ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಫೋರ್ಡ್ ಫೌಂಡೇಷನ್‌ಗೆ ಭಾರತದಲ್ಲೇನು ಕೆಲಸ?

ಭಾರತದ ರಾಜಕಾರಣದಲ್ಲಿ ಮತ್ತು ಭಾರತದಲ್ಲಿ "ಫೋರ್ಡ್ ಫೌಂಡೇಷನ್‌"ನ ಹೆಚ್ಚುತ್ತಿರುವ...

Vishwanath S
Updated On : 17 Jan 2014, 12:22 pm

ಭಾರತದ ರಾಜಕಾರಣದಲ್ಲಿ ಮತ್ತು ಭಾರತದಲ್ಲಿ "ಫೋರ್ಡ್ ಫೌಂಡೇಷನ್‌"ನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಟ್ವಿಟರ್ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯೇ ನಡೆದಿದೆ. ಈ ಕಾರಣಕ್ಕಾಗಿಯೇ ನನಗೆ ಈ ಸಂಸ್ಥೆಯ ಬಗ್ಗೆ ತುಸು ಸಂಶೋಧನೆ ನಡೆಸುವ ಮನಸ್ಸಾಯಿತು. ನನ್ನನ್ನು ನಂಬಿ. ನನ್ನ ಶೋಧನೆಯ ಫಲಿತಾಂಶ ಮಾತ್ರ ಬಹಳ ಕಹಿ ಅನುಭವ ನೀಡುತ್ತದೆ. ಭಾರತ ನಿಜಕ್ಕೂ ಸುರಕ್ಷಿತವಾಗಿದೆಯೇ ಎನ್ನುವ ಪ್ರಶ್ನೆಯನ್ನು ಅದು ಹುಟ್ಟುಹಾಕುತ್ತದೆ.
ಏನಿದು ಫೋರ್ಡ್ ಫೌಂಡೇಷನ್? ಮೊದಲಿನಿಂದಲೂ ನಾನು ಇದನ್ನು ಲೋಕೋಪಕಾರಿ ಕೆಲಸ ಮಾಡುವ ಸಂಸ್ಥೆಯೆಂದೇ ಭಾವಿಸಿದ್ದೆ. ಆದರೆ ಅದರ ಕುರಿತು ಇನ್ನಷ್ಟು ತಿಳಿದುಕೊಳ್ಳುತ್ತಾ ಹೊರಟಾಗ ಬೇರೆಯ ಕಥೆಯೇ ನನಗೆ ಎದುರಾಯಿತು. (http://globalresearch.ca/articles/PET209A.html) ಆಗ ನನಗೆ ಅರ್ಥವಾಗಿದ್ದೇನೆಂದರೆ, ದಾನ ಧರ್ಮದ ಹೆಸರಿನಲ್ಲಿ ಈ ಸಂಸ್ಥೆ, ಜಾಗತಿಕ ಮಾರುಕಟ್ಟೆಯ ಮೇಲೆ ವಾಶಿಂಗ್ಟನ್‌ನ ಪ್ರಭುತ್ವವನ್ನು ಹೇರಲು ಪ್ರಯತ್ನಿಸುತ್ತಿದೆ ಎನ್ನುವುದು. ಅಮೆರಿಕದ ಗುಪ್ತಚರ ಸಂಸ್ಥೆಯಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ಮುಖವಾಡವಾಗಿ ಫೋರ್ಡ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿದೆ! ಇದರ ಮುಖ್ಯ ಚಟುವಟಿಕೆಯೆಂದರೆ ಒಂದು ದೇಶದ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಿಗೆ ಹಣ ನೀಡುವುದು. ಇತಿಹಾಸಕಾರರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಸಂಸ್ಥೆಗಳು, ಪ್ರಕಾಶಕರು...ಹೀಗೆ ಎಲ್ಲಾ ವಲಯದ ಪ್ರಭಾವಿಗಳನ್ನು ಹಣದ ಮೂಲಕ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಕೆಲಸವನ್ನು ಇದು ಮಾಡುತ್ತಾ ಬಂದಿದೆ. ಮತ್ತೂ ಆಳಕ್ಕೆ ಇಳಿದು ನೋಡಿದಾಗ, ದಿಗಿಲುಗೊಳಿಸುವ ಸಂಗತಿಗಳು ನನಗೆ ಎದುರಾದವು. ಏಕೆಂದರೆ ದಿನೇ ದಿನೇ ಭಾರತದ ರಾಜಕೀಯದಲ್ಲಿ ಈ ಸಂಸ್ಥೆಯ ಪಾರುಪತ್ಯ ಹೆಚ್ಚುತ್ತಲೇ ಸಾಗಿದೆ. ಫೋರ್ಡ್ ಫೌಂಡೇಷನ್‌ನಿಂದ ಹಣ ಪಡೆದ ಕೆಲವು ಪ್ರಭಾವಿ ಎನ್‌ಜಿಒಗಳು/ ವ್ಯಕ್ತಿಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ...
1)ಅರವಿಂದ್ ಕೇಜ್ರೀವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಎನ್‌ಜಿಒ(ಕಬೀರ್)
2) ಮಲ್ಲಿಕಾ ಸಾರಾಭಾಯಿಯವರ 'ದರ್ಪಣ' ಸಂಸ್ಥೆ.
3) ಯೋಗೇಂದ್ರ ಯಾದವ್ ಅವರಿಗೆ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ಐಸಿಎಸ್‌ಎಸ್‌ಆರ್‌ನಿಂದ ಹಣ ಬಂದಿತ್ತು. ಆದರೆ ಐಸಿಎಸ್‌ಎಸ್‌ಆರ್‌ಗೆ ಹಣ ಬಂದಿದ್ದು ಫೋರ್ಡ್ ಫೌಂಡೇಷನ್‌ನಿಂದ!
4)ತೀಸ್ತಾ ಸೇತಲ್ವಾಡ್ ಮತ್ತು ಜಾವೇದ್ ಆನಂದ್‌ರ 'ಸಬ್ರಂಗ್ ಕಮ್ಯುನಿಕೇಷನ್ಸ್‌'(ಇವರಿಬ್ಬರೂ ನರೇಂದ್ರ ಮೋದಿಯವರ ವಿರುದ್ಧ ಹೋರಾಡುತ್ತಲೇ ಬಂದವರು)
5) ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ, "ಐಡಿಯಾಸ್ ಆಫ್ ಜಸ್ಟಿಸ್‌" ಪುಸ್ತಕಕ್ಕೆ.
ನಿಮಗೆಲ್ಲ ಗೊತ್ತಿದ್ದೇ ಇದೆ. ಇವರಲ್ಲಿ ಬಹುತೇಕರು ಆಮ್ ಆದ್ಮಿ ಪಕ್ಷದ ಭಾಗವಾಗಿದ್ದಾರೆ ಅಥವಾ ಅದರ ಬೆಂಬಲಿಗರು. ಹೀಗಾಗಿ ಏಕೆ ಫೋರ್ಡ್ ಫೌಂಡೇಷನ್ ಭಾರತದ ರಾಜಕಾರಣದಲ್ಲಿ ಆಸಕ್ತಿ ವಹಿಸುತ್ತಿದೆ ಎನ್ನುವ ಪ್ರಮುಖ ಪ್ರಶ್ನೆಯೊಂದು ಉದ್ಭವವಾಗುತ್ತದೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮತ್ತು ಬೆಂಬಲಿಗರ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಾ ಹೋದಾಗ, ಅರುಣಾ ರಾಯ್, ಮೇಧಾ ಪಾಟ್ಕರ್, ಪ್ರಶಾಂತ್ ಭೂಷಣ್ ಮತ್ತು ಗೋಪಾಲ್ ರಾಯ್ ಅವರ ಬಗ್ಗೆ ಇನ್ನಷ್ಟು ಆಘಾತಕಾರಿ ಸಂಗತಿಗಳು ಅನಾವರಣಗೊಂಡವು...
ಅರುಣಾ ರಾಯ್: 26 ನವೆಂಬರ್ 2008ರಂದು ನಡೆದ ಮುಂಬೈ ದಾಳಿಯಲ್ಲಿ ಅಮಾಯಕ ಭಾರತೀಯರನ್ನು ಕೊಂದು ಹಾಕಿದ ಅಜ್ಮಲ್ ಕಸಬ್‌ಗೆ, "ಕ್ಷಮಾದಾನ ನೀಡಬೇಕು" ಎಂದು ಪ್ರಣಬ್ ಮುಖರ್ಜಿಯವರಿಗೆ ವಿನಂತಿ ಪತ್ರ ಕಳುಹಿಸಿದ್ದ ಮಹಿಳೆಯೀಕೆ. ಇಷ್ಟೇ ಅಲ್ಲದೆ ಈಕೆ ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯ ಭಾಗವೂ ಆಗಿದ್ದಳು.  
ಪ್ರಶಾಂತ ಭೂಷಣ್: ಇವರ ಬಗ್ಗೆ ಎಲ್ಲರಿಗೂ ಗೊತ್ತಿದ್ದೇ ಇದೆ. ಕಾಶ್ಮೀರದ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವವರು. ಅಲ್ಲದೆ ಇವರು ನಕ್ಸಲರ ಅತಿ ಮೆಚ್ಚಿನ ಮಧ್ಯವರ್ತಿಯಾಗಿಯೂ ಕೆಲಸ ಮಾಡಿದವರು. ಅಲ್ಲ ನಕ್ಸಲರಿಗೆ ಪ್ರಶಾಂತ್ ಭೂಷಣ್ ಅವರೇ ಏಕೆ ಬೇಕಾದರು? ಪ್ರಶಾಂತ್ ತಮ್ಮ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಾರೆ ಎಂದವರು ನಂಬಿದ್ದರಾ?
ಮೇಧಾ ಪಾಟ್ಕರ್: ಸರ್ದಾರ್ ಸರೋವರ್ ಆಣೆಕಟ್ಟಿನ ವಿಳಂಬ ನಿರ್ಮಾಣದ ಸುದ್ದಿ ಬಂದಾಗಲೆಲ್ಲ ಮೊದಲು ನೆನಪಾಗುವ ಹೆಸರು ಮೇಧಾ ಪಾಟ್ಕರ್. ಆದರೆ ಅವರ ಬಗ್ಗೆ ಇನ್ನೊಂದು ಕುತೂಹಲಕರ ವಿಷಯ ಇದುವರೆಗೂ ನನ್ನ ಗಮನಕ್ಕೆ ಬಂದಿರಲಿಲ್ಲ. ಛತ್ತೀಸ್‌ಗಡದ ಹಳ್ಳಿಯೊಂದರ ಬುಡಕಟ್ಟು ಜನರು, ಪಾಟ್ಕರ್ ಅವರ ನಕ್ಸಲ್‌ಪರ ವರ್ತನೆಯಿಂದ ರೋಸಿಹೋಗಿ ತಮ್ಮ ಊರಿನಿಂದ ಆಕೆಯನ್ನು ಹೊರಗೋಡಿಸಿದ್ದರು. ಇನ್ನು ಮೇಧಾ ಪಾಟ್ಕರ್‌ಗೆ ಅಂಗನಾ ಚಟರ್ಜಿಯೊಂದಿಗೂ(ಈಕೆಯನ್ನು ಐಎಸ್‌ಐ ಏಜೆಂಟ್ ಎಂದು ಅನುಮಾನಿಸಲಾಗಿತ್ತು) ಬಹಳ ಸಾಮೀಪ್ಯವಿದೆ ಎನ್ನುವುದನ್ನು ಅನಾವರಣಗೊಳಿಸುವ ಕೆಲವು ಲೇಖನಗಳೂ ನನ್ನ ಕಣ್ಣಿಗೆ ಬಿದ್ದವು. ಆದರೆ ಅವು ವಿಶ್ವಾಸಾರ್ಹವೆಂದೆನಿಸಲಿಲ್ಲ ಆದ್ದರಿಂದ ಆ ಲಿಂಕ್ ಅನ್ನು ನಾನು ಕೊಡುತ್ತಿಲ್ಲ.
ಗೋಪಾಲ್ ರಾಯ್: ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯ ಮಾಜಿ ಸದಸ್ಯ. ಸಿಪಿಐ(ಎಮ್‌ಎಲ್) ನ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ನಕ್ಸಲ್ ಪರ ಧೋರಣೆಗೆ ಹೆಸರಾದ, 'ಇಂಡಿಯಾ ಸ್ಟೂಡೆಂಟ್ಸ್ ಅಸೋಷಿಯೇಷನ್‌' ನ ಅಧ್ಯಕ್ಷರಾಗಿದ್ದರು.
ಇದೆಲ್ಲಾ ಸಾಲದು ಎಂಬಂತೆ, ಇತ್ತೀಚೆಗೆ 'ಎಕನಾಮಿಕ್ ಟೈಮ್ಸ್‌' ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು  ಸಿಐಎಗೆ ಭಾರತದ ಮೇಲೆ ಹೆಚ್ಚುತ್ತಿರುವ ಆಸಕ್ತಿಯನ್ನು ಹೊರಹಾಕುತ್ತದೆ. ಭಾರತ ಸರ್ಕಾರ 'ಆಧಾರ್‌'ನ ಆರಂಭಿಕ ಕಾರ್ಯಚಟುವಟಿಕೆಗಳನ್ನು MongoDB ಎನ್ನುವ ದಾಖಲೆ ಆಧಾರಿತ ಡಾಟಾಬೇಸ್ ವ್ಯವಸ್ಥೆಗೆ ಕೊಡಲು ನಿರ್ಧರಿಸಿದೆ ಎನ್ನುವ ವರದಿಯದು. ಆದರೆ ಈ MongoDB ಸ್ಥಾಪನೆಯಾಗಿದ್ದು ಅಮೆರಿಕದ ಸಿಐಎ ಸಂಸ್ಥೆಯ ನಿಧಿಯಿಂದ!
ಅಲ್ಲ ಒಮ್ಮೆ ನೀವೇ ಯೋಚಿಸಿ, ನಮ್ಮ ದೇಶದಲ್ಲೇ ಈ ಪರಿ ರಾಷ್ಟ್ರವಿರೋಧಿ ಶಕ್ತಿಗಳಿವೆ. ಆದರೆ ನಾವು ಕೇವಲ ಚೀನಾ ಮತ್ತು ಪಾಕಿಸ್ತಾನಗಳನ್ನಷ್ಟೇ ಅತಿದೊಡ್ಡ ಅಪಾಯಗಳು ಎಂದುಕೊಂಡಿದ್ದೇವೆ. ಹಾಗಿದ್ದರೆ ನಮ್ಮ ಮಾಧ್ಯಮಗಳೇಕೆ ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಬಾರದು?
ನನ್ನ ಪ್ರಶ್ನೆಯಲ್ಲಿಯೇ ಇದಕ್ಕೆ ಉತ್ತರವಿದೆ. ಮನೀಶ್ ಸಿಸೋಡಿಯಾ(ಝೀ ಚಾನಲ್‌ನ ಮಾಜಿ ಪತ್ರಕರ್ತ), ಯೋಗೇಂದ್ರ ಯಾದವ್(ಸಿಎನ್‌ಎನ್ ಐಬಿಎನ್‌ನ ಮಾಜಿ ಪತ್ರಕರ್ತ), ಶಾಜಿಯಾ ಇಲ್ಮಿ(ಮಾಜಿ ಪತ್ರಕರ್ತೆ)ಮತ್ತು ಅಶುತೋಷ್(ಐಬಿಎನ್7ನ ಮಾಜಿ ವ್ಯವಸ್ಥಾಪಕ ಸಂಪಾದಕ)!
ಇದರೊಟ್ಟಿಗೆ, ಆರ್‌ಬಿಎಸ್‌ನ(ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್)ನ ಮಾಜಿ ಮುಖ್ಯಸ್ಥೆ ಮೀರಾ ಸನ್ಯಾಲ್ ಮತ್ತು ಇನ್ಫೋಸಿಸ್‌ನ ಮಾಜಿ ನಿದೇರ್ಶಕರಾದ ವಿ. ಬಾಲಾ ಈಗ ಆಮ್ ಆದ್ಮಿ ಪಕ್ಷದ ಭಾಗವಾಗಿರುವುದೇಕೆಂಬ ಪ್ರಶ್ನೆ ಹುಟ್ಟಿಕೊಂಡಾಗ ನಂತರ ನನಗೆ ತಿಳಿದದ್ದೇನೆಂದರೆ, ಮೀರಾ ಸನ್ಯಾಲ್ ಅವರ ಎನ್‌ಜಿಒ 'ಪ್ರಧಾನ್‌'ಗೆ(ಈ ಸಂಸ್ಥೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ) ಫೋರ್ಡ್ ಫೌಂಡೇಷನ್‌ನಿಂದ ಹಣ ಹರಿದು ಬಂದಿದೆ. ಅಲ್ಲದೆ, ಇನ್ಫೋಸಿಸ್ ನಾರಾಯಣ ಮೂರ್ತಿಯವರೂ ಫೋರ್ಡ್‌ಫೌಂಡೇಷನ್‌ನ ಟ್ರಸ್ಟಿಗಳ ಮಂಡಳಿಯ ಭಾಗವಾಗಿದ್ದಾರೆ. ಬಹುಶಃ ಇನ್ಫೋಸಿಸ್‌ನ ಸುಮಾರು 60 ಪ್ರತಿಶತದಷ್ಟು ವ್ಯಾಪಾರ ಅಮೆರಿಕದಿಂದಲೇ ಬರುವುದರಿಂದ ಫೋರ್ಡ್‌ನೊಂದಿಗೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯ ಅವರಿಗೆ ಎದುರಾಗಿರಬಹುದು.
ಭ್ರಷ್ಟಾಚಾರವೆನ್ನುವುದು ಅತಿ ದೊಡ್ಡ ಪೀಡೆ ಎನ್ನುವುದು ನಮಗೆಲ್ಲ ಗೊತ್ತಿರುವಂಥದ್ದೆ. ಆದರೆ ರಾಷ್ಟ್ರೀಯ ಭದ್ರತೆಗಿಂತಲೂ ದೊಡ್ಡ ವಿಷಯ ಮತ್ತೊಂದಿಲ್ಲ. ನಮಗೆಲ್ಲರಿಗೂ ಭ್ರಷ್ಟಾಚಾರ ಮುಕ್ತ ಭಾರತದ ಅವಶ್ಯಕತೆಯಿದೆ. ಆಮ್ ಆದ್ಮಿ ಪಕ್ಷ ನಮ್ಮಲ್ಲಿ ಆಶಾಭಾವನೆಯನ್ನೂ ಹುಟ್ಟಿಸಿತ್ತು. ಆದರೆ ಈ ಸಂಗತಿಗಳು ನನ್ನನ್ನು ಒಂದು ಕ್ಷಣಕ್ಕೆ ಅಲುಗಾಡಿಸಿಬಿಟ್ಟವು. ಅಲ್ಲಾ, ನಾವು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕೇ? ಸ್ವಹಿತಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಅಡವಿಡುವವರು, ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೊಡಬಲ್ಲರೇ?ಫೋರ್ಡ್ ಫೌಂಡೇಷನ್‌ನಂತೆ, ಆಪ್ ಕೂಡ ಯಾವುದೋ ಒಂದು ದೊಡ್ಡ ಪಿತೂರಿಯ ಮುಖವಾಡವೇ?



- ಪ್ರೊ. ಆರ್. ವೈದ್ಯನಾಥನ್
ಐಐಎಮ್, ಬೆಂಗಳೂರು
vaidya@iimb.ernet.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement