ ನಕಲಿಯೋ ಹೇಗೆ ಗೊತ್ತಾಗಬೇಕು? ರಪ್ತು ಮಾಡುವ ಕಂಪನಿ ಬೇಕಾಬಿಟ್ಟಿ ವ್ಯವಹಾರ ಮಾಡಲು ಸಾಧ್ಯವಿಲ್ಲ. ರಪ್ತು ನಿಯಮಗಳಿರುತ್ತವೆ. ಖರೀದಿಸಿದ ದಾಖಲೆಗಳಿರುತ್ತವೆ. ಖರೀದಿಸಿ ರಪ್ತು ಮಾಡಿದ ಪ್ರತಿ ಟನ್‌ಗೂ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಇವೆಲ್ಲದರ ದಾಖಲೆ ರಪ್ತು ಮಾಡಿದ ಬಂದರಿನ ಅಧಿಕಾರಿಗಳ ಬಳಿ ಇರುತ್ತದೆ.
ಎಲ್ಲಾ ವ್ಯವಹಾರಗಳಲ್ಲಿ ಇರುವಂತೆ ಈ ವ್ಯವಹಾರದಲ್ಲಿಯೂ ಏರಿಳಿತಗಳಿರುತ್ತವೆ. ನಮ್ಮನ್ನೆಲ್ಲಾ ಅಪರಾಧಿಗಳು ಎನ್ನುವುದಾದರೆ ನಮ್ಮಿಂದ ಖರೀದಿಸುವ ವಿದೇಶಿ ಕಂಪನಿಗಳನ್ನು (ಮುಖ್ಯವಾಗಿ ಚೈನಾ) ಅಪರಾಧಿಗಳ ಸಾಲಿಗೆ ಸೇರಿಸಬೇಕಲ್ಲವೇ, ಅದು ಸಾಧ್ಯವೇ ಎಂಬ ಅಂಶಗಳನ್ನು ರಫ್ತುದಾರರು ಮುಂದಿಡುತ್ತಾರೆ. ಇದು ಶುದ್ಧ ವ್ಯವಹಾರ ಇವರಿಂದ ಖರೀದಿಸಿ ಅವರಿಗೆ ರಫ್ತು ಮಾಡುತ್ತೇವೆ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಬೇಕಾದಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಸೇವಾ ಸಂಸ್ಥೆಗಳಿಗೆ ದೇಣಿಗೆ ಕೊಟ್ಟಿದ್ದೇವೆ. ನಾವೂ ಬೆವರು ಸುರಿಸಿ ದುಡಿದು ಲಾಭ ಮಾಡಿಕೊಂಡರೆ ಅದು ಅಪರಾಧವೇ? ಹಣ ಮಾಡಿದವರೆಲ್ಲಾ ಅನ್ಯಾಯದ ಮಾರ್ಗವನ್ನೇ ಹಿಡಿದಿದ್ದಾರೆ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದ್ದು ಯಾವ ವ್ಯವಹಾರಕ್ಕೆ ಕೈಹಾಕುವುದಕ್ಕೂ ಜನ ಹೆದರುವಂತಾಗಿದೆ ಎಂದು ಪ್ರಶ್ನಿಸುತ್ತಾರೆ ಈ ವ್ಯವಹಾರದಲ್ಲಿ ತೊಡಗಿಕೊಂಡ ಟ್ರಾನ್ಸ್‌ಪೋರ್ಟರ್‌ಗಳು, ರಫ್ತುದಾರರು ಮೊದಲಾದವರು. ನಾವು ಸಂಸಾರವಂದಿಗರಾಗಿದ್ದು ಗೌರವಯುತವಾಗಿ ಬದುಕು ಕಟ್ಟಿಕೊಂಡಿದ್ದೇವೆ. ಎಲ್ಲಾ ರೀತಿಯಿಂದಲೂ ತನಿಖೆಗೆ ಸಹಕರಿಸಿದ್ದೇವೆ. ಬೇರೆ ಬೇರೆ ತನಿಖಾ ಸಂಸ್ಥೆಗಳ ಎದುರು ಹೋಗಿ ತನಿಖೆಗೆ ಸಹಕರಿಸಿದ್ದೇವೆ. ಸಿ.ಐ.ಡಿ. ಆಯಿತು, ಈಗ ಸಿ.ಬಿ.ಐ. ತನಿಖೆಯೂ ಮುಗಿದಿದೆ. ಮಾಧ್ಯಮಗಳೂ ಕೂಡಾ ನಮ್ಮ ವಿಚಾರಣೆ ನಡೆಸಿವೆ. ಈಡೀ ಸಮಾಜವೇ ನಮ್ಮನ್ನು ಅಪರಾಧಿಗಳೆಂಬಂತೆ ಕಂಡಿದೆ. ಇದರ ಪರಿಣಾಮ ನಮ್ಮ ಕುಟುಂಬಗಳ ಮೇಲೆ ಆಗಿದೆ. ನಮ್ಮ ಮಕ್ಕಳು ಶಾಲೆಗಳಲ್ಲಿ ತಲೆ ಎತ್ತದಂತಾಗಿದೆ ಎನ್ನುತ್ತಾರೆ ಇವರು.
ನಾಳೆ ನಾವು ಅಪರಾಧಿಗಳೋ ನಿರಪರಾಧಿಗಳೋ ಎಂದು ನ್ಯಾಯಾಲಯದ ತೀರ್ಪು ಬರುವ ವೇಳೆಗೆ ನಮ್ಮ ಮಕ್ಕಳ ಭವಿಷ್ಯವೇನು? ನಮ್ಮ ಕುಟುಂಬದ ಗತಿ ಏನು ನಮ್ಮ ವ್ಯವಹಾರದ ಗತಿಯೇನು ಎಂಬ ಅತಂಕ ಅವರದ್ದು. ನಾಳೆ ನಾವು ನಿರಪರಾಧಿಗಳೆಂದು ತೀರ್ಮಾನವಾದ ಮೇಲೆ ನಾವು ಅನುಭವಿಸಿರುವ ಮಾನಸಿಕ ಯಾತನೆ ಸಮಾಜದಲ್ಲಿ ಅವಮಾನ ಇವುಗಳಿಗೆ ಯಾರು ಹೊಣೆ ಎಂದು ಕೇಳುತ್ತಾರೆ ಗಣಿ ಉದ್ಯಮಿಗಳು.
-ಎಂ. ಮಹಾಲಿಂಗಪ್ಪ