ರೈತರಿಗೆ ಕಹಿಯಾದ ಸಕ್ಕರೆ ಕಾರ್ಖಾನೆಗಳು
ಕಬ್ಬಿಗೆ ನ್ಯಾಯಯುತ ಬೆಲೆ ನೀಡಿ ಎಂದು ರೈತರು ಬೆಳಗಾವಿ ಅಧಿವೇಶನ ವೇಳೆ ಧರಣಿ ನಡೆಸಿ, ಸರ್ಕಾರದಿಂದ ಸೂಕ್ತ ಸ್ಪಂದನೆ...
ಕಬ್ಬಿಗೆ ನ್ಯಾಯಯುತ ಬೆಲೆ ನೀಡಿ ಎಂದು ರೈತರು ಬೆಳಗಾವಿ ಅಧಿವೇಶನ ವೇಳೆ ಧರಣಿ ನಡೆಸಿ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೆ ನೊಂದು ಓರ್ವ ರೈತ ವಿಷ ಸೇವಿಸಿ ತನ್ನ ಪ್ರಾಣವನ್ನೇ ತೆತ್ತ. ಸುವರ್ಣ ಸೌಧದ ಎದುರೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ರೈತರ ಕೂಗು ಕೇಳಿಸಿಕೊಳ್ಳದೆ, ಅವರ ಸಮಸ್ಯೆ ಆಲಿಸಲೂ ಪುರುಸೊತ್ತಿಲ್ಲದವರಂತೆ ವರ್ತಿಸಿದ್ದು, ರೈತ ಬಲಿಯಾದ ನಂತರವೇ ಎಚ್ಚೆತ್ತುಕೊಂಡ ಮಂತ್ರಿ ಮಹಾಶಯರ ಕಥೆ ಎಲ್ಲರಿಗೂ ಗೊತ್ತೇ ಇದೆ.
ರೈತರ ಹೋರಾಟದ ತೀವ್ರತೆ, ಸದನದಲ್ಲಿ ಪ್ರತಿ ಪಕ್ಷಗಳ ಕೋಲಾಹಲ, ಗದ್ದಲ ಅರಿತು ಮೃತ ರೈತನಿಗೆ ಪರಿಹಾರ ಘೋಷಿಸಿ, ಕಾರ್ಖಾನೆಗಳಿಂದ ಪ್ರತಿ ಟನ್ ಕಬ್ಬಿಗೆ 2500 ಹಾಗೂ ಸರ್ಕಾರದಿಂದ 150 ಬೆಂಬಲ ಬೆಲೆ, ಒಟ್ಟು ರೈತರಿಗೆ ರು. 2650 ನೀಡುವುದಾಗಿ ಸರ್ಕಾರ ಘೋಷಿಸಿ ಕೈ ತೊಳೆದುಕೊಂಡಿತು. ಸರ್ಕಾರ ರೈತರಿಗೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಇಂತಿಷ್ಟು ನೀಡಿ ಎಂದು ತಿಳಿಸುತ್ತಿದ್ದಂತೆ, ರೈತರು ರೊಚ್ಚಿಗೆದ್ದು ಹೋರಾಟಕ್ಕಿಳಿದು ಓರ್ವ ರೈತ ಬಲಿಯಾಗಿದ್ದರೂ ಇದ್ಯಾವುದಕ್ಕೂ ಕ್ಯಾರೇ ಎನ್ನದ ಕೆಲವು ಸಕ್ಕರೆ ಕಾರ್ಖಾನೆಗಳ ಮಾಲೀಕರು ರಭಸದಿಂದ ಹೊತ್ತಿರುವ ಬೆಂಕಿಗೆ ತುಪ್ಪಸುರಿದಂತೆ ಸರ್ಕಾರ ಹೇಳಿದಂತೆ ನಾವು ಕೇಳುವುದಿಲ್ಲ. ಅಷ್ಟು ದರ ನೀಡಲು ಸಾಧ್ಯವಿಲ್ಲ. ಬೇಕಾದರೆ ಸರ್ಕಾರಗಳೇ ಕಾರ್ಖಾನೆಗಳನ್ನು ನಡೆಸಲಿ ಎಂದು ಕಡ್ಡಿ ಮುರಿದಂತೆ ಹೇಳಿದರು. ಇಂಥವರು ರೈತರ ಪರಿಸ್ಥಿತಿ, ಹೋರಾಟವನ್ನು ಲೆಕ್ಕಿಸದೇ, ಸರ್ಕಾರದ ನಿರ್ಧಾರಕ್ಕೂ ಬೆಲೆ ನೀಡದೇ ವರ್ತಿಸಿದ್ದನ್ನು ಗಮನಿಸಿದರೆ ಇಂಥವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಸರ್ಕಾರ ಸ್ಪಷ್ಟವಾಗಿ ಸಕ್ಕರೆ ಕಾರ್ಖಾನೆಗಳಿಗೆ ತಿಳಿಸಿದರೂ ಕಾರ್ಖಾನೆಗಳಿಂದ ಮಾತ್ರ ಅದಕ್ಕೆ ಪೂರಕ ಪ್ರತಿಕ್ರಿಯೆ ಬರಲಿಲ್ಲ. ಕಾರ್ಖಾನೆಗಳ ಮಾಲೀಕರಾಗಲಿ, ಅದರ ಆಡಳಿತ ಮಂಡಳಿಯವರಾಗಲಿ ಸರ್ಕಾರದ ನಿರ್ಧಾರಕ್ಕೆ ನಮ್ಮ ಸಹಮತವಿದೆ. ನಾವು ರೈತರಿಗೆ ಪ್ರಸ್ತುತ ವರ್ಷ ಕಬ್ಬಿಗೆ ಇಂತಿಷ್ಟು ಹಣ ನೀಡುತ್ತೇವೆ ಎಂದು ಎಲ್ಲಿಯೂ ಹೇಳಲಿಲ್ಲ.
ಇದೆಲ್ಲ ಗೊಂದಲದ ಮಧ್ಯೆಯೇ ಈಗ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿವೆ. ರಾಜ್ಯದಲ್ಲಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಯಾಗಿರುವ ಬೆಳಗಾವಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿಯೂ ಕಬ್ಬು ನುರಿಸುವ ಕಾರ್ಯ ಪ್ರಾರಂಭವಾಗಿದೆ. ರೈತರೇನೋ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ. ಆದರೆ ತಮ್ಮ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು ಎಷ್ಟು ಹಣ ನೀಡುತ್ತವೆ ಎನ್ನುವುದೇ ತಿಳಿಯುತ್ತಿಲ್ಲ. ಇದರಿಂದ ರೈತರು ಆತಂಕದಿಂದಲೇ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತಿದ್ದಾರೆ.
ಕೆಲ ಕಾರ್ಖಾನೆಗಳು ರೈತರಿಗೆ ನಾವು ಪ್ರತಿ ಟನ್ ಕಬ್ಬಿಗೆ ಇಂತಿಷ್ಟೇ ಹಣ ನೀಡುತ್ತೇವೆ. ಬೇಕಾದರೆ ಕಳುಹಿಸಿ, ಇಲ್ಲವಾದರೆ ಬೇಡ ಎಂದು ರೈತರಿಂದ ಮೊದಲೇ ಒಪ್ಪಿಗೆ ಪಡೆದು, ಬರೆಯಿಸಿಕೊಂಡು ಕಬ್ಬು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ಕಬ್ಬು ಕಳುಹಿಸದೆ ಬೇರೆ ವಿಧಿಯಿಲ್ಲ. ಸಾಲ ಸೋಲ ಮಾಡಿ, ಬೆಳೆ ಬೆಳೆಯಲು ಸಾಕಷ್ಟು ಹಣ ಖರ್ಚು ಮಾಡಿ, ವರ್ಷವಿಡೀ ಶ್ರಮವಹಿಸಿ ಬೆಳೆದ ಫಸಲನ್ನು ಕಾರ್ಖಾನೆಗಳಿಗೆ ಕಳುಹಿಸದಿದ್ದರೂ ಹೊಲದಲ್ಲಿಯೇ ಬೆಳೆ ನಾಶವಾಗಿ ನಷ್ಟ ಅನುಭವಿಸಬೇಕು. ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿ ಉತ್ತಮ ಬೆಲೆ ಸಿಗದಿದ್ದರೂ ಹಾನಿ ಅನುಭವಿಸುವ ದುಸ್ಥಿತಿ ನಮ್ಮ ರೈತರದ್ದು.
ತಮ್ಮ ಲಾಭಕ್ಕೋಸ್ಕರ ರೈತರ ಅಸಹಾಯಕತೆಯನ್ನೇ ಬಂಡವಾಳವನ್ನಾಗಿಸಿಕೊಂಡು ರೈತರೊಂದಿಗೆ ಚೆಲ್ಲಾಟವಾಡುತ್ತಿರುವವರಿಗೆ ರೈತರ ಸಂಕಟ ಅರ್ಥವಾಗೋದಾದ್ರೂ ಹೇಗೆ? ಕಾರ್ಖಾನೆಗಳು, ಸರ್ಕಾರ ಕಬ್ಬಿಗೆ ನೀಡುವ ದರದ ಬಗ್ಗೆ ಸ್ಪಷ್ಟವಾಗಿ ರೈತರಿಗೆ ತಿಳಿಸಿ ಅವರಲ್ಲಿನ ಗೊಂದಲ ನಿವಾರಿಸಿ. ಆಯಾ ಕ್ಷೇತ್ರದಲ್ಲಿನ ರೈತರ ಸಹಕಾರದಿಂದಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿನ ಸಕ್ಕರೆ ಕಾರ್ಖಾನೆಗಳು ಸರ್ಕಾರ ಸೂಚಿಸಿದ ದರವನ್ನು ಅಲ್ಲಿನ ರೈತರಿಗೆ ನೀಡುತ್ತಿವೆಯೋ, ಇಲ್ಲವೋ ಎನ್ನುವುದನ್ನು ಗಮನಿಸಿ, ಅವರಿಗೆ ಸರ್ಕಾರ ನಿಗದಿಪಡಿಸಿದ ದರ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿ. ಇದರಿಂದ ರೈತರು ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆಗೊಳಿಸಿದ್ದಕ್ಕೆ ಒಂದು ಅರ್ಥವಾದರೂ ಇದ್ದೀತು.
ಪ್ರತಿ ವರ್ಷವೂ ಕಬ್ಬಿನ ದರ ನಿಗದಿ ಕುರಿತಂತೆ ಕಾರ್ಖಾನೆಗಳು, ಸರ್ಕಾರ, ರೈತರ ಮಧ್ಯೆ ಹಗ್ಗ ಜಗ್ಗಾಟ ನಡೆಯುತ್ತಲೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಅನುಷ್ಠಾನಗೊಳಿಸಬೇಕಿದೆ. ಸಕ್ಕರೆ ಕಾರ್ಖಾನೆಗಳಂತೂ ಕಬ್ಬು ಬೆಳೆಗಾರರ ಸಮಸ್ಯೆಗಿಂತ ತಮ್ಮ ಸಮಸ್ಯೆಗಳ ರಗಳೆಯನ್ನೇ ದೊಡ್ಡದಾಗಿ ತೋರಿಸಿಕೊಳ್ಳುತ್ತಾ ಪ್ರತಿ ವರ್ಷವೂ ಕಬ್ಬಿಗೆ ಯೋಗ್ಯ ಬೆಲೆ ನೀಡದೇ ತಮ್ಮ ವರಸೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿವೆ. ರೈತರು ಪ್ರತಿ ಟನ್ ಕಬ್ಬು ಬೆಳೆಯಲು ಮಾಡುತ್ತಿರುವ ಖರ್ಚು ಎಷ್ಟು? ರಸಗೊಬ್ಬರ ಬೆಲೆ ಏರಿಕೆ, ಕೂಲಿ ವೆಚ್ಚ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ, ತಮ್ಮ ಸಮಸ್ಯೆಗಳನ್ನೇ ಮುಂದೊಡ್ಡಿ ಅವೈಜ್ಞಾನಿಕ ಬೆಲೆ ನಿಗದಿಗೊಳಿಸಿ, ತಾವು ನಡೆದದ್ದೇ ದಾರಿ ಎನ್ನುವಂತೆ ವರ್ತಿಸುತ್ತಿವೆ. ಮೊದಲು ರೈತರು ಕಬ್ಬಿನಿಂದ ಗಾಣದ ಮನೆ (ಆಲೆ ಮನೆ) ಮುಖಾಂತರ ಬೆಲ್ಲವನ್ನು ತಯಾರಿಸಿ ಮಾರುತ್ತಿದ್ದರು. ಆದರೆ, ಇದೀಗ ತಲೆ ಎತ್ತಿರುವ ಕಾರ್ಖಾನೆಗಳು ಉತ್ತಮ ದರ ನೀಡುವ ಆಶಯವನ್ನಿಟ್ಟುಕೊಂಡು ತಮ್ಮ ಮೂಲ ಪದ್ಧತಿ ಆಲೆಮನೆಗಳನ್ನು ಮೂಲೆಗುಂಪು ಮಾಡಿದರು. ಈಗ ಅವರು ಸಂಪೂರ್ಣ ಕಾರ್ಖಾನೆಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ಇದು ರೈತರ ಅಸಹಾಯಕತೆ ಅಲ್ಲ. ರೈತರು ಒಗ್ಗಟ್ಟಿನಿಂದ ತಮ್ಮ ಮೂಲ ಪದ್ಧತಿ ಆಲೆ ಮನೆಗಳನ್ನು ಪ್ರಾರಂಭಿಸಿದರೆ, ಕಬ್ಬಿಗೆ ಪರ್ಯಾಯವಾಗಿ ಬೇರೆ ಬೆಳೆ ಬೆಳೆಯಲು ಮುಂದಾದರೆ ಕಾರ್ಖಾನೆಗಳು ಸ್ಥಿತಿ ಏನಾದೀತು ಎನ್ನುವುದೂ ತಿಳಿದಿರಲಿ.
ಕಳೆದ ಬಾರಿಯೇ ಪ್ರತಿ ಟನ್ ಕಬ್ಬಿಗೆ ರು. 2500ಕ್ಕಿಂತಲೂ ಹೆಚ್ಚಿನ ದರ ಪಡೆದಿದ್ದ ರೈತರಿಗೆ ಈ ವರ್ಷ ದಿಢೀರನೆ ಅದಕ್ಕಿಂತಲೂ ಕಡಿಮೆ ನೀಡುತ್ತೇವೆ ಎಂದು ಕಾರ್ಖಾನೆಗಳು ತಿಳಿಸಿದ್ದರಿಂದಲೇ ರೈತರು ಎಚ್ಚೆತ್ತು ಎಲ್ಲ ಬೆಲೆಗಳೂ ಗಗನಕ್ಕೇರಿವೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿವೆ. ಕಬ್ಬು ಬೆಳೆ ಬೆಳೆಯಲು ಗೊಬ್ಬರ ಸೇರಿದಂತೆ ಎಲ್ಲ ದರಗಳೂ ಹೆಚ್ಚಿರುವುದರಿಂದ ನಾವು ಬೆಳೆದ ಬೆಳೆಗೆ ಮಾತ್ರ ಬೆಲೆ ಇಲ್ಲವೇ? ಕಳೆದ ಬಾರಿಗಿಂತಲೂ ಹೆಚ್ಚಿನ ದರ ನಿಗದಿಗೊಳಿಸಿ. ಪ್ರತಿ ಟನ್ ಕಬ್ಬಿಗೆ ರು. 3000ಕ್ಕೂ ಹೆಚ್ಚು ನೀಡಲಿ. ಬೇರೆ ರಾಜ್ಯಗಳಲ್ಲಿನ ರೈತರಿಗೆ ಅಲ್ಲಿನ ಕಾರ್ಖಾನೆಗಳು ಇಲ್ಲಿಗಿಂತ ಹೆಚ್ಚು ಹಣ ನೀಡುತ್ತಿದ್ದರೂ ನಮ್ಮಲ್ಲಿನ ಕಾರ್ಖಾನೆಗಳು ಯಾಕೆ ನೀಡುತ್ತಿಲ್ಲ ಎನ್ನುವುದು ನಮ್ಮ ರೈತರ ಅಳಲಾಗಿತ್ತು.
ಆದ್ದರಿಂದಲೇ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿನ ಅಧಿವೇಶನದ ವೇಳೆಯೇ ಧರಣಿಗೆ ಮುಂದಾಗಿದ್ದರು. ಅಲ್ಲಿ ರೈತ ವಿಷ ಸೇವಿಸಿ ಪ್ರಾಣ ತೆತ್ತ ವೇಳೆಯಲ್ಲಿಯೇ ಸರ್ಕಾರದ ಆದೇಶವನ್ನು, ರೈತರ ಹೋರಾಟವನ್ನು ಲೆಕ್ಕಿಸದೇ ಸರಾಸಗಟಾಗಿ ತಳ್ಳಿ ಹಾಕಿ, ಇಷ್ಟು ಬೆಲೆ ನೀಡಲು ನಮ್ಮಿಂದ ಆಗುವುದಿಲ್ಲ ಎಂದವರ ಬಗ್ಗೆ ರೈತರಿಗೀಗ ನಂಬಿಕೆಯಾದರೂ ಹೇಗೆ ಬಂದೀತು?
ಬೆಲೆ ನಿಗದಿ, ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ, ಕಳಪೆ ಬೀಜ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ರೈತರು ಶೋಷಣೆಗೊಳಗಾಗುತ್ತಲೇ ಇದ್ದಾರೆ. ರೈತರಿಗೆ ಮಾತ್ರ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಯಾರೂ ಇವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಎಲ್ಲ ವಿಷಯಗಳಲ್ಲೂ ತಮ್ಮದೊಂದು ಇರಲಿ ಎಂದು ಅಭಿಪ್ರಾಯ ಮಂಡಿಸುವ ಬುದ್ಧಿಜೀವಿಗಳು, ವಿಚಾರವಾದಿಗಳು, ಚಿಂತಕರು ಎನ್ನಿಸಿಕೊಂಡವರೂ ರೈತರ ಪರವಾಗಿ ಮಾತನಾಡುವುದು ಅಷ್ಟಕ್ಕಷ್ಟೇ. ಇವರೆಲ್ಲರೂ ರೈತ ಉತ್ತಿ, ಬಿತ್ತಿ ಬೆಳೆದ ಅನ್ನವನ್ನು ತಿನ್ನುತ್ತಿಲ್ಲವೇ? ರೈತ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಸತ್ಯ ತಿಳಿದಿದ್ದರೂ ರೈತರ ಒಳಿತಿಗಾಗಿ ಯಾವುದೇ ಯೋಜನೆ, ಕಾರ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.
- ಮಹಾಂತೇಶ ಕುಳ್ಳೊಳ್ಳಿ
ಕನ್ನಡಪ್ರಭ