ಕ್ಷುಲ್ಲಕ ಟೀಕೆಗಳಿಂದ ಆಗುವ ಲಾಭವೇನು?
ಕನ್ನಡ ಸಾಹಿತ್ಯ ಲೋಕದ ಕೆಲವು ಪ್ರಮುಖ ಸಾಹಿತಿಗಳಿಗೆ ಭೈರಪ್ಪನವರ ಬರವಣಿಗೆಯ ಬಗ್ಗೆ ಒಂದು ರೀತಿಯ ಅಸಹಜವಾದ ವಿರೋಧ ಹಾಗೂ ನಿರ್ಲಕ್ಷ್ಯ ಭಾವ. ಈ ಮನಃಸ್ಥಿತಿಯ ಕೆಲವು ಸಾಹಿತಿಗಳು ಆಗಾಗ ಭೈರಪ್ಪನವರನ್ನು ಹಾಗೂ ಅವರ ಬರಹಗಳನ್ನು ವಿನಾಕಾರಣ ಟೀಕಿಸುತ್ತಿರುತ್ತಾರೆ. ಅವರೊಬ್ಬ ಸಾಹಿತಿಯೇ ಅಲ್ಲವೆಂದು ಕರೆಯುವ ಮಟ್ಟಕ್ಕೂ ಅದು ಒಮ್ಮೆ ಇಳಿದಿತ್ತು. ಬಹುಪಾಲು ಅಂತಹ ಟೀಕೆ ಟಿಪ್ಪಣಿಗಳು ಆರೋಗ್ಯಕರ ವಿಮರ್ಶೆ, ಅರ್ಥಪೂರ್ಣ ವಿಶ್ಲೇಷಣೆಯ ಗಾಂಭೀರ್ಯತೆಯನ್ನು ಹೊಂದಿರದೆ ಸಾಹಿತಿಯ ವೈಯಕ್ತಿಕ ವರ್ಚಸ್ಸನ್ನು ಕೆಡಿಸುವ ಪ್ರತೀಕಾರದ ರೂಪವನ್ನು ಹೊಂದಿರುತ್ತವೆ. ದೇಶದ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಂಡಿರುವ, ಸುಮಾರು ಹನ್ನೆರಡು ಬಾರಿ ಮರುಮುದ್ರಣಗೊಂಡಿರುವ ಹಲವು ಜನಪ್ರಿಯ ಕೃತಿಗಳನ್ನು ನೀಡಿರುವ ಭೈರಪ್ಪನವರ ಬರವಣಿಗೆಯನ್ನು ಮಹತ್ವದ್ದಲ್ಲ ಎಂದು ಕರೆಯುವ ಡಿಸೋಜಾರವರ ನಿಷ್ಠುರತೆ ಹಾಗೂ ಮುಕ್ತ ಮಾತುಗಳ ಬಗ್ಗೆ ಪ್ರಶ್ನೆಗಳೇಳುತ್ತವೆ. ಅವರ ಬರಹಗಳನ್ನು ಪೂರ್ವಾಗ್ರಹಪೀಡಿತ ಎಂದು ಕರೆದಿರುವ ಡಿ.ಸೋಜಾರವರ ಅಭಿಪ್ರಾಯಗಳೇ ವಸ್ತುನಿಷ್ಠವಲ್ಲ. ಒಂದೊಮ್ಮೆ ಅದು ಅವರ ವೈಯುಕ್ತಿಕ ಅಭಿಪ್ರಾಯವೇ ಆಗಿದ್ದರೆ ಆ ಮೂಲಕ ಲೇಖಕರ ಮಹತ್ವವನ್ನು ಅಪಮಾನಿಸುವ, ಅವರ ಬರವಣಿಗೆಗಳೆಲ್ಲವನ್ನೂ ಒಂದೇ ಚೌಕಟ್ಟಿನಲ್ಲಿಟ್ಟು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ನೀಡಿ ಸಾರ್ವತ್ರೀಕರಣಗೊಳಿಸುವ ವಿಫಲ ಪ್ರಯತ್ನವೇಕೆ? ಹಾಗಾದರೆ ನಾ.ಡಿಯವರು ಭೈರಪ್ಪನವರ ಬರವಣಿಗೆಯನ್ನು ಮೆಚ್ಚುವ ಬಹುದೊಡ್ಡ ಓದುಗ ವರ್ಗವನ್ನು ಏನೆಂದು ವ್ಯಾಖ್ಯಾನಿಸುತ್ತಾರೆ?
ಒಬ್ಬ ಲೇಖಕನ ಬರಹಗಳು ಹೆಚ್ಚೆಚ್ಚು ಮರುಮುದ್ರಣಗೊಂಡು ಜನರು ಕೊಂಡು ಓದಿದಷ್ಟೂ ಸಾಹಿತ್ಯ ಕ್ಷೇತ್ರ ಇನ್ನಷ್ಟು ಸಮೃದ್ಧವಾಗುತ್ತಾ ಸಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸರಳ ವಿಚಾರ. ಆದರೆ ಭೈರಪ್ಪನವರ ಕೃತಿಯ ಬೇಡಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವರು ಅವರ ಕೃತಿಗಳನ್ನು ಹಣ ಕೊಟ್ಟು ಖರೀದಿಸಿ ಉಚಿತವಾಗಿ ಹಂಚುತ್ತಿದ್ದಾರೆ ಎಂಬರ್ಥದ ನಿರಾಧಾರವಾದ ಹೇಳಿಕೆಗಳು ಅತ್ಯಂತ ಬಾಲಿಶವೆನಿಸುತ್ತವೆ. ಮಡಿಕೇರಿಯ ಸಾಹಿತ್ಯ ಸಮ್ಮೇಳನದಲ್ಲಿ ಭೈರಪ್ಪನವರ ಕೃತಿಗಳೇ ಅತೀ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆಯಂತೆ, ಹಾಗಾದರೆ ಅಲ್ಲಿಯೂ ಕೂಡಾ ಉಚಿತವಾಗಿ ಹಂಚಲಾಗಿತ್ತೇ? ಹೆಚ್ಚು ಮಾರಾಟವಾಗುವ ಕೃತಿಗಳೆಲ್ಲ ನಾ.ಡಿಯವರ ದೃಷ್ಟಿಕೋನದಲ್ಲಿ ಉತ್ತಮವಾಗದೇ ಇರಬಹುದು ಆದರೆ ಖರೀದಿಸಿ ಓದುವ ಸಾಹಿತ್ಯಾಸಕ್ತ ಆ ಕೃತಿಯನ್ನು ಮೆಚ್ಚಿಕೊಂಡಿರುತ್ತಾನಲ್ಲವೇ? ಅಷ್ಟು ಸಾಕು. ಇಷ್ಟಾಗಿಯೂ ಡುಂಡಿಯ ಲೇಖಕನ ಬಗ್ಗೆ ಸಹಾನುಭೂತಿ ತೋರಿಸುವ ನಾ.ಡಿಸೋಜರವರ ನಿಲುವು ದ್ವಂದ್ವದಿಂದ ಕೂಡಿದೆ. ಕನ್ನಡ ನಾಡು, ನುಡಿ, ಸಾಹಿತ್ಯ ಕ್ಷೇತ್ರವನ್ನು ಕಟ್ಟಿ ಬೆಳೆಸಬೇಕಾದ ಸಾಹಿತಿಗಳು ಹೀಗೆ ಪರಸ್ಪರರನ್ನು ಅವರವರ ಧೋರಣೆ, ನಿಲುವು, ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತ್ಯೇಕಿಸಿ ಕ್ಷುಲ್ಲಕವಾಗಿ ಟೀಕಿಸಿದರೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆಯೇ ಹೊರತು ಇನ್ನೇನೂ ಸಾಧನೆಯಾಗದು. ಸಾಹಿತಿಗಳಿಗೆ ನಿಷ್ಠುರವಾಗಿ ಮಾತನಾಡಲು, ಟೀಕಿಸಲು ಹಲವಾರು ಸಮಸ್ಯಾತ್ಮಕ ವಿಚಾರಗಳು ಈ ನಾಡಿನಲ್ಲಿ ಸಾಕಷ್ಟಿವೆ ಅವುಗಳೆಡೆಗೆ ಗಮನಹರಿಸುವುದೊಳಿತು.
- ಸಂದೇಶ್. ಎಚ್. ನಾಯ್ಕ
ಕುಂದಾಪುರ