ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇನ್ಯಾರನ್ನೋ ಅಮ್ಮ ಅನ್ನಲು ಸಾಧ್ಯವೇ?

Vishwanath S
Updated On : 19 Jan 2014, 12:39 pm

ಗಾಂಧಿನಗರದಲ್ಲಿ ಡಬ್ಬಿಂಗ್ ಸದ್ದು ಜೋರಾಗಿದೆ. ಪರ ಮತ್ತು ವಿರೋಧಗಳ ಜಿದ್ದಿನ ಆಚೆಗೆ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿರುವುದೇ ಡಬ್ಬಿಂಗ್ ಸೌಂಡು ಹೆಚ್ಚಾಗಲು ಕಾರಣ. ಈ ನಡುವೆ ದೆಹಲಿಯ ಭಾರತೀಯ ಸ್ವರ್ಧಾತ್ಮಕ ಆಯೋಗ ನೇಮಿಸಿರುವ ಸಮಿತಿ ಸಲ್ಲಿಸಿರುವ ವರದಿ ಡಬ್ಬಿಂಗ್ ಪರವಾಗಿದೆ ಎನ್ನುವ ವದಂತಿ ಡಬ್ಬಿಂಗ್ ಪರವಾಗಿರುವವರಿಗೆ ಬಲ ನೀಡಿದೆ. ಗ್ರಾಹಕ ಸಂಸ್ಕೃತಿ, ಮನರಂಜನೆ, ಜ್ಞಾನ, ಕೆಟ್ಟ ಚಿತ್ರಗಳು, ಪರ ಭಾಷೆಯ ಒಳ್ಳೆಯ ಚಿತ್ರಗಳು... ಇವು ಡಬ್ಬಿಂಗ್ ಡಬ್ಬಾ ಪರ ನಿಂತರೆ, ಕಾರ್ಮಿಕರು, ಕಲಾವಿದರ ಉದ್ಯೋಗ, ಚಿತ್ರೋದ್ಯಮದ ಸ್ಥಿತಿ, ನೆಲದ ಭಾಷೆ, ಸಂಸ್ಕೃತಿ, ಸೃಜನಶೀಲತೆಯ ಮಾತುಗಳು ಡಬ್ಬಿಂಗ್ ವಿರುದ್ಧ ನಿಂತಿವೆ. ಇದರ ನಡುವೆ ನಮ್ಮದಲ್ಲದ ರಿಮೇಕ್ ಚಿತ್ರಾನ್ನದ ಸಂಸ್ಕೃತಿ ಕೂಡ ಪ್ರಶ್ನೆಯಾಗಿ ಉಳಿದಿದೆ. ಡಬ್ಬಿಂಗ್ ವಿರುದ್ಧ ತೊಡೆ ತಟ್ಟಿರುವ ಕನ್ನಡ ಚಿತ್ರರಂಗ ತನ್ನ ಪ್ರತಿಭಟನೆಯನ್ನು ದಾಖಲಿಸಲು ಹೊರಟಿರುವ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಲಾವಿದ ಅಶೋಕ್ ಮಾತನಾಡಿದ್ದಾರೆ.
ಡಬ್ಬಿಂಗ್ ಸಮಸ್ಯೆಯನ್ನು ಮನರಂಜನಾ ಸ್ವಾತಂತ್ರ್ಯ, ಕಾನೂನಿನ ಚೌಕಟ್ಟಿನಲ್ಲಿ ನೋಡಬೇಕಾ ಅಥವಾ ಭಾಷೆ, ಸ್ಥಳೀಯ ಸಾಂಸ್ಕೃತಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾ?
-ಭಾಷೆಯ ಅಳಿವು- ಉಳಿವಿನ ನೆಲೆಯಲ್ಲಿ ಡಬ್ಬಿಂಗ್ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಭಾಷಾವಾರು ಪ್ರಾಂತ್ಯಗಳನ್ನು ಮಾಡಿದ್ದು ಆಯಾ ಭಾಷೆ, ಸಂಸ್ಕೃತಿಗೆ ಮಹತ್ವ ಸಿಗಬೇಕು ಎನ್ನುವ ಕಾರಣಕ್ಕೆ ಅಲ್ಲವೇ? ಆದರೆ, ಜಾಗತೀಕರಣದ ಹೆಬ್ಬಾವಿಗೆ ತೆರೆದುಕೊಂಡಿರುವುದರಿಂದ ಭಾವನೆಗಳು, ಆಚಾರ, ವಿಚಾರಗಳಿಗೆ ಜಾಗವಿಲ್ಲದಂತಾಗಿದೆ. ನಮ್ಮ ದೇಶದ ಕಾನೂನು, ನೀತಿ, ನಿಯಮಗಳು ಮಾತ್ರವಲ್ಲ, ನಮ್ಮ ಭಾಷೆ, ಜೀವನ ಶೈಲಿಯೂ ಸಹ ಹೇಗಿರಬೇಕೆಂಬುದನ್ನು ನಿರ್ಧರಿಸುವ ಹಕ್ಕನ್ನು ಪರರ ಕೈಗೆ ಕೊಟ್ಟಿದ್ದೇವೆ. ಡಬ್ಬಿಂಗ್ ಹಿಂದಿನ ಹುನ್ನಾರಗಳನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಒಬ್ಬ ಸಾಮಾನ್ಯ ಗ್ರಾಹಕ ತನಗೆ ಡಬ್ಬಿಂಗ್ ಬೇಕು ಅಂತ ಕೋರ್ಟ್‌ಗೆ ಹೋಗಲು ಸಾಧ್ಯವೆ? ಹೋದರೂ ಲಕ್ಷಾಂತರ ರುಪಾಯಿ ಖರ್ಚು ಮಾಡಿ ವಕೀಲರನ್ನು ಇಟ್ಟುಕೊಳ್ಳುತ್ತಾನೆಯೇ? ಇಡೀ ಜಗತ್ತನ್ನೇ ಮಲ್ಟಿಪ್ಲೆಕ್ಸ್ ಮಾಡಲಿಕ್ಕೆ ಹೊರಟಿರುವ ಕಾರ್ಪೊರೇಟ್ ದಿಗ್ಗಜರು ಗ್ರಾಹಕರನ್ನು ಹುಟ್ಟು ಹಾಕುತ್ತಾರೆ. ಹಕ್ಕು, ಸ್ವಾತಂತ್ರ್ಯ ಎಂದು ಕೋರ್ಟ್‌ಗೆ ಹೋಗುತ್ತಾರೆ. ಆ ಗ್ರಾಹಕರಿಗೆ ಅವರೇ ವಕೀಲರನ್ನೂ ಕೊಡುತ್ತಾರೆ. ಭಾಷೆಯ ಸಮಸ್ಯೆ ಕಾನೂನಿನ ಪ್ರಶ್ನೆಯಾಗಿದೆ.

ಸಿನಿಮಾ ಎಂಥವರನ್ನೂ ಪ್ರಭಾವಿಸುವ ಮಾಧ್ಯಮ. ಹೀಗಾಗಿ ಅದರ ಭಾಷೆ ಕೂಡ ನಮ್ಮದೇ ಮಾತು, ಭಾಷೆಯಾಗುವ ಅಪಾಯ ಇದೆ. ಈ ಕಾರಣಕ್ಕೆ ಪರ ಭಾಷೆಯ ಚಿತ್ರಗಳು ಆ ಭಾಷೆಯಲ್ಲೇ ಬಂದರೆ ನಮ್ಮ ಭಾಷೆ ಮೂಲೆ ಗುಂಪಾಗಲ್ಲವೇ? ಅದೇ ಚಿತ್ರಗಳು ಕನ್ನಡದಲ್ಲಿ ಬರಲಿ ಎನ್ನುವ ವಾದದಲ್ಲಿ ತಪ್ಪೇನಿದೆ?
-ಇಲ್ಲಿ ಕೇವಲ ಭಾಷೆ ಮಾತ್ರ ಬರಲ್ಲ. ಹಿಂದಿ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಮನೆಯಲ್ಲೇ ಹೆಣ್ಣು ಮಕ್ಕಳ ಸೊಂಟ ಹಿಡಿದುಕೊಂಡು ಕುಣಿಯುತ್ತಾರೆ. ಹಾಲಿವುಡ್ ಚಿತ್ರಗಳಲ್ಲಿ ಅಪ್ಪಿಕೊಳ್ಳುವುದು, ತುಟಿಗೆ ತುಟಿ ಸೇರಿಸಿ ಮುತ್ತು ಕೊಡುವುದು ಕಾಮನ್. ಈಗ ಆ ಸಂಸ್ಕೃತಿ ಕನ್ನಡೀಕರಣಗೊಳ್ಳಬೇಕೆ? ಅದನ್ನು ನೋಡುವ ನಮ್ಮ ಮಕ್ಕಳು ಅದರಿಂದ ಏನು ಕಲಿಯುತ್ತವೆ? ಭೋಗದ ಸಂಸ್ಕೃತಿಯನ್ನು ತುರುಕುವ ಇಂಥ ಚಿತ್ರಗಳನ್ನು ಕನ್ನಡದಲ್ಲೇ ನೋಡೋಣ ಎನ್ನುವುದು ಎಷ್ಟು ಸರಿ?

ಹಾಗಾದರೆ ಈಗ ಕನ್ನಡ ಚಿತ್ರಗಳಲ್ಲಿ ನೋಡುತ್ತಿರುವ ಸಂಸ್ಕೃತಿಯಾದರೂ ಎಂಥದು? ನಮ್ಮ ಕನ್ನಡ ಸಿನಿಮಾಗಳು ಈಗ ಪ್ರದರ್ಶಿಸುತ್ತಿರುವುದು ನಿಜವಾದ ಕನ್ನಡತನವೇ?
-ಖಂಡಿತ ಅಲ್ಲ. ಹಾಗಂತ ಇದಕ್ಕೆ ಡಬ್ಬಿಂಗ್ ಮಾತ್ರವೇ ಪರಿಹಾರಾನಾ? ನಮ್ಮ ಅಮ್ಮ ಒಳ್ಳೆಯ ಸೀರೆ ಉಟ್ಟುಕೊಂಡಿಲ್ಲ, ನೋಡಕ್ಕೆ ಚೆನ್ನಾಗಿಲ್ಲ ಅಂತ ಇನ್ಯಾವುದೋ ಅಪರಿಚಿತ ಮುಖವನ್ನು ಅಮ್ಮ ಅಂತ ತಬ್ಬಿಕೊಳ್ಳುವುದಕ್ಕೆ ಆಗುತ್ತದೆಯೇ? ನಮ್ಮ ತಾಯಿ ಹೇಗಿದ್ದರೂ ಆಕೆ ನಮಗೆ ಅಮ್ಮನೇ. ಹಾಗೆ ಕನ್ನಡ ಚಿತ್ರಗಳು ಚೆನ್ನಾಗಿಲ್ಲ ಅಂತ ಪರ ಭಾಷೆ ಸಿನಿಮಾಗಳು ಬರಲಿ ಅನ್ನುವುದು ಸರಿಯಲ್ಲ. ಡಬ್ಬಿಂಗ್ ಅನ್ನು ವಿರೋಧಿಸುತ್ತಲೇ, ಒಳ್ಳೆಯ ಸಿನಿಮಾಗಳನ್ನು ಮಾಡಿ ಅಂತ ಒತ್ತಾಯಿಸೋಣ. ಅದು ಬಿಟ್ಟು ನಮ್ಮ ಮನೆ ಹೆಣ್ಣು ಮಕ್ಕಳು ಸರಿ ಇಲ್ಲ ಅಂತ ಬೀದಿಯಲ್ಲಿ ಅವರ ಮಾನ ಹರಾಜು ಹಾಕುವುದು ಬೇಡ.

ಫ್ರೇಮ್ ಟು ಫ್ರೇಮ್ ಪರ ಭಾಷೆ ಚಿತ್ರಗಳನ್ನು ರಿಮೇಕ್ ಮಾಡಿದರೆ ನಾಶವಾಗದ ಭಾಷೆ, ಡಬ್ಬಿಂಗ್‌ನಿಂದ ಅರ್ಥಾತ್ ಅದರ ಮೂಲವನ್ನು ಕನ್ನಡದಲ್ಲೇ ತರ್ಜುಮೆ ಮಾಡುವುದರಿಂದ ಹೇಗೆ ನಾಶವಾಗುತ್ತದೆ?
-ರಿಮೇಕ್‌ನಿಂದ ಕಥೆಗಾರನಿಗೆ ಮಾತ್ರ ಕೆಲಸ ಇರಲ್ಲ ಅಷ್ಟೆ. ಮಿಕ್ಕಂತೆ ಎಲ್ಲವೂ ನಮ್ಮದೇ ಆಗಿರುತ್ತದೆ. ನಿರ್ದೇಶಕನಾದವನಿಗೆ ಒಂಚೂರು ತಲೆ ಇದ್ದರೆ ಸ್ವಂತವಾಗಿ ಯೋಚಿಸಿ ಒಂದಷ್ಟು ಸೃಜನಶೀಲತೆಯಿಂದ ಸಿನಿಮಾ ಮಾಡುತ್ತಾನೆ. ಇದು ರಿಮೇಕ್ ಸಿನಿಮಾಗಳಲ್ಲಿರುವ ಒಂದು ರಿಯಾಯಿತಿ. ಇದರಿಂದ ಸ್ವಲ್ಪ ಮಟ್ಟಿಗಾದರೂ ನಮ್ಮತನ ಕಾಣಿಸುತ್ತದೆ. ಇದು ಡಬ್ಬಿಂಗ್ ಸಂಸ್ಕೃತಿಯಿಂದ ಸಾಧ್ಯವಿಲ್ಲ. ಹಾಗಿದ್ದರೂ ರಿಮೇಕ್ ಮಾಡುವುದು ಸರಿಯಲ್ಲ. ಆದರೆ, ಸೋಮಾರಿತನ ಹೆಚ್ಚಾಗಿ ಬಸುರಿ ಹೆಂಗಸನ್ನು ಮದುವೆಯಾದಂತೆ ರಿಮೇಕ್ ಕಥೆಗಳನ್ನು ತರುತ್ತಿದ್ದೇವೆ.

ಡಬ್ಬಿಂಗ್‌ನಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮಾತ್ರ ಚಿತ್ರೋದ್ಯಮ ಇದರ ವಿರುದ್ಧ ಮಾತನಾಡುತ್ತಿದೆ. ಹಾಗಾದರೆ, ಕಾರ್ಮಿಕರು- ಕಲಾವಿದರ ಯೋಗಕ್ಷೇವು ಬಯಸುವುದಾದರೆ, ಕನ್ನಡ ಚಿತ್ರಗಳಲ್ಲೇ ಎಷ್ಟು ಮಂದಿ ಪರ ಊರಿನ ನಟ, ನಟಿಯರು ಇಲ್ಲ ಹೇಳಿ? ಇನ್ನು ಕಾರ್ಮಿಕರಿಗೆ ಇವರು ಕೊಟ್ಟಿರುವ ಸವಲತ್ತುಗಳಾದರೂ ಏನು?
ನಿಜ. ನ್ಯೂನತೆಗಳಿವೆ. ಆ ಬಗ್ಗೆ ಮಾತನಾಡಿದರೆ ಅದೇ ಒಂದು ದೊಡ್ಡ ಕಾದಂಬರಿಯಾಗುತ್ತದೆ. ಆದರೆ, ನಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಮಗೆ ನಾವೇ ಗೋರಿ ತೋಡಿಕೊಳ್ಳುವುದು ಬೇಡ. 'ಅವತಾರ್‌' ಚಿತ್ರ ಬಂದಾಗ ನಿರ್ದೇಶಕ ಮಹೇಶ್ ಭಟ್ ನನಗೆ ಫೋನ್ ಮಾಡಿ, 'ನೀವು ಡಬ್ಬಿಂಗ್ ಅನ್ನು ಹೇಗೆ ತಡೆಯಲು ಸಾಧ್ಯವಾಯಿತು' ಅಂತ ಕೇಳಿದ್ರು. ಅಂದರೆ ಒಂದು 'ಅವತಾರ್‌' ಸಿನಿಮಾ ಮಹೇಶ್ ಭಟ್‌ರಂಥ ನಿರ್ದೇಶಕನ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಯಾಕೆಂದರೆ ಡಬ್ಬಿಂಗ್ ಬಂದರೆ ಇಲ್ಲಿನ ಸಿನಿಮಾ ಮಂದಿ ಉಸಿರಾಡುವುದಕ್ಕೂ ಆಗಲ್ಲ ನೋಡಿ.

ಡಬ್ಬಿಂಗ್ ಎನ್ನುವುದು ಒಂದು ಮಾಫಿಯಾ ಅಂತ ನಟ ಪ್ರಕಾಶ್ ರೈ ಅವರು ಹೇಳಿದ್ದಾರೆ. ಅದನ್ನು ಒಪ್ಪುತ್ತೀರಾ?
-ಡಬ್ಬಿಂಗ್‌ಗೆ ಎರಡರಿಂದ ಮೂರು ಲಕ್ಷ ಖರ್ಚು ಮಾಡಿದರೆ ಸಾಕು, ಕೋಟಿ ಕೋಟಿ ವ್ಯವಹಾರ ಮಾಡಬಹುದು. ಇನ್ನು ಡಬ್ಬಿಂಗ್ ಬೇಕು ಅಂತ ಯಾರು ಯಾರನ್ನ ಎತ್ತಿಕಟ್ಟಿದ್ದಾರೆ ಅಂತ ಗಮನಿಸಿ. ರಿಲಯನ್ಸ್‌ನಂಥ ದೊಡ್ಡ ದೊಡ್ಡ ಕಂಪನಿಗಳು ಡಬ್ಬಿಂಗ್ ಪರ ವಕಾಲತ್ತು ವಹಿಸುತ್ತಿರುವವರ ಬೆನ್ನಿಗೆ ನಿಂತಿವೆ. ನಮ್ಮಲ್ಲಿ ಕೆಲವರು ಡಬ್ಬಿಂಗ್‌ನಿಂದ ಕೋಟ್ಯಧಿಪತಿಗಳಾಗಹುದು ಅಂತ ಕನಸು ಕಾಣುತ್ತಿದ್ದಾರೆ. ಇದೆಲ್ಲ ನೋಡಿದರೆ, ಡಬ್ಬಿಂಗ್ ಈಗ ಬೇರೆ ಭಾಷೆಯಲ್ಲಿ ಬರುವ ಒಳ್ಳೆಯ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಬೇಕೆಂಬ ವಾದಕ್ಕೆ ಮಾತ್ರ ಸೀಮಿತವಾಗಿಲ್ಲ. ಪಕ್ಕಾ ಮಾಫಿಯಾನೇ ಆಗಿದೆ.

ಈಗಾಗಲೇ ತೆಲುಗು, ತಮಿಳು ಭಾಷೆಯಲ್ಲಿ ಡಬ್ಬಿಂಗ್ ಸದ್ದು ಮಾಡುತ್ತಿದೆ. ಆದರೂ ಅಲ್ಲಿನ ಚಿತ್ರರಂಗ ಬಾಗಿಲು ಮುಚ್ಚಿದೆಯೇ? ಈಗಲೂ ಅಲ್ಲಿನ ಸಿನಿಮಾಗಳಿಗೆ ಬೇಡಿಕೆ ಇದೆಯಲ್ಲ?
-ನಾನು ಮೊದಲೇ ಹೇಳಿದಂತೆ ಅವತಾರ್ ಬಂದ ಮೇಲೆ ಮಹೇಶ್ ಭಟ್ ಮಾತ್ರವಲ್ಲ, ಬಹಳಷ್ಟು ಮಂದಿ ಡಬ್ಬಿಂಗ್ ಅನ್ನು ಹೇಗಪ್ಪ ನಿಲ್ಲಿಸುವುದು ಅಂತ ಯೋಚಿಸಿದ್ದಾರೆ. ಈಗ ಡಬ್ಬಿಂಗ್ ವಿರುದ್ಧ ಅಲ್ಲಿಯೂ ಧ್ವನಿ ಕೇಳಿಬರುತ್ತಿದೆ. ಹೌದು, ಡಬ್ಬಿಂಗ್ ಇದ್ದರೂ ಅಲ್ಲಿನ ನಟರಿಗೆ, ಸಿನಿಮಾಗಳಿಗೆ ಬೇಡಿಕೆ ಇದೆ. ಯಾಕೆಂದರೆ ನಮ್ಮಂತೆ ಅವರಿಗೆ ಬೇರೆ ಭಾಷೆಯ ಸಿನಿಮಾ ಆಯ್ಕೆ ಇಲ್ಲ. ಎಂದಾದರೂ ತಮಿಳುನಾಡಿನಲ್ಲೋ, ಆಂಧ್ರದಲ್ಲೋ, ಬಾಂಬೆನಲ್ಲೋ ಕನ್ನಡದ ಯಾವುದಾದರೂ ಚಿತ್ರ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದನ್ನು ನೋಡಿದ್ದೀರಾ? ಆದರೆ, ನಮ್ಮ ಊರಿನ ಪರಿಸ್ಥಿತಿ ಹಾಗಲ್ಲ. ಇಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ವಿಜಯ್, ಅಜಿತ್, ಮಹೇಶ್ ಬಾಬು, ರಾಮ್‌ಚರಣ್ ತೇಜ, ಶಾರುಖ್ ಖಾನ್, ಆಮಿರ್‌ಖಾನ್, ಅಕ್ಷಯ್ ಕುಮಾರ್ ಎಲ್ಲರೂ ಬರುತ್ತಾರೆ. ಯಾರನ್ನು ಬೇಕಾದ್ರು ನೋಡಬಹುದು. ನಮ್ಮದು ಬಹುಸಂಸ್ಕೃತಿ ಊರು ಅಲ್ಲವೇ!

ಕಾನೂನು ಮೂಲಕ ಡಬ್ಬಿಂಗ್ ಗೆದ್ದರೆ ಏನಾಗಬಹುದು?
-ಕಾನೂನಿನ ಮುಂದೆ ಎಲ್ಲರು ತಲೆ ಬಾಗಬೇಕು ನಿಜ. ಆದರೆ, ನಮ್ಮತನ ಅಂತ ಒಂದು ಇರುತ್ತದಲ್ಲ ಅದಕ್ಕಾದರೂ ಡಬ್ಬಿಂಗ್ ಮುಂದೆ ಸ್ವಂತಿಕೆಯನ್ನು ಮತ್ತಷ್ಟು ಪ್ರಯೋಗಿಸಬೇಕಿದೆ. ಸಿನಿಮಾ ತಯಾರಿಕಾ ವಿಧಾನಗಳನ್ನು ಬದಲಾಯಿಸಿಕೊಳ್ಳಬೇಕಿದೆ. ನಾಲ್ಕು ಕೋಟಿಯಲ್ಲಿ ಒಂದು ಸಿನಿಮಾ ಮಾಡುವ ಬದಲು ನಾಲ್ಕು ಸಿನಿಮಾ ಮಾಡಿ ಜಿಲ್ಲಾ ಮಟ್ಟಕ್ಕೆ ಹೋಗಬೇಕಿದೆ. ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಯೋಚನೆ ಮಾಡಬೇಕಿದೆ. ಆ ಮೂಲಕವಾದರೂ ಕಾನೂನಿನ ನೆರಳಿನಲ್ಲಿ ಪ್ರವೇಶಗೊಂಡಿರುವ ಡಬ್ಬಿಂಗ್‌ಗೆ ಸೂಕ್ತ ಉತ್ತರ ಕೊಡಬಹುದೇನೋ?


- ಆರ್.ಕೇಶವಮೂರ್ತಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement