ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾಹಿತಿಗಳ ಸಂಗ್ರಹವೇ ಜ್ಞಾನವೆಂಬ ಭ್ರಮೆ

ನಾನು ಕನ್ನಡದ ಅಧ್ಯಾಪಕ. ಬಿಎ, ಎಂಎ, ಎಂಫಿಲ್‌ಗಳಿಗೆ ಕನ್ನಡ ಕಲಿಸುತ್ತೇನೆ. ಎಂಟು...

Vishwanath S
Updated On : 19 Jan 2014, 12:35 pm

ನಾನು ಕನ್ನಡದ ಅಧ್ಯಾಪಕ. ಬಿಎ, ಎಂಎ, ಎಂಫಿಲ್‌ಗಳಿಗೆ ಕನ್ನಡ ಕಲಿಸುತ್ತೇನೆ. ಎಂಟು ಮಂದಿಗೆ ಪಿಎಚ್.ಡಿ.ಗಾಗಿ ಮಾರ್ಗದರ್ಶನ ನೀಡುತ್ತೇನೆ. ಯಾರಾದರೂ ಆಹ್ವಾನಿಸಿದರೆ ಹೋಗಿ ಭಾಷಣ ಮಾಡುವುದೂ ಇದೆ. ಆದರ್ಶಗಳನ್ನು ಬೋಧಿಸುವುದು, ಮಾತಿನ ನಡುವೆ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಉದ್ಧರಿಸುವುದು, ಸಾಧ್ಯವಾದಷ್ಟೂ ಬೇರೆಯವರಿಗೆ ಸರಿಯಾಗಿ ಅರ್ಥವಾಗದಂತೆ ಮಾತನಾಡುವುದು, ನಾನೇ ದೊಡ್ಡ ವ್ಯಕ್ತಿ ಎಂಬಂತೆ ಬಿಂಬಿಸುವುದು, ಫೋಟೋಗಳಿಗೆ ಫೋಸುಕೊಡುವುದು, ಇತ್ಯಾದಿಗಳನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಿಕೊಂಡಿದ್ದೇನೆ. ಆದರೂ ನನ್ನ ಬಗ್ಗೆ ನನಗೆ ಪೂರ್ತಿ ಭರವಸೆ ಇಲ್ಲ. ನನಗೆ ನಾನೇ ಕೇಳಿಕೊಳ್ಳಬಹುದಾದ ಕೆಲವು ಪ್ರಶ್ನೆಗಳಿಗೆ ನನ್ನಿಂದ ಉತ್ತರಿಸಲು ಸಾಧ್ಯವಿಲ್ಲ ಎಂಬ ಆತಂಕ ನನ್ನನ್ನು ಕಾಡುತ್ತಲೇ ಇದೆ. ಉದಾಹರಣೆಗೆ, ನಾನು ಕನ್ನಡ ಕಲಿಸುವುದರಿಂದಾಗಿ ಒದಗುವ ಪ್ರಯೋಜನ ಯಾರ ಪರವಾಗಿದೆ? ನಾನು ಭಾಷೆಯನ್ನು ಕಲಿಸುತ್ತಿದ್ದೇನೆಯೇ, ಭಾಷೆಯ ಬಗ್ಗೆ ಕಲಿಸುತ್ತಿದ್ದೇನೆಯೇ, ಅಥವಾ ಎರಡೂ ಅಲ್ಲದ, ಅಥವಾ ಎರಡೂ ಆಗಿರಬಹುದಾದ ಇನ್ನೊಂದನ್ನು ಕಲಿಸುತ್ತಿದ್ದೇನೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರಗಳು ಇಲ್ಲದಿಲ್ಲ, ಆದರೆ ಅವು ಪ್ರಾಮಾಣಿಕತೆಯನ್ನು ನಾಚಿಕೆಯನ್ನಾಗಿ ಪರಿವರ್ತಿಸುತ್ತವೆ. ನಾಚಿಕೆಯ ಹಿಂದೆ ಸ್ವಾರ್ಥ, ಅದರ ಹಿಂದೆ ಸೋಂಭೇರಿತನ, ಜತೆಗೆ ಸಣ್ಣ ಪ್ರಮಾಣದ ಹಿಂಸಾರತಿ ಎಲ್ಲವೂ ಸೇರಿ ಭಯ ಹುಟ್ಟಿಸುತ್ತವೆ.
 ಹಳಗನ್ನಡವನ್ನು ಸಾಧ್ಯವಾದಷ್ಟೂ ಪಠ್ಯ ಕ್ರಮದಿಂದ ಹೊರಗಿಡಲು ಯತ್ನಿಸುವ ನಾವು ಅದಕ್ಕೆ ಕೊಡುವ ಕಾರಣಗಳಲ್ಲಿ ನಮಗೆ ಹಳಗನ್ನಡ ಓದಲು ಕಷ್ಟವಾಗುತ್ತದೆ ಎನ್ನುವ ಕಾರಣ ಇರುವುದಿಲ್ಲ. ಬೇರೆಬೇರೆ ಸೆಮಿನಾರುಗಳಿಗೋ ಕೋರ್ಸುಗಳಿಗೋ ಹೋಗುವ ನಾವು ಪಾಠಹೇಳುವುದಕ್ಕಿಂತ ಇದೇ ಒಳ್ಳೆಯದು ಎಂಬ ಭಾವನೆಯನ್ನು ಪ್ರಕಟಿಸುವುದಿಲ್ಲ. ನಾಲ್ಕಾರು ವರ್ಷ ಪಾಠಮಾಡಿದ್ದನ್ನೇ ಐದನೇ ವರ್ಷಕ್ಕೂ ಆರಿಸಲು ತವಕಿಸುವುದು ಹೊಸತನ್ನು ಕಲಿಸಲು ಒಂದಷ್ಟು ತಯಾರಿ ನಡೆಸಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಎಂದರೆ ಒಪ್ಪುವುದು ಹೇಗೆ?
 ಪಿಎಚ್.ಡಿ.ಗಾಗಿರುವ ಸಂಶೋಧನೆ ಆಸಕ್ತಿಯಾಗುವ ಬದಲು ಅನಿವಾರ್ಯತೆಯೋ ಒತ್ತಾಯವೋ ಒತ್ತಡವೋ ಆಗಿಬಿಟ್ಟಿದೆ. ಇನ್ಕ್ರಿಮೆಂಟಿಗಾಗಿ, ಪ್ಲೇಸ್‌ಮೆಂಟಿಗಾಗಿ ನಾವು ಪಿಎಚ್.ಡಿ. ಸಂಪಾದಿಸಲು ಆರಂಭಿಸಿದ್ದೇವೆ.
ಮಾರ್ಗದರ್ಶಕನ ಹತ್ತಿರ ಬರುವ ವಿದ್ಯಾರ್ಥಿ ನನಗೊಂದು ವಿಷಯ ಕೊಡಿ ಎಂದು ಅಂಗಲಾಚುತ್ತಾನೆ, ಎಕ್ಸ್ ಎಂಬವ ನನಗೊಂದು ಅಂಗಿಕೊಡಿ ಎಂದು ಅಂಗಲಾಚಿದ ಹಾಗೆ. ಅವನಿಗೆ ಆಸಕ್ತಿಯ ಕ್ಷೇತ್ರ ಇಲ್ಲ, ಯಾವ ವಿಷಯದಲ್ಲೂ ನಿಖರ ಪರಿಜ್ಞಾನ ಇಲ್ಲ, ಆದರೆ ಸಂಶೋಧನೆ ಕೈಗೊಳ್ಳಬೇಕೆಂಬ ತುಯ್ತು ಒಂದೇ ಸವನೆ ಉಕ್ಕಿ ಹರಿಯುತ್ತದೆ. ಕೊನೆಗೂ ಮಾರ್ಗದರ್ಶಕ ಒದಗಿಸಿದ, ಹಿಂದೆ ಮುಂದೆ ಏನೂ ಗೊತ್ತಿಲ್ಲದ ವಿಷಯ ಹಿಡಿದು ಒದ್ದಾಡುತ್ತಾನೆ. ಯಾರಯಾರದೋ ನೆರವಿನಿಂದ ಒಂದು ಥೀಸಿಸ್ ಎಂಬ ವಸ್ತುವನ್ನು ತಯಾರಿಸಿ, ವಿಶ್ವವಿದ್ಯಾಲಯಕ್ಕೆ ಕೊಟ್ಟು ಕೈ ತೊಳೆದುಕೊಳ್ಳುತ್ತಾನೆ. ಮಾರ್ಗದರ್ಶಕನಿಗೂ ಇವನ ಸಹವಾಸ ಸಾಕಾಗಿ ಹೋಗಿರುತ್ತದೆ. ತನ್ನ ಗೌರವಕ್ಕೇ ಎಳ್ಳುನೀರು ಬಿಡುವಂತೆ ಥೀಸಿಸ್‌ನ ಪ್ರಮಾಣಪತ್ರದಲ್ಲಿ ಸಹಿ ಹಾಕುತ್ತಾನೆ. ಪ್ರಾಮಾಣಿಕವಾಗಿ ಸಂಶೋಧನೆ ನಡೆಸಿ ಪದವಿ ಪಡೆಯುವವರಿಗೆ ಇದರಿಂದಾಗಿ ಅವಮಾನವಾಗುತ್ತದೆ ನಿಜ, ಅದಕ್ಕೆ ಕಾರಣ ಅವರ ಪ್ರಾಮಾಣಿಕತೆಯಲ್ಲ. ವಿದ್ಯಾರ್ಥಿಯ ಒಳನೋಟಗಳನ್ನು ಕದ್ದು ಪ್ರಸಿದ್ಧ ಜರ್ನಲ್‌ಗಳಲ್ಲಿ ಲೇಖನ ಬರೆಯುವ ಮಾರ್ಗದರ್ಶಕರ ಸಾಹಸದ ಬಗ್ಗೆ ಅವರಿವರು ಏನೇನೋ ಹೇಳುತ್ತಾರೆ, ನಾನು ಏನೂ ಹೇಳಲಾರೆ. ನನ್ನ ಆತಂಕವೇ ಬೇರೆ, ಸಂಶೋಧನ ಗ್ರಂಥಗಳ ಪ್ರಾಮಾಣಿಕತೆಯನ್ನು ಖಚಿತಪಡಿಸಲು ನನ್ನ ಓದು ಸಾಕಾಗುವುದಿಲ್ಲ.
 ವಿದ್ಯಾರ್ಥಿಗಳು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಕಾಲ ಕೊಳೆತುಹೋಗಿದೆ ಎಂದು ನಿರಾಸೆಯಿಂದ ಬಾಡುವವರಿದ್ದಾರೆ. ಅವರ ಮಾತು ತಿವಿಯುತ್ತದೆ. ಕಾಲ ಕೊಳೆತು ವಿದ್ಯಾರ್ಥಿ ಹಗುರವಾದದ್ದಲ್ಲ, ನಾನು ಕೊಳೆತು ವಿದ್ಯಾರ್ಥಿ ಹಗುರವಾಗಿದ್ದಾನೆ ಎಂದರೆ ನಾನು ನಂಬಬಹುದು, ಆದರೆ ಎಲ್ಲರೆದುರು ಒಪ್ಪಿಕೊಳ್ಳಲಾರೆ. ಹೊಸದನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು, ಅಧ್ಯಾಪಕ ಕಲಿತು ಕಲಿಸಬೇಕು. ಆಳವಾದ ಒಳನೋಟಗಳನ್ನು ಒದಗಿಸಬೇಕು. ಕಲಿಯಲು ಸಿದ್ಧನಿಲ್ಲದ ಅಧ್ಯಾಪಕ ಯು.ಜಿ.ಸಿ. ಕೊಡುವ ಕೈತುಂಬ ಸಂಬಳಕ್ಕೆ ಕೈಚಾಚುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ.  ಯಾವುದೇ ಭಾಷೆಯನ್ನು ಎರಡು ನೆಲೆಗಳಲ್ಲಿ ನೋಡಲು ಸಾಧ್ಯವಿದೆ. ಒಂದು, ಅದನ್ನು ಅಭಿವ್ಯಕ್ತಿಯ ಮಾಧ್ಯಮ ಎಂದು ಭಾವಿಸುವುದು, ಇನ್ನೊಂದು ಅದನ್ನು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದು. ಯಾವುದೇ ಸಂಸ್ಕೃತಿ ನಿರ್ದಿಷ್ಟವಾದ ಭಾಷೆಯಲ್ಲಿ ಬೆಳೆಯುತ್ತದೆ ಮತ್ತು ಎಲ್ಲ ಭಾಷೆಗಳಿಗೂ ಬಹು ಮುಖ್ಯವಾದ ಸಾಂಸ್ಕೃತಿಕ ನೆಲೆಯೊಂದು ರೂಪುಗೊಂಡಿರುತ್ತದೆ. ಸಾಹಿತ್ಯ, ಸಂಗೀತ, ನೃತ್ಯ, ಆರಾಧನೆ ಇತ್ಯಾದಿಗಳಿಂದ ತೊಡಗಿ ಒಟ್ಟು ಜನಜೀವನದ ನಂಬಿಕೆ, ವೈಧಾನಿಕತೆಗಳವರೆಗೆ ವ್ಯಾಪಿಸಿ ನಿಲ್ಲುವ ಭಾಷೆಯ ಸಾಂಸ್ಕೃತಿಕ ಮುಖ ತನ್ನೊಳಗೆ ಬದುಕಿನ ಎಲ್ಲ ವಿವರಗಳನ್ನೂ ಕಟ್ಟಿಕೊಂಡಿರುತ್ತದೆ. ಆದ್ದರಿಂದ ಭಾಷೆ, ಸಂಸ್ಕೃತಿ ಮತ್ತು ಬದುಕಿನ ಬಂಧ ಬಿಗುವಾಗಿದೆ ಮತ್ತು ಸಂಕೀರ್ಣವಾಗಿದೆ. ಒಂದು ಭಾಷೆಯನ್ನಾಡುವ ಮಂದಿಯ ಬದುಕಿನೊಂದಿಗೇ ಆ ಭಾಷೆಯೂ ಬದುಕುತ್ತದೆ. ಸಂವಹನ ಭಾಷೆಯ ಪ್ರಾಥಮಿಕ ಮತ್ತು ಮೂಲಭೂತ ಪ್ರಯೋಜನ. ಆದರೆ ಅದರ ಜೀವಂತಿಕೆ ಇರುವುದು ಸಾಂಸ್ಕೃತಿಕ ಸನ್ನಿವೇಶದಲ್ಲಿ.
 ಭಾಷೆಯನ್ನು ಒಂದು ಮಾಧ್ಯಮ ಎಂದು ಭಾವಿಸುವಲ್ಲಿಂದ ಎಲ್ಲ ಚರ್ಚೆಗಳೂ ಆರಂಭವಾಗುತ್ತವೆ. ಸಂವಹನ ಎನ್ನುವುದು ಒಬ್ಬ ವ್ಯಕ್ತಿಗೆ ಗೊತ್ತಿರುವ ಯಾವುದೇ ಸಂಗತಿಯನ್ನು ಇನ್ನೊಬ್ಬ ವ್ಯಕ್ತಿಗೆ, ಅಥವಾ ಒಂದು ಪ್ರಾಣಿಗೆ ಗೊತ್ತಿರುವ ಯಾವುದೇ ಸಂಗತಿಯನ್ನು ಇನ್ನೊಂದು ಪ್ರಾಣಿಗೆ ಸ್ಪಷ್ಟವಾಗಿ, ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ದಾಟಿಸುವ ಕ್ರಿಯೆ. ಇದು ಉಚ್ಚರಿತ ಧ್ವನಿಸಂಕೇತಗಳ ವ್ಯವಸ್ಥೆಯ ಮೂಲಕ ನಡೆದಾಗ ಪ್ರಾಣಿಗಳು ಈ ಪ್ರಕ್ರಿಯೆಗೆ ಹೊರತಾಗುತ್ತವೆ. ಭಾಷೆಗೆ ಮನುಷ್ಯ ಬಳಕೆಯ ಖಚಿತ ಅರ್ಥವ್ಯಾಪ್ತಿ ಒದಗುತ್ತದೆ. ಮನುಷ್ಯ ತನ್ನ ಬೌದ್ಧಿಕ, ಮಾನಸಿಕ ಗ್ರಹಿಕೆಗಳನ್ನು ವ್ಯಕ್ತಿಯ ಅಥವಾ ಸಮೂಹದ ಕಡೆಗೆ ಸಂವಹನಗೊಳಿಸುತ್ತಾನೆ. ಸಾಹಿತ್ಯ, ಸಂಗೀತ, ಆರಾಧನ ಕಲೆಗಳು ಮುಂತಾಗಿ ಎಲ್ಲವೂ ಭಾಷಿಕ ಸಂವಹನ ಕ್ರಿಯೆಗಳೇ. ಯಾವುದೇ ಸಂಗತಿಯ ಸಂವಹನಕ್ಕೆ ಆ ಭಾಷೆಯ ಪರಿಕರಗಳ ಶಕ್ತಿ ಸಾಲದೆ ಹೋದಾಗ, ಪರಿಣಾಮದ ಶಕ್ತಿಯನ್ನು ಹೆಚ್ಚಿಸಲು ಮನುಷ್ಯ ನಡೆಸಿದ ಶೋಧಗಳ ಫಲವಾಗಿ ಗಾದೆ, ನುಡಿಕಟ್ಟು, ಸಂಗೀತ, ಸಾಹಿತ್ಯ ಇತ್ಯಾದಿಗಳು ಹುಟ್ಟಿಕೊಂಡವು. ಇವು ಸೂಕ್ಷ್ಮ ಸಂವೇದನೆಗಳ ಸಂವಹನದ ಪರಿಣಾಮವನ್ನು ಹೆಚ್ಚಿಸುವುದರೊಂದಿಗೆ ಬಾಯಿಯಿಂದ ಕಿವಿಗೆ ತಲುಪಿ ಮುಗಿದುಹೋಗದೆ ಭಾಷಿಕ ಸ್ವತ್ತುಗಳಾಗಿ ಉಳಿದುಕೊಂಡು ಬಂದುವು. ಭಾಷೆ ತನ್ನೊಳಗೆ ತಯಾರಾದ ಸಂಗತಿಗಳನ್ನು ತನ್ನೊಳಗೇ ಉಳಿಸಿ ಕಾಪಾಡಿಕೊಂಡು ಬರುವ ವ್ಯವಸ್ಥೆಯನ್ನೂ ರೂಢಿಸಿಕೊಂಡಿತು. ಹೀಗೆಲ್ಲ ಇರುವ ಭಾಷೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸುವ ಜವಾಬ್ದಾರಿ ನಮಗಿದೆ. ಅದರ ಸೂಕ್ಷ್ಮಗಳನ್ನು ಅರಿತು ಬಳಸಬೇಕಾದವರು ನಾವು. ಸರಿ ಗೊತ್ತಿದ್ದರೆ ಮಾತ್ರ ತಪ್ಪು ಹುಡುಕಲು ಸಾಧ್ಯ. ಭಾಷೆ ಕಲಿಸುವ ನಮ್ಮ ಆಸಕ್ತಿ ಕಲೆಗಳನ್ನೂ ಸಂಸ್ಕೃತಿಯನ್ನೂ ಬದುಕನ್ನೂ ಅರಗಿಸಿಕೊಂಡಿರಬೇಕು
ಇಂಗ್ಲಿಷ್ ತಪ್ಪಿಲ್ಲದಂತೆ ಬಳಸಬೇಕಾದ ಭಾಷೆ. ಅದರ ವ್ಯಾಕರಣ, ಸ್ಪೆಲ್ಲಿಂಗ್ ಇತ್ಯಾದಿ ಸ್ವಲ್ಪ ತಪ್ಪಿದರೂ ಸಾಕು ಹಪಹಪಿಸುವ ನಮಗೆ, ನಾವು ಪಾಠ ಹೇಳುವ ಭಾಷೆ ತಪ್ಪಿದರೆ ಏನೂ ಅನ್ನಿಸುವುದಿಲ್ಲ. ಭಾಷೆಯನ್ನು ಸರಳಗೊಳಿಸಲು ಹೊರಟು ಅರ್ಥವಾಗದ ಸ್ಥಿತಿಗೆ ತಂದಿಟ್ಟ ವಾದಸರಣಿ ಭಕಾರ ಬಕಾರವಾದರೂ ಶಕಾರ ಸಕಾರವಾಗದ ಒಂದುನೆಲೆಗೆ ಬಂದು ತಲುಪಿದೆ. ಸಂಸ್ಕೃತವನ್ನು ನಿರಾಕರಿಸುವ ನೆಪದಲ್ಲಿ ಭಾಷೆಯನ್ನು ಸರಿಯಾಗಿ ಬಳಸಲು ಬಾರದವರಿಗೆ ಪರವಾನಗಿಯನ್ನು ನವೀಕರಿಸಿಕೊಟ್ಟಿದೆ.  ನಮ್ಮ ವಿದ್ಯಾರ್ಥಿಗಳು ಕನ್ನಡವನ್ನು ಶಕ್ತಿಶಾಲಿಯಾಗಿ ಬಳಸುವಲ್ಲಿ ಸೋಲುತ್ತಲೇ ಇದ್ದಾರೆ ಎಂದರೆ ಏನು ಅರ್ಥ? ಕನ್ನಡ ಪತ್ರಿಕೆಗಳಲ್ಲಿ ಬರುವ ಭಾಷಾದೋಷಗಳ ಪ್ರಮಾಣ ಅತಿವೇಗದಿಂದ ಹೆಚ್ಚಾಗುತ್ತಿದೆ ಎಂದರೆ ಏನು ಹೇಳಿದ ಹಾಗಾಯಿತು? ತಿದ್ದಿ ಹೇಳಿದರೆ ವಿದ್ಯಾರ್ಥಿ ಪೇಪರಿನಲ್ಲಿ ಹಾಗೇ ಇತ್ತು ಎನ್ನುತ್ತಾನೆ. ಯಾರನ್ನು ಯಾರು ತಿದ್ದಬೇಕು? ಕನ್ನಡಕ್ಕೆ ಶಕ್ತಿ ಇದೆ, ಬಳಸುವ ನಮ್ಮ ಶಕ್ತಿ ಸಾಕಾಗುವುದಿಲ್ಲ. ಕನ್ನಡ ಸರಿಯಾಗಿಯೇ ಇದೆ, ನಮಗೆ ಸರಿಯಾಗಿ ಬಳಸಲು ಬರುವುದಿಲ್ಲ. ಪುಸ್ತಕಗಳು ಬೇಕಾದಷ್ಟಿವೆ, ನಾವು ಓದುವುದಿಲ್ಲ. ಒಂದು ಕಾಲದಲ್ಲಿ ಸಂಸ್ಕೃತ ಕಲಿತವರು, ಕನ್ನಡ ಕವಿಗಳಾದರು, ಆಮೇಲೆ ಇಂಗ್ಲಿಷ್ ಕಲಿತ ಬರಹಗಾರರೇ ಕನ್ನಡದಲ್ಲಿ ಹೆಸರು ಮಾಡಿದರು. ಭಾಷೆಯನ್ನು ನಾವು ಕಲಿಸುವುದು ಒಂದು ವಿಷಯವಾಗಿಯೇ ಹೊರತು ಮಾಧ್ಯಮವಾಗಿ ಅಲ್ಲ. ಕನ್ನಡಿಗರಿಗೆಲ್ಲ ಕನ್ನಡ ಒಂದು ಮಾಧ್ಯಮವಾಗಿಯೇ ಇದೆ. ಪಂಪಭಾರತವನ್ನು ಕಲಿಸುವುದೆಂದರೆ ಅದರ ಕತೆಯನ್ನೋ ಭಾಷೆಯನ್ನೋ ಕಲಿಸುವುದಲ್ಲ, ಕಲಿಸಬೇಕಾದ್ದು ಅದರ ಆಚೆಗೆ ಇದೆ. ಕನ್ನಡವನ್ನು ಕಲಿಸುವ ಮೂಲಕ ನಾವು ಏನನ್ನು ಕಲಿಸುತ್ತೇವೆ ಎನ್ನುವುದು ಮುಖ್ಯ. ಜ್ಞಾನ ಎಲ್ಲರಲ್ಲೂ ಇದೆ, ಎಲ್ಲೆಡೆಯಲ್ಲೂ ಇದೆ. ಅದನ್ನು ಕಂಡುಹಿಡಿಯುವುದೇ ಶಿಕ್ಷಣ. ಮಾಹಿತಿಗಳ ಸಂಗ್ರಹವೇ ಜ್ಞಾನವಲ್ಲ, ಜ್ಞಾನ ಮಾಹಿತಿಗಳ ಹಿಂದೆ ಅಡಗಿ ಕುಳಿತಿದೆ. ನಾವು ಜ್ಞಾನದ ನೆಪದಲ್ಲಿ ಮಾಹಿತಿಗಳಿಗೆ ಕನ್ನ ಹಾಕುತ್ತೇವೆ. ಮೀರುವುದನ್ನು ಕಲಿಯುವ ಬದಲು ತಪ್ಪಿಸಲು ಕಲಿಯುತ್ತೇವೆ. ತಪ್ಪಿಸುವುದು ಸ್ಥಾವರ, ಮೀರುವುದು ಜಂಗಮ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.


-ಡಾ.ರಾಧಾಕೃಷ್ಣ ಬೆಳ್ಳೂರು
ಸರ್ಕಾರಿ ಕಾಲೇಜು, ಕಾಸರಗೋಡು, ಕೇರಳ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement